" ಅಪರಿಚಿತ "(ಕಥೆ) ಭಾಗ 10
' ಅಯ್ಯೋ ಅವನ ಉಪಕಾರ ಯಾವನಿಗೆ ಬೇಕು ! ಅಂವ ಏನೂ ಮಾಡೋದು ಬ್ಯಾಡ ಇಲ್ಲಿಂದ ಎದ್ದು ಹೋದರ ಅದ ದೊಡ್ಡ ಉಪಕಾರ ' ಎಂದು ಗಂಗಾಧರಯ್ಯ ಬೇಸರಿಸಿದರು.
' ನೀವು ಹೋಗಿ ಸಾರ್ ಅಲಿ ಸಾಹೆಬರು ಮತ್ತು ಪಿಎಸ್ಐ ಅವರು ಇನ್ನೇನು ಬರಬಹುದು, ಅವರು ಬರೋತನಕ ನಾನು ನೋಡಿಕೋತೇನಿ ' ಎಂದ ರಾಮಾಂಜನಿ.
' ಏನಿಲ್ಲ ಆ ಹೆಣದ ಮ್ಯಾಲಿನ ಬಟ್ಟೆನೆಲ್ಲ ಸ್ವಲ್ಪ ತೊಳಿಸಿ ಇಡೋಣ ಅಂತ ಕುತಗೊಂಡೆ ' ಎಂದರು ಗಂಗಾಧರಯ್ಯ.
' ಗೌರಮ್ಮಗ ಹೇಳಬೇಕಿತ್ತೊ ಬ್ಯಾಡೋ ಅಕಿ ಎಲ್ಲ ತೊಳದಿಟ್ಟು ಹೋಗತಿದ್ಲು. ' ಎಂದ ರಾಮಾಂಜನಿ.
' ಇಷ್ಟೊತ್ತನಕ ಆದ ರಾಮಾಯಣಾನ ಅದು ಮಾರಾಯ, ಆಕಿ ನಂದು ಕಸಗೂಡಸೋದು ಅಷ್ಟ ಕೆಲಸ, ಹೆಣದ ಮೈ ಮ್ಯಾಲಿನ ಬಟ್ಟಿ ತೊಳೆಯೋದು ಅಲ್ಲ ಅಂದ್ಲು. ಅವಳಿಗೆ ಈ ನಮ್ಮ ಪರಸಪ್ಪ ಸಾಹೇಬ್ರ ಸಪೋರ್ಟು, ಹೀಂಗಾಗಿ ಏನೂ ಹೊಳಿಲಾರದ ಸುಮ್ಮಗ ಕೂತೆ ನೋಡು ' ಎಂದರು ಗಂಗಾಧರಯ್ಯ.
' ಓಹೋ ಹೀಂಗ ! ಸಮಾಚಾರ ಇದು, ನಾನು ಅಂದ್ಕೊಂಡೆ ಪರಸಪ್ಪ ಸಾಹೆಬ್ರು ಇಷ್ಟೊತ್ತಿನ ತನಕ ಇಲ್ಲಿ ಕೂತಾರ ಅಂದ್ರ ಏನೋ ಕಿತಾಪತಿ ನಡದಿರಬೇಕು ಅಂತ, ಇರ್ಲಿ ನೀವು ಹೋಗಿ ಬರ್ರಿ, ಹಂಗೇನಾದರೂ ವಿಶೇಷ ಇದ್ರ ನಾ ಹೇಳಿ ಕಳಸ್ತೇನಿ ' ಅಂದ ರಾಮಾಂಜನೇಯ.
' ಇಷ್ಟೊತ್ತನಕಾನ ಇದ್ದೇನಿ ಅಲಿ ಅಗಲಿ ಪಿಎಸ್ಐ ಆಗಲಿ ಬರಲಿ ಅವರು ಬರೋತನಕ ಇದ್ದು ಆ ಮೇಲೆ ಹೋಗ್ತೀನಿ ' ಎಂದರು ಗಂಗಾಧರಯ್ಯ. ಸ್ವಲ್ಪ ಸಮಯದ ನಂತರ ಪಿಎಸ್ಐ ಮಂಜಪ್ಪಗೌಡರು ಬಂದರು, ಅವರಿಗೆ ಗಂಗಾಧರಯ್ಯ ವಂದನೆ ಸಲ್ಲಿಸಿದರು.
ಅವರನ್ನು ಗಮಿಸಿಸಿದ ಮಂಜಪ್ಪ ಗೌಡರು ' ಏನ್ರಿ ಗಂಗಾಧರಯ್ಯ ಇನ್ನೂ ಮನಿಗೆ ಹೋಗಲಿಲ್ಲವೇನ್ರಿ ? ರಾಮಾಂಜನಿ ಇದ್ದ ಅಂವ ನೋಡಿಕೋತಿದ್ದ, ನೀವು ಹೋಗಿ ಬರಬೇಕಿತ್ತು ' ಎಂದರು.
' ಏನಿಲ್ಲ ಸಾರ್ ಆ ಹೆಣದ ಬಟ್ಟೆ ದುರ್ವಾಸನೆ ಹೊಡಿತಾವ ಅವನ್ನ ಸ್ವಲ್ಪ ಒಗದ್ಹಾಕಿ ಹೋಗು ಅಂತ ಗೌರಮ್ಮಗ ಹೇಳೋಣಾಂತ ಇದ್ದೆ ' ಎಂದರು ಗಂಗಾಧರಯ್ಯ.
' ಮತ್ತ ಹೇಳಿ ಹೋಗಬೇಕಿತ್ತು ನಿವ್ಯಾಕ ಸುಮ್ನ ಕಾಯಕೋತ ಇದ್ದೀರಿ ' ಎಂದರು ಮಂಜಪ್ಪ ಗೌಡ.
' ಹೇಳಿದೆ ಸಾರ್ ! ಆದ್ರೆ ಅವಳು ಅದು ನನ್ನ ಕೆಲಸ ಅಲ್ಲ ಅಂತ ಹಂಗ ಹೋದ್ಲು ' ಎಂದರು ಗಂಗಾಧರಯ್ಯ.
' ಮತ್ತ ನೀವೆಲ್ಲ ಯಾಕಿದೀರಿ, ಆಕಿ ಹೇಳಿದ ಕೆಲಸ ಮಾಡೋದಿಲ್ಲ ಅಂದ್ರ ಅದನ್ನೂ ನಾನ ಬಂದು ಮಾಡಸ ಬೇಕೆನು ? ' ಎಂದು ಮಂಜಪ್ಪ ಗೌಡ ರೇಗಿದರು.
' ಹೇಳೋ ಅಷ್ಟು ಅವಳಿಗೆ ಹೇಳಿದೆ ಸಾರ್, ಅವಳು ಮಾಡಲಿಲ್ಲ ನಾನೇನು ಮಾಡೋಕಾಗತ್ತೆ ಬೇಕಾದರೆ ನಾನ ಬಟ್ಟಿ ತೊಳದು ಇಟ್ಟು ಬಿಡತೇನಿ ಬಿಡ್ರಿ ' ಎಂದರು ಗಂಗಾಧರಯ್ಯ.
' ಅಲ್ರಿ ಗಂಗಾಧರಯ್ಯ ನಾನು ನಿಮಗ ಬಟ್ಟಿ ತೊಳದು ಇಡು ಅಂದನೇನ್ರಿ, ಏನೇನರ ವಿಪರೀತ ಕಲ್ಪನಾ ಮಾಡಕೊಂಡು ಮಾತಾಡ್ತೀರಲ್ಲ, ನೀವು ಹಿರಿಯರಿದ್ದೀರಿ ಎಲ್ಲ ನಿಮ್ಮ ಸಹೋದ್ಯೋಗಿಗಳಿಂದ ಅವರವರ ಕೆಲಸ ತಗೋಬೇಕು ಅನ್ನೋದು ನನ್ನ ಮಾತಿನ ಅರ್ಥ, ನೀವು ಒಂದು ರಿಪೋರ್ಟ ಕೊಡ್ರಿ ಮೇಲಿನ ಅಧಿಕಾರಿಗಳಿಗೆ ಕಳಸ್ತೀನಿ ' ಎಂದರು ಮಂಜಪ್ಪಗೌಡ.
ಅಷ್ಟರಲ್ಲಿ ನುಸ್ರತ್ ಅಲಿ ಮತ್ತು ಆಂಜನೇಯ ಬಂದುದನ್ನು ಗಮನಿಸಿದ ಮಂಜಪ್ಪ ಗೌಡರು ' ಏ ಆಂಜನೇಯ ಬಾರೋ ಇಲ್ಲಿ , ನಿನಗ ಕೊಟ್ಟ ಕೆಲಸ ನೆಟ್ಟಗ ಮಾಡಲಿಕ್ಕೆ ಆಗೋದಿಲ್ಲನು ನಿನಗ, ಎಲ್ಲಾರೂ ಇಲ್ಲೆ ಬಾಜೀರಾಯಕಿ ಮಾಡಲಿಕ್ಕೆ ಬಂದೀರಿ ನೋಡು ' ಸಿಟ್ಟಾದರು.
' ನಾನೇನು ಮಾಡಿದೆ ಸಾರ್ ' ಎಂದ ಆಂಜನೇಯ.
' ಹೆಣದ ಮೈಮ್ಯಾಲಿನ ಬಟ್ಟಿ ಹಂಗ ತಂದಿಟ್ಟು ಹೋದ್ಯಲ್ಲ, ಅವನ್ನ ಯಾರು ಸ್ವಚ್ಛಮಾಡಿ ಇಡಬೇಕು ? ನಿಮ್ಮ ತಾತ ಬಂದು ಮಾಡ್ತಾನೇನು ? ಎಂದು ,ಮಂಜಪ್ಪಗೌಡ ರೇಗಿದರು.
' ನಮ್ಮ ತಾತ ಯಾಕ ಬಂದು ಮಾಡಬೇಕು ಸಾರ್ ನಾನ ಮಾಡಬೇಕು ! ಗಂಗಾಧರಯ್ಯನೋರು ಗೌರಮ್ಮಗ ತೋಳದು ಹಾಕಲಿಕ್ಕೆ ಹೇಳ್ತೀನಿ ನೀನು ಮನಿಗೆ ಹೋಗಿ ಬಾ ಅಂದ್ರ ಅದಕ್ಕ ಮನಿಗೆ ಹೋಗಿ ಬಂದೆ ಸಾರ್ ' ಎಂದ ಆಂಜನೇಯ.
' ಯಾಕೆ ಸಾರ್ ! ನೀವು ಅವನ ಮ್ಯಾಲ ರೇಗೋದು ? ಅವ ಏನು ತಪ್ಪು ಮಾಡಿದ ? ಬರೆ ನೀವು ಮಾತಿ ಗೊಮ್ಮೆ ಹೇಳ್ತೀರಿ ನೀವು ಯಾಕಿದೀರಿ ಅಂತ, ಕೆಲವು ಸಿಬ್ಬಂದಿಯವರು ಹೇಳಿದ ಮಾತು ಕೇಳೊದಿಲ್ಲ, ಅ ಗೌರಮ್ಮನೂ ಅಷ್ಟ ಮ್ಯಾಲ ಮ್ಯಾಲ ಅಷ್ಟ ಕಸ ಗೂಡಿಸಿಕೊಂಡು ಹೋಗಿ ಬಿಡ್ತಾಳ, ನಿಮ್ಮ ಟೇಬಲ್ ಮ್ಯಾಲ ಬಿದ್ದ ಧೂಳು ಸಹ ಎಷ್ಟೋ ಸಲ ಒರ್ಸೋದುಲ್ಲ, ವಾರಕ್ಕೊಮ್ಮೆ ಬಿಡ್ರಿ ಹದಿನೈದು ದಿವಸಕ್ಕೊಮ್ಮೆ ಆದರೂ ಸ್ಟೋರ್ ರೂಮು ಗೂಡ್ಸೋದಿಲ್ಲ, ಈ ಬಗ್ಗೆ ಕ್ರಮ ತುಗೋ ಬೇಕಾದ ನೀವ ಯಾರಾರದೋ ಮ್ಯಾಲ ರೇಗಿ ಸುಮ್ಮನಾಗಿ ಬಿಡ್ತೀರಿ ' ಎಂದರು ಗಂಗಾಧರಯ್ಯ.
' ಅಂದರೇನು ನಾನು ಎಲ್ಲಾರಿಗೂ ಪನಿಶ್ಮೆಂಟ್ ರಿಪೋರ್ಟ ಹಾಕಬೇಕು ಅಂತೀಯೇನು ? ನಂಗೇನು ಅದು ಗೊತ್ತಿಲ್ಲ ಅನಬ್ಯಾಡ ಹಂಗೇನರ ಮಾಡೀದ್ರ ಮ್ಯಾಲನವ್ರು ಅವರನ್ನ ಸಸ್ಪೆಂಡ್ ಇಟ್ಟು ಬ್ಯಾರೆ ಕಡೆ ಟ್ರಾನ್ಸಫರ್ ಮಾಡ್ತಾರ, ಈವಾಗನ ಇಲ್ಲಿ ಜನಾ ಕಮ್ಮಿ ಬೇರೆಯವರನ್ನ ಇಲ್ಲಿಗೆ ಹಾಕೋದಿಲ್ಲ ಮತ್ತ ಇರೋ ಸಿಬ್ಬಂದೀನ ಹೆಣಗಬೇಕು. ಇನ್ನ ಗೌರಮ್ಮನ ವಿಷಯ ಆಕಿ ಟೆಂಪರರಿ ಸ್ವೀಪರ್ ಕಣ್ರಿ ಆಕಿನ ತಗದ ಹಾಕಿದ್ರ ಅಕಿ ಕೆಲಸ ಮತ್ತ ನೀವ ಮಾಡಬೇಕಾಗ್ತದ, ಅದಕ್ಕ ಕನ್ವಿನ್ಸ್ ಮಾಡಿ ಕೆಲಸ ತುಗೋ ಬೇಕ್ರಿ ' ಎಂದು ವಿಷಯ ತಿಳಿಗೊಳಿಸಲು ನೋಡಿದರು ಮಂಜಪ್ಪಗೌಡರು.
' ಅಂದ್ರ ಇದರರ್ಥ ಕೆಲಸ ಮಾಡೋವ್ರು ಮಾಡ್ತಾನ ಹೋಗಬೇಕು, ಓತ್ಲಾ ಹೊಡಿಯೋರು ಓತ್ಲಾ ಹೊಡಕೊಂಡು ಹೋಗ ತಾನ ಇರಬೇಕು ಅಂದ್ರ ಹ್ಯಾಂಗ್ ಸಾರ್, ಇನ್ನ ಕಸ ಗೂಡಸೋದು ಅಕಿದು ಟೆಂಪರರಿ ಕೆಲಸ ಅಂದ್ರಿ ಅಕಿ ಬೆಳಿಗ್ಗ ಬಂದು ಮುಕ್ಕಾಲು ಗಂಟೆನೂ ಕೆಲಸ ಮಾಡೋದಿಲ್ಲ ಕೆಲಸಾ ಮಾಡಲಿಕ್ಕೆ ಬೇಕಾದಷ್ಟು ಜನಾ ತಯಾರು ಇದಾರ, ಅವಳು ಬಿಟ್ಟು ಹೋದ್ರ ಹೋಗಲಿ ಅವಳು ಬರೋಕ ಮೊದ್ಲು ನಾವ ಕಸಾ ಗೂಡಸತಿದ್ವಿ, ಈಗೂ ಹಂಗ ಮಾಡ್ತೀವಿ ' ಎಂದರು ನುಸ್ರತ್ ಅಲಿ.
' ನಿಮ್ಮಂಥಾ ಹೆಬ್ಬಟ್ಟಿನವರು ಬೇಕಾದರ ಕಸ ಗೂಡಸ್ರಿ ನಾವೆಲ್ಲ ವಿದ್ಯಾವಂತರು ಅದನ್ನ ಮಾಡ್ಲಿಕ್ಕೆ ಆಗೋದಿಲ್ಲ ' ಎಂದ ಪರಸಪ್ಪ.
' ಅಯ್ಯೋ ! ಬಿಡಲೆ ಬಕಾಸಬ್ಯಾಡ, ನೀನು ಕಡದು ಕಟ್ಟಿ ಹಾಕಿದ್ದನ್ನ ಮೂರು ವರ್ಷದಿಂದ ನೋಡ್ತಾ ಇಲ್ವ ಇಲ್ಲಿ? ವಿದ್ಯಾವಂತ ಅಂತ ವಿದ್ಯಾವಂತ. ಮೂರು ವರ್ಷಾತು ಒಂದ ಅಕ್ಷರನರ ಈ ಠಾಣಾದ ದಾಖಲತಿಯೊಳಗ ನಿನ್ವು ದಾಖಲಾಗ್ಯಾವನು ? ಬರೆ ನಿನ್ನ ರಜಾ ರಿಪೋರ್ಟು ಮತ್ತು ಟಿ.ಎ.ರಿಪೋರ್ಟಬಿಟ್ಟು, ನೀ ಹೇಳೋ ರೀತಿ ಇಲ್ಲಿ ಯಾರೂ ಹೆಬ್ಬಟ್ಟಿನ ಗುರ್ತದವರು ಇಲ್ಲ ' ಎಂದು ರೇಗಿದರು ನುಸ್ರತ್ ಅಲಿ.
' ರಜಾ ರಿಪೋರ್ಟ ನೋಟುಬುಕ್ಕು ಮಾತ್ರ ಅವ ಬರೆಯೋದು, ಅವನ ಕರ್ತವ್ಯದ ವರದಿ ಟಿಎ ರಿಪೋರ್ಟ ಎಲ್ಲಾ ಬೇರೆಯವರು ಬರದು ಕೊಡಬೇಕು, ಎಷ್ಟೋ ಸಲ ಆಂಜನೇಯನ ಬರದು ಕೊಟ್ಟಾನ ' ಎಂದ ರಾಮಾಂಜನೇಯ.
' ಹೋಗಲೆ ಜಾಸ್ತಿ ಮಾತಾಡಬ್ಯಾಡ, ನಾನು ಎಫ್ ಡಿಸಿ ಪರೀಕ್ಷಾ ಬರದು ಬಂದೇನಿ, ಇವತ್ತನ ಆರ್ಡರ್ ಬಂದ್ರ ನಾಳೇನ ರಾಜಿನಾಮೆ ಬೀಸಾಕಿ ಹೋಗ್ತೀನಿ, ನಿಮ್ಮ ಸಹವಾಸ ಯಾವ ನನ್ಮಗನಿಗೆ ಬೇಕು ' ಎಂದು ಉಡಾಫೆಯಿಂದ ಪರಸಪ್ಪ ಮಾತನಾಡಿದ.
' ಓಹೋ ! ತಾವಲ್ಲಿಗೆ ಹೋಗಿ ಏನು ಕೊಸಿತೀರೋ, ಇಲ್ಲೆ ಮಾಡ್ತಾ ಇರೋದನ್ನ ನೋಡ್ತಾ ಇಲ್ಲವ ' ಎಂದು ಗಂಗಾಧರಯ್ಯ ಕೊಂಕು ನುಡಿದರು.
' ಅಲ್ಲೇನ ಮಾಡ್ತಾನ ! ಇಲ್ಲೆ ಮಾಡಿದ್ದನ್ನ ಅಲ್ಲೆ ಮಾಡ್ತಾನ ಕೈಕೆಳಗಿನವರ ಜೀವಾ ತಿಂತಾನ, ಅಷ್ಟ ಅವ ಮಾಡೋದು ' ಎಂದು ರಾಮಾಂಜನೇಯ ಪರಸಪ್ಪನನ್ನು ರೇಗಿಸಿದ.
' ನನ್ಮಗನ ನನಗೇನರ ಎಫ್ ಡಿಸಿ ಆಗಿ ಅಪಾಯಿಂಟ್ ಆಗ್ಲಿ ಇದ ಜಿಲ್ಲಾಕ ಒಂದರಡು ವರ್ಷರ ಎಸ್ಪಿ ಕಛೇರಿಗೇನ ಹಾಕಿಸ್ಕೊಂಡು ಬರ್ತೇನಿ, ನನ್ಮಗನ ನೀ ಬಂದು ನನ್ನೆದ್ರಿಗೆ ಕೈ ಕಟಕೊಂಡಸು ನಿಲ್ಲಬೇಕು ಗೊತ್ತಾ ' ಎಂದು ಪರಸಪ್ಪ ಠೇಂಕಾರದ ಮಾತು ಮಾತನಾಡಿದ.
ಅಷ್ಟರಲ್ಲಿ ಆಂಜನೇಯ ಪ್ರೊಸೆಸ್ ರಿಪೋರ್ಟಗಳನ್ನು ಬರೆದಿಟ್ಟು ರೈಟರ್ ರಾಮಾಂಜನಿಗೆ ಹೇಳಿ ಅಲ್ಲೆ ಮೂಲೆಯಲ್ಲಿರಿಸಿದ್ದ ಮೃತನ ಬಟ್ಟೆ ಬರೆಗಳನ್ನು ತೆಗೆದುಕೊಂಡು ಹೊರ ನಡೆದ.
' ಏಯ್ ಆಂಜನೇಯ ! ಅವನ್ನ ಇಡೋ ಅಲ್ಲಿ ಯಾಕ ಆ ಗೌರಮ್ಮ ಒಗೆಯೋದಿಲ್ಲ ಅಂತಾಳ ಅದು ಅವಳ ಕೆಲಸ ಅವಳು ಮಾಡಬೇಕು. ಇಂಥ ಸಂಧರ್ಭ ಒಮ್ಮೊಮ್ಮೆ ಬರ್ತಾವ, ಯಾಕ ನಿನ್ನೆ ನಾವು ಹುಳ ಎಲ್ಲ ಹರದಾಡೋ ಆ ಹೆಣಾನ ಇಳಿಸಿ ಸುಟ್ಟು ಬರಲಿಲ್ಲನು, ಅಷ್ಟು ಪ್ರತಿಷ್ಟೆ ಮಾಡೋದಾದರ ಅವಳು ಕೆಲಸ ಬಿಟ್ಟು ಹೋಗಲಿ ' ಎಂದರು ನುಸ್ರತ್ ಅಲಿ.
' ಅಯ್ಯೋ ಬಿಡಿ ಸಾರ್ ! ಅಂಥ ಹೆಣಾ ಇಳಸಿ ಹೊತಗೊಂಡು ಹೋಗಿ ಸುಟ್ಟ ಬಂದೇವಂತ ಈ ಬಟ್ಟಿ ಸ್ವಚ್ಛ ಮಾಡಿ ಇಡೋದೇನು ದೊಡ್ಡ ಕೆಲಸ ಅಲ್ಲ ' ಎಂದೆನ್ನುತ್ತ ಅಂಜನೇಯ ಠಾಣೆಯ ಮುಂದಿನ ನೀರಿನ ತೊಟ್ಟಿಯ ಹತ್ತಿರವಿದ್ದ ಒಗೆಯೋ ಕಲ್ಲಿನ ಹತ್ತಿರ ಬಂದ.
' ನನ್ಮಗನ ಭಾಳ ಪೋಜು ಕೊಡ್ಬ್ಯಾಡ ಆ ಬಟ್ಟಿನೆಲ್ಲ ಒಳಗ ತಂದಿಡು, ದೊಡ್ಡವರದಾರ ಅವರು ಅ ವಿಷಯಾನೆಲ್ಲ ನೋಡ್ಕೋತಾರ ' ಎಂದ ಪರಸಪ್ಪ.
' ಅಂದ್ರ ಏನು ನಿನ್ನ ಮಾತಿನ ಅರ್ಥ, ದೊಡ್ಡವರ ಒಗೀಲಿ ಅಂತನೊ ? ಮತ್ತ ತಮ್ಮದೇನು ಕೆಲಸಾನೋ ಸಾಹೇಬರದು ? ಮಗನ ಆ ಗೌರಮ್ಮಗ ಬೆಳಿಗ್ಗೆ ಬಂದಾಗ ತಿಳಿಸಿ ಹೇಳೋದು ಬಿಟ್ಟು ಪುಸಲಾಯಹಿಸಿ ಬಟ್ಟಿ ಒಗೀದ್ಹಂಗ ಮಾಡಿ ಕಳ್ಸೀದಿ, ಇಲ್ಲೆ ಇತ್ಲಾಗ ಆಂಜನೇಯಗೂ ಕಡ್ಡಿ ಆಡಸ್ತಿ ಏನಿದೆಲ್ಲ ? ನೀನೊಂಥರಾ 'ಉದ್ಭವ ' ಸಿನೆಮಾದ ಅನಂತನಾಗ ಇದ್ಹಂಗ ' ಎಂದರು ಗಂಗಾಧರಯ್ಯ..
' ಬರೆ ಬಡಾಯಿ ಮಾತು ಮಾತಾಡ್ಬ್ಯಾಡ ಏನರ ಸ್ವಲ್ಪ ಇಲಾಖೆ ಉಪ್ಪು ತಿಂದಿದ್ದಕ್ಕರ ಸ್ವಲ್ಪಾದರೂ ಕೆಲಸ ಮಾಡೋ ಯೋಚ್ನೆ ಮಾಡು, ಈ ಉಡಾಫೆ ಮಾತೆಲ್ಲ ಒಳ್ಳೇದಲ್ಲ ' ಎಂದರು ಮಂಜಪ್ಪಗೌಡ.
' ನೀವು ಅಂವಗ ಬರಿ ವೇದಾಂತ ಹೇಳ್ರಿ, ಈ ಮೂರು ವರ್ಷದ ಉದ್ದಕ್ಕೂ ನೀವು ಅಂವಗ ಬುದ್ಧಿಮಾತು ಹೇಳ್ತಾನ ಬಂದ್ರಿ, ಅಂವ ತನ್ನ ಮನಸೋ ಇಚ್ಛಿ ನಡಕೋತನ ಬಂದ. ಅಂವ ನಾಯಿ ಬಾಲ ಇದ್ಹಂಗ, ಅಂವ ಸರಿ ಹೋಗೋ ಮನಶ್ಯಾ ಅಲ್ಲ. ನಿನ್ನೆ ಅಂವ ನಡಕೊಂಡ ಬಗ್ಗೆ ಒಂದು ರಿಫೊರ್ಟ ಹಾಕ್ರಿ, ನನ್ಮಗನ ಮ್ಯಾಲ ಡಿಇ ಕಂಡಕ್ಟ್ ಆಗ್ಲಿ, ಏನರ ಪನಿಶ್ಮೆಂಟ್ ಆದ್ರೇನರ ಬುದ್ಧಿ ಬರ್ತದನೋ ನೋಡಬೇಕು ' ಎಂದು ರೇಗಿದರು ನುಸ್ರತ್ ಅಲಿ.
' ಹೋದ ವರ್ಷ ರಿಪೋರ್ಟ ಹಾಕಿ ಏನು ಕಿತಗೊಂಡ್ರಿ ? ' ಎಂದು ಮತ್ತೆ ದುರಹಂಕಾರದ ಮಾತನಾಡಿದ ಪರಸಪ್ಪ.
' ಏ ಪರಸ ! ಏನು ಮಾತಾಡ್ತಿಯೋ ಮಾತಿನ ಮ್ಯಾಲ ಸ್ವಲ್ಪ ನಿಗಾ ಇರ್ಲಿ. ಈಗ ಮಾತಾಡಿದೆಲ್ಲ ಅದನ್ನ ನಮೂದು ಮಾಡಿ ಒಂದು ರಿಪೋರ್ಟ ಹಾಕಿ ಬಿಟ್ಟರ ಮೂರು ತಿಂಗಳು ಮನ್ಯಾಗ ಇರಬೇಕು ಗೊತ್ತದ ಏನು ಮಗನ ? ಎಂದರು ಮಂಜಪ್ಪಗೌಡ.
ಆಂಜನೇಯ ಠಾಣೆಯ ಉಪಯೋಗಕ್ಕೆಂದು ಇಟ್ಟಿದ್ದ ದೊಡ್ಡ ಪ್ಲಾಸ್ಟಿಕ್ ಬಕೆಟ್ ಮತ್ತು ಚೊಂಬುಗಳನ್ನು ತೆಗೆದು ಕೊಂಡು ಬಂದು ನೀರಿನ ತೊಟ್ಟಿಯ ಹತ್ತಿರ ಇಟ್ಟು ಅದರಲ್ಲಿ ನೀರು ತುಂಬಿ ಮೃತನ ಬಟ್ಟೆಬರೆಗಳನ್ನು ಹಾಕಿ ಕಲಕಿ ಕುಸುಕಿ ಒಗೆದು ನೀರನ್ನು ಹೊರಗೆ ಚೆಲ್ಲಿ ಮತ್ತೆ ಮತ್ತೆ ಮೂರ್ನಾಲ್ಕು ಬಾರಿ ಒಗೆದ.
ಠಾಣೆಯಿಂದ ಮನೆಗೆ ಹೊರಟಿದ್ದ ಪರಸಪ್ಪ ' ಏನು ಜನಾನಲೆ ನೀವು ಸ್ವಲ್ಪನಾದರೂ ಕಾಮನ್ ಸೆನ್ಸ್ ಇಲ್ಲ ನಿಮಗ. ಊರ ಮುಂದ ದೊಡ್ಡ ನದೀನ ಹರೀತದ ಅಲ್ಲಿಗೆ ಹೋಗಿ ತೊಳಕೊಂಡು ಬರೋದು ಬಿಟ್ಟು ಇಲ್ಲೆ ಹೆಣದ ಬಟ್ಟಿ ಒಗಿಯಾಕ ಹತ್ಯಾನ ಮಗ ಅದೂ ದಿನ ನಿತ್ಯ ಎಲ್ಲಾರೂ ಉಪಯೋಗಸೋ ಬಕೀಟನ್ಯಾಗ ಎಂದು ಹೇಳುತ್ತ ಹೊರ ನಡೆದ.
' ಸ್ಟೇಶನ್ನಿನ ಬಕಿಟ್ನ್ಯಾಗ ತೊಳೀದ ಮತ್ಯಾವ ಬಕಿಟ್ನ್ಯಾಗ ತೊಳಿಲಪಾ, ಮನೀಗೆ ಹೋಗಿ ಬಕೀಟು ತಂದು ತೊಳೀಲೆನು ' ಎಂದ ಆಂಜನೇಯ.
' ಬೇಕಿದ್ರ ಮಗ ಅವನ ಹೊಳೀಗೆ ಹೋಗಿ ಬಟ್ಟಿ ತೊಳಕೊಂಡು ಬರ್ಲಿ, ಅದ ಬಕಿಟನ್ಯಾಗ ತೊಳದು ಆ ಬಕೀಟು ತೊಳೀದನ ಹಂಗ ಒಯ್ದು ಆ ಟಾಯ್ಲೆಟ್ ರೂಮನ್ಯಾಗ ಇಡು, ಈ ಟಾಯ್ಲೆಟ್ ರೂಮ್ನ ಜಾಸ್ತಿ ಉಪಯೋಗ ಸೋದು ಆ ನನ್ನ ಮಗನ ' ಎಂದರು ಗಂಗಾಧರಯ್ಯ.
ಮೃತನ ಎಲ್ಲ ಬಟ್ಟೆ ಬರೆ ಜನಿವಾರ ಮತ್ತು ಉಡದಾರಗಳನ್ನು ಸ್ವಚ್ಛಗೊಳಿಸಿ ಠಾಣೆಯ ಕಂಪೌಂಡಿನ ಗೋಡೆಗೆ ಒಣಗ ಹಾಕಿ, ಬಕೆಟ್ಟು ಮತ್ತು ಚೊಂಬುಗಳನ್ನು ಸೋಪು ಹಚ್ಚಿ ಉಜ್ಜಿ ಸ್ವಚ್ಛಗೊಳಿಸಿ ಒಳಗೆ ಇಟ್ಟು ಬಂದ. ಮೃತನ ಜೋಬಿನಲ್ಲಿ ದೊರೆದ್ದ ಹತ್ತರ ಐದು ಮತ್ತು ಐದರ ಒಂದು ನೋಟು, ಲಾಂಚ್ ಟಿಕೆಟ್ ಮತ್ತು ಬಸ್ ಟಿಕೆಟ್ಗಳನ್ನು ಬಿಸಿಲೆಗೆ ಹರವಿ ಇಟ್ಟು ಒಣಗಿಸಿ, ಟಿಕೆಟ್ಗಳನ್ನು ಒಂದು ಬಿಳಿ ಹಾಳೆಗೆ ಬೇರೆ ಬೇರೆಯಾಗಿ ಲಗತ್ತಿಸಿ ಅವುಗಳನ್ನು ನುಸ್ರತ್ ಅಲಿ ಯವರ ಸುಪರ್ದಗೆ ಕೊಟ್ಟು ತನ್ನ ದೈನಂದಿನ ಪ್ರೊಸೆಸ್ ಕೆಲಸಕ್ಕೆ ತೆರಳಿದ.
( ಮುಂದುವರಿದುದು )
Comments
ಉ: " ಅಪರಿಚಿತ "(ಕಥೆ) ಭಾಗ 10
In reply to ಉ: " ಅಪರಿಚಿತ "(ಕಥೆ) ಭಾಗ 10 by kamalap09
ಉ: " ಅಪರಿಚಿತ "(ಕಥೆ) ಭಾಗ 10
ಉ: " ಅಪರಿಚಿತ "(ಕಥೆ) ಭಾಗ 10
In reply to ಉ: " ಅಪರಿಚಿತ "(ಕಥೆ) ಭಾಗ 10 by makara
ಉ: " ಅಪರಿಚಿತ "(ಕಥೆ) ಭಾಗ 10
ಉ: " ಅಪರಿಚಿತ "(ಕಥೆ) ಭಾಗ 10
In reply to ಉ: " ಅಪರಿಚಿತ "(ಕಥೆ) ಭಾಗ 10 by swara kamath
ಉ: " ಅಪರಿಚಿತ "(ಕಥೆ) ಭಾಗ 10
ಉ: " ಅಪರಿಚಿತ "(ಕಥೆ) ಭಾಗ 10