" ಅಪರಿಚಿತ '' (ಕಥೆ) ಭಾಗ 6

" ಅಪರಿಚಿತ '' (ಕಥೆ) ಭಾಗ 6

 



         ಮಧ್ಯಾನ್ಹ ಒಂದು ಗಂಟೆಯ ಸಮಯ ಬಸ್ಸು ಕುಮರಿ ಬಸ್ ನಿಲ್ದಾಣ ಸೇರಿತು. ನುಸ್ರತ್ ಅಲಿ ಮತ್ತು ಆಂಜನೇಯ ಬಸ್ಸಿನಿಂದಿಳಿದರು.


     ' ವಾಪಸ್ ಹೋಗಲಿಕ್ಕೆ ನಮ್ಮದ ಕೊನೆ ಬಸ್ಸು , ಬಾಗೋಡಿಗೆ ಹೋಗಿ ಬರ್ಲಿಕ್ಕೆ ಸಾಯಂಕಾಲ ಆರು ಗಂಟೆ ಆಗ್ತದ, ಬೇಗ ಬೇಗ ಕೆಲಸ ಮುಗಿಸಿಕೊಂಡು ಬಂದ್ಬಿಡಿ ' ಎಂದ ಬಸ್ಸಿನ ಡ್ರೈವರ್ ಮುಝಫರ್.


     ' ಏ ! ಇದು ಅಷ್ಟು ಬೇಗ ಮುಗಿಯೋ ಕೇಸು ಅಲ್ಲ, ಇವತ್ತ ನಮಗ ವನವಾಸ ತಪ್ಪಿದ್ದಲ್ಲ ' ಎಂದ ನುಸ್ರತ್ ಅಲಿ ಮುನ್ನಡೆದರು. ಪ್ರಭುಗಳ ಕಿರಾಣಿ ಅಂಗಡಿ ಎದುರು ಸುಳಗೋಡು ಹೊರಠಾಣೆಯ ದಫೇದಾರ ವೆಂಕಟಯ್ಯ ತನ್ನ ಸಿಬ್ಬಂದಿ ಮಂಜುನಾಥನ ಜೊತೆ ನಿಂತಿದ್ದರು, ಅಲಿಯವರು ಬರುತ್ತಿದ್ದುದನ್ನು ನೋಡಿ ಅವರೆಡೆಗೆ ನಡೆದು ಬಂದರು.


     ' ವೆಂಕಟಯ್ಯ ಸ್ಥಳ ನೋಡೀರೇನ್ರಿ ಇಲ್ಲಿಂದ ಎಷ್ಟು ದೂರ ಆಗ್ತದ, ಪಟೇಲರು ಮತ್ತು ಪಂಚರು ಎಲ್ಲಿ ? ' ಎಂದರು ನುಸ್ರತ್ ಅಲಿ.


     ' ಅಲಿ ನಾನು ಸ್ಥಳ ನೋಡಸಿ ಬಂದೇನಿ ಇಲ್ಲಿಂದ ಸುಮರು ಐದು ಕಿಲೋ ಮೀಟರ್ ದೂರ ಆಗ್ತದೆ, ಚುರ್ಚುಗುಂಡಿಗೆ ಹೋಗೋ ದಾರಿ ಮಧ್ಯ ಎಡಕ್ಕ ಕಾಡನೊಳಗ ಹೋಗಬೇಕು ' ಎಂದರು ವೆಂಕಟಯ್ಯ.


     ' ಆ ಜಾಗ ದಾರಿ ಪಕ್ಕಕ್ಕ ಅದನೋ ಮತ್ತ ಕಾಡೊಳಗ ಹೋಗಬೇಕೋ ?' ಎಂದರು ನುಸ್ರತ್.


     ' ದಾರಿ ಪಕ್ಕಕ್ಕ ಇಲ್ಲ ಎಡಭಾಗಕ್ಕ ಕಾಡಿನೊಳಗ ಹೋಗಿ ಸುಮಾರು ಮೂರ್ನಾಕು ಫರ್ಲಾಂಗ್ ದೂರ ಹೋಗಬೇಕು ' ಎಂದ ವೆಂಕಟಯ್ಯ..


     ' ಬಾಡಿ ಶಿಫ್ಟ್ ಮಾಡೊ ಸ್ಥಿತಿಯೊಳಗ ಅದನೋ ಹ್ಯಾಂಗೋ ?' ಎಂದರು ಅಲಿ.


     ' ನನಗನಿಸಿದ ಮಟ್ಟಿಗೆ ಅಂವ ನೇಣು ಹಾಕ್ಕೊಂಡು ಸುಮಾರು ದಿವಸನ ಆಗ್ಯಾವ, ಹೆಣದ ಮೈಮ್ಯಾಲೆಲ್ಲ ಹುಳ ಹರದಾಡ್ಲಿಕ್ಕೆ ಹತ್ಯಾವ ' ಎಂದರು ವೆಂಕಟಯ್ಯ.. ಅಷ್ಟರಲ್ಲಿ ಪಟೇಲ ಪರಮಯ್ಯ ತಮ್ಮ ಮಹೇಂದ್ರ ಜೀಪಿನಲ್ಲಿ ಅಲ್ಲಿಗೆ ಬಂದರು.


     ' ಪಟೇಲರ ನಿಮ್ಮ ಜೀಪನ್ಯಾಗ ಸ್ವಲ್ಪ ಸರ್ಕಾರಿ ಆಸ್ಪತ್ರೆಗೆ ಹೋಗಿ ಡಾ.ಮಂಜುನಾಥ ಅವರನ್ನು ಕಂಡು ಈ ಪ್ರಕರಣದ ವಿಷಯ ತಿಳಿಸಿ ಬರೋಣ, ಅಂದರ ಮೃತನ ಪೋಸ್ಟ್ ಮಾರ್ಟಂ ಬೇಗ ಇವತ್ತನ ಮುಗಸ ಬಹುದು ' ಎಂದರು ನುಸ್ರತ್ ಅಲಿ..


     ಆಗ ವೆಂಕಟಯ್ಯ ' ನಾನೂ ಈ ದಿನ ಇಲ್ಲಿಗೆ ಬಂದವ ಸೀದಾ ಆಸ್ಪತ್ರೆಗೆ ಹೋಗಿ ವಿಷಯ ತಿಳಿಸಿ ಬಂದೇನಿ, ಅವರಿಗೂ ಮೊದಲ ವಿಷಯ ಗೊತ್ತಾಗೇದ ನಿಮ್ಮ ತನಿಖಾ ಕ್ರಮ ಮುಗಿಸಿ ಫಾರ್ಮ ಭರ್ತಿಮಾಡಿ ಕಳಸರಿ ನಾನು ಬರ್ತೇನಿ ಅಂದಾರ ' ಎಂದರು.


     ' ಹಂಗರ ನಾನು ಮತ್ತ ಹೋಗಿ ಅವರ್ನ ಕಾಣೋ ಅವಶ್ಯಕತೆ ಇಲ್ಲ ಹಂಗರ ' ಎಂದರು ಅಲಿ.


     ' ಬ್ಯಾಡ ಅವಶ್ಯಕತೆ ಕಾಣೋದಿಲ್ಲ, ಬರ್ರಿ ಇಲ್ಲೆ ಸ್ವಲ್ಪ ಕಮ್ತಿಗಳ ಹೋಟ್ಲೊಳಗ ಊಟ ಮುಗಿಸಿ ಬಿಡುವಂತ್ರಿ ' ಎಂದರು ಪಟೇಲರು.


     ' ಬರೋ ದಾರ್ಯಾಗ ಹೋಟಲ್ನ್ಯಾಗ ತಿಂಡಿ ಮಾಡ್ಕೊಂಡ ಬಂದೇವಿ, ಮೊದಲ ಆ ಮನಸ್ಯಾಗ ಮುಕ್ತಿ ಕಾಣಸೋಣ ' ಎಂದರು ಅಲಿ.
    
     ' ನಾವು ಬಂದಿರೋದ ಅದಕ, ಇನ್ನೂ ಪಂಚರು ಸಿಕ್ಕಿಲ್ಲ ಯಾರನ  ಕೇಳಿದರೂ ನನಗ ಆ ಕೆಲಸ ಈ ಕೆಲಸ ಅಂತ ನೆವ ಹೇಳ್ತಾರ, ಪಂಚಾಯತಿ ಸದಸ್ಯ ಮಂಜಪ್ಪ ನಾಯ್ಕಗ ಒಂದು ಮೂರು ಜನ ಒಟ್ಟ ಮಾಡಿ ಇಟಗೊಳ್ಳಾಕ ಹೇಳೆನಿ ನೀವು ಬಂದ ಮ್ಯಾಲ ಜೀಪ್ ಕೊಟ್ಟು ಹೇಳಿ ಕಳಸು ಅಂದಾನ ಅಷ್ಟರೊಳಗ ನೀವು ಊಟ ಮುಗಿಸಿಕೊಂಡು ಬಿಡಿ ' ಎಂದರು ಪಟೇಲರು. ಎಲ್ಲರೂ ಊಟ ಮುಗಿಸಿ ಹೋಟೆಲಿನಿಂದ ಹೊರ ಬರುತ್ತಿದ್ದಂತೆ ಪಟೇಲರು ಕಳಿಸಿದ ಜೀಪು ಬಂದು ನಿಂತಿತು. ಮಂಜಪ್ಪ ನಾಯ್ಕರು ತಮ್ಮೊಡನೆ ಎರಡು ಜನ ಕರೆ ತಂದಿದ್ದರು. ಎಲ್ಲರೂ ಜೀಪನ್ನೆರಿ ಕುಳಿತರು. ಅದು ಚುರ್ಚಗುಂಡಿ ದಾರಿಗುಂಟ ಬಿದ್ರಕಾನಿನ ಕಡೆಗೆ ಸಾಗಿತು. ಗ್ರಾಮಾಂತರ ಪ್ರದೇಶದ ಅಂಕು ಡೊಂಕಾದ ಕಚ್ಚಾ ರಸ್ತೆ ಸುಮಾರು ದೂರ ಸಾಗಿದ ಮೇಲೆ ಒಂದು ಕಡೆ ಜೀಪನ್ನು ನಿಲ್ಲಿಸುವಂತೆ ಡ್ರೈವರ್ನಿಗೆ ವೆಂಕಟಯ್ಯ ಹೇಳಿದರು. ಜೀಪು ನಿಂತ ಅದರಿಂದಿಳಿದ ಎಲ್ಲರೂ ವೆಂಕಟಯ್ಯ ಅವರನ್ನು ಅನುಸರಿಸಿ ರಸ್ತೆಯ ಎಡ ಬದಿಗೆ ಕಾಡಿನೊಳಗೆ ಅಲಿಯವರ ತನಿಖಾ ತಂಡ ಸಾಗಿತು. ಪಟೇಲರು ಕರೆತಂದ ಜನವನ್ನು ಅಲ್ಲಿ ಬಿಟ್ಟು ಪಿಎಸ್ಐ ಬಂದ ನಂತರ ಅವರನ್ನು ಕರೆ ತರುವಂತೆ ಹೇಳಿ ತಂಡವನ್ನು ಸೇರಿಕೊಂಡರು.


     ' ಏನ್ ವೆಂಕಟಯ್ಯ ಇದು ಜಾಗ ಇಲ್ಲೆ ಹ್ಯಾಂಗ ಹೋಗೋದು ?' ಎಂದರು ಅಲಿ.


     ' ನನ್ನ ಜೊತೆಗೆ ಬನ್ನಿ ನೀವು ಎನ್ನುತ್ತ ಈ ಸ್ಥಳಕ್ಕೆ ಬೆಳಿಗ್ಗೆ ಹೋಗಿ ಬರೋವಾಗ ದಾರ್ಯಾಗ ಅಲ್ಲಲ್ಲಿ ಸಣ್ಣ ಪುಟ್ಟ ಪೊದೆಗಳ್ನ ಅಲ್ಲಲ್ಲಿ ಸವರಿ ಗುರ್ತು ಮಾಡಿ ಬಂದೇವಿ, ಅದ ಗುರ್ತು ಹಿಡಕೊಂಡು ಹೋಗಬೇಕು ' ಎಂದರು ವೆಂಕಟಯ್ಯ..


     ' ಪರವಾ ಇಲ್ಲ ಬಿಎಡು ವೆಂಕಟಯ್ಯ ನೀನೂ ಇಲ್ಲೆ ಇದ್ದು ಕಾಡಿನ ಮನಸ್ಯಾನ ಆಗಿ ಬಿಟ್ಟಿ, ಅದೂ ಅಲ್ಲದನ ಕಾಡಿನ ಭಾಷಾ ಅರ್ಥ ಮಾಡಿಕೊಂಡಿ ' ಎಂದು ಅಲಿ ಹಾಸ್ಯ ಮಾಡಿದರು.


     ' ಕಾಡಿಗೂ ಒಂದ ಭಾಷಾ ಮತ್ತು ಬದುಕಿನ ರೀತಿ ಅಂತ ಇರತದ, ಮನುಷ್ಯರ ಸಂಚಾರ ಇಲ್ಲದ ಕಡೆ ದಾರಿ ಇರೋದಿಲ್ಲ ಹಂಗಿರೋವಾಗ ಹಂಗ ಗುರುತು ಮಾಡಿಕೊಳ್ಳದ ಕಾಡೊಳಗ ಹೊಕ್ಕರ ದಿಕ್ಕು ತಪ್ಪಿ ಬಿಡೋ ಸಾಧ್ಯತೆ ಇರತದ ' ಎಂದರು ಪಟೇಲರು.


      ಕಾಡಿನೊಳಗೆ ನಡೆಯುತ್ತಿದ್ದಂತೆ ಕೊಳೆತದ ದುರ್ವಾಸನೆ ಮೂಗಿಗೆ ಬಡಿಯ ತೊಡಗಿತು. ಕಾಡಿನೊಳಗಡೆ ನಡೆಯುತ್ತ ಹೋಗುತ್ತಿದ್ದಂತೆ ಕಾಡು ದಟ್ಟವಾಗುತ್ತ ನಡಿಗೆ ನಿಧಾನವಾಗ ತೊಡಗಿತು. ಬಿದರು ಬೆತ್ತಗಳ ಮೆಳೆಗಳು, ಸುರ ಹೊನ್ನೆ, ಮತ್ತಿ, ಬೀಟೆ ಮತ್ತು ಗಂಧದ ಮರಗಳು ಸಮೃದ್ಧವಾಗಿ ಬೆಳೆದು ನಿಂತಿದ್ದವು.. ಅಂತಹ ಅಬೇಧ್ಯ ಕಾಡಿನಲ್ಲೂ ಅಲ್ಲಲ್ಲಿ ಬೀಟೆ ಮತ್ತಿ ಹೊನ್ನೆ ಮತ್ತು ಗಂಧದ ಮರಗಳ ಬುಡಗಳು ಮತ್ರ ಇದ್ದು ಸುತ್ತ ಮುತ್ತ ಅವುಗಳ ರೆಂಬೆ ಕೊಂಬೆಗಳು ಬಿದ್ದಿದ್ದವು. ಮರಗಳ ಮಾರಣ ಹೋಮದ ಕುರಿತು ಸಾಕ್ಷಿ ಹೇಳುವಂತಿತ್ತು ಆ ದೃಶ್ಯ..


     ' ಏನ್ರಿ ಪಟೇಲರೆ ಇಂಥಾ ಜಗದಾಗೂ ಮರ ಕಡದು ಹಾಕ್ಯಾರಲ್ಲ ' ಎಂದರು ನುಸ್ರತ್ ಅಲಿ.


     ' ಈಗ ಕಾಡು ಅನ್ನೋದು ಮನುಷ್ಯನ ಅವಶ್ಯಕತೆ ಮಾತ್ರ ಆಗಿ ಉಳದಿಲ್ಲ, ಅದು ಈಗ ವ್ಯಾಪಾರಿ ಸರಕು ಆಗೇದ, ಯಾವಾಗ ಮನುಷ್ಯ ಹಣದ ಹಪಾಹಪಿಗೆ ಬಿದ್ದನೋ ಆವಾಗ ಅಂವಗ ಏನೂ ಕಾಣೋದಿಲ್ಲ, ಏನು ಮಾಡೋದು ? ಕಾಲಾಯ ತಸ್ಮೈ ನಮಃ ' ಎಂದರು ಪರಮಯ್ಯ.


     ' ಸರ್ಕಾರದ ಇಲಾಖೆಯೋರ ಕಾಡುಗಳ್ಳರ ಜೊತೆಗೆ ಶಾಮೀಲು ಆಗಿರ್ತಾರ ಆಂಥಾದ್ರಾಗ ಕಾಡು ಉಳಿ ಅಂದ್ರ ಹ್ಯಾಂಗ ಉಳಿಬೇಕು ' ಎಂದರು ಪಂಚಾಯತಿ ಸದಸ್ಯ ಮಂಜಪ್ಪ ನಾಯ್ಕರು.


     ' ಇರಬಹುದು ಎಲ್ಲೋ ನೀ ಹೇಳಿದ್ಹಂಗ ಕೆಲವರು ಇರಬಹುದು. ಕಾಡುಗಳ್ಳರು ಅಂದ್ರ ಅವ್ರೇನು ಬೇರೆ ಲೋಕದಿಂದ ಬಂದವ್ರೇನು? ಅವರೂ ನಮ್ಮ ನಿಮ್ಮ ಸುತ್ತ ಇರೋ ಅಂಥವ್ರ. ಅದು ಇಲ್ಲೆ ಸುತ್ತ ಮುತ್ತ ವಾಸ ಆಗಿರೋ ಎಲ್ಲಾರ ಮನಿಗೂ ಹೋಗಿ ನೋಡು ನನ್ನೂ ಸೇರಿ, ಎಲ್ಲರ ಮನಿ ನೀರೊಲೆಯೊಳಗ ಅವಶ್ಯಕತಗೆ ಇರಲಿ ಇಲ್ಲದಿರ್ಲಿ ಅಗ್ನಿಹೋತ್ರದ ಮನಿ ಅವ್ರ ಹಂಗ ಇಪ್ಪತ್ನಾಕು ಗಂಟೆನೂ ಬೆಂಕಿ ಉರಿತನ ಇರತದ. ಇದು ಪುರಾತನ ಕಾಲದಿಂದ ನಡಕೊಂಡು ಬಂದದ್ದು. ಈಗ ಮನುಷ್ಯ ಸಹ ಸುಧಾರಣೆ ಆಗ್ಯಾನ, ಕಾಡಿನ ವಿಸ್ತಾರ ನಾನಾ ಕಾರಣದಿಂದ ಕಡಿಮೆ ಆಗಿಕೋತನ ಬರ್ಲಿಕ್ಕೆ ಹತ್ಯೇದ ಆದರೂ ಹಳೆ ಕಾಲದ್ಹಂಗ ಅನವಶ್ಯಕ ಉರುವಲು ಉರಸೋದು ಬಿಟ್ಟಿಲ್ಲ. ಇದರಿಂದನ ಆಗಿಕೋತ ಬಂದ ಕಾಡಿನ ಹಾನಿ ಲೆಖ್ಖ ಹಾಕಿ ನೋಡು. ನನ್ನ ಅರವತ್ತು ವರ್ಷದ ಜೀವನದಾಗ ಈ ಫಾಸಲೆದಾಗ ಇರೋ ಎಲ್ಲ ಕಾಡು ಸುತ್ತೇನಿ ಅದ್ಕೊಂಡಿದ್ದೆ. ಆದ್ರ ಈಗ ನೋಡು ಹತ್ತರದಾಗ ಇರೋ ಈ ಜಗ ನನಗ ಹೊಸಾದು. ಅಂಥಾದ್ರಾಗ ನೂರಾರು ಕಿಲೋ ಮೀಟರ್ ವ್ಯಾಪ್ತಿಯ ದಟ್ಟವಾದ ಅರಣ್ಯ ಪ್ರದೇಶಾನ ನಾಲ್ಕೈದು ಮಂದಿ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ಕಾಯಬೇಕು ಅನ್ನೋದು ಎಷ್ಟು ಸಾಧು ನೋಡು. ಎಲ್ಲೊ ಕೆಲವು ಪ್ರಕರಣದಾಗ ಅವರೂ ಸಾಮೀಲಾಗಿರ್ತಾರ ಅಂದ್ಕೊಳ್ಳೋಣ, ಅವರ ಗಮನಕ್ಕ ಬರದನ ಎಷ್ಟೊ ಪ್ರಕರಣಗಳು ನಡದು ಹೋಗಿರ್ತಾವ. ಸಮಾಜಕ್ಕ ತಕ್ಕಂಗ ವ್ಯವಸ್ಥೆ ಇರತದ. ವ್ಯವಸ್ಥೆ ಕೆಟ್ಟದ ಅಂತ ನಾವು ಬೆರಳು ಮಾಡಿ ತೋರ್ಸೋವಾಗ ಇನ್ನುಳಿದ ನಾಲ್ಕು ಬೆರಳು ಸಮಾಜದ ಕಡೆ ಮುಖ ಮಾಡಿರ್ತಾವ. ಯಾವದ ಬದಲಾವಣೆ ಮೊದಲು ಆಗ ಬೇಕಾಗಿರೋದು ಕ್ರಮವಾಗಿ ವ್ಯಕ್ತಿ, ಕುಟುಂಬ ಮತ್ತು ಸಮಾಜ ಈ ಮೂಲಕನ. ಇದನ್ನ ಅರತಕೊಳಲಾರದ ನಾವು ಬರಿ ವ್ಯವಸ್ಥೆನ ಬಯ್ಕೋತ ಕೂಡೋದ್ರಾಗ ಏನೂ ಅರ್ಥ ಇಲ್ಲ. ನಾವು ಮಲೆನಾಡಿನ ಜನ ಮನೆ ಕಟ್ಟಸಲಿಕ್ಕೆ ಫರ್ನೀಚರ್ ಮಾಡಸಲಿಕ್ಕೆ ಕಾಡು ಕಡೀತೀವಿ ಇಲ್ಲಿ ನಾವು ಸರ್ಕಾರದ ನೀತಿ ನಿಯಮ ಪಾಲನೆ ಮಾಡೇವೇನು? ಅಕ್ರಮವಾಗೇ ಮರದ ಕಡತ ಮಾಡಿರ್ತೇವಿ ಪ್ರಕರಣ ಬಯಲಿಗೆ ಬರದ ಹೋದ್ರ ಹೋತು, ಬಯಲಿಗೆ ಬಂತು ಅಂದ್ರ ಸರ್ಕಾರಕ್ಕ ಮುಟ್ಟಗೋಲು ಹಾಕ್ಕೊಳ್ಳೊಕ ಬಿಟ್ಟಬಿಡ್ತಿವೇನು ? ಆಗ ಲಂಚದ ಆಶೆ ತೋರ್ಸಿ ನಮ್ಮ ಹುಳುಕು ಮುಚಗೋತೇವಿ. ಹೊರಗಡೆ ವ್ಯವಸ್ಥೆ ಬಯ್ತೀವಿ. ಇಂಥಾ ಸಮಾಜ ನಮ್ಮ ಸುತ್ತ ಮುತ್ತ ಇರೋತನಕ ಯಾವದೇ ಸುಧಾರಣೆ ಸಾಧ್ಯ ಇಲ್ಲ  ನೋಡು ಮಂಜಪ್ಪ ನಾಯ್ಕ ' ಎಂದರು ಪರಮಯ್ಯ.


     ' ಸಾರ್ ಸ್ವಲ್ಪ ನೋಡಕೊಂಡು ಕಾಲು ಇಡ್ರಿ ಹುಳ ಹುಪ್ಪಡಿ ಇರತಾವ ಮೇಲಾಗಿ ಇದು ಕಾಳಿಂಗನಾಗರಗಳ ಸಾಮ್ರಾಜ್ಯ ' ಎಂದು ಮಂಜಪ್ಪ ನಾಯ್ಕ ಅಲಿಯವರ ತಂಡಕ್ಕೆ ಎಚ್ಚರಿಕೆ ನೀಡಿದ.


     ' ಅವು ಕಚ್ಚೀದ್ರ ಕಚ್ಚಲಿ ಬಿಡೋ ಒಂದ ಏಟಿಗೆ ಜೀವ ಮುಗದು ಹೋಗ್ತದ, ಈ ಇಂಬಳದ ಕಾಟ ಹೇಳೋ ಮಾರಾಯ.. ಇನ್ನು ಮಳೆಗಾಲ ಸುರುವು ಆಗಿಲ್ಲ, ಅಂಥಾದ್ರಾಗ ಈ ಪರಿ ಕಾಟ ಇನ್ನ ಮಳೆ ಸುರುವಾದ್ರ ಮುಗದ ಹೋತು ' ಎಂದು ಇಂಬಳ ಕಚ್ಚಿದ ತಮ್ಮ ಕಾಲುಗಳನ್ನು ನೋಡಿ ಕೊಂಡರು. ಕೆಲವು ಇಂಬಳಗಳು ರಕ್ತ ಕುಡಿದು ಉತ್ತತ್ತಿ ಬೀಜದ ಗಾತ್ರದಷ್ಟು ಉಬ್ಬಿದ್ದವು.


     ' ಏನೋ ಇವು ಬೂಟನ್ಯಾಗೂ ಹೊಕ್ಕಾವಲ್ಲೋ ' ಎಂದರು ಅಲಿ.


     ' ಬೂಟಿನೊಳಗ ಯಾಕ ? ಪ್ಯಾಂಟ್ ಬಿಚ್ಚರಿ ಎಲ್ಲೆಲ್ಲಿ ಹೊಕ್ಕೊಂಡಾವ ಅಂತ ಗೊತ್ತಾಗ್ತದ ' ಎಂದ ಮಂಜಪ್ಪ ನಾಯ್ಕ ಇಂಬಳ ಕಚ್ಚಿದ ಜಾಗಕ್ಕ ಸುಣ್ಣ ಹಚ್ಚರಿ ಎಂದು ಹೇಳಿ ಸುಣ್ಣದ ಡಬ್ಬಿಯನ್ನು ನೀಡಿದ. ಎಲ್ಲರೂ ಇಂಬಳ ಕಚ್ಚಿದ ಜಾಗಗಳನ್ನು ಹುಡುಕಿ ಹುಡುಕಿ ಸುಣ್ಣ ಹಚ್ಚಿ ಹಚ್ಚಿ ಅವುಗಳನ್ನ ಕಿತ್ತೆಸೆದು ಮುಂದೆ ಸಾಗಿದರು.


     ' ಏನ್ ಸಾರ್ ಇಂವ ಸಗರಪೇಟೆಯಿಂದ ಇಲ್ಲಿಗೆ ಬರೋ ತನಕ ಕಾಡಿನ್ಯಾಗ ಬಂದ್ವಿ ಇಂವಗ ಅಲ್ಲೆ ಯಾವದ ಮರ ಸಿಗ್ಲಿಲ್ಲೇನು ನೇಣು ಹಾಕ್ಕೊಳ್ಳಾಕ, ಇಂಥಾ ಜಗದಾಗ ಬಂದು ನೇಣು ಹಾಕ್ಕೊಂಡಾನಲ್ಲ ' ಎಂದ ಆಂಜನೇಯ.


     ' ಹೌದು ಈ ರೀತಿ ಅಂವಗ ಹೇಳಾಕ ನೀ ಯಾರು ? ಅದು ಅವನಿಷ್ಟ, ಮತ್ತ ನೀನೂ ನಾನೂ ಇರೋದು ಯಾಕ ? ಸುಮ್ಮನ ಬಾಯ್ಮುಚಗೊಂಡು ಹೆಜ್ಜಿ ಹಾಕು ' ಎಂದರು ಅಲಿ.


     ನೀವು ಹೇಳೋದು ಒಂದು ರೀತಿ ಸರೀನ ಬಿಡಿ ಸಾರ್ ' ಎಂದ ಆಂಜನೇಯ ಮುಂದುವರಿದ.
 


                                                                                                                      (  ಮುಂದುವರೆದಿದೆ )


 


 ಅಪರಿಚಿತ (ಕಥೆ)ಭಾಗ 5 ಕ್ಕೆ ಲಿಂಕ್ :sampada.net/blog/%E0%B2%85%E0%B2%AA%E0%B2%B0%E0%B2%BF%E0%B2%9A%E0%B2%BF%E0%B2%A4%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97%E2%80%8D-5/15/08/2012/37964


 


 


 


 

Rating
No votes yet

Comments