ನಾಟ್ ರೀಚಬಲ್

ನಾಟ್ ರೀಚಬಲ್

ನಾಟ್ ರೀಚಬಲ್

*1*

ನಾ ದಿನ ಬೆಳಗ್ಗೆ 4ಕ್ಕೆ ಎದ್ದು, ಮನೆಯ ಪಕ್ಕದ 80ಅಡಿ ರಸ್ತೆಯ ತುಂಬಾ ವಾಹನಗಳು ಗಿಜಿಗಿಡುವುದಕ್ಕೂ ಮುನ್ನ 3 ಕಿ.ಮೀ. ಜಾಗ್

ಮಾಡಿ, ಮನೆಗೆ ಹಿಂದಿರುಗಿ ಟೀವಿಯಲ್ಲಿ “ಡೇ ಬ್ರೇಕ್” ನ್ಯೂಸ್ ನೋಡುತ್ತಾ, ಪೇಪರ್ ಓದುತ್ತಾ, ನಿತ್ಯ ಕ್ರಮಗಳನ್ನು ಮುಗಿಸಿ, ಸುಮಾರು 8ಘಂಟೆಯ ವೇಳೆಗೆ ಆಫೀಸಿಗೆ ಹೊರಟು, 9ಕ್ಕೆ ಸರಿಯಾಗಿ ಪಂಚ್ ಮಾಡಿ, ಕತ್ತೆ ಹಾಗೆ ದುಡಿದು, ಸಂಜೆ 6-7 ಘಂಟೆ ವೇಳೆಗೆ ಹಿಂದುರಿಗಿ  “ಡೇ ಆಫ್” ನ್ಯೂಸ್ ನೋಡುತ್ತಾ  ಯಾವುದಾದರೂ ಪುಸ್ತಕ ಓದುತ್ತಾ, ಸಿನಿಮಾ ಹಾಡುಗಳನ್ನು ಕೇಳುತ್ತಾ ಮಲುಗುವುದು ನನ್ನ ದಿನಚರಿಯಾಗಿತ್ತು, ನನಗೂ ಅಡುಗೆಗೂ ದೂರವಾದ ಕಾರಣ ನನ್ನ ತಿಂಡಿ, ಊಟ ಎಲ್ಲವು ಹೊರಗಡೆ ಆಗುತ್ತಿತ್ತು.

ಇಂದು ಕೂಡ ಮಿಕ್ಕ ದಿನಗಳ ಹಾಗೆಯೇ ಬೆಳ್ಳಗ್ಗೆ ಜಾಗಿಂಗ್ ಮುಗಿಸಿ ಪೇಪರ್ ಓದುತ್ತಿದ್ದಾಗ, ನನ್ನ ಮೊಬೈಲ್ ರಿಂಗಿಸಿತು, ಟೀಂ ಲೀಡ್ ಆಗಿದ್ದರಿಂದ ಯಾರಿಗಾದರೂ ರಜೆ ಬೇಕಿದ್ದರೆ ಬೆಳಗ್ಗೆದ್ದು ಪೋನ್ ಮಾಡಿ ನನಗೆ ತಿಳಿಸುವದು ಸಾಧರಣವಾಗಿ ಬಿಟ್ಟಿತ್ತು ಯಾರಪ್ಪ ಇದು ಬೆಳ್ಳಗೆ ಬೆಳ್ಳಗೆಯೇ ಎಂದುಕೊಂಡೇ ಪೋನ್ ತೆಗೆದುಕೊಂಡೆ ಪೋನ್ ಮಾಡಿದವ ಗೆಳೆಯ ಸುರೇಶನಾಗಿದ್ದ “ಹಲೋ, ಗಾಡಿ ತೆಗೆದುಕೊಂಡು ಬೇಗ ಬಾ” ಎಂದ, ನಾನು ವಾಚ್ ನೋಡಿ “ಆಫೀಸ್ ಗೆ ಹೋಗಲು ಇನ್ನೂ ಸಮಯವಿದೆ  ಅದುದರಿಂದ ನಡೆದೇ ಬರುತ್ತೇನೆ” ಎಂದೆ ಅವ “ಇಲ್ಲ ಗಾಡೀಲೇ ಬಾ” ಎಂದ ಅವನ ಧ್ವನಿಯಲ್ಲಿ ಆತಂಕವಿತ್ತು.

*2*

ಸುರೇಶನ ಮನೆ ನನ್ನ ಮನೆಯಿಂದ ಸುಮಾರು 5 ಬೀದಿ ದಾಟಿದರೆ ಬೆಂಗಳೂರಿನ ಮಟ್ಟಿಗೆ ಬಹಳ ಹತ್ತಿರವೇ ಇತ್ತು. ಸುರೇಶ ಕೂಡ ನನ್ನ ಹಾಗೇ ಬೇರೆ ಊರಿನವನು ಹಾಗೂ ಮದುವೆಯಾಗಿಲ್ಲ ಎನ್ನುವ ಸಾಮ್ಯತೆ ಬಿಟ್ಟರೆ ಮಿಕ್ಕೆಲ್ಲ ರೀತಿಯಲ್ಲೂ ಅವನು ನನ್ನಗಿಂತ ಬಹಳ ವಿಭಿನ್ನವಾಗಿದ್ದ, ನನ್ನ ಹಾಗೆ ಗೊತ್ತುಗುರಿಯಿಲ್ಲದ ಯಾವುದೋ  ಎಂ.ಎನ್.ಸಿ ಯಲ್ಲಿ ಕೆಲಸ ಮಾಡದೆ ಸರಕಾರಿ ಸ್ವಾಮ್ಯದ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ,  ಪ್ರತಿ ದಿನ ನನ್ನ ಹಾಗೆ ವ್ಯಾಕಿಂಗ್ ಮಾಡುತ್ತಿರಲ್ಲಿಲ್ಲ, ನನ್ನ ಹಾಗೆ ಟಿ.ವಿ. ಯಲ್ಲಿ ಬರುತ್ತಿದ್ದ ನ್ಯೂಸ್ ಗಳನ್ನು ನೋಡದೇ ಧಾರವಾಹಿಗಳನ್ನು ನೋಡುತ್ತಿದ್ದ, ಪುಸ್ತಕಕ್ಕೂ ಅವನಿಗೂ ಎಣ್ಣೆ ಸೀಗಾಕಾಯಿ,  ನನ್ನ ಹಾಗೇ ಹೊರಗಡೆ ತಿನ್ನದ್ದೆ ಅವನು ಸ್ವಯಂಪಾಕ ಪ್ರವೀಣನಾಗಿದ್ದ, ಇಷ್ಟೆಲ್ಲಾ ಇದ್ದರೂ ಬೆಂಗಳೂರು ನಮ್ಮನು ಒಂದು ಮಾಡಿತ್ತು. ಅವನನ್ನು ಭೇಟಿಯಾದ ಮೊದಲನೇ ಸಲವೇ ಎನೋ ಒಂದು ಥರಾ ಹಿತ ಹಾಗೂ ಅಪ್ಯಾಯಮಾನ ಅನುಭವವಾಗಿತ್ತು, ಹೀಗಾಗಿ. ಎರಡು ದಿನಕ್ಕೊಮ್ಮೆಯಾದರೂ ನಮ್ಮಿಬ್ಬರ ಭೇಟಿಯಾಗಿರುತ್ತಿತ್ತು, ಸಂಜೆವೇಳೆ ಭೇಟಿಮಾಡಿ ಒಂದರ್ಧ ಗಂಟೆ ಹರಟಿದಾಗ ಬೆಂಗಳೊರಿನ ಒತ್ತಡ ಕಡಿಮೆಯಾಗುತಿತ್ತು.

*3*

ಸುರೇಶನ ಮನೆಗೆ ನಡೆದೇ ಹೋಗಿರುತ್ತಿದ್ದ ನಾನು, ಇಂದು ಅವನ ಧ್ವನಿಯಲ್ಲಿ ಆತಂಕವಿದ್ದ ಕಾರಣ ಅವನು ಹೇಳಿದ ಹಾಗೆ ಗಾಡಿಯಲ್ಲೇ ಅವನ ಮನೆಗ ಹೋದೆ. ಬಾಗಿಲಲ್ಲಿ ನನಗಾಗಿ ಕಾಯುತ್ತಿದ್ದ ಸುರೇಶ ನಾ ಒಳಗೆ ಹೋಗುತ್ತಿದ್ದ ಹಾಗೆಯೇ ಬಾಗಿಲು ಹಾಕಿಕೊಂಡ. ಈ ಚಳಿಗಾಲದಲ್ಲಿ ಕೂಡ ಬೆವರುತ್ತಿದ್ದ ಸುರೇಶನನ್ನು ನೋಡಿ ನಾನು “ಯಾಕೆ ಮಾರಾಯ, ಎನಾಯಿತು ಯಾಕಿಷ್ಟು ಗಾಬರಿ” ಎಂದೆ, ಸುರೇಶ “ಇವತ್ತು ತರಕಾರಿ ತರಲು ಸರ್ಕಲ್ ಬಳಿಯ ಮಾರ್ಕೆಟ್ ಗೆ ಹೋಗಿದ್ದೆ, ಅಲ್ಲಿ ಒಬ್ಬಾಕೆ ನನ್ನನೇ ದುರುಗುಟ್ಟಿ ನೋಡುತ್ತಿದ್ದ ಹಾಗೆ ತೋರಿತು, ನಾ ಅವಳ ದೃಷ್ಟಿಯಿಂದ ಎಷ್ಟೇ ತಪ್ಪಿಸಿಕೊಂಡರು ಅವಳು ನನ್ನನೇ ನೋಡುತ್ತಿದ್ದಳು ...”, ನಾನು “ಯಾರೋ ನಿನ್ನ ಪರಿಚಯದವಳಿರಬೇಕು” ಎಂದೆ, “ನಾನು ಹಾಗೆ ಅಂದುಕೊಂಡೆ, ಆದರೆ ಅವಳು ನನ್ನ ಪರಿಚಯದವಳಲ್ಲ, ಅವಳು ನನ್ನ ಮೃತ್ಯು!!” ಎಂದ ನಾ “ಎನ್ನಯ್ಯ ಹೇಳುತ್ತಿದ್ದಿಯಾ?, ಸರಿಯಾಗಿ ನೋಡಿದಿಯಾ?” , ಅವನು ತನ್ನ  ಹಣೆಯಲ್ಲಿದ್ದ ಬೆವರನ್ನು ಒರಸಿಕೊಳ್ಳುತ್ತಾ  “ಹ್ಹೂ ಕಣ್ಣಯ್ಯ, ಸರಿಯಾಗಿ ನೋಡಿದೆ, ಆಕೆ ಖಂಡಿತ ನನ್ನ ಸಾವು” ಎಂದ, ನಾನು  “ಏನಯ್ಯ ಹಾಗೆಂದರೆ, ಆಕೆ ಇವನ ಸಾವಂತೆ! ಎಲ್ಲಾ ನಿನ್ನ ಭ್ರಮೆ” ಎಂದೆ, “ಇಲ್ಲ ಅವಳು ಖಂಡಿತಾ ನನ್ನ ಸಾವು, ನನಗೆ ಇಲ್ಲಿರಲು ಭಯವಾಗುತ್ತದೆ, ನಾ ನನ್ನ ಸ್ನೇಹಿತನ ಮನೆಗೆ ಹೋಗುವೆ, ಅದಕ್ಕೆ ನಿನ್ನ ಗಾಡಿ ಕೊಡು” ಎಂದ “ಅಲ್ಲ ಕಣ್ಣಯ್ಯ ಹಾಗೆಲ್ಲಾ ಏನೂ ಆಗದು ನಾ ಬೇಕಾದರೆ ನಿನ್ನ ಜೊತೆ ಇರುವೆ” ಎಂದೆ “ಅದೆಲ್ಲಾ ಏನೂ ಬೇಡ ಗಾಡಿ ಕೊಡು ನಾನು ಎರಕುರಿಯಾಗೆ ಹೋಗುತ್ತೇನೆ” ಎಂದ, “ಎರಕುರಿಯಾನ!!!, ಏಲ್ಲಿದೆ ಅದು”, “ಅದು ನನ್ನ ಸ್ನೇಹಿತನ ಊರು, ಕೊಳ್ಳೇಗಾಲದ ಪಕ್ಕದಲ್ಲಿ ಕಾವೇರಿಯಿಂದಾಗುವ ದ್ವೀಪ” ಎಂದ, “ಅಲ್ಲಿಗೇ ಏಕೆ?”, “ಹೂಃ ಮತ್ತೆ ಅದೊಂದು ದ್ವೀಪ, ಅಲ್ಲಿಗೆ ಯಾರು ಬರಲಾಗದು  I will be, not reachable there” ಎಂದ, ಇನ್ನೂ ಅವನ ಹತ್ತಿರ ಮಾತನಾಡಿ ಪ್ರಯೋಜನವಿಲ್ಲವೆಂದು ಕೊಂಡು “ಸರಿ ನಿನ್ನ ಇಷ್ಟ” ಎಂದು ಗಾಡಿ ಬೀಗ ಕೊಟ್ಟು ನಡೆದು ಮನೆಗೆ ಬಂದೆ.

*4*

ಬೆಂಗಳೂರಿಗೆ ಬಂದ ಹೊಸದರಲ್ಲಿ ಬಸ್ಸಿನಲ್ಲಿಯೇ ಪ್ರಯಾಣಿಸುತ್ತಿದ್ದ ನಾನು, ಬೈಕ್ ತೆಗೆದುಕೊಂಡ ಮೇಲೆ ಬಿಟಿಎಸ್ ಪ್ರಯಾಣ ಅಪರೂಪವಾಗಿತ್ತು ಹೀಗಾಗಿ ಎಷ್ಟೋ ದಿನಗಳ ನಂತರ ಮಾಡುತ್ತಿದ್ದ ಬಿಟಿಎಸ್ ಪ್ರಯಾಣ ದೊಡ್ಡ ಸಾಹಸದಂತೆ ತೋರಿತು. ಕಛೇರಿಯನ್ನು ಸುಮಾರು 11 ಗಂಟೆಯ ವೇಳೆಗೆ ತಲುಪಿದೆ, ನಾ ಆಫೀಸಿಗೆ ಕಾಲಿಡುತ್ತಿದ್ದ ಹಾಗೇ ನನ್ನ ಟೀಂ ಸದಸ್ಯ ಶಾಸ್ತ್ರೀ “ಸಾವು ಬಂತು, ಸಾವು” ಎಂದ “ಏನಯ್ಯ  ಹಾಗೆಂದೆರೆ” ಎಂದೆ, “ಏನ್ನಿಲ್ಲ ಸರ್, ಈ ವಾರ ನಾವು ತರ್ಜುಮೆ ಮಾಡಬೇಕಾದ ಲೇಖನಗಳಲ್ಲಿ – ಡೆತ್ ಕೂಡ ಒಂದು” ಎಂದ, ನಾ “ಎಲ್ಲಿ ಫೈಲ್ ಲಿಸ್ಟ್ ಕೊಡಿ” ಎಂದೆ, ಶಾಸ್ತ್ರಿ ಹೇಳಿದ ಹಾಗೆ ನಾವು – ಡೆತ್, ಟುರೊಟಿಪಿಸ್ ನುಟ್ರಿಕುಲ, ಸೆನ್ ಸೆನ್ಸ್ ... ಹೀಗೆ ಒಟ್ಟು 12 ಲೇಖನಗಳನ್ನು ತರ್ಜುಮೆ ಮಾಡಬೇಕಿತ್ತು, ನಾ ನಗುತ್ತಾ “ನಿಜ ಶಾಸ್ತ್ರಿ, ಸಾವು ಇದೆ, ನೀವು ಇದ್ದೀರ, ಮನೆಯವರಿಗೆ ಹೇಳಿಕಳುಹಿಸಬೇಕು ಅಷ್ಟೇ ಅಲ್ಲವೆ” ಎಂದಾಗ ಅವ ಗೊಳ್ಳೆಂದು ನಕ್ಕ. ತರ್ಜುಮೆಗೆ ಬಂದಿದ್ದ ಲೇಖನಗಳ ಪಟ್ಟಿ, ಸಮಯ ಗಡವು ಎಲ್ಲ ಲೆಕ್ಕ ಮಾಡಿ, ಟೀಂ ಮೀಟೀಂಗ್ ಕರೆದು “ನೋಡಿ ನಾವು ತರ್ಜುಮೆ ಮಾಡಬೇಕಾದ ಹೊಸ ಫೈಲಗಳು ಬಂದಿದೆ – ಸಾಮಾನ್ಯವಾಗಿ ಎಲ್ಲವು ಸಾವಿಗೆ ಸಂಭಂದಪಟ್ಟವು, ಟುರೊಟಿಪಿಸ್ ನುಟ್ರಿಕುಲ – ಇದೊಂದು ವಿಧದ ಜೆಲ್ಲಿ ಫಿಶ್, ಇದಕ್ಕೆ ಸಾವಿಲ್ಲ ಎಂದು ಹೇಳಲಾಗುತ್ತದೆ ಶಾಸ್ತ್ರಿ ನೀವು ಇದನ್ನು ತರ್ಜುಮೆ ಮಾಡಿ ನಾ ರಿವ್ಯೂ ಮಾಡುವೆ,” ಎಲ್ಲರಿಗೂ ಅವರವರ ಲೇಖನ, ಗಡುವನ್ನು ಕೊಡುವಷ್ಟರಲ್ಲಿ ಸಮಯ ಮಧ್ಯಾಹ್ನ ಮೂರಾಗಿತ್ತು. ಶಾಸ್ತ್ರೀ ಜೊತೆ ಹೊರಗೆ ಹೋಗಿ ಊಟ ಮಾಡಿ, ಬರುವಷ್ಟರಲ್ಲಿ 4.30 ಆಗಿತ್ತು. ಗಾಡಿಯಲ್ಲಿ ಬಂದಿಲ್ಲದ ಕಾರಣ ಇಂದು ಬೇಗ ಮನೆಗೆ ಹೋಗುವುದಾಗಿ ತಿಳಿಸಿ ಐದು ಘಂಟೆಗೆ ಅಫೀಸಿನ ಬಳಿಯ ಬಸ್ ಸ್ಟಾಪ್ ಗೆ  ಬಂದೆ, ನನ್ನ ಮನೆ ಕಡೆಗೆ ಯಾವ ಬಸ್ ಸುಳಿವು ಇರಲಿಲ್ಲ. ಬಸ್ ಹಾಗು ಮಳೆ ಎರಡರ ನಡೆ ಯಾವಾಗಲೂ ನಿಗೂಢ, ರೈನ್ ಕೋಟ್ ಇಲ್ಲದೆ ಹೊರಗಡೆ ಹೋದ ದಿನ, ತಪ್ಪದೆ ಮಳೆ ಬರುತ್ತದೆ ಹಾಗೆಯೇ ಗಾಡಿ ತೆಗೆದುಕೊಂಡ ಹೋಗದ ದಿನ ಬಸ್ ಬರುವುದಿಲ್ಲ! ಎಂದು ಶಪಿಸ ತೊಡಗಿದೆ, ನನ್ನ ಮನಸ್ಸಿಗೆ ಸಮಾಧಾನ ಮಾಡುವ ಸಲುವಾಗಿ ಏನೋ ನನ್ನ ಮನೆ ಬಳಿಯ ಸರ್ಕಲ್ ಗೆ ಹೋಗುವ ಬಸ್ ಬಂದಿತು, ಸಿಕ್ಕಿದ್ದು ಪಂಚಾಮೃತವೆಂದು ಕೊಂಡು ಬಸ್ ಏರಿದೆ.



*5*

ಬೆಂಗಳೂರಿನ ಟ್ರಾಫಿಕ್ ಎಂದರೆ ಗಿಜಿಗಿಜಿ ಎನ್ನುವ ವಾಹನ, ಕಣ್ಣು ಕುಕ್ಕುವ ಲೈಟ್ ಗಳು, ಮೊಬೈಲ್ ರಿಂಗಣಗಳು, ಎಫ್.ಎಂ ರೇಡಿಯೋದವರ ಅಬ್ಬರ, ಅಲ್ಲಲ್ಲಿ ಎದರಾಗುವ ಟ್ರಾಫಿಕ್ ಸಿಗ್ನಲ್ ಗಳು,  ಒಟ್ಟಿನಲ್ಲಿ ಬೆಂಗಳೂರು ರಸ್ತೆಗಳು ಯಾರೋ ಹೇಳಿದ ಹಾಗೆ ಚಿತ್ರಹಿಂಸೆ ರಾವಣ ಭಾದೆಯ ಹಾಗಿತ್ತು, ನಾ ಸರ್ಕಲ್ ಬಳಿ ಇಳಿದಾಗ ಸುಮಾರು 7.30 ಆಗಿತ್ತು. ಸುರೇಶನನ್ನು ಕಾಡಿದ್ದು ಯಾರಿರಬಹುದು ನೋಡುವ ಎಂದುಕೊಂಡು ಬಸ್ ಸ್ಟಾಪ್ ಹತ್ತಿರದಲ್ಲೇ ಇದ್ದ ಮಾರ್ಕೆಟ್ ಗೆ ಹೋಗಿ ಹಣ್ಣಿನ ಅಂಗಡಿಯಲ್ಲಿ ವ್ಯಾಪಾರ ಮಾಡತೊಡಗಿದೆ, ಆಗ ನನಗೂ ಯಾರೋ ನನ್ನನೇ ದುರುಗುಟ್ಟು ನೋಡುತ್ತಿರುವ ಹಾಗಾಯಿತು, ಸುರೇಶ ಹೇಳಿದ್ದು ಇವಳೇ ಇರಬೇಕು ಎಂದು ಕೊಂಡು, ವ್ಯಾಪಾರ ಅರ್ಧಕ್ಕೆ ನಿಲ್ಲಿಸಿ, ಅವಳ ಬಳಿ ಹೋಗಿ “ಎನಮ್ಮಾ? ನೀ ಮಾಡಿದ್ದು ಸರೀನಾ, ಅದ್ಯಾಕೆ ನೀ ನನ್ನ ಸ್ನೇಹಿತನನ್ನು ಹೆದರಿಸಿದ್ದು” ಎಂದೆ, ಅದಕ್ಕೆ ಅವಳು “ಹಾಗೆನು ಇಲ್ಲ ನಾನೇನು ಅವನನ್ನು ಹೆದರಿಸಲಿಲ್ಲ, ನಿನ್ನ ಸ್ನೇಹಿತನನ್ನು ಬೆಳ್ಳಗ್ಗೆ ಇಲ್ಲಿ ನೋಡಿ ನನಗೆ ಬಹಳ  ಆಶ್ಚರ್ಯವಾಯಿತು ಏಕೆಂದರೆ ನನಗೆ ಅವನೊಂದಿಗೆ ಈ ರಾತ್ರಿ ಎರಕುರಿಯಾದಲ್ಲಿ ಅಪಾಯಿಂಟ್ಮೆಂಟ್ ಇದೆ” ಎಂದು ಮುಗಳ್ನಗೆ ಬೀರಿದಳು, ನಾ ತಡಬಡಿಸುತ್ತಾ ಸುರೇಶನಿಗೆ ಪೋನಾಯಿಸಿದೆ ಆದರೆ ಅವ ನಾಟ್ ರೀಚಬಲ್ ಆಗಿದ್ದ.

(ಇದು ಜೆಫ್ರಿ ಆರ್ಚರ್ ರವರ‌ ಡೆತ್ ಸ್ಪೀಕ್ಸ್  ಎನ್ನುವ‌ ಕಥೆಯ‌ ಸ್ಪೂರ್ತಿ)

Comments

Submitted by venkatb83 Tue, 10/02/2012 - 17:01

ಜೆಫ್ರಿ ಆರ್ಚರ್ ಅವರ ಆ ಬರಹ ನಾ ಓದಿದ್ದ್ದೆ... ಅಲ್ದೆ ಇದು ಹಲವು ಬಾರಿ ಹಲವು ಪತ್ರಿಕೆ ಪುಸ್ತಕಗಳಲ್ಲಿ ಕೆಲವೇ ಸಾಲುಗಳಲಿ ಪ್ರಕಟ ಆಗಿದೆ... ಆದ್ರೆ ನೀವ್ ಸ್ಪೂರ್ತಿ ತೆಗೆದುಕೊಂಡು ಬರೆದ ಈ ದೇಶೀ-ಕನ್ನಡ ಸೊಗಡು ಬರಹ ಹಿಡಿಸಿತು... ಮೃತ್ಯುವನ್ನ ಜಯಿಸಲು ಯಾರಿಂದ ಸಾಧ್ಯ?? ಎಲ್ಲಿ ಹೋಗಿ ಅಡಗಿದರೂ ಮೃತ್ಯು ಬಿಟ್ಟೀತೆ?? ಅವನ ಸಾವು ಅಲ್ಲಿಯೇ ಕಾದಿದೆ... ಪಾಪ/...!!! ಶುಭವಾಗಲಿ,.. \|/