ಅಮಾವಾಸ್ಯೆಯ ರಾತ್ರಿ (ಕಥೆ)
ಹಲೋ..ಲೋ ಎಲ್ಲೋ ಇದ್ದೀರಾ ಇನ್ನೂ...ಆಗಲೇ ಹತ್ತೂವರೆ ಆಗಿದೆ...ಇನ್ಯಾವಾಗ ನೀವು ಬರೋದು? ಹೊರಡೋದು ಯಾವಾಗ? ಮೊದಲೇ ನಿಮಗೆ ಹೇಳಿದ್ದೆ ತಾನೇ ಹತ್ತು ಗಂಟೆಗೆ ಇಲ್ಲಿ ಬಂದು ಬಿಡಿ ಎಂದು. ರಾಜೇಶ್ ಒಂದೇ ಸಮನೆ ಮೊಬೈಲ್ ನಲ್ಲಿ ತನ್ನ
ಸ್ನೇಹಿತರಿಗೆ ಬೈಯ್ಯುತ್ತಿದ್ದ.
ಪಕ್ಕದಲ್ಲಿದ್ದ ವಿಕ್ರಂ ಬಂದು ಯಾಕೋ ಏನಂತೋ ಅವರದ್ದು? ಇನ್ನು ಎಷ್ಟು ಹೊತ್ತುಅಂತೆ? ನಾನು ನೆನ್ನೆಯೇ ನಿನಗೆ ಹೇಳಿದ್ದೆ ಅವರನ್ನು ನಂಬಬೇಡ ಹೇಳಿದ ಸಮಯಕ್ಕೆ ಬರುವುದಿಲ್ಲ ಎಂದು.
ಇಲ್ಲ ವಿಕ್ಕಿ ಅವರ ಮನೆಯಲ್ಲಿ ಕಳಿಸಲು ಒಪ್ಪುತ್ತಿಲ್ಲವಂತೆ ಇವತ್ತು ಮಹಾಲಯ ಅಮಾವಾಸ್ಯೆ ಪ್ರಯಾಣ ಬೇಡ ಎಂದು ಕೂತಿದ್ದಾರಂತೆ. ಅದಕ್ಕೆ ಅವರನ್ನು ಒಪ್ಪಿಸಲು ಪ್ರಯತ್ನ ಪಡುತ್ತಿದ್ದಾರಂತೆ. ಇನ್ನೊಂದು ಹತ್ತು ನಿಮಿಷ ನೋಡಿ ನಾವು ಹೊರಡೋಣ.
ಅಲ್ಲ ರಾಜೇಶ್ ನಾವು ತಡವಾಗಿ ಬಿಟ್ಟರೆ ಕೊಡಚಾದ್ರಿ ತಲುಪುವ ವೇಳೆಗೆ ತಡ ಆಗುತ್ತದೆ. ನಾವು ಅಲ್ಲಿ ಗಾಡಿ ನಿಲ್ಲಿಸಿ ಅಲ್ಲಿಂದ ಟ್ರೆಕ್ ಮಾಡಿ ಹೋಗುವ ವೇಳೆಗೆ ಬಿಸಿಲು ಬಂದು ಬಿಡುತ್ತದೆ. ನಮಗೆ ಬೇಕಾದ ಪ್ರಕೃತಿ ಸೌಂದರ್ಯ ಸವಿಯಲು ಸಿಗುವುದಿಲ್ಲ.
ನೀನು ಹೇಳುವುದು ಸರಿ ವಿಕ್ಕಿ ಆದರೆ ಏನು ಮಾಡುವುದು, ನೋಡ್ತೀನಿ ಇರು ಇನ್ನೊಮ್ಮೆ ಫೋನ್ ಮಾಡ್ತೀನಿ ಎಂದು ಕರೆ ಮಾಡಿದರೆ ಮನೆಯಲ್ಲಿ ಒಪ್ಪಲಿಲ್ಲ ಆದ್ದರಿಂದ ಬರಲು ಆಗುವುದಿಲ್ಲ ಎಂಬ ಉತ್ತರ ಬಂದಿತು. ಅವರಿಗೆ ಮನಸೋ ಇಚ್ಛೆ ಬೈದುಕೊಂಡು ರಾಜೇಶ್ ಮತ್ತು ವಿಕ್ಕಿ ಇಬ್ಬರೇ ಪ್ರಯಾಣ ಬೆಳೆಸಿದರು.
ರಾಜೇಶ್ ಮತ್ತು ವಿಕ್ಕಿ ಬಾಲ್ಯ ಸ್ನೇಹಿತರು. ಇಬ್ಬರಿಗೂ ವಾರಾಂತ್ಯ ಹಾಗೂ ರಜಾ ಬಂತೆಂದರೆ ಎಲ್ಲಾದರೂ ಪ್ರಯಾಣ ಬೆಳೆಸಿ ಬಿಡುತ್ತಿದ್ದರು. ಇಬ್ಬರಿಗೂ ಫೋಟೋಗ್ರಫಿಯ ಹುಚ್ಚು. ಹಾಗಾಗಿ ಇವರಿಬ್ಬರ ಹೊಂದಾಣಿಕೆ ಚೆನ್ನಾಗಿ ಮೂಡಿತ್ತು. ಅದೇ ರೀತಿ ಈ ಬಾರಿ ಕೊಡಚಾದ್ರಿಗೆ ಪಯಣ ಬೆಳೆಸುವ ಎಂದು ನಿರ್ಧರಿಸಿದ್ದರು. ಇವರಿಬ್ಬರ ವಿಷಯ ತಿಳಿದಿದ್ದ ಇನ್ನಿಬ್ಬರ ಸ್ನೇಹಿತರು ಈ ಬಾರಿ ತಾವು ಕೂಡ ಬರುವುದಾಗಿ ತಿಳಿಸಿದ್ದರು. ಆದರೆ ಆ ದಿನ ಮಹಾಲಯ ಅಮಾವಾಸ್ಯೆ ಇದ್ದಿದ್ದರಿಂದ ಅವರ ಮನೆಯಲ್ಲಿ ಕಳಿಸಲು ಒಪ್ಪಲಿಲ್ಲ. ಹಾಗಾಗಿ ವಿಕ್ಕಿ ಮತ್ತು ರಾಜೇಶ್ ಇಬ್ಬರೇ ಹೊರಡಲು ನಿರ್ಧರಿಸಿ ಕಾರನ್ನು ನೆಲಮಂಗಲದ ಹಾದಿಯಲ್ಲಿ ತಿರುಗಿಸಿದ್ದರು.
ದಾರಿಯಲ್ಲಿ ಡಾಭ ಒಂದರಲ್ಲಿ ಊಟ ಮಾಡಿ ಹೊರಡುವ ಹೊತ್ತಿಗೆ ಸಮಯ ಸರಿಯಾಗಿ ಹನ್ನೊಂದೂವರೆ ಆಗಿತ್ತು. ಕಾರು ಕುಣಿಗಲ್ ಹಾದಿಯಲ್ಲಿ ಸಾಗುತ್ತಿತ್ತು. ಇಬ್ಬರೂ ಅದೂ ಇದೂ ಮಾತಾಡುತ್ತ ಮಾತು ಅಮಾವಾಸ್ಯೆಯ ಕಡೆ ಹೊರಳಿತ್ತು. ಅದೇನಪ್ಪ ಜನ ಈ ಅಮಾವಾಸ್ಯೆ ದೆವ್ವ ಭೂತ ಪಿಶಾಚಿ ಎಲ್ಲ ಇನ್ನೂ ನಂಬುತ್ತಾರ? ಎಂಥಹ ಹುಚ್ಚು ಜನರಪ್ಪ? ಹಾಗಿದ್ದರೆ ರಾತ್ರಿ ಹೊತ್ತು ಯಾರೂ ಓಡಾಡುವುದಿಲ್ಲ ಎಂದ ವಿಕ್ಕಿ. ರಾಜೇಶ್ ಸ್ಟೇರಿಂಗ್ ಅನ್ನು ತಿರುಗಿಸುತ್ತಾ ಹಾಗಲ್ಲ ವಿಕ್ಕಿ ಜನಕ್ಕೆ ಅಮಾವಾಸ್ಯೆ ಎಂದರೆ ಅದೇನೋ ವಿಚಿತ್ರ ಭಯ. ಅದು ದೆವ್ವ ಪಿಶಾಚಿ ಎಂದಷ್ಟೇ ಅಲ್ಲ, ಅವತ್ತೇನೋ ಕೆಟ್ಟದ್ದು ಆಗುತ್ತದೆ ಎಂದು. ಅದಕ್ಕೆ ಸಾಕ್ಷಿ ಎಂಬಂತೆ ಅವತ್ತಿನ ದಿನ ಅವರಿಗೆ ಕಾಕತಾಳೀಯವಾಗಿ ಏನೋ ಕೆಡುಕು ಸಂಭವಿಸಿರುತ್ತದೆ ಹಾಗಾಗಿ ಜನ ನಂಬುತ್ತಾರೆ. ಅಷ್ಟೇಕೆ, ನೋಡು ಮಾಮೂಲಿ ದಿನಗಳಲ್ಲಿ ಈ ರಸ್ತೆ ಗಿಜಿಗುಡುತ್ತಿರುತ್ತದೆ. ಆದರೆ ಇವತ್ತು ನೋಡು ಎಷ್ಟು ಖಾಲಿ ಇದೆ. ಅದೂ ಅಲ್ಲದೆ ನಾಳೆ ನಾಡಿದ್ದು ವಾರಾಂತ್ಯದ ರಜೆ ಇದೆ. ಸತತವಾಗಿ ಮೂರು ದಿವಸ ರಜೆ. ಆದರೂ ಇವತ್ತು ಅಮಾವಾಸ್ಯೆ ಎಂದು ಜನ ಹೊರಟಿರುವುದಿಲ್ಲ. ಅದೇ ನಾಳೆ ಬೆಳಿಗ್ಗೆ ನೋಡು ತುಂಬಿ ಹೋಗಿರುತ್ತದೆ.
ಅದು ಸರಿ ರಾಜೇಶ್ ಆದರೆ ಅದೇನೋಪ್ಪ ನನಗೆ ಈ ದೆವ್ವ ಪಿಶಾಚಿ ಎಂದರೆ ಇವತ್ತಿಗೂ ನಂಬಿಕೆ ಇಲ್ಲ, ಒಂದು ವೇಳೆ ನಾನೇ ಪ್ರತ್ಯಕ್ಷವಾಗಿ ನೋಡಿದರೆ ಆಗ ನಂಬುತ್ತೇನೆ ಎಂದು ಜೋರಾಗಿ ನಕ್ಕು, ತಕ್ಷಣ ಗಾಭರಿಯಿಂದ ಹೇ ರಾಜೇಶ್ ಅಲ್ಲಿ ನೋಡು ಎಂದು ರಸ್ತೆಯ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ಕಂಡ ಆಕೃತಿಯ ಕಡೆ ತೋರಿಸಿದ. ರಾಜೇಶ್ ತಕ್ಷಣ ಅತ್ತ ನೋಡಿದ ಆದರೆ ಅದೇ ಸಮಯದಲ್ಲಿ ಪಕ್ಕದಲ್ಲಿ ಲಾರಿಯೊಂದು ಹಾದು ಹೋಗಿದ್ದರಿಂದ ಅದರ ಬೆಳಕಿನಲ್ಲಿ ಏನೂ ಕಾಣಲಿಲ್ಲ. ಆ ಲಾರಿ ಹೋದ ನಂತರ ವಿಕ್ಕಿಯ ಕಡೆ ತಿರುಗಿ ಯಾಕೋ ಏನಾಯ್ತೋ ಏನು ನೋಡಿದೆಯೋ? ಅದೂ ಅದೂ ಅಲ್ಲೊಂದು ಏನೂ ಇಲ್ಲ ಬಿಡು ಎಂದು ಮುಂದೆ ನೋಡಿ ಮತ್ತೊಮ್ಮೆ ಹೌಹಾರಿ ಅಲ್ಲಿ ನೋಡು ರಾಜೇಶ್ ಎಂದು ಕಿರುಚಿದ, ಈ ಬಾರಿ ರಾಜೇಶ್ ವಿಕ್ಕಿ ತೋರಿಸಿದ ಕಡೆ ನೋಡಿದರೆ ಅಲ್ಲೊಂದು ಅಸ್ತಿಪಂಜರದ ಆಕೃತಿ ಕಂಡಿತು ಒಂದು ಕ್ಷಣ ರಾಜೇಶ್ ಗೆ ಗಾಭರಿ ಆದರೂ ಮರುಕ್ಷಣದಲ್ಲೇ ಹೇ ವಿಕ್ಕಿ ಅದು ಅಪಘಾತದ ಸ್ಥಳ ಎಂಬ ಬೋರ್ಡ್ ಅಷ್ಟೇ ಎಂದು ಮತ್ತೆ ರಸ್ತೆಯ ಕಡೆ ನೋಡುವಷ್ಟರಲ್ಲಿ ಅಚಾನಕ್ಕಾಗಿ ಅವನ ಕಾರಿಗೆ ಯಾರೋ ಅಡ್ಡ ಬಂದಂತಾಗಿ ಸಡನ್ನಾಗಿ ಬ್ರೇಕ್ ಒತ್ತಿದ.
ಸಡನ್ನಾಗಿ ಬ್ರೇಕ್ ಒತ್ತಿದ ಕಾರಣ ಕಾರು ಸ್ವಲ್ಪ ದೂರ ಉಜ್ಜಿಕೊಂಡು ಹೋಗಿ ನಿಂತಿತು. ಆ ರಭಸಕ್ಕೆ ವಿಕ್ಕಿ ಡಾಶ್ ಬೋರ್ಡ್ ಗೆ ಗುದ್ದಿ ಹಿಂದಕ್ಕೆ ಬಂದರೆ, ರಾಜೇಶ್ ಸ್ಟೇರಿಂಗ್ ಗೆ ಗುದ್ದಿ ಹಿಂದಕ್ಕೆ ಬಂದ. ವಿಕ್ಕಿ ಗಾಭರಿಯಿಂದ ಯಾಕೋ ರಾಜೇಶ್ ಹಾಗೆ ಸಡನ್ನಾಗಿ ಬ್ರೇಕ್ ಒತ್ತಿದೆ. ಇದ್ದಕ್ಕಿದ್ದಂತೆ ಏನಾಯಿತು. ರಾಜೇಶ್ ಗಾಭರಿಯಿಂದ ವಿಕ್ಕಿ ಕಡೆ ನೋಡಿ ಅದೇನೋ ಹಾಗೆ ಕೇಳ್ತೀಯ ಇದ್ದಕ್ಕಿದ್ದಂತೆ ಕಾರಿಗೆ ಯಾರೋ ಅಡ್ಡ ಬಂದಿದ್ದು ಗಮನಿಸಲಿಲ್ಲವ ನೀನು ಎಂದ. ರಾಜೇಶ್ ಏನು ಹೇಳ್ತಾ ಇದ್ದೀಯ ನೀನು ಯಾರೂ ಅಡ್ಡ ಬರಲಿಲ್ಲವಲ್ಲ, ಬಹುಶಃ ನಿನಗೆ ನಿದ್ದೆ ಬರುತ್ತಿರಬೇಕು ಒಂದು ಕೆಲಸ ಮಾಡು ನೀನು ಈ ಕಡೆ ಬಾ ನಾನು ಗಾಡಿ ಓಡಿಸುತ್ತೇನೆ ಎಂದ ವಿಕ್ಕಿ.
ರಾಜೇಶ್ ಗೆ ತನ್ನ ಡ್ರೈವಿಂಗ್ ಬಗ್ಗೆ ಅಪಾರ ಆತ್ಮ ವಿಶ್ವಾಸ ಅದೂ ನಿಜವೂ ಹೌದಾಗಿತ್ತು. ಏಕೆಂದರೆ ಅವನು ಡ್ರೈವಿಂಗ್ ಸೀಟಿನಲ್ಲಿ ಕುಳಿತನೆಂದರೆ ಅವನು ಪಕ್ಕಾ. ಆದ್ದರಿಂದ ಅವನು ವಿಕ್ಕಿ ಕಡೆ ನೋಡಿ ವಿಕ್ಕಿ ನನ್ನ ಡ್ರೈವಿಂಗ್ ಬಗ್ಗೆ ನಿನಗೆ ಗೊತ್ತಿಲ್ವಾ? ಅದೇನೋ ಅಡ್ಡ ಬಂದ ಹಾಗಾಯ್ತು ಕಣೋ ಅದಕ್ಕೆ ಬ್ರೇಕ್ ಹಾಕಿದೆ. ಸುಮ್ಮ ಸುಮ್ಮನೆ ನಾನೇಕೆ ಬ್ರೇಕ್ ಹಾಕಲಿ ಎಂದು ಮತ್ತೆ ಕಾರ್ ಸ್ಟಾರ್ಟ್ ಮಾಡುತ್ತಾ ಹೊರಟ.
ಸ್ವಲ್ಪ ದೂರ ಬಂದ ಮೇಲೆ ಒಂದು ಟೀ ಅಂಗಡಿ ಕಂಡಿತು. ಆದರೆ ಟೀ ಅಂಗಡಿ ರಸ್ತೆಯ ಆ ಬದಿಗೆ ಇತ್ತು. ಇರಲಿ ಎಂದು ಕಾರನ್ನು ನಿಲ್ಲಿಸಿ ರಸ್ತೆ ದಾಟಿ ಹೋಗಿ ಟೀ ಕುಡಿದು ಸಮಯ ನೋಡಿದರೆ ಮಧ್ಯ ರಾತ್ರಿ ಕಳೆದು ಆಗಲೇ ಒಂದು ಗಂಟೆ ದಾಟಿತ್ತು. ಟೀ ಅಂಗಡಿಯವನಿಗೆ ದುಡ್ಡನ್ನು ಕೊಟ್ಟು ಮತ್ತೆ ಕಾರಿನ ಬಳಿ ಬಂದು ರಾಜೇಶ್ ನಾನು ಸ್ವಲ್ಪ ದೂರ ಓಡಿಸ್ತೀನಿ ನೀನು ಕೂತ್ಕೋ ಎಂದ ವಿಕ್ಕಿ. ಸರಿ ಎಂದು ರಾಜೇಶ್ ಪಕ್ಕಾ ಸೀಟಿನಲ್ಲಿ ಕೂಡಲು ಕಾರಿನ ಮುಂಭಾಗದಿಂದ ಬರಲು ನೋಡಿದ. ಆಗಲೇ ಕಾರಿನ ಬಾನೆಟ್ ಮೇಲೆ ಅವನ ದೃಷ್ಟಿ ಹರಿಯಿತು. ಕೂಡಲೇ ವಿಕ್ಕಿಯನ್ನು ಕರೆದು ಇಲ್ಲಿ ನೋಡು ಬಾ ಎಂದು ತೋರಿಸಿದ. ಮುಂದಿನ ಬಾನೆಟ್ ಹಾಗೂ ಬಂಪರ್ ಮೇಲೆ ರಕ್ತದ ಕಲೆ ಇದ್ದವು!!! ಇಬ್ಬರೂ ಗಾಭರಿಯಿಂದ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ವಿಕ್ಕಿ ನಾನು ಆಗಲೇ ಹೇಳಲಿಲ್ಲವ ಯಾರೋ ಕಾರಿಗೆ ಅಡ್ಡ ಬಂದಿದ್ದಾರೆ ಎಂದು. ಯಾರು ಬಂದಿದ್ದಾರೋ ಅವರ ಗತಿ ಏನಾಗಿದೆಯೋ ಎಂದು ರಾಜೇಶ್ ಹಣೆಯ ಮೇಲೆ ಮೂಡಿದ ಬೆವರನ್ನು ಒರೆಸಿಕೊಂಡ.
ವಿಕ್ಕಿಗೂ ರಾಜೇಶನ ಮಾತು ಕೇಳಿ ಭಯ ಆಯಿತು. ಆದರೂ ಸಾವರಿಸಿಕೊಂಡು ರಾಜೇಶ್ ಬಹುಷಃ ಯಾವುದೋ ನಾಯಿ ಅಡ್ಡ ಬಂದಿರಬಹುದು ಅಷ್ಟೇ ಎಂದ, ರಾಜೇಶನಿಗೂ ಇರಬಹುದು ಎಂದೆನೆಸಿ ಮತ್ತೆ ಮುಂದೆ ಹೊರಟರು. ಅಲ್ಲಿಂದ ಸ್ವಲ್ಪ ದೂರ ಬಂದಿದ್ದರು ಅಷ್ಟರಲ್ಲಿ ಮುಂದೆ ಯಾರೋ ರಸ್ತೆಯ ಬದಿಯಲ್ಲಿ ನಿಂತು ತಮ್ಮ ಕಾರಿಗೆ ಕೈ ಅಡ್ಡ ಹಾಕುತ್ತಿದ್ದದ್ದು ಕಂಡು ಬಂತು. ಕಾರಿನ ಬೆಳಕು ಅವರ ಮೇಲೆ ಬಿದ್ದಾಗ ಗೊತ್ತಾಯಿತು ಅಡ್ಡ ಹಾಕುತ್ತಿರುವ ವ್ಯಕ್ತಿ ಪೋಲಿಸ್ ದಿರಿಸು ಧರಿಸಿದ್ದಾನೆ. ತಕ್ಷಣ ವಿಕ್ಕಿ ಆಕ್ಸಲರೆಟರ್ ಮೇಲಿಂದ ಕಾಲು ತೆಗೆದ, ಕಾರು ನಿಧಾನವಾಯಿತು. ರಾಜೇಶ್ ಮತ್ತು ವಿಕ್ಕಿ ಮತ್ತೆ ಒಬ್ಬರ ಮುಖ ಮತ್ತೊಬ್ಬರು ಪ್ರಶ್ನಾರ್ಥಕವಾಗಿ ನೋಡಿದರು.
ಕಾರು ನಿಧಾನವಾಗಿ ಪೋಲಿಸ್ ಬಳಿ ಬಂದು ನಿಂತಿತು. ರಾಜೇಶ್ ಕಾರಿನ ಗ್ಲಾಸ್ ಇಳಿಸಿ ಪೋಲಿಸನ ಕಡೆ ನೋಡಿದ. ಕತ್ತಲಲ್ಲಿ ಅವನ ಮುಖ ಸರಿಯಾಗಿ ಕಾಣಲಿಲ್ಲ. ಆದರೆ ಅವನು ಪೇದೆ ಎಂದು ಗೊತ್ತಾಯಿತು. ರಾಜೇಶ್ ಗಾಭಾರಿಯಿಂದಲೇ ಏನು ಸರ್ ಎಂದ. ಆ ವ್ಯಕ್ತಿ ಏನೂ ಇಲ್ಲ ಸರ್ ನಾನು ಇಲ್ಲೇ ಪಕ್ಕದ ಹಳ್ಳಿಗೆ ಹೋಗಬೇಕಿತ್ತು ಸ್ವಲ್ಪ ಡ್ರಾಪ್ ಕೊಡುತ್ತೀರಾ ಎಂದ. ಮತ್ತೆ ವಿಕ್ಕಿ ರಾಜೇಶ್ ವಿಕ್ಕಿ ಒಬ್ಬರನ್ನೊಬ್ಬರು ನೋಡಿಕೊಂಡು ಒಲ್ಲದ ಮನಸಿನಿಂದಲೇ ಬನ್ನಿ ಎಂದು ಹಿಂದಿನ ಸೀಟಿನಲ್ಲಿ ಕೂಡಿಸಿಕೊಂಡರು.
ಕಾರು ನಿಧಾನವಾಗಿ ಮುಂದಕ್ಕೆ ಹೊರಟಿತು. ವಿಕ್ಕಿ ಪೇದೆಯನ್ನು ಕುರಿತು ಏನು ಸರ್ ಇಷ್ಟು ಹೊತ್ತಿನಲ್ಲಿ ನಡೆದು ಹೋಗುತ್ತಿದ್ದೀರಿ? ಹೌದು ರೀ ಇವತ್ತು ಮಹಾಲಯ ಅಮಾವಾಸ್ಯೆ ಇತ್ತಲ್ವ ಸ್ನೇಹಿತರ ಮನೆಯಲ್ಲಿ ವಿಶೇಷ ಪೂಜೆ ಹಾಗೂ ಊಟ ಇತ್ತು ಕೆಲಸ ಮುಗಿಸಿ ಊಟ ಮುಗಿಸಿ ಹೊರಡುವ ಹೊತ್ತಿಗೆ ಲೇಟ್ ಆಯ್ತು ಹಾಗಾಗಿ ನಡೆದು ಬರುತ್ತಿದ್ದೆ ಎಂದ. ಮತ್ತೆ ವಿಕ್ಕಿ ಕೇಳಿದ, ಸಾರ್ ಯಾವ ಹಳ್ಳಿ ನಿಮ್ಮದು? ಎಷ್ಟು ದೂರ ಇದೆ? ಅದಕ್ಕೆ ಆ ಪೇದೆ ಇಲ್ಲೇ ಪಕ್ಕದಲ್ಲೇ ಎಂದ. ಆದಷ್ಟು ಬೇಗ ಆ ಪೇದೆಯನ್ನು ಇಳಿಸಿ ಬಿಡೋಣ ಎಂದುಕೊಂಡು ವಿಕ್ಕಿ ಕಾರಿನ ವೇಗವನ್ನು ಹೆಚ್ಚಿಸಿದ.
ಪೇದೆ ಕಾರನ್ನು ಹತ್ತಿ ಬಹಳ ಹೊತ್ತಾಗಿತ್ತು ಆದರೂ ಇಳಿಯುವ ಮಾತೇ ಆಡಲಿಲ್ಲ.. ಮತ್ತೊಮ್ಮೆ ವಿಕ್ಕಿ ಸರ್ ಎಲ್ಲಿ ಸರ್ ನಿಮ್ಮ ಹಳ್ಳಿ ಎಂದು ಕೇಳಿದ್ದಕ್ಕೆ ಮತ್ತೊಮ್ಮೆ ಆ ಪೇದೆ ಇಲ್ಲೇ ಪಕ್ಕದಲ್ಲೇ ಎಂದು ಉತ್ತರಿಸಿದ. ಆಗಲೇ ಪೇದೆ ಕಾರನ್ನು ಹತ್ತಿ ಸುಮಾರು ಮುಕ್ಕಾಲು ಗಂಟೆ ಆಗಿತ್ತು, ಪಕ್ಕದಲ್ಲೇ ಪಕ್ಕದಲ್ಲೇ ಎಂದು ಸುಮಾರು ಐವತ್ತು ಕಿಮೀ ಬಂದಾಗಿತ್ತು. ರಾಜೇಶ್ ರಸ್ತೆಯನ್ನೇ ತದೇಕಚಿತ್ತದಿ೦ದನೋಡುತ್ತಿದ್ದ, ಪೇದೆ ಕಾರು ಹತ್ತಿದಾಗಿನಿಂದ ರಸ್ತೆಯಲ್ಲಿ ಬೇರೆ ಯಾವುದೇ ಗಾಡಿ ಕಾಣಿಸಿರಲಿಲ್ಲ. ಅಷ್ಟೇ ಅಲ್ಲದೆ ರಸ್ತೆಯ ಅಕ್ಕಪಕ್ಕದಲ್ಲಿ ಯಾವುದೇ ಬೋರ್ಡ್ ಆಗಲಿ, ಮೈಲುಗಲ್ಲುಗಳಾಗಲಿ ಯಾವುದೇ ಹಳ್ಳಿಗಳಾಗಲಿ ಕಾಣಿಸಿರಲಿಲ್ಲ. ಪೇದೆ ನೋಡಿದರೆ ಸುಮಾರು ಒಂದು ತಾಸಿನಿಂದ ಪಕ್ಕದಲ್ಲೇ ಪಕ್ಕದಲ್ಲೇ ಎಂದು ಹೇಳಿಕೊಂಡೆ ಬರುತ್ತಿದ್ದಾನೆ.
ರಾಜೇಶನಿಗೆ ಯಾಕೋ ಅನುಮಾನ ಕಾಡಲು ಶುರುವಾಗಿ ಸ್ವಲ್ಪ ಗಡುಸಾಗಿಯೇ ಸರ್ ಆಗಿನಿಂದ ಪಕ್ಕದಲ್ಲೇ ಪಕ್ಕದಲ್ಲೇ ಎಂದು ಹೇಳಿಕೊಂಡೆ ಬರುತ್ತಿದ್ದೀರ. ಇನ್ನೂ ಎಷ್ಟು ದೂರ ಎಂದು ಸರಿಯಾಗಿ ಹೇಳಿರಿ ಎಂದು ಒಮ್ಮೆ ಹಿಂದಕ್ಕೆ ತಿರುಗಿದ. ತಕ್ಷಣ ಪೇದೆಯನ್ನು ಕಂಡು ಗಾಭರಿಯಿಂದ ಸರ್ ಯಾಕೆ ಏನಾಯಿತು ಎಂದು ಕೇಳಿದ. ರಾಜೇಶನ ಗಾಭರಿ ನೋಡಿ ವಿಕ್ಕಿ ಕಾರನ್ನು ನಿಧಾನವಾಗಿ ರಸ್ತೆಯ ಪಕ್ಕಕ್ಕೆ ಎಳೆದು ನಿಲ್ಲಿಸಿ ಹಿಂದಕ್ಕೆ
ತಿರುಗಿ ನೋಡಿದರೆ ಪೇದೆ ಕಾಲುಗಳು ರಕ್ತಸಿಕ್ತವಾಗಿದ್ದವು, ತಲೆ ಒಡೆದು ರಕ್ತ ಸುರಿಯುತ್ತಿತ್ತು. ರಾಜೇಶ್ ವಿಕ್ಕಿ ಇಬ್ಬರೂ ಒಟ್ಟಿಗೆ ಗಾಭರಿಯಿಂದ ಸರ್ ಸರ್ ಏನಾಯಿತು ಏನಿದು ರಕ್ತ ಎಂದು ಕೇಳಿದ್ದಕ್ಕೆ ಆ ಪೇದೆ ಮುಖದ ಮೇಲೆ ಸುರಿಯುತ್ತಿದ್ದ ರಕ್ತವನ್ನು
ಕೈಯಿಂದ ಒರೆಸಿಕೊಂಡು ಒಮ್ಮೆ ಅವರಿಬ್ಬರ ಕಡೆ ತೀಕ್ಷ್ಣವಾಗಿ ನೋಡಿ ಅಲ್ರೋ ನನ್ನ ಪಾಡಿಗೆ ನಾನು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ನನ್ನನ್ನು ಗುದ್ದಿ ನನ್ನನ್ನು ಸಾಯಿಸಿ ಈಗ ನೋಡಿದರೆ ಯಾಕೆ ರಕ್ತ ಎಂದು ಕೇಳುತ್ತಿದ್ದೀರಾ ಎಂದು ಕಿರುಚಿ
ವಿಕ್ಕಿ ಮತ್ತು ರಾಜೇಶರ ಕುತ್ತಿಗೆಗೆ ಕೈ ಹಾಕಿದ. ಅವನ ಪಟ್ಟು ಬಿಗಿಯಾಗುತ್ತಿದ್ದಂತೆ ಇಬ್ಬರ ಕಣ್ಣು ಕತ್ತಲಾಯಿತು.
ಬೆಳಿಗ್ಗೆ ಸೂರ್ಯನ ಪ್ರಖರವಾದ ಕಿರಣಗಳು ಇಬ್ಬರ ಕಣ್ಣ ಮೇಲೆ ಬಿದ್ದು ಎದ್ದು ನೋಡಿದರೆ ಇಬ್ಬರೂ ಹೌಹಾರಿದರು. ನೋಡಿದರೆ ತಾವು ಮಲಗಿರುವುದು ಯಾವುದೋ ಒಂದು ಬಯಲಲ್ಲಿ. ಅಲ್ಲೇ ಪಕ್ಕದಲ್ಲಿ ತಮ್ಮ ಕಾರು ನಿಂತಿತ್ತು. ತಾವು ಎಲ್ಲಿದ್ದೀವಿ ಏನು ಒಂದೂ ಗೊತ್ತಾಗಲಿಲ್ಲ. ರಾತ್ರಿ ಕತ್ತಿನ ಹಿಡಿತದಿಂದ ಇಬ್ಬರ ಕುತ್ತಿಗೆಯೂ ನೋಯುತ್ತಿತ್ತು. ನಿಧಾನವಾಗಿ ಇಬ್ಬರೂ ಕಾರಿನ ಬಳಿ ಬಂದರೆ ರಾತ್ರಿ ನೋಡಿದ ರಕ್ತದ ಕಲೆ ಹಾಗೆಯೇ ಇತ್ತು. ಅಲ್ಲೇ ಪಕ್ಕದಲ್ಲಿ ಸಣ್ಣ ಹೊಂಡದಲ್ಲಿ ನೀರಿತ್ತು. ರಾಜೇಶ್ ಕಾರಿನ ಡಿಕ್ಕಿ ತೆರೆದು ಅದರಲ್ಲಿದ್ದ ಕ್ಯಾನ್ ತಂದು ಅದರಲ್ಲಿ ನೀರು ತುಂಬಿ ರಕ್ತದ ಕಲೆಗಳನ್ನು ತೊಳೆದ. ಹಿಂದಿನ ಸೀಟಿನ ಕೆಳಗಿದ್ದ ಮ್ಯಾಟ್ ಮೇಲೂ ರಕ್ತದ ಕಲೆಗಳಿದ್ದವು. ಅದನ್ನೂ ತೊಳೆದ. ವಿಕ್ಕಿ ಮಾತ್ರ ಗರ ಬಡಿದವನಂತೆ ನಿಂತು ಅದೆಲ್ಲವನ್ನೂ ನೋಡುತ್ತಿದ್ದ. ರಾಜೇಶ್ ಎಲ್ಲವನ್ನೂ ತೊಳೆದು ವಿಕ್ಕಿಯ ಪಕ್ಕಕೆ ಬಂದು ವಿಕ್ಕಿ ಮೊದಲು ನಡಿ ಇಲ್ಲಿಂದ ಹೊರಡೋಣ ಎಂದು ಅವನ ಕೈಯನ್ನು ಹಿಡಿದು ಅಲುಗಾಡಿಸಿದ. ಇಬ್ಬರೂ ಕಾರಿನಲ್ಲಿ ಕುಳಿತು ಹೊರಟರು.
ಸುಮಾರು ದೂರ ಎಲ್ಲಿಯೂ ರಸ್ತೆಯೇ ಕಾಣಲಿಲ್ಲ. ವಿಕ್ಕಿ ರಾಜೇಶ್ ನನ್ನು ಕುರಿತು ರಾಜೇಶ್ ನಾವು ನೆನ್ನೆ ರಾತ್ರಿ ಒಬ್ಬನನ್ನು ಕೊಂದಿದ್ದೇವೆ ಕಣೋ. ಅವನೇ ದೆವ್ವವಾಗಿ ಬಂದು ನಮ್ಮನ್ನು ಕಾಡಿದ್ದಾನೆ ಕಣೋ. ಒಂದು ವೇಳೆ ಪೊಲೀಸರಿಗೆ ವಿಷಯ ಗೊತ್ತಾದರೆ ಏನೋ ಮಾಡುವುದು?
ವಿಕ್ಕಿ ಸುಮ್ಮನೆ ತಲೆ ಕೆಡಿಸಿಕೊಳ್ಲಬೇಡ. ನೆನ್ನೆ ರಾತ್ರಿ ನಾನು ಗುದ್ದಿದಾಗ ಅಲ್ಲಿ ಬೇರೆ ಯಾವುದೇ ಗಾಡಿ ಆಗಲಿ ಜನ ಸಂಚಾರವಾಗಲಿ ಇರಲಿಲ್ಲ. ಹಾಗಾಗಿ ಆ ಆಕ್ಸಿಡೆಂಟ್ ಹೇಗಾಗಿದೆ ಎಂದು ಗೊತ್ತಾಗುವುದಿಲ್ಲ. ಮೊದಲು ನಾವು ಎಲ್ಲಿದ್ದೀವಿ ಎಂದು ತಿಳಿಯಬೇಕು ಏನು ಆಲೋಚಿಸುವಷ್ಟರಲ್ಲಿ ರಸ್ತೆ ಕಂಡಿತು. ಸ್ವಲ್ಪ ದೂರ ಬರುವ ಹೊತ್ತಿಗೆ ಎದುರುಗಡೆ ದೊಡ್ಡದಾದ ಬೋರ್ಡ್ ಕಂಡಿತು.
ಅದರಲ್ಲಿ ಕೋಲಾರ, ಹೊಸಕೋಟೆ, ಬೆಂಗಳೂರು ಎಂದಿತ್ತು. ತಕ್ಷಣ ಇಬ್ಬರಿಗೂ ಮೈಎಲ್ಲ ಬೆವರು ಕಿತ್ತುಕೊಂಡಿತು. ತಕ್ಷಣ ಗಾಡಿ ಪಕ್ಕಕ್ಕೆ ನಿಲ್ಲಿಸಿ ಅಲ್ಲಿಯೇ ನಡೆದು ಹೋಗುತ್ತಿದ್ದವನನ್ನು ನಿಲ್ಲಿಸಿ ಸ್ವಾಮಿ ಇದು ಯಾವ ಊರು ಎಂದು ಕೇಳಿದ್ದಕ್ಕೆ ಅವನು ಇಬ್ಬರನ್ನೂ ಒಮ್ಮೆ ವಿಚಿತ್ರವಾಗಿ ನೋಡಿ ಇದು ನರಸಾಪುರ ಎಂದ.
ಓಹೋ ರಾತ್ರಿ ಆ ದೆವ್ವವೇ ನಮ್ಮನ್ನು ದಾರಿ ತಪ್ಪಿಸಿ ಇಲ್ಲಿಗೆ ಕರೆದುಕೊಂಡು ಬಂದಿದೆ ಎಂದು ಅರಿವಾಗಿ ಗಾಡಿಯನ್ನು ಬೆಂಗಳೂರಿನ ಕಡೆ ತಿರುಗಿಸಿದರು.
ಮನೆಗೆ ಬಂದು ಮರುದಿನ ದಿನಪತ್ರಿಕೆಯಲ್ಲಿ ಹಿ೦ದಿನ ರಾತ್ರಿಯ ಆಕ್ಸಿಡೆಂಟ್ ಬಗ್ಗೆ ಎಲ್ಲಾದರೂ ಸುದ್ದಿ ಇದೆಯಾ ಎಂದು ಹುಡುಕುತ್ತಿದ್ದಾಗ ಇವರಿಗೆ ಬೇಕಾದ ಸುದ್ದಿ ಸಿಕ್ಕಿತು. ಅದರಲ್ಲಿ ಹೀಗಿತ್ತು. ಮೊನ್ನೆ ಮಧ್ಯರಾತ್ರಿಯ ನಂತರ ಕುಣಿಗಲ್ - ಮಂಗಳೂರು ರಸ್ತೆಯಲ್ಲಿ ಪೋಲಿಸ್ ಪೇದೆಯೊಬ್ಬ ಅಪಘಾತದಲ್ಲಿ ಮೃತ ಪಟ್ಟಿದ್ದಾನೆ. ಆದರೆ ಈ ಅಪಘಾತಕ್ಕೆ ಕಾರಣ ಯಾರೆಂದು ತಿಳಿದು ಬಂದಿಲ್ಲ. ಪೋಸ್ಟ್ ಮಾರ್ಟಂ ಸಂದರ್ಭದಲ್ಲಿ ಆ ಪೇದೆ ಪಾನಮತ್ತನಾಗಿದ್ದ ಎಂದು ದೃಢ ಪಟ್ಟಿದೆ. ಕುಡಿದ ಅಮಲಿನಲ್ಲಿ ಅವನೇ ಯಾವುದೋ
ಗಾಡಿಗೆ ಅಡ್ಡ ಹೋಗಿ ಸತ್ತಿರಬಹುದು ಎಂದು ಶಂಕಿಸಲಾಗಿದೆ.
ಇಬ್ಬರೂ ಆ ಸುದ್ದಿಯನ್ನು ಓದಿ ತಮ್ಮದೇನೂ ತಪ್ಪಿಲ್ಲ ಎಂದು ನಿಟ್ಟುಸಿರು ಬಿಟ್ಟರು.
Comments
ಉ: ಅಮಾವಾಸ್ಯೆಯ ರಾತ್ರಿ (ಕಥೆ)
In reply to ಉ: ಅಮಾವಾಸ್ಯೆಯ ರಾತ್ರಿ (ಕಥೆ) by makara
ಉ: ಅಮಾವಾಸ್ಯೆಯ ರಾತ್ರಿ (ಕಥೆ)
ಉ: ಅಮಾವಾಸ್ಯೆಯ ರಾತ್ರಿ (ಕಥೆ)
In reply to ಉ: ಅಮಾವಾಸ್ಯೆಯ ರಾತ್ರಿ (ಕಥೆ) by partha1059
ಉ: ಅಮಾವಾಸ್ಯೆಯ ರಾತ್ರಿ (ಕಥೆ)
In reply to ಉ: ಅಮಾವಾಸ್ಯೆಯ ರಾತ್ರಿ (ಕಥೆ) by shridharjs
ಉ: ಅಮಾವಾಸ್ಯೆಯ ರಾತ್ರಿ (ಕಥೆ)
In reply to ಉ: ಅಮಾವಾಸ್ಯೆಯ ರಾತ್ರಿ (ಕಥೆ) by ಗಣೇಶ
ಉ: ಅಮಾವಾಸ್ಯೆಯ ರಾತ್ರಿ (ಕಥೆ)
In reply to ಉ: ಅಮಾವಾಸ್ಯೆಯ ರಾತ್ರಿ (ಕಥೆ) by shridharjs
ಉ: ಅಮಾವಾಸ್ಯೆಯ ರಾತ್ರಿ (ಕಥೆ)
In reply to ಉ: ಅಮಾವಾಸ್ಯೆಯ ರಾತ್ರಿ (ಕಥೆ) by partha1059
ಉ: ಅಮಾವಾಸ್ಯೆಯ ರಾತ್ರಿ (ಕಥೆ)
ಉ: ಅಮಾವಾಸ್ಯೆಯ ರಾತ್ರಿ (ಕಥೆ)
In reply to ಉ: ಅಮಾವಾಸ್ಯೆಯ ರಾತ್ರಿ (ಕಥೆ) by kavinagaraj
ಉ: ಅಮಾವಾಸ್ಯೆಯ ರಾತ್ರಿ (ಕಥೆ)
In reply to ಉ: ಅಮಾವಾಸ್ಯೆಯ ರಾತ್ರಿ (ಕಥೆ) by Jayanth Ramachar
ಉ: ಅಮಾವಾಸ್ಯೆಯ ರಾತ್ರಿ (ಕಥೆ)
In reply to ಉ: ಅಮಾವಾಸ್ಯೆಯ ರಾತ್ರಿ (ಕಥೆ) by Prakash Narasimhaiya
ಉ: ಅಮಾವಾಸ್ಯೆಯ ರಾತ್ರಿ (ಕಥೆ)