ಎಂಟು ಚಕ್ರ, ಒಂದು ಪದ್ಯ

ಎಂಟು ಚಕ್ರ, ಒಂದು ಪದ್ಯ

 ಇದೇನಪ್ಪ ಇಂತಹ ತಲೆ(ಕೆಟ್ಟ)ಬರಹ ಅಂದ್ಕೊಂಡ್ರಾ? ಅಥವಾ  ಚಿತ್ರ ನೋಡಿದಾಗ ಏನಾದರೂ ಹೊಳೀತಿದೆಯೋ? ಇಲ್ದಿದ್ರೂ ಪರವಾಗಿಲ್ಲ. ಓದಿ ಮುಂದೆ.

ಪದ್ಯಪಾನದಲ್ಲಿ ಕೊಡೋ ಸಮಸ್ಯೆಗಳ ಬಗ್ಗೆ ಈ ಹಿಂದೆಯೇ ಹಲವು ಬಾರಿ ಬರೆದಿದ್ದೆ. ಕೆಲವು ಪದಗಳನ್ನ ಕೊಟ್ಟು ಅದನ್ನು ಉಪಯೋಗಿಸಿ ಪದ್ಯ ಬರೆಯಬೇಕಾದಸಮಸ್ಯೆಯನ್ನ ’ದತ್ತಪದಿ’ ಅನ್ನುತ್ತಾರೆ. ಈ ಬಾರಿಯ ದತ್ತಪದಿ ವಿಶೇಷವಾಗಿತ್ತು. ಅವರದೇ ಮಾತಿನಲ್ಲಿ ಹೇಳೋದಾದರೆ

ಬಜಾಜ್(Bajaj), ಯಮಹ(Yamaha), ಕವಸಾಕಿ(kawasaki), ಕೈನೆಟಿಕ್(kinetik)
ಈ ನಾಲ್ಕುಪದಗಳನ್ನು ಬಳಸಿ, ನಿಮ್ಮಾಯ್ಕೆಯ ಛ೦ದಸ್ಸಿನಲ್ಲಿ(ಆದಷ್ಟು ಮಟ್ಟಿಗೆ ವರ್ಣವೃತ್ತಗಳನ್ನು ಬಳಸಿ), ಒಬ್ಬಳುಸು೦ದರಿ ಮತ್ತೊಬ್ಬಳ ಗುಣಗಾನವನ್ನು ಮಾಡುವ ವಿಷಯವನ್ನಿಟ್ಟುಕೊ೦ಡು ಪದ್ಯ ರಚಿಸಿ.

ಸ್ವಲ್ಪ ತಿಣುಕಾಡಿ ನಾನು ಬರೆದ ಪದ್ಯ ಹೀಗಿದೆ. ಗೂಗಲೇಶ್ವರನ ಪೂಜೆಯನ್ನು ಚೆನ್ನಾಗಿ ಮಾಡಿದ್ದಿದ್ದರಿಂದ ಕೈನೆ ಅನ್ನುವ ಒಂದು ಹೊಸ ಪದವನ್ನೂ ಅರಿತಂತಾಯಿತು. ಈಗ ಓದಿ:

ಏನು? ಮುಡಿಯಲಿ ತುಂಬ ಜಾಜಿಯ ಹೂವ ಮುಡಿದಿಹೆ ಚೆಂದದಿ
ಏನೊ ಕಾರ್ಯ ಮಹದಾನಂದದಿ ಮಾಡಹೊರಟಿಹೆ ಬಲ್ಲೆನು
ನೀನು ನೋಟದಲೇನೆ ಕೊಲುವುದು ಮಿಕವ ಸಾಕಿನ್ನೆನ್ನುತ
ಕೈನೆ ಟಿಕಲಿಯ ನೊಸಲಿಗಿಡುತಲಿ ಒಡತಿಗೊರೆದಳು ಚೆನ್ನುಡಿ

ಸ್ವಲ್ಪ ಇದಕ್ಕೆ ಹಿನ್ನುಡಿಯೂ ಬೇಕಾಗಬಹುದು. ಇಲ್ಲಿ ನಡೆಯುವ ಮಾತುಕತೆ ಒಬ್ಬ ಒಡತಿ ಮತ್ತೆ ಅವಳ ಸೇವಕಿಯ ನಡುವೆ. ಇಬ್ಬರೂ ಸುಂದರಿಯರೇ ಅಂತ ಹೇಳಲೇಬೇಕಿಲ್ಲ ಮತ್ತೆ ? ಹರೆಯದ ಒಡತಿಯನ್ನು ಚಿಕ್ಕಂದಿನಿಂದಲೇ ನೋಡಿ ಆಡಿಸಿ ಬಲ್ಲ ಆಪ್ತ ಸೇವಕಿ, ಪ್ರಾಯಕ್ಕೆ ಬಂದ ಹುಡುಗಿಗೆ, ಅವಳು ತನ್ನಿನಿಯ (= ಮಿಕ :) ನನ್ನು ನೋಡಹೋದಾಗ ಇಂತಹ ಸಲಹೆ ಕೊಟ್ಟರೆ ಅಚ್ಚರಿಯೇನಿದೆ? ಅಲ್ವೇ?

ಅಂದಹಾಗೆ ಪದ್ಯ ಮಲ್ಲಿಕಾಮಾಲೆ -ಮಾತ್ರಾಗಣದ ಚೌಪದಿಯಲ್ಲಿದೆ.

-ಹಂಸಾನಂದಿ

ಕೊ: ಕೈನೆ= ಸೇವಕಿ, maid ; ಕುಮಾರವ್ಯಾಸನ ಭಾರತದಲ್ಲೂ ಈ ಪದ ಬಳಕೆಯಾಗಿರುವುದನ್ನು ನೋಡಿದೆ. ಜೈ ಗೂಗಲ್!
ಕೊ.ಕೊ: ಟಿಕಲಿ= ಹಣೆಬೊಟ್ಟು - ಹಿಂದೀ ಪದವಾದರೂ ಈಚೀಚೆಗೆ ಕನ್ನಡಿಗ ಹೆಂಗೆಳೆಯರೂ ಬಹಳ ಬಳಸುವ ಪದವಿದು
ಕೊ.ಕೊ.ಕೊ: ನಾಲ್ಕು ಬೈಕ್ ಗಳಿದ್ರೆ, ಎಂಟು ಚಕ್ರ ತಾನೇ? ಇನ್ನಾದರೂ ತಲೆ*ಬರಹ ಚೆನ್ನಾಗಿದೆ ಅಂತೀರೇನು?

 

Rating
No votes yet

Comments

Submitted by hamsanandi Thu, 09/20/2012 - 00:54

ಮೆಚ್ಚುಗೆಗೆ ಧನ್ಯವಾದಗಳು.
ಗಣೇಶ ಅವರೆ, ಅಂದಹಾಗೆ ನಾನಿನ್ನೂ ಈಗೀಗ ಛಂದಸ್ಸಿಗೆ ತಕ್ಕಂತೆ ಬರೆಯಲು ಕಲಿಯುತ್ತಿದ್ದೇನೆ ಅಷ್ಟೆ! ಒಂದು ಗುಟ್ಟು ಹೇಳಲೆ? ಪದ್ಯಪಾನ ವನ್ನು ನೀವು ನೋಡಿ ಕಲಿಯುವುದಕ್ಕೆ ಹೊರಟರೆ, ಎಲ್ಲ ಆಸಕ್ತರಿಗೂ ಬರೆಯುವ ಹುಮ್ಮಸ್ಸು ಬರುವುದು ದಿಟವೇ :)