ನಮ್ಮೂರಿನ ಸಿದ್ದಕ್ಕ...
ಕವನ
ಅದ್ಯಾವುದೋ ತರಂಗ ಹಂಚಿಕೆಯಲ್ಲಿನ ಸಂಚು
ಕಮಲ ಕೈಗಳ ಪ್ರತಿನಿತ್ಯದ ಹೊಂಚು
ಭೂಕಬಳಿಕೆ, ರಾಜಕೀಯದಬ್ಬಾಳಿಕೆ
ಅಣ್ಣಾಹಜಾರೆಯುಪವಾಸ__ಸದನದಶ್ಲೀಲ ದುಸ್ಸಾಹಸ
ಯಾರೋ ಸತ್ತದ್ದು__ಮತ್ಯಾರೋ ಅತ್ತದ್ದು
ಐಶ್ವರ್ಯ ರೈಳ ಹೆತ್ತದ್ದು, ಲಾಡೆನ್ ಸತ್ತದ್ದು
ಲೋಕ ಹೊಳೆಯುತ್ತಿರುವುದು ಬೆಳೆಯುತ್ತಿರುವುದು
ನವತಂತ್ರ ಕುತಂತ್ರ ಮೈದಳೆಯುತ್ತಿರುವುದು
ಒಳ್ಳೆಯತನ ಕಾಲಡಿ ಕೊಳೆಯುತ್ತಿರುವುದು
ಯಾವುದರ ಪರಿವೆಯೂ ಇಲ್ಲ ನಮ್ಮೂರ ಸಿದ್ದಕ್ಕನಿಗೆ
ಕೋಳಿ ಕೂಗಿಗೆ ಕಾಯಲ್ಲವಳು
ಲೋಕ ಕಣ್ತೆರೆವ ಮುಂಚೆ ಮನೆ ಗುಡಿಸಿ ತಾರಿಸಿ
ಅಂಗಳಕ್ಕೆ ಸಗಣಿ ನೀರೆರಚಂಗಳಕ್ಕೆ ರಂಗವಲ್ಲಿಯಿಟ್ಟು
ಕ್ಷಣಹೊತ್ತು ಸೂರ್ಯನಿಗೆ ಮೈಕೊಟ್ಟು
ಹೊಗೆಗೂಡನ್ನೂದಿ ಊದಿ
ಮುಂಜಾನೆಗೆ ಮುದ್ದೆ ಜಡಿದು, ಸೊಪ್ಪುಪ್ಪೆಸರು ಬಸಿದು
ಕುಡಿದ ಒಣ ಎದೆ ಗಂಡನನ್ನೆಬ್ಬಿಸಿ
ನಿದ್ದೆಗಣ್ಣಿನ ಹೈಕಳ ಮಲ ತೊಳೆದು
ಮೂರಕ್ಷರ ಕಲಿಯಲು ಗೋಡೆ ಇಲ್ಲದ
ಶಾಲೆಗೆ ಕಳುಹಿಸಿ, ತೂಕಲಿಗೆ ಮುದ್ದೆ ಮುರಿದು
ಪುಡಿಗಾಸಿನೊಡೆತನಕ್ಕೆ ಓಡುತ್ತಾಳೆ
ಬಸವಳಿದು ದುಡಿಯುತ್ತಾಳೆ, ಬಿಸಿಲಿನಲ್ಲುರಿಯುತ್ತಾಳೆ
ರಸ್ತೆಯ ಗುಡ್ಡ ಏರಿ ಬಂದ ನಾಲ್ಕರ ಬಸ್ಸು
ಪಡುವಣ ದಿಗಂತದೆದೆಯಲ್ಲಿ ಕುಳಿತ ರವಿ
ಆಗಷ್ಟೇ ಬಂದ ಗೌಡನ ಕೈ ಸನ್ನೆಗೆ ಕಾದು
ಸುಸ್ತಾಗಿ ಬೆವೆತು ತಡವರಿಸಿ ಬರುತ್ತಾಳೆ ಸಿದ್ಧಕ್ಕ
ಅರಳುಗಣ್ಗಳ ಮಕ್ಕಳ ಮೊಗವರಮನೆ
ಎಂಟಾಂಟಾಣೆ ಕೊಟ್ಟು, ಮುಂದೆ ಮಂಡಕ್ಕಿ ತಂಬಿಟ್ಟಿಟ್ಟು
ಮತ್ತದೇ ಕೆಲಸಕ್ಕೆ ಮೈ ಮುರಿಯುವ ಸರದಿ
ಕತ್ತಲಾದಂತೆ, ಜಗತ್ತಿಗೆ ಚಂದ್ರ ಬೆತ್ತಲಾದಂತೆ
ಕುಡುಕ ಗಂಡನ ತಡಕಿ, ಗಲ್ಲಿ ಗಲ್ಲಿಯಲ್ಲಿಣುಕಿ
ಚರಂಡಿ ಛಾವಡಿಯಲ್ಲಿ ಹುಡುಕಿ
ಹೆಗಲಿಗೆ ಕೈ ಏರಿಸಿ ಹೊತ್ತು ತರುತ್ತಾಳೆ
ಅತ್ತತ್ತು ತುತ್ತು ತಿನ್ನಿಸಿ, ಮುದ್ದಿಸಿ ಮೈ ಒರೆಸಿ
ಒಪ್ಪಿಕೊಂಡಪ್ಪಿಕೊಂಡು ಕಾಮ ಪ್ರೇಮದ
ವಾಸನೆಯಲ್ಲೆಲ್ಲಾ ಮರೆತು ಬಿಡುತ್ತಾಳೆ
ಅವಳಿಗೀ ಜೀವನ ಬಟಾಬಯಲಲ್ಲ
ಮನಸ್ಸು ಮನೆಮಂದಿ ಮೀರಲ್ಲ
ನೋವಿನುರಿಯಲ್ಲಿ ಬೇಯುತ್ತಾಳೆ, ನೋಯುತ್ತಾಳೆ
ಮರೆತೆಲ್ಲ ಸಂಕಟ ಬಾಳನೊಗ ಹೊರುತ್ತಾಳೆ
ಸಂಜೆಯಾದಂತೆ ಛಾವಡಿಯಲ್ಲಿ ಕುಳಿತು
ಕೀರ್ತನೆ, ಭಜನೆಯಲ್ಲಿ ಲೋಕವನ್ನೇ ಮರೆತು
ಪಾರಮಾರ್ಥದ ಜೇನಲ್ಲಿ ಕರಗುತ್ತಾಳೆ
ಮನೆಗೆ ಬಂದ ಚಣದಲ್ಲಿ ಮೂರು ಕಡ್ಡಿ ಹಚ್ಚಿ
ಎಲ್ಲಾ ಭಗವಂತನಿಚ್ಚೆ 'ಶಿವಾ' ಎನ್ನುತ್ತಾಳೆ
ಊರ ನೂರು ದಾರಿಯಲ್ಲಿ ಎಲ್ಲರಂತೆ
ಪೆಪ್ಪರುಮೆಂಟು ಚಪ್ಪರಿಸಿ, ಚರಕ್ಕೆನೆ ಸಂಡಿಗೆ ತಿಂದು
ತಂಗಳು ಪಂಗಳು ಸೇವಿಸಿ ಬೆಳೆಯುತ್ತವೆ ಮಕ್ಕಳು
ಹಡೆವ ಕಾಲಕ್ಕೆ ಹಡೆಯುತ್ತವೆ ತೊಡೆದೆಲ್ಲ ನೋವ
ಗಂಡನ ಹಾದರವ ಕೊಳೆ ತೊಳೆಯಲು
ಒಂದು ಪಂಚಾಯಿತಿ ಸಾಕು, ಅಲ್ಲೇ ಕೈ ಹಿಡಿಯುತ್ತಾಳೆ
ಒಟ್ಟಿನಲ್ಲಿ ದುಃಖವನ್ನಪ್ಪಿಕೊಂಡೊಪ್ಪಿಕೊಂಡ ಸುಖಜೀವಿ
ಎಲ್ಲೆ ಮೀರದಲ್ಲೇ ಇರುವ ಮೊಲ್ಲೆ ಮನದವಳು
Comments
>>ದುಃಖವನ್ನಪ್ಪಿಕೊಂಡೊಪ್ಪಿಕೊಂಡ
>>ದುಃಖವನ್ನಪ್ಪಿಕೊಂಡೊಪ್ಪಿಕೊಂಡ ಸುಖಜೀವಿ<< ನಿಜ ಇಂತ " ಸಿದ್ದಕ್ಕ" ರುಗಳೆ ಸುಖ ಜೀವಿಗಳು ಧನ್ಯವಾದಗಳೊಂದಿಗೆ....ಸತೀಶ್
"ದುಃಖವನ್ನಪ್ಪಿಕೊಂಡೊಪ್ಪಿಕೊಂಡ
"ದುಃಖವನ್ನಪ್ಪಿಕೊಂಡೊಪ್ಪಿಕೊಂಡ ಸುಖಜೀವಿ" ನಿಜ ಇಂತ "ಸಿದ್ದಕ್ಕ" ರುಗಳೆ ಸುಖಜೀವಿಗಳು ಧನ್ಯವಾದಗಳೊಂದಿಗೆ ...ಸತೀಶ್
ಧನ್ಯವಾದಗಳು ಸತೀಶ್ ಜೀ...
ಧನ್ಯವಾದಗಳು ಸತೀಶ್ ಜೀ...