ಬೆಂಗಳೂರ್ ಹುಡ್ಗ..ಹುಬ್ಬಳ್ಳಿ ಹುಡ್ಗಿ (ಕಥೆ)
\ಗಡಿಯಾರ ಟನ್..ಟನ್...ಎಂದು ಐದು ಬಾರಿ ಹೊಡೆದುಕೊಂಡಿತು. ಅದರ ಜೊತೆ ಜೊತೆಗೆ ಕ್ರೀ....ಕ್ರೀ...ಎನ್ನುವ ಕಾಲಿಂಗ್ ಬೆಲ್ ಸದ್ದು ಸಹ ಕೇಳಿತು. ರಾತ್ರಿಯಿಂದ ನಿದ್ರೆ ಸಹ ಮಾಡದೆ ಪ್ರತಿಯೊಮ್ಮೆ ಗಡಿಯಾರ ಟನ್ ಟನ್...ಎಂದು ಸದ್ದು ಮಾಡಿದಾಗ ಅದರ ಕಡೆ ನೋಡುತ್ತಾ ಅತ್ತಿಂದಿತ್ತ ಓಡಾಡುತ್ತ, ಸ್ವಲ್ಪ ಸಮಯ ಟಿವಿ ನೋಡಿ, ಮತ್ತೊಂದಷ್ಟೊತ್ತು ಹೊತ್ತು ಕಂಪ್ಯೂಟರ್ ನೋಡಿ, ಇನ್ನೊಂದು ಸ್ವಲ್ಪ ಹೊತ್ತು ಪೇಪರ್ ಓದಿ ಕಾಲಿಂಗ್ ಬೆಲ್ ಸದ್ದಿಗಾಗಿ ಕಾದು ಕುಳಿತಿದ್ದ ಶರತ್ ಕೂಡಲೇ ಎದ್ದು ಹೋಗಿ ಬಾಗಿಲು ತೆಗೆದ. ರಾತ್ರಿ ಪ್ರಯಾಣದಿಂದ ದಣಿದಿದ್ದ ಅಪ್ಪ ಅಮ್ಮ ಒಳಗೆ ಬಂದು ಸೀದಾ ಅವರ ರೂಮಿಗೆ ಹೋದರು. ಶರತ್ ಬಾಗಿಲು ಮುಚ್ಚಿ ತಾನು ಕಾದು ಕುಳಿತಿದ್ದ ವಿಷಯದ ಸಲುವಾಗಿ ಮಾತಾಡೋಣ ಎಂದುಕೊಂಡು ರೂಮಿನ ಬಳಿ ಹೋದರೆ ಅವರಮ್ಮ ಆಚೆ ಬಂದು ಈಗ ಏನೂ ಕೇಳಬೇಡ ಇಬ್ಬರಿಗೂ ಸುಸ್ತಾಗಿದೆ ಸ್ವಲ್ಪ ರೆಸ್ಟ್ತೆಗೆದುಕೊಂಡು ಆಮೇಲೆ ನಿಧಾನವಾಗಿ ಮಾತಾಡೋಣ ಎಂದು ಒಳಗೆ ಹೋದರು.
ಶರತ್ ಗೆ ಬೇಸರವಾದರೂ ಅದನ್ನು ತೋರಗೊಡದೆ ಸುಮ್ಮನೆ ತನ್ನ ರೂಮಿಗೆ ಹೋಗಿ ಸೌಮ್ಯಗೆ ಕರೆ ಮಾಡೋಣ ಎಂದುಕೊಂಡು ಅವಳ ನಂಬರ್ ಗೆ ಕರೆ ಮಾಡಿದ. ಫೋನ್ ರಿಂಗಾಗುತ್ತಿತ್ತು. ಆದರೆ ತೆಗೆಯಲಿಲ್ಲ. ಬಹುಶಃ ಮಲಗಿರಬಹುದೇನೋ ಎಂದು ಸುಮ್ಮನಾದ. ಶರತ್ ನ ಪರಿಸ್ಥಿತಿ ಬಾಲ ಸುಟ್ಟ ಬೆಕ್ಕಿನಂತಾಗಿತ್ತು. ಅಪ್ಪ ಅಮ್ಮ ಹೋದ ವಿಷಯ ಏನಾಗಿದೆಯೋ ಎಂದು ಕಾತುರದಿಂದ ಅವರು ಏಳುವುದನ್ನೇ ಕಾಯುತ್ತಿದ್ದ.
ಒಂದೆರೆಡು ತಾಸಿನ ನಂತರ ಅವರಮ್ಮ ಎದ್ದು ಆಚೆ ಬಂದು ಶರತ್ ನನ್ನು ಕುರಿತು ಏನೋ ಸಮಯ ಎಂಟಾಯಿತು ಇನ್ನೂ ಕೆಲಸಕ್ಕೆ ಹೋಗದೆ ಏನು ಮಾಡ್ತಾ ಇದ್ದೀಯ. ಯಾಕೆ ಇವತ್ತು ರಜಾನ?
ಇಲ್ಲಮ್ಮ, ನೀವು ಏಳುವುದನ್ನೇ ಕಾಯುತ್ತಿದ್ದೆ. ನೀವು ಹೋದ ಕೆಲಸ ಏನಾಯ್ತು ಎಂದು ಕೇಳಿಕೊಂಡು ಹೋಗೋಣ ಎಂದು ಕಾಯುತ್ತಿದ್ದೆ. ಹೇಗಿತ್ತು ಹುಬ್ಬಳ್ಳಿ? ಸೌಮ್ಯ ಅವರ ಮನೆ ಹೇಗಿತ್ತು? ಸೌಮ್ಯ ಅವರ ಅಪ್ಪ ಅಮ್ಮನ ಜೊತೆ ಮಾತಾಡಿದ್ರ? ಯಾವಾಗ ಮಾಡುವೆ ಅಂತ ನಿಶ್ಚಯ ಆಯ್ತಾ? ಹೇಳಮ್ಮ ಏನಾಯ್ತು ಅಂತ. ನನಗೆ ರಾತ್ರಿಯಿಂದ ಇದೆ ಯೋಚನೆಯಲ್ಲಿ ನಿದ್ದೆ ಸಹ ಬಂದಿಲ್ಲ. ಏನಾಯ್ತು ಅಂತ ಹೇಳಮ್ಮ.
ಶರತ್ ನಿಮ್ಮ ಅಪ್ಪನಿಗೆ ಅವರ ಸಂಬಂಧ ಇಷ್ಟ ಆಗಿಲ್ಲ. ಸುಮ್ಮನೆ ಅವಳನ್ನು ಮರೆತು ನಿಮ್ಮಪ್ಪ ಯಾವ ಹುಡುಗಿಯನ್ನು ತೋರಿಸುತ್ತಾರೋ ಅವಳನ್ನು ಮದುವೆ ಆಗು. ಸರಿ ಸರಿ ಈಗ ಕೆಲಸಕ್ಕೆ ಹೊರಡು ಲೇಟಾಯ್ತು...
ಅಮ್ಮ ಏನು ಹೇಳ್ತಾ ಇದ್ದೀಯ...ಏತಕ್ಕೆ ಇಷ್ಟ ಆಗಿಲ್ಲ ಅವರ ಸಂಬಂಧ? ಕಾರಣ ಏನು? ನೀವಿಬ್ಬರೂ ಒಪ್ಪಿದದ ಮೇಲೆ ತಾನೇ ಅವರ ಮನೆಗೆ ಮಾತಾಡಲು ಹೋಗಿದ್ದು. ಈಗ ನೋಡಿದರೆ ಇಷ್ಟ ಆಗಿಲ್ಲ ಅಂದರೆ ಏನಮ್ಮ ಅರ್ಥ? ಮೊದಲು ಏತಕ್ಕೆ ಇಷ್ಟ ಆಗಿಲ್ಲ ಅಂತ ಕಾರಣ ಹೇಳಿ.
ನೋಡು ಶರತ್ ಇಲ್ಲಿ ನಾವು ಅವಳನ್ನು ಒಪ್ಪಿದ್ದು ನಿಜಾನೆ. ಆದರೆ ಅಲ್ಲಿ ಮಾತಾಡಿ ಬಂದ ಮೇಲೆ ನಿಮ್ಮಪ್ಪನಿಗೆ ಏನನ್ನಿಸಿತೋ ಏನೋ ವಾಪಸ್ ಬರುವಾಗ ಬಸ್ಸಿನಲ್ಲಿ ಹೇಳಿದರು ಈ ಸಂಬಂಧ ನಮಗೆ ಸರಿ ಹೋಗಲ್ಲ ಅಂತ. ನಾನು ಕಾರಣ ಏನು ಅಂತ ಕೇಳಿದ್ದಕ್ಕೆ ಕಾರಣ ಏನು ಅಂತ ಕೇಳಬೇಡ ನನಗೆ ಇಷ್ಟ ಆಗಿಲ್ಲ ಅಷ್ಟೇ ಎಂದರು. ನಿಮ್ಮಪ್ಪನ ಎದುರು ವಾದಿಸುವಷ್ಟು ಧೈರ್ಯ ನನಗೆ ಇಲ್ಲಪ್ಪ. ನೀನು ಅಷ್ಟೇ ಈಗ ಅವರನ್ನು ಏನೂ ಕೇಳಬೇಡ. ಕೆಲಸಕ್ಕೆ ಹೋಗಿ ಬಂದ ಮೇಲೆ ಮಾತಾಡು ಎಂದು ಅಡಿಗೆ ಮನೆಗೆ ಹೋದರು.
ಶರತ್ ಗೆ ದಿಕ್ಕೇ ತೋಚಲಿಲ್ಲ. ಯಾಕೆ ಹೀಗಾಯ್ತು? ಏನು ಕಾರಣ ಇರಬಹುದು? ಎಂದು ಆಲೋಚಿಸುತ್ತ ಆಫೀಸಿಗೆ ಹೊರಟ.
_______________________________________________________________________________________________________________________________________
ಶರತ್ ಮತ್ತು ಸೌಮ್ಯ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಾಲೇಜಿನಲ್ಲಿ ಶುರುವಾದ ಗೆಳೆತನ ಮುಂದುವರಿದು ಪ್ರೇಮಕ್ಕೆ ತಿರುಗಿ ನಾಲ್ಕು ವರ್ಷ ಆಗಿತ್ತು. ಕಾಲೇಜ್ ಮುಗಿದ ಮೇಲೆ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ನಾಲ್ಕು ವರ್ಷಗಳಿಂದ ಮನೆಯವರಿಗೆ ವಿಷಯ ತಿಳಿಯದಂತೆ ಕಾಪಾಡಿಕೊಂಡು ಬಂದಿದ್ದರು. ಯಾವಾಗ ಸೌಮ್ಯಳ ಮನೆಯಲ್ಲಿ ವರಾನ್ವೇಷಣೆ ಶುರುವಾಯಿತೋ ಆಗ ಇವರಿಬ್ಬರ
ಪ್ರೀತಿಯ ವಿಷಯ ತಿಳಿಸುವುದು ಅನಿವಾರ್ಯವಾಗಿತ್ತು.
ಸೌಮ್ಯ ತನ್ನ ಮನೆಯಲ್ಲಿ ವಿಷಯ ತಿಳಿಸಿದಾಗ ಅವರ ಮನೆಯಲ್ಲಿ ಯಾವುದೇ ಪ್ರತಿರೋಧ ಎದುರಾಗಲಿಲ್ಲ. ಸೌಮ್ಯಳ ಅಪ್ಪ ಅಮ್ಮ ಹೇಳಿದ್ದು ಒಂದೇ ಮಾತು ನೋಡಮ್ಮ ನೀನು ಯಾರನ್ನಾದರೂ ಮದುವೆ ಆಗು. ನೀನು ಚೆನ್ನಾಗಿದ್ದರೆ ಅಷ್ಟೇ ಸಾಕು. ಜೀವನ ಪೂರ್ತಿ ಕಳೆಯಬೇಕಾದವಳು ನೀನು. ನಿನಗೆ ಅವನು ನಿನ್ನ ಜೀವನ ಪೂರ್ತಿ ಸಂಗಾತಿಯಾಗಿ ಇರುತ್ತಾನೆ ಎಂಬ ನಂಬಿಕೆ ನಿನಗಿದ್ದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ತಿಳಿಸಿದರು.
ಆದರೆ ಶರತ್ ನ ಮನೆಯಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಶರತ್ ಮನೆಯಲ್ಲಿ ಪ್ರೀತಿಯ ವಿಷಯ ತಿಳಿಸುತ್ತಿದ್ದಂತೆ ಶರತ್ ಗೆ ಎದುರಾದ ಮೊಟ್ಟ ಮೊದಲ ಭಯಂಕರ
ಪ್ರಶ್ನೆ ಅವಳದು ಯಾವ ಜಾತಿ. ಅದಕ್ಕೆ ಶರತ್ ಅವರು ಹಿಂದೂಗಳು ಎಂದ. ಅವರಪ್ಪ ಸ್ವಲ್ಪ ಗಂಭೀರವಾಗಿ ಹಿಂದೂಗಳು ಎಂದು ನನಗೂ ಗೊತ್ತು ಯಾವ ಜಾತಿ ಎಂದು ನಾನು ಕೇಳಿದ್ದು. ಅಪ್ಪ ಅದೂ ಅದೂ ಅವರು ಲಿಂಗಾಯತರು ಎಂದ. ಕೂಡಲೇ ಶರತ್ ಅವರಪ್ಪ ಒಂದೇ ಮಾತಿಗೆ ಈ ಮದುವೆ ಸಾಧ್ಯವಿಲ್ಲ ಎಂದರು. ಅದಕ್ಕೆ ಶರತ್ ಅಪ್ಪ ಯಾಕಪ್ಪ ಈ ಮದುವೆ ಸಾಧ್ಯವಿಲ್ಲ?
ನೋಡು ಶರತ್ ನಮ್ಮದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ. ಅವರು ಲಿಂಗಾಯತರು ಅದಕ್ಕೆ ಸಾಧ್ಯವಿಲ್ಲ. ಅಪ್ಪ ಅವರೂ ಸಂಪ್ರದಾಯಸ್ಥರು, ಅವರೂ ದಿನಾಲು ಪೂಜೆ ಪುನಸ್ಕಾರ ಎಂದು ಮಾಡುತ್ತಾರೆ. ನಮ್ಮಂತೆ ಅವರೂ ಎಲ್ಲ ಹಬ್ಬಗಳನ್ನು ಆಚರಿಸುತ್ತಾರೆ, ಅವರ ಮನೆಯಲ್ಲೂ ಮಾಂಸಾಹಾರ ನಿಷಿದ್ಧ. ಇಷ್ಟೆಲ್ಲಾ ಇದ್ದರೂ ಯಾಕಪ್ಪ ಈ ಮದುವೆ ಸಾಧ್ಯವಿಲ್ಲ ಎಂದು ಕೇಳಿದ್ದಕ್ಕೆ ಅವರ ತಂದೆ, ನೋಡು ಶರತ್, ಇದರ ಬಗ್ಗೆ ಹೆಚ್ಚಿನ ಮಾತು ಬೇಡ ಸುಮ್ಮನೆ ನಾನು ಹೇಳಿದಂತೆ ಕೇಳು ಅಷ್ಟೇ ಎಂದು ಅಲ್ಲಿಂದ ಎದ್ದು ಹೊರಟರು.
ಅಮ್ಮ ನೀನಾದರೂ ಅಪ್ಪನಿಗೆ ಹೇಳಮ್ಮ ಸೌಮ್ಯ ತುಂಬಾ ಒಳ್ಳೆಯ ಹುಡುಗಿ. ಅವರ ಮನೆಯಲ್ಲೂ ಒಪ್ಪಿದ್ದಾರೆ. ನೀವು ಒಪ್ಪುವುದಷ್ಟೇ ಬಾಕಿ ಅಮ್ಮ.
ಪ್ಲೀಸ್ ಅಮ್ಮ ಅಪ್ಪನಿಗೆ ಹೇಳಮ್ಮ. ನೋಡು ಶರತ್, ನಿಮ್ಮಪ್ಪನ ಎದುರು ಮಾತಾಡಕ್ಕೆ ನನಗೆ ಸಾಧ್ಯ ಇಲ್ಲ. ನೀನುಂಟು ನಿಮ್ಮಪ್ಪ ಉಂಟು ನೀನು ಯಾರನ್ನು ಮದುವೆ ಆದರೂ ನನಗೇನು ಅಭ್ಯ೦ತರ ಇಲ್ಲಪ್ಪ. ಆದ್ದರಿಂದ ಇದರಲ್ಲಿ ದಯವಿಟ್ಟು ನನ್ನನ್ನು ಮಾತ್ರ ಎಳೆಯಬೇಡ.
ನೀನೆ ಯಾವಾಗಲಾದರೂ ನಿಮ್ಮಪ್ಪನ ಮೂಡ್ ಚೆನ್ನಾಗಿರುವಾಗ ಅವರಿಗೆ ಬಿಡಿಸಿ ಹೇಳು.
ಅಮ್ಮ ಒಂದಂತೂ ನಿಜ ನಾನು ಅವಳನ್ನು ಬಿಟ್ಟು ಇನ್ಯಾರನ್ನೂ ಮದುವೆ ಆಗುವುದಿಲ್ಲ. ಒಂದು ವೇಳೆ ನೀವೇನಾದರೂ ಬಲವಂತ ಮಾಡಿದರೆ ಅದರ ಪರಿಣಾಮ ತುಂಬಾ ಕೆಟ್ಟದಾಗಿರುತ್ತದೆ. ಅಪ್ಪನಿಗೆ ಹೇಳು ಈ ಮಾತನ್ನು.
ಒಂದೆರಡು ತಿಂಗಳುಗಳ ಕಾಲ ಸತತ
ಪರಿಶ್ರಮದಿಂದಾಗಿ ಅವರ ಅಪ್ಪನನ್ನು ಒಪ್ಪಿಸುವುದರಲ್ಲಿ ಶರತ್ ಸಫಲನಾದ. ಅವರಪ್ಪ ಒಪ್ಪಿದ ಮೇಲೆ ಸೌಮ್ಯಳನ್ನು ಮನೆಗೆ ಕರೆದುಕೊಂಡು ಬಂದು ಅವಳನ್ನು ಪರಿಚಯಿಸಿ ಅವರ ಆಶೀರ್ವಾದ ಕೊಡಿಸಿದ್ದ.
ಸೌಮ್ಯ ಹೆಸರಿಗೆ ತಕ್ಕಂತೆ ಸೌಮ್ಯ ಸ್ವಭಾವ ಹೊಂದಿದ್ದಳು. ಆ ಸ್ವಭಾವದಿಂದ ಶರತ್ ನ ಅಪ್ಪ ಅಮ್ಮ ಅವಳನ್ನು ಬಹಳ ಮೆಚ್ಚಿಕೊಂಡಿದ್ದರು. ಸೌಮ್ಯಳ ಮನೆಯವರ ಬಗ್ಗೆ ವಿಚಾರಿಸಿದಾಗ ಸೌಮ್ಯಳ ತಂದೆ ಹುಬ್ಬಳ್ಳಿಯಲ್ಲಿ ತಮ್ಮದೇ ಆದ ಟ್ರಾನ್ಸ್ಪೋರ್ಟ್ ಕಂಪನಿ ಒಂದನ್ನು ಹೊ೦ದಿದ್ದಾರೆಂದು ಅವರ ತಾಯಿ ಗೃಹಿಣಿ ಎಂದು ತಿಳಿಸಿದಳು. ನಿಮ್ಮ ತಂದೆಯ ಜೊತೆ ಮಾತಾಡಬೇಕು ಎಂದು ಹೇಳಿ ಅವರ ನಂಬರ್ ತೆಗೆದುಕೊಂಡು ಕರೆ ಮಾಡಿ ಅವರ ಜೊತೆ ಮಾತನಾಡಿ ಒಂದು ದಿನ ಹುಬ್ಬಳ್ಲಿಗೆ ಬಂಧು ಮುಂದಿನ ಕೆಲಸಗಳ ಬಗ್ಗೆ ಮಾತನಾಡುತ್ತೇವೆ ಎಂದು ತಿಳಿಸಿದ್ದರು.
ಶರತ್ ನ ಸಂತಸಕ್ಕೆ ಪಾರವೇ ಇರಲಿಲ್ಲ. ಇನ್ನೇನು ಅಪ್ಪ ಅಮ್ಮ ಹುಬ್ಬಳ್ಳಿಗೆ ಹೋಗಿ ಬಂದ ನಂತರ ನಿಶ್ಚಿತಾರ್ಥ ನಂತರ ಮದುವೆ ಎಂದು ಸಂಭ್ರಮದಲ್ಲಿ ತೇಲಾಡುತ್ತಿದ್ದ. ಅಂತೂ ಇಂತೂ ನಿಮ್ಮಪ್ಪನನ್ನು ಗೆದ್ದು ಬಿಟ್ಟೆ ಎಂದು ಅವರಮ್ಮ ಶರತ್ ನ ರೇಗಿಸುತ್ತಿದ್ದರು. ಅವರು ಹುಬ್ಬಳ್ಳಿಗೆ ಹೋಗುವ ದಿನಾಂಕ ನಿಗದಿ ಪಡಿಸಿದ ಮೇಲೆ ಇಬ್ಬರೇ ಹೋಗುತ್ತಿರುವುದು ಗೊತ್ತಾಗಿ ನಾನು ಬರುತ್ತೇನೆ ಎಂದ ಶರತ್ ನನ್ನು ಬೇಡವೆಂದು ನಿಲ್ಲಿಸಿದರು. ಮೊದಲು ನಾವು ಹೋಗಿ ಮಾತನಾಡಿ ಬರುತ್ತೇವೆ. ಆಮೇಲೆ ಹೋಗಿ ಬರುವುದು ಇದ್ದೆ ಇರುತ್ತದೆ. ಸ್ವಲ್ಪ ದಿನ ಕಾಯಪ್ಪ ಏನೂ ಆಗಲ್ಲ ಎಂದು ಶರತ್ ನ ತಾಯಿ ಚುಡಾಯಿಸಿದರು.
ಶರತ್ ನ ಅಪ್ಪ ಅಮ್ಮ ಇಬ್ಬರೂ ಒಳ್ಳೆಯ ದಿನ ನೋಡಿ ಹೂವು ಹಣ್ಣು ಸಮೇತ ಹುಬ್ಬಳ್ಳಿಗೆ ಹೊರಟರು. ಇತ್ತ ಶರತ್ ಮತ್ತು ಸೌಮ್ಯ ಇಬ್ಬರೂ ಬೆಳಗಿನಿಂದ ಅವರ ಮುಂದಿನ ಜೀವನದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ನಿಶ್ಚಿತಾರ್ಥ ಯಾವಾಗ, ಮದುವೆ ಯಾವಾಗ ಇದ್ದರೆ ಒಳ್ಳೆಯದು? ಇಬ್ಬರಿಗೂ ರಜೆ ಸಿಗಬೇಕು, ಯಾರ್ಯಾರನ್ನು ಕರೆಯಬೇಕು, ಹನಿಮೂನ್ ಗೆ ಎಲ್ಲಿ ಹೋಗಬೇಕು ಎಂದೆಲ್ಲ ಪ್ಲಾನ್ ಮಾಡಿಕೊಳ್ಳುತ್ತಿದ್ದರು. ಸಂಜೆಯ ವೇಳೆಗೆ ಶರತ್ ನ ತಾಯಿ ಫೋನ್ ಮಾಡಿ ನಾವು ರಾತ್ರಿಯ ಬಸ್ ಗೆ ಹೊರಟು ಬೆಳಿಗ್ಗೆ ಅಲ್ಲಿಗೆ ಬರುವುದಾಗಿ ತಿಳಿಸಿದರು. ಹೋದ ಕೆಲಸ ಏನಾಯ್ತು ಎಂದಿದ್ದಕ್ಕೆ ಬಂದ ಮೇಲೆ ತಿಳಿಸುತ್ತೇನೆ ಎಂದಿದ್ದರು.
------------------------------------------------------------------------------------------------------------------------------------------------------------------------------------------------------------------------------------------
ಬೆಳಿಗ್ಗೆ ಅಮ್ಮ ಹೇಳಿದ ಮಾತಿನಿಂದ ತಲೆ ಕೆಡಿಸಿಕೊಂಡಿದ್ದ ಶರತ್ ಗೆ ಆಫೀಸಿನಲ್ಲಿ ಸೌಮ್ಯ ಸಿಕ್ಕು ಏನೋ ಶರತ್ ಬೆಳಿಗ್ಗೆ ಐದು ಗಂಟೆಗೆಲ್ಲ ಕಾಲ್ ಮಾಡಿದ್ದೆ. ಏನು ವಿಷಯ? ಅಪ್ಪ ಅಮ್ಮ ಊರಿನಿನ ಬಂದರ? ಏನೆಂದು ಹೇಳಿದರು ಯಾವಾಗ ನಿಶ್ಚಿತಾರ್ಥ ಅಂತೆ? ಮದುವೆ ಯಾವಾಗ ಅಂತೆ ಎಂದು ಒಂದೇ ಉಸಿರಿನಲ್ಲಿ ಕೇಳುತ್ತಿದ್ದಳು. ಶರತ್ ಗೆ ಅವಳ ಯಾವ ಮಾತು ಕೇಳಲೇ ಇಲ್ಲ. ತನ್ನ ಪಾಡಿಗೆ ತಾನು ಏನೋ ಯೋಚನೆ ಮಾಡುತ್ತಾ ನಿಂತಿದ್ದವನನ್ನು ಕೈ ಹಿಡಿದು ಅಲ್ಲಾಡಿಸಿದಳು ಸೌಮ್ಯ. ಏನ್ ಸರ್ ನಾನು ಮಾತಾಡ್ತಾನೆ ಇದ್ದೀನಿ ತಾವು ಯಾವ ಲೋಕದಲ್ಲಿ ಇದ್ದೀರಾ? ಆಗಲೇ ಮುಂದಿನ ದಿನಗಳ ಬಗ್ಗೆ ಕನಸು ಕಾಣ್ತಾ ಇದ್ದೀರಾ?
ಸೌಮ್ಯ, ಮೊದಲು ನೀನು ನಿಮ್ಮ ಮನೆಗೆ ಫೋನ್ ಮಾಡಿ ನೆನ್ನೆ ಅಲ್ಲಿ ಏನು ನಡೆಯಿತು ಎಂದು ಕೇಳು. ಆಮೇಲೆ ನಾನು ಮುಂದಿನ ವಿಷಯವನ್ನು ತಿಳಿಸುತ್ತೇನೆ ಎಂದ ಶರತ್. ಸೌಮ್ಯ ಕೂಡಲೇ ಮನೆಗೆ ಫೋನ್ ಮಾಡಿ ಎಲ್ಲವನ್ನು ತಿಳಿದುಕೊಂಡು ಶರತ್ ಕಡೆ ತಿರುಗಿ ಎಲ್ಲ ಚೆನ್ನಾಗೆ ಇತ್ತಂತೆ. ನಿಮ್ಮಪ್ಪ ಅಮ್ಮ ಇಬ್ಬರೂ ನಗು ನಗುತ್ತಲೇ ಮಾತಾಡಿದರಂತೆ. ಆದರೆ ನಿಶ್ಚಿತಾರ್ಥ ಯಾವಾಗ ಮಾಡೋಣ ಎಂದಾಗ ಮಾತ್ರ ನಾವು ಊರಿಗೆ ಹೋದ ಮೇಲೆ ದಿನಾಂಕ ತಿಳಿಸುತ್ತೇವೆ ಎಂದರಂತೆ. ಯಾಕೋ ಏನಾಯ್ತೋ?
ಸೌಮ್ಯ ಅದೇನಾಯ್ತೋ ಏನೋ ಗೊತ್ತಿಲ್ಲ ಅಮ್ಮ ಹೇಳಿದ್ರು ಅಪ್ಪನಿಗೆ ಈ ಸಂಬಂಧ ಇಷ್ಟ ಆಗಿಲ್ಲವಂತೆ ಎಂದು ಹೇಳಿದ ತಕ್ಷಣ ಸೌಮ್ಯಳ ಮುಖದಲ್ಲಿ ಅಲ್ಲಿಯವರೆಗೂ ಇದ್ದ ನಗು ಮಾಯವಾಯಿತು. ಕಣ್ಣುಗಳಲ್ಲಿ ನೀರು ತುಂಬಿಕೊಂಡು ಗದ್ಗದಿತಳಾಗಿ ಯಾಕಂತೆ ಶರತ್ ಏನಾಯ್ತಂತೆ? ಗೊತ್ತಿಲ್ಲ ಸೌಮ್ಯ ನೆನ್ನೆ ವಾಪಸ್ ಬಸ್ಸಿನಲ್ಲಿ ಬರುವಾಗ ಅಮ್ಮನ ಬಳಿ ಈ ಸಂಬಂಧ ಇಸ್ಥವಿಲ್ಲ ಎಂದು ಹೇಳಿ ಕಾರಣ ಕೇಳಬೇಡ ಎಂದರಂತೆ. ನನಗಂತೂ ಬೆಳಗಿನಿಂದ ತಲೆ ಕೆಟ್ಟು ಹೋಗಿದೆ. ನೀನೇನೂ ಚಿಂತೆ ಮಾಡಬೇಡ ಸೌಮ್ಯ ಇಂದು ಸಂಜೆ ನಾನು ಅಪ್ಪನ ಬಳಿ ಮಾತಾಡುತ್ತೇನೆ. ನೀನು ಸಮಾಧಾನವಾಗಿರು ಎಂದು ಅವಳ ತಲೆಯನ್ನು ನೇವರಿಸಿದ.
ಸಂಜೆ ಶರತ್ ಮನೆಗೆ ಬಂದಾಗ ಅವನ ತಂದೆ ಮನೆಯಲ್ಲಿರಲಿಲ್ಲ. ಅವನು ಬಂದ ಅರ್ಧ ಗಂಟೆಯ ನಂತರ ಕೈಯಲ್ಲಿ ಒಂದು ಕವರ್ ಹಿಡಿದುಕೊಂಡು ಬಂದರು. ಬಂದವರೇ ಸೀದಾ ಆ ಕವರನ್ನು ಅವರ ಪತ್ನಿಯ ಕೈಗೆ ಕೊಡುತ್ತ ನೋಡು ಇದರಲ್ಲಿ ಹುಡುಗಿ ಫೋಟೋ ಇದೆ ಅವನಿಗೆ ತೋರಿಸು ಬರುವ ಭಾನುವಾರ ಹುಡುಗಿಯ ಕಡೆಯವರು ಮನೆಗೆ ಬರುತ್ತಾರೆ ಎಂದು ಹೇಳು ಅವನಿಗೆ ಎಂದು ತಮ್ಮ ರೂಮಿಗೆ ಹೋಗಲು ಅನುವಾದರು. ಅವರಿಗೆ ಅಡ್ಡ ಬಂದ ಶರತ್ ಅಪ್ಪ ನಾನು ಮುಂಚೆಯೇ ಹೇಳಿದ್ದೇನೆ ಸೌಮ್ಯಳನ್ನು ಬಿಟ್ಟರೆ ನಾನು ಬೇರೆ ಯಾರನ್ನೂ ಮದುವೆ ಆಗುವುದಿಲ್ಲ. ನಿಮಗೆ ಏಕೆ ಅವರ ಸಂಬಂಧ ಇಷ್ಟ ಆಗಲಿಲ್ಲ ನನಗೆ ಕಾರಣ ಹೇಳಿ.
ಅವನನ್ನು ಪಕ್ಕಕ್ಕೆ ಸರಿಸಿ ದಾರಿ ಮಾಡಿಕೊಂಡು ರೂಮಿಗೆ ಹೋಗಿ ನೋಡು ಕಾರಣ ಎಲ್ಲ ಕೇಳಬೇಡ, ಮುಂಚೆ ಆಗಲಿ ಎಂದು ಒಪ್ಪಿಕೊಂಡೆ ತಾನೇ ಈಗ ಬೇಡ ಎನ್ನುತ್ತಿದ್ದೇನೆ ಅಷ್ಟೇ ಬಿಟ್ಟುಬಿಡು. ಅಪ್ಪ ನಾನು ಅದನ್ನೇ ಕೇಳುತ್ತಿರುವುದು ಆಗ ಆಗಲಿ ಎಂದು ಈಗ ಯಾಕೆ ಬೇಡ ಎನ್ನುತ್ತಿದ್ದೀರಾ?
ಹೌದು ಕಣೋ ಮುಂಚೆ ಸೌಮ್ಯಳನ್ನು ನೋಡಿ ಆಗಲಿ ಎಂದಿದ್ದೆ. ಆದರೆ ಅವರ ಮನೆಯವರನ್ನು ನೋಡಿದ ಮೇಲೆ ಬೇಡ ಎನ್ನುತ್ತಿದ್ದೇನೆ. ಸುಮ್ಮನೆ ನಾನು ತಂದಿರುವ ಹುಡುಗಿಯ ಫೋಟೋ ನೋಡಿ ಅವಳನ್ನು ಒಪ್ಪಿಕೊ. ಅಪ್ಪ ಅದೇನು ಅಂತ ಸರಿಯಾಗಿ ಬಿಡಿಸಿ ಹೇಳಿ ಸುಮ್ಮನೆ ಒಗಟೊಗಟಾಗಿ ಮಾತಾಡಬೇಡಿ. ಅವರ ಮನೆಯವರು ನಿಮಗೆ ಸರಿಯಾಗಿ ಸತ್ಕಾರ ಮಾಡಲಿಲ್ಲವ? ಏನು ತೊಂದರೆ ಎಂದು ಹೇಳಿ?
ಅವರಪ್ಪ ಪಂಚೆ ಉಡುತ್ತ ಆಚೆ ಬಂದು ಸೋಫಾದ ಮೇಲೆ ಕುಳಿತು ಒಮ್ಮೆ ಶರತ್ ನ ಮುಖ ನೋಡಿ ಪೇಪರ್ ಕೈಗೆತ್ತಿಕೊಂಡು ಅದನ್ನು ನೋಡುತ್ತಾ ನನಗೆ ಅವರ ಮನೆಯವರ ಮಾತು ಸರಿ ಹೋಗಲಿಲ್ಲ. ಬಹಳ ಒರಟು ಜನ. ನಾವು ಅಲ್ಲಿರುವಾಗ ಯಾರೋ ಒಂದಿಬ್ಬರು ಮನೆಗೆ ಬಂದರು ಅವರನ್ನು ನನ್ನೆದುರಲ್ಲೇ ಲೇ ನಿಮ್ಮವ್ನ, ಹಲ್ಕಟ್ ಸೂ...ಮಗನೆ, ಅಂತ ನಗು ನಗುತ್ತ ಮಾತಾಡಿಸಿದರು. ಅದಕ್ಕೆ ಆ ಬಂದವರು ಏನೂ ಇಲ್ಲಲೇ ಹುಚ್ ಸೂ...ಮಗ್ನೆ, ಅಂತ ಮಾತಾಡಿಸಿದರು. ಇನ್ಯಾರೋ ಫೋನ್ ಮಾಡಿದರೆ ಅವರೊಡನೆ ಕೂಡ ಹಾಗೆ ಮಾತಾಡಿದರು. ನಾಳೆ ಅಕಸ್ಮಾತ್ ಮದುವೆಯಲ್ಲಿ ನಮ್ಮವರು ಏನಾದರೂ ಕೇಳಿದರೆ ಅದಕ್ಕೂ ಹಾಗೆ ಬೈದರೆ ನಮ್ಮ ಮರ್ಯಾದೆ ಏನು ಆಗಬೇಕು. ಮದುವೆ ಆದ ಮೇಲೆ ನಾವು ಅವರ ಮನೆಗೆ ಓಡಾಡುತ್ತಿರಬೇಕು. ಆಮೇಲೆ ಯಾಕೆ ಪದೇ ಪದೇ ಬರ್ತೀರಾ ಎಂದು ಹಾಗೆಲ್ಲ ಬೈದರೆ ನಮ್ಮ ಗತಿ ಏನು. ಅದಕ್ಕೆ ಅವರ ಸಹವಾಸವೇ ಬೇಡ. ದಿನ ಬೆಳಗಾದರೆ ಅವರ ಕೈಲಿ ಯಾಕೆ ಬೈಸಿ ಕೊಳ್ಳಬೇಕು ಬೇಡಪ್ಪ. ಇಲ್ಲೇ ಒಂದೊಳ್ಳೆ ಹುಡುಗಿ ನೋಡ್ತೀನಿ. ಅವರನ್ನೇ ಮದುವೆ ಆಗು ಎಂದರು.
ಅವರ ಮಾತು ಕೇಳಿ ಶರತ್ ನಕ್ಕು ಬಿಟ್ಟ ಅಪ್ಪ ಅಷ್ಟೇ ತಾನೇ ನಿಮ್ಮ ಸಮಸ್ಯೆ. ಒಂದು ಕೆಲಸ ಮಾಡಿ ನಾನು ಸೌಮ್ಯ ಅವರ ಅಪ್ಪ ಅಮ್ಮನನ್ನು ಇಲ್ಲಿ ಗೆ ಕರೆಸುತ್ತೀನಿ. ನೀವೇ ಒಮ್ಮೆ ಅವರೊಡನೆ ಈ ವಿಷಯ ಮಾತಾಡಿ ಎಂದು ಸೌಮ್ಯಳ ತಂದೆಗೆ ಫೋನ್ ಇಲ್ಲಿಗೆ ಬನ್ನಿ ಮಾತನಾಡುವುದಿದೆ ಎಂದು ಹೇಳಿದ.
ಮರುದಿನ ಬೆಳಿಗ್ಗೆಯೇ ಅವರು ಬೆಂಗಳೂರಿಗೆ ಬಂದರು. ಮನೆಗೆ ಬಂದವರು ನಡೆದ ವಿಷಯವನ್ನೆಲ್ಲ ಕೇಳಿ ಬಿದ್ದು ಬಿದ್ದು ನಗಲು ಶುರು ಮಾಡಿದರು. ನಂತರ ಶರತ್ ಅವರ ಅಪ್ಪನನ್ನು ಕುರಿತು. ನೋಡಿ ಬೀಗರೇ ದಯವಿಟ್ಟು ತಪ್ಪು ತಿಳಿಯಬೇಡಿ. ನಮ್ಮ ಭಾಷೆ ಒರಟು ಅಷ್ಟೇ ಆದರೆ ನಮ್ಮ ಮನಸ್ಸು ಮೃದು. ಆಮೇಲೆ ನಮಗೆ ಯಾರು ಬಹಳ ಆಪ್ತರಿರುತ್ತಾರೋ ಅಂತಹವರ ಬಳಿಯಷ್ಟೇ ನಾವು ಹಾಗೆ ಮಾತನಾಡುವುದು. ನೀವು ಹೇಗೆ ನಿಮ್ಮ ಆಪ್ತರನ್ನು ಹಾಯ್, ಹಲೋ ಎಂದು ಸಂಭೋಧಿಸುತ್ತೀರೋ ನಾವು ಹಾಗೆ ಅವರನ್ನು ಆ ಮಾತಿನಿಂದ ಸಂಭೋಧಿಸುತ್ತೇವೆ. ನಾವು ಹಾಗೆ ಮಾತಾಡಿದರಷ್ಟೇ ಅವರು ನಮ್ಮನ್ನು ಆಪ್ತರಂತೆ ಕಾಣುತ್ತಾರೆ. ಇಲ್ಲವಾದರೆ ಅಪರಿಚಿತರಂತೆ
ವರ್ತಿಸುತ್ತಾರೆ. ಇನ್ನೊಂದು ವಿಷಯವೆಂದರೆ ನಮಗೂ ಸ್ವಲ್ಪ ಕಾಮನ್ ಸೆನ್ಸ್ ಅನ್ನೋದು ಇದೆ. ಯಾರೊಡನೆ ಯಾವಾಗ ಹೇಗೆ ಮಾತಾಡಬೇಕು ಎಂಬ ಅರಿವಿದೆ. ತಾವು ದಯವಿಟ್ಟು ಅದರ ಬಗ್ಗೆ ಎಲ್ಲ ತಲೆ ಕೆಡಿಸಿಕೊಳ್ಳದೆ ಆ ಪ್ರೇಮಿಗಳನ್ನು ಒಂದಾಗಲು ಅವಕಾಶ ಮಾಡಿಕೊಡಿ ಎಂದರು.
ಅವರ ವಿವರಣೆ ಕೇಳಿದ ಮೇಲೆ ಶರತ್ ಅವರ ತಂದೆ ತಮ್ಮ ನಿರ್ಧಾರವನ್ನು ಬದಲಿಸಿ ನಗು ಮೊಗದೊಂದಿಗೆ ಅವರನ್ನು ಮಾತಾಡಿಸಿ ಕೂಡಲೇ ಪುರೋಹಿತರಿಗೆ ಕರೆ ಮಾಡಿ ಒಳ್ಳೆಯ ದಿನಾಂಕ ನೋಡಿ ನಿಶ್ಚಿತಾರ್ಥ ಹಾಗೂ ಮದುವೆಯ
ದಿನಾಂಕ ನಿಗದಿ ಪಡಿಸಿದರು. ಎಲ್ಲರೂ ಸಂತೋಷದಿ೦ದ ಸಿಹಿ ಹಂಚಿಕೊಂಡರು. ಊಟ ಮುಗಿಸಿ ಸೌಮ್ಯಳ ಅಪ್ಪ ಅಮ್ಮ ಹೊರಡಲು ಅನುವಾದರು. ಅವರನ್ನು ಬೀಳ್ಕೊಡಲು ಶರತ್ ಕುಟುಂಬ ಸಮೇತ ಬಾಗಿಲ ತನಕ ಬಂದರು. ಇನ್ನೇನು ಅಲ್ಲಿಂದ ಹೊರಡಬೇಕು ಎನ್ನುವಷ್ಟರಲ್ಲಿ ಸೌಮ್ಯಳ ತಂದೆಯ ಮೊಬೈಲ್ ಗೆ ಕರೆಯೊಂದು ಬಂದಿತು.
ಅವರು ಕರೆಯನ್ನು ಸ್ವೀಕರಿಸಿ ಹೇಳೋ ನಿಮ್ಮವ್ನ...ಹಲ್ಕಟ್ ಸೂ...ಮಗ್ನೆ ಎಂದು ನಾಲಿಗೆ ಕಚ್ಚಿಕೊಂಡು ಹಿಂದೆ ತಿರುಗಿ ನೋಡಿದರು...ಶರತ್ ಅವರ ಕುಟುಂಬ ಮುಸಿ ಮುಸಿ ನಗುತ್ತಿದ್ದರು
Comments
ಉ: ಬೆಂಗಳೂರ್ ಹುಡ್ಗ..ಹುಬ್ಬಳ್ಳಿ ಹುಡ್ಗಿ (ಕಥೆ) @ಜಯಂತ್ ಅವ್ರೇ
In reply to ಉ: ಬೆಂಗಳೂರ್ ಹುಡ್ಗ..ಹುಬ್ಬಳ್ಳಿ ಹುಡ್ಗಿ (ಕಥೆ) @ಜಯಂತ್ ಅವ್ರೇ by venkatb83
ಉ: ಬೆಂಗಳೂರ್ ಹುಡ್ಗ..ಹುಬ್ಬಳ್ಳಿ ಹುಡ್ಗಿ (ಕಥೆ) @ಜಯಂತ್ ಅವ್ರೇ
ಉ: ಬೆಂಗಳೂರ್ ಹುಡ್ಗ..ಹುಬ್ಬಳ್ಳಿ ಹುಡ್ಗಿ (ಕಥೆ)
In reply to ಉ: ಬೆಂಗಳೂರ್ ಹುಡ್ಗ..ಹುಬ್ಬಳ್ಳಿ ಹುಡ್ಗಿ (ಕಥೆ) by makara
ಉ: ಬೆಂಗಳೂರ್ ಹುಡ್ಗ..ಹುಬ್ಬಳ್ಳಿ ಹುಡ್ಗಿ (ಕಥೆ)
ಉ: ಬೆಂಗಳೂರ್ ಹುಡ್ಗ..ಹುಬ್ಬಳ್ಳಿ ಹುಡ್ಗಿ (ಕಥೆ)
In reply to ಉ: ಬೆಂಗಳೂರ್ ಹುಡ್ಗ..ಹುಬ್ಬಳ್ಳಿ ಹುಡ್ಗಿ (ಕಥೆ) by Chikku123
ಉ: ಬೆಂಗಳೂರ್ ಹುಡ್ಗ..ಹುಬ್ಬಳ್ಳಿ ಹುಡ್ಗಿ (ಕಥೆ)
ಉ: ಬೆಂಗಳೂರ್ ಹುಡ್ಗ..ಹುಬ್ಬಳ್ಳಿ ಹುಡ್ಗಿ (ಕಥೆ)
In reply to ಉ: ಬೆಂಗಳೂರ್ ಹುಡ್ಗ..ಹುಬ್ಬಳ್ಳಿ ಹುಡ್ಗಿ (ಕಥೆ) by gopaljsr
ಉ: ಬೆಂಗಳೂರ್ ಹುಡ್ಗ..ಹುಬ್ಬಳ್ಳಿ ಹುಡ್ಗಿ (ಕಥೆ)