ಪಂಡಿತ ಮತ್ತು ಚಾಲಾಕಿ ಮಹಿಳೆ (ಕರಾವಳಿ ಆಂಧ್ರದ ಜಾನಪದ ಕಥೆ)

ಪಂಡಿತ ಮತ್ತು ಚಾಲಾಕಿ ಮಹಿಳೆ (ಕರಾವಳಿ ಆಂಧ್ರದ ಜಾನಪದ ಕಥೆ)

      ಹಿಂದೆ ಒಬ್ಬ ಪಂಡಿತನಿದ್ದ, ಅವನ ಹವ್ಯಾಸವೇನೆಂದರೆ ಸ್ತ್ರೀಯರ ಗುಣ ಸ್ವಭಾವಗಳನ್ನು ಕುರಿತು ಅಧ್ಯಯನ ಮಾಡುವುದು ಮತ್ತು ಅವನು ಅಭ್ಯಾಸ ಮಾಡಿದ್ದನ್ನು ಗ್ರಂಥದ ರೂಪದಲ್ಲಿ ದಾಖಲಿಸಿವುದು. ಹೀಗೆ ಅವನು ಹಲವಾರು ವರ್ಷಗಳು ವಿವಿಧ ಪ್ರಾಂತ್ಯಗಳಲ್ಲಿ ಪರ್ಯಟನೆ ಕೈಗೊಂಡು ನೂರಾರು ಗ್ರಂಥಗಳನ್ನೇ ಬರೆದನು. ಅವನ್ನೆಲ್ಲಾ ಒಂದು ಸುಂದರವಾದ ರೇಷ್ಮೆಯ ವಸ್ತ್ರದಲ್ಲಿ ಗಂಟು ಕಟ್ಟಿಕೊಂಡು ತಲೆಯ ಮೇಲೆ ಹೊತ್ತುಕೊಂಡು ತಿರುಗುತ್ತಿದ್ದ. ಯಾರಾದರೂ ಸ್ತ್ರೀಯರ ವಿಷಯವಾಗಿ ಕುರಿತು ಕೇಳಿದರೆ ಅವನು ಆ ಗ್ರಂಥಗಳನ್ನು ತೆಗೆದು ನೋಡಿ ಅವರ ಕುರಿತು ಸ್ವಾರಸ್ಯಕರವಾದ ವಿಷಯಗಳನ್ನು ಹೇಳುತ್ತಿದ್ದ; ಅಮೇಲೆ ಅಲ್ಲಿನವರು ತಿಳಿಸಿದ ವಿಷಯಗಳನ್ನು ದಾಖಲಿಸಿಕೊಂಡು ಮುಂದಿನ ಊರಿಗೆ ಪ್ರಯಾಣ ಕೈಗೊಳ್ಳುತ್ತಿದ್ದ. ಒಮ್ಮೆ ಹೀಗೆ ಅಲೆಯುತ್ತಾ ಒಂದು ಊರಿಗೆ ಬಂದ. ಬಾಯಾರಿಕೆಯಾಗಿ ಒಂದು ಮನೆಯ ಮುಂದೆ ನಿಂತು ಆ ಮನೆಯೊಡತಿಯನ್ನು ನೀರಿಗಾಗಿ ಕೇಳಿದ. ಆ ಮನೆಯಾಕೆ ಅವನಿಗೆ ನೀರನ್ನು ಕೊಟ್ಟು ಅವನು ಕುಡಿದಾದ ಮೇಲೆ ಕುತೂಹಲದಿಂದ ಅವನ ಗಂಟನ್ನು ನೋಡಿ, ಸ್ವಾಮಿ ಅದರಲ್ಲಿ ಏನಿದೆ ಎಂದು ಕೇಳಿದಳು. ಆಗ ಸ್ವಲ್ಪ ಗತ್ತಿನಿಂದ ಈ ಪಂಡಿತ ಅದರಲ್ಲಿ ನಿನ್ನಂತಹ ಸ್ತ್ರೀಯರ ಸಾವಿರಾರು ವಿಷಯಗಳು ಅಡಗಿವೆ ಎಂದನು. ಇದನ್ನು ಕೇಳಿ ಆ ಹೆಂಗಸಿಗೆ ಈ ಪಂಡಿತನನ್ನು ಸ್ವಲ್ಪ ಆಟವಾಡಿಸಬೇಕೆಂಬ ಮನಸ್ಸಾಯಿತು. ಒಳ್ಳೆಯದು ಸ್ವಾಮಿ, ಇಂದು ನೀವು ನನ್ನ ಆತಿಥ್ಯ ಸ್ವೀಕರಿಸಿದರೆ ನಾನು ನಿಮಗೆ ಒಂದು ಸೋಜಿಗವನ್ನು ತೋರಿಸುತ್ತೇನೆ ಎಂದಳು. ಅವಳ ಭಿನ್ನಹಕ್ಕೆ ಮಣಿದು ಮತ್ತು ಈ ಸ್ತ್ರೀ ಅದೇನು ಸೋಜಿಗವನ್ನು ತೋರಿಸುತ್ತಾಳೋ ಎನ್ನುವ ಕುತೂಹಲವಿದ್ದದ್ದರಿಂದ ಆ ಪಂಡಿತನು ಅವಳ ಮನೆಯಲ್ಲಿ ಊಟ ಮಾಡಲು ಒಪ್ಪಿದನು. ಅವಳು ಅವನಿಗೆ ಸಕಲ ಅತಿಥಿ ಮರ್ಯಾದೆಯೊಂದಿಗೆ ಅವನ ಊಟೋಪಚಾರಗಳನ್ನು ನೋಡಿಕೊಂಡಳು. ಇದರಿಂದ ಸಂತೋಷಗೊಂಡ ಪಂಡಿತನು, ಅದೇನೋ ನನಗೊಂದು ಸೋಜಿಗದ ಸಂಗತಿಯನ್ನು ತಿಳಿಸುವೆನೆಂದೆ ಅದನ್ನು ಆದಷ್ಟು ಬೇಗ ಮಾಡಿದರೆ ತಾನು ಮುಂದಿನ ಊರಿಗೆ ಹೋಗಲು ಅನುಕೂಲವಾಗುವುದೆಂದು ಹೇಳಿದನು. ಆಗ ಆ ಹೆಂಗಸು, ಸ್ವಲ್ಪ ತಡೆಯಿರಿ ಸ್ವಾಮಿ ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೇ ನಿಮಗೆ ಅದನ್ನು ತಿಳಿಸುತ್ತೇನೆ ಎಂದು ಅವನನ್ನು ತನ್ನ ಗಂಡ ಬರುವ ಹೊತ್ತಿನವರೆಗೆ ಮಾತಿನಲ್ಲಿ ಕಟ್ಟಿಹಾಕಿದಳು. ದೂರದಲ್ಲಿ ತನ್ನ ಗಂಡ ಬರುವುದನ್ನು ನೋಡಿದವಳೇ ತನ್ನ ಮನೆಯ ಬಾಗಿಲನ್ನು ಹಾಕಿ, ಆ ಪಂಡಿತನಿಗೆ ನನ್ನ ಗಂಡ ಬರುತ್ತಿದ್ದಾನೆ, ನನ್ನ ಗಂಡನಿಗೆ ಪಂಡಿತರಿಗೆ ಅತಿಥಿ ಸತ್ಕಾರ ಮಾಡುವುದು ಇಷ್ಟವಿಲ್ಲ ಆದ್ದರಿಂದ ನೀವು ತ್ವರಿತವಾಗಿ ಇಲ್ಲೆಲ್ಲಾದರೂ ಬಚ್ಚಿಟ್ಟುಕೊಳ್ಳಿ ಎಂದು ಹೇಳಿದಳು. ಅವನು ಎಲ್ಲಿ ಬಚ್ಚಿಟ್ಟುಕೊಳ್ಳ ಬೇಕೆಂದು ತಡಕಾಡುತ್ತಿದ್ದಾಗ ಬಾಗಿಲು ಬಡಿಯುತ್ತಾ ಆ ಹೆಂಗಸಿನ ಗಂಡ ಅವಳನ್ನು ಕೂಗಿ ಕರೆಯುವುದು ಕೇಳಿಸಿತು. ಆಗ ಗಾಭರಿಯಾದ ಪಂಡಿತ ಎಲ್ಲಿ ಅಡಗಿಕೊಳ್ಳುವುದು ಎಂದು ನೋಡುತ್ತಿರಬೇಕಾದರೆ ಅಲ್ಲೇ ನಡುಮನೆಯಲ್ಲಿದ್ದ ದೊಡ್ಡ ಸಂದೂಕದಲ್ಲಿ (ಮರದ ಪೆಟ್ಟಿಗೆಯಲ್ಲಿ) ಅವನನ್ನು ಅವಿತುಕೊಳ್ಳುವಂತೆ ಹೇಳಿ ಅದರ ಬಾಗಿಲನ್ನು ಭದ್ರವಾಗಿ ಹಾಕಿದಳು. ಹಾಗೆಯೇ ಅವನ ಪುಸ್ತಕದ ಗಂಟಿನ ಮೇಲೆ ಒಂದು ದೊಡ್ಡದಾದ ಬುಟ್ಟಿಯನ್ನು ಮುಚ್ಚಿದಳು.
 
    ಸ್ವಲ್ಪ ಹೊತ್ತಿನ ನಂತರ ನಿಧಾನವಾಗಿ ಹೋಗಿ ಬಾಗಿಲು ತೆಗೆದಳು. ಅವಳ ಗಂಡ ಬಾಗಿಲು ತೆಗೆಯುವುದು ಏಕೆ ತಡವಾಯಿತೆಂದು ಕೇಳಿದ. ಆಗ ಇವಳು ನಗುತ್ತಾ, "ಅದಾ ಒಳಗಡೆ ನನ್ನ ಪ್ರಿಯಕರನಿದ್ದಾನೆ ಅವನಿಗೆ ಉಪಚಾರ ಮಾಡುತ್ತಿದ್ದೆ, ನೀನು ಬರುವುದು ಗೊತ್ತಾಗಿ ಅವನನ್ನು ಬಚ್ಚಿಟ್ಟು ಬರುವಷ್ಟರಲ್ಲಿ ಇಷ್ಟು ಹೊತ್ತಾಯಿತು, ಹ್ಹ..ಹ್ಹ..ಹ್ಞಾ!" ಇದನ್ನು ಕೇಳಿ ಅವಳ ಗಂಡನು ನೀನು ಬಹಳ ವಿನೋದವಾಗಿ ಮಾತನಾಡುತ್ತಿರುವೆ ಇರಲಿ ನನಗೆ ಕೈಕಾಲು ತೊಳೆದುಕೊಳ್ಳಲು ನೀರು ಕೊಡು ಎಂದನಂತೆ. ನಗುತ್ತಲೇ ಅವನಿಗೆ ನೀರು ಕೊಟ್ಟು ಅವನಿಗೆ ಎಲೆ ಹಾಕಿ ಊಟ ಬಡಿಸಿದಳು. ಆಗ ಆಕೆಯ ಗಂಡ ಎಲ್ಲಿ ನಿನ್ನ ಪ್ರಿಯಕರನನ್ನು ಕರೆ ಅವನೂ ನನ್ನೊಡನೆ ಕುಳಿತು ಊಟಮಾಡಲಿ ಎಂದನು. ಆಗ ಅವಳು ನಗುತ್ತಾ ಅವನದಾಗಲೇ ಊಟವಾಯಿತು, ನಿಮ್ಮ ಊಟವಾದ ಮೇಲೆ ನಾನು ಊಟ ಮಾಡಬೇಕು ಬೇಗನೇ ಮುಗಿಸಿ ಎಂದಳು. ಆಕೆಯ ಗಂಡ ನಗುತ್ತಾ, ಹ್ಹ..ಹ್ಹ..ಹ್ಞಾ! ನಿನ್ನ ಪ್ರಿಯಕರನದೂ ಊಟವಾಯಿತೇ ಎಂದು ನಗುತ್ತಾ ಊಟ ಮುಗಿಸಿ ಮೇಲೆದ್ದ. ಆಮೇಲೆ ಅವನಿಗೆ ಅವಳು ತಾಂಬೂಲವನ್ನು ತಯಾರಿಸಿ ಕೊಟ್ಟಳು, ಆಗ ಅವಳ ಗಂಡ ಇವಳನ್ನು ಕೆಣಕಬೇಕೆಂದು ನನ್ನನ್ನು ನೋಡಿ ನಿನ್ನ ಪ್ರಿಯಕರ ಎಲ್ಲೋ ಅವಿತುಕೊಂಡಿದ್ದಾನೆಂದೆಯಲ್ಲ  ಅವನು ಎಲ್ಲಿದ್ದಾನೆಂದು ತೋರಿಸು ಎಂದನು. ಇದನ್ನೆಲ್ಲಾ ಪೆಟ್ಟಿಗೆಯ ಸಂದಿಯಿಂದ ನೋಡುತ್ತಿದ್ದ ಪಂಡಿತನಿಗೆ ಹೆದರಿಕೆ ಷುರುವಾಯಿತು, ಇವಳು ನನ್ನನ್ನು ನಿಜವಾಗಿಯೂ ಹಿಡಿದುಕೊಟ್ಟರೆ ಗತಿ ಏನು ಎಂದು? ಆಗ ಆ ಹೆಂಗಸು ನಸುನಗುತ್ತಾ, ನೋಡಲ್ಲಿ ಆ ಬುಟ್ಟಿಯ ಕೆಳಗೆ ಅವನು ತಂದ ಗಂಟಿದೆ ಮತ್ತು ಈ ಸಂದೂಕದಲ್ಲಿ ಅವನನ್ನು ಅಡಗಿಸಿಟ್ಟಿದ್ದೇನೆ ಎಂದಳು. ಆವಾಗ ಆಕೆಯ ಗಂಡ ನೀನು ತಮಾಷೆ ಮಾಡುವುದರಲ್ಲಿ ನನಗಿಂತ ಬಹಳ ಗಟ್ಟಿಗಿತ್ತಿ ಎಂದು ನಗುತ್ತಾ ತಾಂಬೂಲವನ್ನು ಜಗಿಯುತ್ತಾ ತನ್ನ ಕೆಲಸಕ್ಕೆ ಹೊರಟು ಹೋದ. ಇವನು ಅತ್ತ ಹೋದದ್ದೇ ತಡ, ಆ ಹೆಂಗಸು ಪೆಟ್ಟಿಗೆಯ  ಬಾಗಿಲನ್ನು ತೆರೆದು ಆ ಪಂಡಿತನನ್ನು ಹೊರಗೆ ಬಾರಲು ಹೇಳಿದಳು. ಇಂತಹ ಸೋಜಿಗವನ್ನು ನಾನು ಹಿಂದೆ ಎಲ್ಲಿಯೂ ನೋಡಿದ್ದೂ ಇಲ್ಲ ಅಥವಾ ಕೇಳಿದ್ದೂ ಇಲ್ಲವೆಂದು ಅಲ್ಲಿಂದ ಹೊರಡಲನುವಾದನು. ಆಗ ಅ ಹೆಂಗಸು ಪಂಡಿತರೆ, ನಿಮ್ಮ ಗಂಟು ಇಲ್ಲಿಯೇ ಇದೆ ಎಂದು ನೆನಪು ಮಾಡಿದಳು. ಆಗ ಆ ಪಂಡಿತನು ಆ ಗಂಟನ್ನು ನದಿಗೆ ಎಸೆಯಿರಿ ಎಂದು ಹೇಳಿ ಇನ್ನೂ ಸ್ವಲ್ಪ ಹೊತ್ತು ಇಲ್ಲಿಯೇ ಇದ್ದರೆ ಈ ಹೆಂಗಸು ಸೋಜಿಗವನ್ನು ತೋರಿಸುವ ನೆಪದಿಂದ ನನ್ನನ್ನು ಬೇರೆ ರೀತಿಯ ಕಷ್ಟಕ್ಕೆ ಸಿಲುಕಿಸ ಬಹುದೆಂದು ಹೆದರಿ ಅಲ್ಲಿಂದ ಓಟಕಿತ್ತ.
 
 ಚಿತ್ರಕೃಪೆ: ಗೂಗಲ್
 
https://encrypted-tbn3.google.com/images?q=tbn:ANd9GcTytGKecHuCAT3XAsetfMGuVmE1CtcxCF-m-FMUfbzhRwrpHeDO
 
 
 

 

Rating
No votes yet

Comments