ಐದು ವರ್ಷಗಳ ’ಯುಗ’
ಈಗಂತೂ ನಮಗೆ ’ಯುಗ’ ಅಂದ್ರೆ ಬಹಳ ದೊಡ್ಡ ಕಾಲಮಾನ ಅಂತ ಅಂದ್ಕೊಂಡ್ಬಿಡ್ತೀವಿ. ದಿನ ನಿತ್ಯದ ಮಾತುಕತೇಲೀ ’ಒಂದ್ ಕೆಲಸ ಹೇಳಿದ್ರೆ, ಒಂದ್ ಯುಗ ಮಾಡ್ತಾನೆ’ ಅಂತೆಲ್ಲ ಅಂತಿರ್ತೀವಲ್ಲ, ಅದಕ್ಕೆ ಈ ಭಾವನೆಯೇ ಕಾರಣ.
ರಾಮ ತ್ರೇತಾಯುಗದಲ್ಲಿದ್ದನಂತೆ. ಕೃಷ್ಣ ದ್ವಾಪರಯುಗದಲ್ಲಿದ್ದನಂತೆ. ಒಂದೊಂದು ಯುಗಕ್ಕೂ ಎಷ್ಟೋ ಸಾವಿರಾರು ವರ್ಷಗಳು ಅಂತ ಲೆಕ್ಕಾಚಾರವೇ ಇದೆ. ಅದೆಲ್ಲಾ ಹೇಳಿ ತಲೆ ಕೊರೆಯೋದಿಲ್ಲ ಈಗ. ಆದ್ರೆ, ಯಾವಾಗಲೂ ’ಯುಗ’ ಅನ್ನೋ ಮಾತಿಗೆ ಈ ತಿಳಿವು ಇರಲಿಲ್ಲ ಅನ್ನೋದನ್ನ ಸ್ಪಷ್ಟ ಪಡಿಸೋಕೆ ಒಂದು ನಾಕು ಸಾಲು ಬರೆಯುವೆ ಅಷ್ಟೇ.
ವೇದಗಳಲ್ಲಿ ಇರುವ ಜ್ಯೋತಿಷಕ್ಕೆ (astronomy) - ಅಂದರೆ ಆಕಾಶಕಾಯಗಳ, ಮತ್ತೆ ಅವು ಹುಟ್ಟುವ ಮುಳುಗುವ ಸಮಯಗಳನ್ನು ಕಂಡುಹಿಡಿಯುವ ಲೆಕ್ಕಾಚಾರಗಳ ತಿಳುವಳಿಕೆ ಅಂತಲೇ ಅರ್ಥ. "ನಿಮಗೆ ಶನಿಕಾಟ ಇದೆ, ರಾಹು ಕ್ರೂರ ದೃಷ್ಟಿ ಇದೆ" ಅನ್ನೋ ತರಹದ ಫಲಜ್ಯೋತಿಷ (astrology) ಅಲ್ಲ. ಈ ಜ್ಯೋತಿಷಕ್ಕೆ ನಮಗೆ ಸಿಗೋ ಒಳ್ಳೇ ಆಕರ ಅಂದರೆ ಲಾಗಧನ ವೇದಾಂಗ ಜ್ಯೋತಿಷ. ಭಾರತದಲ್ಲಿ ಜ್ಯೋತಿಷ್ಶಾಸ್ತ್ರದ ಬಗ್ಗೆ ದೊರಕಿರುವ ಅತೀ ಹಳೇ ಹೊತ್ತಿಗೆ. ಈ ಪುಸ್ತಕದಲ್ಲಿ ಇರುವ ಅಂತರಿಕ ಆಧಾರಗಳಿಂದ ಈ ಪುಸ್ತಕವನ್ನ ಬರೆದಿರೋದು ( ಬರೀತಿದ್ರೋ ಇಲ್ವೋ, ಆಗ ಬರವಣಿಗೆ ಇತ್ತೇ, ಲಿಪಿ ಇತ್ತೇ, ಇವೆಲ್ಲ ಜಿಜ್ಞಾಸೆ ಈಗ ಬೇಡ - ಆದರೆ ಒಟ್ಟುಗೂಡಿಸಿರೋದು (compilation) ಅಂತಲಾದ್ರೂ ಹೇಳಬಹುದು - ಸುಮಾರು ಕ್ರಿ.ಪೂ.೧೪೦೦ ರಲ್ಲಿ; ಅಂದರೆ ಹತ್ತಿರ ಹತ್ತಿರ ಮೂರೂವರೆ ಸಾವಿರ ವರ್ಷಗಳ ಹಿಂದೆ ಅಂತ ಖಡಾಖಂಡಿತವಾಗಿ ಹೇಳಬಹುದು. ಆವರೆಗೆ ಇದ್ದ ತಿಳಿವನ್ನೆಲ್ಲ ಸಂಗ್ರಹಿಸಿ ಲಾಗಧನು ಈ ಪುಸ್ತಕವನ್ನ ಬರೆದ ಅಂತ ತಿಳ್ಕೊಳ್ಳೋದ್ರಲ್ಲಿ ತಪ್ಪಿಲ್ಲ.ಅಂದರೆ, ಇಲ್ಲಿ ವಿವರಿಸಿರೋ ವಿಷಯಗಳು ಅವನ ಮುಂಚೆಯೇ ಇದ್ದ ಲೆಕ್ಕಾಚಾರಗಳು ಅಂತ ಅಂದ್ಕೋಬಹುದು.
ವೇದಾಂಗ ಜ್ಯೋತಿಷದ ಮೊದಲ ಶ್ಲೋಕ ಹೀಗಿದೆ:
ಪಂಚ ಸಂವತ್ಸರಮಯಂ ಯುಗಾಧ್ಯಕ್ಷಂ ಪ್ರಜಾಪತಿಂ ||
ದಿನರ್ತ್ವಯನ ಮಾಸಾಂಗಂ ಪ್ರಣಮ್ಯ ಶಿರಸಾ ಶುಚಿಃ ||
ನನ್ನ ಅನುವಾದ:
ಶುಚಿಯಾಗಿ ತಲೆಬಾಗಿ ನಮಿಸುವೆನು
ಐದುವರ್ಷದ ಯುಗದ ಮುಂದಾಳುವನು |
ದಿನ-ಋತು-ಮಾಸ-ಅಯನಗಳನೇ
ತನ್ನಂಗಗಳಾಗಿರಿಸಿದ ಪ್ರಜಾಪತಿಯನು ||
ಈ ಮೊದಲ ಸಾಲಿನಲ್ಲೇ ’ಐದು ವರ್ಷಗಳ’ ಯುಗಕ್ಕೆ ಅಧ್ಯಕ್ಷನಾದ ಪ್ರಜಾಪತಿಯನ್ನು ಸ್ಮರಿಸಿರುವುದನ್ನು ನೋಡಿ.
ವೇದಾಂಗ ಜ್ಯೋತಿಷದಲ್ಲಿ ಐದು ವರ್ಷಗಳ ಯುಗದ ಬಗ್ಗೆ, ಅದು ಆರಂಭವಾಗೋದು ಯಾವಾಗ, ಮುಗಿಯೋದು ಯಾವಾಗ, ಒಂದು ಯುಗಕ್ಕೆ ಎಷ್ಟು ದಿನ, ಎಷ್ಟು ಬಾರಿ ಚಂದ್ರ ಹುಟ್ಟುವನು, ಮುಳುಗುವನು,ವಿಶೇಷದಿನಗಳನ್ನು ಹೇಗೆ ಗಣಿಸುವುದು ಈ ಎಲ್ಲವೂ ವಿವರವಾಗಿವೆ. ಒಂದೆರಡು ಶ್ಲೋಕವನ್ನು ಮಾತ್ರ ಇಲ್ಲಿ ಕೊಡುತ್ತಿರುವೆ.
ಸ್ವರಾಕ್ರಮೇತೇ ಸೋಮಾರ್ಕೌ ಯದಾ ಸಾಕಂ ಸವಾಸವೌ |
ಸ್ಯಾತ್ ತದಾದಿ ಯುಗಂ ಮಾಘಃ ತಪಃ ಶುಕ್ಲೋSಯನಂ ಹ್ಯುದಕ್ ||
ಪ್ರಪದ್ಯೇತೇ ಶ್ರವಿಷ್ಟಾದೌ ಸೂರ್ಯ ಚಂದ್ರಮಸಾವುದಕ್
ಸಾರ್ಪಾರ್ಧೇ ದಕ್ಷಿಣಾರ್ಕಸ್ತು ಮಾಘ ಶ್ರಾವಣಯೋಃ ಸದಾ ||
ಕುಪ್ಪಣ್ಣಶಾಸ್ತ್ರಿ ಅವರ ಇಂಗ್ಲಿಷ್ ಅನುವಾದದ ತರ್ಜುಮೆ ಇಲ್ಲಿ ಮಾಡಿರುವೆ:
"ಸೂರ್ಯಚಂದ್ರರಿಬ್ಬರೂ ಶ್ರವಿಷ್ಟಾ* ನಕ್ಷತ್ರದ ಬಳಿ ಇದ್ದಾಗ, ಯುಗವು ಮೊದಲಾಗುವುದು. ಅದೇ ಸಮಯದಲ್ಲಿ ಮಾಘ ಮಾಸವೂ, ತಪಸ್ ಎಂಬ ಕಾಲವೂ, ಮಾಘ ಮಾಸದ ಶುಕ್ಲ ಪಕ್ಷವೂ ಮತ್ತು ಸೂರ್ಯ ಉತ್ತರಕ್ಕೆ ತೆರಳುವ ಉತ್ತರಾಯಣವೂ ಆರಂಭವಾಗುವುವು. ಶ್ರವಿಷ್ಟೆಯಲ್ಲಿ ಮೊದಲಾಗುವ ಸೂರ್ಯ ಚಂದ್ರರ ಉತ್ತರದ ಪ್ರಯಾಣ ಆಶ್ಲೇಷಾದ ನಡುವಿನಲ್ಲಿರುವಾಗ ದಕ್ಷಿಣಕ್ಕೆ ತಿರುಗತೊಡಗುವುದು. ಸೂರ್ಯನ ಈ ಅಯನ ಗಳು ಯಾವಾಗಲೂ ಮಾಘ ಶ್ರಾವಣ ಮಾಸಗಳಲ್ಲಿ ಬರುತ್ತವೆ"
ಆಸಕ್ತರಿಗೆ ಅಂತರ್ಜಾಲದಲ್ಲಿ ಸ್ವಲ್ಪ ಹುಡುಕಿದರೆ ಕುಪ್ಪಣ್ಣಶಾಸ್ತ್ರಿ ಅವರ ಅನುವಾದ,ಟೀಕೆಗಳು ಸುಲಭವಾಗಿ ಸಿಗುತ್ತವೆ. ಓದಿ ನೋಡಿ.
-ಹಂಸಾನಂದಿ
*ಶ್ರವಿಷ್ಟಾ ನಕ್ಷತ್ರಕ್ಕೆ ಈಗ ಧನಿಷ್ಟಾ ಅಂತ ಕರೆಯುವ ಬಳಕೆ ಇದೆ.
Comments
ಉ: ಐದು ವರ್ಷಗಳ ’ಯುಗ’
In reply to ಉ: ಐದು ವರ್ಷಗಳ ’ಯುಗ’ by ananthesha nempu
ಉ: ಐದು ವರ್ಷಗಳ ’ಯುಗ’
In reply to ಉ: ಐದು ವರ್ಷಗಳ ’ಯುಗ’ by savithru
ಉ: ಐದು ವರ್ಷಗಳ ’ಯುಗ’
In reply to ಉ: ಐದು ವರ್ಷಗಳ ’ಯುಗ’ by ananthesha nempu
ಉ: ಐದು ವರ್ಷಗಳ ’ಯುಗ’
In reply to ಉ: ಐದು ವರ್ಷಗಳ ’ಯುಗ’ by ananthesha nempu
ಉ: ಐದು ವರ್ಷಗಳ ’ಯುಗ’
In reply to ಉ: ಐದು ವರ್ಷಗಳ ’ಯುಗ’ by hamsanandi
ಉ: ಐದು ವರ್ಷಗಳ ’ಯುಗ’
In reply to ಉ: ಐದು ವರ್ಷಗಳ ’ಯುಗ’ by ananthesha nempu
ಉ: ಐದು ವರ್ಷಗಳ ’ಯುಗ’