ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೧
ಡಾll ಸರ್ವೇಪಲ್ಲಿ ರಾಧಾಕಷ್ಣನ್ ಇವರ ಹುಟ್ಟುಹಬ್ಬವಾದ ಸೆಪ್ಟೆಂಬರ್ ತಿಂಗಳ ಐದನೇ ದಿನಾಂಕವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿ ಆ ಮೂಲಕ ಆ ಮಹಾನ್ ಶಿಕ್ಷಕರಾದ ರಾಧಾಕೃಷ್ಣನ್ ಅವರಿಗೆ ನಮನ ಸಲ್ಲಿಸುವುದು ಎಲ್ಲರಿಗೂ ತಿಳಿದ ವಿಷಯ. ಅವರು ಉತ್ತಮ ಶಿಕ್ಷಕರಲ್ಲದೆ, ಉತ್ತಮ ತತ್ವಜ್ಞಾನಿಗಳು ಮತ್ತು ಉತ್ತಮ ಆಡಳಿತಗಾರರು ಹಾಗೂ ಉತ್ತಮ ಚಿಂತಕ ಹಾಗೂ ರಾಷ್ಟ್ರಪತಿಗಳ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದವರು. ಇದೇ ತಿಂಗಳಿನಲ್ಲಿ ಒಂದು ವಾರದ ಅಂತರದಲ್ಲಿ ಭಾರತ ರತ್ನ ಮತ್ತು ಅಂತರಾಷ್ಟ್ರೀಯ ಮಟ್ಟದ ಮಹಾನ್ ತಂತ್ರಜ್ಞ ಹಾಗೂ ದಕ್ಷ ಆಡಳಿತಗಾರರೂ ಮತ್ತು ದೇಶದ ಮಹಾನ್ ಚಿಂತಕರೂ ಹಾಗೂ ದ್ರಷ್ಟಾರರಾದ ಸರ್. ಎಂ. ವಿಶ್ವೇಶ್ವರಯ್ಯನವರು ಜನ್ಮತೆಳೆದ ದಿನ (ಸೆಪ್ಟೆಂಬರ್, ೧೨) ಮತ್ತು ಇದನ್ನು ದೇಶದಾದ್ಯಂತ ಇಂಜಿನೀಯರುಗಳ ದಿನವನ್ನಾಗಿ ಆಚರಿಸುವುದು ಸರ್ವವಿಧಿತ. ಆದ್ದರಿಂದ ಈ ಸಪ್ತಾಹದಲ್ಲಿ ಅವರಿಬ್ಬರ ಘನತೆ ಗಾಂಭೀರ್ಯಗಳಿಗೆ ಸರಿತೂಗಬಲ್ಲಂತಹ ಭಾರತ ರತ್ನ ಡಾll ಎ.ಪಿ.ಜೆ. ಅಬ್ದುಲ್ ಕಲಾಮ್ ಅವರ ವಿಚಾರ ಧಾರೆಗಳನ್ನು ಹಂಚಿಕೊಳ್ಳೋಣವೆನ್ನುವ ಆಶಯ ಹೊಂದಿದ್ದೇನೆ. ಅವರು ನಿಜವಾದ ಅರ್ಥದಲ್ಲಿ ಭಾರತೀಯರು ಮತ್ತು ಅವರನ್ನು ಕುಲಮತಗಳಿಗೆ ಅತೀತವಾಗಿ ಎಲ್ಲರೂ ಗೌರವಾಧರಗಳಿಂದ ಕಾಣುತ್ತಾರೆ. ಅವರ ವಿಚಾರಧಾರೆಗಳ ಸಾರವನ್ನು ಒಳಗೊಂಡ ಕಿರು ಪುಸ್ತಕವನ್ನು ಶ್ರೀ ಸಂತ್ ಗಜಾನನ್ ಮಹಾರಾಜ್ ಕಾಲೇಜ್ ಆಫ್ ಇಂಜಿನೀಯರಿಂಗ್, ಶೇಗಾಂವ್, ಮಹಾರಾಷ್ಟ್ರ ಇವರು ಪ್ರಚುರ ಪಡಿಸಿರುತ್ತಾರೆ. ವಾಸ್ತವವಾಗಿ ಇದು ಅವರ ಬರವಣಿಗೆಗಳ ಮತ್ತು ಸಂದರ್ಶನಗಳ ಸಂಕ್ಷಿಪ್ತ ಸಂಗ್ರಹ ಗ್ರಂಥ. ಇದನ್ನು ಓದುತ್ತಿರುವಾಗ ಪ್ರತಿಯೊಬ್ಬ ನಾಗರೀಕನೂ ದೇಶದ ಕುರಿತಾಗಿ ಚಿಂತನೆಯಲ್ಲಿ ಬೀಳುತ್ತಾನೆ ಮತ್ತು ತಾನು ದೇಶಕ್ಕಾಗಿ ನಿರ್ವಹಿಸಬೇಕಾದ ಪಾತ್ರವನ್ನು ಕುರಿತಾಗಿ ಆಲೋಚಿಸ ತೊಡಗುತ್ತಾನೆ. ಅದಲ್ಲದೆ ಒಬ್ಬ ಪೋಷಕ/ಶಿಕ್ಷಕನಾಗಿ ತಾನು ನಿರ್ವಹಿಸಬೇಕಾದ ಪಾತ್ರದ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ. ಈ ಲೇಖನ ಮಾಲಿಕೆಯನ್ನು ಓದುವ ಮೊದಲು ಪ್ರಕಾಶಕರ ಮುನ್ನುಡಿಯನ್ನು ಓದಿದರೆ ಕಲಾಮ್ ಸಾಹೇಬರ ಚಿಂತನೆಯ ದಿಶೆಯು ಅರ್ಥವಾಗುತ್ತದೆ. ಎಂದಿನಂತೆ ಸಹೃದಯಿ ಸಂಪದಿಗರ ಪ್ರೋತ್ಸಾಹ ನನಗಿದೆ ಎಂದು ಆಶಿಸುತ್ತೇನೆ. ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಪ್ರಕಾಶಕರ ಮುನ್ನುಡಿ
ಯಾವುದೇ ಒಂದು ದೇಶವು ಉನ್ನತಿ ಹೊಂದಬೇಕಾದರೆ ಅದಕ್ಕೆ ಉನ್ನತ ವ್ಯಕ್ತಿತ್ವದ ನಾಯಕರಿರಬೇಕು ಮತ್ತು ತಮ್ಮ ಗುರಿಯನ್ನು ಮುಟ್ಟುವಲ್ಲಿ ಅವರಿಗೆ ಬದ್ಧತೆ ಮತ್ತು ಛಲ ಇರಬೇಕು. ಅದೃಷ್ಟವಶಾತ್, ಇಂದು ನಮಗೆ ಡಾll ಅಬ್ದುಲ್ ಕಲಾಮ್ ಅವರ ರೂಪದಲ್ಲಿ ಒಬ್ಬ ದ್ರಷ್ಟಾರರಾದ ರಾಷ್ಟ್ರಾಧ್ಯಕ್ಷರಿದ್ದಾರೆ. ಭಾರತವನ್ನು ಸಧೃಡ ಮತ್ತು ಸ್ವಾವಲಂಭಿಯಾಗಿಸುವ ನಿಟ್ಟಿನಲ್ಲಿ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸುಮಾರು ನಲವತ್ತು ವರ್ಷಗಳಿಂದ ಮಹತ್ವವಾದ ಕೊಡುಗೆಗಳನ್ನು ಕೊಟ್ಟಿದ್ದಾರೆ.
ಡಾll ಅಬ್ದುಲ್ ಕಲಾಮ್ ಅವರ ಪುಸ್ತಕಗಳನ್ನು ಓದುವುದೆಂದರೆ, ತೀರ್ಥಯಾತ್ರೆ ಮಾಡಿದಷ್ಟು ಸಂತೋಷವಾಗುತ್ತದೆ; ಏಕೆಂದರೆ ಡಾll ಅಬ್ದುಲ್ ಕಲಾಮ್ ಅವರು ತಮ್ಮ ಬರವಣಿಗೆಗಳನ್ನು ಶ್ರೀ ಸಾಮಾನ್ಯನ ಕುರಿತಾಗಿ ಬರೆದಿರುವುದಲ್ಲದೆ ಅವನ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದವರಾಗಿದ್ದಾರೆ. ಅವರಿಗೆ ಜನಸಾಮಾನ್ಯನೊಂದಿಗೆ ಮನೋಗತವಾದ ಅವಿನಾಭಾವ ಸಂಬಂಧವಿದೆ; ಅವರ ಸರಳತೆ ಹಾಗೂ ರಕ್ತಗತವಾದ ಆಧ್ಯಾತ್ಮಿಕ ಗುಣಗಳು ಇದನ್ನು ಬಿಂಬಿಸುತ್ತವೆ.
“ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ”ವಾಗಿ ಮಾಡುವ ಕನಸು ಹೊಂದಿರುವ ಸನ್ಮಾನ್ಯ ರಾಷ್ಟ್ರಪತಿಗಳ ಅಭಿಲಾಷೆಯನ್ನು ಪೂರೈಸುವ ದಿಶೆಯಲ್ಲಿ ಯುವ ಪೀಳಿಗೆಯ ಪಾತ್ರವು ಮಹತ್ವದ್ದಾಗಿದೆ. ಇದನ್ನು ಮನಗಂಡಿರುವ ರಾಷ್ಟ್ರಪತಿಗಳು, “ಚೈತನ್ಯದಾಯಕ ಚಿಂತನಾ ಶಕ್ತಿ” (Motivative thought Power) ಕಾರ್ಯಕ್ರಮದ ಮೂಲಕ ಅದನ್ನು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಹರಡುತ್ತಿದ್ದಾರೆ. ಆ “ಬಿರುಗಾಳಿ”ಯನ್ನು ನೋಡಿದರೆ ನಾವು ಖಂಡಿತವಾಗಿ ೨೦೨೦ರ ಒಳಗೆ ಅಭಿವೃದ್ಧಿ ಹೊಂದಿದ ದೇಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಯಾವುದೇ ದೇಶವು ಅಭಿವೃದ್ಧಿ ಹೊಂದಬೇಕಾದರೆ ತಾಂತ್ರಿಕತೆಯೊಂದಿಗೆ ಅದರ ಪಾರಂಪರಿಕ ಮೌಲ್ಯಗಳೂ ಕೂಡಾ ಸಮನ್ವಯಗೊಂಡಾಗ ಮಾತ್ರವೇ ಅದು ಸಾಧ್ಯವಾಗುತ್ತದೆ. ಡಾll ಅಬ್ದುಲ್ ಕಲಾಂ ಅವರಿಗೆ ’ಅಗ್ನಿ ಕ್ಷಿಪಣಿ’ಯು ನಮ್ಮ ’ಶಕ್ತಿ ಹಾಗೂ ಸಾಮರ್ಥ್ಯ’ದ ಸಂಕೇತವೇ ಹೊರತು ಅದೊಂದು ವಿದ್ವಂಸಗೊಳಿಸುವ ಅಸ್ತ್ರವಲ್ಲ.
ಡಾll ಅಬ್ದುಲ್ ಕಲಾಂ ಅವರ ಜೀವನವನ್ನು ಸಮೀಪದಿಂದ ಗಮನಿಸಿರುವ ಶ್ರೀ ಅರುಣ್ ತಿವಾರಿ (ಕಲಾಂ ಅವರ ಆತ್ಮಕತೆಯಾದ “Wings of Fire” ಕೃತಿಯ ಸಹ ಲೇಖಕರು) ಇವರು ಹೇಳುವುದೇನೆಂದರೆ, ಜೀವನದ ನಿಜವಾದ ಸಂತೋಷವೇನೆಂದು ಕಂಡುಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ – ಒಬ್ಬನು ತನ್ನೊಳಗೆ ಹುದುಗಿರುವ ನಿರಂತರ ಜ್ಞಾನದ ಮೂಲದೊಂದಿಗೆ ತಾದಾತ್ಮ್ಯವನ್ನು ಹೊಂದುವುದು – ಇದನ್ನು ಪ್ರತಿಯೊಬ್ಬನೂ(ಳೂ) ತನ್ನಷ್ಟಕ್ಕೇ ತಾನು ಕಂಡುಕೊಳ್ಳ ಬೇಕೆನ್ನುವುದೇ ಇದರ ನಿಯಮವಾಗಿದೆ.
ನೀವು ಕಲಾಮ್ ಸಾಹೇಬರನ್ನು ಅವರ ಬರವಣಿಗೆ ಮತ್ತು ಚಿಂತನೆಗಳ ಮೂಲಕ ಭೇಟಿಯಾಗಲು ಸಂತೋಷಿಸುವಿರಲ್ಲದೆ ಅವರನ್ನು ನಿಮ್ಮ ನಿಜವಾದ ಆಧ್ಯಾತ್ಮಿಕ ಗೆಳೆಯನಾಗಿ ಸ್ವೀಕರಿಸುತ್ತೀರ ಎಂದು ನಾನು ನಂಬುತ್ತೇನೆ. ಈ ಒಂದು ಉದ್ದೇಶದಿಂದ ಈ ಸಣ್ಣ ಆಯೋಜಿತ ಪುಸ್ತಕವನ್ನು ಸನ್ಮಾನ್ಯ ರಾಷ್ಟ್ರಪತಿಗಳಾದ ಡಾll ಆವುಳ್ ಫಕೀರ್ ಝೈನುಲಾಬ್ದೀನ್ ಅಬ್ದುಲ್ ಕಲಾಂ ಅವರ ಕನಸಾದ “ಅಭಿವೃದ್ಧಿ ಹೊಂದಿದ ಭಾರತ”ದ ರೂವಾರಿಗಳಾದ ನನ್ನ ಎಳೆಯ ಗೆಳೆಯರ ಮುಂದಿಡುತ್ತಿದ್ದೇನೆ.
-ಪ್ರಾಂಶುಪಾಲರು
*****
ವಿದ್ಯಾರ್ಥಿಗಳಿಗಾಗಿ ಡಾll ಅಬ್ದುಲ್ ಕಲಾಂ ಅವರ ಹತ್ತು ಸೂತ್ರಗಳ ಪ್ರಮಾಣ
(೨೦೦೪ನೇ ಇಸವಿಯ ಗಣರಾಜ್ಯೋತ್ಸವದ ದಿನದಂದು ಬೋಧಿಸಿದ್ದು)
· ನಾನು ನನ್ನ ವಿದ್ಯಾಭ್ಯಾಸ ಅಥವಾ ನನಗೆ ಕೊಡ ಮಾಡಿದ ಕಾರ್ಯವನ್ನು ಶ್ರದ್ಧೆಯಿಂದ ಕೈಗೊಂಡು ಅದರಲ್ಲಿ ಉನ್ನತಿಯನ್ನು ಸಾಧಿಸುತ್ತೇನೆ.
· ಇಂದಿನಿಂದ ನಾನು ಕನಿಷ್ಟ ಹತ್ತು ಜನರಿಗೆ ಓದಲು ಮತ್ತು ಬರೆಯಲು ಕಲಿಸಿಕೊಡುತ್ತೇನೆ.
· ನಾನು ಕನಿಷ್ಟ ಪಕ್ಷ ಹತ್ತು ಸಸಿಗಳನ್ನು ನೆಟ್ಟು ನಿರಂತರ ಕಾಳಜಿಯ ಮೂಲಕ ಅವುಗಳು ಬೆಳೆಯುವುದನ್ನು ದೃಢಪಡಿಸಿಕೊಳ್ಳುತ್ತೇನೆ.
· ನಾನು ಹಳ್ಳಿ ಮತ್ತು ಪಟ್ಟಣ ಪ್ರಾಂತ್ಯಗಳಿಗೆ ಭೇಟಿಯಿತ್ತು ಕಡೇ ಪಕ್ಷ ಐದು ಜನರನ್ನು ಕುಡಿತದ ಚಟದಿಂದ ಮತ್ತು ಜೂಜಾಡುವ ಘೀಳಿನಿಂದ ವಿಮುಕ್ತರನ್ನಾಗಿಸುತ್ತೇನೆ.
· ನನ್ನ ದೇಶಭಾಂದವರ ಕಷ್ಟಗಳನ್ನು ಹೋಗಲಾಡಿಸಲು ನಾನು ನಿರಂತರ ಕೃಷಿ ಮಾಡುತ್ತೇನೆ.
· ನಾನು ಯಾವುದೇ ರೀತಿಯ ಧಾರ್ಮಿಕ, ಮತೀಯ ಅಥವಾ ಭಾಷೀಯ ವಿದ್ವೇಷಗಳನ್ನು ಹುಟ್ಟುಹಾಕುವ ಕಾರ್ಯಗಳನ್ನು ಬೆಂಬಲಿಸುವುದಿಲ್ಲ.
· ನಾನು ಪ್ರಾಮಾಣಿಕನಾಗಿದ್ದುಕೊಂಡು ಲಂಚರಹಿತ ಸಮಾಜಕ್ಕಾಗಿ ನಿರಂತರ ಕೃಷಿ ಮಾಡುತ್ತೇನೆ.
· ನಾನು ಜವಾಬ್ದಾರಿಯುತ ನಾಗರೀಕನಾಗುವ ದಿಶೆಯಲ್ಲಿ ಕಾರ್ಯಪ್ರವೃತ್ತನಾಗುವುದಲ್ಲದೆ ನನ್ನ ಕುಟುಂಬವನ್ನು ನ್ಯಾಯಯುತ ಮಾರ್ಗದಲ್ಲಿರುವಂತೆ ನೋಡಿಕೊಳ್ಳುತ್ತೇನೆ.
· ನಾನು ಯಾವಾಗಲೂ ಮಾನಸಿಕ ಮತ್ತು ದೈಹಿಕ ಅಂಗವಿಕಲರ ಸ್ನೇಹಿತನಾಗಿ ಅವರೂ ಕೂಡ ನಮ್ಮೆಲ್ಲರಂತೆ ಸಹಜವಾಗಿರುವರೆಂಬ ಭಾವನೆಯುಂಟಾಗುವಂತೆ ಮಾಡುತ್ತೇನೆ.
· ನಾನು ನನ್ನ ದೇಶದ ಮತ್ತು ನನ್ನ ದೇಶಭಾಂದವರ ಯಶಸ್ಸನ್ನು ಸಂಭ್ರಮದಿಂದ ಆಚರಿಸುತ್ತೇನೆ.
******
ವಿ. ಸೂ. ಈ ಲೇಖನವು ಡಾll ಅಬ್ದುಲ್ ಕಲಾಂ ಇವರು ನಿಮ್ಮೊಂದಿಗೆ ಮಾತನಾಡುತ್ತಾರೆ (ಒಂದು ಸಂಗ್ರಹ ಗ್ರಂಥ) Dr. Abdul Kalam speaks to you (A compilation) ಆಂಗ್ಲ ಪುಸ್ತಕದ ಅನುವಾದದ ಭಾಗ. ಮುನ್ನುಡಿ i,ii, & iii ಪುಟಗಳು ಮತ್ತು ಪ್ರಮಾಣ ೧ & ೨ ಪುಟಗಳು. ಪ್ರಕಟಣೆಃ ಶ್ರೀ ಸಂತ್ ಗಜಾನನ್ ಮಹಾರಾಜ್ ಕಾಲೇಜ್ ಆಫ್ ಇಂಜಿನಿಯರಿಂಗ್, ಶೇಗಾಂವ್, ಮಹಾರಾಷ್ಟ್ರ. ೨೦೦೪.
******
ಚಿತ್ರಕೃಪೆ: ಗೂಗಲ್
https://encrypted-tbn3.google.com/images?q=tbn:ANd9GcRgMp7akO6Soclf_Zh1-ReLPJSzAtgH3c4ZNym1jefSDYKE3IVWeA
Comments
ಉ: ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೧
In reply to ಉ: ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೧ by mmshaik
ಉ: ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೧
ಉ: ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೧
In reply to ಉ: ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೧ by partha1059
ಉ: ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೧
ಉ: ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೧
In reply to ಉ: ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೧ by bhalle
ಉ: ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೧
ಉ: ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೧
In reply to ಉ: ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೧ by H A Patil
ಉ: ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೧