ಸರ್. ಎಂ.ವಿ. ಒಂದು ಸ್ಮರಣೆ

ಸರ್. ಎಂ.ವಿ. ಒಂದು ಸ್ಮರಣೆ

 ಸರ್ ಎಂ. ವಿಶ್ವೇಶ್ವರಯ್ಯನವರು ಜನಿಸಿ ಇಂದಿಗೆ ೧೫೧  (ಜನನ: ಸೆಪ್ಟಂಬರ್ ೧೫, ೧೮೬೦) ವರ್ಷಗಳು ಸಂಧಿವೆ. ಅವರ ಜನ್ಮದಿನವನ್ನು "ಇಂಜಿನಿಯರ‍್ಗಳ ದಿನ"ವನ್ನಾಗಿ ಆಚರಿಸಿ ಅವರನ್ನು ಗೌರವಿಸಲಾಗುತ್ತಿದೆ. ಅವರು ತಂತ್ರಜ್ಞರಾಗಿ ಹಲವಾರು ಗರಿಮೆಗಳನ್ನು ಸಾಧಿಸಿದ್ದಾರೆ. ಅದರಲ್ಲಿ ಹೆಸರಿಸ ಬಹುದಾದ ಕೆಲವು, ಒಂದು ಗ್ರಾಂ ಸಿಮೆಂಟನ್ನು ಕೂಡ ಉಪಯೋಗಿಸದೆ "ಸುರಕೆ ಗಾರೆ ತಂತ್ರಜ್ಞಾನ" ಬಳಸಿ ಅವರು ಕಟ್ಟಿದ ಕನ್ನಂಬಾಡಿ ಕಟ್ಟೆ (KRS Dam) ಇಂದಿಗೂ ಚಕ್ಕು ಚದುರದೆ ನಿಂತಿದೆ.

ಅವರು ಹೈದರಾಬಾದ್ ನಗರಕ್ಕೆ ಮೂಸಿ ನದಿ (ಮುಚಕುಂದಾ ನದಿ)ಯ ಪ್ರವಾಹದಿಂದ ಉಂಟಾಗುತ್ತಿದ್ದ ಅಪಾಯವನ್ನು ತಪ್ಪಿಸಲು ಶಾಶ್ವತ ಪರಿಹಾರ ರೂಪಿಸಿದ್ದು ಮತ್ತು ನಗಾರಾಭಿವೃದ್ಧಿಗೆ ಬೇಕಾದ ಸಲಹೆ ಸೂಚನೆಗಳನ್ನಿತ್ತು ಹೈದರಾಬಾದ್ ನಗರವನ್ನು ಸುಂದರಗೊಳಿಸಲು ರೂಪುರೇಷೆಗಳನ್ನು ಕೊಟ್ಟಿದ್ದು ಹಾಗೆಯೇ ಓಮೆನ್ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ತೊಲಗಿಸಲು ಡ್ಯಾಮೊಂದನ್ನು ಕಟ್ಟಿ ಅದು ಪ್ರಜೆಗಳಿಗೆ ಮತ್ತು ಸರ್ಕಾರಕ್ಕೆ ಹೊರೆಯಾಗದಂತೆ ಆರ್ಥಿಕ ವ್ಯವಸ್ಥೆಯನ್ನು ರೂಪಿಸಿದ್ದು. ಹೀಗೆ ಒಂದೇ-ಎರಡೇ ಅವರ ಸಾಧನೆಗಳು?

    ಇವೆಲ್ಲಾ ಒಂದು ಕಡೆಯಾದರೆ, ಅವರು ಸಾರ್ವಜನಿಕ ಬದುಕಿನಲ್ಲೂ ಬಹಳಷ್ಟು ಶುದ್ಧ ಹಸ್ತರಾಗಿದ್ದರು. ಅವರಿಗೆ ಮೈಸೂರು ಸಂಸ್ಥಾನದ ದಿವಾನಗಿರಿ ಅರಸಿ ಬಂದಾಗ ಅವರು ತಮ್ಮ ತಾಯಿಗೆ ಹೇಳಿದ ಮಾತು ನಿಜಕ್ಕೂ ಮನನೀಯ. ತಮ್ಮ ಬಂಧುಗಳಿಗೆ ತಮ್ಮ ಪ್ರಭಾವ ಬೀರಿ ಉದ್ಯೋಗ ಕೊಡಿಸುವುದಾಗಲಿ ಅಥವಾ ಸರ್ಕಾರದಿಂದ ಬೇರೆ ಯಾವುದೇ ರೀತಿಯ ವೈಯ್ಯಕ್ತಿಕ ಸವಲತ್ತುಗಳನ್ನು ತನ್ನವರಿಗೆ ಕೊಡಿಸೆಂದು ತಮಗೆ ತಾಕೀತು ಮಾಡದಿದ್ದರೆ ಮಾತ್ರ ತಾವು ಆ ಹುದ್ದೆಯನ್ನು ಒಪ್ಪಿಕೊಳ್ಳುತ್ತೇನೆಂದರಂತೆ. ಆದರೆ ನಾವೀಗ ಮಾಡುತ್ತಿರುವುದೇನು? ನಮ್ಮಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ಸಿಕ್ಕರೆ ಅವರ ಸುಪರ್ದಿಯಲ್ಲಿರುವ ಎಲ್ಲಾ ವಿಭಾಗಗಳನ್ನೂ ಅವರ ಬಂಧುಗಳು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಅವರ ಪ್ರಾಮಾಣಿಕತೆಗೆ ಕೈಗನ್ನಡಿಯಂತಿರುವ ಈ ಪ್ರಸಂಗವನ್ನು ನಾನು ಚಿಕ್ಕವನಿದ್ದಾಗ ಕೇಳಿದ್ದು. ಒಮ್ಮೆ ಸರ್. ಎಂ.ವಿ. ಯವರು ರಾತ್ರಿ ಬಹಳ ಹೊತ್ತಿನ ತನಕ ಮೋಂಬತ್ತಿಯ ಬೆಳಕಿನಲ್ಲಿ ಪತ್ರ ಬರೆಯುತ್ತಾ ಕುಳಿತಿದ್ದರಂತೆ; ಸ್ವಲ್ಪ ಹೊತ್ತಿನ ನಂತರ ಆ ಪತ್ರವನ್ನು ಬರೆದು ಮುಗಿಸಿ ಉರಿಯುತ್ತಿದ್ದ ಮೇಣದ ಬತ್ತಿಯನ್ನು ಆರಿಸಿ ಮತ್ತೊಂದನ್ನು ಹಚ್ಚಿಟ್ಟು ಮತ್ತೊಂದು ಪತ್ರ ಬರೆಯಲು ಪ್ರಾರಂಭಿಸಿದರಂತೆ. ಇದನ್ನೆಲ್ಲಾ ಗಮನಿಸುತ್ತಿದ್ದ ಆ ಪ್ರವಾಸಿ ಮಂದಿರದ ಮೇಟಿ ಇವರನ್ನು ಒಂದು ಮೋಂಬತ್ತಿ ಉರಿಯುತ್ತಿದ್ದಾಗ ಅದನ್ನು ಆರಿಸಿ ಇನ್ನೊಂದು ಮೋಂಬತ್ತಿಯನ್ನು ಹಚ್ಚಿ ಕೆಲಸ ಮುಗಿಸುವ ಅವಶ್ಯಕತೆಯೇನಿತ್ತು ಎಂದು ಕೇಳಿದನಂತೆ. ಆಗ ಅವರೆಂದದ್ದು ಮೊದಲು ನಾನು ಬರೆಯುತ್ತಿದ್ದದ್ದು ಸರ್ಕಾರಿ ಪತ್ರ ಅದಕ್ಕಾಗಿ ನಾನು ಉಪಯೋಗಿಸುತ್ತಿದ್ದದ್ದು ಸರ್ಕಾರಿ ಮೇಣದ ಬತ್ತಿ ಮತ್ತು ನನ್ನ ಸ್ವಂತ ಕೆಲಸಕ್ಕಾಗಿ ಉಪಯೋಗಿಸುತ್ತಿರುವುದು ಸ್ವಂತದ ಮೇಣದ ಬತ್ತಿ ಎಂದರಂತೆ. ಇವರೊಬ್ಬರು ಶುದ್ಧ ಬುದ್ಧುಗಳೆಂದು ನಮ್ಮನ್ನಾಳುತ್ತಿರುವ ಇಂದಿನ ಪ್ರಜಾ-ಪ್ರಭುಗಳು ಭಾವಿಸಿದರೂ ಆಶ್ಚರ್ಯವಿಲ್ಲ?! ಅವರ ಜನ್ಮದಿನದ ಈ ಶುಭದಿನದಂದು ಅವರನ್ನೊಮ್ಮೆ ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಚಿತ್ರ ಕೃಪೆಃ ಕನ್ನಡ ವಿಕಿಪೀಡಿಯ

Comments