ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೪: ಸ್ತೋತ್ರ - ೩ರ ವ್ಯಾಖ್ಯಾನ

ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೪: ಸ್ತೋತ್ರ - ೩ರ ವ್ಯಾಖ್ಯಾನ

   ತ್ರಿಪುರ ಸುಂದರೀ ಅಷ್ಟಕಂ - ೩

ಕದಂಬವನ ಶಾಲಯಾ ಕುಚಮರೋಲ್ಲಸನ್ಮಾಲಯಾ
ಕುಚೋಪಮಿತಶೈಲಯಾ ಗುರುಕೃಪಾಲಸದ್ವೇಲಯಾl
ಮದಾರುಣ ಕಪೋಲಯ ಮಧುರ ಗೀತ ವಾಚಾಲಯಾ
ಕಯಾsಪಿ ಘನನೀಲಯಾ ಕವಚಿತಾ ವಯಂ ಲೀಲಯಾ ll೩ll
 
ಅವಳ ವ್ಯೂಹಾತ್ಮಕವಾದ ಈ ಕದಂಬವನದಲಿ,
ಅವಳ ಎದೆಯನ್ನಲಂಕರಿಸಿರುವ ಹಾರದೊಳು,
ಅವಳ ಪರ್ವತೋಪಮ ಸ್ಥನಗಳೊಳು,
ಅವಳ ಗುರುತರ ಕೃಪಾಕಟಾಕ್ಷದೊಳು,
ಮದ್ಯದಿಂದ ಕೆಂಪಡರಿರುವ ಅವಳ ಕಪೋಲಗಳೊಳು,
ಅವಳ ಮಧುರವಾದ ಸಂಗೀತದ ಧ್ವನಿಯೊಳು, 
ಅವಳ ನೀಲ ಮೇಘವರ್ಣದ ಕಾಯದೊಳು,
ಅವಳ ಅರಿಯಲಾರದ ಲೀಲೆಯೊಳು,
ಕವಚದಂತಾವರಿಸಲ್ಪಟ್ಟಿರುವೆವು ನಾವು. 
 
     ದೇವಿಯ ವಾಸಸ್ಥಾನ, ಕೊರಳ ಮಾಲೆ, ಎದೆ, ಕಪೋಲಗಳು ಮತ್ತು ಅವಳ ಶ್ಯಾಮಲ ವರ್ಣದ ಮೈಕಾಂತಿ ಇವೆಲ್ಲವುಗಳೂ ನಮ್ಮನ್ನು ಎಲ್ಲಾ ವಿಧವಾದ ದುಷ್ಟ ಶಕ್ತಿಗಳಿಂದ ಕವಚದಂತೆ ಕಾಪಾಡುತ್ತವೆ ಎಂದು ಶ್ಲೇಷಾರ್ಥದ ಮೂಲಕ ದೇವಿಯನ್ನು ಶ್ರೀ ಶಂಕರರು ಆರಾಧಿಸುತ್ತಾರೆ. ಒಮ್ಮೆ ನಮಗೆ ಅವಳ ಕೃಪೆಯು ದೊರಕಿದರೆ ಅದು ನಮ್ಮನ್ನು ಎಲ್ಲಾ ವಿಧವಾದ ಸಂಕಷ್ಟಗಳಿಂದ ಪಾರು ಮಾಡುತ್ತದೆ, ಎನ್ನುವುದು ಈ ಪದ್ಯದ ಸಾರಾಂಶ. 
 
ಕದಂಬವನ - ಈ ಯಾವತ್ ಪ್ರಪಂಚ.
 
ಹಾರ - ಇದು ಪಾವಿತ್ರ್ಯ ಮತ್ತು ಶುಭದ ಸಂಕೇತ; ಅಂದರೆ ಅವಳು ನಿತ್ಯ ಶುಭಪ್ರದಳು. 
 
ಪರ್ವತೋಪಮ ಸ್ಥನಗಳು - ದೇವಿಯು ಎಲ್ಲರ ತಾಯಿಯು. ಅವಳು ಅನ್ನಪೂರ್ಣೆಯ ರೂಪದಲ್ಲಿ ಜೀವಿಗಳಿಗೆ ಅನ್ನದ ರೂಪದಲ್ಲಿ ಆಹಾರವನ್ನು (ಆಧ್ಯಾತ್ಮಿಕ ಹಾಗು ಭೌತಿಕ) ಸಕಲರಿಗೂ ಕೊಡುತ್ತಾಳೆ. ಅವಳ ಸ್ಥನ್ಯಪಾನ ಮಾಡಿದ ಅದೆಷ್ಟೋ ಕಂದಮ್ಮಗಳು ಆಧ್ಯಾತ್ಮಿಕ ದೈತ್ಯರಾಗಿದ್ದಾರೆ(ಉದಾ: ತಿರುಜ್ಞಾನ ಸಂಬಂಧರ್). ಅವಳ ಪರ್ವತೋಪಮ ಸ್ಥನಗಳು ಅವಳು ಜಗದ ಮಾತೆಯಾಗಿ ತನ್ನ ಸಂತತಿಯಾದ ನಮ್ಮೆಲ್ಲರನ್ನೂ ಆಕ್ಕರೆಯಿಂದ ಪೋಷಿಸುವುದರ ದ್ಯೋತಕವಾಗಿದೆ.
 
ಗುರುತರ ಕೃಪಾಕಟಾಕ್ಷದೊಳು - ಎಲ್ಲಾ ವಿಧವಾದ ಪ್ರೇಮದ ರೂಪಗಳಲ್ಲಿ ತಾಯಿಯ ಮಮತೆಯೆನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ; ಅದನ್ನು ಎಷ್ಟೇ ಶ್ರಮಪಟ್ಟು ವರ್ಣಿಸಿದರೂ ಕಡಿಮೆಯೇ! ಆಧ್ಯಾತ್ಮಿಕವಾಗಿ ಕೆಳಗಿನ ಸ್ತರದಲ್ಲಿರುವವರಿಗೆ ಗ್ರಾಹ್ಯವಲ್ಲದ ನಿರಾಕಾರ ಬ್ರಹ್ಮನು ಮಾತೆಯ ಕೃಪೆಯಿಂದ ವಿಶೇಷವಾದ ಸಾಕಾರ ಈಶ್ವರನಾಗಿ ಗ್ರಾಹ್ಯವಾಗುತ್ತಾನೆ. ಲೌಕಿಕ ತಾಯಿಯೋರ್ವಳು ತನ್ನ ಕಂದನಿಗೆ ಅವನ ತಂದೆಯನ್ನು ತೋರಿಸುವಂತೆ, ದೇವಿಯು ನಮ್ಮೊಂದಿಗೆ ಇರುವ ನಿರ್ಗುಣ ಪರಬ್ರಹ್ಮನನ್ನು ತೋರುವಳು. ಈ ವಿಶ್ವದ ಮಾತೆಯಾದ ತ್ರಿಪುರ ಸುಂದರಿ ದೇವಿಯು ನಮಗೆ ಲೌಕಿಕ ಸುಖಭೋಗಗಳನ್ನಲ್ಲದೆ ಅಂತಿಮ ಲಕ್ಷ್ಯಾವಾದ ಅಪವರ್ಗ (ಮುಕ್ತಿ)ಯನ್ನು ಕೂಡಾ ದಯಪಾಲಿಸುತ್ತಾಳೆ. ಅವಳು ಭುಕ್ತಿ ಮುಕ್ತಿ ಪ್ರದಾಯಿನಿ. ಅವಳ ಕೃಪೆಯು ಅದ್ವಿತೀಯವಾದದ್ದು, ಎಣೆಯಿಲ್ಲದ್ದಾಗಿದ್ದು ಮತ್ತು ಅದ್ಭುತವಾದದ್ದು ಏಕೆಂದರೆ ಅವಳ ಕೃಪೆಯು ಅಜ್ಞಾನಾಂಧಕಾರವನ್ನು ಹೋಗಲಾಡಿಸಿ ನಮಗೆ ಜ್ಞಾನದ ಬೆಳಕನ್ನು ನೀಡುತ್ತದೆ, ಇದಕ್ಕೆ ಸಂಶಯಬೇಡ. ಗುರು ಎನ್ನುವ ಶಬ್ದಕ್ಕೆ ಇನ್ನೊಂದು ಅರ್ಥವೇನೆಂದರೆ ಅದು ಭಾರವಾದದ್ದು ಮತ್ತು ಎಣೆಯಿಲ್ಲದ್ದು (ಅಪರಿಮಿತವಾದದ್ದು). ಅವಳ ಕೃಪೆಯು ಅಪರಿಮಿತವಾಗಿದ್ದು ಎಲ್ಲಾ ಎಲ್ಲೆಗಳನ್ನು ಮೀರಿದ್ದು. 
 
     ಗುರುವೆಂದರೆ ಆಧ್ಯಾತ್ಮಿಕ ಮಾರ್ಗದರ್ಶಕ ಮತ್ತು ಅವನ ಕರುಣೆಯೇ ಗುರುಕೃಪೆ. ಶತಶ್ಲೋಕಿಯಲ್ಲಿ ಶಂಕರಾಚಾರ್ಯರು ಗುರುವಿನ ಅಸದೃಶತೆ; ಪರುಷಮಣಿಯನ್ನು ಉಪಮೆಯಾಗಿ ಬಳಸಿಕೊಂಡು ವಿವರಿಸುತ್ತಾರೆ. "ಜ್ಞಾನವನ್ನು (ಆಧ್ಯಾತ್ಮಿಕ) ಪ್ರಸಾದಿಸುವ ಅತ್ಯಂತ ಗೌರವಾನ್ವಿತ ವ್ಯಕ್ತಿಗೆ ಈ ಮೂರುಲೋಕಗಳಲ್ಲೂ ಹೋಲಿಕೆಯಿರುವ ವಸ್ತುವಿಲ್ಲ. ಪರುಷಮಣಿಯೂ ಕೂಡಾ ಕೇವಲ ಕಬ್ಬಿಣದ ಚೂರನ್ನು ಬಂಗಾರವನ್ನಾಗಿ ಮಾಡಬಲ್ಲದು ಆದರೆ ಅದರಂತೆ ಇನ್ನೊಂದು ಪರುಷಮಣಿಯನ್ನಾಗಿ ಅಲ್ಲ. ಆದರೆ ಪೂಜ್ಯ ಗುರುವಾದರೋ  ಅವನ ಅಡಿದಾವರೆಗಳಲ್ಲಿ ಶರಣಾದವರನ್ನು ಅವನ ಸಮಾನನಾಗಿ ಮಾಡುವನು. ಅವನು ಅದ್ವಿತೀಯನೇ ಸರಿ ಮತ್ತು ಅತೀತನಾದವನು". 
 
ದೃಷ್ಟಾಂತೋ ನೈವ ದೃಷ್ಟಾಸ್ತ್ರಿಭುವನ
ಜಠರೇ ಸದ್ಗುರೋರ್ ಜ್ಞಾನದಾತುಃ
ಸ್ಪರ್ಶಾಶ್ಚೇತತ್ರಕಲ್ಪ್ಯಃ ಸ ನಯತಿ
ಯದಹೋ ಸ್ವರ್ಣತಾಮಶ್ಮಶಾರಮ್ l
ನ ಸ್ಪರ್ಶತ್ವಂ ತಥಾಪಿ ಶ್ರೀತಚರಣ-
ಯುಗೇ ಸದ್ಗುರುಃ ಸ್ವೀಯಶಿಷ್ಯೇ
ಸ್ವೀಯಂ ಸಾಮ್ಯಂ ವಿದತ್ತೇ ಭವತಿ 
ನಿರುಪಮಸ್ತೇನ ವಾ ಲೌಕಿಕೋಪಿ ll
 
ಭಾವಾರ್ಥ - ಗುರುವು ಕೇವಲ ಶಿಷ್ಯನ ಅಜ್ಞಾನವನ್ನು ಮಾತ್ರವೇ ಹೋಗಲಾಡಿಸದೆ ಅದರೊಂದಿಗೆ ಶಿಷ್ಯನೂ ಕೂಡಾ ಇತರರ ಅಜ್ಞಾನವನ್ನು ಹೋಗಾಲಾಡಿಸುವಂತೆ ಕೃಪೆದೋರುತ್ತಾನೆ. 
 
     ಪ್ರತಿಯೊಬ್ಬರಿಗೂ ತನ್ನ ತಾಯಿಯೇ ಮೊದಲ ಗುರುವು; ಏಕೆಂದರೆ ಅವಳು ಅವನಿಗೆ ಬದುಕುವುದನ್ನು ಕಲಿಸಿಕೊಡುತ್ತಾಳೆ. ಶತಪಥ ಬ್ರಾಹ್ಮಣವು, " ಯಾವನಿಗೆ ತಾಯಿ, ತಂದೆ ಮತ್ತು ಗುರುವು ಇರುವರೋ ಅವನು ಜ್ಞಾನ(ತಿಳುವಳಿಕೆ)ವುಳ್ಳವನಾಗುತ್ತಾನೆ. (ಮಾತೃಮಾನ್ ಪಿತೃಮಾನ್ ಆಚಾರ್ಯವಾನ್ ಪುರುಷೋ ವೇದಾಃ)" ಎಂದು ಸಾರುತ್ತದೆ. ಆದ್ದರಿಂದ ಸಹಜವಾಗಿಯೇ ಜಗಜ್ಜನನಿಯಾದ ದೇವಿಯು ಪ್ರಥಮ ಗುರುವಾಗುತ್ತಾಳೆ. ಉಮೆಯಾಗಿ ಅವಳು ಇಂದ್ರನ ದುರಹಂಕಾರ ಮತ್ತು ಸೊಕ್ಕನ್ನು ಹೋಗಲಾಡಿಸಿ ಅವನಿಗೆ ಬ್ರಹ್ಮವಿದ್ಯೆಯನ್ನು ಕರುಣಿಸಿ ಅವನನ್ನು ಪರಿಶುದ್ಧಳಾಗಿಸುತ್ತಾಳೆ - ಕೇನ ಉಪನಿಷತ್ತು. 'ನಿಗಮ'ದ ವ್ಯುತ್ತತ್ತಿಯನ್ನು ಕುರಿತಾದ ಶ್ಲೋಕವೊಂದು ಹೀಗೆ ಹೇಳುತ್ತದೆ, "ಯಾವ ತಂತ್ರವು ಗಿರಿಜೆಯ ಮುಖದಿಂದ ಉತ್ಪನ್ನವಾಗಿ ಗಿರೀಶನು ಶ್ರವಣಮಾಡಿದನೋ ಮತ್ತು ವಾಸುದೇವನಿಂದ ಅನುಮೋದಿಸಲ್ಪಟ್ಟಿತೋ ಅದು ನಿಗಮ". (ನಿರ್ಗತೋ ಗಿರಿಜಾ ವಕ್ತ್ರಾತ್, ಗತಶ್ಚ ಗಿರೀಶ ಶ್ರುತಿಮ್, ಮತಶ್ಚ ವಾಸುದೇವಸ್ಯ, ನಿಗಮಃ ಪರಿಕಥ್ಯತೆ). ಇದರಿಂದ ದೇವಿಯು ಶಿವ ಪರಮಾತ್ಮನಿಗೂ ಗುರುವಾಗಿದ್ದಳೆಂದು ವೇದ್ಯವಾಗುತ್ತದೆ. ಲಲಿತಾ ಸಹಸ್ರನಾಮವು ಅವಳನ್ನು "ನಿಜಾಜ್ಞಾನರೂಪನಿಗಮಾ" (ನಾಮಾವಳಿ ೨೮೭) ಎಂದು ಕೊಂಡಾಡುತ್ತದೆ, ಅಂದರೆ ವೇದಗಳು (ನಿಗಮಗಳು) ಅವಳಿಂದ ಅಧಿಕೃತವಾಗಿ ಹೇಳಲ್ಪಟ್ಟವು.
 
     ಇದೇ ವರಸೆಯಲ್ಲಿ ’ಆಗಮ’ ಕುರಿತಾಗಿ ಶಾರದಾ ತಿಲಕರು ಹೇಳುವುದೇನೆಂದರೆ, ಅದು ’ಆಗಮ’ವೆಂದು ಹೇಳಲ್ಪಟ್ಟಿದೆ; ಏಕೆಂದರೆ ಅದು ಶಿವನ ಬಾಯಿಂದ ಉಕ್ತವಾಗಿ ಶಕ್ತಿಯಿಂದ ಕೇಳಲ್ಪಟ್ಟಿತು ಮತ್ತು ವಿಷ್ಣುವಿನಿಂದ ಅನುಮೋದಿಸಲ್ಪಟ್ಟಿತು (ಯ್ಶಿವವಕ್ತ್ರಾಸ್ತು ಗತಂ ತು ಗಿರಿಜಾಮುಖೇ, ಮತಂ ಚ ವಾಸುದೇವೇನ ತಸ್ಮಾದಾಗಮ ಉಚ್ಛ್ಯತೇ). 
 
     ಪರಬ್ರಹ್ಮವು ಎರಡಾಗಿ ವಿಭಜನೆಗೊಂಡು ಒಂದು ಶಕ್ತಿಯ ರೂಪವನ್ನು ತಾಳಿದರೆ ಮತ್ತೊಂದು ಶಿವನ ರೂಪವನ್ನು ತಾಳಿತು, ಅವರಲ್ಲಿ ಒಬ್ಬರು ಗುರುವಿನ ಸ್ಥಾನವನ್ನು ಸ್ವೀಕರಿಸಿದರೆ ಮತ್ತೊಬ್ಬರು ಶಿಷ್ಯತ್ವವನ್ನು  ಸ್ವೀಕರಿಸಿ ತಂತ್ರಶಾಸ್ತ್ರದ ಎಲ್ಲಾ ಗ್ರಂಥಗಳನ್ನು ಪ್ರಶ್ನೋತ್ತರ ರೂಪದಲ್ಲಿ ಹೊರತಂದರು. ಕೆಲವೊಂದು ಸಂದರ್ಭಗಳಲ್ಲಿ ಶಿವನು ಗುರುವಾದರೆ ಶಕ್ತಿಯು ಶಿಷ್ಯಳ ಪಾತ್ರವನ್ನು ವಹಿಸಿದಳು ಉಳಿದ ಸಂದರ್ಭಗಳಲ್ಲಿ ಶಕ್ತಿಯು ಗುರುವಾದರೆ ಶಿವನು ಶಿಷ್ಯನ ಪಾತ್ರವನ್ನು ವಹಿಸಿದನು. ಇನ್ನೂ ಮುಂದುವರೆದು ತಂತ್ರಶಾಸ್ತ್ರಗಳು ಒಂದೊಂದು ಯುಗದಲ್ಲಿ ಒಂದೊಂದು ಗುರುವಿನ ರೂಪವನ್ನು ತಾಳಿ ದೇವಿಯು ತಾನು ಮೂಲತಃ ಶಿವನಿಂದ ಕಲಿತ ’ಶ್ರೀ ವಿದ್ಯೆ’ಯನ್ನು ಪ್ರಚಾರಕ್ಕೆ ತಂದಳೆಂದು ಹೇಳುತ್ತವೆ. 
 
    ದೇವಿಯ ಹಲವಾರು ನಾಮಾಂಕಿತಗಳಲ್ಲಿ ’ಶ್ರೀ ವಿದ್ಯಾ’ ಕೂಡಾ ಒಂದು. ಅದು ದಿವ್ಯ ಜ್ಞಾನವನ್ನು ಹೊಂದುವ ಮಾರ್ಗ ಅಥವಾ ದಿವ್ಯಜ್ಞಾನವೆಂದೂ ಕೂಡಾ ಅರ್ಥವನ್ನು ಕೊಡುತ್ತದೆ. ಆದ್ದರಿಂದ ದೇವಿ ತ್ರಿಪುರ ಸುಂದರಿ ದೇವಿಯು ತಾನೇ ದಿವ್ಯ ಜ್ಞಾನವೂ ಮತ್ತು ಅದನ್ನು ಹೊಂದುವ ಮಾರ್ಗವೂ ಆಗಿದ್ದಾಳೆ.
 
     ತ್ರಿಪುರ ಸುಂದರಿ ದೇವಿಯು ದಕ್ಷಿಣಾಮೂರ್ತಿಯ ರೂಪದಲ್ಲಿ ವಿಶ್ವಗುರುವಾದ ಶಿವನ ಅರ್ಧಾಂಗಿಯೂ ಆಗಿದ್ದಾಳೆ. 
 
     ದೇವಿಯ ಕೃಪೆಯು ನೀರಿನಂತೆ ಹರಿಯುತ್ತದೆ; ಏಕೆಂದರೆ ನೀರು ಉನ್ನತ ಮಟ್ಟದಿಂದ ಕೆಳಮಟ್ಟಕ್ಕೆ ಹರಿಯುವಂತೆ ಭಕ್ತನ ಹೃದಯದಲ್ಲಿ ಉಂಟಾದ ಸಣ್ಣ ಬಿರುಕಿನಿಂದಲೂ ಕೂಡಾ ದೇವಿಯ ಕೃಪೆಯು ಪ್ರವಹಿಸುತ್ತದೆ; ಅವನು "ಭವಾನಿ" ಎಂದು ಶರಣಾಗತನಾಗುವ ಮುನ್ನವೇ ದೇವಿಯು ಅವನಿಗೆ ಉನ್ನತವಾದ 'ಸಾಯುಜ್ಯ' ಪದವಿಯನ್ನು ದಯಪಾಲಿಸುತ್ತಾಳೆ ('ಸಾಯುಜ್ಯ'ವೆಂದರೆ ಐಕ್ಯವಾಗುವುದು - ಸೌಂದರ್ಯ ಲಹರಿ ೨೨ನೇ ಸ್ತೋತ್ರ). ಕೃಪೆ (ದಯೆ) ಎನ್ನುವ ಶಬ್ದದಲ್ಲಿಯೇ ಅದು ಮೇಲಿನಿಂದ ಕೆಳಗೆ ಹರಿಯುವುವ ಭಾವನೆಯನ್ನು ಉಂಟು ಮಾಡುತ್ತದೆ; ಸಮಾನರಲ್ಲಿ ಇರುವ ಪ್ರೇಮವನ್ನು ಮೈತ್ರಿ(ಸ್ನೇಹ) ಎಂದರೆ, ಹಿರಿಯರಿಲ್ಲಿರುವ ಪ್ರೇಮವು ಭಕ್ತಿ ಎನಿಸಿಕೊಳ್ಳುತ್ತದೆ. 
 
ವೇಲ - ಎಂದರೆ ಎಲ್ಲೆ ಅಥವಾ ಗಡಿ. ದೇವಿಯು ಕೃಪೆಗೆ ಇರುವ ಅತ್ಯುನ್ನತ ಎಲ್ಲೆ ಅಥವಾ ಹೆಗ್ಗುರುತು. 
 
ಅವಳ ಮಧುರವಾದ ಸಂಗೀತದ ಧ್ವನಿಯೊಳು - ತಾಯಿಯು ತನ್ನ ಮಕ್ಕಳೊಂದಿಗೆ ಮಧುರವಾಗಿಯೇ ಮಾತನಾಡುತ್ತಾಳೆಂದು ಹೇಳಬೇಕಿಲ್ಲ. ಎಂಥಹ ಕ್ರೂರ ಪ್ರಾಣಿಯಾದರೂ ಕೂಡಾ ಅದು ತನ್ನ ಮಕ್ಕಳಿಗಾಗಿ ತನ್ನ ಕ್ರೂರತ್ವವನ್ನು ತೊರೆಯುತ್ತದೆ; ಅಂಥಹುದರಲ್ಲಿ ಕೃಪೆಗೆ ಹೆಗ್ಗುರುತಾಗಿರುವ ದೇವಿಯ ಬಗ್ಗೆ ಹೇಳುವುದೇನಿದೆ. ಮೇಲಾಗಿ ಅವಳ ಸ್ವಭಾವವೇ ಕರುಣೆ ಅಥವಾ ಶಾಂತಿಯನ್ನುಂಟು ಮಾಡುವುದಾಗಿದೆ. 
 
ಅವಳ ನೀಲ ಮೇಘವರ್ಣದ ಕಾಯದೊಳು - ಯಾವುದೇ ವಿಶಾಲವಾದ ವಸ್ತುವು ನೀಲಿ ಬಣ್ಣವನ್ನು ತಳೆಯುತ್ತದೆ. ಉದಾಹರಣೆಗೆ, ಆಕಾಶ, ಸಮುದ್ರ ಮೊದಲಾದವು. ಅವಳು ವಿಶ್ವದಲ್ಲೆಲ್ಲಾ ಪಸರಿಸಿರುವವಳು ಹಾಗಾಗಿ ಅವಳನ್ನು ಸಹಜವಾಗಿಯೇ ನೀಲ ವರ್ಣದವಳೆಂದು ಬಣ್ಣಿಸಿದ್ದಾರೆ. ಅವಳು ತೃಷೆಯಿಂದ ಕೂಡಿದ ವಿಶ್ವಕ್ಕೆ ಮಳೆ ಸುರಿಸುವ ಮೋಡವಾಗಿರುವವಳು ಆದ್ದರಿಂದ ಅವಳು ಕಪ್ಪು ಮೋಡದ ಬಣ್ಣವನ್ನು ಹೊಂದಿದ್ದಾಳೆ. 
 
ಅರಿಯಲಾರದ ಲೀಲೆಯೊಳು - ಸೃಜಿಸುವುದು, ಪಾಲಿಸುವುದು ಮತ್ತು ಒಳಸೆಳೆದುಕೊಳ್ಳುವುದು ಸಾಮಾನ್ಯರಿಗೆ ಅರ್ಥೈಸಲಾಗದ ದೇವಿಯ ಒಂದು ಆಟ. 
 
    ಶ್ರುತಿಗಳು ಸಾರುತ್ತವೆ, "ಯಾವುದರಿಂದ ಎಲ್ಲಾ ಜೀವಿಗಳು ಜನ್ಮತಾಳುತ್ತಾವೆಯೋ, ಯಾವುದರಲ್ಲಿ ಜೀವಿಸುತ್ತವೋ ಮತ್ತು ಅಂತಿಮವಾಗಿ ಯಾವುದರಲ್ಲಿ ಲೀನವಾಗುತ್ತವೆಯೋ ಅದುವೇ ಬ್ರಹ್ಮ (ಯತೋ ವಾ ಇಮಾನಿ ಭೂತಾನಿ ಜಾಯಂತೇ; ಯೇನ ಜಾತಾನಿ ಜೀವಂತಿ, ಯತ್ ಪ್ರಯಂತ್ಯಭಿಸಂವಿಶಂತಿ - ತೈತ್ತರೀಯ ಉಪನಿಷತ್, ೩.೧.೧). ಈ ಅದ್ವಿತೀಯ ಪ್ರಪಂಚವು ತನ್ನ ಹುಟ್ಟನ್ನು ಕಂಡುಕೊಂಡು, ಜೀವಿಸಿ ಮತ್ತು ಬ್ರಹ್ಮದಲ್ಲಿ ತಾದಾತ್ಮ್ಯವನ್ನು ಹೊಂದುತ್ತದೆ. ಈ ಪರಿಮಿತ ವಿಶ್ವವು ಅದು ಹೇಗೆ ಅಪರಿಮಿತವಾದ ಬ್ರಹ್ಮದ ಎದೆಯಿಂದ ಸೃಜಿಸಲ್ಪಟ್ಟಿತು ಎನ್ನುವುದು ಬಿಡಿಸಲಾಗದ ಚೋದ್ಯ, ಇದನ್ನೇ ಮಾಯೆ ಎನ್ನುವುದು.  ಬ್ರಹ್ಮವು ಈ ಪ್ರಪಂಚವಾಗಿ ಮಾರ್ಪಾಟು ಹೊಂದಲು ಸಾಧ್ಯವಿಲ್ಲ. ಏಕೆಂದರೆ ಬ್ರಹ್ಮವು ಅಪರಿಮಿತವಾದದ್ದು ಅಥವಾ ಅನಂತವಾದದ್ದು ಆದ್ದರಿಂದ ಅದರಲ್ಲಿ ವಿಭಾಗಗಳು ಅಥವಾ ಅವಯವಗಳು ಇರುವುದಿಲ್ಲ, ಮತ್ತು ವಿಕಾರಕ್ಕೆ ಒಳಪಡದೇ ಇರುವುದು ಅನಂತದ ಲಕ್ಷಣ. ಈ ಕಾರಣದಿಂದಾಗಿ ಬ್ರಹ್ಮನ ಒಂದು ಭಾಗವು ಈ ವಿಶ್ವವಾಗಿ ರೂಪಾಂತರ ಹೊಂದಿ ಉಳಿದ ಭಾಗವು ಹಾಗೆಯೇ ಇರುವುದು ಎನ್ನಲಾಗದು. ಆದ್ದರಿಂದ ಈ ಅದ್ವಿತೀಯ ವಿಶ್ವವು ಕಾರಣಗಳಿಗೆ ಅತೀತವಾಗಿದೆ. ಇದುವೇ ದೇವಿಯ ಲೀಲೆ. 
 
     ಸಾಮಾನ್ಯ ಲೌಕಿಕರಿಗೆ ನಿರ್ಗುಣ ನಿರಾಕಾರ ಪರಬ್ರಹ್ಮದ ಮೇಲೆ ಧ್ಯಾನಿಸಲು ಸಾಧ್ಯವಿಲ್ಲದ ಮಾತು. ಅವರಿಗೆ ದೇವಿಯ ಈ ಮಾಯೆಯು ಅತ್ಯಂತ ಉಪಯೋಗಕ್ಕೆ ಬರುತ್ತದೆ; ಅವರು ನಿರ್ಗುಣ ನಿರಾಕಾರ ಬ್ರಹ್ಮನಿಗೆ ಗುಣರೂಪಗಳನ್ನು ಆರೋಪಿಸಿ ಅದು ತಮ್ಮ ಕೈಗೆಟುಕುವಂತೆ ಮಾಡಿಕೊಳ್ಳುತ್ತಾರೆ. 
 
   "ಋಷಿಗಳಿಗೆ, ವಿಹಿತ ಕರ್ಮಗಳನ್ನು ಮಾಡುವವರಿಗೆ, ಆರಾಧಕರಿಗೆ, ಯೋಗಿಗಳಿಗೆ ಮತ್ತು ಮುನಿಗಳಿಗೆ ಧ್ಯಾನಿಸಲು ಮತ್ತು ಪೂಜೆಯನ್ನು ಕೈಗೊಳ್ಳಲು ಅನುಕೂಲವಾಗುವಂತೆ, ಪರಬ್ರಹ್ಮವು ಲೀಲೆಯಿಂದಾಗಿ ರೂಪಧಾರಣವನ್ನು ಮಾಡುತ್ತದೆ".
      ಯತೀನಾಂ ಮಂತ್ರಿಣಾಂ ಚೈವ, ಯೋಗಿನಾಂ ಜ್ಞಾನಿನಾಂ ತಥಾ l
      ಧ್ಯಾನ ಪೂಜಾ ನಿಮಿತ್ತಂ ಹಿ ತನುಮ್ ಗೃಹ್ಯತಿ ಲೀಲಯಾ ll .......... (ಕಾರಣಾಗಮಂ)
 
     ಮಾಯಾ ಕ್ರಿಯೆಯನ್ನು ಮೀರಿ ದೇವಿಯು ತನ್ನ ಭಕ್ತರಿಗೆ ಕೃಪೆ ತೋರಿ ಆಶೀರ್ವದಿಸುವ ದಾರಿಗಳು ನಿಗೂಢವಾಗಿವೆ. ಈ ರೀತಿಯ ಉದಾಹರಣೆಗಳು ಲೆಕ್ಕಕ್ಕಿಲ್ಲದಷ್ಟು ಇವೆ; ಅವುಗಳಲ್ಲಿ ಮೂರು ಪ್ರಸಂಗಗಳನ್ನು ಇಲ್ಲಿ ಪ್ರಸ್ತಾಪಿಸಬಹುದು. 
 
೧) ದೇವಿಯು ನಾಲಿಗೆಯ ಮೇಲೆ ಬೀಜಾಕ್ಷರಗಳನ್ನು ಬರೆದ ತಕ್ಷಣ, ಮೂರ್ಖನಾಗಿದ್ದ ಕಾಳಿದಾಸನು, "ಕವಿ ಕಾಳಿದಾಸ"ನಾದನು. 
 
೨) ಕದಿರಮಂಗಳಮ್ ಎನ್ನುವ ಪಟ್ಟಣವು ತಮಿಳುನಾಡಿನಲ್ಲಿದೆ. ಒಂದು ದಿನ ಅಲ್ಲಿ ದೊಡ್ಡದಾಗಿ ಮಳೆ ಸುರಿಯಿತು. ಆ ಮಳೆಗಾಳಿಗೆ ಕಂಬನೆನ್ನುವ ತಮಿಳು ಕವಿಯ* ಗುಡಿಸಲಿಗೆ ಹೊದಿಸಲ್ಪಟ್ಟಿದ್ದ ಸಾಕಷ್ಟು ಗರಿಗಳು ಎಗರಿ ಹೋದವು, ಹಾಗಾಗಿ ಆ ಗುಡಿಸಲಿನ ಛಾವಣಿಯು ಸಹಜವಾಗಿಯೇ ಸೋರಲು ಪ್ರಾರಂಭಿಸಿತು. ದುರ್ಗೆಯನ್ನು ಪ್ರಾರ್ಥಿಸುತ್ತಾ ಕಂಬನು ದೀರ್ಘ ನಿದ್ರೆಗೆ ಜಾರಿದನು. ಬೆಳಿಗ್ಗೆ ಅವನೆದ್ದು ನೋಡಿದಾಗ ಆಶ್ಚರ್ಯವೊಂದು ಕಾದಿತ್ತು ಅವನ ಗುಡಿಸಲಿನ ಸೂರು ಭತ್ತದ ಹುಲ್ಲಿನಿಂದ ಹೊಸದಾಗಿ ಹೊದಿಕೆ ಹಾಕಲ್ಪಟ್ಟಿತ್ತು.  ಈ ಪ್ರಸಂಗವು ನಡೆದ ನಂತರ ಆ ಪಟ್ಟಣವು "ಕಂಬನ್ ಕದಿರ‍್ವೇಂಡಮಂಗಳಮ್" ಎಂದು ಹೆಸರಾಯಿತು. ಕದಿರ್ ಎಂದರೆ ಭತ್ತದ ಗಣ್ಣು ಅಥವಾ ಹುಲ್ಲು ಮತ್ತು ವೇಂಡ ಎಂದರೆ ಹೆಣೆದ/ಹೊಸೆದ ಎಂದು ಅರ್ಥ. ಕಾಲಾನುಕ್ರಮದಲ್ಲಿ ಇದುವೇ ಜನರ ಬಾಯಲ್ಲಿ ಅಪಭ್ರಂಶಗೊಂಡು ’ಕದಿರಮಂಗಳಮ್’ ಎಂದಾಗಿದೆ. (*ಕಂಬ ರಾಮಾಯಣವೆಂದೇ ಪ್ರಸಿದ್ಧವಾಗಿರುವ ತಮಿಳು ರಾಮಾಯಣದ ಕರ್ತೃ).
 
೩) ರೌಸ್ ಪೀಟರ್ ಎನ್ನುವ ಆಂಗ್ಲ ಅಧಿಕಾರಿಯು ೧೯೧೨ರಲ್ಲಿ ಮಧುರೆಯ ಕಲೆಕ್ಟರ್ ಆಗಿದ್ದನು. ಅವನು ದಿನ ನಿತ್ಯ ತನ್ನ ಕೆಲಸಕ್ಕೆ ತೆರಳುವ ಮುನ್ನ ಕುದುರೆಯ ಮೇಲೆ ಸವಾರಿ ಮಾಡುತ್ತಾ ಮಧುರೆ ಮೀನಾಕ್ಷಿ ದೇವಸ್ಥಾನವನ್ನು ಒಂದು ಸುತ್ತು ಹಾಕುವ ಪರಿಪಾಠವನ್ನಿಟ್ಟುಕೊಂಡಿದ್ದನು. ಅದೊಂದು ರಾತ್ರಿ ಗುಡುಗು ಸಹಿತ ಮಿಂಚಿನಿಂದ ಕೂಡಿದ ಮಳೆಯ ಆರ್ಭಟ ಜೋರಾಗಿತ್ತು. ರೌಸ್ ಪೀಟರನು ತನ್ನ ಬಂಗಲೆಯಲ್ಲಿ ದೀರ್ಘ ನಿದ್ರೆಯಲ್ಲಿದ್ದನು, ಆಗ ಅವನು ಥಟ್ಟನೆ ಈ ಮೊದಲು ಪರಿಚಯವಿಲ್ಲದ ಒಬ್ಬ ಪುಟ್ಟ ಬಾಲಕಿಯಿಂದ ಎಚ್ಚರಗೊಳಿಸಲ್ಪಟ್ಟು ಆ ಕ್ಷಣವೇ ಅಲ್ಲಿಂದ ಜಾಗ ಖಾಲಿ ಮಾಡಲು ಒತ್ತಾಯಿಸಲ್ಪಟ್ಟ. ಅವನು ತನ್ನ ಕೋಣೆಯನ್ನು ಬಿಟ್ಟು ಹೊರಬಂದನೋ ಇಲ್ಲವೋ, ಸಿಡಿಲಿಗೆ ಆ ಬಂಗಲೆಯು ಸಂಪೂರ್ಣವಾಗಿ ಕುಸಿದು ಬಿದ್ದಿತು. ಆ ಬಾಲಕಿಯೂ ಮಾಯವಾದಳು. ಅವನಿಗೆ ತನ್ನನ್ನು ಪಾರುಮಾಡಿದ್ದು ನಿಶ್ಚಯವಾಗಿಯೂ ಮೀನಾಕ್ಷಿ ತಾಯಿಯೇ ಎನ್ನುವುದು ಮನದಟ್ಟಾಯಿತು. 
  
                              *****
 
ವಿ.ಸೂ.: ಈ ಕಂತಿನ ಶ್ಲೋಕ - ೩ರ ಭಾಗವು ’ತ್ರಿಪುರ ಸುಂದರಿ ಅಷ್ಟಕಮ್" - ಪ್ರಕಟಣೆ(೧೯೮೬): ಅಧ್ಯಕ್ಷರು, ಶ್ರೀ ರಾಮಕೃಷ್ಣ ಮಠ, ಮೈಲಾಪುರ್, ಮದ್ರಾಸ್ - ೬೦೦ ೦೦೪, ಪುಸ್ತಕದ ೧೭ರಿಂದ ೨೭ನೇ ಪುಟದ ಅನುವಾದವಾಗಿದೆ. ಮೂಲ ಇಂಗ್ಲೀಷ್ ಕರ್ತೃ - ಶ್ರೀಯುತ ಎಸ್. ಕಾಮೇಶ್ವರ್, ಮುಂಬಯಿ. 
                              *****
ಈ ಸರಣಿಯ ಹಿಂದಿನ ಲೇಖನ "ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನಕ್ಕೆ ಕೆಳಗಿನ ಕೊಂಡಿಯನ್ನು ನೋಡಿ: 
 http://sampada.net/blog/%E0%B2%A4%E0%B3%8D%E0%B2%B0%E0%B2%BF%E0%B2%AA%E0%B3%81%E0%B2%B0-%E0%B2%B8%E0%B3%81%E0%B2%82%E0%B2%A6%E0%B2%B0%E0%B2%BF-%E0%B2%85%E0%B2%B7%E0%B3%8D%E0%B2%9F%E0%B2%95%E0%B2%AE%E0%B3%8D-%E0%B2%AD%E0%B2%BE%E0%B2%97-%E0%B3%A9-%E0%B2%B8%E0%B3%8D%E0%B2%A4%E0%B3%8B%E0%B2%A4%E0%B3%8D%E0%B2%B0-%E0%B3%A8%E0%B2%B0-%E0%B2%B5%E0%B3%8D%E0%B2%AF%E0%B2%BE%E0%B2%96%E0%B3%8D%E0%B2%AF%E0%B2%BE%E0%B2%A8/19/08/2012/38004
 
 ಶ್ರೀ ಮದುರೆ ಮೀನಾಕ್ಷಿ ದೇವಿಯ ಚಿತ್ರಕೃಪೆ: ಗೂಗಲ್ - ಕೊಂಡಿ
http://www.google.co.in/imgres?hl=en&sa=X&biw=1517&bih=706&tbm=isch&prmd=imvns&tbnid=OIc5txhcQcpZpM:&imgrefurl=http://www.hindudevotionalblog.com/2008/09/goddess-meenakshi-picture-madurai.html&docid=wpuhOPr7mRwBRM&imgurl=http://2.bp.blogspot.com/_9vPNlqoYUtY/SOBvCSTC3TI/AAAAAAAAA6I/fogwQRsrhj4/s400/Goddess%252BMeenakshi%252BDevi.jpg&w=292&h=400&ei=6XQyUIDfA8qGrAeEuoHYDw&zoom=1&iact=hc&vpx=191&vpy=136&dur=1225&hovh=263&hovw=192&tx=97&ty=191&sig=110207964646523070807&page=1&tbnh=177&tbnw=130&start=0&ndsp=23&ved=1t:429,r:0,s:0,i:70
 
 

 

Rating
No votes yet

Comments