ನಾಗಕನ್ಯೆ

ನಾಗಕನ್ಯೆ

ಅಧ್ಯಾಯ ಒಂದು


ಅದು ಇಪ್ಪತ್ತನೆಯ ಶತಮಾನ...


ಕ್ರಿ.ಶ.೧೯೯೫


ಭರತ ಖಂಡದ.....ಕರ್ನಾಟಕ ಮಹಾಸಂಸ್ಥಾನದ.....ರಾಜಧಾನಿ ಬೆಂಗಳೂರು ಆಗಿನ್ನೂ ಪರಕೀಯರ ಹಾವಳಿಗೆ ಅಂದರೆ ತಮಿಳರು, ತೆಲುಗರು, ಕೇರಳಿಗರು ಮತ್ತು ಉತ್ತರ ಭಾರತೀಯರ ದಾಳಿಗೆ ಸಿಲುಕಿರಲಿಲ್ಲ.


ಮುಖ್ಯವಾಗಿ ಐ ಟಿ ಎಂಬ ಮಹಾಮಾಯೆ ಇನ್ನೂ ಬೆಂಗಳೂರನ್ನು ಆವರಿಸಿರಲಿಲ್ಲ. ಎಲ್ಲೆಡೆ ಮೇಲ್ಸೇತುವೆಗಳು, ಕೆಳರಸ್ತೆಗಳು, ರಸ್ತೆ ಅಗಲೀಕರಣಗಳು, ಮರಗಳ ಮಾರಣ ಹೋಮಗಳು, ಹೆಚ್ಚಾದ ವಾಹನ ದಟ್ಟಣೆ,ದುಬಾರಿ ಬೆಲೆಗಳು, ರಿಯಲ್ ಎಸ್ಟೇಟ್ ದಂಧೆಗಳು,ಹೆಚ್ಚಾದ ಪರಿಸರ ಮಾಲಿನ್ಯ, ಗಗನಚುಂಬಿ ಕಟ್ಟಡಗಳು, ಮಲಿಪ್ಲೆಕ್ಸ್ ಗಳು, ಮಾಲ್ ಗಳು, ಮೆಟ್ರೋ ಗಳು ಇದ್ಯಾವುದೂ ಇಲ್ಲದೆ ಬೆಂಗಳೂರು ಹಸಿರಿನಿಂದ ಕಾಲ ಕಾಲಕ್ಕೆ ತಕ್ಕಂತೆ ಮಳೆ ಆಗುತ್ತಾ ಸಮೃದ್ಧಿಯಾಗಿತ್ತು.


ಈ ಪರಿಸ್ಥಿತಿಯಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ವಾಸವಾಗಿದ್ದ ಮಧ್ಯಮ ವರ್ಗದ ಕುಟುಂಬದಲ್ಲಿ ವಾಸಿಸುತ್ತಿರುವ ನವಯುವ ತರುಣನೆ ನಮ್ಮ ಕಥಾನಾಯಕ ನಾಗರಾಜ.


ನಾಗರಾಜನ ಅಪ್ಪ ಅಮ್ಮ ಗಂಡಾಗಲಿ ಗಂಡಾಗಲಿ ಎಂದು ಸತತ ಮೂರು ಹೆಣ್ಣುಮಕ್ಕಳಿಗೆ ಜನ್ಮ ಕೊಟ್ಟ ನಂತರ ಕುಕ್ಕೆಯಲ್ಲಿ ಸರ್ಪ ಸಂಸ್ಕಾರ ಮಾಡಿಸಿದ ನಂತರ ಹುಟ್ಟಿದ ಕುಲಪುತ್ರ ಎಂಬ ಕಾರಣಕ್ಕೆ ಅವನಿಗೆ ನಾಗರಾಜ ಎಂದು ನಾಮಕರಣ ಮಾಡಿದ್ದರು.


ಮೂರು ಹೆಣ್ಣುಮಕ್ಕಳ ಸಂಸಾರ ಎಂದ ಮೇಲೆ ಅವರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸೊಲ್ಲೆತ್ತುವ ಹಾಗಿಲ್ಲ ಬಿಡಿ...


ನಾಗರಾಜ ತನ್ನ ಆರ್ಥಿಕ ಪರಿಸ್ಥಿತಿಯ ಕಾರಣದಿಂದಲೋ...ಅಥವಾ....ಅವನಿಗೆ ಓದು ಹತ್ತದಿರುವ ಕಾರಣವೋ ಏನೋ....ಹತ್ತನೇ ತರಗತಿಗೆ ತಿಲಾಂಜಲಿ ಇಟ್ಟಿದ್ದ...ನಂತರ ಅದೂ ಇದೂ ಕೆಲಸ ಮಾಡಿಕೊಂಡು...ಅಷ್ಟೋ ಇಷ್ಟೋ ಸಂಪಾದಿಸಿ ತನ್ನ ಕಾಲ ಮೇಲೆ ತಾನು ನಿಲ್ಲಲು ಶುರು ಮಾಡಿದ...ಹಾಗೆ ಕೆಲಸ ಮಾಡುತ್ತಲೇ ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಎಂ.ಕಾಂ ಪದವಿಯನ್ನು ಗಿಟ್ಟಿಸಿದ.


ಅಧ್ಯಾಯ ೨


ಇಪ್ಪತ್ತೊಂದನೆಯ ಶತಮಾನ


ಕ್ರಿ.ಶ ೨೦೦೧ ರಿಂದ ಮುಂದಕ್ಕೆ.


ನಮ್ಮ ಕಥಾನಾಯಕ ನಾಗರಾಜ ಎಂ ಕಾಂ ಮಾಡಿದರೆ ಒಳ್ಳೆಯ ಕೆಲಸ ಸಿಗಬಹುದು, ಒಳ್ಳೆಯ ಸಂಪಾದನೆ ಮಾಡಬಹುದು...ಎಲ್ಲಕ್ಕಿಂತ ಮುಖ್ಯವಾಗಿ ಒಂದು ಒಳ್ಳೆಯ ಹುಡುಗಿಯನ್ನು ನೋಡಿ ಮದುವೆ ಆಗಬಹುದು ಎಂದು ತೀರ್ಮಾನಿಸಿ ಎಂ ಕಾಂ ಪದವಿಯನ್ನು ತೆಗೆದುಕೊಂಡಿದ್ದ.


ಆದರೆ ಅವನೇನೂ ಕಾಲಜ್ಞಾನಿಯಲ್ಲವಲ್ಲ!! ಮುಂದೇನು ಆಗುವುದು ಎಂಬುದನ್ನು ಊಹಿಸಲು....


ಅವನು ಊಹಿಸಿರದ ಹಾಗೆಯೇ ಆಗಿ ಹೋಯಿತು...ಐ ಟಿ ಎಂಬ ಮಹಾಮಾಯೆ ಬೆಂಗಳೂರನ್ನು ತನ್ನ ಕಬಂಧ ಬಾಹುಗಳಲ್ಲಿ ಬಂಧಿಸತೊಡಗಿತ್ತು. ಬೆಂಗಳೂರು ನಿಧಾನವಾಗಿ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿತ್ತು. ಒಂದೊಂದೇ ಐ ಟಿ ಕಂಪನಿಗಳು ಬೆಂಗಳೂರಿಗೆ ಲಗ್ಗೆ ಇಡಲು ಶುರು ಮಾಡಿದವು.


ಮಾಹಿತಿ ತಂತ್ರಜ್ಞಾನದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದ್ದಂತೆ ಪೋಷಕರು ತಮ್ಮ ಮಕ್ಕಳನ್ನು...ಅವರವರ ಇಚ್ಛೆಗೆ ವಿರುದ್ಧವಾಗಿ...ಎಲ್ಲರನ್ನೂ ಬೀ ಇ, ಎಂ ಸಿ ಏ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಅಗತ್ಯವಿರುವ ಓದನ್ನೇ ಓದಿಸಲು ಮುಂದಾದರು.ಇದರ ಪರಿಣಾಮ ಬೇರೆ ಓದನ್ನು ಓದುವ ವಿದ್ಯಾರ್ಥಿಗಳಿಗೆ ಬೆಲೆ ಇಲ್ಲದ ಹಾಗಾಯಿತು. ಕಲಾಶಾಲೆಗಳಂತೂ ವಿದ್ಯಾರ್ಥಿಗಳಿಲ್ಲದೆ ಕಲಾ ವಿಷಯವನ್ನು ನಿಲ್ಲಿಸಲು ಆಲೋಚಿಸಿದರು. ಬೇರೆ ಓದನ್ನು ಓದಿದವರು ಅನುಭವ ಹೆಚ್ಚಿದ್ದರೂ....ತಮಗಿಂತ ಕಡಿಮೆ ಅನುಭವ ಇರುವ ಚಿಕ್ಕ ವಯಸಿನವರು ಹೆಚ್ಚಿನ ಪಗಾರ ತೆಗೆದುಕೊಳ್ಳುವುದನ್ನು ನೋಡಿ ಕರುಬುವಂತಾಯಿತು. ಬೆಂಗಳೂರನ್ನು ಅತ್ಯಾಚಾರ ಮಾಡಲು ಪರಕೀಯರು ದಾಳಿ ಶುರು ಮಾಡಿದರು. ಬೆಂಗಳೂರು ಬೆಳೆಯಲು ಶುರುವಾಯಿತು. ರಸ್ತೆಗಳು ಅಗಲವಾಗುತ್ತಿದ್ದಂತೆ ಮರಗಳು ಕಾಣೆಯಾದವು...ಭೂಮಿಯ ಬೆಲೆ ಕೇಳಿದರೆ ಮೂರ್ಚೆ ಬೀಳುವಂತಾಯಿತು...ಗಲ್ಲಿಗೊಂದರಂತೆ ಅಪಾರ್ಟ್ಮೆಂಟ್ ಗಳು ತಲೆ ಎತ್ತಿದವು...ಜನ ಒಂದು ಬೆಂಕಿ ಪೊಟ್ಟಣ ಕೊಳ್ಳಲೂ ಸೂಪರ್ ಮಾರ್ಕೆಟ್ ಗಳನ್ನೂ, ಮಾಲ್ ಗಳನ್ನು ಎಡತಾಕುವಂತಾಯಿತು...


ಅದೆಲ್ಲ ಸರಿ ಅದಕ್ಕೂ ನಮ್ಮ ಕಥಾನಾಯಕನಿಗೂ ಏನು ಸಂಬಂಧ ಇದೆ ಎಂದಿರಾ???


ಬಂದೆ...ಬಂದೆ...ಅಲ್ಲಿಗೆ ಬಂದೆ...


ಇಷ್ಟೆಲ್ಲಾ ಬೆಳವಣಿಗೆ ಆಗುವಷ್ಟರಲ್ಲಿ ನಮ್ಮ ನಾಗನೂ...ಅದೇರೀ ನಮ್ಮ ನಮ್ಮ ನಾಗರಾಜನೂ...ಒಂದು ಖಾಸಗಿ ಸಂಸ್ಥೆಯಲ್ಲಿ ಲೆಕ್ಕ ಪರಿಶೋಧಕನಾಗಿ ಕೆಲಸ ನಿರ್ವಹಿಸುತ್ತಿದ್ದಒಂದು ಹದಿನೈದು ಸಾವಿರದಷ್ಟು ಪಗಾರವನ್ನೂ ಸಂಪಾದಿಸುತ್ತಿದ್ದ...ಈಗ ಕ್ರಿ.ಶ.೨೦೧೦. ನಮ್ಮ ನಾಯಕನಿಗೆ ೨೮ ವರ್ಷ ತುಂಬಿದವು...ಅಂದರೆ ಅವನೂ ಮದುವೆ ವಯಸಿಗೆ ಬಂದಿದ್ದಾನೆ ಎಂದು ಚಿಂತಿಸಿದ ಅವನ ಪೋಷಕರು ಅವನಿಗೊಂದು ಕನ್ಯೆಯನ್ನು ಹುಡುಕುವ ಅಭಿಯಾನ ಶುರು ಮಾಡಿದರು.


ಅಸಲು ಸಮಸ್ಯೆ ಶುರುವಾಗಿದ್ದೆ ಇಲ್ಲಿ ನೋಡಿ...


ಅಧ್ಯಾಯ ೩


ನಮ್ಮ ನಾಗ ನೋಡಲು ಸ್ವಲ್ಪ ಹೆಚ್ಚೇ ಎನಿಸುವಷ್ಟು ಅಂದವಾಗಿದ್ದ...ಆದ್ದರಿಂದ ನಾಗನಿಗೂ ಹಾಗೂ ಅವನ ಪೋಷಕರಿಗೂ ಕನ್ಯೆಯನ್ನು ಹುಡುಕುವುದು ಕಷ್ಟ ಆಗುವುದಿಲ್ಲ ಎಂಬ ನಂಬಿಕೆ ಇದ್ದಿತು...ಆದರೆ ಆ ನಂಬಿಕೆ ಹುಸಿಯಾಗಲು ಬಹಳ ದಿನ ಬೇಕಾಗಲಿಲ್ಲ.ನಾಗನ ಭಾವಚಿತ್ರ ಮತ್ತು ಜಾತಕವನ್ನು ತಿಳಿದವರಿಗೆ, ತಿಳಿಯದವರಿಗೆ?? ಅಂದರೆ ವಧು ವರಾನ್ವೇಷಣೆ ಕೇಂದ್ರದವರಿಗೆ ಎಲ್ಲರಿಗೂ ಕೊಟ್ಟು ಒಂದು ಕನ್ಯೆಯನ್ನು ಹುಡುಕಲು ಹೇಳಿದರು. ಮಾಹಿತಿಗಳನ್ನು ಕೊಟ್ಟು ವಾರಗಳು, ತಿಂಗಳು ಕಳೆದರೂ ಯಾರಿಂದಲೂ ಧನಾತ್ಮಕ ಪ್ರತಿಕ್ರಿಯೆ ಬರದಿದ್ದಾಗ ಕಾರಣ ವಿಚಾರಿಸಿದರೆ ಈ ಕೆಳಕಂಡ ಕಾರಣಗಳು ಕೇಳಿ ಬಂದವು...


೧) ಹುಡುಗ ಬಿ ಇ ಮಾಡಿರಬೇಕು


೨) ತಿಂಗಳಿಗೆ ಕನಿಷ್ಠ ಪಕ್ಷ ೪೦ ರಿಂದ ೫೦ ಸಾವಿರ ಪಗಾರ ಇರಬೇಕು


೩) ಸ್ವಂತ ಮನೆ ಇರಬೇಕು


ಇವಿಷ್ಟು ಖಡ್ಡಾಯವಾಗಿ ಇರಲೇಬೇಕಾದ ಅರ್ಹತೆಗಳಾದರೆ....ಇನ್ನೂ ಕೆಲವರು ಇನ್ನಷ್ಟು ಮುಂದುವರಿದು ನಂತರದ ಕೋರಿಕೆಗಳನ್ನು ಕೇಳಲು ಶುರು ಮಾಡಿದರು.


ಮೊದಲ ಮೂರು ಅರ್ಹತೆಗಳ ಜೊತೆ ಕೆಲವು ನಿರ್ಬಂಧಗಳು


೧) ಮದುವೆ ಆಗುವ ಹುಡುಗ ಒಬ್ಬನೇ ಮಗ ಆಗಿರಬೇಕು


೨) ಅಕ್ಕ ತಂಗಿಯರು ಇದ್ದರೆ ಅವರೆಲ್ಲರಿಗೂ ಮದುವೆ ಆಗಿರಬೇಕು


೩) ಮದುವೆ ಆದ ಮೇಲೆ ರಾಹು ಕೇತುಗಳು (ಅಪ್ಪ,ಅಮ್ಮ) ಜೊತೆಯಲ್ಲಿ ಇರಬಾರದು


ಇವಿಷ್ಟು ಕೇವಲ ಬಿ ಇ ಅಥವಾ ಎಂ ಸಿ ಏ ಮಾಡಿರುವ ಹುಡುಗಿಯರ ಅಥವಾ ಅವರ ಪೋಷಕರ ಬೇಡಿಕೆಗಳು/ನಿರ್ಬಂಧಗಳು ಆಗಿರಲಿಲ್ಲ. ಬೇರೆ ಓದನ್ನು ಓದಿರುವ ಹುಡುಗಿಯರದೂ ಇದೆ ಪರಿಸ್ಥಿತಿ ಆದಾಗ ನಮ್ಮ ಕಥಾನಾಯಕ ಹತಾಶನಾಗಿ ಹೋದ.


ಕ್ರಿ.ಶ ೨೦೧೦ ರಿಂದ ೨೦೧೨ ರವರೆಗೂ ಎಲ್ಲಿ ಹೋದರೂ ಇದೆ ಮಾತುಗಳನ್ನು ಕೇಳಿ ಕೇಳಿ ಮದುವೆಯ ಮೇಲೆ ವಿರಕ್ತಿ ಬಂದು ಬಿಟ್ಟಿತ್ತು...


ಈಗ ಇತ್ತೀಚಿಗೆ ಹೊಸದೊಂದು ಮಾತು ಬೇರೆ ಕೇಳಿ ಬರಲು ಶುರುವಾಯಿತು....


ಹುಡುಗನಿಗೆ ಮೂವತ್ತು ವರ್ಷ ಆಗಿ ಹೋಗಿದೆ....೨೮ ಆಗಿದ್ದರೆ ನೋಡಬಹುದಿತ್ತು....


ಇನ್ನು ಮದುವೆಯೇ ಬೇಡ ಎಂದು ನಮ್ಮ ನಾಗ ಮತ್ತು ನಾಗನ ಪೋಷಕರು ಕನ್ಯೆ ನೋಡುವ ಅಭಿಯಾನಕ್ಕೆ ಮುಕ್ತಾಯ ಹಾಡಿದರು.

Rating
No votes yet

Comments

Submitted by ಗಣೇಶ Tue, 10/02/2012 - 00:28

ಜಯಂತ್,
ನಿಮ್ಮ ಸರಣಿ ಕತೆಗಳು ಕೆಲವು ಓದಲಾಗಿರಲಿಲ್ಲ. ಈಬಾರಿ ಹಾಗಾಗಬಾರದೆಂದು ಮೊದಲ ಅಧ್ಯಾಯದಿಂದಲೇ ಓದೋಣ ಅಂತ ನೋಡಿದೆ.:) ಕತೆ ಚೆನ್ನಾಗಿದೆ.

Submitted by venkatb83 Tue, 10/02/2012 - 13:53

"ಮಾಹಿತಿ ತಂತ್ರಜ್ಞಾನದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದ್ದಂತೆ ಪೋಷಕರು ತಮ್ಮ ಮಕ್ಕಳನ್ನು...ಅವರವರ ಇಚ್ಛೆಗೆ ವಿರುದ್ಧವಾಗಿ...ಎಲ್ಲರನ್ನೂ ಬೀ ಇ, ಎಂ ಸಿ ಏ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಅಗತ್ಯವಿರುವ ಓದನ್ನೇ ಓದಿಸಲು ಮುಂದಾದರು.ಇದರ ಪರಿಣಾಮ ಬೇರೆ ಓದನ್ನು ಓದುವ ವಿದ್ಯಾರ್ಥಿಗಳಿಗೆ ಬೆಲೆ ಇಲ್ಲದ ಹಾಗಾಯಿತು. ಕಲಾಶಾಲೆಗಳಂತೂ ವಿದ್ಯಾರ್ಥಿಗಳಿಲ್ಲದೆ ಕಲಾ ವಿಷಯವನ್ನು ನಿಲ್ಲಿಸಲು ಆಲೋಚಿಸಿದರು. ಬೇರೆ ಓದನ್ನು ಓದಿದವರು ಅನುಭವ ಹೆಚ್ಚಿದ್ದರೂ....ತಮಗಿಂತ ಕಡಿಮೆ ಅನುಭವ ಇರುವ ಚಿಕ್ಕ ವಯಸಿನವರು ಹೆಚ್ಚಿನ ಪಗಾರ ತೆಗೆದುಕೊಳ್ಳುವುದನ್ನು ನೋಡಿ ಕರುಬುವಂತಾಯಿತು. ಬೆಂಗಳೂರನ್ನು ಅತ್ಯಾಚಾರ ಮಾಡಲು ಪರಕೀಯರು ದಾಳಿ ಶುರು ಮಾಡಿದರು. ಬೆಂಗಳೂರು ಬೆಳೆಯಲು ಶುರುವಾಯಿತು. ರಸ್ತೆಗಳು ಅಗಲವಾಗುತ್ತಿದ್ದಂತೆ ಮರಗಳು ಕಾಣೆಯಾದವು...ಭೂಮಿಯ ಬೆಲೆ ಕೇಳಿದರೆ ಮೂರ್ಚೆ ಬೀಳುವಂತಾಯಿತು...ಗಲ್ಲಿಗೊಂದರಂತೆ ಅಪಾರ್ಟ್ಮೆಂಟ್ ಗಳು ತಲೆ ಎತ್ತಿದವು...ಜನ ಒಂದು ಬೆಂಕಿ ಪೊಟ್ಟಣ ಕೊಳ್ಳಲೂ ಸೂಪರ್ ಮಾರ್ಕೆಟ್ ಗಳನ್ನೂ, ಮಾಲ್ ಗಳನ್ನು ಎಡತಾಕುವಂತಾಯಿತು..."

:((((

ಜಯಂತ್ ಅವ್ರೆ
ನಿಮ್ ಬರಹಗಳಲ್ಲಿ ಇದ್ವರ್ಗೆ ನಾ ಓದಿದ್ದರಲ್ಲಿ ಇದಕ್ಕೆ ವಿಶೇಷ ಸ್ಥಾನ...
ಹೂರಣವೇ ವಿಶೇಷವಾಗಿದೆ...
ಮತ್ತು ಸಧ್ಯಕ್ಕೆ ನನ್ನ (ನನ್ನಂಥವರ ) ಸ್ತಿತಿಗೆ - ಪರಿಸ್ತಿತಿಗೆ ಹತ್ತಿರವಾಗಿದೆ...!!
ಬರಹದಲಿನ ಬಹುಪಾಲು ಸಾಲುಗಳು ಅಕ್ಚರಶಹ ನಿಜ..:(
ಈಗೀಗ ಈ ಮದುವೆ ವಯಸ್ಸು ಮತ್ತು ಸರಕಾರೀ ಉದ್ಯೋಗ ಪಡೆಯಲು ಇರುವ ವಯಸ್ಸಿನ ನಿರ್ಬಂಧ ಒಂದೇ ರೀತಿ ಆಗೋಗಿದೆ...!!
ನಿಮ್ಮ ಮಾಮೂಲಿ ಬರಹಗಳಿಗಿಂತ ವಿಭಿನ್ನ ಬರಹ ಮತ್ತು ಬರೆದ ಶೈಲಿಯು ಸಖತ್...
ನಾಗರಾಜನಿಗೆ ಮದುವೆ ಮಾಡಲೇಬೇಕು...!!
ಬನ್ನಿ ನಾವೆಲ್ಲಾ ಸೇರಿ ಮತ್ತೊಮ್ಮೆ ಹೆಣ್ಣು ಹುಡುಕುವ ಕೆಲಸ ಶುರು ಮಾಡುವ.....!!
ಬರಹ ಓದಿ ನಗೆ ಬಂದರೂ ವಿಷಯದ ಗಂಭೀರತೆಯಿಂದ ಮನ ಮುದುಡಿತು ಮರುಗಿತು.. :((

ನನ್ನಿ
ಶುಭವಾಗಲಿ..

ಶುಭ ದಿನ...

\|/

Submitted by Jayanth Ramachar Wed, 10/03/2012 - 07:46

ಹೌದು ವೆಂಕಟೇಶ್ ಅವರೇ, ಇತ್ತೀಚಿಗೆ ಹುಡುಗಿಯರು ಮತ್ತು ಅವರ ಪೋಷಕರು ಹುಡುಗನ ಗುಣಕ್ಕಿಂತ ಅವನ ಓದು, ಸಂಪಾದನೆ ಇದರ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದರಿಂದ ಬೇರೆ ವಿಷಯ ಓದಿದವರಿಗೆ ಹೆಣ್ಣುಗಳು ಸಿಗುತ್ತಿಲ್ಲ. ಇದೊಂದು ವಿಷಾದಕರ ಬೆಳವಣಿಗೆ :( ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಕೊಂಡು ಬರೆದ ಕಥೆ ಇದು. ಶೈಲಿಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು

Submitted by H A Patil Thu, 10/04/2012 - 12:57

ಜಯಂತ ರಾಮಾಚಾರ ರವರಿಗೆ ವಂದನೆಗಳು
ನಿಮ್ಮ ಕಡೆಯ ವರ ನಾಗನ ವಧು ಅನ್ವೇಷಣೆ ಫಲಕಾರಿ ಯಾಗದುದುದನ್ನು ಕೇಳಿ ಬೇಸರವಾಯಿತು. ವಧುಗಳ ಬೇಡಿಕೆಗಳು ಈಡೇರಿಸ ಲಸಾಧ್ಯ ವಾದವುಗಳು. ಆದರೂ ನಾಗನ ಪರಿಸ್ಥಿತಿಯ ಬಗ್ಗೆ ನಮಗೆ ಸಹಾನುಭೂತಿಯಿದೆ. ಇದಕ್ಕೆ ಪ್ರತಿಕಾರ ತೀರಿಸಿ ಕೊಳ್ಳಬೇಕೆಂದಿದ್ದರೆ ಆತ ಬಿಡದಿಯ ನಿತ್ಯಾನಂದ ಆಶ್ರಮಕ್ಕೆ ಸೇರಿ ಮರಿಸ್ವಾಮಿಯಾಗುವುದು ಒಳ್ಳೆಯದೆಂದು ನನ್ನ ಪ್ರಾಮಾಣಿಕ ಕಳಕಳಿಯ ಅನಿಸಿಕೆ. ದಯವಿಟ್ಟು ನೀವು ಮತ್ತು ನಿಮ್ಮ ನಾಗ ಇಬ್ಬರೂ ಬೇಸರಿಸಿ ಕೊಳ್ಚದಿರಿ. ಈ ಎಲ್ಲ ಅಡೆತಡೆಗಳ ಮಧ್ಯೆಯೂ ನಿಮ್ಮ ನಾಗನಿಗೆ ಅನುರೂಪ ವಧು ದೊರೆ ಯಲಿ, ಆತನ ತಲೆಯ ಮೇಲೆ ನಾಕು ಅಕ್ಷತೆ ಕಾಳು ಹಾಕುವ ಸೌಭಾಗ್ಯ ನಮ್ಮೆಲ್ಲರದಾಗಲಿ. ನಾಗನಿಗೆ ಶುಭಾಶಯಗಳು.

Submitted by Jayanth Ramachar Fri, 10/05/2012 - 08:48

In reply to by H A Patil

ಪಾಟೀಲರೆ ನಿಮ್ಮ ಸಲಹೆಯನ್ನು ಪಾಲಿಸಲು ಈಗ ಬಿಡದಿಯ ಆಶ್ರಮದಲ್ಲಿ ದೀಕ್ಷೆ ಕೊಡಲು ಹಿರಿ ಸ್ವಾಮಿಗಳೇ ಇಲವಲ್ಲ ?? :) ಧನ್ಯವಾದಗಳು

Submitted by H A Patil Fri, 10/05/2012 - 11:25

In reply to by Jayanth Ramachar

ಜಯಂತ ರಾಮಾಚಾರ ರವರಿಗೆ ವಂದನೆಗಳು
ಹೌದು ನಿಮ್ಮ ಮಾತು ನಿಜ, ನೈತಿಕ ಮೌಲ್ಯಗಳ ಅಧಃ ಪತನದ ಬಿಡದಿಯ ಸಹವಾಸವೆ ಬೇಡ ಬಿಡಿ, ಮದುವೆ ಯಾಗದೆಯೆ ಜೀವನದಲ್ಲಿ ಸಾಧನೆ ಮಾಡಿದ ಸಾದಕರ ಪರಂಪರೆಯೂ ನಮ್ಮಲ್ಲಿ ಉಂಟು, ಉದಾಹರಣೆಗೆ ಬೆಂಗಳೂರು ವಿಶ್ವ ವಿದ್ಯಾಲಯದ ಮಾಜಿ ಉಪ ಕುಲಪತಿ ದಿ.ಹೆಚ್.ನರಸಿಂಹಯ್ಯನವರು ಮುಂತಾದವರು ಬಾಳಿ ಹೋದ ಮೌಲ್ಯಯುತ ಬದುಕುಗಳು ನಮ್ಮ ಮುಂದೆ ಇವೆ.