ಪಂಚತಂತ್ರ ಶಿಶು ಕವನ

ಪಂಚತಂತ್ರ ಶಿಶು ಕವನ

ಕವನ

 ಪಂಪಾ ತೀರದ ಸೊಂಪಿನ ಕಾಡಲಿ

ಚೆಂದದ ಜಿಂಕೆಯು ವಾಸಿಸುತಿತ್ತು

ಬೇಲದ ಮರದಾ ಬಿಲದಾ ಇಲಿಯ

ಪಕ್ಕದ ಮಡುವಿನ ಪಟ್ಟೆಯ ಆಮೆಯ

ಚೊಕ್ಕದ ಗೆಳೆತನ ವದಕಿತ್ತು

ನಿತ್ಯವು ಮರೆಯದೆ ಸಂಜೆಯ ಹೊತ್ತಲಿ

ಮಿತ್ರರ ಭೇಟಿಯು ನಡೆದಿತ್ತು

ದೂರದ ಮರದ ಟೊಂಗೆಯ ಮೇಲೆ

ಕಾಗೆಯು ಕುಳಿತು  ನೋಡಿತ್ತು

ಆಮೆಯ ಜಿಂಕೆಯ ಇಲಿಗಳ  ನೋಡಿ

ತಾನೂ ಅವುಗಳ ಸ್ನೇಹವ ಮಾಡುವ

ಆಸೆಯು ಮನದಲಿ ಬಲಿದಿತ್ತು

ಮುವ್ವರು ಮಿತ್ರರ ಭೇಟಿಯ ಸಮಯದಿ

ನೀರನು ಕುಡಿಯುವ ನೆಪದಲಿ ಕಾಗೆಯು

ಸ್ನೇಹದ ಮಾತನು ನಡೆಸಿತ್ತು

ಕಾಗೆಯು ನಮಗೆ ಜನ್ಮದ ವೈರಿಯು

ಹೊರಗಡೆ ಸಿಕ್ಕರೆ ಕುಕ್ಕದೆ ನಮಗೆ

ಕಾಗೆಯ ಜೊತೆಗೆ ಸ್ನೇಹವೇ  ಇಲ್ಲ

ಎಂದಿತು ಇಲಿಯು ಖಡಕಿನಲಿ

ಅಗುಳದು ಸಿಕ್ಕರೆ ಬಳಗವ ಕರೆಯುವ

ಕರ್ಕಶ ಧ್ವನಿಯಲಿ ಕೂಗುತ ಹಾರುವ

ಕಾಗೆಯ ಗೊಡವೆಯೆ ನಮಗದು ಬೇಡ

ಎಂದಿತು ಆಮೆಯು ಗತ್ತಿನಲಿ

ಸ್ನೇಹವ ಬೇಡಿ ಬಂದರೆ ಹೀಗೆ

ಅಪಮಾನದ ವರ್ತನೆ ಸರಿಯಲ್ಲ

ಕಾಗೆಯು ಕೂಡಾ ನಮ್ಮೊಡನಿರಲಿ

ಸ್ನೇಹವ ಹಂಚುವ ನಾವೆಲ್ಲಾ

ಎಂದಿತು ಜಿಂಕೆಯು ಪ್ರೀತಿಯಲಿ

ದಿನಗಳು ಕಳೆದವು ಸ್ನೇಹದ ಸುಖದಲಿ

ದಿನವೂ ಸೇರುತ ಚರ್ಚೆಯ ನಡೆಸುತ

ಜೀವನ ಸುಖಮಯ ಸ್ನೇಹವೆ ವಿಸ್ಮಯ

ಎಂದವು ಎಲ್ಲವು ಸುಖದಲಿ ಬೀಗುತ

ನಾಲ್ವರು ಮಿತ್ರರು ಸೇರಲು ದಡದಲಿ

ಮಲಗಿದ ಜಿಂಕೆಯ ಮೇಲೇರಲು ಕಾಗೆ

ಆಮೆಯ ಮೇಲೆಯೆ ಇಲಿಯ ಸವಾರಿ

ಕೊಳದಾ ದಡದಲಿ ಸ್ನೇಹದ ಸಭೆಯು

ಸಲುಗೆಯ ಮಿತ್ರರು ನಲುಮೆಯ ಮಾತಲಿ

ಮೈಮನ ಮರೆತರು ವಿಶ್ರಾಂತಿಯಲಿ

ಬಂದನು ಬೇಡನು ಬಿಸಿಲಲಿ ಅಲೆದು

ಬೇಟೆಯು ಸಿಗದೆ ಬೇಸತ್ತು

ನೀರನು ಕುಡಿಯುವ ಬೇಡನ ಗಲಭೆಗೆ

ಕಾಗೆಯು  ಕೂಗಿತು ಭೀತಿಯಲಿ

ಕಾಗೆಯ ಕೂಗಿಗೆ ಜಿಂಕೆಯು ಓಡಿತು

ಇಲಿಯದು ಓಡುತ ಬಿಲವನು ಸೇರಿತು

ಓಡಲು ಆಗದ ಹಾರಲು ಬಾರದ

ಆಮೆಯು ಉಳಿಯಿತು ದಡದಲ್ಲಿ

ಕಾಗೆಯ ಕೂಗಿಗೆ ಬೇಡನು ನೋಡಲು

ಆಮೆಯು ತೆವಳುತ ಸಾಗಿರಲು

ಏನೂ ಸಿಕ್ಕದ ಬೇಟೆಯ ಬೇಡಗೆ

ತೆವಳುತ ತೆರಳುವ ಆಮೆಯು ಸಿಗಲು

ಪಟ್ಟನೆ ಹಿಡಿಯುತ ಚೀಲದ ಬಲೆಯಲಿ

ಕಟ್ಟಿದ ಆಮೆಯ ಹೆಡಮುರಿಗೆ

ಬೇಲದ ಮರದ ಮರೆಯಲಿ ಕುಳಿತು

ಬೇಡನ ಸಂಭ್ರಮ ಆಮೆಯ ಬಂಧನ

ನೋಡಿತು ಕಾಗೆಯು ದುಖಃದಲಿ

ಜಿಂಕೆಯ ಕರೆದು ಇಲಿಯನು ಸೇರಿಸಿ

ಮಿತ್ರ ವಿಮೋಚನ ಮಂತ್ರಾಲೋಚನೆ

ನಡೆಸಿದ ಕಾಗೆಯು ಹೆಣೆಯಿತೊಂದು ಯೋಜನೆ

ಬೇಡನು ನಡೆಯುವ ಅನತಿ ದೂರದಿ

ಜಿಂಕೆಯು ಮಲಗಲು ಸತ್ತಂತೆ

ಕಾಗೆಯು  ಕುಳಿತು ಜಿಂಕೆಯ ಕುಕ್ಕಲು

ಆಸೆಯ ಬೇಡನು ಜಿಂಕೆಯ ಪಡೆಯಲು

ಆಮೆಯ   ಬಿಟ್ಟು ಓಡುವನು

ತತ್ ಕ್ಷಣ ಇಲಿಯು ಚೀಲದ ಬಲೆಯನು

ಕಡಿಕಡಿದೊಗೆಯುತ ಆಮೆಯ ಬಿಡಿಸಲು

ಕ್ಷಣದಲಿ ಆಮೆಯು ಧುಮುಕುತ ಕೊಳದಲಿ

ತಳವನು ಸೇರುತ ರಕ್ಷಣೆ ಪಡೆಯಲಿ

ಇಲಿಯೂ ಓಡಿ ಬಿಲವನು ಸೇರಲಿ

ಜಿಂಕೆಯ ಹತ್ತಿರ ಬೇಡನು ಬರಲು

ನಾಗಾಲೋಟದಿ ಜಿಂಕೆಯು ಓಡಲು

ಕಾಗೆಯು ಹಾರುತ ಮರವನು ಸೇರಲು

ಜಿಂಕೆಯ ಬೈಯುತ ಕಾಗೆಯ ಹಳಿಯುತ

ಬೇಡನು ಮರಳುವ ಆಮೆಯ ಪಡೆಯಲು

ಯೋಜಿತ ಯೋಜನೆ ಸಫಲಿತ ಯತ್ನವೆ

ಬಂಧಿತ ಮಿತ್ರನ ಬಂಧ ವಿಮೋಚನೆ

ಚಾಚೂ ತಪ್ಪದೆ ಪಾಲಿಸಿ ಸೂಚನೆ

ಎನ್ನುತ ಕಾಗೆಯು ಹಾರಿತು ಪುರ್ರನೆ

ಯೋಜಿತ ಪರಿಯಲಿ ಫಲಿಸಿದ ಯೋಜನೆ

ಇದ್ದುದ ಬಿಟ್ಟು ಇರದುದ ಪಡೆಯುವ

ದುರಾಸೆಯ ಬೇಡಗೆ ಜಿಂಕೆಯು ಇಲ್ಲ

ಆಮೆಯೂ ಇಲ್ಲ ಬಲೆಯೂ ಇಲ್ಲ

ಅತಿಯಾಸೆಯು ಗತಿಗೇಡೆನ್ನುತ

ಬರಿಗೈಯಲಿ ನಡೆದನು ಬೇಡನು ದುಃಖದಲಿ

ಕಾಕರಾಜನ ಹೊಗಳಿದ ಮಿತ್ರರು

ಸ್ನೇಹವೆ ಸುಖವು ಸ್ನೇಹವೆ ಬಲವು

ಸ್ನೇಹದ ಒಲವಲಿ ಗಳಿಸುವ ಎಲ್ಲವ

ಎನ್ನುತ ನಡೆದವು ಒಲವಿನಲಿ

ರಾಜನ ಮಕ್ಕಳ ಬುದ್ಧಿ ವಿಕಸನ

ವಿಷ್ಣುಶರ್ಮನ ಪಂಚತಂತ್ರ ಕಥನ

ಜಯಪ್ರಕಾಶಿತ ಕನ್ನಡ ಕವನ

ಕನ್ನಡ ಮಕ್ಕಳ ಬುದ್ಧಿ ವಿಕಸನ

ಹರಸಿರಿ  ಕನ್ನಡ ಸಿರಿ ಸಂಪದರೆಲ್ಲ

ಕನ್ನಡ ಶಿಶುಕವನದ ಶಿಶು ನಾ 

Comments