ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ ೩(೧) - ಪ್ರಜ್ವಲಿತ ಮನಸ್ಸುಗಳು

ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ ೩(೧) - ಪ್ರಜ್ವಲಿತ ಮನಸ್ಸುಗಳು

ಪುಸ್ತಕದ ಸಾರಾಂಶ – ಪ್ರಜ್ವಲಿತ ಮನಸ್ಸುಗಳು (Ignited Minds)
ಮನುಷ್ಯ ಬಹುತೇಕ ತಾನು ಏನಾಗಿರುವೆನೆಂದು ನಂಬುತ್ತಾನೆಯೋ ಅದೇ ಆಗುತ್ತಾನೆ. ಒಂದು ವೇಳೆ ನನ್ನಿಂದ ಏನೂ ಮಾಡಲಾಗುವುದಿಲ್ಲ ಎಂದು ನಂಬಿದರೆ ನಾನು ಏನು ಮಾಡಲಿಕ್ಕೂ ಸಾಧ್ಯವಾಗುವುದಿಲ್ಲ. ಒಂದು ವೇಳೆ ನಾನು ಮಾಡಬಲ್ಲೆನೆಂಬ ನಂಬಿಕೆಯಿದ್ದರೆ, ಅದನ್ನು ಮಾಡಲು ಬೇಕಾದ ಸಾಮರ್ಥ್ಯವು ನನಗೆ ಬರುತ್ತದೆ; ಒಂದು ವೇಳೆ ಈ ಮುಂಚೆ ನನಗೆ ಆ ಕೆಲಸ ಮಾಡಲು ಸಾಮರ್ಥ್ಯವಿಲ್ಲದಿದ್ದರೂ ಕೂಡಾ”    - ಮಹಾತ್ಮ ಗಾಂಧಿ
*******
ನಾನೇಕೆ  ಉದ್ದೇಶ ಪೂರ್ವಕವಾಗಿ ಕಿರಿಯ ವಿದ್ಯಾರ್ಥಿಗಳನ್ನು ಭೇಟಿಯಾಗಬೇಕು? ಇದಕ್ಕೆ ಉತ್ತರವನ್ನು ಕಂಡುಕೊಳ್ಳುತ್ತಾ ನಾನು ನನ್ನ ವಿದ್ಯಾಭ್ಯಾಸದ ದಿನಗಳಿಗೆ ಹಿಂದಿರುಗಿದೆ. ರಾಮೇಶ್ವರದ ಒಂದು ದ್ವೀಪದಿಂದ ಮೊದಲಾದ ಎಷ್ಟು ದೊಡ್ಡ ಪ್ರಯಾಣ ನನ್ನದು. ಹಿಂತಿರುಗಿ ನೋಡಿದರೆ ಅದೆಲ್ಲಾ ನಂಬಲಸಾಧ್ಯವೆನಿಸುತ್ತದೆ!
 
          ಯಾವುದದು, ಅದನ್ನು ಸಾಧ್ಯಗೊಳಿಸಿದ್ದು? ಶ್ರಮದ ದುಡಿಮೆಯೆ? ಮಹತ್ವಾಕಾಂಕ್ಷೆಯೇ? ಹಲವಾರು ವಿಷಯಗಳು ನನ್ನ ಮನಃಪಟಲದ ಮೇಲೆ ಮೂಡುತ್ತವೆ. ನನಗೆ ಅನ್ನಿಸಿದ ಹಾಗೆ ಬಹು ಮುಖ್ಯವಾದ ವಿಷಯವೆಂದರೆ, ನಾನು ಯಾವಾಗಲೂ ನನ್ನ ಯೋಗ್ಯತೆಯನ್ನು ಅಳೆದುಕೊಂಡದ್ದು ನನ್ನ ಕೊಡುಗೆಯ ಪ್ರಮಾಣದಿಂದ. ಎಲ್ಲರೂ ಜೀವನದಲ್ಲಿ ಮೂಲಭೂತವಾಗಿ ತಿಳಿದುಕೊಳ್ಳಬೇಕಾದ ವಿಷಯವೆಂದರೆ, ಭಗವಂತನು ಕೊಡಮಾಡಿರುವ ಒಳ್ಳೆಯ ವಸ್ತುಗಳನ್ನು ಹೊಂದಲು ನೀವು ಯೋಗ್ಯರಾಗಿರುವಿರೆಂದು. ನಮ್ಮ ವಿದ್ಯಾರ್ಥಿಗಳು ಮತ್ತು ಯುವ ಪೀಳಿಗೆಯು ತಾವು ಅಭಿವೃದ್ಧಿ ಹೊಂದಿದ ಭಾರತದ ನಾಗರೀಕರಾಗಿರುವುದಕ್ಕೆ ಯೋಗ್ಯರೆಂದು ಭಾವಿಸದಿದ್ದರೆ, ಅವರು ಹೇಗೆ ತಾನೇ ಜವಾಬ್ದಾರಿಯುತ ಮತ್ತು ಸಾಮಾಜಿಕ ಪ್ರಜ್ಞೆಯುಳ್ಳ ನಾಗರೀಕರಾಗುತ್ತಾರೆ?
 
          ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅಧಿಕವಾಗಿದೆ ಎನ್ನುವ ಯಾವುದೇ ರಹಸ್ಯ ವಸ್ತುವಿಲ್ಲ. ಈ G8 ಎಂದು ಕರೆಯಲ್ಪಡುವ ಅಭಿವೃದ್ಧಿ ಹೊಂದಿದ ದೇಶಗಳೆಂದು ಕರೆಯಲ್ಪಡುವ ಆ ದೇಶದ ನಾಗರೀಕರು ಹಲವಾರು ತಲೆಮಾರುಗಳಿಂದ ತಾವು ಬಲಶಾಲಿಯಾದ ಮತ್ತು ಸಂಪದ್ಭರಿತ ದೇಶದಲ್ಲಿ ಒಳ್ಳೆಯ ಜೀವನ ಮಾಡಬೇಕೆಂಬ ಆಶಯವುಳ್ಳವರಾಗಿದ್ದರಷ್ಟೇ!  ಈ ವಾಸ್ತವತೆ ಅವರ ಆಶಯಗಳಿಗೆ ಜೊತೆಯಾಯಿತು.
 
          ’ಅಧಿಕ’ತೆ ಮತ್ತು ಆಧ್ಯಾತ್ಮ ಒಂದಕ್ಕೊಂದು ಹೊರತಾಗಿರಬೇಕೆಂದು ನಾನು ಭಾವಿಸುವುದಿಲ್ಲ ಅಥವಾ ಭೌತಿಕ ವಸ್ತುಗಳನ್ನು ಹೊಂದುವ ಆಸೆಯನ್ನು ತಪ್ಪೆಂದು ಪ್ರತಿಪಾದಿಸುವುದಿಲ್ಲ. ಉದಾಹರಣೆಗೆ, ಯಾವಾಗ ನನ್ನ ಬಳಿ ಕನಿಷ್ಟವಾದ ಸೌಲಭ್ಯಗಳಿರುತ್ತವೆಯೋ, ಆಗ ನಾನು ಅಧಿಕವೆನ್ನುವುದನ್ನು ಅಭಿಮಾನಿಸುತ್ತೇನೆ, ಏಕೆಂದರೆ ಅದು ನನಗೆ ಸುರಕ್ಷಿತತೆಯ ಭಾವನೆಯನ್ನು ಉಂಟು ಮಾಡುವುದಲ್ಲದೆ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡುತ್ತದೆ. ಪ್ರಕೃತಿಯೂ ಕೂಡಾ ಯಾವುದನ್ನೂ ಕೂಡಾ ಅರ್ಧಕ್ಕರ್ಧ ಮಾಡುವುದಿಲ್ಲ, ನಿಮ್ಮ ಸುತ್ತಮುತ್ತಲಿರುವುದನ್ನು ಗಮನಿಸಿದರೆ ಇದು ನಿಮಗೆ ತಿಳಿಯುತ್ತದೆ. ಒಂದು ಹೂದೋಟಕ್ಕೆ ಭೇಟಿ ಕೊಡಿ, ಅದು ಸುಗ್ಗಿಯಲ್ಲಿ ಅತ್ಯಧಿಕ ಹೂವುಗಳನ್ನು ಬಿಡುತ್ತದೆ. ಅಥವಾ ಮೇಲೆ ನೋಡಿ, ಈ ವಿಶ್ವವು ಅನಂತತೆಯೆಡೆಗೆ ನಮ್ಮ ಕಲ್ಪನೆಗೆ ಮೀರಿ ಚಾಚಿಕೊಳ್ಳುತ್ತಾ ಹೋಗುತ್ತದೆ.
 
          ನಾವು ಪ್ರಪಂಚದಲ್ಲಿ ಕಾಣುವುದೆಲ್ಲಾ ಶಕ್ತಿಯ ರೂಪಾಂತರಗಳೇ. ಶ್ರೀ ಅರವಿಂದರು ಹೇಳಿದಂತೆ, ನಾವೂ ಕೂಡಾ ಈ ವಿಶ್ವದ ಶಕ್ತಿಯ ಭಾಗಗಳೇ. ಆದ್ದರಿಂದ ಯಾವಾಗ ನಾವು ಶಕ್ತಿ ಮತ್ತು ಭೌತಿಕ ವಸ್ತುಗಳೆರಡೂ ಸೃಷ್ಟಿಯ ಭಾಗಗಳೆಂದು ಮತ್ತು ಅವೆರಡೂ ಒಂದಕ್ಕೊಂದು ಪೂರಕವೆನ್ನುವುದನ್ನು ಮನಗಾಣುತ್ತೇವೆಯೋ, ಆಗ ಒಂದು ರೀತಿಯಾದ ನಾಚಿಕೆ ಅಥವಾ ಭೌತಿಕ ವಸ್ತುಗಳಿಗೆ ಆಸೆ ಪಡುವುದು ಆಧ್ಯಾತ್ಮಿಕತೆಯಿಂದ ದೂರ ಸರಿದಂತೆ ಎನ್ನುವ ಭಾವನೆಯೇ ತಪ್ಪು ಎಂದು ತಿಳಿಯುತ್ತದೆ.
 
          ವಿಪರ್ಯಾಸವೆಂದರೆ ಇದೇ ಸರಿಯೆಂದು ನಮ್ಮನ್ನು ನಂಬಿಸಲಾಗುತ್ತದೆ. ಖಂಡಿತವಾಗಿಯೂ ಕನಿಷ್ಠ ಆವಶ್ಯಕತೆಗಳೊಂದಿಗೆ ಋಷಿ ಮುನಿಗಳಂತೆ ಜೀವನ ನಡೆಸಬೇಕು ಎನ್ನುವ ವಿಷಯವೇನೂ ತಪ್ಪಲ್ಲ. ಮಹಾತ್ಮ ಗಾಂಧಿಯವರು ಇಂತಹ ಜೀವನವನ್ನು ನಡೆಸಿದರು, ಅವರ ವಿಷಯದಲ್ಲಿ ಆದಂತೆ ನಿಮ್ಮ ವಿಷಯದಲ್ಲಿಯೂ ಕೂಡಾ ಇದು ಸ್ವ-ಇಚ್ಛೆಯಿಂದ ಆಯ್ದುಕೊಂಡದ್ದಾಗಿರಬೇಕು. ಈ ರೀತಿಯ ಜೀವನವನ್ನು ನೀವು ಏಕೆ ನಡೆಸುತ್ತೀರೆನ್ನುವುದಕ್ಕೆ ಅದು ನಿಮ್ಮ ಮನಸ್ಸಿನ ಅಂತರಾಳದಿಂದ ಹೊರಟ ಬೇಡಿಕೆಯಾಗಿರಬೇಕು. ಆದರೆ ತ್ಯಾಗದ ಹೆಸರು ಹೇಳಿಕೊಂಡು ಯಾವುದೋ ವಸ್ತುವು ನಿಮ್ಮ ಮೇಲೆ ಹೇರಲ್ಪಟ್ಟು, ಒಟ್ಟಾರೆಯಾಗಿ ಅದು ಯಾತನೆಯ ವೈಭವೀಕರಣವಾಗಿರ ಬಾರದು ಎನ್ನುವುದು ಬೇರೆ ವಿಷಯ. ನಾನು ಎಳೆಯರನ್ನು ಭೇಟಿಯಾಗ ಬೇಕೆನ್ನುವುದರ ಹಿನ್ನಲೆ ಇದಾಗಿತ್ತು. ಅವರ ಕನಸುಗಳನ್ನು ತಿಳಿದುಕೊಂಡು, ಅವರಿಗೆ ಒಳ್ಳೆಯ ಜೀವನವನ್ನು ನಡೆಸಲು ಬಯಸುವುದು ತಪ್ಪಲ್ಲ, ಅಧಿಕವಾಗಿರುವ ಜೀವಿತವನ್ನು ಬಯಸುವುದು ತಪ್ಪಲ್ಲ, ಜೀವನದಲ್ಲಿ ಎಲ್ಲಾ ರೀತಿಯ ಅನುಕೂಲತೆಗಳು ಮತ್ತು ಆನಂದವನ್ನು ಹೊಂದುವ ಆ ಬಂಗಾರದ ಬದುಕಿಗಾಗಿ ಶ್ರಮಿಸುವುದು ತಪ್ಪಲ್ಲ ಎಂದು ಹೇಳುವುದು ನನ್ನ ಉದ್ದೇಶ. ನೀವು ಏನೇ ಮಾಡಿದರೂ ಅದನ್ನು ಹೃದಯದಿಂದ ಮಾಡಬೇಕು, ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ ಮತ್ತು ಅದರಿಂದ ನೀವು ಪ್ರೀತಿ ಮತ್ತು ಸಂತೋಷಗಳನ್ನೂ ಹರಡಿ.
 
          ಈ ರೀತಿಯ ನನ್ನ ಮೊದಲ ಸಭೆ ತ್ರಿಪುರಾದ ಒಂದು ಹೈಸ್ಕೂಲಿನಲ್ಲಿ ನಡೆಯಿತು. ಅದು ಸುಮಾರು ೫೦೦ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಒಂದು ಸಮಾವೇಶವಾಗಿತ್ತು. ರೂಪಾಂತರ ಗೊಂಡ ಭಾರತದ ಲಕ್ಷ್ಯದ ಬಗ್ಗೆ ನನ್ನ ಎರಡನೇ ಭಾಷಣವನ್ನು ಮುಗಿಸಿದ ನಂತರ ಸಭಿಕರಿಂದ ಸಾಲು ಸಾಲು ಪ್ರಶ್ನೆಗಳು ಹೊರಹೊಮ್ಮಿದವು, ಅವರೆಡರಲ್ಲಿ ಎರಡನ್ನು ನಾನು ಚರ್ಚಿಸಲು ಬಯಸುತ್ತೇನೆ. ಮೊದಲನೇ ಪ್ರಶ್ನೆ ಹೀಗಿತ್ತು:
೧) ನಮಗೆ ಮಾದರಿ ವ್ಯಕ್ತಿತ್ವವು ಎಲ್ಲಿ ಸಿಗುತ್ತದೆ, ನಾವು ಆ ಮಾದರಿ ವ್ಯಕ್ತಿತ್ವವನ್ನು ಹೇಗೆ ಪಡೆಯ ಬೇಕು?
 
ನಮಗೆ ಗೊತ್ತಿದೆಯೋ ಇಲ್ಲವೋ ನಮ್ಮ ಬಾಲ್ಯದಿಂದ ಹಿಡಿದು ಜೀವನದ ವಿವಿಧ ಸ್ತರಗಳಲ್ಲಿ ನಾವು ಮಾದರಿ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳುತ್ತಿರುತ್ತೇವೆ. ನೀವು ಬೆಳೆಯುತ್ತಿರುವಾಗ ಅಂದರೆ ಹದಿನೈದು ವರ್ಷಗಳವರೆಗೆ ಅಂದುಕೊಳ್ಳಿ, ನಿಮ್ಮ ಆದರ್ಶ ವ್ಯಕ್ತಿಯೆಂದರೆ ನಿಮ್ಮ ತಂದೆ, ನಿಮ್ಮ ತಾಯಿ ಮತ್ತು ನಿಮ್ಮ ಶಾಲಾ ಶಿಕ್ಷಕರು. ನನಗೆ ತಿಳಿದ ಹಾಗೆ ಈ ಕಾಲಾವಧಿಯಲ್ಲಿ ನಿಮಗೆ ಸೂಕ್ತವಾದ ಮಾರ್ಗದರ್ಶನ ಮಾಡಬಲ್ಲವರೆಂದರೆ ಅವರೇ. ನಾನು ಅಲ್ಲಿ ನೆರೆದಿದ್ದ ಶಿಕ್ಷಕರು ಮತ್ತು ಪೋಷಕರನ್ನು ನೋಡಿ ಅವರಿಗೆ ಎಷ್ಟು ಮಹತ್ತರವಾದ ಜವಾಬ್ದಾರಿಯಿದೆ ಎನ್ನುವುದನ್ನು ತಿಳಿಸಿದೆ. ನನ್ನ ದೃಢ ನಂಬಿಕೆ ಏನೆಂದರೆ ಮಕ್ಕಳ ಮೌಲ್ಯಾಧಾರಿತ ಏಳಿಗೆಯು ಈ ಜನರಿಂದ ಮಾತ್ರ ಬರಲು ಸಾಧ್ಯ. ನನ್ನ ಮನೆಯಲ್ಲಿ ನನ್ನ ತಂದೆ ಮತ್ತು ತಾಯಿಯವರು ದಿನಕ್ಕೆ ಐದು ಬಾರಿ ನಮಾಝ್ ಮಾಡುವುದನ್ನು ನೋಡುತ್ತಿದ್ದೆ, ಅವರಿಗಿದ್ದ ಪರಿಮಿತ ಸಂಪಾದನೆಯಲ್ಲಿಯೂ ಕೂಡಾ ಅವರು ನಮ್ಮ ಸುತ್ತಮುತ್ತಲು ಇದ್ದ ಅವಶ್ಯಕತೆಯಿದ್ದವರಿಗೆ ಸಹಾಯ ಮಾಡುತ್ತಿದ್ದರು. ನನ್ನ ತಂದೆಯವರಿಗೆ ತಮ್ಮ ಆರ್ಥಿಕ ಅಡಚಣೆಗಳನ್ನು ಪಕ್ಕಕ್ಕಿಡುವಂತೆ ದುಂಬಾಲು ಬಿದ್ದು ನನ್ನನ್ನು ಶಾಲೆಗೆ ಕಳುಹಿಸುವಂತೆ ಮಾಡಿದ್ದು ನನ್ನ ಶಿಕ್ಷಕರಾದ ಶಿವ ಸುಬ್ರಹ್ಮಣ್ಯರವರು. ಪ್ರತಿಯೊಬ್ಬ ತಂದೆ ತಾಯಿಯೂ ತಮ್ಮ ಮಕ್ಕಳನ್ನು ಒಳ್ಳೆಯ  ಮತ್ತು ವಿವೇಕವುಳ್ಳ ನಾಗರೀಕರನ್ನಾಗಿ ಮಾಡುವುದು ಹಾಗೂ ಶ್ರಮಪಟ್ಟು ಕೆಲಸ ಮಾಡವುದನ್ನು ಕಲಿಸಬೇಕೆಂಬ ಮನಸ್ತತ್ವವನ್ನು ಹೊಂದಿರಬೇಕು.  ಮಗುವಿಗೆ ಪ್ರಪಂಚವನ್ನು ತೋರುವ ಕಿಟಕಿಯಾಗಿರುವ ಶಿಕ್ಷಕನು, ಮಗುವಿನಲ್ಲಿ ಹೊಸ ಹೊಸ ಆಲೋಚನೆಗಳನ್ನು (ಸೃಜನಶೀಲತೆಯನ್ನು) ಹುಟ್ಟುಹಾಕುವ ಆದರ್ಶ ವ್ಯಕ್ತಿಯಾಗಬೇಕು. ಈ ತ್ರಿಕೋಣವೇ ನಿಜವಾದ ಮಾದರಿ ವ್ಯಕ್ತಿತ್ವವೆಂದು ನಾನು ತಿಳಿಯುತ್ತೇನೆ. ನಾನು ಇನ್ನೂ ಮುಂದುವರೆದು ಹೇಳುತ್ತೇನೆ, ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ರೂಪಿಸುವ ಕೈಂಕರ್ಯಕ್ಕೆ ಸಮರ್ಪಣಾ ಮನೋಭಾವವನ್ನು ಹೊಂದಿರಬೇಕು, ಆಗ ಮಾತ್ರ ಭಾರತಕ್ಕೆ ಹೊಸ ಜೀವಕಳೆ ಬರುತ್ತದೆ. "ಪೋಷಕರ ಹಿಂದೆ ಶಾಲೆಯು ನಿಂತಿರುತ್ತದೆ, ಮತ್ತು ಶಿಕ್ಷಕರ ಹಿಂದೆ ಮನೆಯು ನಿಂತಿರುತ್ತದೆ" ಎನ್ನುವ ಹೇಳಿಕೆಯೊಂದಿದೆ. ’ಶಿಕ್ಷಣ’ ಮತ್ತು ’ಮಗು ಹಾಗೂ ಶಿಕ್ಷಕರ ಸಂಭಂದ’ವನ್ನು ವ್ಯಾಪಾರಿ ಮನೋಭಾವದಿಂದ ನೋಡದೆ ಅದನ್ನು ದೇಶದ ಉನ್ನತಿಯ ದೃಷ್ಟಿಯಿಂದ ನೋಡಬೇಕು. ಸರಿಯಾದ ವಿದ್ಯೆ ನಮ್ಮ ಯುವಕರಲ್ಲಿ ಹೆಮ್ಮೆ ಮತ್ತು ಆತ್ಮಗೌರವವನ್ನು ಹುಟ್ಟುಹಾಕುವಲ್ಲಿ ಸಹಾಯಕವಾಗಬಲ್ಲುದು. ಈ ಗುಣಗಳನ್ನು ಯಾವುದೇ ಕಾನೂನಿನ ಮೂಲಕ ಹೇರಲಾಗುವುದಿಲ್ಲ ಆದರೆ ಅದನ್ನು ನಾವೇ ಪೋಷಿಸಿ ಬೆಳೆಸಿಕೊಳ್ಳಬೇಕಷ್ಟೆ.
 
ಮಕ್ಕಳು ಈ ಉತ್ತರವನ್ನು ಕೇಳಿ ಸಂತೋಷ ಪಟ್ಟರು ಆದರೆ ಈ ಸಂದೇಶವು ಪೋಷಕ ಮತ್ತು ಶಿಕ್ಷಕ ವೃಂದಕ್ಕೆ ತಲುಪಿತೋ ಇಲ್ಲವೋ ತಿಳಿಯದು.  
 
ಮತ್ತೊಬ್ಬ ಹುಡುಗಿ ಅತ್ಯಂತ ಗಂಭೀರವಾಗಿ ಕೇಳಿದಳು, ಪ್ರತಿದಿನ ನಾವು ದಿನ ಪತ್ರಿಕೆಗಳಲ್ಲಿ ಮತ್ತು ನಮ್ಮ ತಂದೆ ತಾಯಿಗಳು ಆತಂಕವಾದಿಗಳ ಕುರಿತಾಗಿ ಮಾತನಾಡುವುದನ್ನು ಕೇಳುತ್ತೇವೆ. ಅವರು ಯಾರು? ಅವರು ನಮ್ಮ ದೇಶಕ್ಕೆ ಸೇರಿದವರೆ? ಈ ಪ್ರಶ್ನೆ ನನ್ನನ್ನು ನಿಜಕ್ಕೂ ಆಘಾತ ಗೊಳಿಸಿತು. ನಾನು ನನ್ನಷ್ಟಕ್ಕೆ ನಾನೆ ಈ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದೆ. ಅವರು ನಮ್ಮ ದೇಶದವರೆ. ಕೆಲವೊಂದು ಬಾರಿ ನಾವು ಅವರನ್ನು ರಾಜಕೀಯ ಮತ್ತು ಆರ್ಥಿಕ ಕಾರಣಗಳ ಮೂಲಕ ಬೇರ್ಪಡಿಸಿ ಅವರ ಹುಟ್ಟಿಗೆ ಕಾರಣರಾಗುತ್ತೇವೆ, ಅಥವಾ ಅವರು ಮತಾಂಧರಿರಬಹುದು, ಕೆಲವೊಂದು ವೇಳೆ ಶತ್ರುದೇಶದವರು ಆತಂಕವಾದಿಗಳಿಗೆ ಸಹಾಯವನ್ನು ಒದಗಿಸಿ ಅವರ ಮೂಲಕ ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಹುನ್ನಾರ ಹೊಂದಿರಬಹುದು. ನಾನು ಸಭಿಕರನ್ನು ನೋಡಿದೆ, ನನ್ನ ಅಕ್ಕಪಕ್ಕದಲ್ಲಿ ಕುಳಿತವರನ್ನು ನೋಡಿದೆ, ಶಿಕ್ಷಕರತ್ತ ನೋಡಿದೆ ಮತ್ತು ಕಡೆಯದಾಗಿ ಆಕಾಶದೆಡೆಗೆ ಉತ್ತರಕ್ಕಾಗಿ ಮುಖಮಾಡಿದೆ. ಆಗ ನಾನು ಹೇಳಿದೆ, "ಮಕ್ಕಳೇ, ನನಗೆ ರಾಮಾಯಣ ಮತ್ತು ಮಹಾಭಾರತಗಳ ನೆನಪಾಗುತ್ತಿದೆ. ರಾಮಾಯಣದಲ್ಲಿ ಯುದ್ಧವು ನಾಯಕನಾದ ದೈವೀ ಪುರುಷ ರಾಮನಿಗೆ ಮತ್ತು ರಾಕ್ಷಸ ಚಕ್ರವರ್ತಿ ರಾವಣನ ಮಧ್ಯೆ ನಡೆಯುತ್ತದೆ. ಬಹುಕಾಲ ಸಾಗಿದ ಆ ಮಹಾಯುದ್ಧದಲ್ಲಿ ಕಡೆಯದಾಗಿ ರಾಮನಿಗೆ ಜಯವಾಗುತ್ತದೆ. ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧವಿದೆ. ಇಲ್ಲಿ ಹೋರಾಟವು ಒಳ್ಳೆಯ ಮತ್ತು ದುಷ್ಟ ಶಕ್ತಿಗಳ ನಡುವೆ ನಡೆಯುತ್ತದೆ, ಕಡೆಯಲ್ಲಿ ಧರ್ಮಕ್ಕೆ ವಿಜಯವುಂಟಾಗುತ್ತದೆ. ಎಷ್ಟೋ ಹೋರಾಟಗಳಿದ್ದಾಗ್ಯೂ ಕೂಡಾ ಅಂತಿಮವಾಗಿ ಶಾಂತಿಯು ವಿಜೃಂಭಿಸುತ್ತದೆ. ನಮ್ಮ ಕಾಲದಲ್ಲಿಯೂ ಕೂಡಾ ನಾವು ಈ ರೀತಿಯ ಸಂಗ್ರಾಮವನ್ನು ಎರಡನೇ ಮಹಾಯುದ್ಧದ ಕಾಲದಲ್ಲಿ ನೋಡಿದ್ದೇವೆ. ನನಗನ್ನಿಸುವ ಮಟ್ಟಿಗೆ ಹೇಳುವುದಾದರೆ, ಕೆಟ್ಟದ್ದು ಮತ್ತು ಒಳ್ಳೆಯದು ಯಾವಾಗಲೂ ಒಂದರ ಸನಿಹದಲ್ಲಿ ಮತ್ತೊಂದು ಇರುತ್ತವೆ. ಸರ್ವಶಕ್ತನು ಒಳ್ಳೆಯವರಿಗೂ ಮತ್ತು ಕೆಟ್ಟವರಿಗೂ ಕೂಡಾ ವಿವಿಧ ಸ್ತರಗಳಲ್ಲಿ ಸಹಾಯ ಮಾಡುತ್ತಾನೆ! ಈ ಕೆಟ್ಟದ್ದನ್ನು ನಾವು ಹೇಗೆ ಪರಿಮಿತಗೊಳಿಸಬೇಕೆನ್ನುವ ಪ್ರಶ್ನೆಯೇ ಮನುಷ್ಯನ ಆಧ್ಯಾತ್ಮಿಕ ಇತಿಹಾಸದುದ್ದಕ್ಕೂ ನಮಗೆ ಕಂಡು ಬರುತ್ತದೆ."
 
 ಮತ್ತೊಂದು ಸಂದರ್ಭದಲ್ಲಿ,  ನಾನು ಸೇಂಟ್ ಮೇರಿಸ್ ಸ್ಕೂಲ್, ದಿಂಡಿಗಲ್, ತಮಿಳುನಾಡು, ಇಲ್ಲಿ ವಿದ್ಯಾರ್ಥಿಗಳ ಭಾರೀ ಸಮಾವೇಶವೊಂದರಲ್ಲಿ ಪಾಲ್ಗೊಂಡಿದ್ದೆ, ಅದು ಆ ಶಾಲೆಯೆ ೭೫ನೇ ವರ್ಷದ ಸಮಾರಂಭ.  ನನ್ನನ್ನು ಭೇಟಿಯಾಗಬೇಕೆಂದು ಕೊಂಡಿದ್ದ ಅಪಾರ ವಿದ್ಯಾರ್ಥಿಗಳಲ್ಲಿ ನನ್ನನ್ನು ಭೇಟಿಯಾಗಿ ಆದಷ್ಟು ಬೇಗ ನನ್ನಿಂದ ಉತ್ತರವನ್ನು ಪಡೆಯಬೇಕೆನ್ನುವ ಆತುರವಿದ್ದ ಇಬ್ಬರಿದ್ದರು. ಅವರಲ್ಲಿ ಒಬ್ಬ ನನ್ನನ್ನು ಕೇಳಿದ, "ನಾನು ನಿಮ್ಮ ಪುಸ್ತಕ "ಅಗ್ನಿ ಸಿರಗುಗಲ್" (Wings of Fireನ ತಮಿಳು ಆವೃತ್ತಿ) ಓದಿದ್ದೇನೆ. ಅದರಲ್ಲಿ ನೀವು ಅದರ ಉದ್ದಕ್ಕೂ ಕನಸು ಕಾಣಿರಿ ಎನ್ನುವ ಸಂದೇಶವನ್ನೇ ಕೊಟ್ಟಿದ್ದೀರಲ್ಲ. ನಾವೇಕೆ ಕನಸು ಕಾಣಬೇಕೆಂದು ತಿಳಿಸಿ?"
 
ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗೆ ನನ್ನ ಉತ್ತರ, "ಕನಸಿರಿ, ಕನಸಿರಿ, ಕನಸಿರಿ. ಕನಸು ಆಲೋಚನೆಯಾಗಿ ಮಾರ್ಪಾಡಾಗುತ್ತದೆ. ಈ ಆಲೋಚನೆಗಳು ಕ್ರಿಯೆಯಾಗಿ ಪರಿವರ್ತನೆಗೊಳ್ಳುತ್ತವೆ." ನಾನು ಮುಂದುವರಿದು ಹೇಳಿದೆ, "ಸ್ನೇಹಿತರೆ, ಕನಸುಗಳಿಲ್ಲದಿದ್ದರೆ, ಕ್ರಾಂತಿಕಾರಕ ಆಲೋಚನೆಗಳು ಹುಟ್ಟುವುದಿಲ್ಲ, ಆಲೋಚನೆಗಳು ಇಲ್ಲದಿದ್ದರೆ ಯಾವುದೇ ಕಾರ್ಯವು ಹೊರಹೊಮ್ಮುವುದಿಲ್ಲ. ಆದ್ದರಿಂದ, ಶಿಕ್ಷಕರು ಮತ್ತು ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಕನಸು ಕಾಣುವುದಕ್ಕೆ ಅವಕಾಶ ಕೊಡಬೇಕು. ಯಶಸ್ಸು ಎನ್ನುವುದು ಯಾವಾಗಲೂ ನನ್ನ ಕನಸಿನ ಗುರಿಯೆಡೆಗೆ ಹೆಜ್ಜೆ ಇಟ್ಟಾಗ ಉಂಟಾಗುತ್ತದೆ; ಹಲವಾರು ಬಾರಿ ಅದರಲ್ಲಿ ಅಡಚಣೆ ಮತ್ತು ಕಾರ್ಯಕೈಗೂಡುವುದು ನಿಧಾನವಾದರೂ ಕೂಡಾ."
 
ಇನ್ನೊಬ್ಬ ಹುಡುಗ ಕೇಳಿದ, "ದಯವಿಟ್ಟು ತಿಳಿಸಿ, ಪ್ರಪಂಚದಲ್ಲಿ ಯಾರು ಮೊದಲನೆಯ ವಿಜ್ಞಾನಿ?" ಆಗ ನನಗೆ ಹೊಳೆದದ್ದೇನೆಂದರೆ, ವಿಜ್ಞಾನವೆನ್ನುವುದು ಹುಟ್ಟಿದ್ದು ಮತ್ತು ಬದುಕಿರುವುದು ಪ್ರಶ್ನೆಗಳಿಂದಾಗಿ. ಇಡೀ ವಿಜ್ಞಾನದ ಬುನಾದಿಯೇ ಪ್ರಶ್ನೆಗಳನ್ನು ಕೇಳುವುದು. ಮತ್ತು ಎಲ್ಲಾ ತಂದೆ-ತಾಯಿಗಳಿಗೆ ಮತ್ತು ಶಿಕ್ಷಕರಿಗೆ ಗೊತ್ತಿರುವಂತೆ, ಮಕ್ಕಳೇ ಕೊನೆಯಿಲ್ಲದ ಪ್ರಶ್ನೆಗಳನ್ನು ಕೇಳುವುದು. ಆದ್ದರಿಂದ, ’ಮಗುವೇ ಮೊದಲನೆಯ ವಿಜ್ಞಾನಿ’ ಎಂದು ನಾನು ಉತ್ತರಿಸಿದೆ. ಆಗ ಸಭೆಯಲ್ಲಿ ಪ್ರಚಂಡ ಕರತಾಡನವಾಯಿತು. ಮಕ್ಕಳು ಈ ಹೊಸ ರೀತಿಯ ಆಲೋಚನೆಯನ್ನು ನೋಡಿ ಸಂತೋಷಗೊಂಡರು. ಶಿಕ್ಷಕರು ಮತ್ತು ಪೋಷಕರ ಮುಖಗಳಲ್ಲಿಯೂ ಕೂಡಾ ಈ ಉತ್ತರವನ್ನು ಕೇಳಿ ಮಂದಹಾಸ ಮಿನುಗಿತು.
 
        ವಿ.ಸೂ.: ಈ ಲೇಖನವುಡಾll ಅಬ್ದುಲ್ ಕಲಾಂ ಅವರು ನಿಮ್ಮೊಂದಿಗೆ ಮಾತನಾಡುತ್ತಾರೆ – ಒಂದು ಸಂಗ್ರಹ ಗ್ರಂಥ (Dr. Abdul Kalam Speaks to you – A Compilation), ಪ್ರಕಟಣೆ: ಶ್ರೀ ಸಂತ್ ಗಜಾನನ್ ಮಹರಾಜ್ ತಾಂತ್ರಿಕ ಮಹಾವಿದ್ಯಾಲಯ, ಶೇಗಾಂವ್೪೪೪೨೦೩, ಬುಲ್ಡಾನಾಜಿಲ್ಲೆ, ಮಹರಾಷ್ಟ್ರ ರಾಜ್ಯ; ಆಂಗ್ಲ ಭಾಷೆಯ ಪುಸ್ತಕದ ೧೨ರಿಂದ ೨೩ನೇ ಪುಟಗಳ ಅನುವಾದದ ಭಾಗ
 
ಚಿತ್ರಕೃಪೆ: ಗೂಗಲ್ 
http://www.google.co.in/imgres?start=85&hl=kn&sa=X&biw=1821&bih=797&tbm=isch&prmd=imvns&tbnid=0rgb4kPyKXqi0M:&imgrefurl=http://yuvaenergy.wordpress.com/2012/03/11/%25E0%25A4%25B0%25E0%25A4%25BE%25E0%25A4%25B7%25E0%25A5%258D%25E0%25A4%259F%25E0%25A5%258D%25E0%25A4%25B0-%25E0%25A4%2595%25E0%25A5%2587-%25E0%25A4%25A8%25E0%25A4%25BF%25E0%25A4%25B0%25E0%25A5%258D%25E0%25A4%25AE%25E0%25A4%25BE%25E0%25A4%25A3-%25E0%25A4%25AE%25E0%25A5%2587%25E0%25A4%2582-%25E0%25A4%25AF%25E0%25A5%2581/&imgurl=http://yuvaenergy.files.wordpress.com/2012/03/abdul_kalam_-_indias_missile_man.jpg&w=390&h=300&ei=_rhIUNndOY6XiQet-oC4BQ&zoom=1
Rating
No votes yet

Comments