ಸತ್ತವರ ರಾಜ್ಯಕ್ಕಾಗಿ ಬದುಕಿದ್ದವರ ಹೋರಾಟ [ಒಂದು ಸ್ಮಶಾನದ ಕಥೆ]

ಸತ್ತವರ ರಾಜ್ಯಕ್ಕಾಗಿ ಬದುಕಿದ್ದವರ ಹೋರಾಟ [ಒಂದು ಸ್ಮಶಾನದ ಕಥೆ]

 

     . . . . . . .ತಾಲ್ಲೂಕಿನ ತಹಸೀಲ್ದಾರನಾಗಿದ್ದ ಸಂದರ್ಭದಲ್ಲಿ ಒಂದು ದಿನ ಪಟ್ಟಣದ ಕ್ರಿಶ್ಚಿಯನ್ ಸಮಾಜದ ಕೆಲವರು ಪಾದ್ರಿಯನ್ನು ಮುಂದಿಟ್ಟುಕೊಂಡು ಕ್ರಿಶ್ಚಿಯನ್ ಸಮುದಾಯದ ಸ್ಮಶಾನಕ್ಕಾಗಿ ಪಟ್ಟಣದ ಹತ್ತಿರವಿದ್ದ ಒಂದು ಸರ್ಕಾರಿ ಜಾಗದಲ್ಲಿ ಸುಮಾರು ಎರಡು ಎಕರೆ ಪ್ರದೇಶವನ್ನು ಮಂಜೂರು ಮಾಡಲು ಮನವಿ ಸಲ್ಲಿಸಿದರು. ನಾನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಅವರಿಗೆ ಭರವಸೆ ಕೊಟ್ಟೆ. ಅವರು ಕೇಳಿದ್ದ ಜಾಗದ ಪರಿಶೀಲನೆಯನ್ನು ಅಂದು ಸಾಯಂಕಾಲವೇ ಯಾರಿಗೂ ಪೂರ್ವ ಸೂಚನೆ ಕೊಡದೆ ಮಾಡಿದೆ. ಅವರು ಕೇಳಿದ್ದ ಜಾಗದಲ್ಲಿ ಸುಮಾರು 2-3 ಗುಂಟೆಯಷ್ಟು ಜಾಗದಲ್ಲಿ ಕೆಲವು ಸಮಾಧಿಗಳಿದ್ದವು, ಎಲ್ಲವೂ ಬಹಳ ಹಳೆಯವು. ಇತ್ತೀಚಿಗೆ ಯಾವುದೇ ಹೆಣಗಳನ್ನು ಹೂಳಿದ ಕುರುಹುಗಳಿರಲಿಲ್ಲ. ಅವರು ಕೇಳಿದ್ದ ಜಾಗದ ಪಕ್ಕದಲ್ಲೇ ಒಂದು ಸರ್ಕಾರಿ ವಿದ್ಯಾರ್ಥಿ ನಿಲಯದ ಕಟ್ಟಡದ ನಿರ್ಮಾಣ ಸಾಗಿತ್ತು. ವಿದ್ಯಾರ್ಥಿ ನಿಲಯದ ಪಕ್ಕದಲ್ಲೇ ಸ್ಮಶಾನಕ್ಕೆ ಜಾಗ ಕೊಡುವುದು ಸೂಕ್ತವಾಗಿರಲಿಲ್ಲ. ನಾನು ಬದಲೀ ಜಾಗವಿದ್ದರೆ ಪರಿಶೀಲಿಸಿ ತಿಳಿಸಲು ನನ್ನ ಅಧೀನ ಸಿಬ್ಬಂದಿಗೆ ಮೌಖಿಕ ಸೂಚನೆ ಕೊಟ್ಟಿದ್ದಲ್ಲದೆ, ಸ್ಮಶಾನದ ವ್ಯವಸ್ಥೆ, ನಿರ್ವಹಣೆ ಹೊಣೆ ಪುರಸಭೆಯದಾದ್ದರಿಂದ ಮುಖ್ಯಾಧಿಕಾರಿಗೂ ಸೂಚನೆ ಕೊಟ್ಟು ವಿಷಯ ತುರ್ತಾಗಿದ್ದು, ಅನಗತ್ಯ ತಿರುವುಗಳನ್ನು ಪಡೆಯುವ ಮೊದಲೇ ಅಂತಿಮಗೊಳಿಸುವುದು ಸೂಕ್ತವೆಂದು ಹೇಳಿ, ಎರಡು ದಿನಗಳ ಒಳಗೇ ಈ ಕೆಲಸವಾಗಬೇಕೆಂದು ಸೂಚಿಸಿದೆ. 

     ಮರುದಿನ ಬೆಳಿಗ್ಗೆ ಹಲವರು ನನ್ನ ಮನೆಗೆ ಬಂದು ಕ್ರಿಶ್ಚಿಯನರು ಎರಡು ಎಕರೆ ಜಾಗದಲ್ಲಿ ಕಲ್ಲುಕಂಬಗಳನ್ನು ರಾತ್ರೋರಾತ್ರಿ ನೆಟ್ಟು, ಮುಳ್ಳು ತಂತಿ ಬೇಲಿ ಹಾಕಿದ್ದಾರೆಂದೂ, ಅದನ್ನು ತೆಗೆಸಬೇಕೆಂದೂ ಆಗ್ರಹಿಸಿದರು.  ಬಹುಷಃ ನಾನು ಸ್ಮಶಾನಕ್ಕೆ ಆ ಜಾಗ ಸೂಕ್ತವಲ್ಲವೆಂದು  ಭಾವಿಸಿ ಬೇರೆ ಜಾಗ ಗುರುತಿಸಲು ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದು ಅವರಿಗೆ ಗೊತ್ತಾಗಿ ಆ ರೀತಿ ಬೇಲಿ ಹಾಕಿದ್ದಿರಬಹುದು. 'ನಾನು ಸರಿಪಡಿಸುತ್ತೇನೆ, ಗಲಾಟೆ ಮಾಡಿಕೊಳ್ಳಲು ಹೋಗಬೇಡಿ' ಎಂದು ದೂರು ಹೇಳಬಂದವರಿಗೆ ಸಮಾಧಾನ ಪಡಿಸಿ ಕಳಿಸಿದೆ. ರಾಜಕೀಯ ಪಕ್ಷಗಳ ಮುಖಂಡರುಗಳಿಂದ, ಸಂಘ-ಸಂಸ್ಥೆಗಳ ನಾಯಕರುಗಳಿಂದ ಪರ, ವಿರೋಧವಾಗಿ ದೂರವಾಣಿ ಕರೆಗಳು ಬರಲಾರಂಭಿಸಿದವು. ಕೆಲವರು ಕಛೇರಿಗೆ ಬಂದು ಮನವಿಯನ್ನೂ ಸಲ್ಲಿಸಿದರು. ಪ್ರತಿಭಟನೆ ಮಾಡುವ ಮಾತುಗಳೂ ಕೇಳಿಬಂದವು.   ಎಲ್ಲರೂ ನಾನು ಏನು ಮಾಡುತ್ತೇನೆಂದು ಗಮನಿಸುತ್ತಿದ್ದರು. ಪತ್ರಕರ್ತರುಗಳ ಪ್ರಶ್ನೆಗಳಿಗೆ ಹುಷಾರಾಗಿ ಪ್ರತಿಕ್ರಿಯಿಸಿದ್ದೆ. ಎಚ್ಚರಿಕೆಯಿಂದ ಮುಂದುವರೆಯದಿದ್ದರೆ ಅಶಾಂತಿ ಮೂಡಿ, ಕಾನೂನು ಮತ್ತು ಶಿಸ್ತುಪಾಲನೆ ಸಮಸ್ಯೆ ಉದ್ಭವಿಸುವುದು ನಿಚ್ಛಳವಾಗಿತ್ತು. 

     ನನ್ನ ವಾಹನದ ಚಾಲಕ ಕ್ರಿಶ್ಚಿಯನ್ ಆಗಿದ್ದರಿಂದ ನನ್ನ ವಾಹನ ಬಳಸದೆ, ಪರಿಚಿತರ ಖಾಸಗಿ ವಾಹನದಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದೆ. ಬಲವಾದ ಮುಳ್ಳು ತಂತಿ ಬೇಲಿಯನ್ನೇ ಹಾಕಿದ್ದರು. ಚರ್ಚ್ ಹೆಸರಿನಲ್ಲಿ ಫಲಕವನ್ನೂ ಬರೆಸಿದ್ದರು. ನಂತರ ಡಿ.ವೈ.ಎಸ್.ಪಿ., ಲೋಕೋಪಯೋಗಿ ಇಲಾಖೆ, ಪುರಸಭೆಯ ಅಧಿಕಾರಿಗಳೊಡನೆ ಪ್ರವಾಸಿ ಮಂದಿರದಲ್ಲಿ ರಹಸ್ಯ ಸಭೆ ನಡೆಸಿದೆ. ಅಧೀನ ಸಿಬ್ಬಂದಿಗಳನ್ನು ಸಭೆಯಲ್ಲಿ ಸೇರಿಸಿರಲಿಲ್ಲ. ವಿಳಂಬವನ್ನೂ ಮಾಡುವಂತಿಲ್ಲ, ದುಡುಕಿಯೂ ಮುಂದುವರೆಯುವಂತಿಲ್ಲ. ನಿಯಮಾನುಸಾರ ಬೇಲಿ ತೆರವು ಮಾಡುವುದೆಂದರೆ ಅವರಿಗೆ ನೋಟೀಸು ಕೊಡಬೇಕು, ವಿವರಣೆ ಕೇಳಬೇಕು, ಆದೇಶ ಮಾಡಿ ತೆರವುಗೊಳಿಸಬೇಕು. ನೋಟೀಸು ತಲುಪಿದ ತಕ್ಷಣ ನ್ಯಾಯಾಲಯದಿಂದ ತಡೆಯಾಜ್ಞೆ ತರುವುದೋ, ಪ್ರಕರಣ ದಾಖಲಿಸುವುದೋ ಮಾಡುತ್ತಾರೆ. ಪ್ರಕರಣ ನ್ಯಾಯಾಲಯಕ್ಕೆ ಹೋಯಿತೆಂದರೆ ಶೀಘ್ರ ಇತ್ಯರ್ಥ ಕಷ್ಟ. ಇನ್ನು ಹೊರಗೆ ಎರಡು ಬಣಗಳ ಜಟಾಪಟಿ, ಮಧ್ಯದಲ್ಲಿ ಅಧಿಕಾರಿಗಳು ಜನರ ಹಾಗೂ ಮೇಲಾಧಿಕಾರಿಗಳ ದೂಷಣೆಗೆ ಒಳಗಾಗುವರು. ಇದನ್ನೆಲ್ಲಾ ಯೋಚಿಸಿ, ಹೇಗೂ ಬೇಲಿಯನ್ನು ಅಕ್ರಮವಾಗಿ ಹಾಕಿದ್ದಾರೆ, ಜಾಗದ ಮೇಲೆ ಅವರಿಗೆ ಅಧಿಕಾರವಿಲ್ಲ. ಅವರು ಹೇಗೆ ಗುಟ್ಟಾಗಿ ಹಾಕಿದ್ದರೋ ಹಾಗೆಯೇ ಅದನ್ನು ಗುಟ್ಟಾಗಿ ತೆಗೆಸಿದರೆ ಸೂಕ್ತವೆಂದು ಪೋಲಿಸರಿಗೆ ಮತ್ತು ಸಹ ಇಲಾಖಾ ಅಧಿಕಾರಿಗಳಿಗೆ ಮನವರಿಕೆ ಮಾಡಿದೆ. ಜಿಲ್ಲಾಧಿಕಾರಿಯವರಿಗೆ ಮತ್ತು ಅಸಿಸ್ಟೆಂಟ್ ಕಮಿಷನರರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ ಅವರ ಒಪ್ಪಿಗೆಯನ್ನೂ ಸಹ ಪಡೆದೆ. ಅದರಂತೆ ಲೋಕೋಪಯೋಗಿ ಇಲಾಖೆಯ ವಾಹನಗಳ ನೆರವಿನಿಂದ ಅಂದು ಮಧ್ಯರಾತ್ರಿ 12 ಘಂಟೆಗೆ ಬೇಲಿ ತೆಗೆಸಿ ಮುಳ್ಳುತಂತಿಯನ್ನು ಲಾರಿಯಲ್ಲಿ ಸಾಗಿಸಿ ಒಂದು ಅಜ್ಞಾತ ಸ್ಥಳದಲ್ಲಿ ಇರಿಸಲಾಯಿತು. ಬೆಳಗಿನ ಜಾವ 2ರ ವೇಳೆಗೆ ಕೆಲಸ ಮುಗಿಸಿ ಏನೂ ಗೊತ್ತಿಲ್ಲದಂತೆ ಮನೆಗಳಿಗೆ ಮರಳಿದೆವು. 

     ಮರುದಿನ ಬೆಳಿಗ್ಗೆ ಕಛೇರಿಗೆ ಹೋಗುತ್ತಾ ದಾರಿಯಲ್ಲಿ ಪೋಲಿಸ್ ಠಾಣೆ ಮುಂದೆ ಜನ ಜಮಾಯಿಸಿದ್ದನ್ನು ಗಮನಿಸಿದೆ. ಕಾರಣ ತಿಳಿದಿದ್ದರೂ ಏನೂ ಗೊತ್ತಿಲ್ಲದವನಂತೆ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ನನ್ನ ವಾಹನ ಚಾಲಕ ಸ್ಮಶಾನದ ಬೇಲಿಯನ್ನು ಯಾರೋ ತೆಗೆದು ಹಾಕಿದ್ದಾರೆಂದು ಹೇಳಿದ. ಆ ಬಗ್ಗೆ ನಾನು ಏನು ಹೇಳುತ್ತೇನೆಂದು ತಿಳಿದುಕೊಳ್ಳುವುದು ಅವನ ಉದ್ದೇಶವಾಗಿದ್ದಿರಬೇಕು.  ನಾನು, "ಹೌದಾ? ಯಾರಂತೆ?" ಎಂದು ಕೇಳಿದ್ದಲ್ಲದೆ ಉಪಾಯವಾಗಿ ವಿಷಯ ತಿಳಿದುಕೊಂಡು ನನಗೂ ತಿಳಿಸುವಂತೆ ಅವನಿಗೇ  ಹೇಳಿದೆ. ನಿರೀಕ್ಷೆಯಂತೆ ಅರ್ಧ ಘಂಟೆಯ ನಂತರದಲ್ಲಿ ಗುಂಪು ನನ್ನ ಕಛೇರಿಗೆ ಬಂದೇ ಬಂದಿತು. ಕೆಲವರನ್ನು ಮಾತ್ರ ಛೇಂಬರಿಗೆ ಬರಮಾಡಿಕೊಂಡೆ. ಉದ್ವಿಗ್ನರಾಗಿದ್ದ ಪಾದ್ರಿ ಬುಸುಗರೆಯುತ್ತಿದ್ದರು. ಒಂದು ಲೋಟ ನೀರು ತರಿಸಿಕೊಟ್ಟು, ಸಮಾಧಾನದಿಂದ ವಿಷಯ ಹೇಳುವಂತೆ ಕೋರಿದೆ. ಆಗ ನಡೆದ ಸಂಭಾಷಣೆ:

ಪಾದ್ರಿ:  ನಮ್ಮ ಸ್ಮಶಾನದ ಬೇಲಿಯನ್ನು ಯಾರೋ ಕಿತ್ತುಹಾಕಿದ್ದಾರೆ. ನಮಗೆ ನ್ಯಾಯ ಬೇಕು.

ನಾನು:  ಸ್ಮಶಾನಕ್ಕೆ ಜಾಗ ಕೇಳಿ ಅರ್ಜಿ ಹಾಕಿದ್ದಿರಲ್ಲವೆ? ಅಂದೇ ಸಾಯಂಕಾಲ ನಾನು ಆ ಜಾಗ ನೋಡಿದ್ದೆ. ಅಲ್ಲಿ ಬೇಲಿ ಏನೂ ಇರಲಿಲ್ಲವಲ್ಲಾ?

ಪಾದ್ರಿ:  ಹೇಗೂ ಮಂಜೂರು ಆಗುತ್ತದೆ ಅಂತ ಅಲ್ಲಿ ಬೇಲಿ ಹಾಕಿದ್ದೆವು. ಅದನ್ನು ತೆಗೆದು ಹಾಕಿದ್ದಾರೆ.

ನಾನು:  ಹೌದಾ? ಯಾರು?

ಪಾದ್ರಿ:  ನಿಮಗೆ ಗೊತ್ತಿಲ್ಲದೆ ಇರುತ್ತಾ? ನೀವುಗಳೇ ಮಾಡಿಸಿರುತ್ತೀರಿ.

ನಾನು:  ನನಗೆ ನೀವು ಬೇಲಿ ಹಾಕಿದ್ದೇ ಗೊತ್ತಿಲ್ಲ. ಗೊತ್ತಾಗಿದ್ದರೂ ನಾನೇ ಮುಂದೆ ನಿಂತು ತೆಗೆಸುತ್ತಿದ್ದೆ. ನಿಮ್ಮದಲ್ಲದ ಜಾಗಕ್ಕೆ ನೀವು ಬೇಲಿ ಹಾಕುವುದು ಸರಿಯಾ?

ಪಾದ್ರಿ:  ನೋಡಿ, ನಮ್ಮ ಜನ ಎಲ್ಲಾ ಬಡವರು. ಅವರಿಗೆ ಸ್ಮಶಾನಕ್ಕೆ ಜಾಗ ಇಲ್ಲ. ಮನೆ ಮನೆಯಲ್ಲೂ ಚಂದಾ ಎತ್ತಿ ಹಣ ಕೂಡಿಸಿ ಬೇಲಿ ಹಾಕಿಸಿತ್ತು. ಬೇಲಿಗೆ ಹಾಕಿದ್ದ ಮುಳ್ಳುತಂತಿಯನ್ನೂ ಹೊತ್ತುಕೊಂಡು ಹೋಗಿದ್ದಾರೆ. 

ನಾನು:  ನಿಮಗೆ ಸ್ಮಶಾನಕ್ಕೆ ಜಾಗ ಬೇಕು ತಾನೆ? ಒಳ್ಳೆಯ ಜಾಗ ನೋಡಿ ಮಂಜೂರು ಮಾಡಿಸಿಕೊಡುವ ಜವಾಬ್ದಾರಿ ನನ್ನದು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮಾಡಿಸಿಕೊಡುತ್ತೇನೆ. ಈಗ ಸಮಾಧಾನವಾಗಿ ಎಲ್ಲರೂ ಹೋಗಿ. ನಾನು ಮತ್ತೆ ನಿಮ್ಮ ಹತ್ತಿರ ಮಾತನಾಡುತ್ತೇನೆ. 

ಪಾದ್ರಿ:  ತಾವು ದಯವಿಟ್ಟು ಸಬ್ ಇನ್ಸ್‌ಪೆಕ್ಟರರಿಗೆ ಹೇಳಿ ಬೇಲಿ ಕಿತ್ತು ಹಾಕಿದ್ದಕ್ಕೆ ಕೇಸು ಹಾಕಲು ಹೇಳಬೇಕು.

ನಾನು:  ನೋಡಿ, ಪೋಲಿಸರ ಕೆಲಸದಲ್ಲಿ ನಾನು ಮೂಗು ತೂರಿಸುವುದು ಸಾಧ್ಯವಿಲ್ಲ. ನೀವೇ ಹೋಗಿ ಕೇಳಿಕೊಳ್ಳಿ.

ಪಾದ್ರಿ:  ಇಷ್ಟು ಹೊತ್ತೂ ಅದೇ ಕೆಲಸ ಮಾಡಿದೆವು. ಅವರು ದೂರನ್ನೇ ತೆಗೆದುಕೊಳ್ಳುತ್ತಿಲ್ಲ. ನೀವು ಒಂದು ಮಾತು ಹೇಳಿ.

ನಾನು:  ಯಾಕೆ ತೆಗೆದುಕೊಳ್ಳುತ್ತಿಲ್ಲ?

ಪಾದ್ರಿ:  ಆ ಜಾಗ ನಿಮ್ಮದಾ ಅಂತ ಕೇಳುತ್ತಾರೆ. ಜಾಗದ ದಾಖಲೆ ಕೊಡಿ ಅಂತಾರೆ. ನಿಮ್ಮ ಜಾಗದಲ್ಲಿ ಬೇಲಿ ಹಾಕಿದ್ದು ಯಾರಾದರೂ ಕಿತ್ತಿದ್ದರೆ, ಯಾರ ಮೇಲಾದರೂ ಅನುಮಾನವಿದ್ದರೆ ದೂರು ಕೊಟ್ಟರೆ ತೆಗೆದುಕೊಳ್ಳುತ್ತೇವೆ ಅನ್ನುತ್ತಾರೆ.

ನಾನು:  ಅವರು ಹೇಳಿದ್ದರಲ್ಲಿ ತಪ್ಪಿದೆಯಾ? ಸರ್ಕಾರಿ ಜಾಗದಲ್ಲಿ ನೀವು ಹಾಕಿದ್ದ ಬೇಲಿ ಬಗ್ಗೆ ನಾನು ಅವರಿಗೆ ದೂರು ತೆಗೆದುಕೊಳ್ಳಿ ಎಂದು ಹೇಗೆ ಹೇಳಲಿ? ನಾವು ಮಾಡಬೇಕಿದ್ದ ಕೆಲಸವನ್ನು ಬೇರೆ ಯಾರೋ ಮಾಡಿದ್ದಾರೆ. ನಮ್ಮ ಶ್ರಮ ತಪ್ಪಿತು. ಮೊದಲು ನೀವು ನಿಮ್ಮದಲ್ಲದ ಜಾಗದಲ್ಲಿ ಬೇಲಿ ಹಾಕಿದ್ದೇ ತಪ್ಪು. ಈಗ ಸದ್ಯಕ್ಕೆ ನಿಮಗೆ ಈ ಬೇಲಿ ಸಮಸ್ಯೆಗೆ ಪರಿಹಾರ ಸಿಗುವುದು ಕಷ್ಟ. ಸ್ಮಶಾನಕ್ಕೆ ಜಾಗ ಮಂಜೂರು ಮಾಡಿಸಿಕೊಳ್ಳುವ ಬಗ್ಗೆ ಗಮನ ಕೊಡೋಣ.

ಪಾದ್ರಿ:  ನಮಗೆ ಆ ಜಾಗವೇ ಬೇಕು. ನಾವು ಜನ ಸೇರಿಸಿ ಪ್ರತಿಭಟನೆ ಮಾಡುತ್ತೇವೆ. ಅಲ್ಲಿ ನಮ್ಮವರ ಸಮಾಧಿಗಳಿವೆ. 

ನಾನು:  ನೋಡಿ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಎಲ್ಲಾ ಸಂಗತಿಗಳನ್ನು ಗಮನಿಸಿಯೇ ಆ ಜಾಗವೋ, ಮತ್ತಾವ ಜಾಗವೋ ಸೂಕ್ತ ಸ್ಥಳ ಕೊಡಿಸುವ ಜವಾಬ್ದಾರಿ ನನ್ನದು. ಅಲ್ಲಿ ಸುಮಾರು 2-3 ಗುಂಟೆ ಜಾಗದಲ್ಲಿ ಮಾತ್ರ ಸಮಾಧಿಗಳಿವೆ. ನೀವು ಬೇಲಿ ಹಾಕಿದ್ದು ಅನ್ನುವುದು ಎರಡು ಎಕರೆ ಜಾಗಕ್ಕೆ. ಅಲ್ಲಿರುವ ಸಮಾಧಿಗಳಿಗೆ ಯಾವ ತೊಂದರೆಯೂ ಆಗದಂತೆ ರಕ್ಷಣೆ ಕೊಡುವುದು ನಮ್ಮ ಹೊಣೆ. ಅದನ್ನು ನಮಗೆ ಬಿಡಿ. ಇನ್ನು ಪ್ರತಿಭಟನೆ ಮಾತು. ನಿಮ್ಮ ವಿರುದ್ಧವೂ ಪ್ರತಿಭಟನೆ ಮಾಡಲು ಜನ ಕಾಯುತ್ತಿದ್ದಾರೆ. ಈ ವಿಷಯ ನನಗೆ ಮಾಹಿತಿ ಬಂದಿದೆ. ಬಹುಷಃ ನಿಮಗೂ ಗೊತ್ತಿರಬೇಕು. ನಾನು ಇಬ್ಬರ ಬಗ್ಗೆಯೂ ಒಂದೇ ರೀತಿ ವ್ಯವಹರಿಸುವೆ. ಶಾಂತಿ ಭಂಗ ಆಗುವ ಸಂಧರ್ಭ ಬಂದರೆ ನಾನು ಮುಲಾಜು ನೋಡುವುದಿಲ್ಲ. ಶಾಂತಿಯಿಂದಿರಿ. ಮುಂದೆ ಏನು ಕೆಲಸ ಆಗಬೇಕೋ ಅದನ್ನು ನೋಡೋಣ. ನೀವು ಇಂದು ಸಂಜೆಯೋ, ನಾಳೆ ಬೆಳಿಗ್ಗೆಯೋ ಒಬ್ಬರೇ ಬನ್ನಿ, ಮಾತನಾಡೋಣ. ಈಗ ನನಗೆ ಬೇರೆ ತುರ್ತು ಕೆಲಸ ಇದೆ. ಮಾಡಲು ಅವಕಾಶ ಕೊಡಿ.

     ಬಂದವರಿಗೆ ತಮ್ಮ ಕೆಲಸವಾಗುವುದಿಲ್ಲವೆಂದು ಮನದಟ್ಟಾಯಿತು. ಅಲ್ಲದೆ ತಮ್ಮ ಬೇಡಿಕೆಯನ್ನು ಸಮರ್ಥಿಸಿಕೊಳ್ಳುವುದೂ ಕಷ್ಟವೆಂಬ ಅರಿವೂ ಆಗಿತ್ತು. 'ನೀವೇ ನ್ಯಾಯ ಕೊಡಿಸಬೇಕು' ಎಂದು ಹೇಳಿ ಜಾಗ ಖಾಲಿ ಮಾಡಿದರು. ಬೀಸುವ ದೊಣ್ಣೆ ತಪ್ಪಿಸಿಕೊಂಡ ಸ್ಥಿತಿ ನನ್ನದಾಗಿತ್ತು. 

     ನಂತರದಲ್ಲಿ, ನಾನು, ಪುರಸಭೆಯ ಮುಖ್ಯಾಧಿಕಾರಿ ಹಾಗೂ ನನ್ನ ಸಿಬ್ಬಂದಿ ಮುತುವರ್ಜಿ ವಹಿಸಿ ಪಟ್ಟಣದ ಹೆಲಿಪ್ಯಾಡ್ ಸಮೀಪದಲ್ಲಿ ಒಂದು ಎಕರೆ ಜಾಗವನ್ನು ಗುರುತಿಸಿ, ಆ ಜಾಗದ ಕುರಿತು ಇದ್ದ ಸಣ್ಣ ಪುಟ್ಟ ಸಮಸ್ಯೆ ಪರಿಹರಿಸಿ, ಆ ಜಾಗವನ್ನು ಕ್ರಿಶ್ಚಿಯನ್ ಸ್ಮಶಾನಕ್ಕೆ ಮಂಜೂರು ಮಾಡಲು ಪ್ರಸ್ತಾವನೆ ಸಿದ್ಧಪಡಿಸಿ, ಪಾದ್ರಿಗೂ ಆ ಜಾಗ ತೋರಿಸಿ ಅವರಿಂದಲೂ ಒಪ್ಪಿಗೆ ಪತ್ರ ಬರೆಸಿಕೊಂಡು ಉಪವಿಭಾಗಾಧಿಕಾರಿಯವರಿಗೆ ಕಳಿಸಿ ಮಂಜೂರಾತಿ ಪಡೆದದ್ದಾಯಿತು. ಸ್ವಲ್ಪ ಎಚ್ಚರಿಕೆಯಿಂದ ಕಾರ್ಯ ಮಾಡದೇ ಇದ್ದಿದ್ದರೆ, ಸಮಸ್ಯೆ ಉಲ್ಬಣವಾಗುತ್ತಿತ್ತೇ ಹೊರತು, ಇತ್ಯರ್ಥವಾಗುತ್ತಿರಲಿಲ್ಲ. ಜನಾಂಗೀಯ ಘರ್ಷಣೆಗಳಾಗುತ್ತಿದ್ದವು, ರಾಜಕಾರಣಿಗಳ ಬೇಳೆ ಚೆನ್ನಾಗಿ ಬೇಯುತ್ತಿತ್ತು, ಅಧಿಕಾರಿಗಳು ಬಲಿಪಶುಗಳಾಗುತ್ತಿದ್ದರು. ಅದನ್ನು ತಪ್ಪಿಸಿದ ಸಮಾಧಾನ ನನ್ನದಾಗಿತ್ತು. 

 
 

Comments