ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೫: ಸ್ತೋತ್ರ - ೪ರ ವ್ಯಾಖ್ಯಾನ

ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೫: ಸ್ತೋತ್ರ - ೪ರ ವ್ಯಾಖ್ಯಾನ

 
ತ್ರಿಪುರ ಸುಂದರೀ ಅಷ್ಟಕಂ - ೪
 
ಕದಂಬವನಮಧ್ಯಗಾಂ ಕನಕಮಂಡಲೋಪಸ್ಥಿತಾಂ
ಷಡಂಬುರುಹವಾಸಿನೀಂ ಸತತಸಿದ್ಧಸೌದಾಮಿನೀಮ್l
ವಿಡಂಬಿತಜಪಾರುಚಿಂ ವಿಕಚಚಂದ್ರಚೂಡಾಮಣಿಂ
ತ್ರಿಲೋಚನ ಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ        ll೪ll
 
ಕದಂಬವನಮಧ್ಯದಿ ಸ್ವರ್ಣಚಕ್ರದೊಳು ಆಸೀನಳಾಗಿಹ,
ಷಡ್ಪದ್ಮದೊಳು ನಿವಸಿಸುವ, ನಿತ್ಯಸಿದ್ಧರಿಗೆ ಮಿಂಚಿನಂತಿಹ,
ಕೆಂಪು ದಾಸವಾಳವ ಅಣಕಿಸುವಂತೆ ಉತ್ಕೃಷ್ಟವಾಗಿಹ,
ಶುಭ್ರಚಂದ್ರನ ಚೂಡಾಮಣಿತೆರದಿ ಶಿರದಲಿ ಧರಿಸಿಹ,
ತ್ರಿಲೋಚನಕುಟುಂಬಿನಿ ತ್ರಿಪುರಸುಂದರಿಯಲಿ ಕೋರುವೆನಾಶ್ರಯವ.
 
ಕದಂಬವನಮಧ್ಯದಿ - ತನ್ನಿಂದಲೇ ಹೊರಹೊಮ್ಮಿದ ಬಲೆಯ ಮಧ್ಯದಲ್ಲಿ ವಾಸಿಸುವ ಜೇಡರ ಹುಳದಂತೆ; ತನ್ನಿಂದಲೇ ಹೊಮ್ಮಿದ ಈ ಪ್ರಪಂಚದ (ಕದಂಬವನದ) ಕೇಂದ್ರ ಬಿಂದುವಿನಲ್ಲಿ ತ್ರಿಪುರ ಸುಂದರಿಯು ವಾಸಿಸುತ್ತಾಳೆ (ಸ ಯಥೋರ್ಣನಾಭಿಷ್ಟಂತುನೋಚ್ಛರೇತ್, ಬೃಹದಾರಣ್ಯಕ ಉಪನಿಷತ್ತು, ೨.೧.೨೦)
 
          ಇದೇ ರೀತಿಯ ಹೇಳಿಕೆಯು ಲಲಿತೆಯ ರೂಪವಾಗಿರುವ ಕಂಚಿ ಕಾಮಾಕ್ಷಿ ಅಮ್ಮನವರ ಕುರಿತಾಗಿಯೂ ಇದೆ. ಕಂಚಿ ಎಂದರೆ ಸಂಸ್ಕೃತದಲ್ಲಿ ಹೆಂಗಸರು ತಮ್ಮ ನಡುವಿಗೆ ಸುತ್ತಿಕೊಳ್ಳುವ ಪಟ್ಟಿ - ಒಡ್ಡ್ಯಾಣ ಅಥವಾ ಸೊಂಟದ ಪಟ್ಟಿ/ಡಾಬು. ಕಂಚಿಮಹಾತ್ಮ್ಯಂ ಮತ್ತು ಕಾಮಾಕ್ಷಿವಿಲಾಸಗಳು ಕಂಚಿಯನ್ನು ವಿಶ್ವದ ನಾಭಿಯೆಂದು ಸಾರುತ್ತದೆ ("ತಪಸ್ಥಾನಮ್ ಬಿಲಂ ಸೂಕ್ಷ್ಮಂ ಪರಮಂ ವ್ಯೋಮ ತತ್‍ಸ್ಮೃತಂ" - ಕಂಚಿಮಹಾತ್ಮ್ಯಂ ೩೧.೭೦; "ಜಗತ್ಕಾಮಕಲಾಕಾರಂ ನಾಭಿಸ್ಥಾನಮ್ ಭುವಃ ಪರಮ್" - ಕಾಮಾಕ್ಷಿವಿಲಾಸಂ ೧೩.೭೩). ಯಾವ ರೀತಿ ನಾಭಿಯು ದೇಹದ ಕೇಂದ್ರಬಿಂದುವಾಗಿದ್ದು ಇಲ್ಲಿಂದ ೭೨,೦೦೦ ನಾಡಿಗಳು ಹೊರಹೊಮ್ಮುತ್ತವೆಯೋ ಅದೇ ರೀತಿ ಕಾಮಾಕ್ಷಿಯ ಪೀಠವಾದ ಕಂಚಿಯು ಈ ಪ್ರಪಂಚದ ನಾಭಿಯಾಗಿದ್ದು ಇಲ್ಲಿಂದಲೇ ಅವಳ ಕೃಪಾ ಪ್ರಭೆಯು ಪಸರಿಸುತ್ತದೆ.
 
ಸ್ವರ್ಣಚಕ್ರದೊಳು ಆಸೀನಳಾಗಿಹ - ಶಕ್ತಿಯ ಎಲ್ಲಾ ವಿಧವಾದ ರೂಪಾಂತರಗಳಲ್ಲಿ ಅತ್ಯಂತ ಬಲಿಷ್ಠವಾದದ್ದು ಸೂರ್ಯನದು; ಏಕೆಂದರೆ ಅವನ ಉದಯಿಸುವಿಕೆಯೊಂದಿಗೆ ಸಮಸ್ತ ಪ್ರಪಂಚವು ಕ್ರಿಯಾಶೀಲವಾಗುತ್ತದೆ. ಆದ್ದರಿಂದ ಸಹಜವಾಗಿಯೇ ಅತ್ಯುನ್ನತವಾದ ಪರಾಶಕ್ತಿಯು ಸೃಷ್ಟಿಯ ಮಿಕ್ಕೆಲ್ಲಾ ವಸ್ತುಗಳಿಗಿಂತ ಸೂರ್ಯನಲ್ಲಿ ಹೆಚ್ಚು ದೇದೀಪ್ತಮಾನ್ಯಳಾಗಿದ್ದಾಳೆ.
 
ಗಮನಿಸಿ -       ಸೂರ್ಯಮಂಡಲ ಮಧ್ಯದಿ ಆಸೀನಳಾಗಿಹ ತ್ರಿಪುರ ಸುಂದರಿದೇವಿಯ,
                   ಭಜಿಸುವೆ ನಾ, ಕೈಯೊಳು ಪಾಶಾಂಕುಶ, ಧನುರ್ಬಾಣ ಪಿಡಿದಿಹ ಮಂಗಳೆಯ
                   (ಸೂರ್ಯಮಂಡಲ ಮಧ್ಯಸ್ಥಾಂ ದೇವೀಮ್ ತ್ರಿಪುರಸುಂದರೀಮ್ l
                    ಪಾಶಾಂಕುಶ ಧನುರ್ಬಾಣಾಂ ಧಾರಯಂತೀಮ್ ಶಿವಾಂ ಭಜೆ ll )
        
          ಹೃದಯದ ಹತ್ತಿರ ಇರುವ ಹನ್ನೆರಡು ದಳ ಪದ್ಮವಾದ 'ಅನಾಹತ ಚಕ್ರ'ದಲ್ಲಿ ಕುಳಿತು ಕಂಗೊಳಿಸುತ್ತಿರುವ ದೇವಿಯೆಂದೂ ಕೂಡಾ ಇದನ್ನು ಅರ್ಥೈಸಬಹುದು. ಮೂಲಾಧಾರದಲ್ಲಿ ಅಗ್ನಿಯು ಪ್ರಜ್ವಲಿಸುತ್ತದೆ; ಮತ್ತು ಸಹಸ್ರಾರದಲ್ಲಿ ಚಂದ್ರನು ಕಂಗೊಳಿಸಿದರೆ ಅನಾಹತದಲ್ಲಿ ಸೂರ್ಯನು ಪ್ರಕಾಶಿಸುತ್ತಾನೆ. ಮೂಲಾಧಾರದಿಂದ ಸಹಸ್ರಾರಕ್ಕೆ ಪಯಣಿಸುವ ದೇವಿಯು ಅನಾಹತಚಕ್ರದ ಹಂತದಲ್ಲಿ ಪ್ರಕಾಶಿಸುತ್ತಾಳೆ.
    
ಷಡ್ಪದ್ಮದೊಳು ನಿವಸಿಸುವ - ಕುಂಡಲಿನಿಯ ರೂಪದಲ್ಲಿ ದೇವಿಯು ಬೆನ್ನು ಹುರಿಯಲ್ಲಿರುವ ಪದ್ಮಗಳೆಂದೂ ಕರೆಯಲ್ಪಡುವ ಆರು ಚಕ್ರಗಳಲ್ಲಿ (ಷಟ್ ಚಕ್ರಗಳಲ್ಲಿ) ವಾಸಿಸುತ್ತಾಳೆ.
 
ಸೌದಾಮಿನಿ - ಸೌದಾಮಿನಿ ಎಂದರೆ ಸಿಡಿಲು/ಮಿಂಚು. ಸಹಸ್ರಾರಕ್ಕೆ ಸಾಗುವ ದಾರಿಯಲ್ಲಿ ಸ್ವಲ್ಪ ಹೊತ್ತು ದೇವಿಯು ಆಜ್ಞಾ ಚಕ್ರದಲ್ಲಿ ಪವಡಿಸುತ್ತಾಳೆ, ಆಗ ಅವಳು ಮಿಂಚಿನ ಎಳೆಯಂತೆ ಆವಿರ್ಭವಿಸಿದಾಗ ಯೋಗಿಗೆ ಅವಳ ಸ್ವರೂಪದ ಒಂದು ರವೆಯಷ್ಟು ಅಲ್ಪ ಅಂಶದ ಜ್ಞಾನವು ಉಂಟಾಗುತ್ತದೆ.
 
          ತಾಂತ್ರಿಕರ ಅಭಿಮತದಂತೆ, ಮಣಿಪೂರ ಚಕ್ರದಲ್ಲಿ ಸದಾಶಿವನು ಶಿಶಿರ ಋತುವಿನ (ಶೀತಕಾಲದ) ಮೋಡದ ರೂಪವನ್ನು ತೆಳೆದರೆ ಅವನ ಅರ್ಧಾಂಗಿಯು ಮಿಂಚಿನ ರೂಪವನ್ನು ತಳೆಯುತ್ತಾಳೆ. ತಾಂತ್ರಿಕರು ಆ ರೂಪಗಳನ್ನು ’ಮೇಘೇಶ್ವರ’ ಮತ್ತು ’ಸೌದಾಮಿನಿ’ ಎಂದು ಕರೆಯುತ್ತಾರೆ. ಆ ರೂಪಗಳನ್ನು ’ಅಮೃತೇಶ್ವರ’ ಮತ್ತು ’ಅಮೃತೇಶ್ವರಿ’ ಎಂದು ಕೂಡಾ ಕರೆಯುತ್ತಾರೆ.
 
ನಿತ್ಯಸಿದ್ಧರಿಗೆ ಮಿಂಚಿನಂತಿಹ - ಸಿದ್ಧರೆಂದರೆ ಆದರ್ಶ ವ್ಯಕ್ತಿಗಳು, ಅವರು ತಮ್ಮ ಯೌಗಿಕ ಸಾಧನೆಗಳಿಂದ ಅಸಾಮಾನ್ಯ/ಅತೀಂದ್ರಿಯ ಶಕ್ತಿಗಳನ್ನು ಪಡೆದಿರುತ್ತಾರೆ. ಆ ಶಕ್ತಿಗಳು ಎಂಟು ಸಂಖ್ಯೆಯವಾಗಿದ್ದು ಅವು ಈ ರೀತಿ ಇವೆ - ೧) ಅಣಿಮಾ - ಅಣುವಿನಷ್ಟು ಸಣ್ಣದಾದ ರೂಪವನ್ನು ತಾಳುವ ಶಕ್ತಿ, ೨) ಮಹಿಮಾ - ತನ್ನ ಇಚ್ಛೆಗನುಗುಣವಾಗಿ ತನಗೆ ಬೇಕಾದ ಗಾತ್ರವನ್ನು ಪಡೆಯುವುದು, ೩) ಗರಿಮಾ - ತನ್ನ ಇಚ್ಛಾಮಾತ್ರದಿಂದ ಅತ್ಯಂತ ಭಾರವಾಗುವ ಶಕ್ತಿ, ೪) ಲಘಿಮಾ - ತನ್ನ ಇಷ್ಟದಂತೆ ಅತ್ಯಂತ ಹಗುರವಾದ ಭಾರವನ್ನು ಹೊಂದುವುದು (ಕೋಳಿಯ ಪುಚ್ಛಕ್ಕಿಂತ ಹಗುರವೆಂದು ಬಲ್ಲವರು ಹೇಳುತ್ತಾರೆ), ೫) ಪ್ರಾಪ್ತಿಃ - ಆಶಿಸಿದ್ದನ್ನು ಪಡೆಯುವುದು, ೬) ಪ್ರಾಕಾಮ್ಯ - ಕಾಮ/ಮೋಹಕ್ಕೆ ಒಳಗಾಗದ ಅತ್ಯಂತ ದೃಢವಾದ ಮನಸ್ಸನ್ನು ಹೊಂದುವುದು, ೭) ಈಶಿತ್ವಮ್ - ಇನ್ನೊಬ್ಬರ ಮೇಲೆ ಹತೋಟಿಯನ್ನು ಸಾಧಿಸುವುದು ಅಥವಾ ಪ್ರಾಬಲ್ಯವನ್ನು ಮೆರೆಯುವುದು ೮) ವಶಿತ್ವಮ್ - ಎಲ್ಲರನ್ನೂ ವಶೀಕರಣಕ್ಕೊಳಪಡಿಸುವುದು.
 
          ಅಣಿಮಾ ಮಹಿಮಾ ಚೈವ ಗರಿಮಾ ಲಘಿಮಾ ತಥಾ l
          ಪ್ರಾಪ್ತಿಃ ಪ್ರಾಕಾಮ್ಯಮೀಶಿತ್ವಂ ವಶಿತ್ವಂ ಚಷ್ಠ ಸಿದ್ಧಯಃ ll
 
          ಕೆಲವರು ಗರಿಮಾ ಬದಲಾಗಿ ಕಾಮವಶ್ಯತಾ - ಕಾಮವನ್ನು ಹತ್ತಿಕ್ಕುವ ಶಕ್ತಿಯೆಂದು ಓದಿಕೊಳ್ಳುತ್ತಾರೆ.
 
          ಯೋಗ ಸಾಧನೆಯ ಹಂತದಲ್ಲಿ, ಕುಂಡಲಿನಿಯು ಸಹಸ್ರಾರಕ್ಕೆ ಏರಿದಾಗ ಯೋಗಿಗೆ ಈ ರೀತಿಯ ಶಕ್ತಿಗಳು ಸಿದ್ಧಿಸುತ್ತವೆ. ದೇಹದಲ್ಲಿ ಸುಪ್ತವಾಗಿರುವ ಈ ಶಕ್ತಿಗಳು, ಕುಂಡಲಿನಿಯ ಚಲನೆಯಿಂದಾಗಿ ತಕ್ಷಣಕ್ಕೆ ಮಿಂಚಿನ ವೇಗದಲ್ಲಿ/ಮಿಂಚಿನಂತೆ ಉದ್ಭವಿಸುತ್ತವೆ.
 
          ಇದಕ್ಕೆ ಒಪ್ಪಬಹುದಾದಂತಹ ಇನ್ನೊಂದು ವ್ಯಾಖ್ಯೆಯನ್ನೂ ಕೊಡಬಹುದು. ಆತ್ಮ ಸಾಕ್ಷಾತ್ಕಾರವನ್ನು ಕಡೆಗಣಿಸಿ ಈ ರೀತಿಯ ಸಿದ್ಧಿಗಳ (ಅತೀಂದ್ರಿಯ ಶಕ್ತಿಗಳ) ಬೆನ್ನು ಹತ್ತಿ ಹೊರಟವರಿಗೆ ಈ ಸಿದ್ಧಿಗಳು ಮಿಂಚಿನಷ್ಟು ತಾತ್ಕಾಲಿಕ/ಕ್ಷಣಿಕ ಎಂದು ದೇವಿಯು ಸಾಂಕೇತಿಕವಾಗಿ ತಿಳಿಸಿ ಹೇಳುತ್ತಾಳೆ. ಆದ್ದರಿಂದ ಈ ರೀತಿಯ ಸಿದ್ಧಿಗಳನ್ನು ತಿರಸ್ಕರಿಸಿ, ಆತ್ಮಸಾಕ್ಷಾತ್ಕಾರವೊಂದನ್ನೇ ಗುರಿಯಾಗಿರಿಸಿಕೊಳ್ಳಬೇಕು.
 
          "ಈ ರೀತಿಯ ಸಿದ್ಧಿಗಳು ಉನ್ನತ ಗುರಿಯಾದ ಪರಿಶುದ್ಧವಾದ ಆತ್ಮಜ್ಞಾನ ಮತ್ತು ಮುಕ್ತಿಯನ್ನು ಪಡೆಯುವ ಹಾದಿಯಲ್ಲಿನ ಅಡಚಣೆಗಳು. ಇವುಗಳನ್ನು ದಾರಿಯಲ್ಲಿ ಸಂಧಿಸಿದರೂ ಕೂಡಾ ಅವುಗಳ ಗೊಡವೆಗೆ ಹೋಗದೆ ಅವುಗಳನ್ನು ತಿರಸ್ಕರಿಸಿದರೆ, ಯೋಗಿಯು ಅತ್ಯುನ್ನತವಾದದ್ದನ್ನು ಹೊಂದುತ್ತಾನೆ. ಅವನು ಈ ಸಿದ್ಧಿಗಳನ್ನು ಪಡೆಯುವ ಪ್ರಲೋಭನೆಗಳಿಗೆ ಒಳಗಾದರೆ ಅವನ ಪುರೋಗಮನಕ್ಕೆ ತಡೆಯುಂಟಾಗುತ್ತದೆ" (The Complete Works of Swami Vivekananda, Vol. 1, page 281, 1957 - ಸ್ವಾಮಿ ವಿವೇಕಾನಂದರ ಸಂಪೂರ್ಣ ಕೃತಿಗಳು - ಆಂಗ್ಲ ಮೂಲ, ಸಂಪುಟ ೧, ಪುಟ ೨೮೧, ೧೯೫೭).
 
          "ಈ ರೀತಿಯ ಅತೀಂದ್ರಿಯ ಶಕ್ತಿಗಳು ಅವನ್ನು ಹೊಂದದೇ ಇರುವವರಿಗೆ ಅದ್ಭುತವೆನಿಸಿದರೂ ಕೂಡಾ ಅವು ಕ್ಷಣಿಕ. ಆದ್ದರಿಂದ ಕ್ಷಣಿಕವಾದವುಗಳಿಗೆ ಆಸೆ ಪಡುವುದು ನಿರರ್ಥಕ" (Talks with Sri Ramana Maharshi, Page 578 Ed. 1968 - ಶ್ರೀ ರಮಣ ಮಹರ್ಷಿಗಳೊಡನೆ ಸಂಭಾಷಣೆ, ಪುಟ ೫೭೮, ೧೯೬೮ ಪರಿಷ್ಕೃತ ಆವೃತ್ತಿ)
 
          "ಅವೆಲ್ಲಕ್ಕಿಂತ ಈ ರೀತಿಯ ಶಕ್ತಿಗಳ ಉಪಯೋಗವಾದರೂ ಏನು? ಇವುಗಳನ್ನು ಪಡೆದು ಸಿದ್ಧನಾಗಬಯಸುವವನು ಅವುಗಳನ್ನು ಇನ್ನೊಬ್ಬರ ಮುಂದೆ ಪ್ರದರ್ಶಿಸಿ ಇತರರು ಅವನನ್ನು ಮೆಚ್ಚಿಕೊಳ್ಳಬೇಕೆಂದು ಬಯಸುವುದಕ್ಕಾಗಿಯಲ್ಲವೆ? ಅವನು ಇನ್ನೊಬ್ಬರಿಂದ ಪ್ರಶಂಸೆಯನ್ನು ಬಯಸುತ್ತಾನೆ ಅದು ದೊರೆಯದೇ ಇದ್ದಾಗ ಅವನು ಸಂತುಷ್ಟನಾಗಿರುವುದಿಲ್ಲ. ಆಗ ಅವನಿಗೆ ಇನ್ನಷ್ಟು ಹೆಚ್ಚು ಶಕ್ತಿಗಳು ಇರಬೇಕೆನಿಸುತ್ತದೆ. ಈ ರೀತಿ ಹೆಚ್ಚಿನ ಶಕ್ತಿಗಳನ್ನು ಹೊಂದಿದಾಗ ಅದು ಹೊಟ್ಟೆಕಿಚ್ಚು ಮತ್ತು ದುಃಖಕ್ಕೆ ಈಡುಮಾಡುತ್ತವೆ. ಹೆಚ್ಚಿನ ಸಿದ್ಧಿಯನ್ನು ಪಡೆದ ಸಿದ್ಧನು ಅದಕ್ಕಿಂತ ದೊಡ್ಡ ಸಿದ್ಧನನ್ನು ಭೇಟಿಯಾಗಬಹುದು; ಇದೇ ರೀತಿ ಅವನು ಮುಂದೆ ಹೋಗುತ್ತಾ ಅವೆಲ್ಲವನ್ನೂ ಕಣ್ಣೆವೆಯಿಕ್ಕುವುದರೊಳಗೆ ಏನೂ ಇಲ್ಲದಂತೆ ಬೂಧಿಮಾಡುವ ಮತ್ತೊಬ್ಬ ಸಿದ್ಧನು ದೊರಕಬಹುದು. ಇದು ಅತ್ಯುನ್ನತ ಸಿದ್ಧನ ರೀತಿಯಾಗಿದ್ದು ಅವನು ಬೇರೆ ಯಾರೂ ಅಲ್ಲದೆ ಸ್ವತಃ ಭಗವಂತ ಅಥವಾ ಆತ್ಮನಾಗಿರುತ್ತಾನೆ".
 
          "ಹಾಗಾದರೆ ಯಾವುದು ನಿಜವಾದ ಶಕ್ತಿ? ಅದು ಸಂಪತ್ತನ್ನು ಹೆಚ್ಚಿಸಿಕೊಳ್ಳುವುದೋ ಅಥವಾ ಶಾಂತಿಯನ್ನು ಹೆಚ್ಚಿಸುವುದೋ? ಯಾವುದು ನಮಗೆ ಶಾಂತಿಯನ್ನು ಕೊಡುತ್ತದೆಯೋ ಅದೇ ಅತ್ಯುನ್ನತ ಆದರ್ಶ ಅಥವಾ ಸಿದ್ಧಿ" (ಅದೇ ಉಲ್ಲೇಖ, ಪುಟ ೧೭-೧೮)
 
ಕೆಂಪು ದಾಸವಾಳವ ಅಣಕಿಸುವಂತೆ ಉತ್ಕೃಷ್ಟವಾಗಿಹ - ಕೆಂಪು ವರ್ಣವು ಚಟುವಟಿಕೆಯ ದ್ಯೋತಕವಾಗಿದೆ. ಅದು ರಜೋಗುಣದ ಬಣ್ಣ. ಇಲ್ಲಿ ತ್ರಿಪುರಸುಂದರಿಯನ್ನು ಗಾಢ ಕೆಂಪು ಬಣ್ಣದವಳೆಂದು ಉಲ್ಲೇಖಿಸಿರುವ ಉದ್ದೇಶ ಅವಳು ಯಾವತ್ ಪ್ರಪಂಚದ ಎಲ್ಲಾ ನಿರಂತರ ಚಟುವಟಿಕೆಗಳಿಗೆ ಕಾರಣಳಾಗಿರುವಳು ಎನ್ನುವುದನ್ನು ಸಾಂಕೇತಿಕವಾಗಿ ಸೂಚಿಸುವುದಕ್ಕಾಗಿ. ಅವಳು ಮೂಲಶಕ್ತಿ (ಆದಿ ಶಕ್ತಿ)ಯಾಗಿದ್ದು ನಿರ್ಗುಣ ನಿರಾಕಾರ ಬ್ರಹ್ಮನನ್ನು ಕ್ರಿಯಾಶೀಲಗೊಳಿಸಿ ಈ ಪ್ರಪಂಚದ ಅಸ್ತಿತ್ವವುಂಟಾಗಲು ಕಾರಣಳಾಗಿದ್ದಾಳೆ. ತಾಂತ್ರಿಕ ಸಂಪ್ರದಾಯ ರೀತ್ಯಾ ಜರುಗುವ ದೇವಿಯ ಪೂಜೆಯಲ್ಲಿ ಕಡುಗೆಂಪುಬಣ್ಣದ ದಾಸವಾಳವು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ.
 
ಶುಭ್ರಚಂದ್ರನ ಚೂಡಾಮಣಿತೆರದಿ ಶಿರದಲಿ ಧರಿಸಿಹ - ಚಂದ್ರನು ಅಮೃತತ್ವಕ್ಕೆ ಅಥವಾ ಅಮೃತಕ್ಕೆ ಸಂಕೇತನಾಗಿದ್ದಾನೆ. ಸಹಸ್ರಾರದಲ್ಲಿ ಚಂದ್ರನ ಚಕ್ರವೊಂದಿದ್ದು ಅದರಿಂದ ಜೀವರನ್ನು ಅಮರರಾಗಿಸುವ ಅಮೃತವೆನ್ನುವ ಜೀವರಸವು ಸ್ರವಿಸಲ್ಪಡುತ್ತದೆ. ದೇವಿಯು ತಾನೊಬ್ಬಳೇ ಅಮರಳಾಗಿಲ್ಲ, ಆದರೆ ಅವಳು ಅಮರತ್ವವನ್ನು ಇತರರಿಗೆ ಕರುಣಿಸುವ ಮೂಲಶಕ್ತಿಯೂ ಆಗಿದ್ದಾಳೆ. ಶುಭ್ರ/ಶಾಂತನಾದ ಚಂದ್ರನು ಅವಳ ಈ ವಿಶೇಷವಾದ ಶಕ್ತಿಯನ್ನು ಪ್ರತಿನಿಧಿಸುತ್ತದೆ.
                                                
                                                        *****
ವಿ.ಸೂ.: ಈ ಕಂತಿನ ಶ್ಲೋಕ - ೪ರ ಭಾಗವು ’ತ್ರಿಪುರ ಸುಂದರೀ ಅಷ್ಟಕಮ್"- ಪ್ರಕಟಣೆ(೧೯೮೬): ಅಧ್ಯಕ್ಷರು, ಶ್ರೀ ರಾಮಕೃಷ್ಣ ಮಠ, ಮೈಲಾಪುರ್, ಮದ್ರಾಸ್ - ೬೦೦ ೦೦೪, ಪುಸ್ತಕದ ೨೮ರಿಂದ ೩೫.೫ನೇ ಪುಟದ ಅನುವಾದವಾಗಿದೆ. ಮೂಲ ಇಂಗ್ಲೀಷ್ ಕರ್ತೃ - ಶ್ರೀಯುತ ಎಸ್. ಕಾಮೇಶ್ವರ್, ಮುಂಬಯಿ.
 
ಈ ಸರಣಿಯ ಹಿಂದಿನ ಲೇಖನ "ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೪: ಸ್ತೋತ್ರ - ೩ರ ವ್ಯಾಖ್ಯಾನಕ್ಕೆ ಕೆಳಗಿನ ಕೊಂಡಿಯನ್ನು ನೋಡಿ:
 
 http://sampada.net/blog/%E0%B2%A4%E0%B3%8D%E0%B2%B0%E0%B2%BF%E0%B2%AA%E0%B3%81%E0%B2%B0-%E0%B2%B8%E0%B3%81%E0%B2%82%E0%B2%A6%E0%B2%B0%E0%B3%80-%E0%B2%85%E0%B2%B7%E0%B3%8D%E0%B2%9F%E0%B2%95%E0%B2%AE%E0%B3%8D-%E0%B2%AD%E0%B2%BE%E0%B2%97-%E0%B3%AA-%E0%B2%B8%E0%B3%8D%E0%B2%A4%E0%B3%8B%E0%B2%A4%E0%B3%8D%E0%B2%B0-%E0%B3%A9%E0%B2%B0-%E0%B2%B5%E0%B3%8D%E0%B2%AF%E0%B2%BE%E0%B2%96%E0%B3%8D%E0%B2%AF%E0%B2%BE%E0%B2%A8/20/08/2012/38022
ಚಿತ್ರಕೃಪೆಃ
 ಕಂಚಿ ಕಾಮಾಕ್ಷಿಯ ಚಿತ್ರದ ಕೊಂಡಿ -
https://encrypted-tbn2.google.com/images?q=tbn:ANd9GcTDcmGSMGmofEoc7T6FcDQtzIJmCCh5KgijU_8T7KXdPaXXG0gh6g
ಕೆಂಪು ದಾಸವಾಳ ಚಿತ್ರದ ಕೊಂಡಿ -
 http://www.officialpsds.com/images/thumbs/Big-Red-Hibiscus-psd15315.png

 

Rating
No votes yet

Comments