ಶಂಕರನಾಗ್ - ಒಂದು ನೆನಪು

ಶಂಕರನಾಗ್ - ಒಂದು ನೆನಪು

ಚಿತ್ರ

                 ಶಂಕರನಾಗ್ - ಒಂದು ನೆನಪು
                                - ಲಕ್ಷ್ಮೀಕಾಂತ ಇಟ್ನಾಳ
                                                                                                                                         
     ಅದು 1990 ರ ದಸರೆಯ ದಿನಗಳು. ದೂರದರ್ಶನ ಮಾತ್ರ ಪ್ರಚಲಿತವಿದ್ದ ದಿನಗಳವು. ಲೋಕಾಪೂರದಲ್ಲಿದ್ದ ನೀರಾವರಿ ಕಚೇರಿಯಲ್ಲಿ ನನಗೆ ಕೆಲಸ.  ದಸರೆಯ ರಜೆಯ ದಿನಗಳಲ್ಲಿ ಲೋಕಾಪೂರದಲ್ಲಿ ಬಸ್ ನಿಲ್ದಾಣದಲ್ಲಿ ನಿಂತಾಗ  ಹಿಂದಿನಿಂದ ಯಾರೋ  ಅದೂ ಇದೂ ಮಾತಾಡುತ್ತ ನಾಳೆ ಅಂದರೆ ಸಪ್ಟಂಬರ 30 ರಂದು ಲೋಕಾಪೂರಕ್ಕೆ ಶಂಕರನಾಗ ಬರುವ ಸುದ್ದಿ ಮಾತನಾಡುತ್ತಿದ್ದರು. ಅರೆ! ಕಿವಿಗಳನ್ನೇ ನಂಬದಾದೆ. ಎಂಥ ಅವಕಾಶವೊಂದನ್ನು ಕಳೆದುಕೊಳ್ಳುತ್ತಿದ್ದೆ ಎಂದುಕೊಂಡೆ. ಏಕೆಂದರೆ ಮರುದಿನ ರವಿವಾರ ನಾನು ದಸರೆಯ ಹಬ್ಬಕ್ಕೆ ತವರಿಗೆ ಹೋಗಿದ್ದ ಬಾಳಗೆಳತಿಯನ್ನು  ಕರೆತರಲು ಹೂವಿನ ಹಡಗಲಿಗೆ ಹೋಗುವವನಿದ್ದೆ.  ನಾನು ಶಂಕರನಾಗ್ ಅಭಿಮಾನಿ. ವಿಷಯ ನನಗೇ ಗೊತ್ತಿಲ್ಲವಲ್ಲ! ಎಂದುಕೊಂಡು ಅವರನ್ನು ನಾನೇ ಮಾತಿಗೆ ಎಳೆದು ‘ಎಲ್ಲಿ, ಯಾವ ಜಾಗಕ್ಕೆ ಬರುತ್ತಾರೆ’ ಎಂದೆಲ್ಲ ತಿಳಿದುಕೊಂಡೆ.  ಅಲ್ಲಿ “ಜೋಕುಮಾರಸ್ವಾಮಿ” ಶೂಟಿಂಗ್ ಗಾಗಿ ಕೆಲವೊಂದು ಸ್ಥಳಗಳನ್ನು ನೋಡಿದ್ದಾರೆ ಎಂಬುದು ತಿಳಿಯಿತು.  ದೇಸಾಯಿಯವರ ವಾಡೆ, ಮುಧೋಳ ತಾಲೂಕಿನ ಇನ್ನೂ ಕೆಲವು ಆಯ್ದ ಸ್ಥಳಗಳಲ್ಲಿ ಶೂಟಿಂಗ್ ಆಗಲಿದೆ ಎಂಬುದನ್ನೂ ಅವರು ತಿಳಿಸಿದರು. ಶಂಕರ್ ನಾಗ್ ಅಭಿಮಾನಿಯಾದ ನನಗೂ ಶಂಕರನಾಗ್ ಅವರನ್ನು ನೋಡುವ ಆಶೆ. ಅವರನ್ನು ಮಾತನಾಡಿಸುವ ಸಾಧ್ಯತೆಯ ಬಯಕೆ ಚಿಗುರೊಡೆದು, ಹಾತೊರೆಯತೊಡಗಿತು ಮನಸು. ಅವರು ಕಂಡ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಕನಸುಗಳು, ಹಾಗೂ ಕರ್ನಾಟಕದ ಬಗ್ಗೆ ಕಟ್ಟಿಕೊಂಡ ಅಭಿವೃದ್ಧಿ ಯೋಜನೆಗಳನ್ನು ಪತ್ರಿಕೆಗಳಲ್ಲಿ ಬಂದ ಅವರ ಸಂದರ್ಶನಗಳಲ್ಲಿ ಓದಿದ್ದೆ. ಗಿರೀಶ ಕಾರ್ನಾಡರ, ‘ಒಂದಾನೊಂದು ಕಾಲದಲ್ಲಿ’ಯ ಗಂಡುಗಲಿ, ಮಿಂಚಿನ ಓಟ. ಎಕ್ಷಿಡೆಂಟ್, ಸಾಂಗ್ಲಿಯಾನಾ,  ಸಿಬಿಐ ಶಂಕರ, ನೋಡಿ ಸ್ವಾಮಿ ನಾವಿರೋದು ಹೀಗೆ, ಒಂದು ಮುತ್ತಿನ ಕಥೆ, ಆಟೋರಾಜ, ಸಾಂಗ್ಲಿಯಾನಾ ಹಾಗೂ ‘ನಾಗಮಂಡಲ’ವನ್ನು ಸ್ಟೇಜ್ ಗೆ  ಅಳವಡಿಸಿದ್ದು, ಮನೆ ಮನೆ ಮಾತಾಗಿದ್ದ ‘ಸ್ವಾಮಿ’ ಧಾರಾವಾಹಿಯ ಮೂಲಕ ದೇಶಧ ಉದ್ದಗಲಕ್ಕೂ ಪರಿಚಿತರಾಗಿದ್ದ ಅಂತಹ ಮಹಾನ್ ನಟನನ್ನು ನೋಡುವ ಸುದೈವ ಮನೆಬಾಗಿಲಿಗೇ ಬಂದಿತ್ತು.  ಅವರನ್ನು ನೋಡಲೇ ಬೇಕೆಂದು ನಿರ್ಧರಿಸಿದೆ. ರವಿವಾರದ ದಿನ ಶೂಟಿಂಗ್ ನೋಡಲು ಮುಗಿಬಿದ್ದ ಜನಸಾಗರದಲ್ಲಿ ಅವರನ್ನು ನೋಡುವುದಾಗಲಿ, ಮಾತನಾಡಿಸುವುದಾಗಲಿ, ಅವರ ಜೊತೆ ಫೋಟೋ ತೆಗೆಸಿಕೊಳ್ಳುವುದಾಗಲಿ ಸಾಧ್ಯವಾಗದೇ ಹೋದರೆ, ಅದಕ್ಕೇ ಇನ್ನೊಂದು ದಿನ ಇರಲಿ ಎಂದು ಸೋಮವಾರವೂ  ಕಚೇರಿಗೆ ರಜೆ ಹಾಕಿ ಬರೋಣ ಎಂದು ಮತ್ತೆ ಆಫೀಸ್ ಕಡೆಗೆ ಹೋಗಿ  ರಜೆ ಚೀಟಿ ಬರೆದಿಟ್ಟೆ.
    ಮನೆಗೆ ಬಂದವನೇ ಮೊದಲು ನನ್ನ ಹತ್ತಿರವಿದ್ದ ಅದಾಗಲೇ ಕೊಂಡ ಕ್ಯಾಮರಾವನ್ನು ಪರಿಶೀಲಿಸಿ ಅದಕ್ಕೆ ಕೋಡಕ್ ರೋಲ್ (ಗೋಲ್ಡ್), ಬ್ಯಾಟರಿ ಸೆಲ್ ಗಳನ್ನು ಹಾಕಿಸಿಕೊಂಡು ಬಂದೆ. ಅವರ ಆಟೋಗ್ರಾಫ್ ಯಾವುದರಲ್ಲಿ  ತೆಗೆದುಕೊಳ್ಳುವುದು? ನನ್ನಲ್ಲಿ ಆಟೋಗ್ರಾಫ್ ಬುಕ್ ಇಲ್ಲ. ಹಾಗೆಯೇ ಕಾಗದದ ಮೇಲೆ ಆಟೋಗ್ರಾಫ್ ತೆಗೆದುಕೊಳ್ಳುವುದೇ! ಅದಕ್ಕಾಗಿಯೇ ಒಂದು ಸಣ್ಣ ಆಟೋಗ್ರಾಫ್ ಬುಕ್ ಕೊಂಡೆ.
   ರಾತ್ರಿ ಊಟ ಮಾಡಿ ಅವರೊಡನೆ ಮಾತನಾಡಲು ಅವಕಾಶ ಸಿಕ್ಕರೆ ಅವರೊಂದಿಗೆ ಏನು ಮಾತನಾಡುವುದು,  ಏನು ಪ್ರಶ್ನೆ ಕೇಳುವುದು? ನೋಟ್ ಮಾಡಿಕೊಂಡು ಬಿಡೋಣ ಅನ್ನಿಸಿ ಎದ್ದು ಮತ್ತೆ ಅವರ ಮುಂದಿನ ಯೋಜನೆಗಳು, ಈಗ ಚಿತ್ರಿತವಾಗುತ್ತಿರುವ 'ಜೋಕುಮಾರಸ್ವಾಮಿ ಎಷ್ಟು ದಿನದಲ್ಲಿ ಮುಗಿಯುತ್ತೆ, ಅವರ ಕನಸುಗಳ, ಯೋಜನೆಗಳ ಬಗ್ಗೆ ಸಂದರ್ಶನದಲ್ಲಿ ಓದಿದ್ದನ್ನು ಹೇಳಿ, ಅವುಗಳ ಬಗ್ಗೆ ಇನ್ನಷ್ಟು ವಿವರಿಸಲು ಹೇಳಬೇಕೆನಿಸಿತು. ಅವರಿಗೆ ಏನಾದರೂ ತಿನಿಸು ಮನೆಯಿಂದ ಮಾಡಿಸಿಕೊಂಡು ಹೋದರೆ ಹೇಗೆ? ಕೊಡಲು ಸಾಧ್ಯವಾಗಬಹುದೇ ಎಂದೆಲ್ಲ ಯೋಚಿಸಿ, ಈಗ ಅದಕ್ಕೆಲ್ಲ ಟೈಮ್ ಸಾಕಾಗೋಲ್ಲ ಎಂದು ಅದನ್ನು ಡ್ರಾಪ್ ಮಾಡಿದೆ. ಅವರ ಸಂಕೇತ್ ಸ್ಟುಡಿಯೋ ಬಗ್ಗೆ, ಅವರ ಸ್ಟೇಜ್ ಚಟುವಟಿಕೆಗಳ ಬಗ್ಗೆ ಚರ್ಚಿಸುವ ವಿಷಯಗಳ ದೊಡ್ಡದೊಂದು ಪಟ್ಟಿ ಮಾಡಿಟ್ಟುಕೊಂಡೆ, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಯ ಹಾಗೆ ಪದೇ ಪದೇ ಅವುಗಳ ಮೇಲೆ ಕಣ್ಣಾಡಿಸಿದೆ. ಕರ್ನಾಟಕಕ್ಕೆ ಪಾದಾರ್ಪಣ ಮಾಡುವುದಕ್ಕಿಂತ ಮೊದಲು ಈ ಬ್ರದರ್ ಜೋಡಿ ಮುಂಬಯಿ ಮರಾಠಿ ಸ್ಟೇಜ್ ಮೇಲೆ ಮಿಂಚಿದ್ದು ಗೊತ್ತಿತ್ತು.
   ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಮೀಪದ ರಾಮದುರ್ಗದಲ್ಲಿ ಮನೆ ಮಾಡಿ ಓಡಾಡುತ್ತಿದ್ದೆ. ಮರುದಿನ ಬೆಳಿಗ್ಗೆ ಬೇಗ ಎದ್ದು ಲಗುಬಗೆಯಿಂದ ತಯಾರಾಗಿ ಹಿಂದಿನ ದಿನ ತಯಾರಿಸಿಕೊಂಡ ನನ್ನ ಪ್ರಯಾಣದ ಸಲಕರಣೆಗಳೊಂದಿಗೆ ಲೋಕಾಪೂರಕ್ಕೆ ಹೋಗಲು ಬಸ್ ನಿಲ್ದಾಣದ ಕಡೆಗೆ ಹೊರಟೆ. ಅಂದು ಅದೇಕೋ, ನನಗೆ ಏನೋ ದುಗುಡ. ಏಕೆಂದರೆ ಇಂಥ ಚಟುವಟಿಕೆಯೆಲ್ಲ ನನಗೆ ಹೊಸದು. ಎಲ್ಲಾದರು ಎಡವಟ್ಟಾದರೆ ಹೇಗೆ? ಎಂದೆಲ್ಲ ಯೋಚಿಸಿ, ಬಸ್ ನಿಲ್ದಾಣ ಸಮೀಪಿಸುತ್ತಿದ್ದಂತೆ, ಒಂದು ಬಸ್ ಆಗಲೇ ನಿಲ್ದಾಣ ದಾಟಿ ಹೊರಟಿತ್ತು. ಓಡಿಹೋಗಿ ಹತ್ತಿ ಕುಳಿತೆ. ಅಲ್ಲಿಂದ ಅರ್ಧ ಗಂಟೆ ಪ್ರಯಾಣ. ಲೋಕಾಪೂರಕ್ಕೆ ಮುಟ್ಟಿದಾಗ ಇನ್ನೂ ಬಹಳ ಟೈಮ್ ಇದ್ದಿದ್ದರಿಂದ ಅಫೀಸ್ ಕಡೆಗೆ ಹೋಗಿ ಸ್ವಲ್ಪ ಹೊತ್ತು ಇದ್ದು, ನಮ್ಮ ಕಚೇರಿಯ ಯಾರನ್ನಾದರೂ ಜೊತೆಗಾರನಾಗಿ ಮಾಡಿಕೊಂಡಲ್ಲಿ ಉತ್ತಮ ಎಂದು ಕಚೇರಿಗೆ ನಡೆದೆ. ವೋಬೈಲ್ ಗಿಬೈಲ್ ಏನೂ ಇರದ ಕಾಲವದು, ಸುಮಾರು ಹತ್ತು ಗಂಟೆಯಾಗಿರಬಹುದು, ನಮ್ಮ ಕಚೇರಿಯ ಜವಾನ್ ಬಂದ. ಖುಶಿಯಿಂದ ಅವನನ್ನು ಕರೆದುಕೊಂಡು ಶೂಟಿಂಗ್ ಸ್ಥಳಕ್ಕೆ ಹೋಗೋಣವೆಂದು ಅವನಿಗೆ ನನ್ನ ಯೋಜನೆಯ ವಿವರ ತಿಳಿಸಿದೆ. ತುಟಿಯಂಚಿನಲ್ಲಿ ವಿಷಾದದೊಂದಿಗೆ, ‘ಸರ್, ನಿಮಗ ಇನ್ನ ಗೊತ್ತಾಗಿಲ್ಲನ, ಶಂಕರನಾಗ್ ಬರಾಂಗಿಲ್ಲ ಅಂತಾ! ಆಗಲೇ ಜಗತ್ತಿಗೇ ಗೊತ್ತಾಗೆತಲ್ರೀ. ನೀವು ಊರಕಡೆ ಹೋಗೇ ಇಲ್ಲ. ಆಫೀಸ್ನ್ಯಾಗ ಕುಂತೀರಿ, ನಿಮಗೆ ಹ್ಯಾಂಗ ಗೊತ್ತಾಗ್ಬೇಕು’ ಅಂದು, “ ಶಂಕರ್ ನಾಗ್ ದಾವಣಗೇರಿ ಹತ್ತಿರ, ಆನಗೋಡ್ ಹತ್ತಿರ ರಾತ್ರಿ ಆಕ್ಷಿಡೆಂಟ್ನ್ಯಾಗ ಖಲಾಸ ಆಗ್ಯಾನರಿ, ಭಾಳ ದೊಡ್ಡ ದುರಂತರೀ ಸರ್” ಅಂದ.  
 ಸ್ವಲ್ಪ ತುಂಟಾಟದ ಸ್ವಭಾವದ ಅವನತ್ತ, “ಹೇ ಹುಚ್ಚಾ! ದೊಡ್ಡವರ ಬಗ್ಗೆ ಹಾಗೆಲ್ಲ ಚಾಷ್ಟಿ ಮಾಡಬಾರದೋ, ಎಲ್ಲದಕ್ಕೂ ಒಂದು ಮಿತಿ ಇರ್ತೈತಿ ಏನಪಾ! ಒಳತು ಅನ್ನು” ಎಂದೆ!
ಅದಕ್ಕೆ ಅವನು, “ಸರ್ ಸುದ್ದಿ ಸುಳ್ಳ ಆದರ ನಾನ ವೊದಲ ಲೋಕೇಶ್ವರನಿಗೆ ಕಾಯಿ ಒಡಸ್ತೇನ್ರೀ. ಆದರ ಸುದ್ದಿ ಸುಳ್ಳಲ್ರೀ ಸರ್” ಎಂದು ಕಣ್ಣಲ್ಲಿ ನೀರು ತಂದು ಅಳಲಿಕ್ಕೆ ಶುರು ಮಾಡಿದ. ವಿಷಯದ ಗಂಭೀರತೆ ಅರಿತ ನನಗೆ ಜಂಘಾಬಲವೇ ಕುಸಿದಂತಾಯಿತು. ಇಬ್ಬರೂ ಗಲುಬಗೆಯಿಂದ ಊರ ಕಡೆಗೆ ಬಂದೆವು. ಕಾಳ್ಗಿಚ್ಚಿನಂತೆ ಹಬ್ಬಿದ ಸುದ್ದಿ ಎಲ್ಲರ ಬಾಯಲ್ಲಿ ವಿಷಾದದಿಂದ ಚರ್ಚೆಯಾಗುತ್ತಲಿತ್ತು. ಕೇಳುತ್ತಿದ್ದಂತೆ ಕಣ್ಣಾಲಿಗಳು ತುಂಬಿ,  ಮೆಚ್ಚಿನ ನಟ ಇನ್ನಿಲ್ಲವೆಂಬುದನ್ನು ಮನಸ್ಸು ಒಪ್ಪದೇ ಒದ್ದಾಡಿತು. ಸ್ವಲ್ಪ ಹೊತ್ತು ಸುಧಾರಿಸಿಕೊಂಡು, ಶಂಕರನಾಗ್ಗೊಂದು ಸೆಲ್ಯೂಟ್ ಹೇಳಿ ಅವರ ಆತ್ಮಕ್ಕೆ ಶಾಂತಿ ಕೋರಿದೆ. ಕರ್ನಾಟಕ ಕಂಡ ಅದ್ಭುತ ನಟನೊಬ್ಬನನ್ನು ಕಳೆದುಕೊಂಡು, ನಾಡು ಬಡವಾಗಿತ್ತು. ನನ್ನ ಉದುರಿದ ಕನಸುಗಳೊಂದಿಗೆ, ಭಾರವಾದ ಹೃದಯದೊಂದಿಗೆ, ಮೆಚ್ಚಿನ ನಟನ ಅಗಲಿಕೆಯ ನೋವಿನೊಂದಿಗೆ ಊರ ಕಡೆಗೆ ಬಸ್ ಹತ್ತಿದೆ. ಆಟೋಗ್ರಾಫ್ ಬುಕ್, ಕ್ಯಾಮರಾ ತಣ್ಣಗೆ ಬ್ಯಾಗಿನಲ್ಲಿ ಕುಳಿತಿದ್ದವು. ಹಾಗೂ  ನನ್ನೊಳಗೆ ನನ್ನ ಪ್ರಶ್ನೆಗಳು!
  ಮೊನ್ನೆ ಗೆಳೆಯರ ಜೊತೆ ಚರ್ಚಿಸುತ್ತಿರುವಾಗ ಕನ್ನಡ ಚಿತ್ರರಂಗದ ಬಗ್ಗೆ ಮಾತು ಹೊರಳಿ ಶಂಕರನಾಗ್ ಅವರ ಕುರಿತು ಗೆಳೆಯರೊಬ್ಬರು ಮಾತನಾಡುತ್ತ ಅವರನ್ನು ನೆನಪಿಸಿ, ‘ಶಂಕರನಾಗರ  ಅಗಲಿಕೆಯಿಂದ ಆದ ಆ ಏನ್  ಗ್ಯಾಪ್ ಅದಲಾ, ಅದನ್ನ ಇನ್ನೂ ಯಾರಿಂದಲೂ ತುಂಬಲಿಕ್ಕೆ ಆಗಲಿಲ್ಲ ನೋಡ್ರಿ’ ಎಂದರು, ಹಾಗೆಯೇ ನನಗೂ ನನ್ನ ಪ್ರೀತಿಯ ಶಂಕರ್ ನೆನಪಾದರು. ಆ ನೆನಪನ್ನು ತಮ್ಮೊಂದಿಗೆ ಹಂಚಿಕೊಂಡೆ ಅಷ್ಟೆ. ಶಂಕರನಾಗ್ ಒಬ್ಬ ಅಮರ ಕಲಾವಿದ. ಅವರೊಳಗೊಬ್ಬ ಮನುಷ್ಯನಿದ್ದ!
‘ಕಾಡು ನೋಡಹೋದೆ, ಕವಿತೆಯೊಡನೆ ಬಂದೆ’ ಎಂದವನನ್ನು ಕೊನೆಗೂ ಕಾಡು ಕರೆದೇ ಬಿಟ್ಟಿತ್ತು!
ಅವರು ನಮ್ಮನ್ನಗಲಿ  ಇಂದಿಗೆ ಇಪ್ಪತ್ತೆರಡು ವರ್ಷಗಳಾದವು! ಅವರು ಕಂಡ 'ಮೆಟ್ರೋ' ಕನಸು ಇಂದು ನನಸಾಗಿದೆ.ಇನ್ನೂ ಅವರು ಕನ್ನಡಿಗರ ಹೃದಯಗಳಲ್ಲಿ ನೆಚ್ಚಿನ ನಟರಾಗಿ ಯಾವತ್ತೂ ಹಚ್ಚ ಹಸಿರಾಗಿ ಉಳಿದಿದ್ದಾರೆ, ಉಳಿಯುತ್ತಾರೆ. ಶಂಕರನಾಗ್ ಚಿರಾಯು! ಕನ್ನಡ ತಾಯಿಯ ಈ ಕನ್ನಡಕುವರನಿಗೆ, 'ಗಂಡುಗಲಿ'  ಯ ಆತ್ಮಕ್ಕೆ ಶಾಂತಿ ಕೋರುತ್ತ  ಈ ದಿನ ವಿಶೇಷ ಸಲಾಂ ಹೇಳಲೇಬೇಕಲ್ಲವೆ?

(ಶಂಕರನಾಗ್ ಚಿತ್ರ ಕೃಪೆ: ಅಂತರ್ಜಾಲ )

File attachments
Rating
No votes yet

Comments

Submitted by H A Patil Mon, 10/01/2012 - 14:03

ಲಕ್ಷ್ಮಿಕಾಂತ ಇಟ್ನಾಳ್ ರವರಿಗೆ ವಂದನೆಗಳು
"ಶಂಕರ ನಾಗ ಒಂದು ನೆನಪು " ಲೇಖನ ಓದಿದೆ, ಆತ ರಸ್ತೆ ಅಪಘಾತದಲ್ಲಿ ಮೃತಪಟ್ಟ ಆ ದಿನ ಬಹಳ ನೋವಿನ ದಿನ. 1988 ರಿಂದ 1993 ರ ಅಗಷ್ಟ್ 2 ರ ವರೆಗೆ ನಾನು ಕಾರ್ಗಲ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಆ ದಿನ ನಾನು ರಾತ್ರಿ 3 ರಿಂದ 6 ಗಂಟೆಯ ವರೆಗೆ ಪಹರೆ ಕರ್ತವ್ಯದಲ್ಲಿದ್ದೆ. ಡಾವಣಗೆರೆ ವಲಯ ಮಟ್ಟದ ಅಧಿಕಾರಿಗಳು ಕಾರ್ಯ ನಿಮಿತ್ತ ಬಂದವರು ಫಾಲ್ಸ್ ಐಬಿಯಲ್ಲಿ ವಾಸ್ತವ್ಯ ಮಾಡಿದ್ದರು, ಶಂಕರ್ ನಾಗ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿಷಯ ಜಿಲ್ಲಾ ಕೇಂದ್ರದ ಮೂಲಕ ಬಂತು, ಆ ವಿಷಯವನ್ನು ಆ ಅಧಿಕಾರಿಗಳಿಗೆ ತಿಳಿಸ ಬೇಕಿತ್ತು, ಅವರ ಬದಿಯ ನಿಸ್ತಂತು ಸರಿಯಿರಲಿಲ್ಲ, ಈ ವಿಷಯವನ್ನು ಅವರಿಗೆ ತಿಳಿಸಲೆ ಬೇಕಾದ ಅನಿವಾರ್ಯತೆಯಿತ್ತು. ನಮ್ಮ ಠಾಣೆಯ ಅಧಿಕಾರಿ ಗಳಿಗೆ ವಿಷಯ ತಿಳಿಸಿದೆ. ಅವರ ಮೋಟಾರ್ ಬೈಕ್ ರಿಪೇರಿಗೆ ಬಿಟ್ಟಿದ್ದರು, ವಿದ್ಯುತ್ ನಿಗಮದ ಜೀಪೊಂದನ್ನು ಕೇಳಿ ಪಡೆದು ಸದರಿ ಮಾಹಿತಿ ತಿಳಿಸಿ ಬರಲು ಹೇಳಿದರು, ಆದರೆ ಅವರಿಂದ ಜೀ[ಪು ದೊರೆಯಲಿಲ್ಲ, ಯಾವುದಾದರೂ ವಾಹನವೊಂದರಲ್ಲಿ ಹೋಗಿ ಮಾಹಿತಿ ತಿಳಿಸಿ ಬರಲು ಹೇಳಿದರು. ವಿಶ್ರಾಂತಿಯಲ್ಲಿದ್ದ ಇನ್ನೊಬ್ಬ ಪಹರೆಯ ಸಹೋದ್ಯೋಗಿಗೆ ವಿಷಯ ಹೇಳಲು ಪ್ರಯತ್ನಿಸಿದೆ, ನನ್ನ ಕೋರಿಕೆಯನ್ನು ಕೇಳುವ ಸ್ಥಿತಿಯಲ್ಲಿ ಅವರಿರಲಿಲ್ಲ, ವಿಷಯವನ್ನು ಠಾಣಾ ಮೇಲಾಧಿಕಾರಿಗೆ ನಿವೇದಿಸಿದೆ. ಯಾವದಾದರೊಂದು ವಾಹನದಲ್ಲಿ ಹೋಗಿ ನಿಸ್ತಂತುವನ್ನು ಕೊಟ್ಟು ವಿಷಯ ತಿಳಿಸಿ ಬರಲು ಹೇಳಿದಿರು, ನಾನು ರಸ್ತೆಗೆ ಬಂದು ದಾರಿಯಲ್ಲಿ ಜೋಗದ ಕಡೆಗೆ ಹೋಗುವ ಕೆಲವು ವಾಹನಗಳಿಗೆ ಕೈಮಾಡಿ ನಿಲ್ಲಿಸಲು ಸಂಜ್ಞೆ ಮಾಡಿದೆ, ಆದರೆ ಯಾರೂ ವಾಹನ ನಿಲ್ಲಿಸಲಿಲ್ಲ, ಅರ್ಧ ಗಂಟೆಯ ಪ್ರಯತ್ನದ ನಂತರ ಮೋಟಾರ್ ಸೈಕಲ್ ಸವಾರ ರೊಬ್ಬರು ಸ್ದಲ್ಪು ದೂರದಲ್ಲಿ ಬೈಕ್ ನಿಲ್ಲಿಸಿ ನನ್ನೆಡೆಗೆ ಪ್ರಶ್ನಾರ್ಥಕ ನೋಟ ಬೀರಿದರು. ನಾನು ಓಡಿ ಹೋಗಿ ಅವರಿಗೆ ನನಗೆ ಫಾಲ್ಸ್ ವರೆಗೆ ಡ್ರಾಪ್ ಕೊಡಲು ಸಾಧ್ಯವೆ ? ಎಂದು ಪ್ರಶ್ನಿಸಿದೆ. ಅವರ ನೋಟದಲ್ಲಿ ಅಸಹನೆಯಿತ್ತು, ಅದೇ ಕ್ಷಣದಲ್ಲಿ ಆ ಕಡೆಗೆ ಹೋಗುತ್ತಿದ್ದ ವಾಹನ ವೊಂದಕ್ಕೆ ನಿಲ್ಲಿಸಲು ಕೈ ಮಾಡಿದೆ, ಆ ವಾಹನ ಹಾಗೆಯೆ ಹೋಯಿತು, ನಂತರ ಆ ಬೈಕ್ ಸವಾರ ತಾನು ಜೋಗಕ್ಕೆ ಹೋಗುವುದಾಗಿ ನುಡಿದ , ನನಗೆ ಶೀರೂರು ಕೆರೆಯ ವರೆಗೆ ಡ್ರಾಪ್ ಕೊಟ್ಟರೆ ಸಾಕು ಎಂದೆ, ಅದಕ್ಕೆ ಆತ ಒಪ್ಪಿ ನನ್ನನ್ನು ಹಿಂಬದಿಯ ಸೀಟಿನಲ್ಲಿ ಹತ್ತಿಸಿಕೊಂಡ. ನೀವು ನಿಮ್ಮ ಇಲಾಖೆಯಿಂದ ವಾಹನ ತರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದ, ಠಾಣೆಗೆ ಜೀಪ್ ಸೌಲಭ್ಯ ಇಲ್ಲವೆಂದು ಬೈಕ್ ರಪೇರಿಗೆ ಹೋಗಿದೆ ಎಂದು ಹೇಳಿದೆ, ಎಲ್ಲವನ್ನು ಕೂಲಂಕುಷವಾಗಿ ವಿಚಾರಿಸಿಕೊಂಡ ಆತ ನನ್ನನ್ನು ಜೋಗ್ ಫಾಲ್ಸ್ ವರೆಗೆ ಬಿಟ್ಟು ಹೋದ. ನಾನು ಡಾವಣಗೆರೆಯ ವಲಯಮಟ್ಟದ ಅಧಿಕಾರಿಗಳಿಗೆ ವಿಷಯ ತಿಳಿಸಿದೆ, ತಕ್ಷಣಕ್ಕೆ ಅವರು ಹೊರಟರು.

ನನಗೆ ಬೆಳಿಗಿನ 6 ಗಂಟೆಯ ವರೆಗೆ ಬಸ್ ಇರಲಿಲ್ಲ. ಫಾಲ್ಸ್ ಐಬಿ ಮುಂದುಗಡೆಯ ಸಿಮೆಂಟ್ ಕಟ್ಟೆಯ ಮೇಲೆ ಕುಳಿತೆ. ನಾನು ನನ್ನ ಎರಡು ವರ್ಷಗಳ ಅವಧಿಯಲ್ಲಿ ಜೋಗ್ ಫಾಲ್ಸ್ ನ್ನು ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಹಾಗೂ ಹಗಲುಜ ರಾತ್ರಿ ಮುಂಜಾವು ಮತ್ತು ಸಂಜೆ ಎಲ್ಲ ಕಾಲಗಳಲ್ಲಿ ನೋಡಿದ್ದೆ. ಹಿಂಬದಿಯ ಜೋಬಿನಲ್ಲಿದ್ದ ಬಿಳಿಯ ಕಾಗದವೊಂದನ್ನು ಹೊರ ತೆಗೆದು ಶರಾವತಿ ಕುರಿತು ಕವನ ರಚನೆಗೆ ತೊಡಗಿದೆ. ಅಷ್ಚರಲ್ಲಿ ಮಾರುತಿ ಕಾರ್ ನಲ್ಲಿ ಬಂದವರೊಬ್ಬರು, ಅಲ್ಲಿ ವಸತಿ ವ್ಯವಸ್ಥೆ ಇದೆಯೆ ಎಂದು ಕೇಳಿದರು. ನಾನು ಯೂತ್ ಹಾಸ್ಟೆಲ್ ಮಾಹಿತಿ ನೀಡಿದೆ, ಅದರು ಅವರಿಗೆ ಹಿಡಿಸದೆ, ಫಾಲ್ಸ್ ಇಲ್ಲವೆ ಬಾಂಬೆ ಐಬಿ ಗಳಲ್ಲಿ ಸೌಲಭ್ಯದ ಕುರಿತು ಕೇಳಿದರು. ಬಾಂಬೆ ಐಬಿಗೆ ಸಿದ್ದಾಪುರಕ್ಕೆ ಹೋಗಿ ಅನುಮತಿ ಪಡೆದು ಬರಬೇಕು ಫಾಲ್ಸ್ ಐಬಿ ಬೇಕಂದರೆ ವಿದ್ಯುತ್ ನಿಗಮದ ಕಛೇರಿಗೆ ಹೋಗಿ ಅನುಮತಿ ಪಡೆದು ಬರಬೇಕೆಂದು ತಿಳಿಸಿದೆ, ಅವರು ತತ್ ಕ್ಷಣದ ವಾಸ್ತವ್ಯದ ಕುರಿತು ಕೇಳಿದರು, ನಾನೂ ಟೂರಿಸಂ ಇಲಾಖೆ ವಸತಿ ಸೌಲಭ್ಯದ ವರದಿ ನೀಡಿದೆ. ಅವರು ಅಲ್ಲಿಗೆ ತೆರಳಿದರು.ಮೂಡಣದೆಡೆಗೆ ನಿಧಾನಕ್ಕೆ ಬೆಳಕು ಹರಡುತ್ತಿತ್ತು, ಆಹ್ಲಾದಕರ ವಾತಾವರಣ ಶರಾವತಿ ಕುರಿತು ಒಂದು ದೀರ್ಘ ಕವನ ಬರೆದು ಮುಗಿಸಿದ್ದೆ, ನನ್ನ ಬೆಂಚಿನ ಹಿಂದುಗಡೆ ಯಾರೋ ನಿಂತಂತೆ ಭಾಸ ವಾಯಿತು, ತಿರುಗಿದೆ, ಮಾರುತಿ ಕಾರಿನಲ್ಲಿ ಬಂದ ವ್ಯಕ್ತಿ ಅವರಾಗಿದ್ದರು. ನನ್ನ ಕವನ ವನ್ನು ಓದ ಬಹುದೆ ಎಂದರು, ಅದನ್ನು ಅವರಿಗೆ ಕೊಟ್ಟೆ, ಓದಿ ಹಿಂದುರಿಗಿಸಿ, ಎಷ್ಟು ದಿನಗಳಿಂದ ಬರೆಯುತ್ತಿದ್ದೀರಿ ಎಂದರು. ಹೀಗೆಯೆ ಬರೆದು ಹರಿದು ಹಾಕುತ್ತೇನೆ ಎಂದೆ, ಚೆನ್ನಾಗಿ ಬರೆಯುತ್ತೀರಿ ಬರೆದದ್ದನ್ನು ತಿದ್ದಿ ತೀಡಿ ಉಳಿಸಿಕೊಳ್ಳಿ ಎಂದರು. ಹ್ಞೂ ಗುಟ್ಟಿದೆ ಅವರ ಸಲಹೆಯಂತೆ ತಿದ್ದ ತೀಡಿ ಉಳಿಸಿಕೊಂಡೆ, ಮುಂದೆ ನಾನು ಬರಹವನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ಹವ್ಯಾಸವಾಗಿ ಉಳಿಸಿಕೊಂಡು ಬಂದೆ. ಆದರೆ ಒಂದು ಚೋದ್ಯವೆಂದರೆ ಆ ವ್ಯಕ್ತಿಯ ಹೆಸರನ್ನು ನಾನು ಕೇಳಲಿಲ್ಲ ಅವರೂ ಹೇಳಲಿಲ್ಲ, ಆದರೆ ಒಂದು ವಿಷಾದದ ಸಂಗತಿ ಎಂದರೆ ' ಶಂಕರ ನಾಗ ' ಸಾವು ಸಂಭವಿಸಷಿದ ದಿನ, ನನ್ನ ಬರವಣಿಗೆಯ ಪ್ರಾರಂಭದ ದಿನವಾದದ್ದು, ಈಗಲೂ ಆಗಾಗ ಆ ನೆನಪು ನನ್ನನ್ನು ಕಾಡುತ್ತಿರುವುದು. ತಾವು ಶಂಕರ ನಾಗ ಕುರಿತು ಉತ್ತಮ ಬರಹ ನೀಡಿದ್ದಕ್ಕೆ ಧನ್ಯವಾದಗಳು.

Submitted by lpitnal@gmail.com Mon, 10/01/2012 - 17:20

In reply to by H A Patil

ಪ್ರಿಯ ಹನುಮಂತ ಅನಂತ ಪಾಟೀಲ್ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಶಂಕರನಾಗ್ ನಿಧನದ ಸುದ್ದಿಯನ್ನು ಹೊತ್ತು ಅದೆಷ್ಟು ಪ್ರಯಾಸ ಪಟ್ಟು ತಮ್ಮ ಕರ್ತವ್ಯನಿರ್ವಹಿಸಿದ್ದು ಈ ಮೂಲದ ನಮಗೆಲ್ಲ ಗೊತ್ತಾದದ್ದು ತಮ್ಮ ಕರ್ತವ್ಯಪ್ರಜ್ಞೆಗೆ ನಿಜವಾಗಿಯೂ ನಾನು ದಿಙ್ಮೂಢನಾದೆ. ಮೊದಲೇ ಗೊತ್ತಿದ್ದಲ್ಲಿ ಈ ನನ್ನ ಅಳಿಲು ಬ್ಲಾಗ್ ಬರಹವನ್ನು ತಮ್ಮಂಥ ಕರ್ತವ್ಯಮತಿಗಳಿಗೆ ಅರ್ಪಿಸಿಬಿಡುತ್ತಿದ್ದೆ. ಈಗಲಾದರೂ ಈ ಬ್ಲಾಗ್ ನ್ನು ತಮಗೆ ಅರ್ಪಿಸುವೆ. ಶಂಕರ್ ಅವರ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಋಣಿ. ಧನ್ಯವಾದಗಳು.

Submitted by venkatb83 Tue, 10/02/2012 - 14:15

In reply to by H A Patil

@ಹಿರಿಯರಾದ ಪಾಟೀಲರೆ ನಿಮ್ಮ ಅನುಭವ ಓದಿ ಅಚ್ಚರಿಯಾಯ್ತು..
ಹಾಗೆಯೇ ನಿಮ್ಮ ಬರವಣಿಗೆ ಕೃಷಿ ಶುರು ಆದದ್ದರ ಹಿನ್ನೆಲೆ ಬಗ್ಗೆಯೂ ತಿಳಿಯಿತು...

@ಇಟ್ನಾಳರೆ

ಶಂಕರ್ ನಾಗ್ ಅವರ ಬಗ್ಗೆ ಆಪ್ತ ಬರಹ....
ಒಳ್ಳೆಯವರನ್ನು ದೇವರು ಭಲೇ ಬೇಗ ಕರೆಸಿಕೊಳ್ಳುತ್ತಾನೆ ಅನ್ನೋದು ನಿಜ ಅನ್ಸುತ್ತೆ..
ಕಡಿಮೆ ಸಮಯದಲೇ ತಮ್ಮ ಪ್ರತಿಭೆ ತೋರಿಸಿದ ಶಂಕರ್ ಅವರು ಆ ದುರ್ದಿನ ನಿದನರಾದಾಗ ನಮ್ಮ ಊರಲ್ಲಿ ಅವರದೇ ಅಭಿನಯದ ಸೀ ಬಿ ಅಯ್ ಶಂಕರ್ ಚಿತ್ರ ನಡೆಯುತ್ತಿತ್ತು..
ಅದರಲ್ಲಿ ಅವರು ದೃಶ್ಯವೊಂದರಲ್ಲಿ ಸುಮ್ಮನೆ ವಿಷ ಕುಡಿದು ಸಾಯೋ ಹಾಗೆ ನಟನೆ ಮಾಡಿದ್ದರು -ಅದು ನಟನೆಯೇ ಆಗಿದ್ದರು ಆ ಸಣ್ಣ ವಯಸ್ಸಲ್ಲೇ (ಆಗ ನನಗೆ ಸುಮಾರು ಒಬತ್ತು ವರ್ಷ ಅಸ್ಟೆ )ನಂಗೆ ಅದನ್ನು ನೋಡಲು ಆಗಿರಲಿಲ್ಲ....

ಅವರ ಹಠಾತ್ ದುರ್ಮರಣ ಎಲರಿಗೂ ಆ ಸಮಯದಲ್ಲಿ ದುಖ ಮೂಡಿಸಿತ್ತು...

ಆಮೇಲೆ ಅವರ ಮತ್ತು ರಾಜ್ಕುಮಾರ್ ಅಭಿನಯದ ಅಪೂರ್ವ ಸಂಗಮ ಮತ್ತು ಶಂಕರ್ ರಾಜ್ ಅವರಿಗಾಗಿ ನಿರ್ದೇಶಿಸಿದ ಅತ್ಯುತ್ತಮ ಚಿತ್ರ ಒಂದು ಮುತ್ತಿನ ಕಥೆ ನೋಡಿದ್ದೆ... ಅವರ ನಟನೆ ಅತಿರೇಕದ್ದಾಗಿರಲಿಲ್ಲ.. ನಿರ್ದೇಶನ ವಿಷಯಕ್ಕೆ ಬಂದರೆ ಒಂದು ಮುತ್ತಿನ ಕಥೆಯಲ್ಲಿ ರಾಜ್ ಅವರನ್ನು ಅವರು ಬಳಸಿಕೊಂಡ ರೀತಿ ಸೂಪರ್..

ಕೈಯನ್ನು ವಿಶಿಷ್ಟವಾಗಿ ಹೊಯ್ದಾಡಿಸುತ್ತ ವಾರೆಯಾಗಿ ಮಾತಾಡುವ ಅವರ ಶೈಲಿ ಭಲೇ ಅಚ್ಚು ಮೆಚ್ಚು...
ಆಟೋರಾಜನಾಗಿ ಅವರ ಸ್ಥಾನ ಖಾಯಂ.. ಎಲ್ಲ ಆಟೋಗಳ ಮೇಲೆ, ಮುಂದೆ, ಹಿಂದೆ ಅವರ ಚಿತ್ರ ....
ಈಗ ಅವರ ಪತ್ನಿ ಅವರ ಸಾರಥ್ಯದ 'ರಂಗ ಶಂಕರ ' ವೇದಿಕೆ ಮೂಲಕ ಅವರು ಚಿರ ಸ್ಥಾಯಿ...

ಶಂಕರ್ ನಾಗ್ ಅವರನ್ನು ಮುಖತಃ ನೋಡಿ ಮಾತಾಡಿಸಬೇಕು ಎಂಬ ನಿಮ್ಮಾಸೆ ಕೊನೆಗೂ ಈಡೇರದೆ ಅವರನ್ನು ಆ ರೆತಿಯಲಿ ನೋಡಬೇಕಾಗಿ ಬಂದದ್ದು ವಿಷಾದನೀಯ..
ನಿಮ್ಮ ತರಹದ್ದೇ ಅನುಭವ ನನಗೆ ರಾಜ್ ಅವರು ತೀರಿಕೊಳ್ಳುವ ಸಮಯದಲಿ ಆಯ್ತು...
ಆರೋಗ್ಯವಾಗಿಯೇ ಇದ್ದ ಅಣ್ಣಾವ್ರು ಧುತ್ತನೆ ನಮ್ಮನ್ನ ಅಗಲಿದ್ರಲ್ಲ, ಅದ್ಕೆ ಕೆಲ ದಿನಗಳ ಮುಂಚೆ ನಾ ನಮ್ಮ ಸ್ನೇಹಿತರೊಡನೆ ಈ ಸಾರಿ ಅಣ್ಣಾವ್ರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವ್ರಿಗೆ ವಿಶ್ ಮಾಡಿ ಮಾತಾಡಿಸಿ ಬರುವ ಅಂತ ಹೇಳಿದ್ದೆ.. ಆದ್ರೆ...
ಹುಟ್ಟು ಹಬ್ಬಕೆ ಕೆಲವೇ ದಿನಗಳ ಮೊದಲು ಅವರು ನಮ್ಮನ್ನು ಅಗಲಿದರು..
ಬೆಂಗಳೂರಲ್ಲೇ ಬಹು ವರ್ಷಗಳಿಂದ ಇದ್ದರೂ -ಅವರನ್ನು ನೋಡದೆ ಮಾತಾಡಿಸದೇ ಇದ್ದುದಕ್ಕೆ ನನ್ನನ್ನೇ ನಾ ಹಳಿಯುವೆ... .
ಈಗ ಅದ್ಕೆ ಏನಾರ ತೀರ್ಮಾನಿಸಿದರೆ ಅದ್ಕೆ ಆಗಲೇ ಅಣಿಯಾಗುವೆ.. ಆಮೇಲೆ ಪೇಚಾಟ ಬೇಕೇ??

ನಿಮ್ಮ ಬರಹ ಹಲವರ ನೆನಪುಗಳನ್ನು ಕೆದಕಿದೆ..
ಉತ್ತಮ ಬರಃ..

ಶುಭವಾಗಲಿ..

ನನ್ನಿ

\|/

ಪ್ರಿಯ ವೆಂಕಟ ಬಿ ರವರು ಹಾಗೂ ಹಿರಿಯರಾದ ಹನುಮಂತ ಅನಂತ ಪಾಟೀಲ ರವರೇ,
ಶಂಕರನಾಗ್ ಅವರ ನೆನಪುಗಳನ್ನು ಹಲವಾರು ಗೆಳೆಯರಿಗೆ ಅವರವರಿಗೆ ಸಂಬಂಧಿಸಿದ ವಿವರಗಳೊಂದಿಗೆ ಅವರ ನಾಸ್ಟಾಲಜಿಯನ್ನು ಕೂಡ ಗೆಳೆಯರು ನೀಡುತ್ತಿರುವುದು ನಿಜವಾಗಿಯೂ ಸಂತೋಷದ ಸಂಗತಿ. ನಮ್ಮೆಲ್ಲರ ಹೃದಯಗಳಲ್ಲಿ ಶಂಕರನಾಗ್, ನೆಲೆಯೂರಿದ್ದಾರೆ ಎಂಬುದಕ್ಕೆ ಸಾಕ್ಷಿ. ಶಂಕರ್ ಅವರು ನಡೆಯುವ, ನುಡಿಯುವ ಸ್ಟೈಲ್ ಗಳನ್ನು ವಿವಿರಿಸಿದ ವೆಂಕಟರು ನಿಜಕ್ಕೂ ಅಭಿನಂದನೀಯರು, ಶ್ರೀಯುತರ ಅಭಿಪ್ರಾಯದಿಂದ ಬ್ಲಾಗ್ ಗೆ ಒಂದು 'ವಜನ್' ಬಂದಂತಾಗಿದೆ. ತಮಗೆಲ್ಲರಿಗೂ ಮತ್ತೆ ಮತ್ತೆ ಧನ್ಯವಾದಗಳು.

Submitted by vidyakumargv Mon, 10/01/2012 - 21:36

ತಾರೆಗಳೆ ಹೀಗೆ.
ಇರುವಾಗ ನಗಿಸಿ ಹೋಗುವಗ ಒಂದು ಚಿಕ್ಕ ಸೂಚನೆಯೂ ಇಲ್ಲದೆ
ಮಿಂಚಿ ಮಾಯವಾಗುತ್ತಾರೆ.
ಅಭಿಮಾನಿಗಳೊ.. ಅವರ ಪಾಡಂತು ಬಿಡಿ,
ತಮ್ಮ ಜೀವಕ್ಕಿಂತ ಹೆಚ್ಚಾಗಿ ಹಚ್ಚಿಕೊಂಡು ಜೀವ ತ್ಯಾಗಮಾಡುವವ್ರೂ ಇದ್ದಾರೆ

ಶಂಕರ್ ನಾಗ್... ಮರೆಯಲಾಗದ, ಮರೆಯಬಾರದ ಮಹಾನುಬಾವ
ಕನ್ನಡಿಗರೆಲ್ಲರೂ ಅವರ ಅಭಿಮಾನಿಗಳೆ ಎಂದರೆ ಅತಿಶಯೋಕ್ತಿಯಲ್ಲ.

ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..

Submitted by lpitnal@gmail.com Tue, 10/02/2012 - 06:11

In reply to by vidyakumargv

ಶಂಕರನಾಗ‍ ‍ ಒಂದು ನೆನಪು' ಬ್ಲಾಗ್ ಬರಹಕ್ಕೆ ತಾವು ತಮ್ಮ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಪ್ರಿಯರೇ, ಹೌದು ತಾರೆಗಳೇ ಹೀಗೆ. ಇರುವಾಗ ನಮಗೆಲ್ಲ ಸುಂದರಕ್ಷಣಗಳನ್ನು ಸೃಷ್ಟಿಮಾಡಿ, ನಮ್ಮನ್ನು ಅದಾವುದೋ ಲೋಕಕ್ಕೆ ಕರೆದೊಯ್ದು ತಾವೊಂದು ಲೋಕಕ್ಕೆ ಹೇಳದೇ ಚಲಿಸಿಬಿಡುತ್ತಾರೆ. ಅಂದಿನ ಲೋಕಾಪೂರದ ಜನರ ಭಾವನೆಗಳನ್ನು ನೋಡಬೇಕಿತ್ತು. ಎಲ್ಲಿಯ ಶಂಕರನಾಗ್ ಎಲ್ಲಿಯ ನಾವು, ಶಂಕರನಾಗ ಅಲ್ಲಿ ದಾಮಣಗೇರಿಯ ಹತ್ತಿರ ನಿಧನರಾದರು ಆ ನಂಟು ನಮಗೂ ಅಂಟಿಕೊಂಡಿತಲ್ಲ. ಅವರ ಸಾವಿನ ವಿಷಯ ಬಂದಾಗ ನಮ್ಮೂರು ಕೂಡ ಪ್ರಸ್ತಾವಿಸುತ್ತದಲ್ಲ, ನಮ್ಮೂರು ಹೀಗೆ ಗುರುತಿಸುವಂತಾಯಿತಲ್ಲ ಎಂದೊಬ್ಬರು ಹೇಳುತ್ತಿದ್ದುದು ಆ ನೆಲದ ಜನರ ಪ್ರೀತಿಯ ಭಾವನೆಗಳಿಗೆ ಬಿದ್ದ ಪೆಟ್ಟು ಸೂಚಿಸುತ್ತಿತ್ತು. ಶಂಕರನಾಗರನ್ನು ಬರಮಾಡಿಕೊಳ್ಳಲು ಊರು ತುದಿಗಾಲ ಮೇಲೆ ನಿಂತಾಗ ಮನೆಯ ಮಗನನ್ನು ಕಳೆದುಕೊಂಡಂತೆ ಊರಿಗೆ ಊರೇ ದು:ಖದಲ್ಲಿ ಮುಳುಗಿದ್ದುದನ್ನು ಕಂಡೆ. ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದ ಗೆಳೆಯರೇ.

Submitted by ಗಣೇಶ Tue, 10/02/2012 - 00:21

ಶಂಕರ್‌ನಾಗ್‌ರನ್ನು "ಒಂದಾನೊಂದು ಕಾಲದಲ್ಲಿ"ಚಿತ್ರಕ್ಕೆ ಅನಂತ್ ನಾಗ್ ತಮ್ಮ ಎಂಬ ಕಾರಣಕ್ಕೆ ಸೇರಿಸಿದ್ದಾರೆ ಎಂದು ಅಂದುಕೊಂಡಿದ್ದೆವು. :( ನಂತರ ಆತನ ಅನಂತ ಪ್ರತಿಭೆಗೆ ಬೆರಗಾದೆವು! ಆಕ್ಸಿಡೆಂಟ್, ಮಿಂಚಿನ ಓಟ, ನೋಡಿಸ್ವಾಮಿ ನಾವಿರೋದೆ ಹೀಗೆ..ಟಿ.ವಿ ಧಾರವಾಹಿ ಸ್ವಾಮಿ ಮರೆಯಲು ಸಾಧ್ಯವೆ? ಇತ್ನಾಳರೆ ಶಂಕರ್‌ನನ್ನ ನೆನಪಿಸಿದ್ದಕ್ಕೆ ತಮಗೆ ಧನ್ಯವಾದಗಳು.

Submitted by lpitnal@gmail.com Tue, 10/02/2012 - 06:19

In reply to by ಗಣೇಶ

ಶಂಕರನಾಗ ‍ ‍‍‍ಒಂದು ನೆನಪು' ಬ್ಲಾಗ್ ಗೆ ತಾವು ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದ ಗೆಳೆಯ ಗಣೇಶ ರವರೇ, ಇಬ್ಬರೂ ಅಪ್ಪಟ ಪ್ರತಿಭೆಗಳೇ, ತೀರ ನೆನ್ನೆ ಮೊನ್ನೆಯವರೆಗೆ ಕೂಡ ಅನಂತ ಒಂದು ಫ್ಯಾಮಿಲಿ ಕುಳಿತು ನೋಡುವ ಚಿತ್ರಗಳ ಹೀರೋ ಆಗಿದ್ದರು. ಶಂಕರ ಅವರಂತೂ ಅಣ್ಣನನ್ನು ಮೀರಿಸಿದವರೆಂದರೆ ಅತಿಶಯೋಕ್ತಿಯಾಗಲಾರದು. 'ಒಂದಾನೊಂದು ಕಾಲದಲ್ಲಿ ' ಚಿತ್ರಕ್ಕೆ ಶಂಕರನಾಗ್ ರನ್ನು ಆಯ್ಕೆ ಮಾಡಿದ್ದ ಬಗ್ಗೆ ಬಹುಶ: ಮೊದಲು ಎಲ್ಲರಿಗೂ ತಾವಂದಂತೆ ಭಾವನೆಬಂದಿದ್ದು ಸುಳ್ಳಲ್ಲ. ಆದರೆ ಅವರೊಂದು ಅಪ್ಪಟ ಪ್ರತಿಭೆ ಎಂಬುದನ್ನು ಮೊದಲ ಚಿತ್ರದಲ್ಲೇ ಸಾಬೀತು ಪಡಿಸಿದರು. ಗೆಳೆಯರೇ, ಮತ್ತೊಮ್ಮೆ ಧನ್ಯವಾದ.

Submitted by lpitnal@gmail.com Tue, 10/02/2012 - 06:19

In reply to by ಗಣೇಶ

ಶಂಕರನಾಗ ‍ ‍‍‍ಒಂದು ನೆನಪು' ಬ್ಲಾಗ್ ಗೆ ತಾವು ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದ ಗೆಳೆಯ ಗಣೇಶ ರವರೇ, ಇಬ್ಬರೂ ಅಪ್ಪಟ ಪ್ರತಿಭೆಗಳೇ, ತೀರ ನೆನ್ನೆ ಮೊನ್ನೆಯವರೆಗೆ ಕೂಡ ಅನಂತ ಒಂದು ಫ್ಯಾಮಿಲಿ ಕುಳಿತು ನೋಡುವ ಚಿತ್ರಗಳ ಹೀರೋ ಆಗಿದ್ದರು. ಶಂಕರ ಅವರಂತೂ ಅಣ್ಣನನ್ನು ಮೀರಿಸಿದವರೆಂದರೆ ಅತಿಶಯೋಕ್ತಿಯಾಗಲಾರದು. 'ಒಂದಾನೊಂದು ಕಾಲದಲ್ಲಿ ' ಚಿತ್ರಕ್ಕೆ ಶಂಕರನಾಗ್ ರನ್ನು ಆಯ್ಕೆ ಮಾಡಿದ್ದ ಬಗ್ಗೆ ಬಹುಶ: ಮೊದಲು ಎಲ್ಲರಿಗೂ ತಾವಂದಂತೆ ಭಾವನೆಬಂದಿದ್ದು ಸುಳ್ಳಲ್ಲ. ಆದರೆ ಅವರೊಂದು ಅಪ್ಪಟ ಪ್ರತಿಭೆ ಎಂಬುದನ್ನು ಮೊದಲ ಚಿತ್ರದಲ್ಲೇ ಸಾಬೀತು ಪಡಿಸಿದರು. ಗೆಳೆಯರೇ, ಮತ್ತೊಮ್ಮೆ ಧನ್ಯವಾದ.

Submitted by lpitnal@gmail.com Tue, 10/02/2012 - 09:25

In reply to by lpitnal@gmail.com

Hmmmm sir we are missing a wonderful human being and a great visionary- ಮಹೇಶ ಹಂಚಿ.

ಗೆಳೆಯ ಮಹೇಶ ಹಂಚಿ ಯವರೇ, ಫೇಸ್ ಬುಕ್ ಮುಖಾಂತರ ಶಂಕರನಾಗ್ ಅವರ ಕುರಿತು ಅನಿಸಿಕೆ ಹಂಚಿಕೊಂಡು ಮೆಚ್ಚುಗೆ ಸೂಚಿಸಿದ್ದಕ್ಕೆ ಲಕ್ಷ್ಮೀಕಾಂತ ಇಟ್ನಾಳ ರ ದನ್ಯವಾದಗಳು.

Submitted by lpitnal@gmail.com Tue, 10/02/2012 - 09:27

In reply to by lpitnal@gmail.com

ಶ್ರೀನಿವಾಸ್ ಹುದ್ದಾರ - ಶಂಕರ ನೆನಪು ....... ಮರೆಯಲಾರದ್ದು.......... ಹೆಚ್ಚೆನಿಲ್ಲಾ.....
ಗೆಳೆಯ ಶ್ರೀನಿವಾಸ ಹುದ್ದಾರ ರವರೇ,
ಶಂಕರನಾಗ್ ಅವರನ್ನು ಮೆಚ್ಚಿ ಫೇಸ್ ಬುಕ್ ಮುಖಾಂತರ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಧನ್ಯವಾಗಗಳು.

Submitted by lpitnal@gmail.com Tue, 10/02/2012 - 09:35

In reply to by partha1059

ಪ್ರಿಯ ಪಾರ್ಥರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು.
ಶಂಕರನಾಗ ಅವರನ್ನು ಭೇಟಿ ಮಾಡಲು ಅಂದಿನ ದಿನ ನಾನು ಮಾಡಿಕೊಂಡಿದ್ದ, ಅವರೆಂದಿಗು ಬರಲಾರದ ಆ ಸ್ಥಳದಲ್ಲಿ ನಾನು ಕಾಯುತಿದ್ದೆ, ಅವರ ನಿಧನದ ಸುದ್ದಿಯನ್ನು ಹೊತ್ತು ಶ್ರೀ ಹನುಮಂತ ಅನಂತ ಪಾಟೀಲರವರು ಕಾರ್ಗಲ್ ನಿಂದ ಜೋಗ್ ದವರೆಗೆ ಆ ನಿಸ್ತಂತು ಸಂದೇಶ ಒಯ್ದದ್ದು ಬೆಳಗಿನತನಕ ಜೋಗದಲ್ಲಿ ಕಟ್ಟೆಯ ಮೇಲೆ ಕುಳಿತು ವಾಹನ ದಾರಿ ನೋಡಿದ್ದು, ಅವರ ಕರ್ತವ್ಯ ಪ್ರಜ್ಞೆ ಇವುಗಳು ಶಂಕರರೊಂದಿಗೆ ಮುಂದೊಂದು ದಿನ ದಾಖಲಾದಾವು. ಮತ್ತೊಮ್ಮೆ ತಮಗೆ ಧನ್ಯವಾದಗಳು. ಸಣ್ಣ ನೆನಪೊಂದನ್ನು ಗೆಳೆಯರೊಂದಿಗೆ ಹಂಚಿಕೊಂಡದ್ದು ಒಳ್ಳೆಯದೇ ಆಯ್ತು, ತುಸು ಸಮಾಧಾನವೂ ಆಯ್ತೆನ್ನಿ,