ಅಪಾರ್ಥ (ಕಥೆ)
ಅಂದು ಬೆಳಿಗ್ಗೆ ಶ್ರೀಧರ್ ತಡವಾಗಿ ಎದ್ದ ಕಾರಣ ಲಗುಬುಗೆಯಿಂದ ಸ್ನಾನ ಮುಗಿಸಿ ದೇವರಿಗೆ ಕೈ ಮುಗಿದು ಆತುರಾತುರವಾಗಿ ತಿಂಡಿ ತಿಂದು ಡಬ್ಬಿಯನ್ನು ತೆಗೆದುಕೊಂಡು ಆಫೀಸಿಗೆ ಹೊರಟ. ದಾರಿಯಲ್ಲಿ ಹೋಗುವಾಗ ಏನೋ ಮರೆತೆನಲ್ಲ ಏನೋ ಮರೆತೆನಲ್ಲ ಎಂದು ಆಲೋಚಿಸುತ್ತ ಹೊರಟ. ಆದರೆ ನೆನಪಾಗಲಿಲ್ಲ. ಗಾಡಿ ಓಡಿಸುವಾಗ ಅದೇ ಯೋಚಿಸುತ್ತಿದ್ದ, ಏನು ಮರೆತಿದ್ದೇನೆ ಇವತ್ತು ಎಂದು ಯೋಚಿಸುತ್ತ ಆಫೀಸಿಗೆ ಬಂದ. ಥೂ ಒಂದು ದಿವಸ ಏಳುವುದು ಲೇಟ ಆದರೆ ಎಲ್ಲ ಯಡವಟ್ಟುಆಗುತ್ತದೆ ಎಂದುಕೊಂಡು ತನ್ನ ಸೀಟಿನ ಬಳಿ ಬಂದ. ಕೆಲಸದಲ್ಲಿ ಮುಳುಗಿ ಏನು ಮರೆತಿದ್ದೇನೆ ಎಂದು ಮರೆತು ಬಿಟ್ಟ. ಸ್ವಲ್ಪ ಹೊತ್ತಿನ ನಂತರ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಮಾಧವ ಬಂದು ಲೋ ಶ್ರೀ ಒಂದು ನಿಮಿಷ ನಿನ್ನ ಮೊಬೈಲ್ ಕೊಡು ನನ್ನದರಲ್ಲಿಕರೆನ್ಸಿ ಮುಗಿದು ಹೋಗಿದೆ ಅರ್ಜೆಂಟಾಗಿ ಒಂದು ಕರೆ ಮಾಡಬೇಕು ಎಂದು ಕೇಳಿದಾಗ ಶ್ರೀಧರನಿಗೆ ನೆನಪಾಯಿತು ಓಹೋ ತಾನು ಮರೆತು ಬಂದಿರುವುದು ಮೊಬೈಲನ್ನು ಎಂದುಕೊಂಡು ಸಾರಿ ಮಾಧವ್ ನಾನು ಇವತ್ತು ಫೋನ್ ಮರೆತು ಮನೆಯಲ್ಲೇಇಟ್ಟು ಬಂದಿದ್ದೇನೆ ಎಂದು ತನ್ನ ಮಡದಿಗೆ ಕರೆ ಮಾಡಿ ಫೋನ್ ಆಫ್ ಮಾಡಕ್ಕೆ ಹೇಳೋಣ ಇಲ್ಲದಿದ್ದರೆ ಸುಮ್ಮನೆ ಕರೆಗಳು ಬರುತ್ತಲೇ ಇರುತ್ತವೆ ಎಂದುಕೊಂಡು ತನ್ನ ಟೇಬಲ್ ನಲ್ಲಿ ಇದ್ದ ಲ್ಯಾಂಡ್ ಲೈನ್ ನಿಂದ ಮಡದಿಯ ಮೊಬೈಲ್ ಗೆ ಕರೆ ಮಾಡಿದ.
ಅತ್ತ ಕರೆ ಸ್ವೀಕರಿಸಿದ ಶ್ರೀಧರನ ಮಡದಿ ಇಂದಿರಾ ಕೋಪ ಮಿಶ್ರಿತ ಅಳುವಿನಿಂದ ಹಲೋ ಎಂದಳು. ಶ್ರೀಧರನಿಗೆ ಗಾಭರಿಯಾಯಿತು. ಹಲೋ ಇಂದಿರಾ ನಾನು ಶ್ರೀಧರ್ ಮಾತಾಡುತ್ತಿರುವುದು ಯಾಕೆ ಅಳ್ತಾ ಇದ್ದೀಯ? ಏನಾಯ್ತು? ಎಂದು ಕೇಳಿದ.ಅವನ ದನಿ ಕೇಳಿದ ತಕ್ಷಣ ಅಳು ಜೋರು ಮಾಡಿದ ಇಂದಿರಾ ಓಹೋ ನೀವೇ ಫೋನ್ ಮಾಡಿದ್ರ ಇನ್ನು ಮುಂದೆ ನಾನು ನಿಮಗೆ ಇಲ್ಲ ಎಂದುಕೊಳ್ಳಿ, ನಾನು ನನ್ನ ಮಗಳನ್ನು ಕರೆದುಕೊಂಡು ನನ್ನ ತವರು ಮನೆಗೆ ಹೋಗ್ತಾ ಇದ್ದೀನಿ. ನೀವು ಅವಳ ಜೊತೆಆರಾಮಾಗಿ ಇರಿ ಎಂದಳು. ಅವಳ ಮಾತು ಕೇಳಿ ಶ್ರೀಧರನಿಗೆ ಗರ ಬಡಿದಂತಾಯಿತು. ಹೇ ಇಂದಿರಾ ಏನು ಮಾತಾಡ್ತಾ ಇದ್ದೀಯ? ನಾನು ಕರೆ ಮಾಡಿದ್ದು ನನ್ನ ಮೊಬೈಲ್ ಮನೆಯಲ್ಲೇ ಮರೆತು ಬಂದಿದ್ದೆ ಅದನು ಆಫ್ ಮಾಡು ಎಂದು ಹೇಳಲು ಕರೆ ಮಾಡಿದ್ದು. ನೀನು ನೋಡಿದರೆ ಏನೇನೋ ಮಾತಾಡ್ತಾ ಇದ್ದೀಯ ಏನಾಯ್ತು?
ಇಂದಿರಾ ಮತ್ತೆ ಅಳುತ್ತಲೇ, ಹೌದು ರೀ ನಾನೇ ಏನೇನೋ ಮಾತಾಡೋದು ಎಷ್ಟಾದರೂ ನಾವು ಹಳ್ಳಿಯವರು ಅಲ್ಲವ? ನೀವಾದರೆ ಪಟ್ಟಣದವರು ನೀವು ಏನು ಮಾತಾಡಿದರೂ ಚೆನ್ನಾಗೆ ಮಾತಾಡುತ್ತೀರ? ನೀವು ಮೊಬೈಲ್ ಬಿಟ್ಟು ಹೋಗಿದ್ದು ಒಳ್ಳೆಯದೇ ಆಯಿತು. ನಿಮ್ಮ ಬಂಡವಾಳ ಎಲ್ಲ ಗೊತ್ತಾಯಿತು. ಇಲ್ಲದೆ ಹೋಗಿದ್ದರೆ ನನಗೆ ತಿಳಿಯುತ್ತಲೇ ಇರಲಿಲ್ಲ. ಅಲ್ರಿ ಒಂದು ವರ್ಷದಿಂದ ನಿಮ್ಮ ವ್ಯವಹಾರ ನಡೆಸುತ್ತಿದ್ದೀರ, ನಿಮಗೆ ಹೇಗೆ ಮನಸು ಬಂತು ರೀ? ಮನೆಯಲ್ಲಿ ನಾನೊಬ್ಬಳು ಸಾಲದ ನಿಮಗೆ ಇನ್ನೊಬ್ಬಳು ಬೇಕಿತ್ತಾ? ನನ್ನ ಹಣೆಬರಹ ಇಷ್ಟೇ ಎಂದು ಕೊಳ್ಳುತ್ತೇನೆ, ಆದರೆ ನಿಮಗೊಬ್ಬಳು ಮುದ್ದಾದ ಮಗಳು ಇದ್ದಾಳೆ ಎನ್ನುವುದನ್ನು ಮರೆತು ಬಿಟ್ಟಿರ? ನೀವು ಹೀಗೆ ಮಾಡುತ್ತೀರಾ ಎಂದು ಕನಸಲ್ಲೂ ಎಣಿಸಿರಲಿಲ್ಲ. ನಾನು ಈಗಲೇ ನಮ್ಮಅಮ್ಮನ ಮನೆಗೆ ಹೋಗುತ್ತಿದ್ದೇನೆ ಎಂದು ಕರೆ ಕಟ್ ಮಾಡಿದಳು.
ಶ್ರೀಧರನಿಗೆ ತಲೆ ಕೆಟ್ಟು ಹೋಯಿತು. ಯಾಕೆ ಹೀಗೆ ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದಾಳೆ ಇವಳು, ಏನಾಗಿದೆ ಇವಳಿಗೆ? ಮೊಬೈಲ್ ಮನೆಯಲ್ಲಿ ಬಿಟ್ಟು ಬಂದಿದ್ದರಿಂದ ನನ್ನ ಬಂಡವಾಳ ಗೊತ್ತಾಯಿತು ಎನ್ನುತ್ತಿದ್ದಾಳೆ, ಹಾಗಿದ್ದರೆ ಅಲ್ಲೇ ಏನೋ ಯಡವಟ್ಟು ಆಗಿರುವ ಹಾಗಿದೆ ಮೊದಲು ಮನೆಗೆ ಹೋಗಿ ನೋಡಬೇಕು ಎಂದು ಅರ್ಧ ದಿನ ರಜ ಗುಜರಾಯಿಸಿ ಮನೆಯ ಕಡೆ ಹೊರಟ. ಗಾಡಿಯಲ್ಲಿ ಬರುವಾಗ ಹಿಂದಿನದೆಲ್ಲವನ್ನೂ ಮೆಲುಕು ಹಾಕುತ್ತಿದ್ದ. ಈಗ ನಾಲ್ಕು ವರ್ಷದ ಹಿಂದೆ ಇಂದಿರಾಳನ್ನು ಮದುವೆಮಾಡಿಕೊಂಡಿದ್ದ ಶ್ರೀಧರ. ಶ್ರೀಧರನಿಗೆ ಮುಂಚಿನಿಂದಲೂ ಪಟ್ಟಣದ ಹುಡುಗಿಯರು ಎಂದರೆ ಏನೋ ಒಂದು ರೀತಿ ಅಸಡ್ಡೆ, ಹಳ್ಳಿ ಹುಡುಗಿಯರು ಆದರೆ, ಸೌಮ್ಯ ಸ್ವಭಾವದವರು, ಮುಗ್ಧರು, ತಳುಕು ಬಳುಕು ಗೊತ್ತಿರದ ಅಮಾಯಕರು. ಅಂತಹವರನ್ನು ಮದುವೆ ಆದರೆ ಜೀವನ ಚೆನ್ನಾಗಿ ಇರುತ್ತದೆ ಎಂದು ಎಣಿಸಿ ಹುಡುಕಿ ಹುಡುಕಿ ಇಂದಿರಾಳನ್ನು ಮದುವೆ ಆಗಿದ್ದ. ಇಂದಿರಾ ಮೊದಮೊದಲು ಪಟ್ಟಣದ ಜನರ ಸ್ವಭಾವದಿಂದ ಬಹಳ ಗಾಭರಿಯಾಗಿದ್ದಳು. ನಿಧಾನವಾಗಿ ಶ್ರೀಧರ್ ಅವಳಿಗೆ ಎಲ್ಲವನ್ನೂ ತಿಳಿ ಹೇಳುತ್ತಿದ್ದ. ಮದುವೆ ಆಗಿ ಒಂದೂವರೆ ವರ್ಷದ ನಂತರ ಅವರ ಬಾಳಿನಲ್ಲಿ ಸಂಜನಾ ಹೆಣ್ಣು ಮಗುವಿನ ರೂಪದಲ್ಲಿ ಬಂದಿದ್ದಳು.
ಸಂಜನಾ ಬಂದಮೇಲೆ ಇಂದಿರಾಗೆ ಅವಳೇ ಎಲ್ಲ ಆಗಿದ್ದಳು. ಬೆಳಿಗ್ಗೆ ಶ್ರೀಧರ್ ಆಫೀಸ್ ಗೆ ಹೋದಾಗಿನಿಂದ ಅವನು ಮರಳಿ ಬರುವವರೆಗೂ ಮಗುವಿನ ಪಾಲನೆಯಲ್ಲೇ ತೊಡಗಿರುತ್ತಿದ್ದಳು. ಎಲ್ಲ ಶ್ರೀಧರ್ ನೆನೆಸಿದಂತೆ ಸುಸೂತ್ರವಾಗಿ ನಡೆಯುತ್ತಿತ್ತು. ಆದರೆ ಇಂದು ಇಂದಿರಾಗೆ ಅದೇನಾಯಿತೋ ಏನೋ ಇದ್ದಕ್ಕಿದ್ದಂತೆ ಏನೇನೋ ಮಾತನಾಡುತ್ತಿದ್ದಾಳೆ ಅದೂ ಅಲ್ಲದೆ ಮೊಬೈಲ್ ನಿಂದ ಎಲ್ಲಾ ಗೊತ್ತಾಗಿದೆ ಎಂದು ಹೇಳುತ್ತಿದ್ದಾಳೆ, ಅಷ್ಟರಲ್ಲಿ ಹಿಂದಿನಿಂದ ಹಾರನ್ ಸದ್ದಿಗೆ ಮತ್ತೆ ವಾಸ್ತವಕ್ಕೆ ಬಂದ ಶ್ರೀಧರ್ ಸೀದಾ ಮನೆ ಬಳಿ ಬಂದ. ಆಗಲೇ ಮನೆಗೆ ಬೀಗ ಬಿದ್ದಿತ್ತು. ಓಹೋ ಇವಳು ಆಗಲೇ ಹೊರಟು ಹೋಗಿದ್ದಾಳೆ ಎಂದುಕೊಂಡು ತನ್ನ ಬಳಿ ಇದ್ದ ನಕಲಿ ಕೀ ಇಂದ ಮನೆಯ ಬಾಗಿಲು ತೆರೆದು ಒಳಗೆ ಹೋದ. ಎಳ್ಳಿನ ವಸ್ತುಗಳು ಅಲ್ಲಲ್ಲೇ ಬಿದ್ದಿದ್ದವು. ಮೊದಲು ಹೋಗಿ ಮೊಬೈಲನ್ನು ಕೈಗೆತ್ತಿಕೊಂಡು ಮೆಸೇಜ್ ಯಾವುದಾದರೂ ಬಂದಿದೆಯ ಎಂದು ನೋಡಿದ. ಯಾವುದೇ ಹೊಸ ಮೆಸೇಜ್ ಇರಲಿಲ್ಲ. ನಂತರ ಕಾಲ್ ರೆಜಿಸ್ಟರ್ ತೆರೆದು ನೋಡಿದರೆ ತಾನು ಆಫೀಸಿಗೆ ಹೋದ ನಂತರ ಒಂದೇ ಒಂದು ಕಾಲ್ ಬಂದಿತ್ತು ಅದು ತನ್ನ ಸ್ನೇಹಿತ ಪಂಚಾಕ್ಷರಿಯ ನಂಬರ್. ಪಂಚಾಕ್ಷರಿ ಮೊದಲೇ ಮಹಾನ್ ತರಲೆ ಮನುಷ್ಯ ಅವನೇ ಏನೋ ಕಿತಾಪತಿ ಮಾಡಿರಬಹುದು ಎಂದೆನಿಸಿ ಅವನಿಗೆ ಕರೆ ಹಾಕಿದ.
ಹಲೋ ಲೇ ಪಂಚಾಕ್ಷರಿ ಬೆಳಿಗ್ಗೆ ನನ್ನ ಮೊಬೈಲ್ ಗೆ ಕರೆ ಮಾಡಿ ನನ್ನ ಹೆಂಡತಿ ಬಳಿ ಏನೆಂದು ಹೇಳಿದೆ? ಅವಳು ನನ್ನ ಮೇಲೆ ಸಿಟ್ಟಾಗಿ ತವರು ಮನೆಗೆ ಹೋಗಿದ್ದಾಳೆ ಕಣೋ. ಅಂಥದ್ದು ಏನಪ್ಪಾ ಹೇಳಿದೆ ಎಂದು ಕೇಳಿದ್ದಕ್ಕೆ ಪಂಚಾಕ್ಷರಿ ನಡೆದ ವಿಷಯ ತಿಳಿಸಿದ. ಅದನ್ನು ಕೇಳಿ ಶ್ರೀಧರನಿಗೆ ಕೋಪ ನಗು ಒಟ್ಟಿಗೆ ಮೂಡಿತು. ಅಯ್ಯೋ ಮನೆಹಾಳ ಅವಳ ಜೊತೆ ಏನೋ ಕಿತಾಪತಿ ನಿಂದು ಸರಿ ಸರಿ ನಾನು ಮೊದಲು ಹೋಗಿ ಅವರನ್ನು ಕರೆದುಕೊಂಡು ಬರುತ್ತೇನೆ. ಸಂಜೆ ಬಂದು ನಿನ್ನನ್ನು ವಿಚಾರಿಸಿಕೊಳ್ಳುತ್ತೇನೆ ಎಂದು ಕರೆ ಕಟ್ ಮಾಡಿ ಬೀಗ ಹಾಕಿಕೊಂಡು ಗಾಡಿ ತೆಗೆದುಕೊಂಡು ಇಂದಿರಾ ಮನೆ ಕಡೆ ಹೊರಟ.
ಇಂದಿರಾ ಮನೆ ಮುಂದೆ ಗಾಡಿ ನಿಲ್ಲಿಸಿ ಒಳಗೆ ಹೋದರೆ ಇಂದಿರಾ ತನ್ನ ತಾಯಿಯ ಜೊತೆ ಕುಳಿತು ಅಳುತ್ತಿದ್ದರು. ಶ್ರೀಧರ್ ಬಂದಿದ್ದನ್ನು ನೋಡಿ ಇಂದಿರಳ ತಾಯಿ ಎದ್ದು ಬನ್ನಿ ಅಳಿಯಂದ್ರೆ ಬನ್ನಿ ಕೂಡಿ ಎಂದು ಒಳಗಡೆಯಿಂದ ತಮ್ಮ ಯಜಮಾನರನ್ನು ಕರೆದುಕೊಂಡು ಬರಲು ಹೋದರು. ಇಂದಿರಾ ಅಲ್ಲೇ ಪಕ್ಕದಲ್ಲಿ ಮಲಗಿದ್ದ ಸಂಜನಾಳನ್ನು ನೋಡುತ್ತಾ ಮತ್ತೆ ಅಳಲು ಶುರು ಮಾಡಿದಳು. ಅಷ್ಟರಲ್ಲಿ ಒಳಗಡೆಯಿಂದ ಬಂದ ಇಂದಿರಳ ತಂದೆ ಶ್ರೀಧರನ ಪಕ್ಕದಲ್ಲಿ ಕುಳಿತು ಅಳಿಯಂದ್ರೆ ಏನಾಯಿತು ಏನು ತೊಂದರೆ ಅವಳು ನೋಡಿದರೆ ಏನೂ ಹೇಳುತ್ತಿಲ್ಲ ನೀವಾದರೂ ಹೇಳಿ ಏನಾಯ್ತು ಅಂತ.
ಅಯ್ಯೋ ಮಾವ, ಇವತ್ತು ಬೆಳಿಗ್ಗೆ ನಾನು ಆಫೀಸಿಗೆ ಹೋಗುವ ಆತುರದಲ್ಲಿ ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿದ್ದೆ. ನನ್ನ ಸ್ನೇಹಿತ ನಮ್ಮ ಮದುವೆಯ ದಿನವನ್ನು ನೆನಪಿಸಿಕೊಂಡು ಶುಭ ಕೋರಲು ಕರೆ ಮಾಡಿದ್ದಾನೆ. ಅವನು ಸ್ವಲ್ಪ ತರಲೆ, ಇವಳು ಫೋನ್ ಎತ್ತಿದ್ದನ್ನು ನೋಡಿ ಸ್ವಲ್ಪ ಆಟ ಆಡಿಸಲೆಂದು ನಿಮ್ಮ ಯಜಮಾನರಿಗೆ ಮೊದಲನೇ ವರ್ಷದ ಮದುವೆ ವಾರ್ಷಿಕೋತ್ಸವದ ಶುಭಾಶಯವನ್ನು ತಿಳಿಸಿಬಿಡಿ, ಇಂದು ಸಂಜೆ ಪಾರ್ಟಿ ಕೊಡಲು ಮರೆಯದಿರಿ ಎಂದು ಹೇಳಿದ್ದಾನೆ. ತಕ್ಷಣ ಅವರ ಮಾವ ಮಧ್ಯದಲ್ಲಿ ಬಾಯಿ ಹಾಕಿ ಅಲ್ಲ ಅಳಿಯಂದರೆ ನಿಮ್ಮ ಮದುವೆ ಆಗಿ ನಾಲ್ಕು ವರ್ಷ ಆಗಿದೆ, ಈಗ ಮೊದಲನೇ ವರ್ಷದ ವಾರ್ಷಿಕೋತ್ಸವನ? ಹೌದು ಮಾವ ಅವಳಿಗೂ ಅದೇ ಅನುಮಾನ ಬಂದು ನನ್ನ ಮೇಲೆ ಕೋಪ ಮಾಡಿಕೊಂಡು ಹೊರಟು ಬಂದಿದ್ದಾಳೆ. ಇವತ್ತು ದಿನಾಂಕ ಎಷ್ಟು ನೋಡಿ ಮೊದಲು. ಅವರ ಮಾವ ಕ್ಯಾಲೆಂಡರ್ ಕಡೆ ನೋಡಿ ಅರೆ ಹೌದು ಇವತ್ತು ಫೆಬ್ರವರಿ ೨೯. ನಿಮ್ಮ ಮದುವೆಯ ದಿವಸ. ಹೌದು ಮಾವ ನಮ್ಮ ಮದುವೆ ಆಗಿ ನಾಲ್ಕು ವರ್ಷ ಆದರೂ ಫೆಬ್ರವರಿ ೨೯ ಬರುವುದು ನಾಲ್ಕು ವರ್ಷಕ್ಕೊಮ್ಮೆ ಮಾತ್ರ ಅಲ್ಲವೇ? ಅದಕ್ಕೆ ನನ್ನ ಸ್ನೇಹಿತ ಮೊದಲನೇ ವಾರ್ಷಿಕೋತ್ಸವ ಎಂದಿದ್ದಾನೆ. ಇವಳು ಅಷ್ಟಕ್ಕೇ ಎಂದು ಇಂದಿರಾ ಕಡೆ ನೋಡಿದ......
Comments
ಉ: ಅಪಾರ್ಥ (ಕಥೆ)
In reply to ಉ: ಅಪಾರ್ಥ (ಕಥೆ) by makara
ಉ: ಅಪಾರ್ಥ (ಕಥೆ)
ಉ: ಅಪಾರ್ಥ (ಕಥೆ)
In reply to ಉ: ಅಪಾರ್ಥ (ಕಥೆ) by partha1059
ಉ: ಅಪಾರ್ಥ (ಕಥೆ)
ಉ: ಅಪಾರ್ಥ (ಕಥೆ)
In reply to ಉ: ಅಪಾರ್ಥ (ಕಥೆ) by Chikku123
ಉ: ಅಪಾರ್ಥ (ಕಥೆ)
In reply to ಉ: ಅಪಾರ್ಥ (ಕಥೆ) by Jayanth Ramachar
ಉ: ಅಪಾರ್ಥ (ಕಥೆ)
In reply to ಉ: ಅಪಾರ್ಥ (ಕಥೆ) by Prakash Narasimhaiya
ಉ: ಅಪಾರ್ಥ (ಕಥೆ)
ಉ: ಅಪಾರ್ಥ (ಕಥೆ) @ ಜಯಂತ್ ಅವ್ರೇ
In reply to ಉ: ಅಪಾರ್ಥ (ಕಥೆ) @ ಜಯಂತ್ ಅವ್ರೇ by venkatb83
ಉ: ಅಪಾರ್ಥ (ಕಥೆ) @ ಜಯಂತ್ ಅವ್ರೇ