ಕತೆ [ಪತ್ತೆದಾರಿ] : ಸುಳಿ - ‍‍ ‍(೨)

ಕತೆ [ಪತ್ತೆದಾರಿ] : ಸುಳಿ - ‍‍ ‍(೨)

ಮೊದಲಭಾಗ : ಕತೆ ಪತ್ತೆದಾರಿ : ಸುಳಿ - ೧

ಮುಂದೆ ಓದಿ.....

ಡ್ಯಾಷ್ಬೋರ್ಡಿನಲ್ಲಿದ್ದ ಬ್ಯಾಟರಿ ಹುಡುಕಿದ ಗಿರಿಧರ ಅವಳ ಮುಖ ಮೈಮೇಲೆ ಬೆಳಕು ಹರಿಸಿದ. ನೀಲಿಗಟ್ಟಿದ್ದ ತುಟಿ ಹಾಗು ಮುಖ ಮತ್ತೇನನ್ನೊ ಹೇಳುತ್ತಿತ್ತು. ಬ್ಯಾಟರಿ ಬೆಳಕಲ್ಲಿ ಸೀಟಿನ ಮೇಲೆ ಬಿದ್ದಿದ್ದ, ಇಂಜೆಕ್ಶನ್ ಟ್ಯೂಬ್ ಗಮನಿಸಿದ, ಹಾಗೆ ಎಂತದೊ   ರಾಪರ್, ಬಗ್ಗಿ ಕೈಯಿಂದ ತೆಗೆದು ನೋಡಿ ಬೆಚ್ಚಿಬಿದ್ದ. ಪಾಯಿಸನ್, ಅಂದರೆ ಅವಳಿಗೆ ಪಾಯಿಸನ್ ಇಂಜೆಕ್ಟ್ ಮಾಡಲಾಗಿದೆ, ಅವಳು ಕುಳಿತಲ್ಲೆ ಮರಣ ಹೊಂದಿದ್ದಾಳೆ.

ಅವನಲ್ಲಿ ನಿಂತು ಹತ್ತಿರ ಒಂದು ಗಂಟೆಗೆ ಹತ್ತಿರವಾಗುತ್ತಿತ್ತು, ಅವನು ನಿರ್ದರಿಸಿದ, ಇನ್ನು ಕೆಳಗೆ ಹೋದ ಅವನು ಹಿಂದೆ ಬರಲಾರ. ಬೇಕೆಂದೆ ಸಾಯಿಸಿರುವ ಹೆಣ ಇಲ್ಲಿ ಬಿಟ್ಟು, ತನ್ನನ್ನು ಮೂರ್ಖನನ್ನಾಗಿ ಮಾಡಿ, ಹಣ ಕಿತ್ತು ಪರಾರಿಯಾಗಿದ್ದಾನೆ. ಅವನ ಹಿಂದೆ ಬರುವುದು ಅಸಂಭವ. ಅಲ್ಲಿ ಇರುವುದು ಅಪಾಯ ಎಂದು ನಿರ್ದರಿಸಿ ಕಾರನ್ನು ಚಲಾಯಿಸತೊಡಗಿದ. ಈಗ ಅವನಿಗೆ ಗೊಂದಲ ಎಲ್ಲಿ ಹೋಗುವುದು ಏನು ಮಾಡುವುದು. ಕಾರಿನ ಒಳಗೆ ಅಪರಿಚಿತ ಹೆಣ. ಪೋಲಿಸ್ ಸ್ಟೇಷನ್ ಗೆ ಹೋಗಲ ಅಂದುಕೊಂಡ. ಮರುಕ್ಷಣವೆ ಭಯ ಆವರಿಸಿತು. ಒಂದು ವೇಳೆ ಅವರು ನಂಬದೆ ಹೋದರೆ ತನಗೆ ಅಪಾಯ. ಪೋಲಿಸ್ ಎಂದರೆ ಎಂತದೊ ಭಯ ಅವನನ್ನು ಕಾಡುತ್ತಿತ್ತು

ತಾನೀಗ ಏನು ಮಾಡಬಹುದು. ಉತ್ತಮ ನಿರ್ದಾರವೆಂದರೆ ಯಾರಿಗು ಕಾಣದಂತೆ ಕಾರಿನಲ್ಲಿರುವ ಹೆಣವನ್ನು ಕಾಣದಂತೆ ಮಾಡಿ ಸುಮ್ಮನಾಗಿ ಬಿಡುವುದು. ಸರಿ ಎನ್ನಿಸಿತು ಅದು ಬಿಟ್ಟು ಎಲ್ಲವು ಅಪಾಯಕಾರಿಯೆ. ಹೆಣವನ್ನೀಗ ಏನು ಮಾಡಬಹುದೆಂದು ಚಿಂತಿಸಿದ ಅವನಿಗೆ ಉಪಾಯ ಮಿಂಚಿತು. ಅದರಲ್ಲಿ ಕಡಿಮೆ ರಿಸ್ಕ್  , ತನ್ನ ಹೆಸರು ಈ ಘಟನೆಯಲ್ಲಿ ಒಳಗೊಳ್ಳದಂತೆ ಮಾಡಲು ಅದೆ ಸರಿಯಾದ ಉಪಾಯ ಎಂದು ನಿರ್ದರಿಸಿ. ಕಾರನ್ನು ಸ್ಟಾರ್ಟ್ ಮಾಡಿ , ಬನಶಂಕರಿ ಮೂರನೆ ಘಟ್ಟದ ತನ್ನ ಮನೆಗೆ ಹೊರಟ.
 
.
ಬೆಳಗಿನ ಸಮಯ ಡಾಕ್ಟರ್ ಗಿರಿಧರ, ನಲ್ಲಿಗೆ ಪೈಪ್ ಸಿಕ್ಕಿಸಿ ಕಾರನ್ನು ತೊಳೆಯುತ್ತ ಇದ್ದ. ಹಿಂದಿನ ಎರಡು ಬಾಗಿಲುಗಳನ್ನು ತೆಗೆದು ಒಳಗಿನ ಸೀಟಿನ ಮೇಲೆ, ಹಾಗು ಸಿಟಿನ ಕೆಳಗೆ ಪಾದಗಳನ್ನು ಇಡುವ ಹತ್ತಿರ, ಹೊರಗಡೆ ಹೀಗೆ ಎಲ್ಲ ಕಡ ನೀರನ್ನು ರಬಸವಾಗಿ ಬಿಟ್ಟು ಕಾರನ್ನು ಸ್ವಚ್ಚ ಗೊಳಿಸಿ ತೃಪ್ತಿಯಿಂದ ನೋಡಿದ.
"ನಮಸ್ಕಾರ ಸಾರ್, ಏನು ಬೆಳಗೆ ಬೆಳಗ್ಗೇನೆ ಕಾರ್ ತೊಳಿತ ಇದ್ದೀರ , ಇವತ್ತು ರಜಾ ಎಂದ?"
ಗಟ್ಟಿಯಾದ ದ್ವನಿಗೆ ತಲೆ ತಿರುಗಿಸಿ ನೋಡಿದ ಗಿರಿಧರ,. ಕಾನ್ಸ್ ಟೇಬಲ್  ಚಂದ್ರಪ್ಪ. ಕೈಯಲ್ಲಿ ಹಾಲಿನ ಪ್ಯಾಕೇಟ್ ಹಿಡಿದು ಗೇಟಿನ ಹತ್ತಿರ ನಿಂತಿದ್ದ. ಜಿಗಣೆಯಂತ ಮನುಷ್ಯ ಮಾತಿಗೆ ನಿಂತರೆ ಆಯ್ತು ತಪ್ಪಿಸಿಕೊಳ್ಳಲು ಕಷ್ಟ. ಸಾಮಾನ್ಯ ದೂರ ಕಾಣುವಾಗಲೆ ಒಳಗೆ ಹೋಗಿಬಿಡುವನು ಗಿರಿಧರ, ಆದರೆ ಇಂದು ಅವನಿಗೆ ಬೆನ್ನು ಮಾಡಿ ನಿಂತಿದ್ದು ಮೊದಲೆ ಗಮನಿಸಲಾಗಲಿಲ್ಲ ಅಂತ ಮನದಲ್ಲಿಯೆ ಪೇಚಾಡಿದ.
"ಹೌದ್ರಿ , ಅದೇನೊ ತುಂಬಾನೆ ಗಲೀಜು ಆಗಿಬಿಟ್ಟಿತ್ತು,  ಇನ್ನು ನಾಳೆ ಆಗಲ್ಲ ಅಂತ ತೊಳೆದೆ"
ಗಿರಿಧರ ನುಡಿಯುತ್ತಿರುವಂತೆ, ಯಾವ  ಸ್ವಾಗತವನ್ನು ನಿರೀಕ್ಷಿಸಿದವನಂತೆ, ಗೇಟನ್ನು ತೆಗೆದು ಒಳಗೆ ಅಡಿಯಿಟ್ಟ. ಚಂದ್ರಪ್ಪ.

"ಈಗೇನು ಡಾಕ್ಟ್ರೆ. ಬೀದಿಗೊಂದು ಆಗಿದೆ ವೆಹಿಕಲ್ ವಾಷ್  ಸೆಂಟರ್ ಸರ್ವಿಸ್ ಗಳು, ಮನೆಯಲ್ಲೇಕೆ ಕಷ್ಟ ಪಡಬೇಕು ಬಿಡಿ, ಅದೇನು ಬಾಗಿಲು ತೆರೆದಿಟ್ಟೆ, ನೀರು ಬಿಟ್ಟು ಬಿಟ್ಟಿದ್ದೀರ್, ಒಳಗೆ ಸೀಟೆಲ್ಲ ನೀರಾಗುವದಿಲ್ಲವೆ, ಒಳಗೆ ಸುಮ್ಮನೆ  ಒದ್ದೆ ಬಟ್ಟೆಲಿ ಒರಸಿದರಾಯಿತಪ್ಪ, ನೀವೊಳ್ಳೆ ಅದೇನೊ ಹೇಳ್ತಾರಲ್ಲ, ಹೆಣಸಾಗಿಸಿದ  ವ್ಯಾನನ್ನು ತೊಳೆಯೋದು ಅಂತ ಹಂಗೆ ಒಳಗೆಲ್ಲ ನೀರು ಬಿಟ್ಟಿದ್ದೀರಿ ಬಿಡಿ"

ತನ್ನ ಜೋಕಿಗೆ ತಾನೆ ಗಹಗಹಿಸಿದ ಚಂದ್ರಪ್ಪ, ಒಂದು ಕ್ಷಣ ಬೆಚ್ಚಿದ ಗಿರಿಧರ.

ಅವನಿಗೆ ಏನನ್ನು ಉತ್ತರ ಕೊಡಲು ಹೋಗಲಿಲ್ಲ, ಗಿರಿಧರ, ಸುಮ್ಮನೆ ಏನೇನೊ ಮಾತನಾಡಿ ಮೈಮೇಲೆ ಎಳೆದುಕೊಳ್ಳೊದೇಕೆ, ಮೊದಲೆ ಜಿಗಣೆ ಎಂದು ಸುಮ್ಮನಾದ.

"ಇದೇನು ಕಾಂಪೋಡ್ ಒಳಗೆಲ್ಲ ನೆಲ ಅಗಿಸಿಬಿಟ್ಟಿದ್ದೀರಿ, ಏನು ವ್ಯವಸಾಯ ಜೋರು ಅನ್ನಿಸ್ತುತ್ತೆ, ಒಳ್ಳೆ ಬೆಳೆ ಬಿಡಿ ಈ ವರ್ಷ"

ಗಿರಿಧರ ಸುತ್ತಲು ನೋಡಿದ, ನಂಜಬಟ್ಟಲ ಗಿಡದ ಪಕ್ಕದಿಂದ ಗೇಟಿನವರೆಗಿನ ನೆಲ ಅಗೆದಂತೆ ಆಗಿ ಹೊಸಮಣ್ಣು ಹರಡಿತ್ತು.

"ಹಾಗೇನು ಇಲ್ಲ,  ಅದೇನೊ ಎರಡು ತೆಂಗಿನ ಗಿಡ ಹಾಕಿಸೋಣ ಅಂತ ಮನಸ್ಸು ಆಯಿತು, ಸುಮ್ಮನೆ ಅಗದೆ , ಅಮೇಲೆ ಅದೇಕೊ ಬೇಡ ಅನ್ನಿಸಿ, ಹಾಗೆ ಸುಮ್ಮನೆ ಹರಡಿದಂತೆ ಬಿಟ್ಟೆ, ಏನಾದರು ಹೂವಿನ ಗಿಡ ಹಾಕಿದರಾಯಿತು. ನಮ್ಮ ಮನೆ ಕೆಲಸದ ನಿಂಗಮ್ಮನಿಗೆ ಹೇಳಿದ್ದೇನೆ,  ನಾಲ್ಕಾರು ಒಳ್ಳೆಗುಲಾಬಿ ಕಡ್ಡಿಗಳನ್ನು ತರಲು "  ಗಿರಿಧರ ಅಂದ

"ಹೌದೇಳಿ ಆ ನಿಂಗಮ್ಮ ನನ್ನ ಹತ್ರನು ಹೇಳಿದಳು, ನಮ್ಮ ಸ್ಟೇಶನ್ ಮುಂದೇನೆ ಇದೇ ಬಿಡಿ ತರಾವರಿ ಗುಲಾಬಿ, ಅದರ ಕಡ್ಡಿನೆ ತಂದು ಹಾಕಿದ್ರಾಯ್ತು, ಯಾವುದೊ ಹಿಂದಿ ಸಿನಿಮಾ ಬಂದಿತ್ತಲ್ಲಪ್ಪ,  ಅವನು ಗುಲಾಬಿ ಕೊಡ್ತಾನಲ್ಲ ಎಲ್ಲರಿಗು, ಹಂಗೆ ನಾವು ಕೈದಿಗಳಿಗೆ ಗುಲಾಬಿ ಕೊಟ್ಟು ಬದಲಾಗು ಅಂತೆ ಕೇಳಿ ಅಂತ ಹಾಕಿದ್ದಾರೆ"
ಎಂದು ಮತ್ತೆ ಗಹಗಹಿಸಿ ನಕ್ಕ.

ಗಿರಿಧರನಿಗೆ ಅದೇನು ಹೇಳಬೇಕೆಂದು ಹೊಳೆಯಲಿಲ್ಲ, ಇವನದೊಳ್ಳೆ ಪಂಚಾಯಿತಿ ಆಯಿತು ಅಂತ ನೀರು ನಿಲ್ಲಿಸಿ ಪೈಪನೆಲ್ಲ ಎತ್ತಿಟ್ಟ.

"ಅದೇನು ನಿಲ್ಲಿಸಿಬಿಟ್ರೆ ಕಾರು ಶುದ್ದವಾಗೋಯ್ತೇನೊ, ಹಂಗೇಯ ಒಳಗೆ  ಊದುಬತ್ತಿ ಹಚ್ಚಿಬಿಡಿ ಸರಿಹೋಯ್ತದೆ"  ಅಂದವನು ,

" ಅದು ಸರಿ ಅದೇನು ನಿಮಗೆ ತೆಂಗಿನ ಗಿಡದ ಹುಚ್ಚು, ಎಲ್ಲರು  ಮನೆಮುಂದಿನ ತೆಂಗಿನ ಗಿಡ ತೆಗಿಸುತ್ತಿದ್ದರೆ, ನೀವು ಹಾಕಿಸಲು ಹೊರಟಿದ್ದೀರಿ ಡಾಕುಟ್ರು " ಎಂದ ವಿಚಿತ್ರವಾಗಿ ಚಂದ್ರಪ್ಪ

"ಹುಚ್ಚು ಅಂತ ಏನಿಲ್ಲ , ಹಾಕೋಣ ಅನ್ನಿಸಿತು ಆಮೇಲೆ ಸುಮ್ಮನಾದೆ "  ಎಂದ ಗಿರಿಧರ.

"ಅ ರಿಯಲ್ ಎಸ್ಟೇಟ್  ರಂಗಪ್ಪ  ಹೇಳ್ತಿದ್ದ, ಏನು ಬೆಳಗ್ಗೆ ನಾಲಕ್ಕು ಗಂಟೆಗೆ ಎದ್ದು ಗುಂಡಿ ತೆಗಿತಿದ್ದಾರೆ ಡಾಕ್ಟ್ರು , ಒಳ್ಳೆ ಸ್ಮಶಾನದಲ್ಲಿ ಹೆಣಕ್ಕೆ ಗುಂಡಿ ತೆಗೆದಂತೆ ಅಂತ ನಗಾಡುತ್ತಿದ್ದ,  ಅ ಪರಿಮಳ ಕಾಫಿ ಹತ್ರ "

ಚಂದ್ರಪ್ಪನ ಮಾತಿಗೆ , ಗಿರಿಧರ ನಗುತ್ತ,
"ಸ್ವಲ್ಪ ಹುಚ್ಚೆ ಆಯಿತೇನೊ ಬಿಡಿ,  ಬೆಳಗ್ಗೆ ಬೆಳಗ್ಗೆ ಮೂರುಗಂಟೆಗೆ ಎಚ್ಚರವಾಗಿಬಿಡ್ತು, ಹಾಳಾದ್ದು ನಿದ್ದೆನೆ ಹತ್ತಲಿಲ್ಲ, ನಾಲಕ್ಕಕ್ಕೆ ಹೊರಬಂದೆ ಏನು ಮಾಡಲು ತೋಚದೆ ಅಗೆಯುತ್ತಿದ್ದೆ, ಅದೇನೊ ನಂತರ ಬೇಸರವೆನಿಸಿ ಮುಚ್ಚಿಬಿಟ್ಟೆ" ಎಂದ

"ಮತ್ತೆ ನೀವೇನೊ ಮೂರುತಿಂಗಳ ಮೊದಲೊಮ್ಮೆ ಹೀಗೆಯೆ ಯಾರನ್ನೊ ಕರೆದು ತಂಗಿನ ಗಿಡ ನೆಡೆಸುತ್ತೀನಿ ಅಂತ ಗುಂಡಿ ತೆಗೆಸಿ, ನಂತರ ಮನಸು ಬದಲಾಯಿಸಿ ಮುಚ್ಚಿಬಿಟ್ಟರಂತೆ  ರಂಗಪ್ಪ ಅಂದ , ನಿಮದೇನು ಮೂರುತಿಂಗಳಿಗೊಮ್ಮೆ ಅಗೆಯೊ ಕೆಲಸ ವಿಚಿತ್ರ " ಚಂದ್ರಪ್ಪನ ಕುಹಕದ ಮಾತಿಗೆ ಬೆಚ್ಚಿಬಿದ್ದ ಗಿರಿಧರ, ಇವನನ್ನು ಹೀಗೆ ಬಿಟ್ಟರೆ ಮಾತು ಆಡುತ್ತಲೆ ಇರುತ್ತಾನೆ ಅನ್ನಿಸಿ, ಒಳಗೆ ಹೊರಟ.

ಹಿಂದೆಯೆ ಬಂದ ಚಂದ್ರಪ್ಪ " ಅದೇನು ಡಾಕ್ಟ್ರೆ, ಹಂಗೆ ಅರ್ಜೆಂಟ್ ಆಗಿ ಒಳ ಹೊರಟಿರಿ,  ಇರ್ಲಿ ಬಿಡಿ, ಇವತ್ತಿನ ಪೇಪರ್ ಇನ್ನು ಬರಲಿಲ್ಲವ, ಈ ನಡುವೆ ಅಂತು, ಪೇಪರ್ ಹುಡುಗರು ಬೆಳಗ್ಗೆ ಎಂಟು ಗಂಟೆ ಆದ್ರು ಪೇಪರ್ ಹಾಕಲ್ಲ, ಅಷ್ಟಕ್ಕು ಈಗ ಪೇಪರ್ ಓದೋರು ಯಾರಿದ್ದಾರೆ ಬಿಡಿ, ಎಲ್ಲ ಮೊದಲೆ ಟೀವಿಲಿ ಸುದ್ದೀನೆಲ್ಲ ನೋಡಿ ಬಿಟ್ಟಿರ್ತಾರೆ"ಅಂದ.

ಗಿರಿಧರ ಯೋಚಿಸುತ್ತಿದ್ದ , ಇವನನ್ನು ಹೇಗೆ ಹೊರಹಾಕುವುದು, ನೋಡಿದರೆ ನೂರು ಇನ್ನೂರು ಸಾಲ ಕೇಳುವ ಹಾಗಿದ್ದಾನೆ, ಹಿಂದೊಮ್ಮೆ ಇದೇ ರೀತಿ ಬಂದವನು ಐದುನೂರು ಪಡೆದು , ವಾರದಲ್ಲಿ ಕೊಡುವದಾಗಿ ಹೇಳಿ ಹೋಗಿದ್ದ  ಅಂದುಕೊಂಡ.

ಚಂದ್ರಪ್ಪನಿಗೆ ಮಾತನಾಡೊ ಲಹರಿ
"ಅದೇನೊ  ಕೇಳಿದ್ರ ಡಾಕ್ಟ್ರೆ,  ನಿನ್ನೆ ಕನಕಪುರ ರಸ್ತೆಯ ಕಗ್ಗಲಿಪುರದ ಹತ್ತಿರ, ಸೆಂಟ್ರಲ್ ನಿಂದ ಬಂದ  ಕ್ರೈಮ್ ಪೋಲಿಸರು, ಒಂದು ಮನೆ ಸುತ್ತುವರೆದು ನುಗ್ಗಿದ್ದಾರೆ, ಅದರಲ್ಲಿ ಅದ್ಯಾರೊ ಪಾಕಿಸ್ತಾನದಿಂದ ಬಂದ ಟೆರರಿಷ್ಟ್ ಇದ್ದರಂತೆ, ಕೆಲವರು ನಮ್ಮವರು ಇದ್ದರು ಅನ್ನಿ, ಸಿನಿಮಾ ತರಾ ಶೂಟಿಂಗ್ ಫೈರಿಂಗ್ ಎಲ್ಲ ನಡೆದು ಆರು ಮಂದಿ ಅಲ್ಲೆ ಸತ್ತಿದ್ದಾರೆ, ಒಂದಿಬ್ಬರು ತಪ್ಪಿಸಿಕೊಂಡಿದ್ದಾರಂತೆ,  ಒಂದು ಗಂಡು ಒಂದು ಹೆಣ್ಣು ಬೈಕಿನಿಂದ ಪರಾರಿಯಾಗಿ, ಮುಖ್ಯರಸ್ತೆಗೆ ಬಂದು ಅಲ್ಲಿ ಯಾವುದೊ ವಾಹನ ಹತ್ತಿ ಪರಾರಿಯಾಗಿದ್ದಾರೆ ಅಂತ ಸುದ್ದಿ ನಮ್ಮವರು ಜಾಲಾಡುತ್ತಿದ್ದಾರೆ, ಅದನ್ನು ನೋಡೋಣ ಅಂದ್ರೆ ನಮ್ಮನೇಗೆ ಪೇಪರ್ ಬರಲ್ಲ ನೋಡಿ" ಅಂತ ನಕ್ಕ.

ಗಿರಿಧರನಿಗೆ ಭಯ ಆಯಿತು, ಅಂದರೆ ಅಲ್ಲಿ ತಪ್ಪಿಸಿಕೊಂಡ ಇಬ್ಬರೆ ನನ್ನ ಜೊತೆ ಬಂದವರು, ಅಂತ ಅನ್ನಿಸಿ, ಮೈಯೆಲ್ಲ ಬಿಸಿಯಾಯಿತು, ಇವನಿಗೆ ಗೊತ್ತಿಲ್ಲ ಅವರು ತನ್ನ ಕಾರಿನಲ್ಲಿಯೆ ಬಂದವರು ಎಂದು , ಗೊತ್ತಾದರೆ ಏನು ಮಾಡುವನೊ

ಚಂದ್ರಪ್ಪನ ಮಾತು ಮತ್ತೆಲ್ಲೊ ತಿರುಗಿತು "ಅದು ಸರಿ ಡಾಕ್ಟರೆ, ನೀವು ಅದೇನೊ ಮನೆಯನ್ನು ಮಾರಿಬಿಡ್ತೀನಿ ಅಂತಿದ್ದೀರಂತೆ, ಯಾಕೆ ಬೆಂಗಳೂರಿನಲ್ಲಿ ಇಂತ   ಜಾಗದಲ್ಲಿ ಇರೋ ಮನೆ ಒಮ್ಮೆ ಕೊಟ್ಟರೆ ಅಷ್ಟೆ,  ಮತ್ತೆ ಸಿಕ್ಕಲ್ಲ, ಸಿಕ್ಕರು ಅಷ್ಟು ದುಡ್ಡು ಕೊಡಲಾಗುತ್ತ,  ರಿಯಲ್ ಎಷ್ಟೇಷ್ಟ್ ರಂಗಪ್ಪ ಹೇಳಿದ, ನನಗು ಹೇಳಿದ್ದಾನೆ ಅನ್ನಿ ಯಾರಾದರು ಗಿರಾಕಿ ಹುಡುಕು ಅಂತ, ಅದಿರ್ಲಿ ಅದೇನು ನೀವು ಮನೆ ಮಾರುತ್ತೇನೆ ಅನ್ನುತ್ತೀರಿ, ಮತ್ತೆ ತೆಂಗಿನ ಗಿಡ ಹಾಕುತ್ತೀನಿ ಅನ್ನುವಿರಿ, ನಿಮ್ಮ ಮಾತೆ ಒಂದಕ್ಕೊಂದು ಕೂಡಲ್ವೆ " ಎಂದ

ಗಿರಿಧರನಿಗೆ ತಕ್ಷಣ ಉತ್ತರ ಕೊಡಲಾಗಲಿಲ್ಲ.

"ನೀವು ಸ್ವಲ್ಪ ಕೂತಿರಿ ಮುಖ ಕೈಕಾಲು ತೊಳೆದು ಬಂದು ಬಿಡುತ್ತೇನೆ "

ಅವನಿಂದ ತಪ್ಪಿಸಿಕೊಂಡು ಬಚ್ಚಲು ಮನೆ ಹೊಕ್ಕ.  ಇವನು ಇನ್ನು ಹೊರಡಲ್ಲ ನಾನೆ ವಿಚಾರಿಸಿ ಒಂದಿಷ್ಟು ದುಡ್ಡು ಕೊಡಬೇಕು ಇಲ್ಲದಿದ್ದರೆ ತಲೆ ತಿನ್ನುತ್ತಲೆ ಇರುತ್ತಾನೆ ಅನ್ನಿಸಿತು ಮುಖ ತೊಳೆಯಬೇಕಾದರೆ,  ರಾತ್ರಿ ಯೆಲ್ಲ ನಿದ್ದೆ ಗೆಟ್ಟಿದ್ದು, ಜೋಪು ಎಳೆಯುತ್ತಿತ್ತು, ಒಂದು ಕಾಫಿ ಕುಡಿದು ಸ್ವಲ್ಪ ಮಲಗಿಬಿಡಬೇಕು ಅಂದುಕೊಂಡ,

ಹೊರಗೆ ಬರುವಾಗ ನೋಡಿದರೆ  ಕಾನ್ ಸ್ಟೇಬಲ್ ಚಂದ್ರಪ್ಪ ಆರಾಮವಾಗಿ ಸೋಫದಲ್ಲಿ ಕುಳಿತು, ಪೇಪರ್ ನೋಡುತ್ತಿದ್ದ, ಅಂದರೆ ಪೇಪರ್ ಹುಡುಗ ಪೇಪರ್ ಹಾಕಿ ಹೋಗಿರಬೇಕು.
"ಇದೇನು ಸುದ್ದೀನೊ ಡಾಕ್ಟರೆ ಬರಿ ಕೊಲೆ ಹೆಣ  ರಕ್ತ ಇದೇ ಆಗಿ ಹೋಯ್ತು, ನಮಗು ನಿಮಗು ಇದು ಸಾಮಾನ್ಯ ಬಿಡಿ ಅಲ್ವೆ " ಎಂದ.

ಗಿರಿಧರ್ ನಗುತ್ತ
"ಅದು ಸರಿಯೆ ಚಂದ್ರಪ್ಪನವರೆ, ಏನು ಮಾಡೋದು, ಕಾಲವೆ ಹಾಗೆ, ಏನು ಬೆಳಗ್ಗೆ ಬಂದಿರಿ, ಏನಾದರು ಹಣದ ಅವಶ್ಯಕತೆ ಇತ್ತೆ " ಎಂದ.
ಚಂದ್ರಪ್ಪ ಆಶ್ಛರ್ಯದಿಂದ ,
"ಅಯ್ಯೊ ಹಾಗೇನು ಇಲ್ಲಪ್ಪ ಸುಮ್ಮನೆ ಹಾಗೆ ತಲೆ ಹಾಕಿದೆ, ಅದೇನು ನಿಮಗೆ ತೊಂದರೆ ಆಯಿತೇನೊ ಬೆಳಗ್ಗೆನೆ ವಕ್ಕರಿಸಿದೆ ಎಂದು, ಎಲ್ಲಿ ನಿಮ್ಮವರು ಕಾಣೋಲ್ಲ, ತುಂಬಾ ದಿನಾ ಆಯ್ತು, ಅಯಮ್ಮನ ನೋಡಿ, ಆವರು ನೋಡಿ ನಾನು ಇಷ್ಟೊತ್ತು ಕುಳಿತಿದ್ರೆ, ಇಷ್ಟುಹೊತ್ತಿಗೆ ಒಂದು ಕಾಫಿ ಕಾಣಿಸಿಬಿಟ್ಟಿರೋರು " ಎಂದ ನಗುತ್ತ

"ಅದಕ್ಕೇನು ಬಿಡಿ, ನಾನೆ ಕಾಫಿ ಮಾಡುತ್ತೇನೆ ಕುಡಿದು ಹೊರಡಿ, ನಾನು ನೆಲ ಅಗೆದು, ಕಾರ್ ತೊಳೆದು ಸುಸ್ತಾದೆ, ಹಂಗೆ ಸ್ವಲ್ಪ ಹತ್ತು ನಿಮಿಷ ಮಲಗಿ ನಂತರ ಸ್ನಾನ ಮಾಡುತ್ತೇನೆ" ಎನ್ನುತ್ತ , ರೆಫ್ರಿಜಿರೇಟರ್ ಹತ್ತಿರ ಹೋಗಿ, ಒಳಗೆ ಹಾಲಿನ ಪ್ಯಾಕೆಟ್ ತೆಗೆದುಕೊಂಡು, ನಂತರ ಬಾಗಿಲು ಮುಚ್ಚಿ ಒಳಗೆ ಹೊರಟ
"ನೀವೆ ಕಾಫಿ ಮಾಡ್ತೀರ ಪರವಾಗಿಲ್ವೆ, ಡಾಕ್ಟರ್ ಅಡುಗೆನು ಕಲಿತ ಹಾಗಿದೆ" ಎಂದವನು
"ನಮ್ಮಾಕೆ ಅದೇನೊ ಕೊತ್ತಂಬರಿ ಸೊಪ್ಪು ಮೆಣಾಸಿನಕಾಯಿ ತಾ ಎಂದಳು ಅಷ್ಟೆ ಬೇಗ ಯಾರು ಬಾಗಿಲು ತೆರೆಯುತ್ತಾರೆ ಹೇಳಿ , ನಿಮ್ಮ ಪ್ರೀಜಿನಲ್ಲಾದರು ಇದೆಯಾ" ಎನ್ನುತ್ತ ಎದ್ದು ಬಂದ
ಅಡುಗೆ ಮನೆಯಿಂದಲೆ ಗಿರಿಧರ
"ಅಯ್ಯೊ ಇಲ್ಲ ಅನ್ನಿಸುತ್ತೆ, ನಾನಂತು ಈ ನಡುವೆ ಹೋಟೆಲಿನಲ್ಲಿಯೆ ಊಟ, ನೀವೆ ಪ್ರೀಜ್ ತೆಗೆದುನೋಡಿ, ನಿಮ್ಮ ಪುಣ್ಯ ಏನಾದರು ಇದ್ದರೆ ತೆಗೆದುಕೊಳ್ಳಿ " ಎಂದ ಜೋರಾಗಿ.

ಎದ್ದು ಬಂದ ಚಂದ್ರಪ್ಪ, ಪ್ರೀಜ್ ನ ಬಾಗಿಲು ತೆಗೆದ, ಒಳಗೆ ಲೈಟಿನ ಬೆಳಕಿನಲ್ಲಿ, ಎಲ್ಲ ತೆರೆದು ಕಾಣುತ್ತಿತ್ತು, ಹಾಲಿನ ಪ್ಯಾಕೇಟ್, ಕಾಗದದ ಪೊಟ್ಟಣ ಹೊರತು ಪಡಿಸಿ ಏನು ಇರಲಿಲ್ಲ, ಕೆಳಗಿನ  ಕವರ್ ನಲ್ಲಿ ಕೆಲವು ಟಮೋಟ ಕಾಣಿಸಿತು
"ಸರಿ ಇಲ್ಲ ಅನ್ನಿಸುತ್ತೆ " ಎಂದು ಬಾಗಿಲು ಮುಚ್ಚ ಹೊರಟ ಚಂದ್ರಪ್ಪನ ದೃಷ್ಟಿ ಪ್ರೀಜ್ ಮೇಲೆ ಹಾಗೆ ನಿಂತಿತ್ತು,
ಹತ್ತಿರದಿಂದ ವೀಕ್ಷಿಸಿದ , ಅನುಮಾನವೆ ಇಲ್ಲ ಅದು ಪಿಸ್ತೂಲ್ , ನೋಡುವಾಗಲೆ ಅವನ ಪೋಲಿಸ್ ಜ್ಞಾನಕ್ಕೆ ತಿಳಿಯುತ್ತಿದೆ, ಅದು ದೀಪಾವಳಿ   ಪಿಸ್ತೂಲ್ ಅಲ್ಲ , ಅತ್ಯಾಧುನಿಕವಾದ ವಿದೇಶಿದಿಂದ ಅಮದಾದ ಟೆರರಿಷ್ಟ್ ಗಳು ಉಪಯೋಗಿಸಬಹುದಾದಂತ ಕೋಲ್ಟ್ ಮಾಡೆಲ್ ಪಿಸ್ತೂಲ್ . ಅದು ಡಾಕ್ಟರ್ ಮನೆಯಲ್ಲಿ

ಚಂದ್ರಪ್ಪ ಜೋರಾಗಿ ಕರೆದ "ಡಾಕ್ಟರೆ ಒಂದು ನಿಮಿಷ ಹೊರಬನ್ನಿ"

ಗಿರಿಧರ ಸ್ವಲ್ಪ ಅಸಮಾದಾನದಿಂದಲೆ ಹೊರಬಂದ
"ಡಾಕ್ಟ್ರೆ ಇದೇನು ನಿಮ್ಮ ಮನೆಯಲ್ಲಿ ಪಿಸ್ತೂಲ್, ನೀವು ಉಪಯೋಗಿಸುತ್ತೀರ, ಇದೆಲ್ಲಿಂದ ಬಂತು, ಅದು ಕಾಟ್ರೆಡ್ಜ್ ಲೋಡ್ ಆಗಿದೆ" ಎಂದ ಸ್ವಲ್ಪ   ಜೋರಾಗಿ
ಗಿರಿಧರನಿಗೆ ತಕ್ಷಣಕ್ಕೆ ಏನು ಉತ್ತರಿಸಬೆಕೆಂದು ತಿಳಿಯಲಿಲ್ಲ. ಅವನು ಪಿಳಿ ಪಿಳಿ ನೋಡಿದ ಚಂದ್ರಪ್ಪನನ್ನು

ಮುಂದುವರೆಯುತ್ತದೆ  ......

ಮೂರನೆ ಬಾಗದಲ್ಲಿ
 

Rating
No votes yet

Comments