ತಂತ್ರಜ್ಞಾನ ಜಗತ್ತಿನ ಹೊಸತುಗಳು ಮತ್ತು ಬಳಕೆದಾರ

ತಂತ್ರಜ್ಞಾನ ಜಗತ್ತಿನ ಹೊಸತುಗಳು ಮತ್ತು ಬಳಕೆದಾರ

ಹಿಂದೊಂದು ಕಾಲದಲ್ಲಿ 'ಜೇಬಿನಲ್ಲಿ ಇಟ್ಟುಕೊಂಡು ನಡೆಯಲು ಸಾಧ್ಯವಾಗುವ ಟೇಪ್-ರೆಕಾರ್ಡರ್' ಎಂದು ಜನಪ್ರಿಯವಾದ ಸೋನಿ ಕಂಪೆನಿಯ ವಾಕ್-ಮ್ಯಾನ್,  ಕತ್ತಿಗೆ ತಾಯತದಂತೆ ಕಟ್ಟುಕೊಳ್ಳುವಷ್ಟು ಸಣ್ಣದಾಗುವಷ್ಟರಲ್ಲಿ ೫೦೦ ಕೋಟಿ ಉಪಕರಣಗಳು ಮಾರಾಟವಾಗಿದ್ದವು, ಅದರ ಹತ್ತಾರು ಮಾಡೆಲ್ಲುಗಳು ಹೊರಬಂದಿದ್ದವು. ಆಪಲ್ ಕಂಪೆನಿ ತನ್ನ ಪೋರ್ಟಬಲ್ ಡಿಜಿಟಲ್ ಪ್ಲೇಯರ್, ಐ-ಪಾಡ್(iPod) ಉಪಕರಣವನ್ನು ಹೊರತಂದಾಗ ಅದನ್ನು ಕೊಂಡ ಎಲ್ಲರಿಗೂ ಅದು ಪ್ರತಿಷ್ಟೆಯ ಸಂಕೇತವಾಗಿತ್ತು. ಆದರೆ ತದನಂತರ ಕೆಲವು ವರ್ಷಗಳಲ್ಲೇ ಹೆಚ್ಚು ಕಡಿಮೆ ಅದೇ ಬೆಲೆಗೆ ಮತ್ತಷ್ಟು ಚೆಂದ ಕಾಣುವ, ಇನ್ನೂ ಹೆಚ್ಚಿನ ಹಾಡುಗಳನ್ನು ಹಿಡಿದಿಡಬಲ್ಲ ಐ-ಪಾಡ್ ಗಳು ಹೊರಬಂದವು. ಆಪಲ್ ಕಂಪೆನಿಯ ಜನಪ್ರಿಯ ಐ-ಪ್ಯಾಡ್(iPad) ಈಗ ವರ್ಷಕ್ಕೊಂದು ಹೊಸ ಆವೃತ್ತಿಯಂತೆ ಹೊರಬರುತ್ತಿದೆ. ಇದುವರೆಗೂ ಮಾರಾಟವಾಗಿರುವ ಐ-ಪ್ಯಾಡ್ ಗಳ ಸಂಖ್ಯೆ ೨೨೧೦ ಕೋಟಿ. ೨೦೦೧ರಲ್ಲಿ ಪ್ರಾರಂಭಿಸಿ ಇಷ್ಟೂ ಕಾಲ ಒಟ್ಟು ಮಾರಾಟವಾಗಿರುವ ಐ-ಪಾಡ್ ಗಳ ಸಂಖ್ಯೆ ೧೩೨೯೦ ಕೋಟಿಗೂ ಹೆಚ್ಚು. ಆಪಲ್ ಐ-ಫೋನ್ ಕೂಡ ಇದೇ ಮಾದರಿ.
ಸ್ಯಾಮ್ಸಂಗ್, ಎಚ್ ಟಿಸಿ, ಸೋನಿ, ಮೋಟರೋಲ, ಮುಂತಾದ ಕಂಪೆನಿಗಳು ಹೊರತರುತ್ತಿರುವ ಮೊಬೈಲ್ ಫೋನುಗಳು (ಗ್ಯಾಲಕ್ಸಿ, ಗ್ಯಾಲಕ್ಸಿ ನೋಟ್, ಎಕ್ಸ್ಪೀರಿಯ ಇವೇ ಮುಂತಾದವುಗಳು) ಪ್ರತಿ ವರ್ಷ ಎರಡು ಮೂರು ಹೊಸ ಆವೃತ್ತಿಗಳನ್ನು ಕಾಣುತ್ತಿವೆ.

ಈ ಡಿಜಿಟಲ್ ಯುಗದ ಹೊಸ ಸಾಧನಗಳನ್ನು ಹೊಸ ಆವೃತ್ತಿ ಹೊರಬಂದ ಕೂಡಲೆ ಕೊಳ್ಳಲೇಬೇಕೆಂದಿಲ್ಲ, ಆದರೆ ಕಾಲಕ್ರಮೇಣ ಹಳತಾದ ಉಪಕರಣಗಳಲ್ಲಿರುವ ತಂತ್ರಾಂಶ ಕೂಡ ಹಳತಾಗುತ್ತ ಹೋಗುತ್ತದೆ. ಅಥವ ಹಳತಾದ ಉಪಕರಣಗಳಿಗೆ ಹೊಸ ತಂತ್ರಾಂಶವನ್ನು ನಿರ್ವಹಿಸುವ ಶಕ್ತಿ ಕ್ಷೀಣಿಸುತ್ತ ಹೋಗುತ್ತದೆ. ಕೆಲವೊಮ್ಮೆ ಹಳತಾದ ತಂತ್ರಾಂಶಕ್ಕೆ ಅದನ್ನಭಿವೃದ್ಧಿಪಡಿಸಿದ ಕಂಪೆನಿ ಸಪೋರ್ಟ್ ನೀಡುವುದನ್ನು ನಿಲ್ಲಿಸಿಬಿಡುತ್ತದೆ (ಹಳತಾದ ತಂತ್ರಾಂಶಕ್ಕೆ ಯಾವುದೇ ಹೊಸತನ್ನು ಸೇರಿಸುವುದಾಗಲಿ, ತೊಂದರೆಗಳಿದ್ದಲ್ಲಿ ಅದನ್ನು ಸರಿಪಡಿಸುವುದಾಗಲಿ ಇನ್ನು ಮುಂದೆ ನಡೆಯದು ಎಂಬರ್ಥದಲ್ಲಿ).

ಕಳೆದ ದಶಕದಲ್ಲಿ ಕಂಪ್ಯೂಟರ್ ಕಲಿತವರಿಗೆ ವಿಂಡೋಸ್ ೯೮, ವಿಂಡೋಸ್ ೨೦೦೦, ವಿಂಡೋಸ್ ಎಕ್ಸ್ ಪಿ, ವಿಂಡೋಸ್ ವಿಸ್ತ, ವಿಂಡೋಸ್ ೭ - ಹೀಗೆ ಮೈಕ್ರೊಸಾಫ್ಟ್ ಕಂಪೆನಿಯ ಬಹುಬಳಕೆಯ ವಿಂಡೋಸ್ ಆಪರೇಟಿಂಗ್ ಸಿಸ್ಟಮಿನ ಹಲವಾರು ಆವೃತ್ತಿಗಳು ಬಂದಿರುವುದರ ಕುಳಿತು ತಿಳಿದಿರುತ್ತದೆ. ಬರುವ ಆಗಸ್ಟಿನಲ್ಲಿ  ವಿಂಡೋಸ್ ೮ ಹೊರಬರುತ್ತಿದೆ. ಇದು ಹೊರಬಂದ ಕೂಡಲೆ ಲ್ಯಾಪ್ಟಾಪ್ ಹಾಗು ಕಂಪ್ಯೂಟರುಗಳನ್ನು ಮಾರುವ ಕಂಪೆನಿಗಳು "ನೀವು ಹೊಸ ವಿಂಡೋಸ್ ಆವೃತ್ತಿಯನ್ನು ಖರೀದಿ ಮಾಡಲೇಬೇಕು, ಬೇರೆ ದಾರಿಯೇ ಇಲ್ಲ" ಎಂಬುದನ್ನೇ "ವಿ ರೆಕಮೆಂಡ್ ವಿಂಡೋಸ್ ೮" ಎಂಬ ಜಾಹೀರಾತುಗಳೊಡನೆ ನಿಮ್ಮನ್ನು ಪೇಚಿಗೆ ಸಿಕ್ಕಿಸುವ ಸಾಧ್ಯತೆಗಳಿವೆ. ಹೊಸ ವಿಂಡೋಸ್ ಕೊಂಡರೆ ಹೊಸ ಆಫೀಸ್ ತಂತ್ರಾಂಶ ಕೊಳ್ಳಬೇಕು. ಈಗಾಗಲೇ ನೀವು ಬಳಸುತ್ತಿರುವ ತಂತ್ರಾಂಶಗಳ ಹೊಸ ಆವೃತ್ತಿಗಳನ್ನೂ ಕೊಳ್ಳಬೇಕು ಅಥವ ಡೌನ್ಲೋಡ್ ಮಾಡಿಕೊಳ್ಳಬೇಕು.

ಇಷ್ಟೆಲ್ಲ ತೊಂದರೆ ಸಾಮಾನ್ಯ ಬಳಕೆದಾರ ಏಕೆ ತೆಗೆದುಕೊಳ್ಳಬೇಕು ಎಂಬ ಪ್ರಶ್ನೆ ಹುಟ್ಟುವುದು ಸಹಜ. ಹೀಗೆ ಹೊಸ ಹೊಸ ಆವೃತ್ತಿಗಳು ಬರುತ್ತಲೇ ಇರುವುದರ ಹಿಂದೆ ತಂತ್ರಜ್ಞಾನದ ಬೆಳವಣಿಗೆಯಷ್ಟೇ ಅಲ್ಲದೆ ಪ್ರಮುಖವಾದ ಮತ್ತೊಂದು ಕಾರಣವೂ ಇದೆ. ಹೆಚ್ಚಿನ ಕಂಪೆನಿಗಳಿಗೆ ಪ್ರತಿ ವರ್ಷ ಲಾಭ ಹೆಚ್ಚಿಸುತ್ತಲೇ ಇರಲು ಸಾಧ್ಯವಾಗುವುದು ಈ ಹೊಸ ಹೊಸ ಆವೃತ್ತಿಗಳು ಮಾರುಕಟ್ಟೆಗೆ ಬರುತ್ತಿರುವುದರಿಂದಲೇ. ಹೊಸ ಆವೃತ್ತಿ ಬರುತ್ತಲೇ ಖರೀದಿ ದುಪ್ಪಟ್ಟು ಆಗುತ್ತದೆ, ವ್ಯವಹಾರಗಳು ಹೆಚ್ಚುತ್ತವೆ. ಅಮೇರಿಕದಲ್ಲಿ ಪ್ರತಿ ವರ್ಷ ಕ್ರಿಸ್ಮಸ್ ಹಬ್ಬದ ಸಮಯ ಸೋನಿ ಕಂಪೆನಿಯ ಪ್ಲೇಸ್ಟೇಶನ್ ಅಥವ ಮೈಕ್ರೊಸಾಫ್ಟ್ ಕಂಪೆನಿಯ ಎಕ್ಸ್ -ಬಾಕ್ಸ್ (ವಿಡಿಯೋ ಗೇಮ್ ಆಡಲು ಬಳಸುವ ಉಪಕರಣಗಳು) ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಹೀಗಾಗಿ ಪ್ರತಿ ವರ್ಷ ಕ್ರಿಸ್ಮಸ್ ಹಬ್ಬದ ಸಮಯ ಈ ರೀತಿಯ ಉಪಕರಣಗಳ ಹೊಸತೊಂದು ಆವೃತ್ತಿಯನ್ನು ಹೆಚ್ಚಿದ ಬೆಲೆಗೆ ಸಜ್ಜು ಮಾಡಿ ಕಂಪೆನಿಗಳು ತಯಾರಾಗಿರುತ್ತವೆ!

ಬರುವ ತ್ರೈಮಾಸಿಕದಲ್ಲಿ ಐಫೋನ್-೫ ಹೊರಬರುವ ಸಾಧ್ಯತೆಗಳಿವೆಯೆಂಬ ಗುಲ್ಲೆದ್ದಿದೆ. ಇದರಿಂದಾಗಿ ಈ ತಿಂಗಳು ಆಪಲ್ ಕಂಪೆನಿಯ ಶೇರುಗಳ ಬೆಲೆ ಏರಿತು. ಇನ್ನು ಹೊಸ ಉಪಕರಣ ಬಂದ ತರುವಾಯ ಕಂಪೆನಿಯ ವ್ಯವಹಾರ, ಲಾಭ, ಮಾರುಕಟ್ಟೆಯ ಪಾಲು ಎಲ್ಲವೂ ಹೆಚ್ಚುತ್ತದೆ. ಹೀಗಾಗಿ ಆಪಲ್ ಮಾತ್ರವಲ್ಲ, ಎಲ್ಲ ಕಂಪೆನಿಗಳಿಗೂ ಹೊಸ ಆವೃತ್ತಿಗಳನ್ನು ತರುವುದು ಲಾಭದ ದೃಷ್ಟಿಯಿಂದ, ತನ್ನ ಹೂಡಿಕೆದಾರರನ್ನು ಖುಷಿಯಾಗಿ ಇಟ್ಟುಕೊಳ್ಳುವ ದೃಷ್ಟಿಯಿಂದ ಅನಿವಾರ್ಯ. ಅದರಿಂದಾಗಿ ಎಷ್ಟು ವಿಪರ್ಯಾಸವೆನಿಸಿದರೂ ಸಾಮಾನ್ಯ ಬಳಕೆದಾರನಿಗೆ ಪ್ರತಿ ವರ್ಷ ತಾನು ಕೂಡಿಟ್ಟ ಹಣವನ್ನು ಹೊಸ ಹೊಸ ಉಪಕರಣಗಳನ್ನು ಕೊಳ್ಳಲು ಖರ್ಚು ಮಾಡುವ ಅನಿವಾರ್ಯತೆ.

Photo Credits: Eduardo López, Wikimedia Commons

Comments