ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ ೫

ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ ೫

ಭಾರತಕ್ಕಾಗಿ ಮೂರು ಯೋಜನೆಗಳು
 

ನ್ನ ಆತ್ಮೀಯ ಸ್ನೇಹಿತರೆ,
          ಮೂರು ಸಾವಿರ ವರ್ಷಗಳ ನಮ್ಮ ಜನರ ಇತಿಹಾಸದಲ್ಲಿ ಜಗತ್ತಿನ ಎಲ್ಲ ಜನರು ನಮ್ಮ ಮೇಲೆ ದಾಳಿ ಮಾಡಿದ್ದಾರೆ, ನಮ್ಮ ಭೂಮಿಗಳನ್ನು ವಶಪಡಿಸಿಕೊಂಡಿದ್ದಾರೆ, ಮತ್ತು ನಮ್ಮ ಮನಸ್ಸುಗಳನ್ನು ಆಕ್ರಮಿಸಿದ್ದಾರೆ. ಅಲೆಗ್ಜಾಂಡರಿನಿಂದ ಹಿಡಿದು ಗ್ರೀಕರು, ತುರ್ಕಿಯರು, ಮೊಘಲರು, ಪೋರ್ಚುಗೀಸರು, ಬ್ರಿಟೀಷರು, ಫ್ರೆಂಚರು, ಡಚ್ಚರು, ಇವರೆಲ್ಲಾ ಬಂದರು ನಮ್ಮನ್ನು ದೋಚಿದರು ಮತ್ತು ನಮ್ಮದಾದುದನ್ನೆಲ್ಲಾ ತೆಗೆದುಕೊಂಡು ಹೋದರು. ಆದರೂ ಕೂಡಾ ನಾವು ಇದನ್ನು ಬೇರೆ ಯಾವುದೇ ದೇಶದ ಮೇಲೆ ಮಾಡಿಲ್ಲ. ನಾವು ಯಾರನ್ನೂ ವಶಪಡಿಸಿಕೊಂಡಿಲ್ಲ. ನಾವು ಯಾರದೇ ಭೂಮಿಯನ್ನು ಕಸಿದುಕೊಂಡಿಲ್ಲ ಅಥವಾ ಅವರ ಸಂಸ್ಕೃತಿಯ ಮತ್ತು ಅವರ ಚರಿತ್ರೆಯ  ಮೇಲಾಗಲಿ ನಾವು ದಾಳಿ ಮಾಡಲಿಲ್ಲ ಮತ್ತು ನಮ್ಮ ರೀತಿಯ ಜೀವನ ಪದ್ಧತಿಯನ್ನು ಅವರ ಮೇಲೆ ಹೇರಲಿಲ್ಲ. ಏಕೆ? ಏಕೆಂದರೆ, ನಾವು ಇತರರ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ಆದ್ದರಿಂದ ನನ್ನ ಮೊದಲನೆಯ ಆಲೋಚನೆಯೇ ಸ್ವಾತಂತ್ರ್ಯದ ಮೇಲಿನದು. ಈ ರೀತಿಯ ಆಲೋಚನೆಯು ಭಾರತಕ್ಕೆ ಮೊದಲ ಬಾರಿಗೆ ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಹುಟ್ಟಿತು ಎಂದು ನಾನು ನಂಬುತ್ತೇನೆ. ಈ ಸ್ವಾತಂತ್ರ್ಯವನ್ನು ನಾವು ಕಾಪಾಡಿಕೊಳ್ಳಬೇಕು, ಪೋಷಿಸಬೇಕು ಮತ್ತು ಅದರ ಬುನಾದಿಯ ಮೇಲೆ ಅಭಿವೃದ್ಧಿಯನ್ನು ಸಾಧಿಸಬೇಕು. ನಾವು ಸ್ವತಂತ್ರರಾಗಿ ಇಲ್ಲದಿದ್ದರೆ ಯಾರೂ ನಮ್ಮನ್ನು ಗೌರವಿಸುವುದಿಲ್ಲ. ಭಾರತಕ್ಕೆ ನನ್ನ ಎರಡನೇ ಯೋಜನೆಯು ಅಭಿವೃದ್ಧಿ. ನಾವು ಐವತ್ತು ವರ್ಷಗಳಿಂದಲೂ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದೇವೆ. ನಾವು ಅಭಿವೃದ್ಧಿ ಹೊಂದಿದ್ದೇವೆ ಎನ್ನುವ ಸಮಯವು ಈಗ ಬಂದಿದೆ. ನಾವು ಅತೀ ಹೆಚ್ಚು GDP ಹೊಂದಿರುವ ಪ್ರಪಂಚದ ಐದು ದೇಶಗಳ ಸಾಲಿನಲ್ಲಿದ್ದೇವೆ. ನಾವು ಶೇಖಡ ೧೦%ರಷ್ಟು ಅಭಿವೃದ್ಧಿಯನ್ನು ಬಹುತೇಕ ರಂಗಗಳಲ್ಲಿ ಸಾಧಿಸಿದ್ದೇವೆ. ನಮ್ಮ ಬಡತನದ ಮಟ್ಟವು ಕೆಳಗಿಳಿಯುತ್ತಿದೆ. ನಮ್ಮ ಸಾಧನೆಗಳನ್ನು ಇಡೀ ವಿಶ್ವವೇ ಇಂದು ಗುರುತಿಸುತ್ತಿದೆ. ಆದರೂ ಕೂಡಾ ನಾವು ಅಭಿವೃದ್ಧಿ ಹೊಂದಿದ ದೇಶವೆಂದೂ, ಸ್ವಾವಲಂಭನೆಯುಳ್ಳವರೆಂದು, ಸ್ವಯಂ ನಿರ್ಭೀತರೆಂದು ಹೇಳಿಕೊಳ್ಳಲು ನಮಗೆ ಆತ್ಮವಿಶ್ವಾಸದ ಕೊರತೆಯಿದೆ ಅಥವಾ ಹಾಗೆಂದು ಹೇಳಿಕೊಳ್ಳಲು ಹಿಂಜರಿಯುತ್ತೇವೆ. ಆದರೆ ಇದು ತಪ್ಪಲ್ಲವೇ? ನನಗೆ ಮೂರನೆಯ ಆಲೋಚನೆಯೂ ಇದೆ. ಭಾರತವು ಪ್ರಪಂಚದ ಮುಂದೆ ಎದ್ದು ನಿಲ್ಲಬೇಕು. ಎಲ್ಲಿಯವರೆಗೆ ನಾವು ತಲೆ ಎತ್ತಿ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಯಾರೂ ನಮಗೆ ಗೌರವ ಕೊಡುವುದಿಲ್ಲ. ಕೇವಲ ಶಕ್ತಿ ಮಾತ್ರ ಮತ್ತೊಂದು ಶಕ್ತಿಯನ್ನು ಗೌರವಿಸುತ್ತದೆ. ನಾವು ಕೇವಲ ಸೈನಿಕ ಬಲವೊಂದರಿಂದಲೇ ಶಕ್ತಿಯುತರಾಗಿದ್ದರೆ ಸಾಲದು ನಾವು ಆರ್ಥಿಕವಾಗಿಯೂ ಕೂಡಾ ಬಲಶಾಲಿಗಳಾಗಿರಬೇಕು. ಎರಡೂ ಜೊತೆ-ಜೊತೆಯಾಗಿ ಸಾಗಬೇಕು. ನನ್ನ ವೃತ್ತಿ ಜೀವನದಲ್ಲಿ ಮೂರು ಮಹಾನ್ ವ್ಯಕ್ತಿಗಳ ಜೊತೆ ಕೆಲಸ ಮಾಡುವ ಸೌಭಾಗ್ಯವು ನನ್ನದಾಗಿತ್ತು. ಬಾಹ್ಯಾಕಾಶ ವಿಭಾಗದ ಡಾll ವಿಕ್ರಮ್ ಸಾರಾಭಾಯ್, ತದನಂತರ ಅವರ ಸ್ಥಾನವನ್ನಲಂಕರಿಸಿದ ಪ್ರೊll ಸತೀಶ್ ಧವನ್, ಮತ್ತು ಅಣ್ವಸ್ತ್ರದ ಮೂಲವಸ್ತುವಿನ ಜನಕರಾದ ಡಾll ಬ್ರಹ್ಮಪ್ರಕಾಶ್.  ನಿಜಕ್ಕೂ ಈ ಮೂವರು ವ್ಯಕ್ತಿಗಳೊಂದಿಗೆ ಅತ್ಯಂತ ಸನಿಹದಲ್ಲಿ ಕಾರ್ಯನಿರ್ವಹಿಸಿದ್ದು ನನ್ನ ಅದೃಷ್ಟ ಮತ್ತು ನನ್ನ ಜೀವನದಲ್ಲಿ ಸಿಕ್ಕ ಮಹದವಕಾಶ ಎಂದು ಭಾವಿಸುತ್ತೇನೆ. ನನ್ನ ವೃತ್ತಿಗತ ಜೀವನದಲ್ಲಿ ನಾಲ್ಕು ಮೈಲುಗಲ್ಲುಗಳು ನನಗೆ ಕಾಣಸಿಗುತ್ತವೆ.


 
ಒಂದು: ಇಪ್ಪತ್ತು ವರ್ಷ ನಾನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ISRO) ಕಾರ್ಯ ನಿರ್ವಹಿಸಿದೆ. ನನಗೆ ಭಾರತದ ಪ್ರಥಮ ಉಪಗ್ರಹ ಉಡಾವಣಾ ನೌಕೆ, SLV-3  (ರೋಹಿಣಿ ಉಪಗ್ರಹವನ್ನು ಕಕ್ಷೆಯಲ್ಲಿ ಸೇರಿಸಿದ ನೌಕೆ); ಕಾರ್ಯ ಯೋಜನೆಯ ನಿರ್ದೇಶಕರಾಗಿ (Project Director) ಕೆಲಸ ಮಾಡುವ ಅವಕಾಶವು ಸಿಕ್ಕಿತ್ತು. ಈ ವರ್ಷಗಳು ವಿಜ್ಞಾನಿಯಾಗಿ ನನ್ನ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ.
 
ಎರಡು: ನನ್ನ ISRO ಸೇವೆಯ ನಂತರ ನಾನು DRDO (ರಕ್ಷಣಾ ವಿಭಾಗದ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ)ದಲ್ಲಿ ಸೇರಿದೆ, ಇಲ್ಲಿ ನನಗೆ ’ನಿರ್ದೇಶಿತ ಕ್ಷಿಪಣಿ ಯೋಜನೆ’ (Guided Missile Program)ಯ ಭಾಗವಾಗಿ ಕಾರ್ಯ ಮಾಡುವ ಅವಕಾಶ ದೊರೆಯಿತು.  ೧೯೯೪ನೇ ಇಸವಿಯಲ್ಲಿ ’ಅಗ್ನಿ’ಯು ತನ್ನ ಉದ್ದೇಶಿತ ಗುರಿಯನ್ನು ಸಾಧಿಸಿದಾಗ ನನಗೆ ಎರಡನೇ ಬಾರಿ ಪರಮಾನಂದವಾಯಿತು.
 
ಮೂರು: ಪೋಖ್ರಾನಿನಲ್ಲಿ ಕೈಗೊಂಡ ಅಣು ಪರೀಕ್ಷೆಗಳಲ್ಲಿ (ಮೇ ೧೧ ಮತ್ತು ೧೩, ೧೯೯೯) ಅಣುಶಕ್ತಿ ವಿಭಾಗ (Dept. of Atomic Energy) ಮತ್ತು ರಕ್ಷಣಾ ವಿಭಾಗದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ (DRDO) ಅತ್ಯದ್ಬುತ ಸಹಯೋಗವು ಮೂರನೆಯದು. ಇಲ್ಲಿ ನನಗೆ ಮೂರನೇ ಬಾರಿಗೆ ಪರಮಾನಂದವಾಯಿತು. ನನ್ನ ತಂಡದೊಂದಿಗೆ ಇಂತಹ ಅಣುಸಂಭಂದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಲ್ಲಿರುವ  ಸಂತೋಷ ಮತ್ತು ಜಗತ್ತಿಗೆ ಭಾರತವು ಇದನ್ನು ಸಾಧಿಸಬಲ್ಲುದೆಂದು ತೋರಿಸಿಕೊಟ್ಟದ್ದು, ನಾವು ಇನ್ನು ಮುಂದೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಲ್ಲ ಆದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲೊಂದು ಎನ್ನುವುದರಲ್ಲಿರುವ ಆನಂದವು ವರ್ಣಿಸಲಸಾಧ್ಯವಾದುದು. ನಾನು ಭಾರತೀಯನೆಂದು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಈ ಪ್ರಸಂಗದಲ್ಲಿ ನನಗೆ ಅನಿಸಿತು. ವಾಸ್ತವದಲ್ಲಿ ನಾವು ’ಅಗ್ನಿ’ ಕ್ಷಿಪಣಿಯ ಹೊರಕವಚವನ್ನು ಮರು ಉಪಯೋಗಕ್ಕೆ ಬಳಸಲು ನಾವು ತಯಾರು ಮಾಡಿರುವ ಕಾರ್ಬನ್-ಕಾರ್ಬನ್ ಎನ್ನುವ ಅತೀ ಲಘು ತೂಕದ ವಸ್ತು ಕೂಡಾ ಗರ್ವಕ್ಕೆ ಕಾರಣವಾಗಿದೆ.
 
ನಾಲ್ಕು: ಒಂದು ದಿನ NIMS (Nijam Institute of Medical Sciences - Orthopaedic Surgeon) ನಿಜಾಮ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಎಲುಬು ಮತ್ತು ಕೀಲುಗಳ ಶಸ್ತ್ರಚಿಕಿತ್ಸಕರೊಬ್ಬರು ನನ್ನ ಪ್ರಯೋಗಾಲಯವನ್ನು ಸಂದರ್ಶಿಸಿದರು. ಅವರು ಈ ಕಾರ್ಬನ್-ಕಾರ್ಬನ್ ವಸ್ತುವನ್ನು ಎತ್ತಿನೋಡಿ ನನ್ನನ್ನು ಅವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಮ್ಮ ರೋಗಿಗಳನ್ನು ತೋರಿಸಿದರು. ಅಲ್ಲಿ ಚಿಕ್ಕಪುಟ್ಟ ಹುಡುಗ ಹುಡುಗಿಯರು ಮೂರು ಕೆ.ಜಿ.ಗೂ ಅಧಿಕವಿರುವ ಭಾರವಾದ ಕೃತಕ ಕೀಲುಗಳನ್ನು (Caliphers) ಹೊತ್ತು ತಮ್ಮ ಕಾಲುಗಳನ್ನು ಕಷ್ಟದಿಂದ ಎಳೆದುಕೊಂಡು ಹೋಗುತ್ತಿದ್ದ ದೃಶ್ಯ ಅಲ್ಲಿ ಸಾಮಾನ್ಯವಾಗಿತ್ತು. ಅವರು ನನ್ನನ್ನು ಕೇಳಿಕೊಂಡರು, "ದಯಮಾಡಿ ನನ್ನ ರೋಗಿಗಳ ನೋವನ್ನು ಹೋಗಲಾಡಿಸಿ." ಕೇವಲ ಮೂರು ವಾರಗಳಲ್ಲಿ ನಾವು 'Floor Reaction Orthosis' ಎನ್ನುವ ಕೇವಲ ೩೦೦ಗ್ರಾಂ ತೂಕವಿರುವ Caliphers ಅನ್ನು ತಯಾರಿಸಿ ಆ ಎಲುಬು ಮತ್ತು ಕೀಲುಗಳ ವಿಭಾಗಕ್ಕೆ ತೆಗೆದುಕೊಂಡು ಹೋದೆವು. ಮಕ್ಕಳು ತಮ್ಮ ಕಣ್ಣುಗಳನ್ನು ತಾವೇ ನಂಬಲಿಲ್ಲ - ಮೂರು ಕೆ.ಜಿ.ಯಷ್ಟು ಭಾರವನ್ನು ಹೊರುವುದು ತಪ್ಪಿ ಅವರು ಎಲ್ಲಾ ಕಡೆ ಸುಲಭವಾಗಿ ಓಡಾಡುವಂತಾದದ್ದು! ಅವರ ತಂದೆ-ತಾಯಿಗಳ ಕಣ್ಣುಗಳಲ್ಲಿ ಆನಂದ ಬಾಷ್ಪಗಳಿದ್ದವು. ಇದು ನನ್ನ ನಾಲ್ಕನೆಯ ಪರಮಾನಂದದ ಸ್ಥಿತಿ.
 
          ನಮ್ಮಲ್ಲಿರುವ ಮಾಧ್ಯಮಗಳೇಕೆ ಅಷ್ಟು ಋಣಾತ್ಮಕವಾದ ಭಾವನೆಗಳನ್ನು ಹೊಂದಿವೆ? ನಾವೇಕೆ ಭಾರತೀಯರು ನಮ್ಮ ಶಕ್ತಿಯನ್ನು ಗುರುತಿಸಿಕೊಳ್ಳುವಲ್ಲಿ ಮುಜುಗರ ಪಡುತ್ತೇವೆ ಮತ್ತು ನಮ್ಮ ಸಾಧನೆಗಳನ್ನೂ ಸಹ. ನಾವು ಎಂತಹ ಮಹಾನ್ ರಾಷ್ಟ್ರವಾಗಿದ್ದೇವೆ. ನಮ್ಮಲ್ಲಿ ಅನೇಕಾನೇಕ ಯಶಸ್ಸಿನ ಗಾಥೆಗಳಿವೆ, ಆದರೆ ನಾವು ಅವೆಲ್ಲುವುಗಳನ್ನೂ ಸರಿಯಾದ ರೀತಿಯಲ್ಲಿ ಸಂಭ್ರಮಿಸಲು ಹಿಂದೇಟು ಹಾಕುತ್ತೇವೆ. ಏಕೆ? ನಾವು ಹಾಲು ಉತ್ಪಾದನೆಯಲ್ಲಿ ಮೊದಲಿಗರು. ನಾವು ದೂರ ನಿಯಂತ್ರಿತ ಉಪಗ್ರಹಗಳ (Remote Sensing Satellite) ತಯಾರಕೆಯಲ್ಲಿ ಮೊದಲಿಗರು. ನಾವು ಗೋಧಿ ಉತ್ಪಾದನೆಯಲ್ಲಿ ಪ್ರಪಂಚಕ್ಕೇ ಎರಡನೆಯವರು. ಹಾಗೆಯೇ ನಾವು ವಿಶ್ವದ ಭತ್ತ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವವರು. ಡಾll ಸುದರ್ಶನ್ ಅವರನ್ನು ನೋಡಿ ಅವರು ಒಂದು ಆದಿವಾಸಿಗಳ ಹಳ್ಳಿಯನ್ನು ಸ್ವಾವಲಂಭಿ ಮತ್ತು ಸ್ವಯಂಪ್ರೇರಿತ ಘಟಕವನ್ನಾಗಿ ಮಾರ್ಪಡಿಸಿದ್ದಾರೆ. ಇಂತಹ ಲಕ್ಷ್ಯಾಂತರ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ, ಆದರೆ ನಮ್ಮ ಮಾಧ್ಯಮಗಳು ಕೆಟ್ಟ ಸಮಾಚಾರಗಳು, ವೈಫಲ್ಯಗಳು ಮತ್ತು ಅವಘಡಗಳನ್ನು ಪ್ರಸಾರ ಮಾಡುವಲ್ಲಿ ನಿರತವಾಗಿವೆ. ನಾನು ಒಮ್ಮೆ ’ಟೆಲ್-ಅವೀವ್’ನಲ್ಲಿ ಇದ್ದೆ ಮತ್ತು ಇಸ್ರೇಲಿ ದೈನಿಕವೊಂದನ್ನು ಓದುತ್ತಿದ್ದೆ. ಆ ದಿನ ಬಹಳಷ್ಟು ದಾಳಿಗಳು ಮತ್ತು ಬಾಂಬುಗಳ ಸಿಡಿತದಿಂದಾಗಿ ಅಧಿಕ ಪ್ರಮಾಣದ ಸಾವು ನೋವುಗಳು ಉಂಟಾಗಿದ್ದವು. ’ಹಮಾಸ್’ನವರು ದಾಳಿ ಇಟ್ಟಿದ್ದರು. ಆದರೆ ಮೊದಲನೇ ಪುಟದಲ್ಲಿ ತನ್ನ ಮರುಭೂಮಿಯ ಜಮೀನನ್ನು ಐದು ವರ್ಷಗಳಲ್ಲಿ ಹಣ್ಣಿನ ತೋಟ ಮತ್ತು ಧಾನ್ಯಸಂಗ್ರಹಾಗಾರವಾಗಿಸಿದ ಯಹೂದಿ ವೃದ್ಧನೊಬ್ಬನ ಫೋಟೋವೊಂದು ಅಚ್ಚಾಗಿತ್ತು. ಈ ಸ್ಪೂರ್ತಿದಾಯಕ ಚಿತ್ರದೊಂದಿಗೆ ಪ್ರತಿಯೊಬ್ಬರು ಬೆಳಕು ಹರಿಸಿದರು. ರಕ್ತಸಿಕ್ತ ಕೊಲೆಗಳ, ಬಾಂಬು ದಾಳಿಗಳ, ಸಾವು ನೋವು ಮುಂತಾದ ವಿಷಯಗಳು ಒಳಪುಟಗಳಲ್ಲಿ ಇತರೇ ವಿಷಯಗಳೊಳಗೆ ಹುದುಗಿ ಹೋಗಿದ್ದವು. ಭಾರತದಲ್ಲಿ ನಾವು ಕೇವಲ ಸಾವು, ರೋಗ, ಆತಂಕವಾದ, ಕೊಲೆ ಸುಲಿಗೆಗಳ ಬಗ್ಗೆಯೇ ಹೆಚ್ಚಾಗಿ ಓದುತ್ತೇವೆ. ನಾವೇಕೆ ಇಷ್ಟೊಂದು ಋಣಾತ್ಮಕ ದೃಷ್ಟಿಕೋನವನ್ನು ಹೊಂದಿದ್ದೇವೆ? ಮತ್ತೊಂದು ಪ್ರಶ್ನೆ: ನಾವೇಕೆ ಒಂದು ರಾಷ್ಟ್ರವಾಗಿ ವಿದೇಶಿ ವಸ್ತುಗಳ ವ್ಯಾಮೋಹಕ್ಕೆ ಸಿಲುಕಿದ್ದೇವೆ? ನಮಗೆ ವಿದೇಶಿ ದೂರದರ್ಶನ ಬೇಕು, ನಮಗೆ ವಿದೇಶಿ ಅಂಗಿಗಳು ಬೇಕು, ನಮಗೆ ವಿದೇಶಿ ತಂತ್ರಜ್ಞಾನ ಬೇಕು. ಏಕೆ ಪ್ರತಿಯೊಂದೂ ಆಮದಾದ ವಸ್ತುಗಳ ಮೇಲೆ ನಮ್ಮ ಅನುಭಂದ? ನಮ್ಮ ಅನುಭವಕ್ಕೆ ಬಂದಿಲ್ಲವೇ, ಆತ್ಮಗೌರವವು ಸ್ವಾವಲಂಭನೆಯಿಂದ ಬರುತ್ತದೆಂದು? ನಾನು ಈ ವಿಷಯವಾಗಿ ಕುರಿತು ಉಪನ್ಯಾಸ ಮಾಡಲು ಹೈದರಾಬಾದಿನಲ್ಲಿದ್ದೆ, ಆಗ ಹದಿನಾಲ್ಕು ವರ್ಷದ ಹುಡುಗಿಯೊಬ್ಬಳು ನನ್ನ ಹಸ್ತಾಕ್ಷರಕ್ಕಾಗಿ ಮನವಿಮಾಡಿದಳು. ನಾನು ಅವಳನ್ನು ನಿನ್ನ ಜೀವನದ ಗುರಿಯೇನೆಂದು ಪ್ರಶ್ನಿಸಿದೆ. ಅದಕ್ಕೆ ಅವಳ ಉತ್ತರ ಹೀಗಿತ್ತು: ನಾನು ಅಭಿವೃದ್ಧಿ ಹೊಂದಿದ ಭಾರತದಲ್ಲಿ ಜೀವಿಸಬೇಕೆಂದಿದ್ದೇನೆ. ಅವಳಿಗೋಸ್ಕರ ನಾನು ಮತ್ತು ನೀವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಾಣ ಮಾಡಬೇಕಾಗಿದೆ. ನೀವು ಇದನ್ನು ಸಾಧಿಸಬೇಕು. ಭಾರತವು ಪಾಕ್ಷಿಕ ಅಭಿವೃದ್ಧಿ ಹೊಂದಿದ ದೇಶವಲ್ಲ; ಆದರೆ ಅದು ಅತ್ಯಂತ ಅಭಿವೃದ್ಧಿ ಹೊಂದಿದ ದೇಶವಾಗಿದೆ. ಈಗ ಹೇಳಿ ನಿಮಗೆ ೧೦ ನಿಮಿಷ ಸಮಯವಿದೆಯೇ? ನಾನು ಪ್ರತೀಕಾರದ ಮನೋಭಾವದಿಂದ ಹಿಂತಿರುಗಲು ನನಗೆ ಅವಕಾಶ ಕೊಡಿ. ನಿಮ್ಮ ಬಳಿ ದೇಶಕ್ಕಾಗಿ ವ್ಯಯಿಸಲು ೧೦ ನಿಮಿಷಗಳ ಕಾಲಾವಕಾಶವಿದೆಯೇ? ಹೌದು ಎಂದಾದರೆ ಮುಂದೆ ಓದಿ, ಇಲ್ಲವೆಂದರೆ ಆಯ್ಕೆ ನಿಮಗೆ ಬಿಟ್ಟದ್ದು.
 
          ’ನೀವು’ ನಮ್ಮ ಸರ್ಕಾರವು ಅಸರ್ಮಕವಾಗಿದೆ ಎನ್ನುತ್ತೀರಿ. ’ನೀವು’ ಹೇಳುತ್ತೀರಿ ನಮ್ಮ ಕಾನೂನು ಬಹಳ ಹಳೆಯದೆಂದು. ’ನೀವು’ ಹೇಳುತ್ತೀರಿ ನಗರಪಾಲಿಕೆಯವರು ಕಸವನ್ನು ಎತ್ತಿಕೊಂಡು ಹೋಗುತ್ತಿಲ್ಲವೆಂದು. ’ನೀವು’ ಹೇಳುತ್ತೀರಿ ಫೋನುಗಳು ಕಾರ್ಯನಿರ್ವಹಿಸುತ್ತಿಲ್ಲವೆಂದು, ರೈಲ್ವೆ ಎನ್ನುವುದು ಒಂದು ಹಾಸ್ಯದ ಸಂಗತಿ, ವಿಮಾನ ಸಾರಿಗೆಯು ಪ್ರಪಂಚದಲ್ಲೇ ನಿಕೃಷ್ಟವಾದದ್ದು ಮತ್ತು ಪತ್ರಗಳು ತಮ್ಮ ಗಮ್ಯವನ್ನು ಸೇರುವುದಿಲ್ಲ ಎಂದು. ’ನೀವು’ ಹೇಳುತ್ತೀರ ನಮ್ಮ ದೇಶವು ನಾಯಿಗಳ ಪಾಲಾಗಿದೆ ಮತ್ತು ಕೊಚ್ಚೆ ಗುಂಡಿಯಲ್ಲಿ ಬಿದ್ದಿದೆ ಎಂದು. ’ನೀವು’ ಹೇಳುತ್ತೀರ, ಹೇಳುತ್ತೀರ ಮತ್ತು ಹೇಳುತ್ತೀರ. ಇದಕ್ಕಾಗಿ ನೀವೇನು ಮಾಡುವಿರಿ. ಒಬ್ಬ ವ್ಯಕ್ತಿಯನ್ನು ಸಿಂಗಪುರಕ್ಕೆ ಕರೆದುಕೊಂಡು ಹೋಗಿರಿ - ಅವನಿಗೆ ಒಂದು ಹೆಸರು ಕೊಡಿ ಅದು ನಿಮ್ಮದೇ ಆಗಿರಲಿ. ಅವನಿಗೆ ಒಂದು ಮುಖವನ್ನು ಕೊಡಿ - ನಿಮ್ಮದು. ’ನೀವು’ ವಿಮಾನ ನಿಲ್ದಾಣದಿಂದ ಹೊರಬರುತ್ತೀರಿ ಮತ್ತು ವಿಶ್ವದ ಅತ್ಯುತ್ತಮವಾದ ವಿಮಾನ ನಿಲ್ದಾಣದಲ್ಲಿ ನೀವಿರುತ್ತೀರಿ. ಸಿಂಗಪುರದಲ್ಲಿ ’ನೀವು’ ಸಿಗರೇಟ್ ತುಂಡುಗಳನ್ನು ರಸ್ತೆಯ ಮೇಲೆ ಎಸೆಯುವುದಿಲ್ಲ ಅಥವಾ ಅಂಗಡಿಗಳಲ್ಲೇ ತಿನ್ನುವುದಿಲ್ಲ. ’ನೀವು’ ಅಲ್ಲಿಯವರ ಒಳ ಚರಂಡಿಯ ವ್ಯವಸ್ಥೆಯ ಬಗ್ಗೆ ಹೆಮ್ಮೆ ಪಡುತ್ತೀರಿ. ’ನೀವು’ ಐದು ಡಾಲರ್ (ಸುಮಾರು ಅರವತ್ತು ರೂಪಾಯಿಗಳನ್ನು) ತೆತ್ತು ಅಲ್ಲಿಯ ಹಣ್ಣಿನ ತೋಟದ ರಸ್ತೆಯ ಮೂಲಕ ಸಂಜೆ ೫.೦೦ರಿಂದ ೮.೦೦ರ ಮಧ್ಯ ಹಾಯ್ದು ಹೋಗುತ್ತೀರಿ (ಅದು ಮಾಹಿಮ್ ಪ್ರಧಾನ ರಸ್ತೆ ಅಥವಾ ಪೆಡ್ಲರ್ ರೋಡಿಗೆ ಸಮಾನವಾಗಿರುತ್ತದೆ). ’ನೀವು’ ವಾಹನ ನಿಲ್ದಾಣಕ್ಕೆ ಬಂದು ’ನೀವು’ ಯಾವುದೋ ಒಂದು ಹೋಟೆಲಿನಲ್ಲಿ ಅಥವಾ ಶಾಪಿಂಗ್ ಮಾಲ್‍ನಲ್ಲಿ ಅಧಿಕ ಸಮಯ ವೆಚ್ಚಿಸಿದ್ದರೆ ಪ್ರಾಮಾಣಿಕವಾಗಿ ನಿಮ್ಮ ಪಾರ್ಕಿಂಗ್ ಟಿಕೇಟನ್ನು ಪಂಚ್ ಮಾಡುತ್ತೀರಿ; ’ನೀವು’ ಯಾವುದೇ ಹುದ್ದೆಯಲ್ಲಿದ್ದವರಾದರೂ ಕೂಡಾ. ಸಿಂಗಪುರದಲ್ಲಿ ’ನೀವು’ ಏನೂ ಹೇಳುವುದಿಲ್ಲ. ಹೇಳುತ್ತೀರ? ರಾಮದನ್ ಸಮಯದಲ್ಲಿ (ರಂಜಾನ್ ತಿಂಗಳಿನಲ್ಲಿ) ’ನೀವು’ ದುಬೈನಲ್ಲಿದ್ದರೆ ಸಾರ್ವಜನಿಕವಾಗಿ ಏನನ್ನೂ ತಿನ್ನುವ ಸಾಹಸ ಮಾಡುವುದಿಲ್ಲ. ಝೆಡ್ಡಾದಲ್ಲಿದ್ದಾಗ ನಿಮ್ಮ ತಲೆಯನ್ನು ಮುಚ್ಚಿಕೊಳ್ಳದೇ ಹೊರಗೆ ಹೋಗುವ ಧೈರ್ಯವನ್ನು ’ನೀವು’ ತೋರಲಾರಿರಿ. ’ನೀವು’ ಲಂಡನ್ನಿನ ದೂರವಾಣಿ ಇಲಾಖೆಯ ನೌಕರನೊಬ್ಬನನ್ನು ೧೦ ಪೌಂಡುಗಳಿಗೆ (ಸುಮಾರು ೬೫೦ ರೂಪಾಯಿಗಳಿಗೆ) ಕೊಳ್ಳುವ ಸಾಹಸ ಮಾಡಲಾರಿರಿ; "ನನ್ನ ISD ಮತ್ತು STD ಕರೆಗಳನ್ನು ಇನ್ನೊಬ್ಬರ ಬಿಲ್ಲಿನಲ್ಲಿ ಸೇರಿಸು" ಎನ್ನಲಾರಿರಿ. ’ನೀವು’ ಒಂದು ವೇಳೆ ವಾಷಿಂಗ್‍ಟನ್ನಿನಲ್ಲಿ ಘಂಟೆಗೆ ೫೫ಮೈಲುಗಳಿಗಿಂತ (ಘಂಟೆಗೆ ಸುಮಾರು ೮೮ಕಿ.ಮಿ.) ವೇಗವಾಗಿ ಸಾಗಿ ಅಲ್ಲಿನ ಸಂಚಾರಿ ಪೇದೆಗೆ (Traffic Police/Cop), "ಜಾನ್ತಾ ಹೈ ಸಾಲಾ ಮೈ ಕೌನ್ ಹ್ಞೂ! (ನಾನು ಯಾರೆಂದು ತಿಳಿದಿದೆಯಾ ಮಚ್ಚಾ?) ನಾನು ಇಂಥಹವನು, ಇಂತಹವರ ಮಗ .........ಮೊದಲಾದ್ದು. ನಿನ್ನ ಎರಡು ರೂಪಾಯಿ ತೆಗೆದುಕೊಂಡು ಇಲ್ಲಿಂದ ತೊಲಗು." ಖಂಡಿತ, ’ನೀವು’ ಖಾಲಿ ಎಳನೀರು ಬುರುಡೆಯನ್ನು ಎಲ್ಲೆಂದರಲ್ಲಿ ಬಿಸಾಕದೆ ಕಸದ ತೊಟ್ಟಿಗೆ ನ್ಯೂಝೀಲ್ಯಾಂಡ್ ಅಥವಾ ಆಸ್ಟ್ರೇಲಿಯಾದಲ್ಲಿದ್ದಾಗ ಎಸೆಯುವಿರಿ. ನೀವೇಕೆ, ಟೋಕ್ಯೋದ ಬೀದಿಗಳಲ್ಲಿ ಎಲೆ ಅಡಿಕೆಯ ರಸಗವಳವನ್ನು ಉಗುಳುವುದಿಲ್ಲ? ನೀವೇಕೆ ಪರೀಕ್ಷೆಯನ್ನು ಬರೆಯುವ ಸರದಾರನನ್ನು ಗೊತ್ತು ಮಾಡಿಕೊಳ್ಳುವ ಅಥವಾ ಖೊಟ್ಟಿ ಪ್ರಮಾಣ ಪತ್ರಗಳನ್ನು ಪಡೆಯಲು ಬೋಸ್ಟನ್ನಿನಲ್ಲಿ ಪ್ರಯತ್ನಿಸುವುದಿಲ್ಲ? ನಾವೀಗ ಈಗಲೂ ಕೂಡಾ ಅದೇ ’ನೀವು’ವಿನ ಕುರಿತಾಗಿ ಮಾತನಾಡುತ್ತಿದ್ದೇವೆ. ’ನೀವು’ ಬೇರೆ ದೇಶದ ಕಾನೂನನ್ನು ಗೌರವಿಸಿ ಆ ವಿದೇಶಗಳ ಕಾನೂನುಗಳೊಳಗೆ ಇಮಡಿ ಹೋಗಲು ಶಕ್ಯರು, ಆದರೆ ನಿಮ್ಮ ದೇಶದ ಕಾನೂನಿಗಳಿಗೆ ಅಲ್ಲ. ’ನೀವು’ ಭಾರತದ ನೆಲವನ್ನು ಮುಟ್ಟುತ್ತಿದ್ದಂತೆಯೇ ಪೇಪರ್ ಮತ್ತು ಸಿಗರೇಟಿನ ತುಂಡುಗಳನ್ನು ರಸ್ತೆಯ ಮೇಲೆ ಎಸೆಯಲು ತೊಡಗುತ್ತೀರ. ’ನೀವು’ ಒಬ್ಬ ನಿಷ್ಠ ಮತ್ತು ಗೌರವಾನ್ವಿತ ನಾಗರೀಕನಾಗಿ ಅಪರಿಚಿತ ದೇಶದಲ್ಲಿರಬಹುದಾದರೆ ನಮ್ಮ ದೇಶದಲ್ಲೇಕೆ ಅದೇ ರೀತಿ ವರ್ತಿಸುವುದಿಲ್ಲ? ಒಮ್ಮೆ ಒಂದು ಸಂದರ್ಶನದಲ್ಲಿ ಮುಂಬಯಿಯ ಪ್ರಸಿದ್ಧ ಮಾಜಿ ಮುನ್ಸಿಪಲ್ ಕೌನ್ಸಿಲರಾದ ಶ್ರೀಯುತ ಟೀನಾಯ್ಕರ್ ಒಂದು ವಿಷಯದ ಕುರಿತಾಗಿ ಗಮನ ಸೆಳೆದರು. "ಶ್ರೀಮಂತರು ತಮ್ಮ ನಾಯಿಗಳನ್ನು ಓಣಿಗಳಲ್ಲಿ ಅಲೆದಾಡಲು ಬಿಟ್ಟು ಅವು ತಮ್ಮ ಹೇಸಿಗೆಯನ್ನು ಅಲ್ಲೆಲ್ಲಾ ಉದುರಿಸಲು ಕಾರಣರಾಗುತ್ತಾರೆ" ಎಂದು ಹೇಳಿ ಮುಂದುವರೆಯುತ್ತಾ, "ಆಮೇಲೆ ಅದೇ ವ್ಯಕ್ತಿಗಳು ಮುನ್ಸಿಪಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನಿಮ್ಮ ವ್ಯವಸ್ಥೆ ಸಮರ್ಪಕವಾಗಿಲ್ಲ ಮತ್ತು ನಗರವು ಗಲೀಜಾದ ಕಲ್ಲುಹಾಸುಗಳಿಂದ ಕೂಡಿದೆ ಎಂದು ದೂರುತ್ತಾರೆ. ಅವರು ಅಧಿಕಾರಿಗಳಿಂದ ಏನು ಬಯಸುತ್ತಾರೆ? ಯಾವಾಗ ಅವರ ನಾಯಿಗಳ ಹೊಟ್ಟೆಯಲ್ಲಿ ಗುಡುಗುಡು ಷುರುವಾಗುತ್ತದೆಯೋ ಆಗ ಒಂದು ಕಸಬರಿಗೆಯನ್ನು ಹಿಡಿದು ಅವುಗಳ ಹಿಂದೆ ಅವರು ಸಾಗಬೇಕೆ? ಅಮೇರಿಕದಲ್ಲಿ ಪ್ರತಿಯೊಬ್ಬ ಮಾಲೀಕನು ತನ್ನ ನಾಯಿಯ ಕೆಲಸವಾದ ಮೇಲೆ ಅದನ್ನು ಶುಭ್ರ ಮಾಡಬೇಕಾಗುತ್ತದೆ; ಈ ನಿಯಮ ಜಪಾನಿನಲ್ಲಿಯೂ ಇದೆ. ಅದೇ ಕೆಲಸವನ್ನು ನಮ್ಮ ಭಾರತೀಯ ಪ್ರಜೆ ಇಲ್ಲಿ ಮಾಡಲು ಸಿದ್ಧನಿದ್ದಾನೆಯೇ?" ಅವರು ಹೇಳಿರುವುದು ಸರಿಯಾಗಿದೆ. ನಾವು ಒಂದು ಸರ್ಕಾರವನ್ನು ಆರಿಸಲು ಚುನಾವಣೆಗಳನ್ನು ನಡೆಸುತ್ತೇವೆ; ಆಮೇಲೆ ನಮ್ಮ ಎಲ್ಲಾ ಜವಾಬ್ದಾರಿಯನ್ನೂ ಕಳೆದುಕೊಳ್ಳುತ್ತೇವೆ. ನಾವು ಕುಳಿತುಕೊಂಡು ಪ್ರತಿಯೊಂದು ವಿಷಯದಲ್ಲಿಯೂ ನಮ್ಮ ಸರ್ಕಾರ ನಮಗೆ ಮುದ್ದುಮಾಡುತ್ತಾ ನಮಗೆ ಬೇಕಾದುದೆಲ್ಲವನ್ನೂ ಮಾಡಬೇಕೆಂದು ಬಯಸುತ್ತಾ ನಮ್ಮ ಕೊಡುಗೆ ಏನೂ ಇಲ್ಲದೆ ಅಥವಾ ಸಂಪೂರ್ಣ ಋಣಾತ್ಮಕವಾಗಿರುತ್ತದೆ. ನಾವು ಸರ್ಕಾರದಿಂದ ಸ್ವಚ್ಛತೆಯನ್ನು ಬಯಸುತ್ತೇವೆ ಆದರೆ ನಾವು ಎಲ್ಲಾ ಕಡೆಗಳಲ್ಲಿ ಕಸ ಹಾಕುವುದನ್ನು ಬಿಡುವುದಿಲ್ಲ ಅಥವಾ ಎಲ್ಲಿಯಾದರೂ ಬಿದ್ದಿರುವ ಕಾಗದದ ತುಂಡೊಂದನ್ನು ತೆಗೆದುಕೊಂಡು ಅದನ್ನು ಕಸದ ತೊಟ್ಟಿಯಲ್ಲಿ ಹಾಕುವ ಕೆಲಸವನ್ನು ಮಾಡುವುದಿಲ್ಲ. ನಾವು ರೈಲ್ವೇ ಇಲಾಖೆಯವರು ಸ್ವಚ್ಛವಾದ ಸ್ನಾನಗೃಹಗಳನ್ನು ಒದಗಿಸಬೇಕು ಎಂದು ನಿರೀಕ್ಷಿಸುತ್ತೇವೆ ಆದರೆ ಅವುಗಳ ಸರಿಯಾದ ಬಳಕೆ ಮಾಡುವುದು ಹೇಗೆ ಎನ್ನುವುದನ್ನು ಕಲಿಯುವುದಿಲ್ಲ.  ನಾವು ಇಂಡಿಯನ್ ಏರ್ ಲೈನ್ಸ್ ಮತ್ತು ಏರ್ ಇಂಡಿಯಾ ಸಂಸ್ಥೆಗಳು ಉತ್ತಮವಾದ ಆಹಾರ ಮತ್ತು ಶೌಚಾಲಯ ವ್ಯವಸ್ಥೆಗಳನ್ನು ಒದಗಿಸಬೇಕೆಂದು ಬಯಸುತ್ತೇವೆ ಆದರೆ ನಾವು ಕಸ ಎಸೆಯಲು ಸಿಗುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಇದು ಅಲ್ಲಿನ ಸಿಬ್ಬಂದಿಗೂ ಅನ್ವಯಿಸುತ್ತದೆ ಅವರು ಸಾರ್ವಜನಿಕರು ಹಾಗೆ ಮಾಡುವುದನ್ನು ನಿಷೇದಿಸುವ ಕಾರ್ಯ ನಿರ್ವಹಿಸಬೇಕಾಗಿದ್ದವರಾದರೂ ಸಹ. ಯಾವಾಗ ಸಾಮಾಜಿಕ ಜ್ವಲಂತ ಸಮಸ್ಯೆಗಳ ವಿಷಯ ಬರುತ್ತದೆಯೋ - ಅದು ಮಹಿಳೆಯರಿಗೆ ಸಂಭಂದಿಸಿದ್ದಿರಬಹುದು, ವರದಕ್ಷಿಣೆ ವರೋಪಚಾರವಾಗಿರಬಹುದು, ಹೆಣ್ಣು ಶಿಶುವಾಗಿರಬಹುದು ಅಥವಾ ಇನ್ನೇನಾದರೂ ಆಗಿರಬಹುದು ಆಗೆಲ್ಲಾ ನಾವು ನಮ್ಮ ಪಡಸಾಲೆಯಲ್ಲಿ ಕುಳಿತು ಪ್ರತಿಭಟನೆಯನ್ನು ಮಾಡುತ್ತೇವೆ ಆದರೆ ಮನೆಯೊಳಗೆ ಅದರ ತದ್ವಿರುದ್ಧವಾಗಿ ವರ್ತಿಸುತ್ತೇವೆ. ಇದಕ್ಕೆ ನಮ್ಮ ಸಮರ್ಥನೆ ಏನು?" ನಮ್ಮ ಇಡೀ ವ್ಯವಸ್ಥೆಯೇ ಬದಲಾಗಬೇಕಾಗಿದೆ, ನಾನೊಬ್ಬನೇ ಇದನ್ನನುಸರಿಸಿದರೆ ಏನು ಉಪಯೋಗ? ನಾನು ಮಾತ್ರ ನನ್ನ ಮಗನಿಗೆ ವರದಕ್ಷಿಣೆಯನ್ನು ತೆಗೆದುಕೊಳ್ಳದಿದ್ದ ಮಾತ್ರಕ್ಕೆ ಇಡೀ ವ್ಯವಸ್ಥೆಯೇ ಬದಲಾಗಿ ಬಿಡುತ್ತದೆಯೇ? ಈ ವ್ಯವಸ್ಥೆಯಲ್ಲಿ ಇರುವುದಾದರೂ ಏನು? ನಮಗೆ ಅನುಕೂಲವಾಗುವಂತೆ ಇದರಲ್ಲಿ ನಮ್ಮ ನೆರೆಹೊರೆಯವರು, ಮನೆಯ ಇತರರು, ಇತರೇ ನಗರಗಳು, ಇತರೇ ಜನ ಸಮುದಾಯಗಳು ಮತ್ತು ಸರ್ಕಾರ, ಖಂಡಿತವಾಗಿ ನಾನಲ್ಲ (ಅಥವಾ ’ನೀವು’ ಅಲ್ಲ). ಯಾವಾಗ ನಮ್ಮಿಂದ ಒಂದು ಗುಣಾತ್ಮಕವಾದ ಬದಲಾವಣೆಯು ಬರಬೇಕಾಗಿರುತ್ತದೆಯೋ ಆವಾಗ ನಾವು ನಮ್ಮ ಸಂಸಾರವೆಂಬ ಸುರಕ್ಷಿತ ಕವಚದೊಳಗೆ ಅಡಗಿ ಕುಳಿತು ಯಾರೋ ಒಬ್ಬ ಶುದ್ಧ ಹಸ್ತನಾದವನು ಬಂದು ತನ್ನ ಮಂತ್ರದಂಡದಿಂದ ಈ ವ್ಯವಸ್ಥೆಯಲ್ಲಿ ಪವಾಡ ಸದೃಶ ಬದಲಾವಣೆಗಳನ್ನು ಮಾಡುತ್ತಾನೆಂದು ಕಾದು ಕುಳಿತುಕೊಳ್ಳುತ್ತೇವೆ. ಅಥವಾ ಈ ದೇಶವನ್ನು ಬಿಟ್ಟು ಓಡಿ ಹೋಗುತ್ತೇವೆ. ಸೋಮಾರಿ ಮತ್ತು ಹೇಡಿಯಂತೆ ನಮ್ಮ ಹೆದರಿಕೆಗಳಿಂದ ಪೀಡಿತರಾಗಿ ಅಮೇರಿಕಕ್ಕೆ ಓಡಿಹೋಗಿ ಅವರ ಘನತೆಯಲ್ಲಿ ಬೆಚ್ಚಗಿದ್ದುಕೊಂಡು ಅವರನ್ನು ಹಾಡಿ ಹೊಗಳುತ್ತೇವೆ. ಯಾವಾಗ ನ್ಯೂ ಯಾರ್ಕ ನಮಗೆ ಸುರಕ್ಷಿತವಾಗಿರುವುದಿಲ್ಲವೋ ಆಗ ನಾವು ಇಂಗ್ಲೆಂಡಿಗೆ ಓಡಿ ಹೋಗುತ್ತೇವೆ. ಯಾವಾಗ ಇಂಗ್ಲೆಂಡಿನಲ್ಲಿ ನೌಕರಿಯ ಸಮಸ್ಯೆ ಎದುರಾಗುತ್ತದೆಯೋ ಆವಾಗ ನಮ್ಮ ಮುಂದಿನ ವಿಮಾನ ಯಾನವು ಗಲ್ಫ್ ದೇಶಗಳೆಡೆಗೆ ಇರುತ್ತದೆ. ಯಾವಾಗ ಗಲ್ಫ್ ದೇಶಗಳಲ್ಲಿ ಯುದ್ಧ ಪರಿಸ್ಥಿತಿ ಏರ್ಪಡುವುದೋ ಆವಾಗ ನಾವು ನಮ್ಮನ್ನು ಕಾಪಾಡಿ ನಮ್ಮನ್ನು ಸುರಕ್ಷಿತವಾಗಿ ನಮ್ಮ ಮನೆಗಳಿಗೆ ಮುಟ್ಟಿಸುವಂತೆ ಭಾರತ ಸರ್ಕಾರದ ಮುಂದೆ ಬೇಡಿಕೆಯನ್ನಿರಿಸುತ್ತೇವೆ. ಪ್ರತಿಯೊಬ್ಬರೂ ದೇಶವನ್ನು ತೆಗಳುವುದಲ್ಲದೇ ಅದರ ಮೇಲೆ ಅತ್ಯಾಚಾರ ಮಾಡಲು ಸಿದ್ಧರಾಗಿದ್ದಾರೆ. ಯಾರೊಬ್ಬರೂ ನಮ್ಮ ವ್ಯವಸ್ಥೆಯನ್ನು ಪೋಷಿಸುವ ಬಗ್ಗೆ ಆಲೋಚಿಸುವುದಿಲ್ಲ. ನಮ್ಮ ಮನಸ್ಸಾಕ್ಷಿಯು ಯಾವಾಗಲೋ ಹಣಕ್ಕೆ ಒತ್ತೆಯಾಳಾಗಿಬಿಟ್ಟಿದೆ. ಪ್ರಿಯ ಭಾರತೀಯರೆ, ಈ ಲೇಖನವು ನಿಮ್ಮನ್ನು ದೀರ್ಘವಾದ ಆಲೋಚನೆಗೆ ಹಚ್ಚುತ್ತದೆ, ಮತ್ತು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಲು ಕರೆಯಿತ್ತಿದೆ ಮತ್ತು ಪ್ರತಿಯೊಬ್ಬರ ಅಂತಃಕರಣವನ್ನು ಕಲಕುತ್ತದೆ. ಜೆ.ಎಫ್. ಕೆನಡಿ ತನ್ನ ದೇಶಭಾಂದವರಾದ ಅಮೇರಿಕನ್ನರಿಗೆ ಹೇಳಿದ್ದನ್ನು ನಾನು ಭಾರತೀಯರಿಗೆ ಪ್ರತಿಧ್ವನಿಸುತ್ತಿದ್ದೇನೆ - "ನಾವು ಭಾರತಕ್ಕಾಗಿ ಏನು ಮಾಡಬಲ್ಲವೆಂದು ಕೇಳಿ ಮತ್ತು ಅಮೇರಿಕ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ಇಂದು ಏನಾಗಿವೆಯೋ ಅವುಗಳಂತಾಗಲು ಭಾರತಕ್ಕಾಗಿ ಏನು ಮಾಡಬೇಕೋ ಅದನ್ನು ಮಾಡಿ."  ನಾವೆಲ್ಲರೂ ಭಾರತಕ್ಕೆ ಏನು ಅವಶ್ಯಕತೆ ಇದೆಯೋ ಅದನ್ನು ಮಾಡೋಣ.
 
          ಧನ್ಯವಾದಗಳು,
-      ಒಬ್ಬ ಭಾರತೀಯ.


*****
ವಿ.ಸೂ.: ಈ ಲೇಖನವು,ಡಾll ಅಬ್ದುಲ್ ಕಲಾಂ ಅವರು ನಿಮ್ಮೊಂದಿಗೆ ಮಾತನಾಡುತ್ತಾರೆ – ಒಂದು ಸಂಗ್ರಹ ಗ್ರಂಥ (Dr. Abdul Kalam Speaks to you – A Compilation), ಪ್ರಕಟಣೆ: ಶ್ರೀಸಂತ್ಗಜಾನನ್ಮಹರಾಜ್ತಾಂತ್ರಿಕಮಹಾವಿದ್ಯಾಲಯ, ಶೇಗಾಂವ್ – ೪೪೪೨೦೩, ಬುಲ್ಡಾನಾಜಿಲ್ಲೆ, ಮಹರಾಷ್ಟ್ರರಾಜ್ಯ; ಆಂಗ್ಲಭಾಷೆಯಪುಸ್ತಕದ ೩೫ರಿಂದ ೪೮ನೇ ಪುಟಗಳ ಅನುವಾದದ ಭಾಗ.
 
 
 

Rating
No votes yet

Comments