ಪುರಾತನ ನೂತನ
ಕವನ
**** ಪುರಾತನ ನೂತನ ****
ಶ್ಯಾಮಲ ಶುಭ್ರ ರಮ್ಯ ಮೇಘ ಮಾಲೆ
ಮಂದ ಮೃದುಗತಿಯಲಿ ಸಾಗುತಿದೆ ಮೇಲೆ.
ಬಿತ್ತರ ಬನ ರಾಶಿಗೆ ಹಸಿರನು,
ಮೆತ್ತಿದೆ ಪರ್ಣ ಸಹಸ್ರ ಲೀಲೆ.
ಪ್ರಶಾಂತ ಪ್ರಭೆಯ ತಪಸ್ವಿನಿಯಂದದಿ
ಕಾವೇರಿ ಹರಿದಿಹಳೆದುರಿನಲೆ.
ತೀರ್‍ಅದ ದೂರದ ಹಸಿರುಲ್ಲಿನ ಮೇಲೆ
ಚಿಮ್ಮುವ ಧವಳ ಕ್ರ್‍ಔಂಚ ಬಾಲೆ.
ಹೊಚ್ಚ ಹೊಸ ಮುಂಜಾನೆಯ ಕಾಣಿಕೆ
ಕೊಟ್ಟಿಹ ರವಿ ಔದಾರ್ಯದಲಿ.
ಕಾನನ ತಂಪನು ತೀರಕೆ ತರುತಿಹ,
ಪವನನು ಘನ ಉತ್ಸಾಹದಲಿ.
ಸುಮಧುರ ಗಾನವ ಹಾಡುತ ಹಾರಿವೆ
ವಿಹಗ ವಿತಾನವು ಸನಿಹದಲಿ.
ಕುಣಿದಾಡುತಿವೆ ಹೊಂಗಿರಣೋಘವು,
ಹರಿಯುವ ನದಿಯಲೆಯಲೆಗಳಲಿ.
ಪಕ್ಷಿ ಕೂಜನದಲಿ, ವ್ಯೋಮ ಬಿತ್ತಿಯಲಿ,
ಹಸಿರಿನಾಳದಲಿ ಸೌಂದರ್ಯ.
ಬೆಳಗಿನ ಮಂಜಲಿ, ಹರಿಯುವ ನದಿಯಲಿ,
ಕ್ಷಿತಜರೇಖೆಯಲಿ ಸೌಂದರ್ಯ.
ಸರ್ವಮಯ, ಸಂತೃಪ್ತಮಯ,
ಸೌಖ್ಯಮಯವೀ ಸೌಂದರ್ಯ.
ರಸಸೌಂದರ್ಯವನೀರುತ ಮೈಮರೆತಿಹೆ
ನಾ ಕಾವೇರಿಯ ಮಡಿಲಿನಲಿ.
ನವಯುಗ ಜನ್ಯ ನೂತನ ಚೇತನ
ನಾ, ನಿಂತಿಹೆ ತೀರದ ತುದಿಯಲ್ಲಿ.
ಪುರಾತನ ಪೃಥ್ವಿಯ ಪ್ರಕೃತಿ ವಿಲಾಸವು,
ಹಬ್ಬಿದೆ ದೃಷ್ಟಿಯ ಎದುರಿನಲಿ.
ಸೌಂದರ್ಯಾನುಭೂತಿಯ ಹಾಡಿದೆ ಹೃದಯ,
ಪುರ್‍ಆತನ ನೂತನ ಅಭಿಗಮನದಲಿ.
ಹೃದಯ ಗಾನಕೆ ಕರತಾಡನ ಲಭಿಸಿವೆ,
ಪ್ರಕೃತಿ ಸಮೂಹ ಸಮಕ್ಷದಲಿ.
ನವಚೇತನಕೆ ಪರಮಾನಂದದ ಸಂಚಲನ.
ಕಾರಣವೇ ಈ ನೂತ್ನ ಪುರಾತನ ಸಮ್ಮಿಲನ.
ಪುರಾತನವಳಿಸಿದೆ ನೂತನ ನೂನ್ಯತೆ ಕ್ಷಣಕಾಲ.
ಬಯಸಿದೆ ನೂತನ, ಪುರಾತನ ಸೌಷ್ಠವ ಚಿರಕಾಲ.
ಚಂದ್ರಹಾಸ ( ೨೬ - ೮ - ೨೦೧೨ )
Comments
ಉ: ಪುರಾತನ ನೂತನ
In reply to ಉ: ಪುರಾತನ ನೂತನ by gurudutt_r
ಉ: ಪುರಾತನ ನೂತನ