ಎಲ್ಲಿ ನೋಡಿದರಲ್ಲಿ ಸ್ಪಾಮ್
ಕೆಲವು ವಾರಗಳ ಹಿಂದೆ ಹಿರಿಯರೊಬ್ಬರೊಂದಿಗೆ ಮಾತನಾಡುತ್ತಿರುವಾಗ ಅದೇನೋ ನೆನಪಾಗಿ "ದೂರದ ಕೀನ್ಯದಲ್ಲಿ ಕುಳಿತು ಇಲ್ಲಿರುವ ಜನರಿಗೆ ಇ-ಮೇಯ್ಲ್ ಮೂಲಕ ಟೋಪಿ ಹಾಕುತ್ತಾರೆ, ಗೊತ್ತುಂಟೋ?" ಎಂದುಬಿಟ್ಟೆ. ದೂರದ ಆಫ್ರಿಕದ ದೇಶದಲ್ಲಿರುವವರು ಭಾರತೀಯರಿಗೆ ಇಂಟರ್ನೆಟ್ ಮೂಲಕ ಟೋಪಿ ಹಾಕಿರುವುದು, ಹಾಕುತ್ತಿರುವುದು ಹೊಸ ವಿಷಯವೇನಿರಲಿಕ್ಕಿಲ್ಲ. ಆದರೆ ನನ್ನ ಈ ಮಾತು ಕೇಳಿದ ಹಿರಿಯರಿಗೆ ಕುತೂಹಲ ಉಂಟಾಯಿತು. ಅವರು ಮಾತನಾಡುತ್ತಿದ್ದ ವಿಷಯವನ್ನು ಮರೆತು ಎಲ್ಲೋ ಏನೋ ನೆನಪಾದಂತೆ "ಏ, ನನಗೂ ಅಂತಹ ಇ-ಮೇಯ್ಲುಗಳು ಬರುತ್ತದೆ ಮಾರಾಯ - ಯಾವುದ್ಯಾವುದೋ ದೇಶಗಳಿಂದೆಲ್ಲ ಇ-ಮೇಯ್ಲು. ಆದರೆ ಅದರಿಂದ ದುಡ್ಡು ಹೇಗೆ ಮಾಡ್ತಾರೆ? ಅವರಿಗೇನು ಲಾಭ?" ಎಂದು ಕೇಳಿದರು. ನನಗೆ ಸಾಧ್ಯವಾದಷ್ಟು ಸುಲಭ ರೀತಿಯಲ್ಲಿ ಅವರಿಗೆ ಇದನ್ನು ವಿವರಿಸಲು ಹೊರಟೆ. "ನನ್ನ ಗಂಡ ತೀರಿ ಹೋದರು. ನಾನು ಅವರ ಆಸ್ತಿಯ ಏಕೈಕ ವಾರಸುದಾರ್ತಿ, ಆದರೆ ಹಣ ಇಡಲು ಬ್ಯಾಂಕ್ ಅಕೌಂಟ್ ಬೇಕಿದೆ. ಇಂಟರ್ನೆಟ್ಟಿನಲ್ಲಿ ಯಾರಾದರೂ ಸಹಾಯಕ್ಕೆ ಸಿಗುತ್ತಾರೆ ಎಂದು ಹುಡುಕುವಾಗ ನೀವು ಸಿಕ್ಕಿರಿ. ನೀವೇ ಸ್ವತಃ ಏನಾದರೂ ಮಾಡಿ ಈ ಹಣ ಉಳಿಸಿಕೊಡಬೇಕು. ನಿಮ್ಮ ಬ್ಯಾಂಕ್ ಅಕೌಂಟ್ ನಂಬರು ಮತ್ತು ಪಾಸ್ವರ್ಡ್ ಮೇಯ್ಲ್ ಮಾಡಿದರೆ ಸಾಕು. ನಾನು ಕೂಡಲೆ ಈ ಹಣ ಜಮಾ ಮಾಡಿಬಿಡುತ್ತೇನೆ. ನಿಮಗೂ ಅದರಲ್ಲಿ ಭಾಗ ಕೊಡುತ್ತೇನೆ" ಎಂದೆಲ್ಲ ಬರೆದು ಟೋಪಿ ಹಾಕುತ್ತಾರೆ ಎಂದು ತಿಳಿಸಿದೆ. "ಅಥವ ಇಂಟರ್ನೆಟ್ಟಿನಲ್ಲಿ ಹುಡುಕುವಾಗ ನಿಮ್ಮ ಚೆಂದದ ಫೋಟೋ ಸಿಕ್ಕಿತು. ನಿಮ್ಮನ್ನು ನನ್ನ ಗೆಳಯನನ್ನಾಗಿ ಮಾಡಿಕೊಳ್ಳುವ ಬಯಕೆ. ತಪ್ಪದೆ ಉತ್ತರ ಬರೆಯಿರಿ" ಎಂದೂ ಬರೆದು ಗಾಳ ಹಾಕುತ್ತಾರೆ ಎಂದು ತಿಳಿಸಿದೆ. "ಇಂಥದ್ದಕ್ಕೆಲ್ಲ ಯಾರು ಬೀಳ್ತಾರೋ ಮಾರಾಯ" ಎಂದು ಹೇಳುತ್ತಾರೆಂಬ ನಿರೀಕ್ಷೆಯಲ್ಲಿದ್ದವನಿಗೆ: "ಅಯ್ಯೋ ಮಾರಾಯ, ನಂಗೂ ಬಂದಿತ್ತು ಈ ರೀತಿಯ ಇ-ಮೇಯ್ಲು. ನಿಜ ಇರಬಹುದು ಅನ್ನಿಸಿಬಿಡ್ತು ನೋಡು. ಉತ್ತರಕೋಡೋಕೆ ಹೋದವನು ನನಗ್ಯಾಕೆ ಆ ಹಣ ಎಂದು ಸುಮ್ಮನಾಗಿದ್ದೆ. ಒಳ್ಳೆಯದಾಯ್ತು ನೀ ತಿಳಿಸಿದ್ದು." ಎಂದು ಹೇಳಿಬಿಟ್ಟರು!
ನಿಜಕ್ಕೂ ಈ ರೀತಿಯ ಕಥೆಗಳನ್ನೆಲ್ಲ ಬರೆದು, ಬ್ಯಾಂಕ್ ಅಕೌಂಟ್ ಮಾಹಿತಿ ಪಡೆದು ದುಡ್ಡು ದೋಚಿದ ಕೀನ್ಯದವರ ಕಥೆ ಇಂಟರ್ನೆಟ್ ಜಗತ್ತಿಗೆ ತೀರ ಹಳೆಯದ್ದು. ಈ ರೀತಿಯ ಇ-ಮೇಯ್ಲುಗಳಿಗೆ "ಕೀನ್ಯ-ಸ್ಕ್ಯಾಮ್" ಎಂದೇ ಹೆಸರು ಬಂದುಬಿಟ್ಟಿತ್ತು. ಮೀನಿಗೆ ಗಾಳ ಹಾಕಿದಂತೆ ನಡೆಸುವ ಈ ಕೃತ್ಯಗಳಿಗೆ ಸಾಮಾನ್ಯವಾಗಿ "ಫಿಶಿಂಗ್" ಎಂದು ಕರೆಯುತ್ತಾರೆ. ಈಗಿನ ಫಿಶಿಂಗ್ ಸರದಾರರು ಇನ್ನೂ ಮುಂದು... ನೇರ ಬ್ಯಾಂಕಿನ ಹೆಸರಲ್ಲೇ ರಾಜಾರೋಷವಾಗಿ ಇ-ಮೇಯ್ಲು ಕಳುಹಿಸಿಬಿಡುತ್ತಾರೆ. "ನಿಮ್ಮ ಅಕೌಂಟು ಈ ಕೂಡಲೆ ಬಂದ್ ಮಾಡಬೇಕೆಂಬ ಆದೇಶ ಬಂದಿದೆ. ನಿಮ್ಮ ಅಕೌಂಟು ಉಳಿಯಬೇಕೆಂದಿದ್ದರೆ ಕೂಡಲೆ ನಿಮ್ಮ ಬ್ಯಾಂಕ್ ಅಕೌಂಟಿಗೆ ಲಾಗಿನ್ ಆಗಿ" ಎಂದೆಲ್ಲ ಬರೆದು ಬ್ಯಾಂಕಿನ ವೆಬ್ಸೈಟನ್ನೇ ಹೋಲುವಂತಿರುವ ಪುಟಕ್ಕೆ ಲಿಂಕ್ ಕೊಟ್ಟುಬಿಡುತ್ತಾರೆ. ನೀವೇನಾದರೂ ಗಾಬರಿಯಲ್ಲಿ ನಿಜವಾದ ವೆಬ್ಸೈಟ್ ಇದಲ್ಲ ಎಂಬುದನ್ನು ಗಮನಿಸದೆ ಅಲ್ಲಿ ಹೋಗಿ ಲಾಗಿನ್ ಮಾಹಿತಿ ಕೊಟ್ಟುಬಿಟ್ಟರೆ "ಕೊಟ್ಟವನು ಕೋಡಂಗಿ... " ಕಥೆಯಾಗಿಬಿಡುತ್ತದೆ.
ಇದೇ ರೀತಿಯ ಇ-ಮೇಯ್ಲುಗಳನ್ನು ಕಳುಹಿಸಿ ನಿಮ್ಮ ಗೂಗಲ್ ಮೇಯ್ಲ್ ಅಥವ ಯಾಹೂ ಮೇಯ್ಲ್ ಅಕೌಂಟನ್ನು ಕದಿಯಲೂ ಪ್ರಯತ್ನಿಸುತ್ತಾರೆ. ಒಮ್ಮೆ ನನಗೆ ಪರಿಚಿತರಾದ ಲೇಖಕರೊಬ್ಬರಿಂದ ಇ-ಮೇಯ್ಲು ಬಂದದ್ದು: "ನಾನು ಯಾವುದೋ ಕೆಲಸದ ಮೇಲೆ ದೆಹಲಿಗೆ ಬಂದಿದ್ದೆ. ಇಲ್ಲಿ ನನ್ನಲ್ಲಿದ್ದ ಹಣ, ಮೊಬೈಲು ಕಳುವಾಯಿತು. ನನಗೀಗ ಹಣದ ಸಹಾಯ ಬೇಕು. ಇದೇ ಇ-ಮೇಯ್ಲ್ ವಿಳಾಸಕ್ಕೆ ಉತ್ತರ ಬರೆದರೆ ನನ್ನ ಇಲ್ಲಿನ ಗೆಳೆಯನೊಬ್ಬನ ಬ್ಯಾಂಕ್ ಅಕೌಂಟಿನ ಮಾಹಿತಿ ಕೊಡುತ್ತೇನೆ" ಎಂದಿತ್ತು. ಯಾವುದಕ್ಕೂ ಒಮ್ಮೆ ಫೋನ್ ಮಾಡಿ ವಿಚಾರಿಸಿಬಿಡುವುದು ಒಳ್ಳೆಯದೆಂದು ಫೋನ್ ಮಾಡಿದೆ. ಆ ಲೇಖಕರು ಬೆಂಗಳೂರಲ್ಲೇ ಇದ್ದರು! ಅವರ ಫೋನ್ ಅವರ ಬಳಿಯೇ ಇತ್ತು! ಒಂದೆರಡು ದಿನಗಳಿಂದ ಅವರಿಗೆ ಇ-ಮೇಯ್ಲ್ ನೋಡಲು ಸಾಧ್ಯವಾಗಿರಲಿಲ್ಲವೆಂದು, ಪಾಸ್ವರ್ಡ್ ತಪ್ಪು ಎಂದು ಬರುತ್ತಿತ್ತೆಂದು ತಿಳಿಸಿದರು.
ಇತ್ತೀಚೆಗೆ ನಮ್ಮ ದೇಶದಲ್ಲಿ ಇಂಟರ್ನೆಟ್ ಬಳಸುವವರು ಒಂದಲ್ಲ ಒಂದು ಸಲ ಬುಟ್ಟಿಗೆ ಬಿದ್ದೇ ಬೀಳುವುದು ಸಾಮಾನ್ಯವಾಗಿಬಿಟ್ಟಿದೆ. ಅಂತರ್ಜಾಲದಲ್ಲಿ ಗಾಳ ಬೀಸುವವರು ಸಾಫ್ಟ್ವೇರ್ ತಜ್ಞರನ್ನೂ ಬೇಸ್ತು ಬೀಳಿಸುವಷ್ಟು 'ಹುಷಾರ್' ಆಗಿದ್ದಾರೆ. ಈಗಂತೂ "ನಿಮ್ಮ ಫೋಟೋ ಯಾರೋ ಇಲ್ಲಿ ಹಾಕಿ ನಿಮ್ಮನ್ನು ಬೈದಿದ್ದಾರೆ, ನೋಡಿ" ಎಂದು ಯಾವುದೋ ಲಿಂಕ್ ಕೊಟ್ಟು ನಿಮ್ಮನ್ನು ಬೇಸ್ತು ಬೀಳಿಸುವವರು ಇದ್ದಾರೆ. ಕುತೂಹಲಕ್ಕೆ ಬಿದ್ದು ಇಂಥದ್ದನ್ನು ಕ್ಲಿಕ್ ಮಾಡಿದರೆ ಸರಿಯಾದ ರಕ್ಷಣೆಯಿಲ್ಲದ ಬ್ರೌಸರ್ ತಂತ್ರಾಂಶ ಅಥವ ಅಪ್ಡೇಟ್ ಆಗಿಲ್ಲದ ಆಪರೇಟಿಂಗ್ ಸಿಸ್ಟಮ್ ಬಳಸುತ್ತಿರುವವರಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಆರ್ಕುಟ್, ಫೇಸ್ ಬುಕ್ ಗಳಲ್ಲಿ ಕುತೂಹಲಕ್ಕೆ ಏನೋ ಕ್ಲಿಕ್ ಮಾಡಿದವರು ತಮ್ಮೆಲ್ಲ ಗೆಳೆಯರಿಗೆ ತಮ್ಮದೇ ಹೆಸರಿನಲ್ಲಿ ಇಲ್ಲಸಲ್ಲದ ಮೇಯ್ಲುಗಳು ಹೋಗುವುದನ್ನು ನೋಡಿ ದಿಗಿಲಾಗಿ ಅದನ್ನು ತಡೆಯಲೂ ಆಗದೆ ಪೇಚಾಡಿರುವವರು ಬಹಳ ಮಂದಿ ಇದ್ದಾರೆ.
ಈಗೀಗ ಮೊಬೈಲ್ ಫೋನಿಗೂ ಗಾಳ ಹಾಕುವವರು ದಾಳಿ ಇಟ್ಟಿದ್ದಾರೆ. ನಿಮಗೊಂದು ಅವಾರ್ಡ್ ಬಂದಿದೆ, ಕೂಡಲೆ ನಮಗೆ ನಿಮ್ಮ ಹೆಸರು ಮತ್ತು ಅಕೌಂಟ್ ಮಾಹಿತಿ ಕಳುಹಿಸಿಕೊಡಿ ಎಂದೋ, ನೀವೊಂದು ಲಾಟರಿ ಗೆದ್ದಿದ್ದೀರಿ ಎಂದೋ ನಿಮ್ಮನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ ಮಾಡುತ್ತಾರೆ.
ಹಲವು ವರದಿಗಳ ಪ್ರಕಾರ ೨೦೧೨ರ ಮಾರ್ಚ್ ತಿಂಗಳಲ್ಲಿ ಜಗತ್ತಿನಾದ್ಯಂತ ಅತಿ ಹೆಚ್ಚು ಸ್ಪಾಮ್ ಹೊರಬಂದದ್ದು ಭಾರತದ ಕಂಪ್ಯೂಟರುಗಳಿಂದ! ಇದಕ್ಕೆ ಕಾರಣ ಭಾರತದಲ್ಲಿ ಧಿಡೀರ್ ಹೆಚ್ಚುತ್ತಿರುವ ಅಂತರ್ಜಾಲ ಬಳಸುವವರ ಸಂಖ್ಯೆ ಹಾಗು ಕಂಪ್ಯೂಟರ್ ಸೆಕ್ಯೂರಿಟಿ ಕುರಿತು ನಮ್ಮಲ್ಲಿ ಇರುವ ತೀರ ಕಡಿಮೆ ಅರಿವು. ಕಂಪ್ಯೂಟರುಗಳಲ್ಲಿ ಪೈರೇಟೆಡ್ ತಂತ್ರಾಂಶಗಳ ಬಳಕೆ ಭಾರತದಲ್ಲಿ ಹೆಚ್ಚು, ತಂತ್ರಾಂಶ ಕೊಂಡು ಬಳಸುವ ಪರಿಪಾಠ ತೀರ ಕಡಿಮೆ. ಪೈರೇಟ್ ಮಾಡಿರುವ ತಂತ್ರಾಂಶಕ್ಕೆ ಹೊಸ ಸೆಕ್ಯೂರಿಟಿ ಅಪ್ಡೇಟುಗಳು ಸಿಗುವುದಿಲ್ಲ. ಹೀಗಾಗಿ ಪೈರೇಟೆಡ್ ತಂತ್ರಾಂಶ ಬಳಸುತ್ತಿರುವ ಕಂಪ್ಯೂಟರುಗಳು ವೈರಸ್ಸುಗಳಿಗೆ ಸುಲಭದಲ್ಲಿ ತುತ್ತಾಗುತ್ತವೆ. ಅವುಗಳಲ್ಲಿ ವಿಶೇಷವಾಗಿ ಅಂತರ್ಜಾಲಕ್ಕೆ ಸಂಪರ್ಕ ಹೊಂದಿರುವ ಕಂಪ್ಯೂಟರುಗಳು ಹ್ಯಾಕ್ ಮಾಡಲು ಪ್ರಯತ್ನ ಮಾಡುತ್ತಿರುವವರಿಂದ ಹೆಚ್ಚಿನ ಬಾಧೆಗೆ ಒಳಗಾಗುತ್ತವೆ. ಇದಲ್ಲದೆ ವರ್ಮ್, ಟ್ರೋಜನ್ ಎಂಬ ಹೆಸರಿನ ದುಷ್ಟ ತಂತ್ರಾಂಶಗಳ ಹಾವಳಿ ಕೂಡ ಹೆಚ್ಚುತ್ತದೆ.
ಇದನ್ನೆಲ್ಲ ತಡೆಗಟ್ಟುವ ದಾರಿ ಕಂಪ್ಯೂಟರ್ ಬಳಸುವಾಗ ಸದಾ ಎಚ್ಚರಿಕೆ ವಹಿಸುವುದು. ಇದು ಹೇಳಿದಷ್ಟು ಸುಲಭದ ಕೆಲಸವೇನಲ್ಲ. ಆದರೆ ಕೆಲವು ಸುಲಭ ಕ್ರಮಗಳನ್ನು ವಹಿಸಿದಲ್ಲಿ ಹೆಚ್ಚಿನ ತೊಂದರೆಗಳಿಂದ ದೂರ ಉಳಿಯಬಹುದು. ಕಂಪ್ಯೂಟರಿನಲ್ಲಿ ಪ್ರೈರೇಟೆಡ್ ತಂತ್ರಾಂಶಗಳನ್ನು ಬಳಸುವುದು ನಿಲ್ಲಿಸುವುದು ಉತ್ತಮ. ಇತ್ತೀಚೆಗೆ ಹೆಚ್ಚು ಜನಪ್ರಿಯವಾಗಿರುವ ಉಬುಂಟು (ಗ್ನು/ಲಿನಕ್ಸ್ ಅಧಾರಿತ ಆಪರೇಟಿಂಗ್ ಸಿಸ್ಟಮ್) ಏನೂ ಖರ್ಚಿಲ್ಲದೆ ಸಿಗುತ್ತದೆ. ಹಣ ಕೊಟ್ಟು ವಿಂಡೋಸ್ ಕೊಳ್ಳಲಾಗದವರು ಇದನ್ನು ಬಳಸಬಹುದು. ಹಣ ಕೊಟ್ಟು ಮೈಕ್ರೋಸಾಫ್ಟ್ ಆಫೀಸ್ ಕೊಳ್ಳಲಾಗದವರು LibreOffice ಬಳಸಬಹುದು. ಜೊತೆಗೆ ಸದಾಕಾಲ ಇತ್ತೀಚಿನ ಬ್ರೌಸರ್ ತಂತ್ರಾಂಶ ಬಳಸಿದಲ್ಲಿ ತೊಂದರೆಗಳು ಕಡಿಮೆ. ಅದರಲ್ಲೂ ಮಾಝಿಲ್ಲಾ ಫೈರ್ ಫಾಕ್ಸ್ (Mozilla Firefox) ಎಂಬ ಹೆಸರಿನ ಬ್ರೌಸರ್ ಈಗ ಲಭ್ಯವಿರುವ ಬ್ರೌಸರುಗಳಲ್ಲಿ ಅತಿ ಹೆಚ್ಚು ಸುರಕ್ಷೆ ನೀಡಬಲ್ಲ ಬ್ರೌಸರ್ ತಂತ್ರಾಂಶ. ಈ ತಂತ್ರಾಂಶದಲ್ಲಿ ಹೆಚ್ಚಿನ ಸುರಕ್ಷೆ ಬಯಸುವವರಿಗೆ ಬೇಕಾದ ಉತ್ತಮ ಪ್ಲಗಿನ್ನುಗಳು (plug-ins) ಲಭ್ಯ. ಹೊಸ ತಂತ್ರಾಂಶಗಳನ್ನು ಹಾಕಿಕೊಳ್ಳುವ ಸಮಯ ಸುಮ್ಮನೆ 'ನೆಕ್ಸ್ಟ್'(next) ಎಂಬ ಬಟನ್ ಒತ್ತದೆ ಅದು ಏನು ಕೇಳುತ್ತಿದೆ ಎಂಬುದನ್ನು ಗಮನ ಇಟ್ಟು ಓದಿಕೊಂಡು ಮುಂದುವರೆಯುವುದು ಉತ್ತಮ. ಕೆಲವೊಮ್ಮೆ ನೀವು ಡೌನ್ಲೋಡ್ ಮಾಡಿ ಕಂಪ್ಯೂಟರಿನಲ್ಲಿ ಇನ್ಸ್ಟಾಲ್ ಮಾಡಿಕೊಂಡ ತಂತ್ರಾಂಶ ತನ್ನೊಂದಿಗೆ ನಿಮಗೆ ಬೇಡದ ಯಾವ್ಯಾವುದೋ ತಂತ್ರಾಂಶಗಳನ್ನು ತಾನೇ ಹಾಕಿಬಿಟ್ಟಿರುತ್ತದೆ.
ಇನ್ನು ಬ್ಯಾಂಕುಗಳ ವೆಬ್ಸೈಟುಗಳನ್ನು ಬಳಸುವಾಗ ಒಮ್ಮೆ ಅದರ ವಿಳಾಸ (URL) ಓದಿ ಅದು ನಿಮ್ಮ ಬ್ಯಾಂಕಿನ ವೆಬ್ಸೈಟು ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಒಳ್ಳೆಯದು. ಜೊತೆಗೆ ಸೆಕ್ಯೂರ್ ಎಚ್ ಟಿ ಟಿ ಪಿ (Secure HTTP) ಬಳಸುತ್ತಿರುವುದರ ಕುರಿತು ಬೀಗವೊಂದರ ಚಿಹ್ನೆ (padlock) ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದರರ್ಥ ನೀವು ಟೈಪ್ ಮಾಡಿ ಕಳುಹಿಸುವ ಯೂಸರ್ ಐಡಿ, ಪಾಸ್ವರ್ಡುಗಳು ಗೂಡ ಲಿಪಿಯಲ್ಲಿ ಕಳುಹಿಸಿಕೊಡಲಾಗುತ್ತದೆ. ಅಪರಿಚಿತರಿಂದ ತಬ್ಬಿಬ್ಬಾಗಿಸುವ ಇ-ಮೇಯ್ಲುಗಳು ಬಂದಲ್ಲಿ ಒಂದಷ್ಟು ತಡೆದು ತಿಳಿದವರೊಂದಿಗೆ ವಿಚಾರ ಮಾಡಿ ಉತ್ತರ ನೀಡುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ನಿಮ್ಮ ಬ್ಯಾಂಕ್ ಅಕೌಂಟ್ ಮಾಹಿತಿ ಅಥವ ಕ್ರೆಡಿಟ್ ಕಾರ್ಡ್ ಮಾಹಿತಿ ಅಥವ ಇ-ಮೇಯ್ಲ್ ಅಕೌಂಟಿನ ಪಾಸ್ವರ್ಡ್ ಬೇರೊಬ್ಬರಿಗೆ ತಿಳಿಯಕೂಡದು. ಉಳಿದವರಿಗೆ ಊಹಿಸಲು ಕಷ್ಟವಾಗುವಂಥ ಪಾಸ್ವರ್ಡ್ ಇಟ್ಟುಕೊಳ್ಳುವುದು ಒಳ್ಳೆಯದು. ಸಾಧ್ಯವಾದಷ್ಟೂ ಆಗಾಗ ಇ-ಮೇಯ್ಲ್, ಫೇಸ್ ಬುಕ್ ಹಾಗು ಉಳಿದೆಡೆ ನಿಮ್ಮ ಪಾಸ್ವರ್ಡ್ ಬದಲಿಸುತ್ತಿರುವುದು ಕೂಡ ಒಳ್ಳೆಯದು.
Comments
ಉ: ಎಲ್ಲಿ ನೋಡಿದರಲ್ಲಿ ಸ್ಪಾಮ್
In reply to ಉ: ಎಲ್ಲಿ ನೋಡಿದರಲ್ಲಿ ಸ್ಪಾಮ್ by venkatb83
ಉ: ಎಲ್ಲಿ ನೋಡಿದರಲ್ಲಿ ಸ್ಪಾಮ್
In reply to ಉ: ಎಲ್ಲಿ ನೋಡಿದರಲ್ಲಿ ಸ್ಪಾಮ್ by ಗಣೇಶ
ಉ: ಎಲ್ಲಿ ನೋಡಿದರಲ್ಲಿ ಸ್ಪಾಮ್
ಉ: ಎಲ್ಲಿ ನೋಡಿದರಲ್ಲಿ ಸ್ಪಾಮ್
ಉ: ಎಲ್ಲಿ ನೋಡಿದರಲ್ಲಿ ಸ್ಪಾಮ್
In reply to ಉ: ಎಲ್ಲಿ ನೋಡಿದರಲ್ಲಿ ಸ್ಪಾಮ್ by ramaswamy
ಉ: ಎಲ್ಲಿ ನೋಡಿದರಲ್ಲಿ ಸ್ಪಾಮ್
In reply to ಉ: ಎಲ್ಲಿ ನೋಡಿದರಲ್ಲಿ ಸ್ಪಾಮ್ by ramaswamy
ಉ: ಎಲ್ಲಿ ನೋಡಿದರಲ್ಲಿ ಸ್ಪಾಮ್
ಉ: ಎಲ್ಲಿ ನೋಡಿದರಲ್ಲಿ ಸ್ಪಾಮ್
ಉ: ಎಲ್ಲಿ ನೋಡಿದರಲ್ಲಿ ಸ್ಪಾಮ್
ಉ: ಎಲ್ಲಿ ನೋಡಿದರಲ್ಲಿ ಸ್ಪಾಮ್