ಸಜ್ಜನಿಕೆಯ ದೇವರಿಗೆ ಸಾರಥಿಯಾದೆ

ಸಜ್ಜನಿಕೆಯ ದೇವರಿಗೆ ಸಾರಥಿಯಾದೆ

              ಸಜ್ಜನಿಕೆಯ ದೇವರಿಗೆ ಸಾರಥಿಯಾದೆ
                                     -ಲಕ್ಷ್ಮೀಕಾಂತ ಇಟ್ನಾಳ
   ಕೆಲ ದಿನಗಳ ಹಿಂದೆ ಒಂದು ಸಂಜೆ ಧಾರವಾಡದ ಆಲೂರು ವೆಂಕಟರಾವ ಸಭಾಭವನದಲ್ಲಿ ಮನೋಹರ ಗ್ರಂಥ ಮಾಲೆಯ ಒಂದು ಸಮಾರಂಭ. ಅಂದು ಗಿರೀಶ ಕಾರ್ನಾಡರವರ ಸಾಹಿತ್ಯದ ಕುರಿತು ಹಾಗೂ ಮನೋಹರ ಗ್ರಂಥ ಮಾಲೆಯಿಂದ ಇತರೆ ಲೇಖಕರ ಪುಸ್ತಕ ಬಿಡುಗಡೆ ಸಮಾರಂಭವಿದ್ದಂತೆ ನೆನಪು. ಧಾರವಾಡದ ಸಮಾರಂಭಗಳೆಂದರೆ ಅವುಗಳ ಅಚ್ಚುಕಟ್ಟುತನ, ಸಮಯ ನಿಷ್ಠತೆ ಹಾಗೂ ಶಿಸ್ತು ಅನುಕರಣೀಯವಾಗಿರುತ್ತದೆ. ಸಭೆಯಲ್ಲಿ ವಿದ್ವತ್ ಸಾಹಿತ್ಯ ದಿಗ್ಗಜರ ಸಮೂಹವೇ ಅಲ್ಲಿ ನೆರೆದಿರುತ್ತದೆ. ನೋಡಲು ಸಾಮಾನ್ಯರಂತೆ ಕಾಣುವ ಸಾಹಿತಿಗಳು ಮಾತನಾಡಲು ತೊಡಗಿದರೆಂದರೆ ಅವರ ವಾಗ್ವೈಖರಿ, ವಾದ ಮಂಡನೆ, ವಿಷಯ ಸಂಗ್ರಹ, ಅಧ್ಯಯನದ ಆಳ, ಮನದಟ್ಟಾಗಿಸುವಂತೆ ವಿಷಯ ವಿವರಿಸುವ ಪರಿ ಅನುಭವಿಸಿಯೇ ತೀರಬೇಕು. ಕನ್ನಡಮ್ಮನೂ ಇಂತಹ ಮಕ್ಕಳನ್ನು ಕಾಲೂರಿ ಕುಳಿತು ಕೇಳುತ್ತಿದ್ದರೆ ಅದೆಷ್ಟು ಖುಷಿಯಾಗುತ್ತಿದ್ದಳೋ! ಮೊದಲ ಸಾಲುಗಳಲ್ಲಿ ಬಹುಮುಖ ಪ್ರತಿಭೆಯ ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ ಕಾರ್ನಾಡರು,  ಚೆಂಬೆಳಕಿನ ಕವಿ ಚನ್ನವೀರ ಕಣವಿ, ನಾಡಿನ ಹೆಮ್ಮೆಯ ವಿಮರ್ಶಕರಾದ ಜಿ. ಎಸ್. ಅಮೂರ, ಗಿರಡ್ಡಿ ಗೋವಿಂದರಾಜ, ವೃಷಭೇಂದ್ರಸ್ವಾಮಿಗಳು ಹೀಗೆ ದಿಗ್ಗಜರಿಂದ ಕೂಡಿದ  ಸಭಾಭವನ ಹಿರಿಕಿರಿಯರಾದಿಯಾಗಿ ಬಹುತೇಕ ಸಾಹಿತಿಗಳು, ಲೇಖಕರು, ಕವಿಗಳಿಂದ ತುಂಬಿಹೋಗಿತ್ತು. ಸಮಾರಂಭದಲ್ಲಿ ಗಿರೀಶ ಕಾರ್ನಾಡ ಆದಿಯಾಗಿ ಬಹುತೇಕರು ಮಾತನಾಡಿದರು.
   ಸಮಾರಂಭ ಅಚ್ಚಕಟ್ಟಾಗಿ ನಡೆದು ನಂತರ ಸಭಾಭವನದ ಪ್ರಾಂಗಣ, ಅಂಗಣಗಳಲ್ಲಿ ದಿಗ್ಗಜ ಸಾಹಿತಿಗಳ ಜೊತೆ ಪರಿಚಿಯಿಸಿಕೊಳ್ಳುವ, ಮಾತನಾಡುವ ಅನಿಸಿಕೆ ಹಂಚಿಕೊಳ್ಳುವ, ಅಭಿಪ್ರಾಯ ಪಡೆಯುವ, ಸಭೆಯಲ್ಲಿ ನಡೆದ ವಿಷಯಗಳ ಮುಂದುವರೆದ ಚರ್ಚೆಗಳು ಸ್ವಲ್ಪ ಹೊತ್ತು ನಡೆದು ಎಲ್ಲರೂ ಮನೆಗಳಿಗೆ ತೆರಳುವ ಸಂಪ್ರದಾಯ ನಡೆಯುತ್ತದೆ. ಹಾಗೆ ನಾನೂ ಗಿರೀಶ್ ಕಾರ್ನಾಡ ರವರ ಹತ್ತಿರ ನಿಂತು ಅವರು ‘ಆಡಾಡ್ತ ಆಯುಷ್ಯ’ ದ ಕುರಿತು ನಾಲ್ಕಾರು ಸಾಹಿತ್ಯ ಪ್ರೇಮಿಗಳೊಂದಿಗೆ ಮಾತನಾಡುತ್ತಿದ್ದ ಗುಂಪಿನಲ್ಲಿ ಕರಗಿದೆ. ಅವರಲ್ಲಿ ನಾನೂ ಭಾಗಿಯಾಗಿ ಅವರ ಒಡನಾಟದಲ್ಲಿ ಸ್ವಲ್ಪ ಸಮಯ ಕಳೆದೆ.  ಇನ್ನೊಂದು ಕಡೆಯಲ್ಲಿ ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಶಿ, ಸಮೀರ ಜೋಶಿರವರು ಹಿರಿಯ ಅತಿಥಿ ಸಾಹಿತಿಗಳನ್ನು ಕಳುಹಿಸುವ ಕೆಲಸದಲ್ಲಿ ನಿರತರಾಗಿರುವುದನ್ನು ಕಂಡೆ.
 ಆ ನಂತರ ನೋಡಲಾಗಿ ಎಲ್ಲರೂ ತೆರಳಿದ್ದು ಗೊತ್ತಾಗಿ ನಾನೂ ಹೊರಬಂದು ಕೇಳಿದ ಸಾಹಿತ್ಯದ ಮೆಲುಕಿನೊಂದಿಗೆ ಮನೆಕಡೆಗೆ ನನ್ನ ಸ್ಕೂಟರ್ನಲ್ಲಿ ಹೊರಟೆ. ಆಗಲೇ ರಾತ್ರಿ 10.30 ದಾಟಿದ್ದರಿಂದ ರಸ್ತೆಯಲ್ಲಿ ಜನಸಂಚಾರ ವಿರಳವಾಗಿತ್ತು. ನಾನು ಸ್ವಲ್ಪ ದೂರ ಕ್ರಮಿಸಿದಾಗ ಕಾರ್ಗಿಲ್ ಸ್ತೂಪದ ಹತ್ತಿರ ( ಕಾರ್ಗಿಲ್ ವಿಜಯ ಹಾಗೂ ಮಡಿದ ಯೋಧರ ನೆನಪಿಗಾಗಿ ನಿರ್ಮಿತ, ದೇಶದಲ್ಲಿಯೇ ಎಕೈಕ ಸ್ತೂಪ) ಒಬ್ಬರೇ ಸರಸರನೇ ನಡೆದು ಹೋಗುತ್ತಿದ್ದ ಎತ್ತರದ ಆಕೃತಿಯೊಂದನ್ನು ನೋಡಿ ಆವಾಕ್ಕಾಗಿ ಸ್ಕೂಟರ್ ನಿಲ್ಲಿಸಿದೆ. ಅವರು ಮತ್ತಾರೂ ಅಲ್ಲ. ಸಜ್ಜನಿಕೆಯ ದೇವರೆಂದೇ ಖ್ಯಾತರಾದ, ಚೆಂಬೆಳಕಿನ ಕವಿ,  ನಾಡೋಜ ಚನ್ನವೀರ ಕಣವಿಯವರು! ಸರ್, ಬನ್ನಿ ಮನೆಗೆ ಬಿಡುತ್ತೇನೆ ಎಂದಾಗ ಅವರು ಮೊದಲು ಮತ್ಯಾಕೆ ಇನ್ನೊಬ್ಬರಿಗೆ ತೊಂದರೆ ಅಂದುಕೊಂಡಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ನಾನೇ ‘ಸರ್, ನನ್ನ ಮನೆಯೂ ಅದೇ ಕಡೆಗಿದೆ ಬನ್ನಿ' ಎಂದಾಗ ಒಪ್ಪಿದರು. ನಾನು  ಅವರನ್ನು ನನ್ನ ಸ್ಕೂಟರನಲ್ಲಿ ಹಿಂದೆ ಕೂಡಿಸಿಕೊಂಡು ಸಾವಕಾಶವಾಗಿ ಚಲಿಸಿದೆ. ನೀವೂ ಸಮಾರಂಭಕ್ಕೆ ಬಂದಿದ್ದೀರೇನೂ? ಎಂದು ಕೇಳಿ, ನನ್ನ ಹೆಸರನ್ನು ಕೇಳಿ ತಿಳಿದರು. ನಾವು ಸಂಸ್ಕೃತಿ, ಸಂಸ್ಕಾರ ಮಾಯವಾಗಾಕ ಹತ್ತೇತಿ ಅಂತ ಅಂತೀವಿ, ಆದರೆ ಅದು ಅಷ್ಟು ಸಲೀಸಾಗಿ ಹೋಗುವಂತದ್ದಲ್ಲ. ಸಹಸ್ರಾರು ವರ್ಷದಿಂದ ನಮ್ಮ ನರನಾಡಿನೊಳಗೆ ಅದರ ಬೇರುಬಿಟ್ಟಾವು. ಈಗ ನೀವ ನೊಡ್ರಿ. ಒಬ್ಬ ವಯಸ್ಸಾದವರನ್ನ ನೋಡಿದ ಕೂಡಲೇ, ಹೆಂಗ ನಿಂತು ಸೇವಾ ಮಾಡಲಿಕ್ಕ ಹತ್ತೀರಿ’ ಅಂದರು. ನನಗೆ ಮುಜುಗುರವಾಗಿ, ಸರ್, ತಮ್ಮ ಬಗ್ಗೆ ನಾಡಿಗೆ ನಾಡೇ ಗೌರವಹೊಂದಿರುವಾಗ, ಇದು ನನ್ನ ಕರ್ತವ್ಯ ಸರ್ ಎಂದೆ.
    ಸ್ವಲ್ಪ ದೂರ ಉದಯ ಹಾಸ್ಟೆಲ್ ಸರ್ಕಲ್ ಹತ್ತಿರ ರಾತ್ರಿ ಸವಾರರು ಕುಡಿದು ವಾಹನ ಚಲಿಸುವದನ್ನು ತಡೆಯುವ ಸಲುವಾಗಿ ಚಕಿಂಗ್ ನಡೆದಿತ್ತು. ನನ್ನ ಸ್ಕೂಟರನ್ನು ತಡೆದು ಪಕ್ಕಕ್ಕೆ ನಿಲ್ಲಿಸಲು ಸೂಚಿಸಿದಾಗ ನಾನು ಪಕ್ಕಕ್ಕೆ ನಿಲ್ಲಿಸುತ್ತಿರುವಂತೆ ಹಿಂದೆ ಕುಳಿತ ನಾಡೋಜರನ್ನು ಗುರುತಿಸಿದ ಪೋಲೀಸ್ ನಾಡೋಜರಿಗೆ ಸೆಲ್ಯೂಟ್ ಹೊಡೆದು, ನೀವು ಹೋಗಿ ಸರ್ ಎಂದು ನಮ್ಮನ್ನು ಹೋಗಗೊಟ್ಟರು. ನಾಡೋಜರನ್ನು ತಡೆದೆನಲ್ಲಾ ಎಂಬ ವಿಷಾದ ಅವನ ಮುಖಚಹರೆಯಲ್ಲಿ ಸ್ಪಷ್ಟವಾಗಿತ್ತು. ನಾಡೋಜರೇ ಅವನನ್ನು ಸಮಾಧಾನಿಸಲು ನಿಮ್ಮ ಕರ್ತವ್ಯ ನೀವು ಮಾಡುತಿದ್ದೀರಿ, ಅದರಲ್ಲೇನು ತಪ್ಪು ಎಂದು ಅವನಿಗೆ ಬೆನ್ನ ಮೇಲೆ ಶಹಬ್ಬಾಶ್ ನೀಡಿದರು.
   ಮತ್ತೆ ಮುಂದೆ ಹೋಗುತ್ತಿದ್ದಂತೆ ಹಿರಿಯರೊಂದಿಗೆ ಏನಾದರೂ ಮಾತನಾಡಿಸುವಾ ಎಂದು ನಾಡೋಜರಿಗೆ, ಸರ್ ತಮ್ಮ ಆ ಕವನ ನನಗೆ ಇನ್ನೂ ನೆನಪಿದೆ.
ನೀನಾಡುವ ಮಾತು ಹೀಗಿರಲಿ ಗೆಳೆಯ
ಮೃದು ವಚನ ಮೂಲೋಕ ಗೆಲ್ಲುವುದು ತಿಳಿಯ
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ
ಎಂತಹ ಅದ್ಭುತ ಸಾಲುಗಳು ಸರ್ ಎಂದು ಹೇಳಿ, ನಮ್ಮಂಥವರ ಎದೆಯಲ್ಲಿ ಇನ್ನಲ್ಲದಂತೆ ನಾಟಿಬಿಟ್ಟಿವೆ ಸರ್ ಎಂದೆ.
   ಅದಕ್ಕೆ ನಾಡೋಜರು ಇಟ್ನಾಳರವರೇ ‘ನಾನು ಎಮ್.ಎ ಫೈನಲ್ ಇದ್ದಾಗ ಬರೆದ ಹಾಡ ನೋಡ್ರಿ. ಎಷ್ಟು ವರ್ಷ ಆದ್ರೂ ಅದನ್ನ ಬರೆದ ಸಮಯ, ಸಂದರ್ಭ ಎಲ್ಲ ಮರೆತು ಹೋದ್ರು ಒಂದು ಕೃತಿ ಹೆಂಗ ಜನಪದದಾಗ ಉಳಿತದ ನೋಡ್ರಿ, ಅದಕ ಸಾಹಿತ್ಯಕ್ಕ ಅಷ್ಟ ಬೆಲೆ ಐತಿ ನೋಡ್ರಿ'  ಅಂದರು. ಅಂತಹ ನಾಡಿನ ಬಹುದೊಡ್ಡ, ಬಹುಮಾನ್ಯ ಸಾಹಿತ್ಯ ದಿಗ್ಗಜರೊಬ್ಬರು ಎಷ್ಟೊಂದು ಆತ್ಮೀಯವಾಗಿ ತನ್ನ ಮನೆಯ ಮಕ್ಕಳೊಂದಿಗೆ ಮಾತನಾಡುವಷ್ಟು ಸುಲಲಿತವಾಗಿ ನನ್ನನ್ನು ಮಾತನಾಡಿಸಿದ್ದು ನನಗೆ ಮರೆಯಲಾರದ ಅನುಭವ. ಇಂತಹ ಸಜ್ಜನಿಕೆಯ ದೇವರಿಗೆ ಕೆಲ ಗಳಿಗೆ ಸಾರಥಿಯಾಗಿ ಸೇವೆ ಮಾಡಲು  ಅವಕಾಶ ಒದಗಿಸಿದ ಆ ದೇವರಿಗೆ ಮನದಲ್ಲಿಯೇ ವಂದಿಸಿದೆ. ಕಲ್ಯಾಣ ನಗರದ ಸಾಹಿತಿಗಳ ಮನೆ, ‘ಚೆಂಬೆಳಕು’ ಬಂತು. ಸಾವಕಾಶವಾಗಿ ನಿಲ್ಲಿಸಿ, ಅವರನ್ನು ಇಳಿಸಿ, ಅವರಿಗೆ ನಮಸ್ಕರಿಸಿದಾಗ ನೂರ್ಕಾಲು ಬಾಳಪ್ಪ ಎಂದು ಹರಸಿ  ಬೀಳ್ಕೊಟ್ಟರು. ಧನ್ಯತೆಯಿಂದ ಮನೆಯ ಕಡೆಗೆ ಹೊರಳಿದೆ.

Rating
No votes yet

Comments