ಮುಖವಾಡ

ಮುಖವಾಡ

ರವೀಂದ್ರ ಕಲಾಕ್ಷೇತ್ರ ಅಂದು ಪ್ರೇಕ್ಷಕರಿಂದ ತುಂಬಿ ಹೋಗಿತ್ತು!!. ಅಂದು "ರಂಗ ತಂಡ" ಮೊಟ್ಟ ಮೊದಲ ಬಾರಿಗೆ ಪೌರಾಣಿಕ ನಾಟಕ "ಸತ್ಯ ಹರಿಶ್ಚಂದ್ರ"  ಪ್ರದರ್ಶನ ಮಾಡುತ್ತಿದ್ದರು. ಅಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ಬಹಳಷ್ಟು ಜನ "ರಂಗ ತಂಡ" ದ ಮುಖ್ಯ ಪಾತ್ರಧಾರಿ ಶಾಮ್ ನನ್ನು ನೋಡಲು ಬಂದಿದ್ದವರೇ ಆಗಿದ್ದರು.

ಶಾಮ್ ಎಂದರೆ ರಂಗ ತಂಡ, ರಂಗ ತಂಡವೆಂದರೆ ಶಾಮ್ ಎನ್ನುವಂತಾಗಿತ್ತು. ಅದು ಅತಿಶಯೋಕ್ತಿ ಏನು ಆಗಿರಲಿಲ್ಲ. ಏಕೆಂದರೆ ಅವನ ಅಂದ, ಹಾವ ಭಾವ,ಅಭಿನಯ ಅದಕ್ಕೆ ಸಾಕ್ಷಿ ಎಂಬಂತಿತ್ತು. ಯಾವುದೇ ಪಾತ್ರವಿರಲಿ ಆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದ. ತನ್ನ ಅಭಿನಯ ಮಾತ್ರದಿಂದಲೇ ಪ್ರೇಕ್ಷಕರನ್ನು ರಂಗ ಮಂದಿರಕ್ಕೆ ಕರೆಸುವಷ್ಟು ಸಾಮರ್ಥ್ಯ ಹೊಂದಿದ್ದ.

ವೇದಿಕೆಯ ಮೇಲೆ "ಸತ್ಯ ಹರಿಶ್ಚಂದ್ರ" ನಾಟಕ ಪ್ರದರ್ಶನವಾಗುತ್ತಿತ್ತು. ಇನ್ನೇನು ನಾಟಕ ಮುಕ್ತಾಯದ ಹಂತಕ್ಕೆ ಬಂದಿತ್ತು. ಅಲ್ಲಿಯವೆರೆಗೂ ಪ್ರೇಕ್ಷಕರು ಶಾಮ್ ನ ಅಭಿನಯಲ್ಲಿ ಮುಳುಗಿ ಹೊರಗಿನ ಪ್ರಪಂಚದ ಅರಿವೇ ಇಲ್ಲವೆಂಬಂತೆ ನಿಶಬ್ಧವಾಗಿ ಕುಳಿತು ವೀಕ್ಷಿಸುತ್ತಿದ್ದರು.

ವೇದಿಕೆಯ ಮೇಲೆ ಸುಡುಗಾಡಿನ ದೃಶ್ಯ ನಡೆಯುತ್ತಿತ್ತು. ಹೆಣ ಕಾಯುವವನ ವೇಷದಲ್ಲಿ ಶಾಮ್ ನಿಂತಿದ್ದ. ಅವನ ಹಾವ ಭಾವಕ್ಕೆ ಪ್ರೇಕ್ಷಕರು ಕರತಾಡನ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಯಾಕೋ ಶಾಮ್ ನ ಮುಖದಲ್ಲಿದ್ದ ಭಾವ ಬದಲಾಯಿತು. ಖಿನ್ನತೆ ಅವನ ಮುಖವನ್ನಾವರಿಸಿತು. ಎಂದೂ ಕಾಣದ ವಿಚಿತ್ರ ವರ್ತನೆ ಶಾಮ್ ನಲ್ಲಿ ಕಂಡು ಅದು ಅವನ ಪಾತ್ರದ ಮೇಲೆ ಪರಿಣಾಮ ತೋರುತ್ತಿತ್ತು!!

ನೆರೆದಿದ್ದ ಪ್ರೇಕ್ಷಕರಲ್ಲಿ ಗುಸುಗುಸು ಶುರುವಾಯಿತು. ಸ್ವಲ್ಪದರಲ್ಲಿ ಆ ಗುಸುಗುಸು ಗದ್ದಲವಾಗಿ ಮಾರ್ಪಟ್ಟಿತು. ವೇದಿಕೆಯ ಮೇಲಿದ್ದ ಶಾಮ್ ಇದ್ದಕ್ಕಿದ್ದಂತೆ ಪರದೆಯ ಹಿಂದೆ ಹೊರಟು ಹೋದ. ಪ್ರೇಕ್ಷಕರು ಏನಾಗುತ್ತಿದೆ ಎಂಬ ಗೊಂದಲದಲ್ಲಿದ್ದಾಗಲೇ "ರಂಗ ತಂಡ"ದ ಸದಸ್ಯನೊಬ್ಬ ವೇದಿಕೆಯ ಮೇಲೆ ಬಂದು ಅನಾರೋಗ್ಯದ ಕಾರಣ ಶಾಮ್ ಅವರು ನಟಿಸಲು ಸಾಧ್ಯವಾಗುತ್ತಿಲ್ಲ. ತುರ್ತಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಗಿರುವುದರಿಂದ ನಾಟಕವನ್ನು ಇಲ್ಲಿಗೆಸ್ಥಗಿತಗೊಳಿಸುತ್ತಿದ್ದೇವೆ. ದಯವಿಟ್ಟು ಕ್ಷಮಿಸಿ ಎಂದು ಒಳಗೆ ಹೋದ. ಅಲ್ಲಿಗೆ ಪರದೆ ಬಿತ್ತು!!

ಒಳಗಡೆ ಶಾಮ್ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾನೆ!! ಸುತ್ತಲೂ ತಂಡದವರೆಲ್ಲರೂ ಶಾಮ್ ನ ದಿಢೀರ್ ವರ್ತನೆಯಿಂದ ಕಂಗಾಲಾಗಿ ಅವನನ್ನೇ ನೋಡುತ್ತಿದ್ದರು. ತಂಡದ ಮುಖ್ಯಸ್ಥ ಎಲ್ಲರನ್ನೂ ಆಚೆ ಕಳಿಸಿ ಶಾಮ್ ಪಕ್ಕದಲ್ಲಿ ಕುಳಿತು ಅವನ ಹೆಗಲ ಮೇಲೆ ಕೈ ಇಟ್ಟು ಶಾಮ್ ಏನಾಯಿತು ಯಾಕೆ ಇದ್ದಕ್ಕಿದ್ದಂತೆ ವೇದಿಕೆ ಬಿಟ್ಟು ಒಳಗೆ ಬಂದೆ? ಎಂದೂ ಇಲ್ಲದ್ದು ಇಂದು ಏನಾಯಿತು?

ಶಾಮ್ ಬಗ್ಗಿಸಿದ ತಲೆಯನ್ನು ಮೇಲೆತ್ತದೆ ವಿಕ್ರಂ ದಯವಿಟ್ಟು ಈಗ ನನ್ನನ್ನು ಏನೂ ಕೇಳಬೇಡ. ನನ್ನ ಮನಸು ಸರಿ ಇಲ್ಲ, ನನ್ನನ್ನು ಒಂಟಿಯಾಗಿ ಬಿಟ್ಟು ಬಿಡು ಎಂದು ಅಲ್ಲಿಂದ ಎದ್ದು ದರದರನೆ ಹಿಂದಿನ ಬಾಗಿಲಿನಿಂದ ಹೊರಟು ಹೋದ.

ತಂಡದ ಸದಸ್ಯರು ಅವನು ಹೋದ ಹಾದಿಯನ್ನು ಅವಾಕ್ಕಾಗಿ ನೋಡುತ್ತಾ ನಿಂತು ಬಿಟ್ಟರು.....

----------------------------------------------------------------------------------------------------------------------

ಅಲ್ಲಿಂದ ಸೀದಾ ತನ್ನ ರೂಮಿಗೆ ಬಂದವನೇ ಬಾಗಿಲನ್ನು ಭದ್ರಪಡಿಸಿ, ಮತ್ತೊಮ್ಮೆ ಯಾರೂ ತನ್ನನ್ನು ಗಮನಿಸುತ್ತಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಂಡು ಕನ್ನಡಿಯ ಮುಂದೆ ನಿಂತು ಎರಡು ಕ್ಷಣ ಕನ್ನಡಿಯನ್ನೇ ದಿಟ್ಟಿಸಿ ನೋಡಿ ನಿಧಾನವಾಗಿ ತಾನು ಹಾಕಿದ್ದ ಮುಖವಾಡವನ್ನು ಕಿತ್ತೊಗೆದ.

ಈಗ ಕನ್ನಡಿಯಲ್ಲಿ ಸ್ಫುರದ್ರೂಪಿ ಶಾಮ್ ನಿಂತಿಲ್ಲ!! ಬದಲಿಗೆ ಕನ್ನಡಿಯೇ ಅವಮಾನದಿಂದ ಒಡೆದು ಹೋಗುವಂಥಹ ಅತೀ ಕುರೂಪಿಯಾದ ಶಾಂತವೀರಯ್ಯ ನಿಂತಿದ್ದಾನೆ. ಹೌದು ಶಾಮ್ ಅಲಿಯಾಸ್ ಶಾಂತವೀರಯ್ಯ....

ಶಾಂತವೀರಯ್ಯನ ಹುಟ್ಟೂರು ಮಳವಳ್ಳಿ. ಚಿಕ್ಕಂದಿನಲ್ಲೇ ಶಾಲೆಗೆ ವಿದಾಯ ಹೇಳಿ ನಾಟಕದ ಗೀಳನ್ನು ಹಚ್ಚಿಕೊಂಡಿದ್ದ. ಆಗಾಗ ಊರಿನಲ್ಲಿ ನಡೆಯುತ್ತಿದ್ದ ಬಯಲಾಟಗಳನ್ನು,ಬೊಂಬೆಯಾಟಗಳನ್ನು, ನಾಟಕಗಳನ್ನು ತಪ್ಪದೆ ನೋಡಿ ಅದರಲ್ಲಿ ಬರುವ ಪಾತ್ರಗಳನ್ನೂ ಅವರ ಸಂಭಾಷಣೆಗಳನ್ನು,ಅವರ ಹಾವಭಾವಗಳನ್ನು, ಪದ್ಯಗಳನ್ನು ಮನೆಗೆ ಬಂದು ಅನುಕರಿಸುತ್ತಿದ್ದ.

ಅವನಿಗಿದ್ದ ಆಸಕ್ತಿಯನ್ನು ಮನಗಂಡ ಅವನ ತಂದೆ ಅವನನ್ನು ಕರೆದುಕೊಂಡು ತಮ್ಮೂರಿಗೆ ಒಮ್ಮೆ ನಾಟಕ ಆಡಲು ಬಂದಿದ್ದ ತಂಡದ ಮುಖ್ಯಸ್ಥನ ಬಳಿ ಹೋಗಿ, ಮಗನ ಆಸಕ್ತಿಯನ್ನು ವಿವರಿಸಿ ಅವನಿಗೊಂದು ಪಾತ್ರ ಕೊಡಬೇಕೆಂದು ಕೇಳಿದರು. ಆ ತಂಡದ ಮುಖ್ಯಸ್ಥ ಶಾಂತವೀರಯ್ಯನ ಕಡೆ ಒಮ್ಮೆ ನೋಡಿ ಮುಖ ಸಿಂಡರಿಸಿಕೊಂಡು, ಅಸಹ್ಯ ಪಟ್ಟುಕೊಂಡು ಛೀಮಾರಿ ಹಾಕಿ ಕಳುಹಿಸಿದರು.

ಅದಕ್ಕೆ ಕಾರಣ, ಶಾಂತವೀರಯ್ಯನ ರೂಪ. ಅವನು ನೋಡಲು ಬಹಳ ಕಪ್ಪಾಗಿದ್ದು, ಮೆಳ್ಗಣ್ಣು ಹೊಂದಿದ್ದು ಕುರೂಪಿಯಾಗಿದ್ದನು. ಎಲ್ಲಿ ಹೋದರು, ಯಾರ ಶಿಫಾರಸು ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ತನ್ನ ಕುರೂಪದಿಂದ ತನ್ನ ಕಲೆ ನಾಶವಾಗುತ್ತಿದೆ ಎಂದು ಮಾನಸಿಕ ಕ್ಷೋಭೆಗೆ ಒಳಗಾಗಿದ್ದನು ಶಾಂತವೀರಯ್ಯ.

ಒಂದು ದಿನ ಶಾಂತವೀರಯ್ಯ, ನಾನು ಊರು ಬಿಟ್ಟು ಹೋಗುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ಮಳವಳ್ಳಿ-ಬೆಂಗಳೂರು ಬಸ್ಸನ್ನು ಹತ್ತಿ ಬೆಂಗಳೂರೆಂಬ ಮಾಯಾನಗರಿಗೆ ಬಂದು ಬಿದ್ದನು. ಈ ಮುಂಚೆ ಒಂದೆರೆಡು ಬಾರಿ ತನ್ನ ಊರಿಗೆ ಬಂದಿದ್ದ ನಾಟಕ ತಂಡದ ಅಡ್ರೆಸ್ ಹುಡುಕಿಕೊಂಡು ಹೋಗಿ ಮತ್ತೊಮ್ಮೆ ಆ ತಂಡದ ಮುಖ್ಯಸ್ತನ ಬೈಗುಳಕ್ಕೆ ತುತ್ತಾದನು.

ಆದರೆ ಈ ಬಾರಿ ಶಾಂತವೀರಯ್ಯ ಸುಲಭಕ್ಕೆ ಬಗ್ಗದೆ ಕನಿಷ್ಠ ಪಕ್ಷ ನಿಮ್ಮ ತಂಡದಲ್ಲಿ ನನಗೊಂದು ಕೆಲಸ ಕೊಡಿ ಎಂದು ಅಂಗಲಾಚಿದಾಗ, ಸರಿ ಎಂದು ಒಪ್ಪಿ ಮೇಕಪ್ ಮಾಡುವ ಕೆಲಸ ಕೊಟ್ಟನು.

ಶಾಂತವೀರಯ್ಯ ಹೆಸರಿಗೆ ಮೇಕಪ್ ಕೆಲಸ ಮಾಡುತ್ತಿದ್ದರೂ, ತನ್ನೊಳಗಿನ ಕಲಾವಿದನನ್ನು ಇನ್ನೂ ಸಾಯಲು ಬಿಟ್ಟಿರಲಿಲ್ಲ. ಪ್ರತಿದಿನ ನಾಟಕ ನೋಡುವುದು, ತನ್ನ ಕೋಣೆಗೆ ಬಂದು ಅದರಲ್ಲಿದ್ದ ತಪ್ಪು ಒಪ್ಪುಗಳನ್ನು ಪರಿಶೀಲಿಸುತ್ತಿದ್ದನು. ತನ್ನ ರೂಪವನ್ನು ಕಾರಣ ಒಡ್ಡಿ ತನ್ನ ಕಲೆಗೆ ಬೆಲೆ ಕೊಡದ ಮಂದಿಗೆ ಸರಿಯಾದ ಪಾಠ ಕಲಿಸಬೇಕೆಂಬ ಹಠ ಅವನಲ್ಲಿ ಹೆಮ್ಮರವಾಗಿ ಬೆಳೆದಿತ್ತು.

ಒಂದು ದಿನ ರಾತ್ರಿ ಊಟ ಮಾಡಿ ಮಲಗಿದ್ದಾಗ ಅವನಿಗೊಂದು ಆಲೋಚನೆ ಹೊಳೆದಿತ್ತು!!! ನನ್ನ ಕುರೂಪವನ್ನೇ ಬದಲಿಸಿಕೊಂಡರೆ ಹೇಗೆ !!! ಆ ಆಲೋಚನೆ ಬಂದಿದ್ದೆ ತಡ ಅದನ್ನು ಕಾರ್ಯರೂಪಕ್ಕೆ ತರಲು ಶುರುಮಾಡಿದ. ಎರಡು ತಿಂಗಳುಗಳ ಕಾಲ, ಯಾರಿಗೂ ತಿಳಿಯದ ಹಾಗೆ ಗೋಪ್ಯವಾಗಿ ತನ್ನ ಯೋಜನೆಯನ್ನು ನಡೆಸಿ ಯಶಸ್ವಿಯಾದ. ಒಂದು ಶುಭದಿನ ಬೆಳಿಗ್ಗೆ ತಾನು ಎರಡು ತಿಂಗಳಿನಿಂದ ತಯಾರಿಸಿದ್ದ "ಮುಖವಾಡ"ವನ್ನು ಧರಿಸಿ ಕನ್ನಡಿಯ ಮುಂದೆ ಬಂದಾಗ ತನ್ನ ಕಣ್ಣನ್ನು ತಾನೇ ನಂಬದಾದ!!.

ಶಾಂತವೀರಯ್ಯ ಕನ್ನಡಿಯಲ್ಲಿ ಕಾಣುತ್ತಿರುವ ರೂಪವನ್ನು ತನ್ನ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಾ ಈ ರೂಪಕ್ಕೆ ತಕ್ಕುದಾದ ಹೆಸರು ಶಾಮ್ ಎಂದು ಬದಲಿಸಿಕೊಂಡು ಅಲ್ಲಿಂದ ನಿರ್ಗಮಿಸಿದ್ದ.

ನಂತರ "ರಂಗ ತಂಡ" ಕ್ಕೆ ಭೇಟಿ ಕೊಟ್ಟು ತನ್ನಲ್ಲಿದ್ದ ಕಲೆಯನ್ನು ಪ್ರದರ್ಶಿಸಿ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದ. ತನ್ನ ಅಮೋಘ ಪ್ರತಿಭೆಯಿಂದ ಅಲ್ಪ ಸಮಯದಲ್ಲೇ "ರಂಗ ತಂಡ"ದ ಮುಖ್ಯ ಪಾತ್ರಧಾರಿಯಾಗಿದ್ದ. ಅಪ್ರತಿಮ ಅಂದ, ಅದನ್ನು ಮೀರಿಸುವ ಪ್ರತಿಭೆ ಇವನನ್ನು ಪ್ರವರ್ಧಮಾನಕ್ಕೆ ತಂದಿತ್ತು. ಆದರೆ ಶಾಂತವೀರಯ್ಯನಿಗೆ ಎಲ್ಲೋ ಮನದ ಮೂಲೆಯಲ್ಲಿ ತಾನು ಎಲ್ಲರನ್ನೂ ಮೋಸ ಮಾಡುತ್ತಿದ್ದೇನೆ, ನಂಬಿಕೆ ದ್ರೋಹ ಮಾಡುತ್ತಿದ್ದೇನೆ, ನನ್ನ ಸ್ವಾರ್ಥಕ್ಕಾಗಿ ನಾನು ಈ ರೀತಿ ಮಾಡಬಾರದು ಎಂಬ ಅಪರಾಧಿ ಭಾವ ಮೂಡುತ್ತಿತ್ತು. ಆ ಸಮಯದಲ್ಲಿ ಮನೆಗೆ ಬಂದು ತನ್ನ ಮುಖವಾಡವನ್ನು ತೆಗೆದು ಕನ್ನಡಿಯನ್ನು ನೋಡುತ್ತಾ ಗಳಗಳನೆ ಅತ್ತು ಮನಸನ್ನು ಹಗುರ ಮಾಡಿಕೊಳ್ಳುತ್ತಿದ್ದ.

----------------------------------------------------------------------------------------------------------------------------------

ಎಲ್ಲ ಸರಿಯಾಗಿ ನಡೆಯುತ್ತಿದೆ ಎನ್ನುವಾಗ...."ರಂಗ ತಂಡ" ಪ್ರಪ್ರಥಮವಾಗಿ "ಸತ್ಯ ಹರಿಶ್ಚಂದ್ರ" ನಾಟಕ ಮಾಡಲು ನಿರ್ಧರಿಸಿತು. ನಾಟಕದ ತಾಲೀಮು ಶುರುವಾದಾಗಿನಿಂದ ಶಾಮ್ ಅಲಿಯಾಸ್ ಶಾಂತವೀರಯ್ಯ ಮೊದಲಿನಂತಿರಲಿಲ್ಲ. ಮುಂಚೆ ಇದ್ದ ಲವಲವಿಕೆ ಮಾಯವಾಗಿತ್ತು. ಅದಕ್ಕೆ ಕಾರಣ ಹರಿಶ್ಚಂದ್ರನ ಸತ್ಯಪರತೆ. ಸತ್ಯಕ್ಕಾಗಿ ತನ್ನ ಹೆಂಡತಿ ಮಕ್ಕಳನ್ನೂ ಕಳೆದುಕೊಳ್ಳಲು ಸಿದ್ಧನಾದ.

ಆದರೆ ತಾನು ತನ್ನ ಸ್ವಾರ್ಥಕ್ಕಾಗಿ ತನ್ನ ಕುರೂಪವನ್ನು ಮುಚ್ಚಿಟ್ಟು ಮುಖವಾಡ ಧರಿಸಿ ಜನರನ್ನು ಮೋಸ ಮಾಡುತ್ತಿದ್ದೇನೆ ಎಂದು ಬಹಳ ಕೊರಗುತ್ತಿದ್ದ. ಇದೇ ಬೇಸರದಲ್ಲಿ ಬೆಂಗಳೂರಿಗೆ ಬಂದಾಗಿನಿಂದ ಮಳವಳ್ಳಿಯ ಕಡೆ ಹೋಗದ ಶಾಂತವೀರಯ್ಯ ಒಮ್ಮೆ ಮುಖವಾಡ ತೆಗೆದು ಊರಿಗೆ ಭೇಟಿ ಕೊಟ್ಟಿದ್ದ. ಇವನ ಕೊರಗಿನಲ್ಲೇ ಕೃಶವಾಗಿದ್ದ ಅಪ್ಪ ಅಮ್ಮನನ್ನು ನೋಡಿ ಇಬ್ಬರನ್ನೂ ತಬ್ಬಿಕೊಂಡು ಮನಸು ಹಗುರವಾಗುವರೆಗೂ ಅತ್ತು ಇನ್ನು ಸ್ವಲ್ಪ ದಿವಸ ಬಂದುಬಿಡುತ್ತೇನೆ ಎಂದು ಹೇಳಿ ಬಂದಿದ್ದ.

--------------------------------------------------------------------------------------------------------------------------------------

ಮುಖವಾಡವನ್ನು ಕಿತ್ತೊಗೆದ ಶಾಮ್...ಆ ಮುಖವಾಡವನ್ನೊಮ್ಮೆ ದಿಟ್ಟಿಸಿ ನೋಡಿ ಒಂದು ಪತ್ರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮುಖವಾಡದ ಜೊತೆ ಆ ಪತ್ರವನ್ನಿಟ್ಟು ತನ್ನ ಊರ ಕಡೆ ಹೆಜ್ಜೆ ಹಾಕಿದ...

ಈಗ ಅವನ ಮನಸು...ಮತ್ತು ಹಾಕುತ್ತಿದ್ದ ಹೆಜ್ಜೆಗಳೂ ಹಗುರವಾಗಿ ತೇಲುತ್ತಿರುವಂತೆ ಭಾಸವಾಗುತ್ತಿತ್ತು.

Rating
No votes yet

Comments

Submitted by kavinagaraj Mon, 10/08/2012 - 09:37

ಆತ್ಮೀಯ ಜಯಂತರೇ, ಒಂದು ಉತ್ತಮವಾದ ಈ ಕಥಾಹಂದರವನ್ನು ಉಪಯೋಗಿಸಿ ಇನ್ನೊಂದು ಬೇರೆಯ ಕಥೆ ಹೆಣೆಯಿರಿ. ಅದರಲ್ಲಿ ಕಥಾನಾಯಕ ಮುಖವಾಡ ಧರಿಸಿ ಇತರರ ಮುಖವಾಡ ಬಯಲಿಗೆಳೆಯುವ ಕೆಲಸ ಮಾಡಲಿ. ಆತ್ಮಹತ್ಯೆ ಮಾಡಿಕೊಳ್ಳುವುದು ಸತ್ಯಪಾಲನೆಯ ಸರಿಯಾದ ದಾರಿಯೆಂದು ಬಿಂಬಿತವಾಗದಿರಲಿ. ಒಳ್ಳೆಯ ಉದ್ದೇಶಕ್ಕಾಗಿ ಮುಖವಾಡ ಧರಿಸುವುದು ತಪ್ಪಲ್ಲವೆಂದು ಬಿಂಬಿಸಿರಿ.
<< ದರದರನೆ ಹಿಂದಿನ ಬಾಗಿಲಿನಿಂದ ಹೊರಟು ಹೋದ.>> ಇಲ್ಲಿ ಸರಸರನೆ ಎಂಬ ಪದ ಹೆಚ್ಚು ಸೂಕ್ತವೆನಿಸುತ್ತದೆ.

Submitted by Jayanth Ramachar Mon, 10/08/2012 - 15:07

In reply to by kavinagaraj

ಕವಿಗಳೇ ನಿಮ್ಮ ಸಲಹೆಯಂತೆ ಕಥೆಯನ್ನು ಹೆಣೆಯಲು ಪ್ರಯತ್ನ ಪಡುತ್ತೇನೆ. ಅಂದಹಾಗೆ ಈ ಕಥೆಯಲ್ಲಿ ಕಥಾನಾಯಕ ಕೊನೆಯಲ್ಲಿ ಆತ್ಮಹತ್ಯೆ ಪತ್ರ ಬರೆಯುವುದು ಕೇವಲ ಆ ಮುಖವಾಡದ ವ್ಯಕ್ತಿಯ ಬಗ್ಗೆಯೇ ಹೊರತು ಆತನ ನಿಜವಾದ ಸ್ವರೂಪಕ್ಕಲ್ಲ. ಧನ್ಯವಾದಗಳು

Submitted by sathishnasa Mon, 10/08/2012 - 13:09

ವಿಭಿನ್ನವಾಗಿದೆ ನಿಮ್ಮ ಕಥಾ ಶೈಲಿ ಜಯಂತ್ ರವರೇ ಆದರೆ ಆತ್ಮಹತ್ಯೆಯ ತೀರ್ಮಾನ ಸರಿಯಲ್ಲ ಅನ್ನಿಸುತ್ತೆ ಧನ್ಯವಾದಗಳೊಂದಿಗೆ
....ಸತೀಶ್

Submitted by Jayanth Ramachar Mon, 10/08/2012 - 15:09

In reply to by sathishnasa

ಸತೀಶ್ ಅವರೇ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಅಂದಹಾಗೆ ಈ ಕಥೆಯಲ್ಲಿ ಕಥಾನಾಯಕ ಕೊನೆಯಲ್ಲಿ ಆತ್ಮಹತ್ಯೆ ಪತ್ರ ಬರೆಯುವುದು ಕೇವಲ ಆ ಮುಖವಾಡದ ವ್ಯಕ್ತಿಯ ಬಗ್ಗೆಯೇ ಹೊರತು ಆತನ ನಿಜವಾದ ಸ್ವರೂಪಕ್ಕಲ್ಲ. ಧನ್ಯವಾದಗಳು