ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೨: ಸ್ತೋತ್ರ - ೧ರ ವ್ಯಾಖ್ಯಾನ

ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೨: ಸ್ತೋತ್ರ - ೧ರ ವ್ಯಾಖ್ಯಾನ

         ತ್ರಿಪುರ ಸುಂದರೀ ಅಷ್ಟಕಂ - ಸ್ತೋತ್ರ ೧

 ಕದಂಬವನಚಾರಿಣೀಂ ಮುನಿಕದಂಬ ಕಾದಂಬಿನೀಂ 
ನಿತಂಬಜಿತ ಭೂಧರಾಂ ಸುರನಿತಂಬಿನೀಸೇವಿತಾಮ್l
ನವಾಂಬುರುಹಲೋಚನಾಂ ಅಭಿನವಾಂಬುದರಶ್ಯಾಮಲಾಮ್,
ತ್ರಿಲೋಚನ ಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ ll೧ll
 
ಕದಂಬವನವಿಹಾರಿಣಿಯೇ, ಋಷಿ ಸಮೂಹಕೆ ಪಯೋನಿಧಿಯಾಗಿರ್ಪ,
ಪರ್ವತವ ನಾಚಿಸುವ ನಿತಂಬಿನಿಯೇ, ದೇವಕನ್ನಿಕೆಯರಿಂ ಸೇವಿರ್ಪ,
ನವ ಉತ್ಪಲ ಲೋಚನೆಯೇ, ಕಾರ್ಮೋಡದ ತೆರದಿ ಇರುವ ರಂಗಿನವಳೆ,
ತ್ರಿನೇತ್ರಕುಟುಂಬಿನಿ ತ್ರಿಪುರಸುಂದರಿಯೇ ಕೋರುವೆ ನಿನ್ನೊಳಾಶ್ರಯವ.  
 
ಅರ್ಥ -  ಕದಂಬವನದಲ್ಲಿ ಸದಾಕಾಲ ವಿಹರಿಸುತ್ತಾ, ಋಷಿಸಮೂಹಕ್ಕೆ (ಬಾಯಾರಿಕೆಯನ್ನು ತಣಿಸುವ) ಮೋಡ(ಪಯೋನಿಧಿ)ವಾಗಿರುವ, ದೇವಕನ್ನಿಕೆಯರಿಂದ ಸೇವೆಯನ್ನು ಮಾಡಿಸಿಕೊಳ್ಳುತ್ತಿರುವ ನೀನು ಪರ್ವತಗಳನ್ನು ಮೀರಿಸುವ ನಿತಂಬವುಳ್ಳವಳು ಮತ್ತು ಹೊಸದಾಗಿ ಬಿರಿದ ಕಮಲವನ್ನು ನಾಚಿಸುವ ಕಣ್ಣುಗಳನ್ನು ಹೊಂದಿದವಳು (ನವ ಉತ್ಪಲ ಲೋಚನೆಯೇ), ನಿನ್ನ ಬಣ್ಣವು ಮಳೆಯನ್ನು ಸುರಿಸಲು ಸಿದ್ಧವಾಗಿರುವ ಕಾರ್ಮೋಡದಂತಿದೆ. ಮೂರುಲೋಕಗಳಲ್ಲೇ ಸುಂದರಿಯಾದ ಮತ್ತು ತ್ರಿನೇತ್ರನ (ಮುಕ್ಕಣ್ಣನ) ಅರ್ಧಾಂಗಿಯಾಗಿರುವ ನಿನ್ನಲ್ಲಿ ನಾನು ಶರಣಾಗತಿಯನ್ನು ಬೇಡುವೆ.
 
ವಿವರಣೆ
 
ಕದಂಬ - ಇದು ಒಂದು ರೀತಿಯ ವೃಕ್ಷವಾಗಿದ್ದು ಅದನ್ನು ಸಸ್ಯವಿಜ್ಞಾನದಲ್ಲಿ ನೌಕ್ಲಿಯಾ ಕದಂಬಾ ಎಂದು ಗುರುತಿಸುತ್ತಾರೆ. ಈ ವೃಕ್ಷವು ಕೇಸರಿ ಬಣ್ಣದ ಸುವಾಸನಾಯುಕ್ತ ಪುಷ್ಪಗಳನ್ನು ಮೋಡಗಳ ಗುಡುಗಿಗೆ ಸ್ಪಂದಿಸಿ ಹೊರಹೊಮ್ಮಿಸುತ್ತದೆ ಎನ್ನುತ್ತಾರೆ. ಕದಂಬ ವೃಕ್ಷದ ಪಳೆಯುಳಿಕೆಯನ್ನು ಮಧುರೆ ಮೀನಾಕ್ಷಿ ದೇವಸ್ಥಾನದ ’ಪೂಜ್ಯ ವಸ್ತು ಸಂಗ್ರಹಾಲಯ’ದಲ್ಲಿ ಇರಿಸಲಾಗಿದೆ. ಕದಂಬ ಎಂದರೆ ಗುಂಪು ಅಥವಾ ಸಮೂಹವೆನ್ನುವ ಅರ್ಥವನ್ನು ಕೂಡಾ ಹೊಂದಿದೆ. ಈ ಅರ್ಥದಲ್ಲಿ ಕದಂಬವನವು ದೇವಿಯು ವ್ಯಾಪಿಸಿರುವ/ಅಂತರ್ಗತವಾಗಿರುವ ವಿಶ್ವವನ್ನು ಪ್ರತಿನಿಧಿಸುತ್ತದೆ. 
 
          ಸಹಸ್ರಾರದಲ್ಲಿ, ’ಕಲ್ಪವೃಕ್ಷ’ ಮತ್ತು ’ಕದಂಬವೃಕ್ಷ’ಗಳಿಂದ ಆವರಿಸಲ್ಪಟ್ಟು, ಅಮೂಲ್ಯವಾದ ’ಚಿಂತಾಮಣಿ’ (ಬಯಸಿದ ಕೂಡಲೇ ಕೇಳಿದ್ದನ್ನು ಕೊಡುವ) ಎಂಬ ರತ್ನದಿಂದ ನಿರ್ಮಿಸಲ್ಪಟ್ಟ ಭವ್ಯಗೃಹದಲ್ಲಿ ದೇವಿಯು ತನ್ನ ಸ್ಥಿರ ನಿವಾಸವನ್ನು  ಏರ್ಪಡಿಸಿಕೊಂಡಿರುತ್ತಾಳೆ, ಎಂದು ಸಾಧಕರು ತಿಳಿಯುತ್ತಾರೆ.
 
ಋಷಿಸಮೂಹಕ್ಕೆ ಪಯೋನಿಧಿಯಾಗಿರುವ (ಮೋಡವಾಗಿರುವ) - ಮೋಡಗಳು ಭೂಮಿಯ ತೃಷೆಯನ್ನು ಇಂಗಿಸುವಂತೆ ದೇವಿ ತ್ರಿಪುರಸುಂದರಿಯು ಋಷಿ(ಮುನಿ)ಗಳ ಜ್ಞಾನತೃಷೆಯನ್ನು ತಣಿಸುವವಳಾಗಿದ್ದಾಳೆ. ಮುನಿಯೆಂದರೆ ಮೌನವಾಗಿ ಧ್ಯಾನವನ್ನು ಕೈಗೊಳ್ಳುವವನು.  
 
ಮಳೆ ಸುರಿಯಲು ಸಿದ್ಧವಾಗಿರುವ ಕಾರ್ಮೋಡದ ಬಣ್ಣದವಳೆ - ಮಾತೆಯ ಬೃಹತ್ ಕೃಪೆಯು (ಕೃಪೆಯ ಮೋಡವು) ತನ್ನ ಭಕ್ತರ ಸರ್ವವಿಧವಾದ ತಾಪಗಳನ್ನು ಮಳೆಯಂತೆ ನಿವಾರಿಸಲು ಸರ್ವದಾ ಸಿದ್ಧವಾಗಿರುತ್ತದೆ. 
 
        ಕುಂಡಲಿನಿಯ ರೂಪದಲ್ಲಿ ದೇವಿಯು ಯಾವಾಗಲೂ ನಿದ್ರಾವಸ್ಥೆಯಲ್ಲಿ ’ಮೂಲಾಧಾರ ಚಕ್ರ’ದಲ್ಲಿರುತ್ತಾಳೆ. ’ಪ್ರಾಣಾಯಾಮ’ವನ್ನು ಅಭ್ಯಸಿಸುವ ಯೋಗಿಗಳು ಬಹು ಮುಖ್ಯವಾದ ’ಪ್ರಾಣಶಕ್ತಿ’ಯನ್ನು ಇಲ್ಲಿಗೆ ಹಾಯಿಸಿದಾಗ, ಮೂಲಾಧಾರದಲ್ಲಿ ಪ್ರಬಲವಾದ ಶಾಖವುಂಟಾಗಿ ಅದರ ಪರಿಣಾಮದಿಂದ ’ಕುಂಡಲಿನೀ ಶಕ್ತಿ’ಯು ಜಾಗೃತಗೊಳ್ಳುತ್ತದೆ. ಆಗ ದೇವಿಯು, ’ಸುಷುಮ್ನ ನಾಡಿ’ಯ ಮೂಲಕ ಪಯಣಿಸಿ ’ಷಟ್ಚಕ್ರ’ಗಳನ್ನು ಭೇದಿಸಿ ’ಸಹಸ್ರಾರ ಚಕ್ರ’ದಲ್ಲಿ ತನ್ನ ಒಡೆಯನನ್ನು ಸೇರುತ್ತಾಳೆ. ಅವನೊಡನೆ ದೇವಿಯು ಸಮಾಗಮಗೊಂಡಾಗ ಹೊಸದಾಗಿ ಏರ್ಪಟ್ಟ ಕಾರ್ಮೋಡಗಳು ಮಳೆಸುರಿಸುವಂತೆ ಮಕರಂದವನ್ನು ಸುರಿಸುತ್ತಾಳೆ; ಇದರಿಂದ ಮೂಲಾಧಾರದಲ್ಲಿ ಉಂಟಾದ ತಾಪವು ಶಮನವಾಗುತ್ತದೆ. 
                                                              *****
ವಿ.ಸೂ.: ಈ ಕಂತಿನ ಶ್ಲೋಕ -೧ರ ಭಾಗವು ’ತ್ರಿಪುರ ಸುಂದರಿ ಅಷ್ಟಕಮ್" - ಪ್ರಕಟಣೆ(೧೯೮೬): ಅಧ್ಯಕ್ಷರು, ಶ್ರೀ ರಾಮಕೃಷ್ಣ ಮಠ, ಮೈಲಾಪುರ್, ಮದ್ರಾಸ್ - ೬೦೦ ೦೦೪, ಪುಸ್ತಕದ ೭ರಿಂದ ೯ನೇ ಪುಟದ ಅನುವಾದವಾಗಿದೆ. ಮೂಲ ಇಂಗ್ಲೀಷ್ ಕರ್ತೃ - ಎಸ್. ಕಾಮೇಶ್ವರ್, ಮುಂಬಾಯಿ. 
 
ಚಿತ್ರಕೃಪೆಃ ಷಟ್ಚಕ್ರಗಳು ಮತ್ತು ಸಹಸ್ರಾರ -
http://a7.sphotos.ak.fbcdn.net/hphotos-ak-snc6/198257_10150126607169306_265257264305_6343831_2966251_n.jpg
ಚಿತ್ರಕೃಪೆಃ ಕದಂಬ ವೃಕ್ಷ -
http://www.google.co.in/imgres?imgurl=http://media.somewhereinblog.net/images/thumbs/Jeeshublog_1184503759_1-kadom18.jpg&imgrefurl=http://www.somewhereinblog.net/blog/Jeeshublog/28720987&usg=__qR8mUZ8P2Y0Bb9lTBXON_m73L5c=&h=300&w=400&sz=38&hl=en&start=1&zoom=1&tbnid=xd2GZCLhEJxwxM:&tbnh=93&tbnw=124&ei=GpQvUPPxG4nxrQenkoCACg&itbs=1
 

 

Rating
No votes yet

Comments