ಕುತುಬ್ ಮಿನಾರ್

ಕುತುಬ್ ಮಿನಾರ್

ಪಿಸಾ ಗೋಪುರಕ್ಕಿಂತಲೂ ಎತ್ತರವಾದ ಅಪೂರ್ವ ಗೋಪುರ ಹದಿಮೂರನೆಯ ಶತಮಾನದಲ್ಲಿ ನಮ್ಮ ಭಾರತ ದೇಶದಲ್ಲಿ ನಿರ್ಮಾಣಗೊಂದಿದೆ. ಅದುವೇ ದಿಲ್ಲಿಯ ಹೆಗ್ಗುರುತಾಗಿರುವ ಕುತುಬ್ ಮಿನಾರ್.

 

 

ದಿಲ್ಲಿಯ ಸುಲ್ತಾನನಾಗಿದ್ದ ಕುತುಬ್-ಉದ್-ದೀನ್ ಕ್ರಿ.ಶ. ೧೧೯೯ರ ಸುಮಾರಿನಲ್ಲಿ ಇದರ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ. ಆತನ ತರುವಾಯ ಆಡಳಿತ ವಹಿಸಿಕೊಂಡ ಸುಲ್ತಾನ್ ಇಲ್ತ್ ಮುಷ್ ೧೨೩೦ರ ಸುಮಾರಿಗೆ ನಿರ್ಮಾಣವನ್ನು ಪೂರ್ತಿಗೊಳಿಸಿದ. ಆಗ ಅದು ನಾಲ್ಕು ಅಂತಸ್ತಿನದ್ದಾಗಿತ್ತು. ಫಿರೋಜ್ ಷಾ ತುಘಲಕ್‍ನ ಕಾಲದಲ್ಲಿ ಸಿಡಿಲು ಬಡಿದು ನಾಲ್ಕನೆಯ ಅಂತಸ್ತು ನಾಶವಾಯಿತು. ಆಗ ಮೊದಲಿಗಿಂತ ಕಿರಿದಾದ ನಾಲ್ಕು ಮತ್ತು ಐದನೆಯ ಅಂತಸ್ತುಗಳನ್ನು ನಿರ್ಮಿಸಿದ.

ಹೀಗೆ ಒಟ್ಟು ಐದು ಅಂತಸ್ತುಗಳ ಈ ಗೋಪುರ ೭೩ಮೀ. ಎತ್ತರವಿದೆ. ಇದರ ಬುಡದ ಸುತ್ತಳತೆ ೧೫ಮೀ., ತುದಿಯ ಸುತ್ತಳತೆ ೨.೭ಮೀ., ಇದೆ.

ಕೆಳಗಿನ ಮೂರು ಅಂತಸ್ತುಗಳು ಬೆಣಚು ಕಲ್ಲಿನಿಂದ ನಿರ್ಮಿತವಾಗಿದೆ. ಅವಕ್ಕೆ ಕೆಮ್ಮರಳು ಶಿಲೆಯ ಹೊದಿಕೆ ಇದೆ. ನಾಲ್ಕು ಮತ್ತು ಐದನೆಯ ಅಂತಸ್ತುಗಳು ಕೆಂಪು ಶಿಲೆಯಿಂದ ನಿರ್ಮಿತವಾಗಿದೆ. ಅವಕ್ಕೆ ಅಮೃತ ಶಿಲೆಯ ಹೊದಿಕೆ ಇದೆ. ಹೊರಮೈ ಕುರಾನಿನ ಶ್ಲೋಕಗಳಿಂದಲೂ ಹೂವುಗಳ ಕೆತ್ತನೆಗಳಿಂದಲುಉ ಅಲಂಕೃತವಾಗಿದೆ. ದಿಲ್ಲಿಯ ಅತ್ಯಂತ ಮೋಹಕ ಪ್ರವಾಸಿ ಆಕರ್ಷಣೆಯಾದ ಈ ಗೋಪುರದ ತುದಿಗೇರಲು ಒಳಭಾಗದಲ್ಲಿ ೩೭೬ ಮೆಟ್ಟಿಲುಗಳಿವೆ. ಒಂದು ಕೋನದಲ್ಲಿ ನಿಂತು ನೋಡಿದಾಗ ಕುತುಬ್ ಮಿನಾರ್ ೨೫-೩೦ ಸೆಂ.ಮೀ. ಅಷ್ಟು ವಾಲಿರುವಂತೆ ಕಾಣಿಸುತ್ತದೆ.

ಯಾರಾದರೂ ಇದರ ಕಿವಿಗೆ ಪಿಸಾ ಗೋಪುರದ ಸುದ್ದಿ ಮುಟ್ಟಿಸಿರಬಹುದೇ? ಆದರೆ, ವಾಸ್ತವದಲ್ಲಿ ಅದು ವಾಲಿದ್ದಲ್ಲವೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಕುತುಬ್ ಮಿನಾರಿನ ಆವರಣದಲ್ಲಿ ಲೋಹಶಾಸ್ತ್ರದಲ್ಲಿ ಭಾರತೀಯರಿಗಿದ್ದ ನೈಪುಣ್ಯದ ಸಂಕೇತವಾದ ಕಬ್ಬಿಣದ ಕಂಬ ಒಂದಿದೆ. ಅದು ನಾಲ್ಕನೆಯ ಶತಮಾನದಲ್ಲಿ ನಿರ್ಮಾಣಗೊಂಡಿದ್ದು. ಸತತವಾದ ಗಾಳಿ ಮಳೆಗೆ ಮೈ ಒಡ್ಡಿಯೂ ತುಕ್ಕು ಹಿಡಿಯದೇ ನಿಂತಿರುವ ಇದರ ಮೇಲೆ ಚಂದ್ರಗುಪ್ತ ವಿಕ್ರಮಾದಿತ್ಯರ ವಿಜಯಗಳನ್ನು ಕೊಂಡಾಡುವ ಶಾಸನಗಳನ್ನು ಕೆತ್ತಲಾಗಿದೆ.

ಚಿತ್ರ ಕೃಪೆ: ಇಲ್ಲಿಂದ

Comments

Submitted by hamsanandi Mon, 09/24/2012 - 02:49

ಕುತುಬ್ ಮಿನಾರ್ ಕುತುಬುದ್ದೀನ್ ಗಿಂತ ಮೊದಲೇ ಇದ್ದಿತ್ತೆಂಬ ಒಂದು ವಾದವೂ ಇದೆ. ಅದನ್ನೂ ಬರೆದಿದ್ದರೆ ಚೆನ್ನಾಗಿತ್ತು ಅನಿಲ್.

Submitted by ಗಣೇಶ Mon, 09/24/2012 - 23:38

ಅನಿಲ್, ಬಹಳ ಸುಂದರ ಮಿನಾರ್. ನಾವು ದೆಹಲಿಗೆ ಹೋಗಿದ್ದಾಗ ಮೇಲೆ ಹತ್ತಿ ನೋಡಲು ಅವಕಾಶವಿತ್ತು. ನಂತರದ ವರ್ಷದಲ್ಲಿ ಅಲ್ಲಿ ಅವಘಡ ಸಂಭವಿಸಿ ಮೇಲೆ ಹತ್ತಲು ಬಿಡುತ್ತಿರಲಿಲ್ಲ. ಈಗದ ಕತೆ ಗೊತ್ತಿಲ್ಲ. (೨೫ ಸೆ.ಮೀ. ಮಾಲಿದ್ದಕ್ಕೂ ನನಗೂ ಸಂಬಂಧವಿಲ್ಲ :) ) -ಗಣೇಶ.