ಬೀದಿ ಬದಿಯ ಮನೋರೋಗಿಗಳು- ಸಾಮಾಜಿಕ ದೃಷ್ಟಿಕೋನ
ಬೀದಿ ಬದಿಯ ಮಾನಸಿಕ ರೋಗಿಗಳು- ಸಾಮಾಜಿಕ ದೃಷ್ಟಿಕೋನ
- ಲಕ್ಷ್ಮೀಕಾಂತ ಇಟ್ನಾಳ
ಮನುಷ್ಯನಿಗೆ ತಡೆದುಕೊಳ್ಳಲಾರದ, ಅ-ಸಹನೀಯ ಪರಿಸ್ಥಿತಿ ಎದುರಾದಲ್ಲಿ, ಕೈಮೀರಿ, ನಿಲುಕದ ಬದುಕಿನ ಹಲವಾರು ಜಟಿಲ ಸಮಸ್ಯೆಗಳ ಕಾರಣಗಳಿಗಾಗಿ ಮನಸ್ಸಿನ ಮೇಲೆ ವಿಪರೀತ ಆಘಾತಗಳಾಗಿ, ಒಂಟಿತನದ ಮನೋರೋಗದ ಕ್ಷೋಭೆಗೆ ಜಾರಿಬಿಡುವ ಸಾಧ್ಯತೆಗಳು ಹೆಚ್ಚು. ಇಲ್ಲವೇ ಒತ್ತಡಗಳನ್ನು ತಡೆಯಲಾರದೇ ಹುಚ್ಚು ಆವರಿಸಿಕೊಳ್ಳುವ ಅಪಾಯ ಇರುತ್ತದೆ. ಹಲವರು ಅವುಗಳನ್ನು ಎದೆಗಾರಿಕೆ, ತಿಳುವಳಿಕೆ, ಶಾಂತ, ಜಾಗರೂಕತೆಯಿಂದ ಅನುಭವಿಸಿ, ಇಲ್ಲವೇ ಸೂಕ್ತ ಆರೈಕೆಗಳಿಂದ ಅಂತಹ ಸಿಕ್ಕುಗಳಿಂದ ಗುಣಮುಖರಾದರೆ, ಇನ್ನುಳಿದವರು ಖಂಡಿತ ನತದೃಷ್ಟರು. ಅದೆಲ್ಲ ಅನಿವಾರ್ಯ ಕರ್ಮವೆಂಬಂತೆ, ತಮ್ಮ ನಸೀಬು ಎಂದು ಸ್ವೀಕರಿಸಿ, ನೋವುನ್ನುತ್ತ ಅಂತಹ ದಿನಗಳನ್ನು ಎಳೆಯುತ್ತಾರೆ. ಅದರ ಬಾಧೆಯಿಂದ ಹೊರಬರಲು ಜೀವನವಿಡೀ ಒದ್ದಾಡುತ್ತಿರುತ್ತಾರೆ. ಇನ್ನು ಕೆಲವರು ಯಾರಿಗೂ ಬೇಡವಾದವರಾಗಿ, ಕೆಲವೊಮ್ಮೆ ಸಾವಿನಲ್ಲೂ ಪರ್ಯಾವಸಾನವಾದ ಉದಾಹರಣೆ ಕೆಲವಾರು ಜನರ ಅನುಭವಕ್ಕೆ ಬಂದಿರಲಿಕ್ಕೆ ಸಾಕು. ಇನ್ನು ಕೆಲವರಂತೂ ಮನೆಯವರಿಂದ ತಿರಸ್ಕೃತರಾಗಿ , ಹುಚ್ಚರಾಗಿ ಪ್ರತಿ ಊರುಗಳಲ್ಲಿ ಅಲ್ಲಲ್ಲಿ ತಿರುಗುತ್ತಿರುವುದನ್ನು ಬಹುಶ: ನಾವೆಲ್ಲರೂ ನೋಡಿರುತ್ತೇವೆ. ಇವರಲ್ಲಿ ಬಹುತೇಕರಿಗೆ ಸಮಸ್ಯೆಗಳನ್ನು ಎದುರಿಸುವ ಮನೋಸ್ಥೈರ್ಯವಾಗಲಿ, ಸೂಕ್ತ ತಿಳುವಳಿಕೆಯಾಗಲಿ ಇರದು. ಇಂತಹವರ ಕುರಿತು ಸಮಾಜದ ಅರ್ಥಹೀನ ನಿರ್ಲಿಪ್ತತೆ ಕೂಡ ತನ್ನ ಕೊಡುಗೆ ನೀಡಿರುತ್ತದೆ. ಇದೊಂದು ಮನೋರೋಗವೆಂದು ಗೊತ್ತಾಗದೇ ಹೋಗುವ ಸಂದರ್ಭಗಳೇ ಹೆಚ್ಚು.
ಮನುಷ್ಯ ಸಂಚಾರದ ದಾರಿ ತಿರುವುಗಳಿಂದ, ಏರು ಇಳುವಿನಿಂದ ಕೂಡಿರುವಂತೆ ಬದುಕಿನ ಜೀವನ ಪಥವೂ ಕೂಡ ಏಳುಬೀಳುಗಳಿಂದ ಕೂಡಿರುವುದು ಸಹಜ. ನಿಸರ್ಗದಲ್ಲಿ ಏಕತಾನತೆಗೆ ಅವಕಾಶವಿಲ್ಲ. ನಿರಂತರ ಬದಲಾವಣೆಯೇ ಪ್ರಕೃತಿಯ ನಿಯಮ ಎಂದು ಭಗವದ್ಗೀತೆ ಹೇಳಿಲ್ಲವೆ. ಕೆಲವಾರು ಮಜಲುಗಳಲ್ಲಿ ಆಗುವ ಬದಲಾವಣೆಗಳಿಗೆ ಮನಸ್ಸು ಒಗ್ಗದಿದ್ದಲ್ಲಿ, ಒಪ್ಪದಿದ್ದಲ್ಲಿ ಮನಸ್ಸು ಕುಬ್ಜವಾಗುತ್ತದೆ, ಕ್ಷೋಭೆಗೊಳಗಾಗುತ್ತದೆ. ಯಾವುದೂ ಶಾಶ್ವತವಲ್ಲ ಎಂಬ ಅರಿವನ್ನು, ಪರಿಕಲ್ಪನೆಯನ್ನು ಮನಸ್ಸಿನ ಆಳದಲ್ಲಿ ಬೀಜದಂತೆ ನೆಡಬೇಕಾಗುತ್ತದೆ. ನಮ್ಮ ಕಲ್ಪನೆಗಿರಲಿ. ಈ ಭೂಮಿಯ ಮೇಲೆ ನಿಶ್ಚಲವಾಗಿ ಕುಳಿತ ಮನುಷ್ಯ ಭೂಮಿಯೊಂದಿಗೆ ನಂಬಲಾಗದಷ್ಟು ವೇಗದಲ್ಲಿ ಸುತ್ತುತ್ತಿರುತ್ತಾನೆ, ಅಂದರೆ ಸೆಕೆಂಡಿಗೆ 19 ಮೈಲಿಗಳಷ್ಟು ವೇಗದಲ್ಲಿ ನಾವು ಸಾಗುತ್ತಿರುತ್ತೇವೆ. ಇನ್ನೆಲ್ಲಿ ಬಂತು ನಿಶ್ಚಲತೆ!. ಚಲನಶೀಲ ಮನಸ್ಸಿಲ್ಲದವರಿಗೆ, ಮನಸ್ಸಿನ ಪ್ರತಿರೋಧತೆಗೆ ಧಕ್ಕೆಯಾಗಿ, ಸೋಲುಂಟಾದಾಗ ಮನೋರೋಗಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚು.
ಮನುಷ್ಯನ ಜೀವನದಲ್ಲಿ ಧುತ್ತೆಂದು ಎರಗುವ ಈ ಒಂಟಿತನವೆಂಬ ಏಳು ಬೀಳನ್ನು ಪ್ರಕೃತಿಯೊಂದಿಗೆ ಬೆರೆತು ಕಳೆದುಬಿಡುವದು ಅತ್ಯುತ್ತಮ ವಿಧಾನಗಳಲ್ಲಿ ಒಂದು. ನಿಸರ್ಗದಲ್ಲಿಯ ನಿರಂತರ ಬದಲಾವಣೆ, ಗಿಡಮರಗಳ ಚಿಗುರು, ಹೂ ಹಣ್ಣುಗಳ ಚಲುವುಗಳ ಸ್ಪರ್ಶ ಅಗಾಧ, ಹಾಗೂ ಸುಕೋಮಲ ಮಧುರ ಅನುಭವವನ್ನು ನೀಡಬಲ್ಲಂತಹವು.. ಭೂರಮೆಯ ಒಡಲಲ್ಲಿ ಹರಿಯುವ ಝರಿ, ತೊರೆ, ನದಿ, ಸಾಗರಗಳ ಸಮೃದ್ಧ ಸನ್ನಿಧಿ, ನಿರಂತರ ಹುಟ್ಟುವ ತೆರೆಗಳು, ಮನಕೆ ಮುದನೀಡುವ ಸಾಂತ್ವನದ ಪರಿ ಏನು ಕೊಟ್ಟರೆ ಸಿಕ್ಕೀತು.
ಹಸಿರು ಸುರಿಸುವ ಮರಗಿಡಗಳ ಬೆಟ್ಟ ಕಾಡುಗಳ ಒಡಲುಗಳಲ್ಲಿನ ಸಂಚಾರ, ಬೀಸುವ ತಂಗಾಳಿ, ಹಾಡು ಹಕ್ಕಿಗಳ ಕಲರವ, ಧೋ ಎಂದು ಸುರಿಯುವ ಮುಂಗಾರು ಮಳೆಯಲ್ಲಿ ತೋಯುತ್ತ, ಆ ತಂಪಿಗೆ ದೇಹ ಮುದುಡಿದರೂ, ಮನಸ್ಸು ಮುದುಡೀತೇ! ಹೀಗೆ ಪ್ರಕೃತಿಯೇ ಒಂದು ದೊಡ್ಡ ಪರಿಹಾರಾಲಯ. ಇವೆಲ್ಲ ಬಳಲಿದ ಮನಸಿಗೆ ತುಸುವಾದರು ಸಾಂತ್ವನ ನೀಡಿಯಾವು. ಇವಗಳ ಜೊತೆ ತಾದಾತ್ಮ್ಯ ಸಾಧಿಸಿ, ಅವುಗಳಲ್ಲಿ ಮನಸ್ಸನ್ನು ಒಂದಾಗಿಸಿ, ನೋವು ಮರೆತು, ಮೈಮನಗಳನ್ನು ಹಗುರಮಾಡಿಕೊಳ್ಳಬಹುದು.
ಚಂದ್ರನ ಶೀತಲ ಬೆಳದಿಂಗಳ ಕಿರಣಗಳು, ಹಗಲಿರುಳೆನ್ನದೆ ಚಲಿಸುವ ವೋಡಗಳು, ತಿಳಿ ನೀಲ ವಿಶಾಲ ಆಕಾಶ, ಬೆಳ್ಳಿ ಬಟ್ಟಲುಗಳಂತೆ ಹೊಳೆವ ತಾರೆಗಳು, ಬೆಳಗಿನ ಹೂ ಅರಳುವ ಸಮಯ, ಸೂರ್ಯ ಉದಯಾಸ್ತಗಳ ನಯನ ಮನೋಹರ ನೋಟಗಳು ದಣಿದ ದೇಹ, ಮನಸ್ಸುಗಳನ್ನು ಖಂಡಿತ ಅರಳಿಸಬಲ್ಲವು.
ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯುವುದು, ಸಮಸ್ಯೆಗಳನ್ನು ಬಿಚ್ಚುಮನಸ್ಸಿನಿಂದ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು. ಮೆಚ್ಚುಗೆಯ ವಿಷಯದ ಕುರಿತು ಓದುವ ಬರೆಯುವ ರೂಢಿ ಬೆಳೆಸಿಕೊಳ್ಳುವುದರಿಂದ ಕೂಡ ಒಂಟಿತನದಿಂದ ಹೊರಬರಲು ಸಾಧ್ಯ.
ಸಮಾಜದ ಆರೋಗ್ಯದ ಬಗ್ಗೆ ಚಿಂತನೆ ಇರುವ ಕೆಲವರಲ್ಲಿಯಾದರೂ ಈ ಸಮಸ್ಯೆಯ ಕುರಿತು ತುಡಿತ ಗುರುತಿಸಬಹುದು. ಇಂತಹ ತುಡಿತ ವಿರುವವರಾದರೂ ಮನೋರೋಗಿಗಳನ್ನು ಗುರುತಿಸಿ ಸರಕಾರಿ ಆಸ್ಪತ್ರೆ ಇಲ್ಲವೇ ಖಾಸಗಿ ವೈದ್ಯರುಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುವ ಕುರಿತು ಆ ರೋಗಿಗಳ ಪಾಲಕರಿಗೆ, ಸಂಬಂಧಿಕರಿಗೆ ಲಭ್ಯವಿರುವ ಉಪಚಾರಗಳ ಬಗ್ಗೆ ತಿಳಿಸಿ ಹೇಳಿದಲ್ಲಿ ಇಂತಹ ರೋಗಿಗಳು ಗುಣಮುಖರಾಗುವ ಸಾಧ್ಯತೆಗಳು ಹೆಚ್ಚು. ಇನ್ನು ತೀರ ಹುಚ್ಚರಾಗಿ, ಮನೆಯವರಿಂದ ತಿರಸ್ಕೃತರಾಗಿ ಬೀದಿ ಬದಿಯಲ್ಲೇ ಬದುಕುವವರಿಗಾಗಿ ಸಮಾಜದ ಮೇಲ್ವರ್ಗಗಳಲ್ಲಿ ಗುರುತಿಸಿಕೊಂಡ ಸಂಬಂಧಪಟ್ಟ ವಿಷಯ ಪರಿಣಿತ ವೈದ್ಯರು ಇಂತಹ ರೋಗಿಗಳಲ್ಲಿ ಒಬ್ಬಿಬ್ಬರನ್ನಾದರೂ ದತ್ತು ತೆಗೆದುಕೊಂಡು ಸೂಕ್ತ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಿ ನಿಜವಾದ ಸಾಮಾಜಿಕ ಕಾಳಜಿ ಮೆರೆಯಬಹುದು. ಇಂದು ಪ್ರತಿ ನಿತ್ಯ ನಾವು ನೋಡುತ್ತಿರುವಂತೆ ಸಾಮಾಜಿಕ ಸ್ಥರಗಳಲ್ಲಿ ಕೊಡಮಾಡುವ ಬಹುತೇಕ ಪ್ರಶಸ್ತಿ, ಪ್ರಶಂಸೆಗಳನ್ನು ಸಿಂಹಪಾಲಿನಂತೆ ಬಾಚಿಕೊಳ್ಳುವ ವೈದ್ಯರುಗಳಿಗೆ ಇದು ತಮ್ಮ ಕರ್ತವ್ಯವೆಂಬುದನ್ನು ತಿಳಿದುಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಅವರೂ ಕೂಡ ಸಮಾಜದ ಅವಿಭಾಜ್ಯ ಅಂಗವೆಂಬುದನ್ನು ಮರೆಯಬಾರದು. ತಮ್ಮ ಪ್ರಾಕ್ಟೀಸ್ನಲ್ಲಿ ಒಂದೇ ಒಂದು ರೋಗಿಯನ್ನು ಪುಕ್ಕಟೆಯಾಗಿ ನೋಡದ ಎಷ್ಟೋ ವೈದ್ಯರು ಸಮಾಜ ಸೇವೆಗಾಗಿ ಮೀಸಲಿಟ್ಟ ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದಿರುವ ಅನೇಕ ಉದಾಹರಣೆಗಳು ನಮ್ಮ ಗಮನದಲ್ಲಿ ಇರುವುದು ಸುಳ್ಳಲ್ಲ. ಅವರು ನಿಜವಾಗಿಯೂ ಯೋಗ್ಯರು, ಆದರೆ ಸಾಮಾಜಿಕ ಕಾಳಜಿಯನ್ನು ಇನ್ನೂ ಸ್ವಲ್ಪ ಹೆಚ್ಚೇ ಸಮಾಜ ಅವರಿಂದ ಅಪೇಕ್ಷಿಸುತ್ತದೆ. ವೈದ್ಯರು ಹೆಚ್ಚು ಹೆಚ್ಚು ಕಲಿತು ವಿಷಯ ಪರಿಣಿತರಾಗುವುದು ಒಂದು ರೀತಿಯಲ್ಲಿ ಹೆಚ್ಚು ಹೆಚ್ಚು ಹಣ ಮಾಡಲು ಲೈಸೆನ್ಸ್ ಪಡೆದಹಾಗೆ ಆಗಿದೆ ಹಾಗೂ ಈ ಪಿಡುಗು ಎಲ್ಲಾ ರಂಗಗಳಿಗೂ ಅನ್ವಯವಾಗುತ್ತದೆ ಎಂದು ಚಿಂತನಕಾರರೊಬ್ಬರು ಇತ್ತೀಚೆಗೆ ಫೋರಮ್ ಒಂದರಲ್ಲಿ ವಿಚಾರ ಮಂಡನೆಯ ಸಂದರ್ಭದಲ್ಲಿ ವಿಷಾದದಿಂದ ತಿಳಿಸಿದ್ದು ಇಲ್ಲಿ ಹೆಚ್ಚು ಪ್ರಸ್ತುತ ಹಾಗೂ ವಿಚಾರಯೋಗ್ಯ.
Comments
ಉ: ಬೀದಿ ಬದಿಯ ಮನೋರೋಗಿಗಳು- ಸಾಮಾಜಿಕ ದೃಷ್ಟಿಕೋನ
In reply to ಉ: ಬೀದಿ ಬದಿಯ ಮನೋರೋಗಿಗಳು- ಸಾಮಾಜಿಕ ದೃಷ್ಟಿಕೋನ by makara
ಉ: ಬೀದಿ ಬದಿಯ ಮನೋರೋಗಿಗಳು- ಸಾಮಾಜಿಕ ದೃಷ್ಟಿಕೋನ