ಗ್ನು/ಲಿನಕ್ಸ್ ಆಸಕ್ತರಿಗೆ: ನಿಮಗೆ ಯಾರೂ ಹೇಳದ ಎರಡು ಮಾತುಗಳು

ಗ್ನು/ಲಿನಕ್ಸ್ ಆಸಕ್ತರಿಗೆ: ನಿಮಗೆ ಯಾರೂ ಹೇಳದ ಎರಡು ಮಾತುಗಳು

'ಸಂಪದ'ದಲ್ಲಿ ಇತ್ತೀಚೆಗೆ ಗ್ನು/ಲಿನಕ್ಸ್ ಹಾಗು ಗ್ನು/ಲಿನಕ್ಸ್ ಹಬ್ಬದ ಕುರಿತ ಲೇಖನಗಳಿಗೆ ಬಂದಿರುವ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ನಮ್ಮಲ್ಲಿ ಹಲವರಿಗೆ ಅಚ್ಚರಿಯೊಂದಿಗೆ ಸಂತಸವನ್ನೂ ತಂದದ್ದುಂಟು. ಆದರೆ ಈ ಸಮಯದಲ್ಲಿ, ಆ ಖುಷಿಯಲ್ಲಿ ನಿಮಗೆ ಹೇಳದೇ ಹೋದ ಹಲವು ವಿಷಯಗಳು ಬಹುಶಃ ಎಂದೂ ನಿಮ್ಮ ಕಿವಿಗೆ (ಅಥವ ಕಣ್ಣಿಗೆ) ಬೀಳದಿರಬಹುದು. ಹೀಗಾಗಿ ಅದನ್ನಿಲ್ಲಿ ಚಿಕ್ಕದಾಗಿ ತಿಳಿಸುವ ಪ್ರಯತ್ನ ಈ ಬ್ಲಾಗ್ ಪೋಸ್ಟ್.

ಮೊದಲಾಗಿ,
ಗ್ನು/ಲಿನಕ್ಸ್ ಬಳಸುವಲ್ಲಿ ಆಸಕ್ತಿ ಇಟ್ಟುಕೊಂಡವರಿಗೆ ನಾನು ಮತ್ತೆ ಮತ್ತೆ ಹೇಳುವ ಮಾತು: "ನೆರವು ಹುಡುಕುವ ಮೊದಲ ಹೆಜ್ಜೆ ಓದು" ಎಂಬಂತಿರಲಿ ಎಂದು. ಅಂದರೆ, ಲಿನಕ್ಸಿನಲ್ಲಿ ತೊಂದರೆಯಾದರೆ ಮೊದಲು ಅದರ ಬಗ್ಗೆ ಇರುವ ಡಾಕ್ಯುಮೆಂಟೇಶನ್ ಓದಿಕೊಳ್ಳಿ. ಹೊಸ ರೇಡಿಯೋ, ಹೊಸ ಟಿ ವಿ ಬಂದಾಗ ಡಾಕ್ಯುಮೆಂಟೇಶನ್ ಓದಲು ಬರುವ ಸೋಮಾರಿತನದಂತೆ ಇದೂ ಎಂಬುದು ನಿಜವೇ. ಆದರೂ ಓದಿಕೊಳ್ಳಿ!
ನಿಮಗೆ ಇದರ ಜ್ಞಾನ ಹಂಚಲು ಇಂಟರ್ನೆಟ್ ತುಂಬ ಡಾಕ್ಯುಮೆಂಟೇಶನ್ ಇದೆ!

ಓದಿಕೊಂಡಾಗ ನಿಮಗೆ ಸಿಗುವ ಮಾಹಿತಿ ನೀವು ಹತ್ತಾರು ದಿನ ಸವೆಸಿ ಸ್ನೇಹಿತನೊಬ್ಬನ ನೆರವಿಗೆ ಕಾದರೂ ಸಿಗಲಾರದಂತದ್ದು. ಜೊತೆಗೆ ನಿಮ್ಮ ಗ್ನು/ಲಿನಕ್ಸ್ ಆಸಕ್ತ ಸ್ನೇಹಿತನಿಗೆ ನೆರವು ಕೇಳುವ ಇನ್ನೂ ಹಲವು ಆಸಕ್ತರು ಇರುತ್ತಾರೆಂಬ ವಿಷಯ ಮನಸ್ಸಿನಿಂದ ಮರೆಯಾಗಕೂಡದು. ಹೀಗಾಗಿಯೇ ನಿಮ್ಮ ಸ್ನೇಹಿತ (ಕೆಲವೊಮ್ಮೆ ನನ್ನಂತವರು) ಅದನ್ನು ಎಲ್ಲರೂ ಓದಿಕೊಳ್ಳಲಿ ಎಂದು ತಾಸುಗಳು ಸವೆಸಿ ಒಂದೆಡೆ ಬರೆದಿಟ್ಟು "ಹೇಳಿದ್ದೇ ಹೇಳುವ ಕಿಸುಬಾಯಿದಾಸ"ನಾಗದಂತೆ ಪ್ರಯತ್ನಿಸಿರುತ್ತಾನೆ. ಅಂತಹ ಪ್ರಯತ್ನಗಳ ಸದುಪಯೋಗ ಪಡೆದುಕೊಳ್ಳಿ. Redundancy ಕಡಿಮೆ ಮಾಡಿ.
ಅಲ್ಲಿ ಉಳಿದ ಸಮಯವನ್ನು ಇನ್ನೂ ಉತ್ತಮ ಕೆಲಸಕ್ಕೆ ನಿಮ್ಮ ಸ್ನೇಹಿತ ಮೀಸಲಿಡಬಹುದು!

ಎರಡನೆಯದಾಗಿ,

ಹಾಗೆ ಓದಿಕೊಂಡ ಡಾಕ್ಯುಮೆಂಟೇಶನ್ನು ಉತ್ತಮಪಡಿಸಬಹುದು ಎನಿಸಿದರೆ ನೀವೂ ನೆರವಾಗಿ ಬರೆದು, ಭಾಗವಹಿಸಿ ಉತ್ತಮಪಡಿಸಿ! ಇದು ಗ್ನು/ಲಿನಕ್ಸ್ ಬಳಕೆದಾರರ ಸಮುದಾಯದ ಜೀವಾಳ - ಎಲ್ಲರೂ ಎಲ್ಲರಿಗೂ ಸಹಾಯ ಮಾಡುತ್ತ ಭಾಗವಹಿಸುವುದು (ಸಿಟಿಯಲ್ಲಿರುವವರಿಗೆ ಇದು ಅರ್ಥವಾಗುವುದು ಕಷ್ಟ - ಹಳ್ಳಿಯೊಂದರ ವಾತಾವರಣ ನೆನಪಿಸಿಕೊಳ್ಳಿ. ಪ್ರತಿಯೊಬ್ಬರೂ ಮತ್ತೊಬ್ಬರಿಗೆ ನೆರವಾಗುವರು, ಆದರೆ ನೆರವು ಪಡೆದು ನಾನು ಸಹಾಯ ಮಾಡುವುದೇನು ಎಂಬಂತೆ ಇರೋದಿಲ್ಲ). ಹೀಗಾಗಿ ನಿಮಗಾದದ್ದು ಬರೆದಿಡಿ. ಆಗಲೇ ಬರೆದಿಟ್ಟ ಡಾಕ್ಯುಮೆಂಟೇಶನ್ನಿನಲ್ಲಿ ಏನಾದರೂ ಬಿಟ್ಟುಹೋಗಿದೆಯೇ? ಸೇರಿಸಿ!

ನಿತ್ಯ ಸುಮಾರು ಜನ ನನಗೆ ಇ-ಮೇಯ್ಲ್ ಹಾಕುತ್ತಿರುತ್ತಾರೆ, ಲಿನಕ್ಸ್ ಹಾಗು ಕನ್ನಡದ ವಿಚಾರವಾಗಿ. ಹೀಗೆ ಬಂದ ಪತ್ರಗಳಿಗೆ ನಾನು ಆಯಾ ಡಾಕ್ಯುಮೆಂಟೇಶನ್ನಿನ ಲಿಂಕು ಕಳುಹಿಸಿಕೊಟ್ಟು "ಓದಿ" ಎನ್ನುತ್ತೇನೆ. ಹೀಗೆ ಬರೆಯುವುದಕ್ಕೆ ಕಾರಣ ನನ್ನ ಬಳಿ ಇವಕ್ಕೆಲ್ಲ ಸಮಯವಿಲ್ಲವೆಂದಲ್ಲ, ಅಥವ ಸವಿವರ ಉತ್ತರ ನೀಡಲು ಇಷ್ಟವಿಲ್ಲವೆಂದಲ್ಲ. ನಾನು ಕಳುಹಿಸಿದ ಲಿಂಕ್ ನಲ್ಲಿರುವ ಡಾಕ್ಯುಮೆಂಟೇಶನ್ ಓದಿಕೊಂಡು ಕಲೆತವರು, ಕುರುಡು ಹೆಜ್ಜೆ ಇಡದೆ ಒಂದು ಹೆಜ್ಜೆ ಮುಂದಿರುತ್ತಾರೆ. ಡಾಕ್ಯುಮೆಂಟೇಶನ್ನಿನಲ್ಲಿ ದೋಷಗಳಿದ್ದರೆ ಕಂಡುಕೊಳ್ಳುತ್ತಾರೆ. ಕಷ್ಟಪಟ್ಟು ಕಂಡುಕೊಂಡ ಸಂತಸದಲ್ಲಿ ತಮ್ಮ ಸ್ನೇಹಿತರೊಂದಿಗೆ ಅನುಭವ ಹಂಚಿಕೊಳ್ಳುತ್ತಾರೆ. ಹಾಗೆ ಆಲಿಸಿದ ಸ್ನೇಹಿತರಲ್ಲಿ ಈ ವಿಷಯದಲ್ಲಿ ಆಸಕ್ತಿ ಮೂಡುತ್ತದೆ. ಸಮುದಾಯ ಬೆಳೆಯುತ್ತದೆ.

ಹೀಗಾಗಿಯೇ ಗ್ನು/ಲಿನಕ್ಸ್ ಸಮುದಾಯದಲ್ಲಿ ಸಾಕಷ್ಟು ದಿನ ಸವೆಸಿದ ಆಸಕ್ತರು ಪ್ರತಿಯೊಬ್ಬರಿಗೂ ಒಬ್ಬೊಬ್ಬರಾಗಿ ಸಹಾಯ ಮಾಡುವ ಗೋಜಿಗೆ ಹೋಗದೆ ಒಂದೆಡೆ ಬರೆದಿಟ್ಟು ಎಲ್ಲರೂ ಓದಿಕೊಳ್ಳುವಂತಹ ಪರಿಸರ ನಿರ್ಮಿಸಲು ಪ್ರಯತ್ನಿಸುತ್ತಾರೆ. ಇದರ ಹಿಂದಿರುವ ಆಶಯ ನಮ್ಮಲ್ಲಿ ಹಲವರಿಗೆ ಅರ್ಥವಾಗಿಲ್ಲ, ಅರ್ಥವಾಗುವುದೂ ಕಾಣೆ.

ಈ ಹಿಂದೆಯೂ ಸುಮಾರು ಸಲ ಈ ಕುರಿತು ವಾಗ್ವಾದಗಳು ನಡೆದಿವೆ. ನನಗೆ ಸರಿಯಾಗಿ ಇದನ್ನು ವಾಕ್ಯರೂಪದಲ್ಲಿ ತರಲಾಗಲಿಲ್ಲವೆಂಬುದು ಇರಬಹುದು - ಹಲವರು ಅದನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಂಡದ್ದಿದೆ. ಕೆಲವರು ಹಿಂದಿನದ್ದನ್ನೆಲ್ಲಾ ಬಾಚಿ, ಸಂಬಂಧವಿಲ್ಲದ್ದನ್ನೆಲ್ಲ ಸೇರಿಸಿ, ಇದ್ದ ಒಂದಷ್ಟು ಹಗೆಯನ್ನೂ ರುಬ್ಬಿ ಹಾಕಿ ಈ ವಿಷಯದ ಚರ್ಚೆಯನ್ನು ಬೇರೆಡೆ ಎಳೆದು ಇಂಟರ್ನೆಟ್ ಹಗೆಯನ್ನೂ ತೀರಿಸಿಕೊಂಡದ್ದಿದೆ. :-)

ಈಗಲೂ ಎಷ್ಟರಮಟ್ಟಿಗೆ ನಿಮಗೆಲ್ಲ ಅರ್ಥೈಸುವಂತೆ ಬರೆದಿರುವೆ ಎಂಬುದು ಈ ಬ್ಲಾಗಿಗೆ ಬಂದ ಪ್ರತಿಕ್ರಿಯೆಗಳಿಂದ ಸ್ವಲ್ಪ ಮಟ್ಟಿಗೆ ಅಂದಾಜು ಹಾಕುವ ಪ್ರಯತ್ನ ಮಾಡುವೆ. ಈ ಬರಹ 'ಉಪದೇಶ'ದ toneನಲ್ಲಿದೆಯೆನಿಸಿದರೆ ಕ್ಷಮೆಯಿರಲಿ!

Rating
No votes yet

Comments