ಸಣ್ಣಕತೆ : ದೇವರಹಸ್ಯ (ಭಾಗ 1)

ಸಣ್ಣಕತೆ : ದೇವರಹಸ್ಯ (ಭಾಗ 1)

ಸಮುದ್ರದ ತೀರವೆ ಹಾಗೆ ತಟದಲ್ಲಿ ಕುಳಿತರೆ ಸಾಕು ಮನಸು ಖಾಲಿಯಾಗಿಬಿಡುತ್ತದೆ. ಸಮುದ್ರ ತೀರಗಳಲ್ಲಿ ಒಂಟಿಯಾಗಿ ಕುಳಿತರಂತು ಸಮಯ ಹೆಚ್ಚುಕಡಿಮೆ ಸ್ಥಗಿತವಾಗಿಬಿಡುತ್ತದೆ ಅನ್ನಿಸುತ್ತೆ. ನಾನಲ್ಲಿ ಕುಳಿತು ಎಷ್ಟು ಹೊತ್ತಾಯಿತೊ ಅಂದಾಜು ಸಿಗಲಿಲ್ಲ. ಸುತ್ತಲು ಕತ್ತಲು ಆವರಿಸಿ ಅತ್ತ ಇತ್ತ ಓಡಾಡುತ್ತಿದ್ದ ಜನವೆಲ್ಲ ಕ್ರಮೇಣ ಕಡಿಮೆಯಾಗುತ್ತ , ನಾನು ಗಮನಿಸುವ ಹೊತ್ತಿಗೆ ನಾನು ಒಂಟಿಯಾಗಿ ಕುಳಿತಿದ್ದೆ. ಸಮಯ ಎಷ್ಟಿರಬಹುದು ಎಂಬ ಯೋಚನೆ ಬಂದಿತು, ನನ್ನದು ಅದೊಂದು ಕೆಟ್ಟ ಅಭ್ಯಾಸ ಕೆಲವೊಮ್ಮೆ ಹೊರಗೆ ಅರಾಮವಾಗಿ ಹೋಗಬೇಕೆನಿಸಿದಾಗ ವಾಚ್ ಕಟ್ಟಲ್ಲ ಹಾಗು ಮೊಬೈಲ್ ಸಹ ಜೊತೆಗೆ ತೆಗೆದುಕೊಂಡು ಹೋಗಲ್ಲ. ಸಂಜೆಯು ಹಾಗೆ ಆಯಿತು, ಹೋಟೆಲಿನ ರೂಮಿನಿಂದ ಸುಮ್ಮನೆ ಕಾಲಾಡಿಸಿ ಬರುವೆನೆಂದು ಹೊರಗೆ ಹೊರಟಾಗ ಬೆಳಗಿನಿಂದ ಸುತ್ತಿ ಸುಸ್ತಾಗಿದ್ದ ಗೆಳೆಯರು, ’ನೀವು ಬೇಕಿದ್ದರೆ ಹೋಗಿ ಬನ್ನಿ ನಮಗೆ ಆಗಲ್ಲ’ ಅಂದುಬಿಟ್ಟರು. ಬೆಂಗಳೂರಿನಿಂದ ನಾಲ್ವರು ಗೆಳೆಯರು ಬಂದು ತಮಿಳುನಾಡಿನ ಮಹಾಬಲಿಪುರಂನ ಹೋಟೆಲ್ ನಲ್ಲಿ ರೂಮನ್ನು ಮಾಡಿದ್ದೆವು. ಒಂದು ಬಾಡಿಗೆ ಟ್ಯಾಕ್ಸಿ ಹಿಡಿದು ಬೆಳಗಿನಿಂದ ಕಂಚಿ, ಚೆನೈ ಎಂದು ಸುತ್ತಿ ಸಂಜೆ ಬಂದ ನಂತರ ಅವರೆಲ್ಲ ರೂಮಿನಲ್ಲಿ ವಿರಮಿಸಿದರೆ ನನಗೆ ಅದೇಕೊ ಸಮುದ್ರದಡದಲ್ಲಿ ಸ್ವಲ್ಪ ಸಮಯ ಕಳೆಯಬೇಕೆಂದು ಅನ್ನಿಸಿ ಹೊರಟಿದ್ದೆ. ನಡಿಗೆಯಲ್ಲಿಯೆ ಸಮುದ್ರದಡ ಸೇರಬಹುದಾದಷ್ಟು ದೂರದಲ್ಲಿದ್ದೆವು. ಮಹಾಬಲಿಪುರಂ ನ ಜನಬರಿತ ಸಮುದ್ರ ದಡ. ಅಲ್ಲಿಯ ಸಮುದ್ರದ ರೌದ್ರತೆ ನೋಡುವದರಲ್ಲಿ ಒಂದು ಆನಂದ. ನಾನು ಜನರಿಂದ ದೂರವಾದ ಸ್ಥಳ ಅರಸುತ್ತ ಸುಮಾರು ಒಂದು ಕಿಲೋಮೀಟರಿಗಿಂತ ಜಾಸ್ತಿ ನಡೆದೆನೇನೊ, ಅಸ್ತಮಿಸುವ ಸೂರ್ಯನ ಬೆಳಕಿನ ಸೊಭಗಿನಲ್ಲಿ ಸಮುದ್ರವನ್ನು ದಿಟ್ಟಿಸುತ್ತ ಕುಳಿತು ಬಿಟ್ಟೆ. ಅದೆಷ್ಟು ಸಮಯವಾಗಿತ್ತೊ ತಿಳಿಯಲಿಲ್ಲ. ನಾನು ಎಚ್ಚೆತ್ತಾಗ ಸುಮಾರು ಕತ್ತಲೆ ಆಗಿತ್ತು. ‘ಬಹುಷಃ ತುಂಬಾ ಸಮಯವಾಯಿತು. ಹೋಟೆಲಿನಲ್ಲಿ ಗೆಳೆಯರು ಕಾಯುತ್ತ ಇರುತ್ತಾರೆ ‘ ಅನ್ನುವ ಪ್ರಜ್ಞೆಯ ಜೊತೆ ಎದ್ದು ನಿಂತೆ ವಾಪಾಸು ಹೋಗೋಣ ಎಂದು. ಅದೇಕೊ ಎಂದು ಇರದ ಗಲಿಬಿಲಿಯೊಂದು ಕಾಡಿತು. ಆದುದ್ದು ಇಷ್ಟೆ. ನಾನೀಗ ಯಾವ ದಿಕ್ಕಿಗೆ ನಡೆಯಬೇಕೆಂದು ತಿಳಿಯಲಿಲ್ಲ. ಸುತ್ತಲು ಮುತ್ತಿದ್ದ ಕತ್ತಲು. ಎದುರಿಗೆ ವಿಶಾಲ ಸಾಗರ. ನಕ್ಷತ್ರದ ಬೆಳಕಲ್ಲಿ ದಡಕ್ಕೆ ಬಂದು ಅಪ್ಪಳಿಸುತ್ತಿರುವ ಅಲೆಗಳ ದೃಷ್ಯ ಹಾಗು ಶಬ್ದ. ಯೋಚಿಸಿದೆ ನಾನು ಯಾವ ದಿಕ್ಕಿನಿಂದ ಇಲ್ಲಿ ಬಂದು ಕುಳಿತೆ ಎಂದು. ಅದೇಕೊ ಹೊಳೆಯಲೆ ಇಲ್ಲ. ಎದುರು ಸಾಗರವಿರುವದರಿಂದ ಆ ದಿಕ್ಕಂತು ಅಲ್ಲ . ಉಳಿದ ಮೂರು ದಿಕ್ಕಿನಲ್ಲಿ ನಾನು ಯಾವ ಕಡೆ ಸಾಗಲಿ. ಕಡೆಯ ಪಕ್ಷ ದೂರದಲ್ಲಿ ದೀಪದ ಬೆಳಕೇನಾದರು ಕಂಡೀತೊ ಎಂದು ಕತ್ತಲಿನಲ್ಲಿ ಕಣ್ಣರಳಿ ದೃಷ್ಟಿಸಿದೆ. ಊಹು ! ಯಾವ ಪ್ರಯೋಜನವು ಕಾಣುತ್ತಿಲ್ಲ. ಅದೇನು ಅಲ್ಲಿ ವಿಧ್ಯುತ್ ಕೈಕೊಟ್ಟೊತ್ತೊ ಏನೊ, ಮತ್ತೆ ಅದೇನೊ ನಿರ್ಜನ ಯಾರನ್ನು ಕೇಳುವ ಹಾಗು ಇರಲಿಲ್ಲ. ಏನು ಮಾಡುವುದು ಎಂದು ಹೊಳೆಯಲಿಲ್ಲ. ಸರಿ ಹೇಗೆ ಯಾವ ದಿಕ್ಕು ಹಿಡಿದು ಹೋದರು ಊರಂತು ಸಿಕ್ಕೆ ಸಿಗುತ್ತದೆ, ನಂತರ ಹೋಟೆಲಿನ ದಾರಿ ಹಿಡಿದರಾಯಿತು ಎಂದು , ನಾನು ನಿಂತಿದ್ದ ದಿಕ್ಕಿನ ಬಲಕ್ಕೆ ನಡೆಯಲು ಪ್ರಾರಂಬಿಸಿದೆ. ಕಪ್ಪು ಕತ್ತಲಾದರು ನಕ್ಷತ್ರದ ಬೆಳಕು ಸಾಕಷ್ಟು ಇತ್ತು. ಅದೇಕೊ ಚಂದ್ರ ಸುಳಿವಿಲ್ಲ, ಅಮಾವಾಸ್ಯೆಯೊ ಅಥವ ಅವನು ಈದಿನ ಹುಟ್ಟುವ ಸಮಯ ಎಷ್ಟು ಗಂಟೆಗೆ ತಿಳಿದಿಲ್ಲ . ಅದೇಕೊ ಮನಸ್ಸು ನೆನೆಸಿತು, ಹಿಂದೆಲ್ಲ, ಉತ್ತರ ದಿಕ್ಕಿನಲ್ಲಿ ಇರುವ ನಕ್ಷತ್ರ ಪೋಲ್ ಸ್ಟಾರ್ ಅಂದರೆ ದೃವನಕ್ಷತ್ರದ ದಿಕ್ಕನ್ನು ಹಿಡಿದು ನಾವಿಕರು ತಮ್ಮ ದಾರಿಯ ದಿಕ್ಕನ್ನು ನಿರ್ದರಿಸುತ್ತ ಇದ್ದರಂತೆ ಈಗ ನನಗೆ ಅದು ಸಹ ನೆರವಿಗೆ ಬಾರದು ಅನ್ನಿಸಿತು. ಮೊದಲಾಗಿ ನಾನು ನೆಲದ ಮೇಲೆಯೆ ಇದ್ದೆ. ಎರಡನೆಯದು ಒಮ್ಮೆ ನನಗೆ ಆ ದೃವನಕ್ಷತ್ರ ಕಾಣಿಸಿದರು ಸಹ ನನಗೆ ಅದು ಸಹಾಯವೇನು ಮಾಡಲಾರದು , ಏಕೆಂದರೆ ಮೂಲಭೂತವಾಗಿ ನಾನು ಎತ್ತ ಸಾಗಬೇಕೆಂದೆ ನನಗೆ ತಿಳಿದಿಲ್ಲ. ನಡೆಯುವುದು ಅಷ್ಟೇನು ಕಷ್ಟ ಅನ್ನಿಸುತ್ತಿರಲಿಲ್ಲ. ಸಮತಟ್ಟಾದ ಮರಳಿನ ನೆಲ, ಕತ್ತಲಿದ್ದರು ಸಹ ಸರಾಗವಾಗಿಯೆ ನಡೆಯುತ್ತಿದ್ದೆ. ಎಷ್ಟೋ ಹೊತ್ತು ನಡೆದ ಮೇಲೆಯೆ ಅನ್ನಿಸಿದ್ದು , ’ನಾನು ತಪ್ಪುದಾರಿಯಲ್ಲಿ ನಡೆಯುತ್ತಿದ್ದೇನೆ’ ಎಂದು, ನಾನು ಬರುವಾಗ ಕಾಣಿಸಿದ ಯಾವುದೆ ಗುರಿತಿನ ಕುರುಹುಗಲಾಗಲಿ, ಅಥವ ಅಂಗಡಿ ಸಾಲುಗಳಾಗಲಿ ಕಾಣಲಿಲ್ಲ. ಎಂತದೊ ಹೆಚ್ಚು ಕಡಿಮೆಯಂತು ಆಗಿತ್ತು. ಅಲ್ಲದೆ ನಾನು ಸಾಕಷ್ಟು ಸಮಯ ನಡೆದಿದ್ದೆ. ಹೀಗೆ ಎಷ್ಟು ಸಮಯ ನಡೆಯುವುದು ಅರ್ಥವಾಗುತ್ತಿಲ್ಲ, ಒಬ್ಬರಾದರು ಮನುಷ್ಯರ ಕುರುಹಾಗಲಿ, ಮನೆ ಅಂಗಡಿಯ ಯಾವುದೆ ಕಟ್ಟಡಗಳಾಗಲಿ ಕಾಣುತ್ತಿಲ್ಲ. ಅಥವ ನಡೆಯುವುದು ನಿಲ್ಲಿಸಿ ನಾನು ಬಂದ ದಿಕ್ಕಿನಲ್ಲಿಯೆ ಪುನಃ ವಾಪಸ್ಸು ನಡೆಯುವುದು ಸರಿ ಎಂದು ಅನ್ನಿಸಿತು. ಆದರೆ ಮತ್ತೊಂದು ಅನುಮಾನವು ಕಾಡಿತು, ಈಗ ನಾನು ಎಷ್ಟು ಕಾಲ ನಡೆದಿದ್ದೆ ಎಂದು ಅಂದಾಜು ತಪ್ಪಿತ್ತು, ಪುನಃ ನಡೆದರು ನಾನು ಕುಳಿತ್ತಿದ್ದ ಜಾಗ ಸಿಗುವುದು ಅದನ್ನು ನಾನು ಗುರುತಿಸುವುದು ದುಸ್ತರ ಎಂದು ಅನ್ನಿಸತೊಡಗಿತು. ಕತ್ತಲಿನಲ್ಲಿ ಸಮುದ್ರದ ಅಲೆಗಳ ಶಬ್ದ ಹೊರತುಪಡಿಸಿದರೆ ಯಾವ ಶಬ್ದವು ಇಲ್ಲ. ನಕ್ಷತ್ರಗಳ ಮಿಣುಕು ಬೆಳಕಿನಲ್ಲಿ ಸಮುದ್ರದ ಹೊರತಾಗಿ ಮತ್ತೇನು ಕಾಣುತ್ತಿಲ್ಲ . ಬಲಬಾಗದಲ್ಲಿ ಎತ್ತರಕ್ಕೆ ಹತ್ತಿ ಹೋಗಬಹುದಾದ ದಾರಿಯೊಂದು ಕಾಣಿಸಿತು. ನುಣುಪಾದ ಕಲ್ಲಿನಿಂದ ಕಟ್ಟಿದ ಕಾಪೋಂಡಿನ ದೊಡ್ಡ ಗೋಡೆಯ ನಡುವೆ ಒಳ ಹೋಗಲು ಗೇಟನಂತಹ ಬಾಗಿಲು ಒಂದು ಕಾಣಿಸಿತು. ಸದ್ಯ ಎಂತದೊ ಒಂದು ಕಾಣಿಸಿತಲ್ಲ. ಕಡೆ ಪಕ್ಷ ಒಳಗೆ ಯಾರಾದರು ಮನುಷ್ಯರು ಎಂದು ಸಿಕ್ಕರೆ ಅವರ ಜೊತೆ ಮಾತನಾಡಿ ಮಹಾಬಲಿಪುರಂನ ಹೋಟೆಲಿನ ದಾರಿ ಹಿಡಿಯಬಹುದು. ಒಳಹೋದಾಗ ಅಕ್ಕ ಪಕ್ಕ ಬೆಳೆದಿರುವ ಹೂವಿನ ಹಣ್ಣಿನ ಗಿಡಗಳ ನಡುವೆ ಇರುವ ಸಣ್ಣ ದಾರಿಯಲ್ಲಿ ನಡೆಯುತ್ತಿದ್ದೆ. ಬಹುಷ ಬಂಗಲೆಯ ತರದ ಮನೆ ಇರಬಹುದು ದೊಡ್ಡದಾದ ಕಾಂಪೋಡ್ . ಅಲ್ಲದೆ ಇದ್ದಕ್ಕಿದಂತೆ ಕಾಣಿಸಿದ ಅರ್ಧ ಚಂದ್ರ ನನ್ನಲ್ಲಿ ಮತ್ತೆ ಗಲಿಬಿಲಿ ಮೂಡಿಸಿದ. ಇಲ್ಲಿಯವರೆಗು ಚಂದ್ರ ಮೋಡಗಳ ಮರೆಯಲ್ಲಿದ್ದನ ಅಥವ ಈಗ ಹುಟ್ಟಿ ಬರುತ್ತಿದ್ದಾನ ಅರ್ಥವಾಗಲಿಲ್ಲ. ಭೂಮಿ ಮತ್ತು ಗಗನ ಸೇರುವ ದಿಗಂತದ ಅಂಚಿನಿಂದ ಸುಮಾರು ಮೇಲೆ ಅರ್ಧ ಚಂದ್ರನಿದ್ದ ಮತ್ತು ಆ ಬೆಳಕಿನಲ್ಲಿ ನಾನು ನಿರಾಂತಕವಾಗಿ ನಡೆದೆ. ಅದೇನೊ ಆ ಆವರಣದ ಒಳಗೆ ಸಹ ವಿಧ್ಯುತ್ ಇರುವುದು ಕಾಣಲಿಲ್ಲ. ನನಗೆ ಮೊದಲಿಗೆ ಅದೇನು ಮನೆಯೊ, ಅಥವ ಹೋಟೆಲ್ ಆವರಣವೊ , ರೆಸಾರ್ಟೋ ತಿಳಿಯಲಿಲ್ಲ. ಒಳಗೆ ಕಲ್ಲು ಹಾಸಿದ ಕಾಲುದಾರಿಯಲ್ಲಿ ಸ್ವಲ್ಪ ಕಾಲ ನಡೆದಾಗ ಎದುರಿಗೆ ಬಿಳಿಯ ಅಮೃತ ಶಿಲೆಯಲ್ಲಿ ಕಟ್ಟಿರಬಹುದು ಎನ್ನುವಂತ ಕಟ್ಟಡ ಒಂದು ಕಾಣಿಸಿತು. ನಕ್ಷತ್ರ ಚಂದ್ರನ ಬೆಳಕಲ್ಲಿ ಹಾಗೆ ಕಾಣುತ್ತಿತ್ತು ಹೊರತಾಗಿ ಅದೇನು ಅಮೃತ ಶಿಲೆಯ ಕಟ್ಟಡವಲ್ಲ ಅನ್ನಿಸುತ್ತೆ. ನನಗೆ ಬೇರೆ ದಾರಿ ಇರಲಿಲ್ಲ, ಒಳಗೆ ಹೋಗಿ ಯಾರಾದರು ಸಿಗುತ್ತಾರೆ ಎಂದು ವಿಚಾರಿಸಲೆ ಬೇಕಿತ್ತು. ನನ್ನ ಸಹನೆ ಮೀರುತ್ತಿತ್ತು, ಕಡೆಗೆ ಮನುಷ್ಯರಲ್ಲದೆ ಹೋದರು ಯಾವುದಾದರು ದೆವ್ವವೊ ಪ್ರಾಣಿಯೊ ಮತ್ಯಾರಾದರು ಸರಿಯೆ ನನಗೆ ಮಾತನಾಡಿಸಲು ಸಿಕ್ಕರ ಸಾಕಿತ್ತು "ತಾವು ಯಾರು?" ಎಂಬ ಪ್ರಶ್ನೆ ನನ್ನ ಕಿವಿಗೆ ಇದ್ದಕ್ಕಿದ್ದಂತೆ ಕೇಳಿಸಿತು. ಪಕ್ಕಕ್ಕೆ ತಿರುಗಿ ನೋಡಿದೆ. ಕಾಲುದಾರಿಯ ಪಕ್ಕ ಅಲಂಕಾರಕ್ಕೆಂದು ಬೆಳೆಸಿದ್ದ ಮರದ ಕೆಳಗೆ ವ್ಯಕ್ತಿಯೊಬ್ಬರು ನಿಂತಿದ್ದರು. ಸರಿಸುಮಾರು ನನಗಿಂತ ಅರ್ದ ಅಡಿ ಎತ್ತರದ ವ್ಯಕ್ತಿತ್ವ. ಗಿಡದ ನೆರಳು ಬಿದ್ದ ಪರಿಣಾಮ ಮುಖ ಅಸ್ವಷ್ಟವಾಗಿತ್ತು. ಯಾರೆಂದು ನನಗಂತು ತಿಳಿಯಲಿಲ್ಲ. ಆದರು ಹೇಳಿದೆ "ಕ್ಷಮಿಸಿ, ನಾನು ದಾರಿ ತಪ್ಪಿಸಿಕೊಂಡಿದ್ದೇನೆ, ಸಮುದ್ರ ದಡಕ್ಕೆ ಎಂದು ಬಂದವನು , ಕತ್ತಲಾಗುವವರೆಗು ಕುಳಿತುಬಿಟ್ಟೆ, ಈಗ ಮಹಾಬಲಿಪುರಂ ಗೆ ಹೋಗಬೇಕಿದೆ, ಸಹಾಯ ಮಾಡುತ್ತೀರ" ನಾನು ಕನ್ನಡದಲ್ಲಿಯೆ ಕೇಳಿದ್ದೆ. ಒಂದು ಕ್ಷಣ ಆ ಕಡೆಯಿಂದ ಎಂತದು ಉತ್ತರವಿಲ್ಲ. ನಂತರ ಎದುರಿಗಿದ್ದ ಕಟ್ಟಡದತ್ತ ಕೈತೋರಿಸುತ್ತ ನುಡಿದ ಅವ "ಒಳಗೆ ಹೋಗಿ, ಅಲ್ಲಿರುವವರನ್ನು ಕೇಳಿ" ಶುದ್ದ ಕನ್ನಡದಲ್ಲಿ ಉತ್ತರ ಬಂದಿದ್ದು ನನಗಂತು ಜೀವ ತಣ್ಣಗಾಯ್ತು ಅನ್ನಿಸಿತು. ಕಟ್ಟಡದ ಒಳಗೆ ಹೊರಟೆ. ವಿಶಾಲವಾದ ಮುಂಬಾಗಿಲು. ಹೆಜ್ಜೆಯನ್ನು ಒಳಗೆ ಇಡುವಾಗಲೆ , ಮನಸಿಗೆ ನಾಟಿದ್ದು ಅದರ ವೈಶಾಲ್ಯ. ಅತಿ ದೊಡ್ಡದಾದ ಹಜಾರವದು. ಅತಿ ಎತ್ತರದಲ್ಲಿರುವ ಮಾಡು. ಸಾಮಾನ್ಯ ಮನೆಯಲ್ಲಿ ಮಾಡು ಎಂಟರಿಂದ ಹತ್ತು ಅಡಿ ಎತ್ತರದಲ್ಲಿರುತ್ತದೆ ಇಲ್ಲಿ ನನಗೆ ಅದನ್ನು ಸರಿಯಾಗಿ ಕಲ್ಪಿಸಿಕೊಳ್ಳಲಾಗುತ್ತಿಲ್ಲ. ಮಧ್ಯದಲ್ಲಿನ ನಾಲಕ್ಕು ಕಂಬಗಳು ಮಲೆನಾಡಿನ ತೊಟ್ಟಿ ಮನೆಯನ್ನು ನೆನಪಿಸಿದರು ಅದಕ್ಕೆ ಈ ಮನೆಯನ್ನು ಹೋಲಿಸುವಂತಿಲ್ಲ. ಹೊರಗಿನಂತೆ ಒಳಗು ಸಹ ಬಿಳಿಯ ಕಲ್ಲಿನಿಂದ ಕಟ್ಟಲ್ಪಟ್ಟಿದ್ದು. ಬಿಳಿಯ ಗೋಡೆ, ಹಾಗು ಬಿಳಿಯ ಶಿಲೆಯ ನೆಲ ಒಂದು ಅಪರೂಪದ ವಾಸ್ತುವನ್ನು ಎತ್ತಿ ತೋರಿಸುತ್ತಿತ್ತು. ಇರುವುದು ಸ್ವಲ್ಪವೆ ಬೆಳಕಾದರು, ಪ್ರಜ್ವಾಲ್ಯಮಾನವಾಗಿ ತಂಪಾಗಿ ಒಳಗೆಲ್ಲ ಹರಡಿದಂತಿತ್ತು. ಒಳಗೆ ಬಂದ ನಾನು ಯಾವ ಕಡೆ ಹೋಗಬೇಕು, ಯಾರನ್ನು ಕಾಣಬೇಕೆಂಬ ಯೋಚನೆಯಲ್ಲಿ ನಿಂತೆ. "ಹೀಗೆ ಬನ್ನಿ, ತಾವು ಹೋಗಬೇಕಾದ ದಾರಿ ತಪ್ಪಿಸಿಕೊಂಡಿದ್ದೀರಂತೆ" ಗಂಭೀರವಾದ ಸ್ವರ ಕೇಳಿಸಿತು. ದ್ವನಿ ಬಂದತ್ತ ತಿರುಗಿ ನೋಡಿದೆ. ಸುಮಾರು ಆರು ಅಡಿಯಷ್ಟು ಎತ್ತರವಿರಬಹುದಾದ ವ್ಯಕ್ತಿತ್ವ, ತಿಳಿನೀಲಿ ಬಣ್ಣದ ಹೊಸವಿನ್ಯಾಸದಲ್ಲಿ ಹೊಲೆಸಿದ ಉಡುಪಿನಲ್ಲಿ , ಮುಖದಲ್ಲಿ ಆಕರ್ಷಕ ನಗುವಿನೊಡನೆ ನಿಂತಿದ್ದ. ಒಂದು ಕ್ಷಣ ನನಗೆ ಅಚ್ಚರಿಯಾಯಿತು. ನಾನು ಹೊರಗೆ ಆ ವ್ಯಕ್ತಿಗೆ ಹೇಳಿದ್ದನ್ನು, ಈತನಿಗೆ ಯಾರು ಹೇಳಿದರು ? . ಬಹುಷಃ ಹೊರಗಿರುವಾತ ಇವನಿಗೆ ಮೊಬೈಲ್ ಮೂಲಕ ತಿಳಿಸಿರಬಹುದು. ಅಥವ ಇವನೆ ಕಿಟಕಿಯ ಪಕ್ಕವೊ ಎಲ್ಲೊ ನಿಂತು ಕಿವಿಗೆ ಬಿದ್ದಿರಬಹುದು ಅನ್ನಿಸಿತು. "ನಿಮ್ಮ ಮಾತು ನಿಜ, ನಾನು ಮಹಾಬಲಿಪುರಂಗೆ ಹೋಗಬೇಕಾದವನು. ಸಮುದ್ರದಡದಲ್ಲಿ ನಡೆಯುತ್ತ ದೂರಬಂದು ಬಿಟ್ಟಿದ್ದೀನಿ ಅನ್ನಿಸುತ್ತಿದೆ. ನನಗೆ ಹೇಗೆ ಹೋಗಬೇಕೆಂದು ತಿಳಿಯುತ್ತಿಲ್ಲ. ಸಹಾಯ ಮಾಡಬಲ್ಲಿರ?" ಎಂದೆ. "ಆಗಲಿ ಬಿಡಿ ಅದಕ್ಕೇನು, ನಿಮಗೆ ನಾನು ಏನು ಸಹಾಯ ಮಾಡಬಲ್ಲೆ ಎಂದು ಯೋಚಿಸೋಣ. ಈಗ ಒಳಗೆ ಬನ್ನಿ " ಎನ್ನುತ್ತ ಹೊರಟ. ಇದೇನು ಮಹಾಬಲಿಪುರಂಗೆ ದಾರಿ ಕೇಳಿದರೆ ಏನು ಸಹಾಯ ಮಾಡಬಲ್ಲೆ ಎಂದು ಯೋಚಿಸೋಣ ಎನ್ನುತ್ತಿದ್ದಾರೆ ಈತ. ಬಹುಷಃ ನೋಡಲು ತುಂಬಾ ಒಳ್ಳೆಯವರಂತೆ ಕಾಣುತ್ತಿದ್ದಾರೆ. ತೀರ ದಾರಾಳಿಯಾದರೆ ಅವರೆ ತಮ್ಮ ವಾಹನದಲ್ಲಿ ನನ್ನನ್ನು ಬಿಟ್ಟು ಬರುವ ಏರ್ಪಾಡು ಮಾಡಬಹುದು. ಅಥವ ಕಡೆಯ ಪಕ್ಷ ಅಲ್ಲಿಗೆ ತಲುಪುವುದು ಹೇಗೆಂದು ತಿಳಿಸಬಹುದು. ಅನ್ನಿಸಿತು. ಅವರ ಹಿಂದೆ ನಡೆದೆ. ಅದು ಒಳಗಿನ ಒಂದು ಕೋಣೆ. ಅದೆ ಬಿಳಿಯದೆ ಕಲ್ಲುಗಳನ್ನು ಬಳಸಿದ್ದಾರೆ, ಅತ್ಯಂತ ಆಕರ್ಷಕ ವಿನ್ಯಾಸದ ಕೋಣೆ. ಮಧ್ಯದಲ್ಲಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ಆಸನಗಳು. ನನಗೆ ಒಂದು ಸುಖಾಸನ ತೋರುತ್ತ, ಅವರು ನಡೆದು ಒಂದು ಆಸನದಲ್ಲಿ ಕುಳಿತರು. ಅವರ ಎದುರಿನ ಮೇಜಿನ ಮೇಲೆ ಅದೆಂತದೊ ದೊಡ್ಡ ಗಾತ್ರದ ಪುಸ್ತಕ. ಅವರ ಹಿಂಬಾಗದಲ್ಲಿನ ಮರದಹಲಗೆಯಿಂದ ಮಾಡಿದ, ಆಕರ್ಷಕ ಪುಸ್ತಕಗಳನ್ನು ಇಡುವ ಸ್ಥಳ. ಆದರೆ ಅದರಲ್ಲಿ ಕೇವಲ ನಾಲಕ್ಕು ಅವರ ಎದುರಿಗೆ ಇರುವಂತದೆ ಪುಸ್ತಕಗಳನ್ನು ಜೋಡಿಸಿ ಇಡಲಾಗಿತ್ತು. "ಹೇಳಿ ನಿಮಗೆ ಇಲ್ಲಿಗೆ ಬರಲು ಹೇಗೆ ಸಾದ್ಯವಾಯಿತು" ನಗುತ್ತ ಕೇಳಿದರು. ನನಗೆ ಆಶ್ಚರ್ಯ ಆದರು ನುಡಿದೆ "ಹೇಳಿದೆನಲ್ಲ ಮಹಾಬಲಿಪುರಂಗೆ ನಾವು ನಾಲ್ವರು ಗೆಳೆಯರು ಬಂದಿದ್ದೆವು. ಸಂಜೆ ನಾನೊಬ್ಬನೆ ಸಮುದ್ರದಡಕ್ಕೆ ಹೊರಟೆ. ಸ್ವಲ್ಪ ಏಕಾಂತ ಅರಸುತ್ತ, ನಡೆಯುತ್ತ ದೂರ ಬಂದು ಒಂಟಿಯಾಗಿ ಕುಳಿತೆ. ಕತ್ತಲು ಕವಿದಿದ್ದನ್ನು ಗಮನಿಸಲಿಲ್ಲ. ನಂತರ ಹಿಂದಿರುಗಿ ಹೋಗಲು ಎಂತದೊ ಗೊಂದಲ ಕಾಡಿತು. ದಾರಿ ತಪ್ಪಿಸಿಕೊಂಡೆ ಅನ್ನಿಸುತ್ತೆ" "ದಾರಿ ತಪ್ಪಿಸಿಕೊಂಡಿರಿ ಆದರೆ ತಪ್ಪು ದಾರಿಯಲ್ಲೇನು ಬರಲಿಲ್ಲ" ಎನ್ನುತ್ತ ಅವರು ನಕ್ಕರು. ನನ್ನ ಮನಸಿಗೆ ಏನಾದರು ಕುಡಿಯಬಹುದೆ ಎಂದು ಅನ್ನಿಸಿತು,ಅದೇನೊ ಸ್ವಲ್ಪ ಸಂಕೋಚ ಬಿಟ್ಟು ಕೇಳಿದೆ "ಇಲ್ಲಿ ಕುಡಿಯಲು ಏನಾದರು ಸಿಕ್ಕ ಬಹುದೆ ಕಾಫಿ ಟಿ ಏನಾದರು" ಎಂದೆ. ಅವರು ಸ್ವಲ್ಪ ಮೌನವಾಗಿದ್ದರು. "ಅವೆಲ್ಲ ಇಲ್ಲಿ ಸಿಕ್ಕುವುದು ಸ್ವಲ್ಪ ಅನುಮಾನವೆ, ಆದರು ಸ್ವಲ್ಪ ಯೋಚಿಸಿ ಹೇಳಿ, ನಿಮಗೆ ನಿಜವಾಗಿಯು ಕಾಫಿ ಅಥವ ಟಿ ಕುಡಿಯಬೇಕು ಅನ್ನಿಸುತ್ತಿದೆಯ, ದೇಹಕ್ಕೆ ಅದರ ಅಗತ್ಯವಿದೆಯ?" ನನಗೆ ಆಶ್ಚರ್ಯದ ಜೊತೆಗೆ ಸ್ವಲ್ಪ ಮುಖಭಂಗವಾಗಿತ್ತು. ಆದರು ಯೋಚಿಸಿದೆ ಅವರು ಹೇಳಿದಂತೆ, ನನಗೆ ಬಾಯರಿಕೆಯಾಗಲಿ, ಅಥವ ಏನಾದರು ಕುಡಿಯುವ ಅಗತ್ಯವಾಗಲಿ ದೇಹಕ್ಕೆ ಇದೆ ಅನ್ನಿಸಲಿಲ್ಲ. ಕಾಫಿ ಕುಡಿದು ತುಂಬಾ ಹೊತ್ತಾಯಿತು ಎಂದು ಮನಸಿಗೆ ಅನ್ನಿಸಿತ್ತು ಅಷ್ಟೆ. ಅದೇನೊ ದೇಹ ಹಗುರವಾಗಿದ್ದು ಚಟುವಟಿಕೆಯಾಗಿತ್ತು. ಬಾಯರಿಕೆಯು ಇರಲಿಲ್ಲ. ನನಗೆ ಅನ್ನಿಸಿತು ಅವನು ಹೇಳಿದ್ದರಲ್ಲಿ ಸತ್ಯವಿತ್ತು, ನನಗೆ ಯಾವುದೆ ಅಹಾರದ ಅಥವ ಪೇಯದ ಅವಶ್ಯಕತೆ ಸದ್ಯಕ್ಕೆ ಇರದೆ ನನ್ನ ಕೋರಿಕೆ ಕೇವಲ ಮಾನಸಿಕ ಅಗತ್ಯವಾಗಿತ್ತು. ನಿದಾನಕ್ಕೆ ಹೇಳಿದೆ "ನಿಜ ಅಗತ್ಯವಿಲ್ಲ ಅನ್ನಿಸುತ್ತೆ, ಅದೇನೊ ಕಾಫಿ ಕುಡಿದು ತುಂಬಾ ಸಮಯವಾಗಿದ್ದು ಹಾಗೆ ಬಯಕೆಯಾಯಿತು ಅನ್ನಿಸುತ್ತೆ ಬಿಡಿ" ಅವನು ನಕ್ಕ. "ನಿಜಕ್ಕು ಮನುಷ್ಯನ ಸಮಸ್ಯೆ ಇದೆ ನೋಡಿ. ಅವನಿಗೆ ಅಗತ್ಯವಿದೆಯೊ ಇಲ್ಲವೊ ಆದರೆ ಮನಸಿಗೆ ಬೇಕೆನಿಸಿದ ಕಾರಣಕ್ಕೆ ಕುಡಿಯುತ್ತಾನೆ ಅಥವ ತಿನ್ನುತ್ತಾನೆ. ಇದನ್ನೆಲ್ಲ ಕಾಣುವಾಗ ನಾವು ಭೂಮಿಯ ಜೀವಿಗಳನ್ನು ಸ್ಥೂಲವಾಗಿ ಎರಡು ಬಾಗವಾಗಿ ವಿಂಗಡಿಸಬಹುದು ಅನ್ನಿಸುತ್ತೆ. ದೈಹಿಕ ಅಗತ್ಯಕ್ಕೆ ಹೊಂದಿಕೊಂಡ ಚಟುವಟಿಕೆ , ಮತ್ತು ಮನಸಿನ ಅಗತ್ಯಕ್ಕೆ ಹೊಂದಿಕೊಂಡ ಚಟುವಟಿಕೆಯ ಪ್ರಾಣಿಗಳು ಎಂದು." ನನಗೆ ಕುತೂಹಲ ಎನಿಸಿತು "ಸ್ವಲ್ಪ ಬಿಡಿಸಿ ಹೇಳಬಹುದಾ?" ಎಂದೆ. ಅವನು ನಗುತ್ತ "ಅದಕ್ಕೇನು, ನಾನು ಹೇಳಿದ್ದು ಹೀಗೆ ನೋಡಿ, ಮನುಷ್ಯನನ್ನು ಹೊರತುಪಡಿಸಿ ಬೇರೆ ಪ್ರಾಣಿಗಳ ಚಟುವಟಿಕೆಗಳೆಲ್ಲ ದೈಹಿಕ ಅಗತ್ಯವನ್ನು ಅನುಸರಿಸಿಯೆ ಇರುತ್ತದೆ, ಅಂದರೆ ಹಸಿವಿಗಾಗಿ ಅಹಾರ ಹುಡುಕುವುದು ಅಥವ ಬೇಟೆ ಆಡುವುದು. ಬಾಯರಿಕೆಗಾಗಿ ನೀರು ಕುಡಿಯುವುದು. ಮಳೆ ಅಥವ ಬಿಸಿಲ ರಕ್ಷಣೆ ಅಥವ ಬೇರೆ ಪ್ರಾಣಿಗಳ ಆಕ್ರಮಣ ತಪ್ಪಿಸಲು ಗುಹೆ, ಪೊದೆ , ಗೂಡುಗಳಂತ ರಚನೆ. ಕೆಲವೊಮ್ಮೆ ಅಹಾರ ಸಂಗ್ರಹಣೆ, ಮತ್ತು ತಾನು ಇಷ್ಟಪಟ್ಟ ಪ್ರಾಣಿಯನ್ನು ಕೂಡುವುದು ಅಥವ ಅದಕ್ಕಾಗಿ ಹೊಡೆದಾಟ ಇಷ್ಟಕ್ಕೆ ಮುಗಿಯುತ್ತದೆ ಅಲ್ಲವೆ ? " ಸ್ವಲ್ಪ ಕಾಲ ಮೌನ ಮತ್ತೆ ಮುಂದುವರೆಸಿದರು ಆತ "ಆದರೆ ಮನುಷ್ಯನನ್ನು ನೋಡಿ, ಆತ ವ್ಯವಸಾಯವನ್ನು ಕಲಿತ್ತಿದ್ದರು, ಅಹಾರವನ್ನು ಸಂಗ್ರಹಿಸುತ್ತಾನೆ, ಅಹಾರಕ್ಕಾಗಿ ಕುರಿ, ಕೋಳಿಯಂತ ಪ್ರಾಣಿಗಳನ್ನು ಸಾಕಿದರು , ಕಾಡಿನಲ್ಲಿ ಚಟಕ್ಕೆ ಬೇಟೆಯಾಡುತ್ತಾನೆ. ತಾನಾಗಲೆ ಒಂದು ಮನೆಯಲ್ಲಿ ಸುರಕ್ಷಿತವಾಗಿದ್ದರು, ಮುಂದಿನ ಪೀಳಿಗೆಗಾಗಿ ಎಂದು ಮತ್ತೆ ಮನೆ, ಜಾಗ ಹಣ ಎಲ್ಲಕ್ಕು ಆಸೆ ಬೀಳುತ್ತಲೆ ಇರುತ್ತಾನೆ, ಅವನ ಎಲ್ಲ ಚಟುವಟಿಕೆಗಳು ಮನಸಿನ ಪ್ರೇರಣೆಯೆ ಹೊರತು, ದೈಹಿಕ ಅಗತ್ಯವಲ್ಲ. ಮತ್ತೆ ಅಹಾರವನ್ನೆ ನೋಡಿ , ಹೊಟ್ಟೆ ತುಂಬಿದ್ದರು ಸ್ನೇಹಿತರು ಸಿಕ್ಕರೆ ಮತ್ತೇನಾದರು ತಿನ್ನಬಲ್ಲ. ಹಸಿವಿಲ್ಲದಿದ್ದರು ಊಟದ ಸಮಯವಾಯಿತು ಎಂದು ಊಟಮಾಡಬಲ್ಲ. ದೇಹಕ್ಕೆ ಬೇಕೆ ಇಲ್ಲದಿದ್ದರು ಏನಾದರು ಕುಡಿಯುತ್ತ ಇರಬಲ್ಲ. ಅಷ್ಟೆ ಅಲ್ಲ ಅವನ ಹವ್ಯಾಸಗಳು, ಕಲೆಯಾಗಲಿ, ಮನೋರಂಜನೆಯಾಗಲ್ಲಿ, ರಕ್ಷಣೆಯಾಗಲಿ, ಅಹಾರವಾಗಲಿ ಎಲ್ಲವು ಬಹುತೇಕ ಅವನ ಮನಸ್ಸಿನ ಅಗತ್ಯಗಳಷ್ಟೆ , ಬಹಳಷ್ಟು ದೇಹಕ್ಕೆ ಬೇಕೆ ಇರುವದಿಲ್ಲ ಅಲ್ಲವೆ ? ಹಾಗಾಗಿ ನಮ್ಮ ವಿಂಗಡನೆ" ಎನ್ನುತ್ತ ನಕ್ಕ. ನನಗು ನಗು ಬಂದಿತು. ಆದರು ಅನ್ನಿಸಿತು, ಇಷ್ಟೆಲ್ಲ ಮಾತನಾಡುವ ಇವನು ಸಹ ಮನುಷ್ಯನೆ ಅಲ್ಲವೆ. ತಾನೇನೊ ಬೇರೆ ಅನ್ನುವ ರೀತಿ ಹೇಳುತ್ತಾನೆ ಅನ್ನಿಸಿತು. ಅವನ ನಡೆನುಡಿಗಳು ವಿಚಿತ್ರವೆನಿಸಿತು. "ಇರಲಿ ಬಿಡಿ, ಅದೆಲ್ಲ ನಮ್ಮೆಲ್ಲರ ಸ್ವಭಾವವಲ್ಲವೆ. ಅದರಿಂದ ಹೇಗೆ ಹೊರಬಲ್ಲವು. ನೋಡಿ ಇಷ್ಟು ಹೊತ್ತು ನಿಮ್ಮೊಡನೆಮಾತನಾಡಿದರು ನಿಮ್ಮ ಪರಿಚಯ ಮಾಡಿಕೊಳ್ಳಲೆ ಇಲ್ಲ. ತಮ್ಮ ಹೆಸರೇನು, ಇಂತ ತಮಿಳುನಾಡಿನ ನಡುವೆ ನೀವು ಶುದ್ದ ಕನ್ನಡ ಮಾತನಾಡುತ್ತ ನನಗೆ ಆಶ್ಚರ್ಯ ಹುಟ್ಟಿಸಿರುವಿರಿ. ತಮ್ಮ ಉದ್ಯೋಗವೇನು, ಸಮುದ್ರತಟದಲ್ಲಿ ವಾಸ ನಿಜಕ್ಕು ಅಹ್ಲಾದವಲ್ಲವೆ" ಎಂದೆ. "ನಿಮ್ಮ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಕೊಡುವುದು ಸದ್ಯಕ್ಕೆ ಕಠಿಣ, ಇರಲಿ, ಹೆಸರು ಸದ್ಯಕ್ಕೆ ಕಾಯಸ್ಥ ಎಂದು ಇರಲಿ, ಮತ್ತೆ ನನಗೆ ಬಾಷೆಯ ಬಂದನವೇನಿಲ್ಲ, ಮತ್ತೆ ಉಧ್ಯೋಗವೆಂದರೆ ನೀವು ನೋಡುತ್ತಿರುವಿರಲ್ಲ, ಈ ಪುಸ್ತಕ ಇದನ್ನು ತುಂಬಿಸೋದು" ಎಂದ. ನನಗಂತು ಅಶ್ಚರ್ಯವಾಗಿ ಹೋಯಿತು. ಇವನೆ ವರ್ತನೆ ಸಾಕಷ್ಟು ಅಸಹಜವಾಗಿತ್ತು. ಹೆಸರು ಕೇಳಿದರೆ ಹೇಳಲು ಹಿಂಜರಿಯುವ ಉಧ್ಯೋಗವೆಂದರೆ ಪುಸ್ತಕ ತೋರುವ ಇವನಾರು ಎಂಬ ಭಾವ ನನ್ನಲ್ಲಿ ಕೌತುಕ ಪಡುವಂತೆ ಮಾಡಿತು. ಅಲ್ಲದೆ ನನಗೆ ಮತ್ತೊಂದು ವಿಚಿತ್ರ ಅನುಭವವಾಗುತ್ತಿತ್ತು. ಅವನು ಕುಳಿತುರುವ ಆ ಕೋಣೆ ಪ್ರವೇಶಿಸಿದ ಕ್ಷಣದಿಂದ ನನ್ನಲ್ಲಿ ಎಂತದೊ ಅನುಭೂತಿ ಉಂಟಾಗುತ್ತಿತ್ತು. ಅಂದರೆ ಅಲ್ಲಿ ನನ್ನ ಕಣ್ಣೆದುರು ಕಾಣುತ್ತಿರುವ ದೃಷ್ಯಕ್ಕಿಂತ ಮತ್ತೇನೊ ದೃಷ್ಯಗಳಿವೆ ಆದರೆ ನನಗೆ ಅಗೋಚರ, ಮತ್ತು ನನಗೆ ಕೇಳಿಸುವ ಅವನ ದ್ವನಿಗಿಂತ ಪ್ರತ್ಯೇಕವಾದ ಇನ್ನೇನೊ ದ್ವನಿಗಳು ಆ ಕೋಣೆಯಲ್ಲಿದೆ ಆದರೆ ನನಗೆ ಅದು ಕೇಳಿಸುತ್ತಿಲ್ಲ ಎನ್ನುವ ಭ್ರಮೆ ನನ್ನಲ್ಲಿ ತುಂಬುತ್ತಿತ್ತು. ಆದರೆ ಅದನ್ನು ಅವನಲ್ಲಿ ಹೇಳಿದರೆ ಅವನು ಏನು ತಿಳಿಯುವನೊ ಎಂದು ಸುಮ್ಮನಿದ್ದೆ. "ಇರಲಿ ಬಿಡಿ ನಿಮಗೆ ಹೇಳಲು ಇಷ್ಟವಿಲ್ಲದಿದ್ದರೆ, ಅಂತ ಬಲವಂತವೇನಿಲ್ಲ. ನನಗೆ ನೀವು ನಾನು ನಡೆಯಬೇಕಾದ ದಿಕ್ಕು ದಾರಿ ತಿಳಿಸಿದರೆ ಹೊರಡುವೆ" ಎಂದೆ ನಗುತ್ತ. ಅದಕ್ಕವನು " ಬೇಸರಪಡಬೇಡಿ, ಕೆಲವು ವಿಷಯ ಹಾಗೆ ತಕ್ಷಣ ಉತ್ತರ ಹೇಳಲು ಕಷ್ಟ, ಅದನ್ನು ಎದುರಿಗೆ ಇರುವವರು ಹೇಗೆ ಸ್ವೀಕರಿಸುವರು ಎಂದು ಯೋಚನೆ ಇರುತ್ತೆ. ನೀವು ಹೊರಡಲು ಸ್ವಲ್ಪ ಕಾಯಬೇಕಾಗುತ್ತೆ ಅನ್ನಿಸುತ್ತೆ. ಮತ್ತೇನಾದರು ಕೇಳುವದಿದೆಯ, ನನ್ನ ಪರಿಮಿತಿಯಲ್ಲಿದ್ದರೆ ಉತ್ತರಿಸುವೆ" ಎಂದನಾತ. ನನಗೆ ಆಶ್ಚರ್ಯವಾಗಿಹೋಯಿತು. ಇದೆಂತಹ ಸ್ಥಳಕ್ಕೆ ನಾನು ಬಂದೆ. ನಾನು ಹೊರಡಲು ಇವನು ಯಾವ ಘಳಿಗೆ ಕಾಯುತ್ತಿರುವನು, ಅಲ್ಲದೆ ನಾನು ಬರುವದೇನು ಇವನಿಗೆ ಮೊದಲೆ ತಿಳಿದಿತ್ತೆ, ಅನ್ನುವ ಪ್ರಶ್ನೆ ಮನದಲ್ಲಿ ತುಂಬಿತ್ತು. ಆದರೆ ಹೊರಗೆ ಕೇಳಿದೆ "ತಪ್ಪು ತಿಳಿಯಬೇಡಿ ನನಗೊಂದು ವಿಚಿತ್ರ ಅನುಭವವಾಗುತ್ತಿದೆ, ಒಳಗೆ ಬಂದ ಕ್ಷಣದಿಂದ ಇಲ್ಲಿ ನನಗೆ ಕಾಣದ ಇನ್ನೇನೊ ಇದೆ, ಕೇಳದ ದ್ವನಿಗಳಾವುದೊ ಇದೆ ಅನ್ನಿಸುತ್ತಿದ್ದೆ ಏಕೆ , ಅಲ್ಲದೆ ಇಲ್ಲಿಂದ ಹೊರಡಲು ನಾನೇಕೆ ಕಾಯಬೇಕು " ಎಂದೆ "ಇಲ್ಲ ಅದರಲ್ಲಿ ವಿಚಿತ್ರ ವೇನು ಇಲ್ಲ. ನಿಮ್ಮ ಭಾವನೆ ನಿಜ, ಇಲ್ಲಿ ನೀವು ಕಾಣದ ದೃಷ್ಯಗಳಿವೆ, ಹಾಗು ದ್ವನಿಗಳಿವೆ. ಮತ್ತು ವ್ಯಕ್ತಿಗಳು ಇದ್ದಾರೆ. ನೀವು ಇಲ್ಲಿ ಬರುವಾಗ ಸಹ ನಮ್ಮ ನಿರ್ಧಾರದಂತೆ ಬಂದಿರುವಿರಿ ಹಾಗೆ ಇಲ್ಲಿಂದ ಹೊರಡುವಾಗ ಸಹ ಕಾಯಬೇಕಾಗುತ್ತೆ, ಗಾಭರಿ ಎನ್ನುವದೇನು ಇಲ್ಲ" ಎಂದ. ಈಗ ನನಗೆ ನಿಜಕ್ಕು ಸ್ವಲ್ಪ ಗಾಭರಿ ಎನಿಸಿತು "ಅದು ಹೇಗೆ ಸಾದ್ಯ ಯಾವುದೊ ದೃಷ್ಯ ನನಗೆ ಕಾಣದಿರಲು ಹೇಗೆ ಸಾದ್ಯ, ದ್ವನಿಕೇಳದಿರಲು ಸಾದ್ಯವೆ, ಮತ್ತೆ ಇಲ್ಲಿ ವ್ಯಕ್ತಿಗಳು ಇದ್ದಲ್ಲಿ ನನಗೆ ಏಕೆ ಕಾಣುವದಿಲ್ಲ ಅವರೇನು ಮನುಷ್ಯರಲ್ಲವ, ನೀವು ಮನುಷ್ಯರಲ್ಲವ. ನಾನು ನಿಮ್ಮ ಇಚ್ಚೆಯಂತೆ ಇಲ್ಲಿ ಬಂದಿರಲು ಹೇಗೆ ಸಾದ್ಯ ನಾನು ದಾರಿ ತಪ್ಪಿ ಅಲ್ಲವೆ ಇಲ್ಲಿ ಬಂದಿರುವುದು, ನಿಮ್ಮ ವರ್ತವೆ ವಿಚಿತ್ರವಾಗಿದೆ, ನಾನು ಹೊರಡುವೆ " ಎನ್ನುತ್ತ ಅವಸರಿಸಿದೆ. "ಹೇಳಿದೆನಲ್ಲ ಏಕೆ ಗಾಭರಿಪಡುವಿರಿ, ನಿಮಗೆ ಏಕೆ ಕಾಣುತ್ತಿಲ್ಲ, ಕೇಳುತ್ತಿಲ್ಲವೆಂದರೆ, ಇಲ್ಲಿರುವ ಆ ವ್ಯಕ್ತಿಗಳಿಗೆ ಅದು ಇಷ್ಟವಿಲ್ಲ, ಅಥವ ಮೇಲಿನವರ ಒಪ್ಪಿಗೆ ಇಲ್ಲ ಎಂದು ಅರ್ಥ. ಅಥವ ಅವರಿಗೆ ಸಾದ್ಯವಿಲ್ಲ. ನಾನು ಮನುಷ್ಯನಲ್ಲವ ಎನ್ನುವ ಪ್ರಶ್ನೆಗೆ ನಿಧಾನಕ್ಕೆ ಉತ್ತರ ಕೊಡುವೆ, ನೀವು ದಾರಿ ತಪ್ಪಿ ಬಂದಿರುವುದು ನಿಜವಾದರು, ನೀವು ಇಲ್ಲಿ ಬರುವುದು, ನಮ್ಮವರ ಒಪ್ಪಿಗೆಯಿಂದಲೆ ಸಾದ್ಯ . ಇಲ್ಲದಿದ್ದರೆ ನಿಮಗೆ ಈ ಸ್ಥಳ ಗೋಚರಿಸುವದಾಗಲಿ, ನೀವು ಬರುವದಾಗಲಿ ನಿಮಗೆ ಸಾದ್ಯವಿಲ್ಲ . ಅದಕ್ಕಾಗಿಯೆ ನೀವು ಒಳಬಂದಾಗ ನನಗೆ ಆಶ್ಚರ್ಯವೆನಿಸಿತ್ತು . ನಂತರ ನನ್ನ ಒಡೆಯರೊಡನೆ ಮಾತನಾಡಿ ವಿಷಯ ಸ್ಥಿರಪಡಿಸಿಕೊಂಡೆ. ನಿಮ್ಮನ್ನು ಇಲ್ಲಿಗೆ ಕರೆತರಲಾಗಿದೆ ಎಂದು ತಿಳಿಯಿತು. ಮೊದಲಿಗೆ ನಿಮಗೆ ಯಾವ ವಿಷಯ ತಿಳಿಸಬೇಕು ಯಾವುದು ತಿಳಿಸಬೇಡದು ಎಂಬ ಗೊಂದಲವಿತ್ತು, ಈಗ ಸ್ವಷ್ಟವಿದೆ" ಎಂದರು ಆತ. ಅವನ ಒಂದಕ್ಕೊಂದು ಸಂಭಂದವಿಲ್ಲದ ಮಾತು ನನ್ನನ್ನು ದೃತಿಗೆಡಿಸಿತ್ತು. ಅಲ್ಲ ಅವರಿಗೆ ಇಷ್ಟವಿಲ್ಲದಿದ್ದರೆ ನನಗೆ ಕಾಣದಂತೆ ಇರುವದೇನು. ಮತ್ತೆ ಅವನು ಒಳಬಂದ ಕ್ಷಣದಿಂದ ನನ್ನೆದುರಿಗೆ ಇದ್ದಾನೆ ಆದರೆ ಯಾರೊಡನೆಯೊ ಮಾತನಾಡಿ ಸ್ವಷ್ಟಪಡಿಸಿಕೊಂಡೆ ಅನ್ನುತ್ತಿರುವ ಇವನು ಮಾತನಾಡಿದ್ದು ಯಾವಾಗ. ಎಲ್ಲ ಪ್ರಶ್ನೆ ನನ್ನನ್ನು ಕಾಡಿತ್ತು. ಈಗ ಇವನು ಮಾತನಾಡಲು ಸಿದ್ದವೆನ್ನುತ್ತಿದ್ದಾನೆ, ನಾನು ಯಾವ ಪ್ರಶ್ನೆ ಕೇಳಲಿ ಅಸಲಿಗೆ ಇವನು ಮನುಷ್ಯನ, ಅಥವ ನನಗೆ ತಿಳಿಯಗೆ ಯಾವುದಾದರು ದೆವ್ವದ ಮನೆಯೊಳಗೆ ನುಗ್ಗಿರುವೆನ? ಅನ್ನಿಸಿತು, ಚೀ ಅದೆಲ್ಲ ಸಾದ್ಯವಿಲ್ಲ, ದೆವ್ವ ಅದನ್ನೆಲ್ಲ ನಂಬುವುದು ಮೂರ್ಖತನ ಅನ್ನಿಸಿತು. ಅಲ್ಲದಿದ್ದರೆ, ದೇವರಿರ ಬಹುದು , ಅಂದುಕೊಳ್ಳುವಾಗ ನಗು ಬಂದಿತು, ನನ್ನೆದುರು ಪ್ಯಾಂಟ್ ಶರ್ಟ್ ನಂತ ವಿಚಿತ್ರ ವಸ್ತ್ರ ಧರಿಸಿ ಕುಳಿತ ಇವನು ದೇವರಾಗಲು ಸಾದ್ಯವಾದರೆ ಅನ್ನಿಸಿತು. ಅಥವ ಬೇರೆ ಗ್ರಹದಿಂದ ಬಂದಿರುವ ಜೀವಿ ಇವನಿರಬಹುದಾ? ಎನೇನೊ ಯೋಚನೆ ಕಾಡಿತು. "ನಾನು ಹೇಳಿದೆ ನೀವು ಅನಗತ್ಯ ಗಾಭರಿ ಪಡಬೇಡಿ, ಎಂದು. ಹೆದರದಿರಿ ಎಂದು. ಇರಲಿ ನಿಮ್ಮ ಒಂದೊಂದು ಪ್ರಶ್ನೆಗು ನಿದಾನವಾಗಿಯೆ ಉತ್ತರಿಸುವೆ. ಸಹನೆ ಇಟ್ಟು ಕೇಳಿ. ನಿಮಗೆ ಇಲ್ಲಿ ಮತ್ಯಾವುದೊ ದೃಷ್ಯಗಳಿವೆ ನಿಮಗೆ ಕಾಣಿಸುತ್ತಿಲ್ಲ, ಅಥವ ಕೇಳಿಸುತ್ತಿಲ್ಲ ಅಂದರೆ ಗಾಭರಿ ಏಕೆ. ಸ್ವಲ್ಪ ವೈಜ್ಞಾನಿಕವಾಗಿಯೆ ಯೋಚಿಸಿ. ನೀವು ಮತ್ತು ನಾವು ಬೇರೆ ಬೇರೆಯೆ ಆದ ಆಯಾಮದಲ್ಲಿರಬಹುದಲ್ಲವೆ. ದ್ವನಿಯ ಬಗ್ಗೆ ಯೋಚಿಸಿ, ಮನುಷ್ಯನ ಕಿವಿಗೆ ಕೇಳಬಹುದಾದ ದ್ವನಿ ೨೦ ಡೆಸಿಬಲ್ ನಿಂದ ೨೦ ಸಾವಿರ ಡೆಸಿಬಲ್ ಅಷ್ಟೆ. ಒಂದು ವೇಳೆ ದ್ವನಿ ೨೦ ಕ್ಕಿಂತ ಕಡಿಮೆ ಅಥವ ೨೦ಸಾವಿರಕ್ಕಿಂತ ಜಾಸ್ತಿ ಇದ್ದಲ್ಲಿ ನಿಮಗೆ ಕೇಳಿಸಲ್ಲ ಅನ್ನುವುದು ಸಹಜವಲ್ಲವೆ. ಹಾಗಿರಲು ನೀವು ದೆವ್ವ ದೇವರು ಎಂದೆಲ್ಲ ಏಕೆ ಯೋಚಿಸುವುದು" ಎಂದ. ಅಂದರೆ ಇದೇನು ನಾನು ಯೋಚಿಸುವ ಬಗ್ಗೆ ಸಹ ಇವನು ಮಾತನಾಡುತ್ತಿದ್ದಾರೆ, ನನ್ನ ಮನಸಿನ ಯೋಚನೆಗಳನ್ನು ಸಹ ಇವನು ಅರಿಯಬಲ್ಲನೆ. ಆದರು ಮತ್ತೆ ಪ್ರಶ್ನಿಸಿದೆ "ಮತ್ತೆ ನಿಮಗೆ ಬೇಕೆನಿಸಿದಾಗ ನನಗೆ ಕಾಣಬಲ್ಲಿರಿ ಅಥವ ನಿಮ್ಮ ದ್ವನಿ ಕೇಳಬಲ್ಲದು ಎಂದರೆ ಹೇಗೆ ಸಾದ್ಯ , ನೀವು ಅದನ್ನು ಹೇಗೆ ನಿಯಂತ್ರಿಸಬಲ್ಲಿರಿ, ನಾವು ಒಬ್ಬರಿಗೆ ಕಾಣದಂತೆ ಇರಲು ಸಾದ್ಯವೆ?" ಎಂದೆ. " ಹೌದು ಸಾದ್ಯ, ಸಾದರಣ ಕಣ್ಣಿಗೆ ಎಲ್ಲವು ಕಾಣಲು ಸಾದ್ಯವಿಲ್ಲ ಅಲ್ಲವೆ, ಉದಾಹರಣೆ ಎಕ್ಸ್ ರೇ , ಅಥವ ಅತಿ ನೇರಳೆ ಕಿರಣಗಳು, ಹಾಗೆ ದ್ವನಿಗಳು, ಒಂದು ವೇಳೆ ನಾವು ನಿಮಗೆ ಕಾಣಿಸುವ ಅಥವ ಕಾಣಿಸದಿರುವ ಎಲ್ಲ ಬೆಳಕಿನ ರೂಪದಲ್ಲಿ ಇರಲು ಸಾದ್ಯವಾದರೆ , ನಮಗೆ ಬೇಕೆಂದಾಗ ನಿಮಗೆ ಕಾಣಿಸುವುದು , ಹಾಗು ಮಾಯವಾಗುವುದು ಸಾದ್ಯ ಅಲ್ಲವೆ, ಹಾಗೆಯೆ, ಒಂದು ವೇಳೆ ನಾವು ೨೦ ಕ್ಕಿಂದ ಕಡಿಮೆ ಹಾಗು ೨೦ ಸಾವಿರಕ್ಕಿಂತ ಹೆಚ್ಚಿನ ದ್ವನಿತರಂಗಗಳಲ್ಲಿ ಸಹ ವ್ಯವಹರಿಸಲು ಸಾದ್ಯವಾದಲ್ಲಿ, ನಮಗೆ ಬೇಕೆಂದಾಗ ಮಾತ್ರ ನಿಮಗೆ ಕೇಳಿಸುವಂತೆ ಮಾತನಾಡಿ ಉಳಿದಂತೆ ನಿಮಗೆ ಕೇಳಿಸದಂತೆ ಮಾತನಾಡಬಲ್ಲೆವು ಅಲ್ಲವೆ. ಕೆಲವು ಸಾರಿ, ನಿಮಗೆ ಅದರ ವಿಚಿತ್ರ ಅನುಭವ ಸಾದ್ಯವಾಗಬಹುದು ಏಕೆಂದರೆ ನೀವು ನಮ್ಮ ಜಾಗದಲ್ಲಿ ಇರುವಿರಲ್ಲವೆ" ಎಂದ ಅವನು ನನಗೆ ಅವನು ಹೇಳಿದ್ದು ಅರ್ಥವಾದರು ಸಹ , ಇದೆಲ್ಲ ಹೇಗೆ ಸಾದ್ಯವೆಂಬ ಭಾವ ತುಂಬಿಕೊಂಡಿತು . ನನ್ನ ವಾದ ಮುಂದುವರೆಸಿದೆ. "ಆಯಿತು ನೀವು ಹೇಳಿದ್ದನ್ನು, ಒಂದು ಮಟ್ಟಕ್ಕೆ ನಿಜವಿರಬಹುದು ಎಂದೆ ಭಾವಿಸೋಣ. ಆದರೆ ನಾನು ಇಲ್ಲಿ ಒಳಬಂದ ಕ್ಷಣದಿಂದ ನನ್ನ ಎದುರಿಗೆ ಇರುವಿರಿ. ಆದರೆ ಯಾರೊಡನೆಯೊ ಮಾತನಾಡಿ ನನ್ನ ಬಗ್ಗೆ ಖಚಿತಪಡಿಸಿಕೊಂಡೆ ಎನ್ನುವಿರಿ. ಅದು ಹೇಗೆ ಸಾದ್ಯ, ನೀವು ನನಗೆ ಕಾಣದಂತೆ, ನನಗೆ ಕೇಳದಂತೆ, ನನ್ನ ಬಗ್ಗೆ ಯಾರೊಡನೆಯೊ ಹೇಗೆ ಮಾತನಾಡಲು ಸಾದ್ಯ. ನೀವೇನು ಅತಿಮಾನುಷರೆ?" ಎಂದೆ ಉದ್ವೇಗದಿಂದ. ಅವನು ನಗುತ್ತಿದ್ದ. "ನೋಡಿ , ನೀವನ್ನುವುದು ನಿಮ್ಮ ಮಟ್ಟಿಗೆ ನಿಜ , ನಿಮಗೆ ತಿಳಿಯದಂತೆ ಮಾತನಾಡುವುದು ಸಾದ್ಯವಿಲ್ಲ. ಆದರೆ ಮನಸಿನ ಮಟ್ಟದಲ್ಲಿ, ನಾನು ನನ್ನ ಮನಸಿನ ಮೂಲಕ, ಬೇರಡೆ ಮಾತನಾಡಿದರೆ ಅದನ್ನು ನೀವು ಅರಿಯಲು ಹೇಗೆ ಸಾದ್ಯ. ಆ ಶಕ್ತಿ ನಿಮಗಿದೆಯೆ. ನಾನು ಅತಿಮಾನುಷನಲ್ಲ ಅನ್ನುವುದು ನಿಜ ಆದರೆ ನಿಮ್ಮ ಅರ್ಥದಂತೆ ಮನುಷ್ಯನು ಅಲ್ಲ" ಅಂದ. ಅಯ್ಯೊ ಇವನು ಇದೇನು ಹೇಳುತ್ತಿರುವ. ಅಂದರೆ ಇವನು ಮನುಷ್ಯನಲ್ಲವೆ? ಹಾಗಿದ್ದಲ್ಲಿ ಏನು. ಮನಸಿನ ಮೂಲಕ ಬೇರಡೆಗೆ ಮಾತು ಅಂದರೆ 'ಟಿಲಿಪತಿ" , ಅದು ಇವನಿಗೆ ಸಾದ್ಯವೆ ? , ಇವನನ್ನು ನೋಡುವಾಗ ಸಾದ್ಯವಿರಬಹುದೆ ಅನ್ನಿಸುತ್ತೆದೆ. ಅಂದರೆ ಇವನು ನನ್ನ ಮನಸಿನ ಯೋಚನೆಗಳನ್ನು ಸಹ ಗ್ರಹಿಸಬಲ್ಲನೆ, ಅನ್ನುವಾಗ ಹೆದರಿಕೆ ಆಯಿತು. "ಅಂದರೆ ನೀವು ಹೇಳುತ್ತಿರುವದೇನು, ಟೆಲಿಪತಿಯ ಬಗ್ಗೆಯೆ, ಮನಸಿನ ಯೋಚನ ತರಂಗಗಳ ಮೂಲಕ ದೂರದಲ್ಲಿರುವವರ ಕೂಡ ವ್ಯವಹರಿಸಬಲ್ಲಿರ? ಅದು ಹಿಂದೆ ಋಷಿಮುನಿಗಳಿಗೆ ಮಾತ್ರ ಸಾದ್ಯವಿತ್ತೆಂದು ನಂಬುತ್ತಾರೆ. ನೀವು ನನ್ನ ಮನಸಿನಲ್ಲಿ ನಡೆಯುವ ಯೋಚನೆಯ ಎಲ್ಲ ವಿವರಗಳನ್ನು ಗ್ರಹಿಸಬಲ್ಲಿರ" ಎಂದೆ "ಬಹುಷಃ ಅದು ಸರಿಯಾದ ಪದ ಟಿಲಿಪತಿ, ಯಾವುದೆ ಯಾಂತ್ರಿಕ ಮಾಧ್ಯಮಗಳಿಲ್ಲದೆ, ಮನಸುಗಳ ನಡುವೆ ಅಲೋಚನೆಗಳ ವಿನಿಮಯ, ಅದನ್ನು ನೀವು ಟೆಲಿಪತಿ ಅನ್ನುವದಾದರೆ , ಅದೆ ನಿಜ. ಮತ್ತೆ ನಿಮ್ಮ ಮನಸಿನ ಎಲ್ಲ ಯೋಚನೆಗಳನ್ನು ಗ್ರಹಿಸುವುದು ಸ್ವಲ್ಪ ಕಷ್ಟ. ನನಗೆ ಸಾದ್ಯವಿಲ್ಲ, ಆದರೆ ನಮ್ಮಲ್ಲಿ ಕೆಲವರಿಗೆ ಅದು ಸಾದ್ಯವಿದೆ. ಮನಸುಗಳು ಗ್ರಾಹಕ ಪ್ರೇಷಕದಂತೆ (Receiver Transmeter ) ಕೆಲಸಮಾಡುತ್ತದೆ, ಅಂದರೆ ನಿಮ್ಮ ಅಲೋಚನೆ ನನ್ನನ್ನು ಕುರಿತು ಹೊರಹೊಮ್ಮಿದಾಗ ಅದನ್ನು ಮಾತ್ರ ನಾನು ಗ್ರಹಿಸಬಲ್ಲೆ. ಬೇರೆ ಕೆಲವು ನಿಮ್ಮ ಅಲೋಚನೆಗಳನ್ನು ನಿಮ್ಮ ವೈಯುಕ್ತಿಕ ಭಾವನೆಗಳು , ನನಗೆ ಅರಿವಾದರು ಪೂರ್ಣ ಅದರ ಭಾವಾರ್ಥವಾಗುವದಿಲ್ಲ. ನಿಮ್ಮ ನಂಬುಗೆಯಂತೆ ಹಿಂದಿನ ಇತಿಹಾಸದಲ್ಲಿ , ಮನುಷ್ಯರಲ್ಲಿ ಕೆಲವರು, ಅಂದರೆ ನೀವನ್ನುವಂತೆ ಕೆಲವು ಋಷಿಗಳು, ಅಥವ ಮನಶಕ್ತಿಯಲ್ಲಿ ಪಳಗಿದವರು , ಅದನ್ನು ಬಳಸಿದ್ದು ಇದೆ. ಆದರೆ ನಿಮ್ಮ ಯೋಚನೆಗಳಲ್ಲಿ ನನಗೆ ಅಡ್ರೆಸ್ ಆದಾಗ ಮಾತ್ರ ನಾನು ಗ್ರಹಿಸಬಲ್ಲೆ" ಎನ್ನುತ್ತ ನಕ್ಕ. ನಾನು ನಗುತ್ತ "ಅಂದರೆ ನೀವು ಹೇಳುವುದು , ನಮ್ಮ ಕಂಪ್ಯೂಟರ್ ನೆಟವರ್ಕ್ ನಲ್ಲಿ ಉಪಯೋಗಿಸುವ , ಐ.ಪಿ. ಅಡ್ರೆಸ್ ನಂತೆ ಅನ್ನಿ, ನಿಮಗೆ ಸಂಬಂದಿಸಿದ ವಿಷಯಗಳನ್ನು ಮಾತ್ರ ಗ್ರಹಿಸಿ ಪ್ರತಿಕ್ರಯಿಸಬಲ್ಲಿರಿ" ಎಂದೆ ಅವನು ಖುಷಿಯಾಗಿ "ಎಕ್ಸಾಟ್ಲಿ. ಅದೆ, ಸರಿಯಾದ ಪದ ಪ್ರಯೋಗ, ಅದು ಹಾಗೆ ನಡೆಯುತ್ತದೆ" ಎಂದ ನನ್ನಲ್ಲಿ ಇದ್ದಕ್ಕಿದ್ದಂತೆ ಒಂದು ಭಾವ ತುಂಬಿಕೊಂಡಿತು. ಇವನು ನನಗೆ ಏನೊ ಮೋಸ ಮಾಡುತ್ತಿದ್ದಾನೆ. ನನ್ನ ಮನವನ್ನು ಅವನ ವಶಕ್ಕೆ ತೆಗೆದುಕೊಳ್ಳುತ್ತಿದ್ದಾನೆ. ಏಕೊ ಅಲ್ಲಿರುವುದು ಅಪಾಯವೆನಿಸಿತು. ಏನಾದರು ಕಾರಣ ಹೇಳಿ ಅಲ್ಲಿಂದ ಹೊರಡುವುದು ಒಳ್ಳೆಯದು. ಇಲ್ಲಿ ಯಾವುದೊ ಸಮಾಜವಿರೋದಿ ಕಾರ್ಯ ನಡೆದಿರಲು ಸಾಕು, ನಾನು ಅನವಶ್ಯಕ ಏಕೆ ಒಳಗೊಳ್ಳಬೇಕು. “ಕ್ಷಮಿಸಿ ನಾನು ಇಲ್ಲಿ ತುಂಬಾ ಹೊತ್ತು ಕುಳಿತು ಕಾಯಲು ಸಾದ್ಯವಿಲ್ಲ. ನನ್ನ ಸ್ನೇಹಿತರು ಹೋಟೆಲಿನ ರೂಮಿನಲ್ಲಿ ಕುಳಿತು ನನಗಾಗಿ ಕಾಯುತ್ತ ಕ್ಷೋಬೆಗೊಳಗಾಗುತ್ತಾರೆ. ಅಲ್ಲದೆ ನಾಳೆ ಬೆಳಗಿನ ಬಸ್ಸಿಗೆ ಮಹಾಬಲಿಪುರಂನಿಂದ ಬೆಂಗಳೂರಿಗೆ ಹಿಂದಿರುಗುವ ಕಾರ್ಯಕ್ರಮವಿದೆ. ನಾನು ಹೇಗೆ ದಾರಿ ಹಿಡಿದು ಹೋಟೆಲ್ ತಲುಪುತ್ತೇನೆ. ನಿಮಗೆ ತೊಂದರೆ ಕೊಟ್ಟೆ ಕ್ಷಮಿಸಿ “ ಎನ್ನುತ್ತ ಎದ್ದು ನಿಂತೆ. ಅವನು ಗಂಭೀರನಾದ “ಕ್ಷಮಿಸಿ, ನಿಮ್ಮನ್ನು ತಡೆಹಿಡಿಯುವುದು ನನ್ನ ಉದ್ದೇಶವಲ್ಲ. ಆದರೆ ನಿಮಗೆ ಪರಿಸ್ಥಿಥಿ ಪೂರ್ಣವಾಗಿ ಅರ್ಥವಾಗಿಲ್ಲ ಎಂದು ಎಣಿಸುತ್ತೇನೆ. ನೀವು ಬಯಸಿದರೆ, ಹೋಗಬಹುದು. ದಾರಿ ಹಿಡಿಯಲು ಪ್ರಯತ್ನಿಸಿ. ಹೊರಗೆ ಹೋಗಿ ನಿಮಗೆ ಗೊಂದಲವೆನಿಸಿದರೆ ಮತ್ತೆ ಒಳಗೆ ಬಂದು ಬಿಡಿ . ಬೇರಡಗೆ ಹೋಗಲು ಪ್ರಯತ್ನಿಸಬೇಡಿ. ನಾನು ನಿಮಗೆ ಶತೃವಲ್ಲ . ನೆನಪಿಡಿ. ನಾನು ನಿಮ್ಮ ಹಿತೈಷಿ” ನಾನು ನಿರ್ಧರಿಸಿದೆ ಇವನ ಮಾತು ಕುರುಡನಂತೆ ನಂಬುವದಕ್ಕಿಂತ ಒಮ್ಮೆ ಹೊರಗೆ ಹೋಗಿ ನೋಡುವುದು ಒಳ್ಳೆಯದು. ಅವನು ನನ್ನತ್ತ ನೋಡುತ್ತಲೆ ಇದ್ದ. ನಾನು ಎದ್ದು ಅವನ ಕೋಣೆಯಿಂದ ಹೊರಬಂದು , ಆ ವಿಶಾಲ ಮನೆಯಿಂದ ಹೊರಬಂದೆ. ಬಾಗಿಲು ದಾಟಿದೊಡನೆ, ನಾನು ಬಂದ ಅದೆ ಕಾಲುದಾರಿ ಎದುರಿಗಿತ್ತು. ನಡೆಯುತ್ತ ಹೊರಟೆ. ಒಮ್ಮೆ ಹಿಂದೆ ನೋಡಿದೆ. ನನ್ನ ಹಿಂದೆ ಯಾರು ಇಲ್ಲ. ಸದ್ಯ! ಎನ್ನುತ್ತ ಹೊರಗಿನ ಗೇಟಿನಂತಹ ಅಡ್ಡವನ್ನು ದಾಟಿ, ಆವರಣದಿಂದ ಹೊರಬಂದೆ. ಹೊರಗಿನ ದೃಷ್ಯವನ್ನು ಅರ್ಥಮಾಡಿಕೊಳ್ಳಲು ಆಗದೆ ಗಲಿಬಿಲಿಗೊಳ್ಳುತ್ತ ನಿಂತೆ. ನಾನು ಮಹಾಬಲಿಪುರಂನ ಸಮುದ್ರದದ ದಂಡೆಯಲ್ಲಿದ್ದ ಗುಡ್ಡದಂತಹ ಸ್ಥಳವನ್ನು ಹತ್ತುತ್ತ , ಆ ಮನೆಯನ್ನು ಒಳಹೊಕ್ಕಿದ್ದ ನೆನಪು ಸ್ವಷ್ಟವಾಗಿತ್ತು. ಆದರೆ ಈಗ ನಾನು ಸಮುದ್ರದ ಎದುರಿನಲ್ಲಿ ಇರಲಿಲ್ಲ. ನಡುನೆತ್ತಿಯಲ್ಲಿ ಹೊಳೆಯುತ್ತಿದ್ದ ಚಂದ್ರನ ಬೆಳಕಿನಲ್ಲಿ ಎದುರಿಗೆ ಪರ್ವತಗಳ ಸಾಲು ಸಾಲು ಹಬ್ಬಿದ್ದು, ಹಿಮದಿಂದ ಮುಚ್ಚಿದ್ದ ಬೆಟ್ಟ ಗುಡ್ಡಗಳೆಲ್ಲ ಚಂದ್ರನ ಬೆಳಕಲ್ಲಿ ಬೆಳ್ಳಿಯ ಕವಚದಂತೆ ಹೊಳೆಯುತ್ತಿದ್ದವು. ನಾನು ಈ ದೃಷ್ಯವನ್ನು ನನ್ನ ನೆನಪಿನ ಜೊತೆ ಹೋಲಿಸಿನೋಡಿದೆ. ಎಲ್ಲೊ ನೋಡಿದಂತೆ ಅನ್ನಿಸುವದಲ್ಲ. ಹೌದು , ಎದುರಿಗಿರುವದೆಲ್ಲ, ಹಿಮಾಲಯದ ಸಾಲು ಸಾಲು ಪರ್ವತಗಳನ್ನು ಹೋಲುತ್ತಿವೆ. ಅಂದರೆ ನಾನೀಗ ಹಿಮಾಲಯದ ತಪ್ಪಲಿನಲ್ಲಿ ಇರುವೆನೆ? . ಹೇಗೆ ಸಾದ್ಯ. ನಾನು ಇದ್ದದ್ದು ದಕ್ಷಿಣದ ತಮಿಳುನಾಡಿನ ಮಹಾಬಲಿಪುರಂ ಸಮುದ್ರ ತೀರವಲ್ಲವೆ. ಅಷ್ಟೆ ಬೇಗ ನಡೆಯುತ್ತ ಹಿಮಾಲಯದ ಯಾವುದೊ ತಪ್ಪಲನ್ನು ತಲುಪಲು ಹೇಗೆ ಸಾದ್ಯ. ಎದುರಿಗಿದ್ದ ಸಮುದ್ರ ಏನಾಯಿತು. ಮುಂದಿನ ಭಾಗದಲ್ಲಿ ಮುಕ್ತಾಯ ...
Rating
No votes yet

Comments