ನೋಟ

ನೋಟ

 

ಆತನೊಳಬರುವುದನು ತಡೆಯಲಿಲ್ಲ;

ಮೊಗವ ಮತ್ತೊಂದೆಡೆಗೆ ತಿರುವಲಿಲ್ಲ;

ಕಟಪಟೆಯ ಸೆಡವು ಮಾತಾಡಲಿಲ್ಲ.

ಮೊದಲಿನಿಯನಾಗಿದ್ದುದನು  ಗಣಿಸಲಿಲ್ಲ

ನೇರ ದಿಟ್ಟಿಯ ಕಣ್ಣ ನೋಟವಿಟ್ಟು

ಪರಕೀಯನೆಂಬಂತೆ ಕಂಡಳಲ್ಲ!

 

ತೊಗೊಳ್ಳೀ ಸ್ವಾಮಿ, ಇದೇ ಪದ್ಯದ ಇನ್ನೊಂದು ರೂಪ , ಒಂದು ಭಾಮಿನಿ ಷಟ್ಪದಿಯಲ್ಲಿ:

 

ತಡೆಯದವನೊಳ ಬರುವುದನು ಬೇ

ರೆಡೆಗೆ ತಿರುವದೆ ತನ್ನ ಮೊಗವನು

ಸೆಡವಿನಲಿ ಕಟಪಟೆಯ ನುಡಿಗಳನಾಡದೆಲೆಯವಳು

ನೆಡುತ ನೇರದ ದಿಟ್ಟಿಯವನಲಿ

ಪೆಡೆಯನಂತೆಯೆ ಕಾಣುತಿರುವಳು

ಗೊಡವೆಯಿಲ್ಲದೆ ಮೊದಲಿಗವ ತನ್ನಿನಿಯನೆಂಬುದನು

 

ಸಂಸ್ಕೃತ ಮೂಲ:  (ಅಮರುಕವಿಯ ಅಮರು ಶತಕದಿಂದ)

 

ನಾಂತಃ ಪ್ರವೇಶಮರುಣದ್ವಿಮುಖೀ ನ ಚಾಸೀ-

ದಾಚಷ್ಟ ರೋಷಪರುಷಾಣಿ ನ ಚಾಕ್ಷರಾಣಿ |

ಸಾ ಕೇವಲಂ ಸರಲಪಕ್ಷ್ಮಭಿರಕ್ಷಿಪಾತೈಃ

ಕಾಂತಂ ವಿಲೋಕಿತವತೀ ಜನನಿರ್ವಿಶೇಷಮ್ ||

 

नान्तः प्रवेशमरुणाद्विमुखी न चासी-

दाचष्टरोष परुषाणि न चाक्षराणि  ।

सा केवलं सरलपक्ष्मभिरक्षिपातैः

कान्तं विलोकितवती जननिर्विशेषं  । ।

 

-ಹಂಸಾನಂದಿ

 

ಕೊ: ಪೆಡೆಯ = ಹೊಸಬ

 

ಕೊ.ಕೊ: ಈ ಪದ್ಯದ ಬಗ್ಗೆ ಮಾತಾಡುತ್ತಿದ್ದಾಗ ಗೆಳೆಯ ಮಂಜುನಾಥ ಕೊಳ್ಳೇಗಾಲ ಅವರೊಡನೆ, ಈ ಪದ್ಯವನ್ನೂ ನನ್ನ ಅನುವಾದವನ್ನೂ ಹಂಚಿಕೊಂಡೆ. ಆಗ ಅವರು ಇದಕ್ಕೆ ಅಮರುವಿನ ಕವಿತೆಯ ನವಿರುತನವನ್ನು ಉಳಿಸಿಕೊಳ್ಳುವಂತಹ  ,  ಅನುವಾದವೆಂದರೆ ಹೀಗಿರಬೇಕೆನ್ನಿಸುವಂತಹ  ಒಂದು ಅತಿ ಸುಂದರ ಅನುವಾದವನ್ನು ಹೀಗೆ ಚೌಪದಿಯನ್ನು ಹೀಗೆ ಬರೆದಿದ್ದಾರೆ. ಅದನ್ನು  ನೀವು ಓದಲೇಬೇಕು!

 

ನಲ್ಲನೊಳಬಂದನೆನೆ ಸಿಡುಕಿಲ್ಲ ಕೆಡುಕಿಲ್ಲ

ಹೊಲ್ಲಬೈಗಳವಿಲ್ಲ ಮೊಗದಿರುಹಲಿಲ್ಲ

ಎಲ್ಲವಂ ಬರಿಯ ನಿಡುಗಣ್ಣೋಟದೊಳ್ ತುಂಬಿ

ನಲ್ಲನನೀಕ್ಷಿಪಳು ಪರಕೀಯನಂತೆ

Rating
No votes yet

Comments

Submitted by ಗಣೇಶ Tue, 10/02/2012 - 00:35

ಹಂಸಾನಂದಿಯವರೆ,
ತಾವು ಹಾಗು ಮಂಜುನಾಥ ಅವರು ಬರೆದ ("ಅಮರು ಕವಿ"ಯ ಕವನದ) ಅನುವಾದ ಕವಿತೆಗಳು ಸೂಪರ್ ಆಗಿದೆ.

Submitted by venkatb83 Tue, 10/02/2012 - 13:56

ಇನಿಯನನ್ನು ಪರಕೀಯನಂತೆ ಧಿಟ್ಟಿಸಿದ್ದು ಯಾಕೆ???
ಅರ್ಥ ಆಗಲಿಲ್ಲ....

ಉಳಿದಂತೆ ಪದ್ಯ ಸೂಪರ್... ಅಂದ್ ಹಾಗೆ ನೀವು ಚಿತ್ರವನ್ನು ಸೇರಿಸಬಹುದಿತ್ತಲ್ಲ..

ಶುಭವಾಗಲಿ..

ನನ್ನಿ

\|