ಮಹಾ ಪಾತಕಿ ಗೋವಿಂದನೂ ಅವನಿಗೆ ಸಿಕ್ಕ ಸಾಯುಜ್ಯವೂ !
ಬಾಲ್ಯದಲ್ಲಿ ’ನಾಟಕವಾಡುವ ಹುಚ್ಚು,” ನಮಗೆ ನಮಗೆ ಹೇಗೆ ಬಂತು ಎನ್ನುವುದು, ಇಂದಿಗೂ ನಮಗೆ ತಿಳಿಯದ ಸಂಗತಿ. ನಾಟಕವಾಡುವ ಕಲೆ ಅಷ್ಟು ಸುಲಭಸಾಧ್ಯವಲ್ಲವೆನ್ನುವುದು, ಆಗಲೇ ನಮಗೆ ಹೇಗೋ ತಿಳಿದುಹೋಯಿತು.
ನಮ್ಮ ಗೋಪಾಲರಾವ್ ಮೇಷ್ಟ್ರ ಚಿತ್ರಕಲೆಯ ಪ್ರಭಾವ ನನ್ನಮೇಲೆ ಗಾಢವಾದ ಪ್ರಭಾವ ಆಗಿತ್ತು. ಆಗಾಗ ಯಾವುದಾದರೂ ಕಥೆಪುಸ್ತಕದಿಂದ ಕೆಲವು ನನಗಿಷ್ಟವಾದ ಚಿತ್ರಗಳನ್ನು ಪ್ರಯತ್ನ ಪೂರ್ವಕವಾಗಿ ನಕಲು ಮಾಡುವ ಪ್ರಯತ್ನದಲ್ಲಿ ಸ್ವಲ್ಪ ಜಯಶೀಲನಾಗಿದ್ದೆ. ಆದರೆ, ನಾನೆ ನೆನೆಪಿನಿಂದ ಕೆಲವು ದಿನನಿತ್ಯದ ಸಂಗತಿಗಳನ್ನು ಚಿತ್ರರೂಪದಲ್ಲಿ ಬಿಳಿಕಾಗದದ ಮೇಲೆ ತರುವಲ್ಲಿ ಅಸಮರ್ಥನಾಗಿದ್ದದ್ದನ್ನು ಗಮನಿಸಿದ್ದೆ.
ಆದರೆ ನಾನು ಬರೆದ ಚಿತ್ರಗಳು, ಉದಾಹರಣೆಗೆ, ಕಾಳಿಂಗಮರ್ದನ, ಕೃಷ್ಣ ರಾಧೆಯರದು, ನಮ್ಮ ಮನೆಯವರ ಮೇಲೆ ಒಳ್ಳೆಯ ಅಭಿಪ್ರಾಯವನ್ನೇ ಮೂಡಿಸಿತ್ತು. ವ್ಯಂಗ್ಯ-ಚಿತ್ರಗಳ ಕಡೆಗೆ ನನ್ನ ಮನಸ್ಸು ವಾಲಿದ್ದು, ರಾಶಿಯವರ, ’ಕೊರವಂಜಿ ನಗೆಪತ್ರಿಕೆ ’ಯನ್ನು ಓದಲು ತೊಡಗಿದಾಗ, ಅದರ ಮುಖಪುಟದ ವಿನ್ಯಾಸವನ್ನು ಆರ್. ಕೆ. ಲಕ್ಷ್ಮಣ್ ಅಧ್ಬುತವಾಗಿ ಬರೆದಿದ್ದನ್ನು ನಾನು ಗಮನಿಸುತ್ತಿದ್ದೆ. ಪ್ರಜಾವಾಣಿಯ 'ಮೊದ್ದುಮಣಿ,' ' ಬ್ರಿಂ ಗಿಂಗ್ ಅಪ್ ಫಾದರ್' ಮೊದಲಾದ ನಗೆಚಿತ್ರಗಳು ನನ್ನ ಮನಸ್ಸಿನಲ್ಲಿ ಮನೆಮಾಡಿ ದ್ದವು ! ಆಗ ನನಗೆ ಚಿತ್ರಗಳನ್ನೂ ಬರೆಯಲು ಪ್ರಯತ್ನಮಾಡುವ ಮನಸ್ಸಾಯಿತು. (ಬಾಲ್ಯದಿಂದಲೂ ನಾನು ಆರ್.ಕೆ.ಲಕ್ಷ್ಮಣರ ಪರಮ ಪ್ರಿಯ)
ಹೀಗೆ ನನ್ನ ಮನಸ್ಸು ಕೆಲವು ಆಯಾಮಗಳ ಕಡೆಗೆ ವಾಲಿದ್ದು, ಚಿತ್ರಕಲೆ ಮತ್ತು ಚಿತ್ರಕಲೆಯಲ್ಲೇ ಒಂದು ವಿಶೇಷ ಪ್ರಾಕಾರವಾದ, ಮತ್ತು ಭಾರತದೇಶದಲ್ಲಿ ಆಗತಾನೇ ಪ್ರಸಿದ್ಧಿಗೆ ಬರುತ್ತಿದ್ದ, ವ್ಯಂಗ್ಯ ಚಿತ್ರಕಲೆಗಳಲ್ಲಿ ನಾನು ಏನಾದರೂ ಹೊಸದನ್ನು ಸುಲಭವಾಗಿ ನಿರ್ಮಿಸಲಾರೆ ಎನ್ನುವುದನ್ನು ಪತ್ತೆ ಹಚ್ಚಲು ನನಗೆ ಹಲವಾರು ವರ್ಷಗಳೇ ಬೇಕಾದವು. ಸುಮ್ಮನೆ ನಕಲು ಮಾಡುವುದು ಬೇರೆ. ಅದರಲ್ಲಿ ಪ್ರಾವೀಣ್ಯತೆ ಸಾಧಿಸಿ ಹೊಸದಾದ ನನ್ನದೇ ಶೈಲಿಯಲ್ಲಿ ಸಂರಚಿಸುವ ಶಕ್ತಿಬೇರೆ !
ನಮ್ಮ ಬಾಲ್ಯಪ್ರಪಂಚದಲ್ಲಿ ಸುಮಾರು ೧೫ ವರ್ಷಗಳ ತನಕ, ಯಾವುದನ್ನು ಹೆಚ್ಚಾಗಿ ಅವಲೋಕಿಸಿರುತ್ತೇವೆಯೋ, ಅವೇ ಸಾಮಾನ್ಯವಾಗಿ ನಮ್ಮ ಮುಂದಿನ ಜೀವನದಲ್ಲಿ ನಮ್ಮಲ್ಲಿ ಮನೆಮಾಡುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ಯಾವುದಾದರೂ ಒಂದು ಮಾಧ್ಯಮದಲ್ಲಿ ಕೊಡುಗೆ ಕೊಡುವ ಸಾಮರ್ಥ್ಯವನ್ನು ಹೊಂದಿರುವುದನ್ನು ನಾವು ಚೆನ್ನಾಗಿ ಕಂಡಿದ್ದೇವೆ. ನಮಗೆ ಅವನ್ನು ಪತ್ತೆಹಚ್ಚಲು ಹಲವುಬಾರಿ ಹೆಚ್ಚು ಸಮಯದ ಅವಧಿಬೇಕಾಗುತ್ತದೆ. ಉದಾಹರಣೆಗೆ ಕ್ರಿಕೆಟ್ ಕಾಮೆಂಟರಿ ಕೊಡುವ ಹರ್ಶ ಭೋಗ್ಲೆ, ಒಬ್ಬ ಕೆಮಿಕಲ್ ಇಂಜಿನಿಯರ್ ಆಗಿ ರೂಪಗೊಂಡವರು. ಆತ ತಮ್ಮ ಪ್ರೌಢಾವಸ್ತೆಯಲ್ಲಿ ಹೇಗೋ ತಮ್ಮ ಶಕ್ತಿಯನ್ನು ಕಂಡುಕೊಂಡರು. ಮುಂದೆ ಟೆಲಿವಿಶನ್ ವಲಯದಲ್ಲಿ ಮಾಡಿದ ಸಾಧನೆಯನ್ನು ನಾವೆಲ್ಲಾ ಕಂಡಿದ್ದೇವೆ. ಶ್ರೀರಾಮ್ ಲಾಗು ವೃತ್ತಿಯಲ್ಲಿ ವೈದ್ಯರು, ಅನುಜ್ ಸಕ್ಸೇನ ಸಹಿತ. ಆದರೆ ಅವರ ಕಾರ್ಯಕ್ಷಮತೆಗಳು ಗರಿಕೆದರಿ ಫಲಕೊಟ್ಟಿದ್ದು ಚಲನ ಚಿತ್ರಮಾಧ್ಯಮದಲ್ಲಿ ! ಆದ್ದರಿಂದ ತಂದೆ-ತಾಯಿಗಳು, ಮತ್ತು ಪೋಷಕರು ಈ ಗುರುತಿಸುವ ಕೆಲಸವನ್ನು ಸಮರ್ಪಕವಾಗಿ ಮಾಡಬಹುದು.
ನನ್ನ ತಮ್ಮ ಚಂದ್ರನಿಗೆ, ಪ್ರಚಂಡ ಜ್ಹಾಪಕ ಶಕ್ತಿಯಿದ್ದು, ಓದಿದ್ದನ್ನು ಉಪಯೋಗಿಸಿಕೊಂಡು ತನ್ನ ಯೋಚನಾ ಶಕ್ತಿಯನ್ನೂ ಸಮಯೋಚಿತವಾಗಿ ಬಳಸಿ ಏನಾದರೂ ತನ್ನದೇ ಆದ ವಿಚಾರ ಲಹರಿಯನ್ನು ಬೇರೆಯವರಿಗೆ ಯಶಸ್ವಿಯಾಗಿ ತಿಳಿಸಬಲ್ಲ ಸಮರ್ಥತೆ ಇದ್ದಿದ್ದನ್ನು ಮನೆಯಲ್ಲಿ ಎಲ್ಲರೂ ಗಮನಿಸಿದ್ದರು. ಅದೇ ಶಕ್ತಿಯೇ ಅವನ ಜೀವನದುದ್ದಕ್ಕೂ ಪೋಶಕವಾಗಿ ಬಂದು ಅನೇಕ ಹೊಸಹೊಸ ಕಾರ್ಯಗಳನ್ನು ಸುಂದರವಾಗಿ, ಮಾಡುವ ಕಲೆ ಕರಗತವಾಯಿತು ! ನನ್ನನ್ನೇ ತೆಗೆದುಕೊಂಡರೆ, ಬರಿಯಲು ಓದಲು ಮತ್ತು ಬರೆದ ಪ್ರಹಸನಗಳನ್ನು ಪ್ರಕಟಿಸಲು ನನಗೆ ಅತಿಯಾದ ಆಸಕ್ತಿ, ಮತ್ತು ಅವನ್ನು ಬೇಗ ಮಾಡುವ ಕ್ಷಮತೆ ನನ್ನಲ್ಲಿದೆ. ಯಾರಾದರೂ ಕರಡು ಪ್ರತಿಯನ್ನು ತಿದ್ದುವ ಕೆಲಸ ಕೊಟ್ಟರೆ ಅವನ್ನು ತೃಪ್ತಿಕರವಾಗಿ ನಿಭಾಯಿಸಬಲ್ಲೆ ಎನ್ನುವ ವಿಷಯ ತಿಳಿದದ್ದು ಕೇವಲ ೯ ವರ್ಷಗಳ ಹಿಂದೆ. ಇದೇ ಅಲ್ಲದೆ ಈ ಸ್ಪರ್ಧಾತ್ಮಕವಾದ ವಿಶ್ವದಲ್ಲಿ ಪ್ರತಿವಿಷಯಗಳೂ ವಿಸ್ತಾರವಾಗಿ ಬೆಳೆಯುತ್ತಾ ಹೋಗಿವೆ. ಅವೆಲ್ಲದರಲ್ಲೂ ವಿಶೇಷ ಸ್ಥಾನಗಳಿವೆ. ತಿಳಿದಷ್ಟೂ ಮತ್ತೆ ಮತ್ತೆ ವಿಸ್ತಾರವಾಗುವ ಸಂಗತಿಗಳೇ ಹೆಚ್ಚು.
ಹೊಳಲ್ಕೆರೆಯಂತಹ ಕತ್ತಲ ಹಳ್ಳಿಯಲ್ಲಿ :
ಆ ನಮ್ಮ ಬಾಲ್ಯದ ಹೊಳಲ್ಕೆರೆಯ ಕಗ್ಗತ್ತಲ ಪ್ರಪಂಚದಲ್ಲಿ ವಿಹರಿಸುತ್ತಿದ್ದ ನಾನು, ನನ್ನ ತಮ್ಮ ಮತ್ತು ಅನೇಕರು, ಕೇವಲ ಆ ಪ್ರದೇಶದಲ್ಲಿ ರೂಢಿಯಲ್ಲಿದ ಬಯಲುನಾಟಕಗಳು, ಮತ್ತು ಆಗಾಗ ಬರುವ ಟೆಂಟ್ ಸಿನಿಮಾದ ಚಲನಚಿತ್ರಗಳನ್ನು ವೀಕ್ಷಿಸುವುದನ್ನು ಬಿಟ್ಟರೆ, ಸಂಗೀತ, ಸಾಹಿತ್ಯ, ಇತ್ಯಾದಿಗಳು ನಮ್ಮಪಾಲಿಗೆ ಕನಸಾಗಿದ್ದವು. ಒಬ್ಬ ಕುರುಡ ಸಂಗೀತ ಮೇಷ್ಟ್ರು ಇದೃ. ಅವರ ಹೆಸರು ಜ್ಞಾಪಕವಿಲ್ಲ. ಗೋಪಾಲದೇವರ ಗುಡಿಯಲ್ಲಿ ಕಾರ್ತಿಕಮಾಸದಲ್ಲಿ ಪೂಜೆ ಇರೋದು. ಆಗ ಅವರು ಪಿಟೀಲು ಬಾರಿಸುತ್ತಾ " ಶ್ರೀತಮ ಪಾದಮ, ಶ್ರೀದಪ ಮಗರಿಸ " ಅಂತಲೊ ಏನೋ ಹಾಡುತ್ತಿದ್ದನ್ನು ಬಿಟ್ಟರೆ, ಶಾಸ್ತ್ರೀಯ ಸಂಗೀತವಿದೆಯೆನ್ನುವುದು ನನಗೆ ತಿಳಿದದ್ದು, ನಮ್ಮ ಎನ್. ಡಿ. ಕೃಷ್ಣನ್ ಮೇಷ್ಟ್ರು, ತಮ್ಮ ತಮ್ಮ ’ಜಗನ್ನಾಥ” ಎನ್ನುವನನ್ನು ಹೊಳಲ್ಕೆರೆ ಕರೆಸಿ, ಅದೇ ಗೋಪಾಲದೇವರ ಗುಡಿಯ ಕಾರ್ತೀಕಮಾಸದ ಕಾರ್ಯಕ್ರಮಗಳಲ್ಲಿ ಹಾಡಲು ಅವಕಾಶಮಾಡಿಕೊಟ್ಟಾಗ ಮಾತ್ರ ! ಜಗನ್ನಾಥ, ಹಾಡುವುದರ ಜೊತೆಗೆ, ಕೊಳಲನ್ನು ದಿವ್ಯವಾಗಿ ನುಡಿಸುತ್ತಿದ್ದ. ಇದನ್ನು ಯಾವ ಸಂಗೀತದ ಜ್ಞಾನವೂ ಇಲ್ಲದಿದ್ದ ನಾನು ಹೇಳುತ್ತಿರುವುದು. ಈಗ ಸಾಕಷ್ಟು ಸಂಗೀತ ಕಛೇರಿಗಳನ್ನು ಅವಲೋಕಿಸಿದ್ದೇನೆ. ಪ್ರಖ್ಯಾತ ಗಾಯಕರನ್ನು ಹತ್ತಿರದಿಂದ ನೋಡಿ, ಕೇಳಿದ್ದೇನೆ ಸಹಿತ. ಆಗ ಕೇಳಲು ಸುಶ್ರಾವ್ಯವಾಗಿತ್ತು ಎನ್ನುವುದನ್ನು ಬಿಟ್ಟರೆ, ಅದು ಯಾರ ಕೃತಿ, ಶ್ಯಾಮಾಶಾಸ್ತ್ರಿ, ತ್ಯಾಗರಾಜರು, ಪುರುಂದರದಾಸರು, ಸುಬ್ಬುಲಕ್ಶ್ಮಿ ಇವರ ಬಗ್ಗೆ ಮಾಹಿತಿಗಳು ತಿಳಿದಿರಲಿಲ್ಲ.
ನಮ್ಮ ಮನೆಯಲ್ಲಿ ಆಗಿನ ಕಾಲದಲ್ಲಿ, ೫೦ ರ ದಶಕದಲ್ಲಿ ಒಂದು ಎಚ್. ಎಮ್. ವಿ. ಗ್ರಾಮಫೋನ್ ಇತ್ತು. ಸುಮಾರು ೮೦ ಕ್ಕೂ ಮೇಲ್ಪಟ್ಟು ರೆಕಾರ್ಡ್ಸ್ ಗಳಿದ್ದವು. ನಿಜ. ಆದರೆ, ಅವನ್ನು ತಿಳಿಯಹೇಳುವವರು ಯಾರೂ ಇರಲಿಲ್ಲ. ಆ ಹೊತ್ತಿಗೆ ನಮ್ಮ ಗ್ರಾಮಾಫೋನ್ ರೆಕಾರ್ಡ್ ಪ್ಲೇಯರ್ ನ್ನು ಯಾರಿಗೊ ಅಪ್ಪ ಕೊಟ್ಟರಂತೆ ! ಹೊಳಲ್ಕ್ರೆರೆಯಲ್ಲಿ ಕೆಟ್ಟಾಗ ರಿಪೇರಿ ಮಾಡುವವರ್ಯಾರು ? ಮನೆತುಂಬಾ ಗ್ರಾಮಫೋನ್ ಪ್ಲೇಟ್ ಗಳಿದ್ದವು. ಅವನ್ನು ದಾನವಾಗಿ ಯಾರಿಗೋ ಕೊಟ್ಟರಂತೆ. ಹೀಗಾಗಿ ಮನೆಯಲ್ಲಿ ಖಜಾನೆಯಿದ್ದರೂ ಅದರ ಲಾಭನಮಗಾಗಿರಲಿಲ್ಲ. ಇನ್ನು ಮನೆಯಲ್ಲಿ ಅಟ್ಟದಮೇಲೆ ಮರದ ಪೆಟಾರಿಯತುಂಬಾ ಕಾದಂಬರಿಗಳು, ಹಾಡಿನ ಪುಸ್ತಕಗಳು, ಕವಿತೆ, ಇಂಗ್ಲೀಷ್ ಪುಸ್ತಕಗಳು, ಬೆಂಗಾಲಿ ಕಾದಂಬರಿಗಳ ಅನುವಾದದ ಕನ್ನಡ ಪುಸ್ತಕಗಳು ; ಮರಾಠಿಭಾಷೆಯ ಪುಸ್ತಕಗಳು, ತೆಲುಗಿನ ’ಜ್ಯೋತಿಷ್ಯದಮೇಲೆ ಬರೆದ ಬೃಹದ್ಗಂಥಗಳು, ಹಳೆಯ ಪಂಚಾಂಗಗಳು, ಇತ್ಯಾದಿಗಳಿದ್ದವು.
ಹೊಳೆನರಸೀಪುರ, ಗುಬ್ಬಿ ಚಿದಂಬರಾಶ್ರಮಗಳಿಂದ ಕೆಲವು ಪತ್ರಿಕೆಗಳು ಅಂಚೆಯಲ್ಲಿ ಬರುತ್ತಿದ್ದವು. "ಸೇವಾಸದನ" ವೆಂಬ ಮಾಸ ಪತ್ರಿಕೆ, ಗುಬ್ಬಿಯ ಆಷ್ರಮದಿಂದ ಬರುತ್ತಿತ್ತು. ಅದರಲ್ಲಿ ವೇದಾಂತದ ಜೊತೆಗೆ ಚಿಕ್ಕ ಕಥೆಗಳನ್ನು ಕೊಟ್ಟಿರುತ್ತಿದ್ದರು. ಅಲ್ಲಿ ಇಲ್ಲಿನ, ಸುದ್ದಿ-ಸಮಾಚಾರಗಳೂ ಇರುತ್ತಿದ್ದವು. ಪುಟ್ಟ ಕಥೆಗಳೂ ಇರುತ್ತಿದ್ದವು. ಅಲ್ಲಿನ ಒಂದು ಪ್ರಸಂಗವನ್ನು ನನ್ನ ತಮ್ಮ ಚಂದ್ರ ಗುರುತುಹಾಕಿಕೊಂಡು ಒಂದು ನಾಟಕ ಬರೆದ. ಅದನ್ನು ನಾವಿಬ್ಬರೂ ಓದಿದಾಗ ಚೆನ್ನಾಗಿದೆಯಲ್ಲಾ ಅಂತನ್ನಿಸಿತು.
ಅಮ್ಮ ನಾಟಕಗಳ ಬಗ್ಗೆ ಹೇಳುತ್ತಿದ್ದಳು. ಊರೂರು ಸುತ್ತಿದ ನಮ್ಮಮ್ಮ ತಾನು ನೋಡಿದ ಕೆಲವು ನಾಟಕಗಳನ್ನು ಹೊಗಳೋಳು. ಇದೇ ನಮಗೆ ಪ್ರೇರಣೆಯೇ ನಮಗಂತೂ ತಿಳಿಯದು. ಯಾವುದೊ ಅವ್ಯಕ್ತ ಶಕ್ತಿ ನಮ್ಮನ್ನು ಪ್ರೇರೇಪಿಸುತ್ತಿದೆ ಎಂದು ನನಗನ್ನಿಸಿತ್ತು. ಆಗ ನಾವು ವೆಂಕಟೇಶ ಗ್ರಂಥಮಾಲ ಪುಷ್ಪ ೧, ಎಂದು ಅಲ್ಲಿ ನಮೂದಿಸಿದಂತೆ ನಾವೂ ಅದನ್ನೆ ಅನುಕರಿಸಿ, ಒಂದು ಚಿಕ್ಕ ನಾಟಕ ಪ್ರಹಸವನ್ನು ನನ್ನ ತಮ್ಮ ಚಂದ್ರ ಸೃಷ್ಟಿಸಿ, ಅದಕ್ಕೆ ಪುಷ್ಪ-೧, ೨ ಎಂದು ಹೆಸರಿಟ್ಟದ್ದು ಜ್ಞಾಪಕ . ಅದನ್ನು ಮೊದಲಬಾರಿಗೆ ಓದಿದಾಗ ಮೈ ರೋಮಾಂಚನವಾಯಿತು. ಆ ಕಥೆ ಪುಸ್ತಕದಲ್ಲಿತ್ತು. ಆದರೆ, ಅದನ್ನು ತನ್ನದೇ ರೀತಿಯಲ್ಲಿ ಬರೆದ ಚಂದ್ರನ ಊಹಾಶಕ್ತಿಯನ್ನು ನಾವು ಅತಿಯಾಗಿ ಮೆಚ್ಚಿಕೊಂಡೆವು. "ಮಹಾಪಾಪಿ, ಗೋವಿಂದ" ನ ವೈಕುಂಠ ಪ್ರಾಪ್ತಿಯ ಪ್ರಸಂಗ,"
ಇದು ಕಥೆಯ ಶೀರ್ಷಿಕೆ. ಕಥಾ ಪ್ರಸಂಗ ಹೀಗಿದೆ :
ಮಹಾ ಕೄರಿ, ಜನರನ್ನು ಕೊಲ್ಲಲೂ ಹೇಸದ ನರಹಂತಕ, ಗೋವಿಂದ, ಅತಿಯಾಗಿ ಕೊಲೆ, ಸುಲಿಗೆ, ಹಿಂಸೆಗಳನ್ನು ಮಾಡಿ ಅಪಾರ ಹಣ ಸಂಪತ್ತನ್ನು ಗಳಿಸಿದ್ದ. ಅವನಿದ್ದ ಹಳ್ಳಿಯ ಸುತ್ತಮುತ್ತಲ ಜನರಿಗೆ ಅವನು ಸಿಂಹಸ್ವಪ್ನ -ಸದೃಶನಾಗಿದ್ದ ಎಂದರೆ ತಪ್ಪಲ್ಲ. ಹೀಗೆ ದಿನಗಳು, ತಿಂಗಳುಗಳು, ವರ್ಷಗಳು ಜರುಗಿದವು. ಅಲ್ಲಿನ ಪ್ರಜೆಗಳು ಬೇಸತ್ತಿದ್ದರು. ಅಲ್ಲಿನ ಒಡೆಯನೋ ಪುಕ್ಕಲ. ಅವನು ಗೋವಿಂದನನ್ನು ಅಲ್ಲಾಡಿಸಲೂ ಆಗದವ.
ಒಮ್ಮೆ ಗೋವಿಂದ, ತನ್ನ ಬೇಟೆ ಮುಗಿಸಿ ಮನೆಯ ಕಡೆ ಹೋಗುತ್ತಿದ್ದ. ಪಕ್ಕದ ಮನೆಯ ಮುಂದೆ ಒಂದು ವೃಂದಾವನ. ಅದರಲ್ಲಿ ಸೊಂಪಾಗಿ ಬೆಳೆದ ತುಳಸಿಗಿಡಕ್ಕೆ ನೀರು ಹಾಕದ ಕಾರಣಕ್ಕೆ ಅದು ಬಾಡಿ ಬಸವಳಿದಿತ್ತು. ಅದು ನೀರುಕಂಡು ಬಹುಶಃ ಒಂದು ದಿನವಾಗಿರಬಹುದು. ಮನೆಯವರೆಲ್ಲಾ ನೆರೆಊರಿಗೆ ಹೋಗಿರಬಹುದು. ಬೇರೆ ಯಾರೂ ಇದನ್ನು ಗಮನಿಸಿಲ್ಲವೆಂದು ತೋರುತ್ತಿತ್ತು. ಗೋವಿಂದನಿಗೆ ಹೇಗೊ ಮರುಕಬಂತು. ಅವನು ಪಕ್ಕದಲ್ಲೇ ಇದ್ದ ಭಾವಿಯಿಂದ ನೀರು ಸೇದಿ ಬಿಂದಿಗೆಯಲ್ಲಿ ತಂದು ವೃಂದಾವನದಲ್ಲಿದ್ದ ತುಳಸಿ ಗಿಡಕ್ಕೆ ನೀರುಣಿಸಿದ. ಸ್ವಲ್ಪಹೊತ್ತಿನಲ್ಲೇ ಗಿಡದ ಎಲೆಗಳು ಪಲ-ಪಲ ಎಂದು ಹರಡಿಕೊಂಡು ತನ್ನ ಸಹಜ ಸ್ಥಿತಿಗೆ ಬಂತು. ಗೋವಿಂದನಿಗೆ ಆದ ಸಂತೋಷ ಅಪಾರ. ತನ್ನ ಕಣ್ಣಿನ ಅಂಚಿನಲ್ಲಿದ್ದ ನೀರನ್ನು ಒರಸಿಕೊಳ್ಳುತ್ತಾ, ದಾಪುಗಾಲು ಹಾಕುತ್ತಾ ನಡೆದೇ ಹೋದ. ಇದಾದ ಕೆಲವು ವಾರಗಳಲ್ಲಿ ಯಾವುದೊ ಭಾರಿ-ಜಡ್ಡಿಗೆ ತುತ್ತಾಗಿ ಅವನು ಮರಣಿಸಿದ ಅನ್ನೊ ವಿಚಾರ ತಿಳಿಯಿತು.
ಗ್ರಾಮದ ಜನ ಆನಂದದಿಂದ ಕುಣಿದು ಸಂಭ್ರಮಿಸಿದರು. ಆದರೆ ಅವನ ಮರಣಾನಂತರ, ಪರಲೋಕದಲ್ಲಾದ ಪ್ರಸಂಗ ಹೀಗಿತ್ತು.
ಚಂದ್ರ, ತನ್ನ ಊಹಾಶಕ್ತಿಯಿಂದ, ಲೇಖನಿಯಲ್ಲಿ ಕಥಾಪ್ರಸಂಗವನ್ನು ಸುಂದರವಾಗಿ ಚಿತ್ರಿಸಿದ್ದ.
ದೇವಲೋಕದಲ್ಲಿ, ಯಮರಾಜನ ದರ್ಬಾರಿನ ದೃಷ್ಯ. ಅಲ್ಲಿ ಚಿತ್ರಗುಪ್ತನನ್ನು ಯಮಧರ್ಮರಾಜ ಪ್ರಶ್ನಿಸುತ್ತಾನೆ. "ಎಲ್ಲಿ ಮುಂದಿನ ಪ್ರಾಣಿಯ ಕಾರ್ಯಗಳನ್ನು ವಿವರಿಸಿ". ಎಂದಾಗ, ಗೋವಿಂದ ಹೆಸರನ್ನು ಓದುತ್ತಾನೆ, ಚಿತ್ರಗುಪ್ತ.
"ಸುಮಾರು ಒಂದು ಗಂಟೆಯ ಸಮಯದ ವರದಿಯಲ್ಲಿ, ಒಂದಾದರು ಚಿಕ್ಕ ಪುಟ್ಟ ಒಳ್ಳೆಕೆಲಸಮಾಡದ ಈ ಮನುಷ್ಯ ಕ್ರಿಮಿಯ ವಿಶಯ ನಿಲ್ಲಿಸಿ, ಬೇರೆ ಓದಿ" ಎಂದು ಯಮಧರ್ಮರಾಯ ಬೇಸರಪಟ್ಟು ಹೇಳಿದಾಗ, ಚಿತ್ರಗುಪ್ತ "ಮಹಾಪ್ರಭು ಇಲ್ಲಿ ಚಿಕ್ಕದಾಗಿ ಉಲ್ಲೇಖಿಸಿದ್ದಾರೆ " "ಸ್ವಲ್ಪ ತಾಳಿ, ಓದಿ ಮುಗಿಸಿಬಿಡುತ್ತೇನೆ" ಎನ್ನುತ್ತಾನೆ. "ಹಾ ! ಬೇಗ ಮುಂದುವರೆದು ಮುಗಿಸಿ, ಅದನ್ನು" ಎಂದ ಯಮಧರ್ಮರಾಯರು, ಪಾಪಿಯೊಬ್ಬನು ಮಾಡಿದ ಸ್ವಲ್ಪವಾದರೂ ಒಳ್ಳೆಯಕೆಲಸವನ್ನು ಕೇಳಿ, ಸಂತೊಷ ಭರಿತನಾಗಿ, "ಪರವಾಗಿಲ್ಲ, ಭೂಲೋಕದ ಜನರಲ್ಲಿ ಭಗವದ್ಭಕ್ತಿ, ದೇವರ ಪೂಜೆಯಲ್ಲಿ ಆಸಕ್ತಿ, ಮತ್ತು ಒಳ್ಳೆಯ ಕೆಲಸಮಾಡಲು ಪ್ರೇರಣೆ ಬರತೊಡಗಿರುವುದು, ಒಂದು ಶುಭಸಮಾಚಾರ". "ಗೋವಿಂದನಂತಹ ಅಮಾನುಷವ್ಯಕ್ತಿ, ಪಾಪಿ, ಸಮಾಜಕಂಟಕ, ಹೇಗೆ ತನ್ನ ಜೀವನಶೈಲಿಯನ್ನು ಸುಧಾರಿಸಿಕೊಂಡಿದ್ದಾನೆ." "ಚಿತ್ರಗುಪ್ತರೆ, ಗೋವಿಂದನಿಗೆ ಶೀಘ್ರದಲ್ಲಿಯೇ ಸ್ವರ್ಗಪ್ರಾಪ್ತಿಯ ಸುಖವನ್ನು ನಾವು ಆಶೀರ್ವದಿಸಿದರೆ, ಅವನು ತನ್ನ ಮುಂದಿನ ಜನ್ಮದಲ್ಲಿ ಒಬ್ಬ ಮಹಾನ್ ಆದರ್ಶವ್ಯಕ್ತಿಯಾಗುವುದರಲ್ಲಿ ಸಂದೇಹವಿಲ್ಲ" ವೆಂದು ಅಪ್ಪಣೆ ಕೊಡಿಸಿದರು.
ನಮ್ಮ ನಮ್ಮ ಪ್ರಾರಭ್ದ ಕರ್ಮಗಳನ್ನು ಗಟ್ಟಿಯಾಗಿ ನಂಬುವ ನನಗೆ, ಯಮಧರ್ಮರಾಯ ಹೇಗೆ ಗೋವಿಂದನನ್ನು ಸ್ವರ್ಗಕ್ಕೆ ಕಳಿಸುವ ಹಕ್ಕಿನ ಅರ್ಹತೆಪಡೆಯುತ್ತಾನೆ. ಕರ್ಮಕ್ಕೆ ತಕ್ಕ ಪ್ರತಿಫಲ ದೊರೆಯಬೇಡವೆ ? ಒಂದೇ ಒಂದು ದಿನ ಗಿಡಕ್ಕೆ ನೀರುಹಾಗಿದ್ದು ಯಾವ ಮಹಾ ಕೆಲಸ ! ಎನ್ನುವ ಹಲವಾರು ಅನುಮಾನಗಳು ಒಮ್ಮೆಲೇ ತಲೆಕೆಡಿಸಲಾರಂಭಿಸಿದವು. ಅದು ಆದದ್ದು ಇಂದು ! ಹಿಂದೆ ಆ ಪಾತ್ರವನ್ನು ನನಗೆ ಚಂದ್ರ ಕೊಟ್ಟಾಗ, ನಾನು ಆನಂದದಿಂದ ನಿರ್ವಹಿಸಿದ್ದೆ. ನನಗೆ ಪಾತ್ರದಲ್ಲಿ ಒಳಹೊಕ್ಕು, ಹಸಿದ ಹೊಟ್ಟೆಗೆ ನೀರು ಉಣಿಸುವ ಪವಿತ್ರಕಾರ್ಯವನ್ನು ಇಂದು ನಾನು ಮಾಡುತ್ತಿರುವುದು, ಎನ್ನುವ ಭಾವನೆ ನನ್ನ ಮೈಮನಗಳಲ್ಲೆಲ್ಲಾ ತುಂಬಿತ್ತು ! ಅದರಿಂದ ಆ ಸಮರ್ಪಣಾ ಭಾವದಿಂದ ನಟಿಸಿದ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾದದ್ದು ಆಶ್ಚರ್ಯವೇನಲ್ಲ. ಯಮನ ಪಾತ್ರವನ್ನು ಚಂದ್ರ, ಚೆನ್ನಾಗಿಯೇ ನಿರ್ವಹಿಸಿದ್ದ. ಪಾರುಪತ್ತೆಗಾರರಲ್ಲಿ ಒಬ್ಬರ ಪಾತ್ರ, ಛಾಯಪ್ಪನವರ ಮಗ, ರಾಮಕೃಷ್ಣ ಮಾಡಿದ್ದ. ಗೋಪಾಲನ ಪಾತ್ರವೂ ಇತ್ತು. ಗೋವಿಂದನ ಪಾತ್ರವಹಿಸಿದ್ದ ನನಗೆ ಪುರಸ್ಕಾರವೂ, ದೊರೆಯಿತು, ಎಂದರೆ, ಇಂದು, ನನಗೇ ನಂಬಲು ಸಾಧ್ಯವಿಲ್ಲ.
ಅಲ್ಲಿನ ದೇವತೆಗಳೆಲ್ಲಾ ಪುಷ್ಪವೃಷ್ಟಿಯನ್ನು ಕರೆದು, ಗೋವಿಂದನಿಗೆ, ಶುಭ ಕೋರುತ್ತಾರೆ. ಇದರ ತಾತ್ಪರ್ಯವೆಂದರೆ, ಕೆಲವರು, ಗೋವಿಂದನಂತಹವರು, ತಮ್ಮ ಜೀವನದಲ್ಲಾದ ಯಾವುದಾದರೂ ಹೀನ ಘಟನೆಯಿಂದ ಕೆಲವುಸಮಯ ರಾಕ್ಷಸೀಯ ಪ್ರವೃತ್ತಿಯಲ್ಲಿ ವರ್ತಿಸುವ ಸಾಧ್ಯತೆಗಳಿವೆ. ಅವರ ತಪ್ಪುಗಳನ್ನು ಮನ್ನಿಸಿದರೆ, ಅವರು ನಮ್ಮಂತೆ ಒಳ್ಳೆಯ ನಾಗರೀಕರಾಗಬಹುದು. ಅಂತಹವರಿಗೆ ನಾವು ನೀಡಬೇಕಾದದ್ದು, ಸಾಂತ್ವನ, ಮತ್ತು ಒಳ್ಳೆಯ ವಿಷಯಗಳ ಬಗ್ಗೆ ಪ್ರೇರಣೆ.
ಈ ನಾಟಕವನ್ನು ತನ್ನ ತಂದೆತಾಯಿಗಳಿಗೆ ತೋರಿಸಲು, ಗೋಪಾಲ ಇಷ್ಟಪಟ್ಟಿದ್ದ. ಏಕೆಂದರೆ, ನಾಟಕದಲ್ಲಿ ಅವನದೂ ಒಂದು ಪೋಷಕ ಪಾತ್ರವಿತ್ತು. ನಮಗೆ ನಮ್ಮ ನಾಟಕಗಳನ್ನು ನೋಡುವೆವು ಎಂದು ಯಾರಾದರು ಹೇಳಿದರೆ ಸಾಕು ಅನ್ನಿಸಿತ್ತು. ಕಾಳಘಟ್ಟದಲ್ಲಿ ನಮ್ಮ ಅಕ್ಕ, ಭಾವನವರ ಮುಂದೆ ಆಡಿದ ನಮ್ಮ ಈ ನಾಟಕ ಬಹಳಜನ ಪ್ರೇಕ್ಷಕರನ್ನು ಒದಗಿಸಿತ್ತು. ಗೋವಿಂದರಾಯರು, ರಾಮಣ್ಣ, ರಾಜಣ್ಣ, ಸುಮಿತ್ರತ್ತೆ, ನಾಗರಾಜ, ಲಲಿತತ್ತಿಗೆ, ಮಕ್ಕಳು, ಗ್ರಾಮದ ಕೆಲವು ಆಸಕ್ತರು ಭಾಗವಹಿಸಿದ್ದರು. ನಾವು ಭಾವನವರ ಮನೆಯ ಹೊರಗಿನ ಪಡಸಾಲೆಯ ಬಳಿ, ಒಂದೆರಡು ದುಬುಟಿಗಳನ್ನೂ ಕಂಬಳಿಗಳನ್ನೂ ಕಟ್ಟಿ, ನೆಲಕ್ಕೆ ಒಂದು ಜಮಖಾನವನ್ನು ಹಾಸಿದ್ದೆವು. ಅದು ನೆಲದಿಂದ ಸ್ವಲ್ಪ ಎತ್ತರದಲ್ಲಿತ್ತು. ಕೆಳಗಡೆ ಹಳ್ಳಿಯ ಜನ, ಕುಳಿತು ಬೆರಗುಕಣ್ಣುಗಳಿಂದ ನೋಡುತ್ತಿದ್ದರು. "ಈ ಪ್ರಸಂಗ ಎಲ್ಲಿ ಬಂದಿತ್ತು," ಎನ್ನುವ ವಿಷಯ ತಿಳಿಯಲು ಕೆಲವರಿಗೆ ಕುತೂಹಲವಿದ್ದರೂ, ಯಾರು ತಮಗೆ ಇದೂ ತಿಳಿಯದಾಯಿತೆ ಎಂದು ನಗುವರೆಂಬ ಭಯದಿಂದ ಸುಮ್ಮನಿದ್ದರು. ಯಮ, ಇರುವುದು, ಅವರಿಗೆ ಸಮಾಧಾನ. ಯಾವುದೋ ದೇವಲೋಕದ ಸಭೆಯಲ್ಲಿ ನಡೆದ ಪ್ರಸಂಗವನ್ನು ಆಡುತ್ತಿದ್ದಾರೆ, ಎನ್ನುವ ಸಮಾಧಾನದಿಂದ ಸುಮ್ಮನೆ ಕೂತು ನೋಡುತ್ತಿದ್ದರು.
ಕೇವಲ ಒಂದು ತಾಸಿನಷ್ಟು ಸಮಯದ ನಾಟಕ, ನಮಗೆ ಒಳ್ಳೆಯ ಪ್ರೋತ್ಸಾಹ ಮತ್ತು ಗೌರವಾದರಗಳನ್ನು ತಂದಿತ್ತು. ನಮ್ಮ ನಟನೆಯಲ್ಲಿ ಏನೂ ಹುರುಳಾಗಲೀ, ಹೊಸತನವಾಗಲೀ ಇರಲಿಲ್ಲ. ಅತ್ಯಂತ ಕಳಪೆಯ ನಾಟಕ ನಮ್ಮದು, ಎಂದು ಅನ್ನಿಸಿದ್ದು, ನಮಗೆ. ಆದರೆ ನಮ್ಮ ಭಾವ ಅಕ್ಕನವರ ದೃಷ್ಟಿಯಲ್ಲಿ ನಾವು ನಾಟಕ ರಚನೆ, ದಿಗ್ದರ್ಶನ, ನಟನೆಗಳನ್ನು ಕರಗತಮಾಡಿಕೊಂಡು ಒಂದು ಸುಂದರ ನಾಟಕವನ್ನು ಸ್ವತಂತ್ರವಾಗಿ ಆಡಬಲ್ಲ ಸತ್ವಯುತ-ಕಲಾವಿದರೆಂದು ಪರಿಗಣಿಸಲ್ಪಟ್ಟಿದ್ದೆವು.
ನಮ್ಮ ನಾಟಕದ ಪರಿಕಲ್ಪನೆ, ಅದರ ಪಾತ್ರವರ್ಗದ ಹಂಚಿಕೆಯೇನೋ ಆಯಿತು. ಆದರೆ ರಂಗಸಜ್ಜಿಕೆ, ಪಾತ್ರಗಳಿಗೆ ಬೇಕಾದ ವೇಷ-ಭೂಷಣಗಳು, ಕಿರೀಟ, ಬೃಂದಾವನದ-ಮಾದರಿ, ಇತ್ಯಾದಿಗಳನ್ನು ರಚಿಸಿ, ಅದನ್ನು ಜೋಪಾನವಾಗಿ ಬಸ್ ನಲ್ಲಿ ’ಕಾಳಘಟ್ಟ ’ದ ತನಕ ತೆಗೆದುಕೊಂಡು ಸಾಗಿಸುವ ಬಗ್ಗೆ ಯೋಚನೆ ಹೋಯಿತು. ಪ್ಯಾಕಿಂಗ್ ವ್ಯವಸ್ಥೆಗಳ ಸ್ವಲ್ಪವೂ ಜಾನಕಾರಿಯಿಲ್ಲದ ನಮಗೆ ಮಾರ್ಗದರ್ಶನಮಾಡಿದ್ದು ನಮ್ಮಮ್ಮನೇ !
'ಅಮ್ಮನ ಪ್ರೋತ್ಸಾಹವೇ ನಮಗೆ ಶ್ರೀರಕ್ಷೆ :
ಅವಳು ನಮಗೆ ಗೆಳತಿಯಾಗಿ, ದಿಗ್ದರ್ಶಕಳಾಗಿ, ಮಾರ್ಗದರ್ಶಕಳಾಗಿ ಮತ್ತಿನ್ನೇನೋ ಎಲ್ಲವೂ ಆಗಿದ್ದಲ್ಲದೆ, ನಮಗೆ ಎಲ್ಲ ಸಮಯದಲ್ಲೂ ಸಹಕರಿಸಿ ಪ್ರೋತ್ಸಾಹಿಸಿ, ನಮ್ಮೂರಿಂದ ಹೊರಗೆ ಕಳಿಸಿದ ಶ್ರೇಯಸ್ಸೂ ಅವಳಿಗೇ ಸಲ್ಲಬೇಕು. ನಾಗಣ್ಣನಿಗೆ ನಮ್ಮ ನಾಟಕದ ವಿಚಾರ ಹೇಳಿ ಉಪಯೋಗವಿಲ್ಲ. ನಮ್ಮಪ್ಪ ಯಾವ ವಿಷಯಕ್ಕೂ ತಲೆಹಾಕುತ್ತಿರಲಿಲ್ಲ. ಅಮ್ಮನ ಸಹಕಾರವಿಲ್ಲದೆ ನಾವು ಒಂದು ಹೆಜ್ಜೆಯನ್ನೂ ಇಡುವಂತಿರಲಿಲ್ಲ. ಒಟ್ಟಿನಲ್ಲಿ ನಮ್ಮ ನಾಟಕ ಬಗ್ಗೆ ಯಾರಾದರೂ ಒಂದೆರಡು ಒಳ್ಳೆಮಾತಾಡಿದ್ದಿದ್ದರೆ, ಅದರ ಸಂಪೂರ್ಣ ಶ್ರೇಯಸ್ಸು ಅಮ್ಮನಿಗೇ ಸಲ್ಲಬೇಕು !
ಯೇನನ್ನಾದರೂ ಸಾಧಿಸಲು ಹಾತೊರೆಯುತ್ತಿದ್ದ ನಮ್ಮ ಮಾನಸಿಕ ಸ್ಥಿತಿಗೆ ನೀರೆರೆದು ನಮ್ಮನ್ನು ಸಕ್ರಿಯರನ್ನಾಗಿ ಮಾಡಲು ಈ ನಾಟಕ ನಮ್ಮನ್ನು ಮಾನಸಿಕವಾಗಿ ತಯಾರುಮಾಡಿತ್ತು !
ಮನೆಯಲ್ಲಿ ನಮಗೆ ಸ್ವಾಗತ :
ಕಾಳಘಟ್ಟಗ್ರಾಮದಿಂದ ನಾಟಕವಾಡಿ, ಮನೆಗೆ ಬಂದಾಗ, ನಮಗೆ, ಒಂದು ಯಶಸ್ವಿ ಕ್ರೆಕೆಟ್ ತಂಡ ಗೆಲುವಿನಿಂದ ಸ್ವದೇಶಕ್ಕೆ ಮರಳಿದ ಮಾನಸಿಕಸ್ಥಿತಿ ಆವರಿಸಿತ್ತು !ಅದೇನೋ ಸಂತಸ ಸಮಾಧಾನ, ಮತ್ತು ಆತ್ಮವಿಶ್ವಾಸಗಳು ತಮ್ಮ ಛಾಪನ್ನು ನಮ್ಮ ಮುಖದಮೇಲೆ ಸ್ಥಾಪಿಸಿದ್ದವು, ಎಂದು ಬೇರೆ ಹೇಳಬೇಕಾಗಿರಲಿಲ್ಲ !
-ವೆಂಕಟೇಶ್,
Comments
ಉ: ಮಹಾ ಪಾತಕಿ ಗೋವಿಂದನೂ ಅವನಿಗೆ ಸಿಕ್ಕ ಸಾಯುಜ್ಯವೂ !
In reply to ಉ: ಮಹಾ ಪಾತಕಿ ಗೋವಿಂದನೂ ಅವನಿಗೆ ಸಿಕ್ಕ ಸಾಯುಜ್ಯವೂ ! by makara
ಉ: ಮಹಾ ಪಾತಕಿ ಗೋವಿಂದನೂ ಅವನಿಗೆ ಸಿಕ್ಕ ಸಾಯುಜ್ಯವೂ !
In reply to ಉ: ಮಹಾ ಪಾತಕಿ ಗೋವಿಂದನೂ ಅವನಿಗೆ ಸಿಕ್ಕ ಸಾಯುಜ್ಯವೂ ! by venkatesh
ಉ: ಮಹಾ ಪಾತಕಿ ಗೋವಿಂದನೂ ಅವನಿಗೆ ಸಿಕ್ಕ ಸಾಯುಜ್ಯವೂ !