ಮನಸೆಂಬ ಮಾಯೆ

ಮನಸೆಂಬ ಮಾಯೆ

 

 

     ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ ಹೇಳುತ್ತದೆ, 'ಬೇಡ, ಕುಡಿಯಬೇಡ, ಒಳ್ಳೆಯದಲ್ಲ' ಅಂತ. ಆದರೆ, 'ಜೀವನದ ಅವಧಿ ಕಡಿಮೆ. ಇರುವಷ್ಟು ದಿನ ಮಜಾ ಮಾಡಿ, ಖುಷಿಪಟ್ಟು ಹೋಗೋಣ' ಎಂದು ಉಪದೇಶಿಸುವ ಅದೇ ಮನಸ್ಸು 'ಕುಡಿ, ಮಜಾ ಮಾಡು. ಸ್ನೇಹಿತರೊಂದಿಗೆ ಸೇರಿ ಎಲ್ಲವನ್ನೂ ಮರೆತು ಕುಡಿ, ನಿನಗೆ ಅದರಿಂದ ಸಂತೋಷ ಸಿಗುವುದಾದರೆ ಅದನ್ನು ಏಕೆ ಕಳೆದುಕೊಳ್ಳುತ್ತೀಯೆ' ಎಂದು ಪ್ರಚೋದಿಸುತ್ತದೆ. ಹಾಗೂ ಡೋಲಾಯಮಾನ ಸ್ಥಿತಿ ಮುಂದುವರೆದರೆ,  ಮಧ್ಯಮ ಮಾರ್ಗ ಸೂಚಿಸಿ ಹೇಳುತ್ತದೆ, 'ಇದೊಂದು ಸಲ ಕುಡಿದು ಬಿಡು, ಆಮೇಲೆ ಕುಡಿಯದಿದ್ದರಾಯಿತು.' ಕೊನೆಗೆ ಅವನು ಯೋಚನೆ ಮುಂದುವರೆಸಿದ್ದಂತೆಯೇ ಅವನ ಕಾಲುಗಳು ಬಾರಿನ ಹಾದಿ ಹಿಡಿದಿರುತ್ತವೆ.

     'ಯಾರು ಏನೇ ಅನ್ನಲಿ, ನನ್ನ ಮನಸ್ಸು ಒಪ್ಪಿದಂತೆ ಮಾಡುತ್ತೇನೆ, ಅದರಿಂದ ನನಗೆ ಸಂತೋಷವಾಗುತ್ತದೆ' ಎಂದು ಸಮರ್ಥಿಸಿಕೊಳ್ಳುತ್ತೇವೆ. 'ಖ' ಅಂದರೆ ಇಂದ್ರಿಯ, ಸು+ಖ-  ಯಾವುದು ಇಂದ್ರಿಯಕ್ಕೆ ಒಳ್ಳೆಯದಾಗಿ ಕಾಣುತ್ತೋ ಅದು ಸುಖ, ದುಃ+ಖ- ಯಾವುದು ಇಂದ್ರಿಯಕ್ಕೆ ಕೆಟ್ಟದಾಗಿ ಕಾಣುತ್ತೋ ಅದು ದುಃಖ. ವಾಸ್ತವವಾಗಿ ಆಲೋಚನೆ ಮಾಡಿ ನೋಡಿದರೆ, ನಾವು ಸುಖ ಎಂದು ತಿಳಿದುಕೊಂಡಿರುವುದು ದುಃಖವೇ ಆಗಿರಬಹುದು, ದುಃಖ ಎಂದು ತಿಳಿದುಕೊಂಡಿರುವುದು ಸುಖವೇ ಆಗಿರಬಹುದು, ತತ್ಕಾಲಕ್ಕೆ ಸಂತೋಷವಾಯಿತು ಅನ್ನಿಸುವ ಕ್ರಿಯೆಗಳು ನಂತರ ಮನಃಕ್ಲೇಷಕ್ಕೆ ಈಡು ಮಾಡಬಹುದು. ಈಗ ಕಷ್ಟ ಅನ್ನಿಸುವ ಸಂಗತಿಗಳು ನಂತರದಲ್ಲಿ ಸಂತೋಷ ಕೊಡುವುದೂ ಇದೆ. ಇಂದ್ರಿಯಗಳು ಆರೋಗ್ಯವಾಗಿದ್ದರೆ ಸುಖ, ದುಃಖ ನಮಗೆ ಗೊತ್ತಾಗೋದು. ಒಂದೇ ಮನಸ್ಸು ಹಲವು ರೀತಿಗಳಲ್ಲಿ ಹೇಳುತ್ತದೆ. ಮನಸ್ಸು ಹೇಳಿದಂತೆ ಕುಣಿದರೆ/ಕೇಳಿದರೆ ಒಳ್ಳೆಯದೂ ಆಗಬಹುದು, ಕೆಟ್ಟದೂ ಆಗಬಹುದು.

     ಮನಸ್ಸಿನ ಬಗ್ಗೆ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತೇವೆ, ಅಲ್ಲವೇ? ನಿದ್ದೆ ಮಾಡಿದಾಗ ಆ ಮನಸ್ಸು ಎಲ್ಲಿರುತ್ತದೆ? ಮನಸ್ಸು ಅಂತಿರಲಿ, ನಾವೇ ಇರುವುದಿಲ್ಲ. ನಿದ್ದೆಯಲ್ಲಿ 'ನಾನು' ಇಲ್ಲ, ಜಗತ್ತೂ ಇಲ್ಲ, ದೇವರೂ ಇಲ್ಲ, ಯಾರೂ ಇಲ್ಲ. ಏನೂ ಇಲ್ಲ, ಶೂನ್ಯ. ಆಗ ಸುಖವೂ ಇಲ್ಲ, ದುಃಖವೂ ಇಲ್ಲ. ವಿಚಾರಗಳ ಗೊಂದಲವಿಲ್ಲ. ದ್ವೈತ, ಅದ್ವೈತ, ತ್ರೈತ, ಇತ್ಯಾದಿ ಯಾವ 'ತ'ಗಳೂ ಇಲ್ಲ. ವಿವಿಧ ಧರ್ಮಗಳಿಲ್ಲ, ಜಾತಿ, ಮತ, ಪಂಗಡಗಳಿಲ್ಲ. ಅದೇ ಎಚ್ಚರವಾದ ತಕ್ಷಣ, ಮೊದಲು 'ನಾನು' ಏಳುತ್ತದೆ. ಆ 'ನಾನು'ಗೆ ಜಗತ್ತು ಕಾಣುತ್ತದೆ, ಇದಕ್ಕೆಲ್ಲಾ ಕಾರಣನಾದ 'ಅವನು' ಇದ್ದಾನೆ ಅನ್ನುತ್ತದೆ. ಅಂದರೆ ನಾನು ಬೇರೆ, ಜಗತ್ತು ಬೇರೆ, ದೇವರು ಬೇರೆ ಎಂದು ಅಂದುಕೊಳ್ಳುತ್ತದೆ. ನಿದ್ದೆಯಲ್ಲಿ ಇರದ ಸಂಗತಿಗಳು, ಎಚ್ಚರವಾದಾಗ ಬರುತ್ತವೆ. ನಾನು ತಹಸೀಲ್ದಾರ್, ನಾನು ಇಂಜನಿಯರ್, ನಾನು ಪ್ರಧಾನ ಮಂತ್ರಿ ಅನ್ನುವುದೆಲ್ಲಾ ಹುಟ್ಟುವುದು ಎಚ್ಚರವಾದಾಗ ಮಾತ್ರ, ನಿದ್ದೆಯಲ್ಲಿ ಅವು ಯಾವುವೂ ಇರುವುದಿಲ್ಲ. ಮನಸ್ಸಿನ ಮೇಲೆ ಮಾಯಾ ಮೋಹಿನಿ ಆಡುವ ಆಟಗಳಿವು.

     ಹೀಗಿರುವಾಗ ದೇವರು ಮನುಷ್ಯನಿಗೆ ಕೊಟ್ಟಿರುವ ವಿವೇಚನಾ ಶಕ್ತಿಯನ್ನು ಬಳಸಿಕೊಂಡು ಸರಿ-ತಪ್ಪುಗಳ ಸರಿಯಾದ ವಿಶ್ಲೇಷಣೆ ಮಾಡಿ ಮುನ್ನಡೆಯುವುದು ಸೂಕ್ತ. ಮನಸ್ಸಿನಲ್ಲಿ ದ್ವಂದ್ವವಿದ್ದು, ವಿವೇಚನಾ ಶಕ್ತಿ ಹೇಳಿದ ವಿಚಾರ ಕಡೆಗಣಿಸಿ 'ಯಾರು ಏನಾದರೂ ಅಂದುಕೊಳ್ಳಲಿ, ಹೀಗೆ ಮಾಡಿದರೆ ನನ್ನ ಮನಸ್ಸಿಗೆ ಸಂತೋಷವಾಗುತ್ತದೆ' ಎಂದು ಮಾಡಿದರೆ ಒಳಮನಸ್ಸು ನಿಮ್ಮನ್ನು ಪ್ರಶ್ನಿಸದೇ ಇರುವುದಿಲ್ಲ. ಹೀಗೆ ಮಾಡು ಎನ್ನುವುದೇ ಮನಸ್ಸು, ಹೀಗೇಕೆ ಮಾಡಿದೆ ಎಂದು ಪ್ರಶ್ನಿಸುವುದೂ ಅದೇ ಮನಸ್ಸೇ. ಮನಸ್ಸು ನಮ್ಮನ್ನು ನಿಯಂತ್ರಿಸುವ ಬದಲು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದೇ ದ್ವಂದ್ವವನ್ನು ಕೊನೆಗೊಳಿಸಲು ಸರಿಯಾದ ದಾರಿ. ಕೆಲವು ಸಂದರ್ಭಗಳಲ್ಲಿ ಅಂತರಾತ್ಮ ಒಪ್ಪುವಂತೆ ನಡೆದುಕೊಳ್ಳಲು ಕಷ್ಟವಾಗಬಹುದು. ಅನಿವಾರ್ಯವಾಗಿ ಮಾಡಿದ ಅಂತಹ ಕೆಲಸಗಳಿಗೆ ಕುಗ್ಗಬೇಕಿಲ್ಲ, ಆದರೆ ಹಾಗೆ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಹೋಗದೆ ಸರಿಯಾದ ಹಾದಿಯಲ್ಲಿ ನಡೆಯಲು ನಮ್ಮ ಪ್ರಯತ್ನ ಮುಂದುವರೆಸುವುದು ಸೂಕ್ತ.

-ಕ.ವೆಂ.ನಾಗರಾಜ್.

***************

[ಚಿತ್ರ: ಅಂತರ್ಜಾಲದಿಂದ ಹೆಕ್ಕಿದ್ದು]

 
 

Comments

Submitted by sathishnasa Thu, 10/04/2012 - 10:34

ಎಲ್ಲ ಸಾಧನೆಗಳ ಗುರಿಯೂ ಮನಸ್ಸನ್ನ ನಿಯಂತ್ರಿಸಲಕ್ಕಾಗಿಯೇ ಅಭ್ಯಾಸ ಮಾಡಬೇಕಷ್ಟೆ ವಿಶ್ಲೇಷಾಣತ್ಮಕ ಲೇಖನ ನಾಗರಾಜ್ ರವರೇ ಧನ್ಯವಾದಗಳೊಂದಿಗೆ ....ಸತೀಶ್
Submitted by H A Patil Thu, 10/04/2012 - 11:58

ಕವಿ ನಾಗರಾಜ ರವರಿಗೆ ವಂದನೆಗಳು ' ಮನಸೆಂಬ ಮಾಯೆ ' ಒಂದು ಉತ್ತಮ ಲೇಖನ, ಸುಖ ದುಃಖ ಮತ್ತು ಮನೋ ವ್ಯಾಪಾರ ಕುರಿತು ಗಹನವಾಗಿ ಚರ್ಚಿಸಿದ್ದೀರಿ, ಒಂದು ಆಕರ ಲೇಖನವಾಗಿ ನೆನಪಿನಲ್ಚಲುಳಿಯುವ ಬರವಣಿಗೆ, ಧನ್ಯವಾದಗಳು.
Submitted by RAMAMOHANA Fri, 10/05/2012 - 16:55

ಸು0ದರ‌ ಭಾವನಾತ್ಮಕ‌ ಸತ್ಯ, ನಾಗರಾಜ್ ಸಾರ್, ನೆನಪಾದ‌ ಕಗ್ಗ ಮನವನಾಳ್ವುದು ಹಠದ‌ ಮಗುವನಾಳುವ‌ ನಯದೆ ಇನಿತಿನಿತು ಸವಿಯುಣಿಸು ಸವಿಗತೆಗಳಿ0ದ‌ ಅನುಕೂಲಿಸದು ಬರಿಯ‌ ಕೂಗು ಬಡಿತೆಗಳನದು ಇನಿತಿತ್ತು ಮರೆಸಿನಿತ‌ ಮ0ಕುತಿಮ್ಮ. ಧನ್ಯವಾದಗಳು ‍ ರಾಮೋ
Submitted by partha1059 Fri, 10/05/2012 - 21:40

ಮನಸೆಂಬ ಮಾಯೆ ನಮಸ್ಕಾರ ನಾಗರಾಜರೆ ನಿಮ್ಮ ಭಾವನೆಗಳು ಲೇಖನ‌ ಚೆನ್ನಾಗಿದೆ. ಇದರಲ್ಲಿ ಮತ್ತು ಒ0ದು ವಿಷಯವಿದೆ. ಯಾವುದು ನಮ್ಮ ಇ0ದ್ರೀಯಗಳಿಗೆ ಸುಖವೊ ಅದು ಅತಿ ಕಡಿಮೆ ಕಾಲ‌ ನಮ್ಮಲ್ಲಿರುತ್ತದೆ ಆದರೆ ಅದರ‌ ಪರಿಣಾಮ‌ ಮಾತ್ರ ದೀರ್ಘಕಾಲ‌. ಅದಕ್ಕಾಗಿಯೆ ಹಿ0ದೆ ಹೇಳಿದ್ದಾರೆ ಸುಖ‌ ಕ್ಷಣಿಕ‌ ಎ0ದು. ಉದಾ:ಏನಾದರು ಎಣ್ಣೆಯಲ್ಲಿ ಕರೆದುದ್ದು ಅಥವ ಸಿಹಿ ನಾಲಿಗೆಯ ಮೇಲಿರುವಾಗ ಅತಿ ಸುಖ ಎನಿಸುತ್ತದೆ ಆದರೆ ಅದು ಸ್ವಲ್ಪ ಕಾಲ ಮಾತ್ರ ಅದು ನಾಲಿಗೆ ಇಂದ ಕೆಳಗಿಳಿದ ಮರುಕ್ಷಣವೆ ದೇಹದ ಮೇಲೆ ಅದರ ಪರಿಣಾಮ ಕಾಣಿಸಲು ಪ್ರಾರಂಬಿಸುತ್ತದೆ. ಅದೆ ರೀತಿ ಬದುಕಿನಲ್ಲಿ ಬರುವ ಎಲ್ಲ ಸುಖವು ಮುಂದೆ ಯಾವುದೊ ಒಂದು ರೀತಿ ನಮ್ಮನ್ನು ಕಾಡುತ್ತದೆ ಅನ್ನುವುದು ನಿಜ. ಆದರೆ ದುಃಖ ಅನ್ನುವುದು ಜೀವನವನ್ನು ಸಕಾರಾತ್ಮಕವಾಗಿ ನೋಡುವಂತೆ ಮಾಡುತ್ತದೆ ಪಾರ್ಥಸಾರಥಿ
Submitted by sumangala badami Sun, 10/07/2012 - 11:36

ಹಿರಿಯರೇ ಲೇಖನ ತುಂಬಾ ಅರ್ಥಗರ್ಭಿತವಾಗಿದ್ದು, ಬಹಳ ದಿನಗಳ ನಂತರ ಸಂಪದದ ತವರಿಗೆ ಮರಳಿದೆ, ನಿಮ್ಮ ಲೇಖನ ಮನಸ್ಸಿಗೆ ಮುದ ನೀಡಿತು..................
Submitted by venkatb83 Sun, 10/07/2012 - 17:27

" ಹೀಗೆ ಮಾಡು ಎನ್ನುವುದೇ ಮನಸ್ಸು, ಹೀಗೇಕೆ ಮಾಡಿದೆ ಎಂದು ಪ್ರಶ್ನಿಸುವುದೂ ಅದೇ ಮನಸ್ಸೇ. ಮನಸ್ಸು ನಮ್ಮನ್ನು ನಿಯಂತ್ರಿಸುವ ಬದಲು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದೇ ದ್ವಂದ್ವವನ್ನು ಕೊನೆಗೊಳಿಸಲು ಸರಿಯಾದ ದಾರಿ. ಕೆಲವು ಸಂದರ್ಭಗಳಲ್ಲಿ ಅಂತರಾತ್ಮ ಒಪ್ಪುವಂತೆ ನಡೆದುಕೊಳ್ಳಲು ಕಷ್ಟವಾಗಬಹುದು. ಅನಿವಾರ್ಯವಾಗಿ ಮಾಡಿದ ಅಂತಹ ಕೆಲಸಗಳಿಗೆ ಕುಗ್ಗಬೇಕಿಲ್ಲ, ಆದರೆ ಹಾಗೆ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಹೋಗದೆ ಸರಿಯಾದ ಹಾದಿಯಲ್ಲಿ ನಡೆಯಲು ನಮ್ಮ ಪ್ರಯತ್ನ ಮುಂದುವರೆಸುವುದು ಸೂಕ್ತ." ಉತ್ತಮ ವೈಚಾರಿಕ ಲೇಖನ ಹಿರಿಯರೇ.. ನಮ್ಮಲ್ಲಿಯೇ ಕೆಲ ಬದಲಾವಣೆಗಳನ್ನು ತಂದುಕೊಳ್ಳುತ್ತ ಈ ಸಮಸ್ಯೆಯಿಂದ ಪಾರಾಗುವ... ಶುಭವಾಗಲಿ.. ನನ್ನಿ \|
Submitted by swara kamath Sun, 10/07/2012 - 22:25

ಕವಿ ನಾಗರಾಜರಿಗೆ ನಮಸ್ಕಾರಗಳು, ಕಣ್ತಪ್ಪಿನಿಂದ ಬಿಟ್ಟುಹೋದ ಈ ಲೇಖನ ಇಗಷ್ಟೆ ಓದಿದೆ .ಈ ತೆರನ ಲೇಖನಗಳೇ "ಸಂಪದ"ವನ್ನು ಸಂಪದ್ಭರಿತ ಮಾಡುತ್ತೀವೆ.ದೇಹಕ್ಕೆ ಪರಿಶ್ರಮದ ವ್ಯಾಯಾಮ ಬೇಕಿದ್ದರೆ ಗಾಳಿಪಟದಂತೆ ಅಲೆದಾಡುವ ಮನಸ್ಸಿಗೆ ಯೋಗದ ವ್ಯಾಯಾಮ ಬೇಕಾಗುತ್ತದೆ.ತಾವು ಬರೆದ ವಿಚಾರಗಳು ನನಗೆ ತುಂಬಾ ಹಿಡಿಸಿತು. ವಂದನೆಗಳು, ರಮೇಶ ಕಾಮತ್
Submitted by ಗಣೇಶ Sun, 10/07/2012 - 23:03

>>> ಮನಸ್ಸಿನ ಬಗ್ಗೆ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತೇವೆ, ಅಲ್ಲವೇ? ನಿದ್ದೆ ಮಾಡಿದಾಗ ಆ ಮನಸ್ಸು ಎಲ್ಲಿರುತ್ತದೆ? -ಆ ಮನಸ್ಸೂ ನಿದ್ರಿಸುತ್ತದೆ! ಅದು ಎಚ್ಚರದಲ್ಲಿದ್ದರೆ ನಮಗೆಲ್ಲಿಯ ನಿದ್ರೆ. :) >>> ಮನಸ್ಸಿನಲ್ಲಿ ದ್ವಂದ್ವವಿದ್ದು, ವಿವೇಚನಾ ಶಕ್ತಿ ಹೇಳಿದ ವಿಚಾರ.. ಈ ವಿವೇಚನಾ ಶಕ್ತಿ ಯಾವುದು? ಅದು ಎಲ್ಲಿದೆ? ಒಳ ಮನಸ್ಸು ಮತ್ತು ವಿವೇಚನಾ ಶಕ್ತಿ ಬೇರೆ ಬೇರೆಯಾ ? ( ವಿವೇಚನಾ ಶಕ್ತಿ ಹೇಳಿದ ವಿಚಾರ ಕಡೆಗಣಿಸಿ 'ಯಾರು ಏನಾದರೂ ಅಂದುಕೊಳ್ಳಲಿ, ಹೀಗೆ ಮಾಡಿದರೆ ನನ್ನ ಮನಸ್ಸಿಗೆ ಸಂತೋಷವಾಗುತ್ತದೆ' ಎಂದು ಮಾಡಿದರೆ ಒಳಮನಸ್ಸು ನಿಮ್ಮನ್ನು ಪ್ರಶ್ನಿಸದೇ ಇರುವುದಿಲ್ಲ.)
Submitted by kavinagaraj Mon, 10/08/2012 - 09:23

In reply to by ಗಣೇಶ

ಮನಃಸ್ಪಂದನವೇ ಮಾಯೆಯ ಕರಾಮತ್ತು! ಒಳಮನಸ್ಸು ಮತ್ತು ವಿವೇಚನಾಶಕ್ತಿಯ ನಡುವಣ ಗೆರೆ ಬಹಳ ತೆಳುವಾಗಿದೆ. ಇದು ಸರಿ/ಸರಿಯಲ್ಲವೆನ್ನುವುದು ವಿವೇಚನಾ ಶಕ್ತಿ, ಸರಿಯಲ್ಲವೆಂದು ಗೊತ್ತಿದ್ದೂ ಮಾಡಲು ಪ್ರೇರಿಸುವುದು ಮನಸ್ಸು!!