ಕರಿಗಿರಿ ಕರಿ ಕಳೆದುಕೊಂಡಾಗ !

ಕರಿಗಿರಿ ಕರಿ ಕಳೆದುಕೊಂಡಾಗ !

 

 

ತುಮಕೂರಿನಿಂದ ಹದಿನೈದು ಕಿಲೋಮೀಟರ್ ದೂರದಲ್ಲಿರುವ ದೇವರಾಯನದುರ್ಗ ಎಂಬ ಯಾತ್ರಾಸ್ಥಳವು ಲಕ್ಷ್ಮೀ-ನರಸಿಂಹರ ದೇವಸ್ಥಾನಕ್ಕೆ ಮಹಾಪ್ರಸಿದ್ದಿ. ತಪ್ಪಲಲ್ಲಿ ಭೋಗಾ ನರಸಿಂಹರ ಶಾಂತತೆಯಾದರೆ, ಬೆಟ್ಟದ ಮೇಲೆ ಯೋಗಾ ನರಸಿಂಹರ ಘರ್ಜನೆ. 
 
ಸ್ವಂತ ವಾಹನಗಳ ಭರಾಟೆ ಕಡಿಮೆ ಇದ್ದ ಅಂದಿನ ದಿನಗಳಲ್ಲಿ, ಏಳೂವರೆಗೆ ಬೆಂಗಳೂರಿನಿಂದ ಬಸ್ ಒಂದು ಹೊರಟು ಅಲ್ಲಿ ತಲುಪುತ್ತಿತ್ತು. ಬಸ್ ಅಲ್ಲಿಗೆ ಸೇರುವವರೆಗೂ ಪೂಜೆ ಶುರುವಾಗುತ್ತಿರಲಿಲ್ಲ. ಎರಡೂ ದೇವಸ್ಥಾನಗಳ ಪೂಜೆಯ ನಂತರ, ಆಹಾರ ಸೇವಿಸುವ ಹೊತ್ತಿಗೆ ಬಸ್ ಹೊರಡುವ ಸಮಯ. ಮುಸ್ಸಂಜೆಗೆ  ಬೆಂಗಳೂರು ತಲುಪುತ್ತಿತ್ತು. 
 
ಇಂದು ಕಾಲ ಬದಲಾಗಿದೆ. ಇಂದು ಬಸ್ಸಿಗಿಂತ ಸ್ವಂತ ವಾಹನಗಳೇ ಹೆಚ್ಚು. ಬೆಟ್ಟದ ಮೇಲಿನ ಯೋಗಾ ನರಸಿಂಹ ದೇವಸ್ಥಾನಕ್ಕೆ ಹೋಗುವುದಕ್ಕೆ ಮುಕ್ಕಾಲು ಹಾದಿ ವಾಹನಗಳಲ್ಲಿ ಹೋಗಬಹುದು. ಆದರೆ ಭಗವಂತ ತನ್ನ ದರ್ಶನಕ್ಕೆ ಬರುವವರಿಗೆ ಸ್ವಲ್ಪ ಕಾಲ್ನಡಿಗೆಯೂ ಇರಲಿ ಎಂದು ಕಡಿದಾದ ಬೆಟ್ಟದ ಮೇಲೆ ಕುಳಿತಿರುವುದರಿಂದ, ಮಿಕ್ಕ ಹಾದಿ ನೆಡೆದೇ ಹೋಗಬೇಕು. ಬೆಟ್ಟ ಹತ್ತಿ ಹೋಗುವ ಹಾದಿಯಲ್ಲಿ ಹಾದಿಯುದ್ದಕ್ಕೂ ಕೋತಿಗಳ ಹಾವಳಿ ಇದ್ದರೂ ಬೆಟ್ಟದ ಮೇಲಿನಿಂದ ಕಾಣುವ ನೋಟ ಮಾತ್ರ ರುದ್ರರಮಣೀಯ!
 
ಅಂದು, ಮೈಸೂರು ಮಹಾರಾಜರಾದ ಚಿಕ್ಕದೇವರಾಯ ಒಡೆಯರ್ ಅವರು ಈ ಕ್ಷೇತ್ರವನ್ನು ತಮ್ಮ ಪ್ರಾಂತ್ಯವನ್ನಾಗಿಸಿಕೊಂಡು ’ದೇವರಾಯನ ದುರ್ಗ’ ಎಂದು ಹೆಸರಿಸುವುದಕ್ಕೆ ಮೊದಲು ಇದ್ದ ಹಲವು ಹೆಸರುಗಳಲ್ಲಿ ಒಂದು ’ಕರಿಗಿರಿ ಕ್ಷೇತ್ರ’.
 
ಅಂತಹ ತುಮಕೂರಿನ ಬ್ರಾಹ್ಮಣರ ಬೀದಿಯಲ್ಲಿನ ಒಂದು ಮನೆಯಲ್ಲಿ ಕಲರವವೋ ಕಲರವ ... ವಂಶೋದ್ಧಾರಕ ಹುಟ್ಟಿದ್ದ .. ಅದೂ ಅಪರೂಪದ ಕೂಸು ಅಂದರೆ ಸಂಭ್ರಮಕ್ಕೇನು ಕಡಿಮೆ? ಶುದ್ದ ಅಮಾವಾಸ್ಯೆಯ ದಿನ, ಅಂತೂ ಇಂತೂ ಶೇಷಗಿರಿರಾಯರು ತಂದೆಯಾಗಿದ್ದರು. ಹುಟ್ಟಿದಾಗಿನಿಂದ ತಂದೆ ಆಗಬೇಕೂ ಅಂತಿದ್ರೂ, ಈಗ ಆದರು ಅಂತಲ್ಲ ನಾ ಹೇಳಿದ್ದು. ಮದುವೆಯಾಗಿ ಹತ್ತು ವರ್ಷದ ನಂತರ ತಂದೆಯಾಗಿದ್ದರು ಅಂತ. 
 
ಶೇಷಗಿರಿರಾಯರದು ಪೌರೋಹಿತ್ಯ. ತಮ್ಮ ಮನೆಯಲ್ಲಿ ಅವರು ಚಿತ್ರಾವತಿ ಇಡುವುದು ಭಾಧ್ಯಸ್ತರಾಗಿ ಬಂಧುವರ್ಗದವರಿಗೆ ತರ್ಪಣ ಬಿಟ್ಟ ದಿನ ಮತ್ತು ವರ್ಷಾವರಿ ಹಬ್ಬಗಳ ದಿನ ಮಾತ್ರ. ಹೆಚ್ಚು ಕಮ್ಮಿ ವರ್ಷದಲ್ಲಿ ಮುನ್ನೂರು ದಿನವೂ ಕೈಯಲ್ಲಿ ಚಿತ್ರಾವತಿ ಹಿಡಿದೇ ಹೊರಗೆ ಅಡಿ ಇಡುವುದು. ಅವರು ಒಪ್ಪತ್ತು ಮಾಡೋ ಊಟವೇ ಎರಡು ಹೊತ್ತಿಗೆ ಆಗುವಷ್ಟು ಇದ್ದುದರಿಂದ ರಾತ್ರಿ ಊಟ ಮಾಡುತ್ತಿರಲಿಲ್ಲ. ಎಲ್ಲಿಗೇ ಹೊರಟರೂ ನೆಡೆದೇ ಹೋಗುತ್ತಿದ್ದುದರಿಂದ ತಿನ್ನೋ ಆಹಾರವೂ ಜೀರ್ಣವಾಗುತ್ತಿತ್ತು. ಆಂಬೋಡೆ, ಜಹಾಂಗೀರು, ಜಿಲೇಬಿ ಇತ್ಯಾದಿಗಳು ಜೀರ್ಣವಾಗಲು ಒಂದೆರಡು ದಿನ ಹಿಡೀತಿತ್ತು ಬಿಡಿ.
 
ಕೆಲವೊಮ್ಮೆ ಹೊರಗಿನ ಊಟಗಳು ಅವರ ಆರೋಗ್ಯದ ಜೊತೆ ಆಟವಾಡಿದ್ದೂ ಇದೆ. ಕೂಟಿಗೆ ಸುವರ್ಣಗಡ್ಡೆ ಹಾಕಿದ್ದು ಇವರಿಗೆ ಅರಿಯದೆ, ತಿಂದು ಮೈಕೈ ಎಲ್ಲ ಕೆರೆತ ಶುರುವಾಗಿತ್ತೊಮ್ಮೆ. ಸೊಪ್ಪಿನ ಪಲ್ಯೆ ತಿನ್ನುವಾಗ ಕಲ್ಲು ಅಗೆದು ಹಲ್ಲು ಮುರಿದುಕೊಂಡಿದ್ದರಿನ್ನೊಮ್ಮೆ, ಹೀಗೆ.
 
ಹೋಗ್ಲಿ ಬಿಡಿ, ಈಗ ಕೂಸಿನ ವಿಚಾರಕ್ಕೆ ಬರೋಣ. ಮಗುವಿನ ಆರೈಕೆ ಚೆನ್ನಾಗಿ ನೆಡೆದು ನಾಮಕರಣದ ಹೊತ್ತಿಗೆ ದುಂಡು ದುಂಡಾಗಿ ಅಮಾವಾಸ್ಯೆ ಚಂದ್ರನಂತೆ ಕಂಗೊಳಿಸುತ್ತಿದ್ದ. ಹೆಚ್ಚು ಕಮ್ಮಿ ಒಮ್ಮನದಿಂದ  ಕೂಸಿಗೆ ಇಟ್ಟ ಹೆಸರು ’ಕರಿಗಿರಿರಾಯ’ ಎಂದು.  
 
ಏನು ಮಾಡೋಕ್ಕಾಗುತ್ತೆ? ಕೆಲವರನ್ನು ಕೈ ತೊಳೆದು ಮುಟ್ಟಬೇಕು ... ಅವರು ಮುಟ್ಟಿಸಿಕೊಂಡ್ರೆ ... ಇನ್ನು ಕೆಲವರನ್ನು ಮುಟ್ಟಿ ಕೈ ತೊಳೆಯಬೇಕು ... ನಿಮಗೆ ಮುಟ್ಟಬೇಕೂ ಅನ್ನೋ ಆಸೆ ಇದ್ದರೆ.
 
ಕರಿಗಿರಿ ಎರಡನೇ ವರ್ಗಕ್ಕೆ ಸೇರಿದವ ... ಎಲ್ಲೆಡೆ ನೆಡೆದೇ ಹಾದಿ ಸವೆಸಿದ್ದ ಶೇಷಗಿರಿರಾಯರು ಇರೋ ಬರೋ ಬಿಸಿಲೆಲ್ಲವನ್ನೂ ತಾವೇ ಹೀರಿ ಕಪ್ಪಗೆ ಕಂಗೊಳಿಸುತ್ತಿದ್ದರು. ಬಹುಶ: ಅವರ ಕಪ್ಪೆಲ್ಲ ಕರಿಗಿರಿಗೆ ಧಾರೆ ಎರೆದಿದ್ದರೇನೋ ಎನ್ನುತ್ತಿದ್ದರು ಜನ.
 
ಕರಿಗಿರಿ ಬೆಳೆದಂತೆಲ್ಲ ’ಕರಿ’ ಮೈ ಬಣ್ಣವೂ ಬೆಳೆಯಿತು? ದೇಹವೂ ಗಿರಿಯಂತೆ ಬೆಳೆದಿತ್ತು... 
 
ಅಲ್ಲಾ? ದೇಹ ಬೆಳೀತು ನಿಜ, ಬಣ್ಣ ಹ್ಯಾಗೆ ಬೆಳೀತು, ಅದಾಗಲೇ ಉತ್ತುಂಗದಲ್ಲಿತ್ತಲ್ವೇ? ಅಂದ್ರಾ?  ನಾನು ವಾದಿಸಲು ಹೋದರೆ ಇತ್ತಂಡವಾದವಾದೀತು. ಆದರೂ ಕೇಳಿ .. ದೇಹ ಬೆಳೆದಾಗ, ಚರ್ಮವೂ ಹಿಗ್ಗುತ್ತೆ. ಹಿಗ್ಗಿದ ಚರ್ಮವು ಮೈ ಬಣ್ಣ ಹೊಂದದೆ ಇದ್ದರೆ ಮುಂದೊಂದು ದಿನ, ದೇಹ ಪಟಾಪಟಿಯಾಗಿ ಮನುಷ್ಯ ಹೇಸರಗತ್ತೆಯಂತೆ ಕಾಣೋದಿಲ್ಲವೇ? ಅದಕ್ಕೇ ಹಾಗೆ ಹೇಳಿದ್ದು. 
 
ಹೆತ್ತವರೇ ಇಟ್ಟ ಹೆಸರು ’ಕರಿಗಿರಿರಾಯ’. ಅಂದು, ಕ್ಷೇತ್ರದ ಹೆಸರನ್ನೂ ದಿನನಿತ್ಯ ಪಠನ ಮಾಡಿದಂತೆ ಆಗುತ್ತೆ ಎಂಬುದೆಲ್ಲ ಮಾತಾದರೂ, ಅವರಿಂದಲೇ, ಕ್ರಮೇಣ  ಹೆಸರಿನಲ್ಲಿ ಮಧ್ಯದಿಂದ ಒಂದಷ್ಟು ಕಿತ್ತುಹಾಕಲ್ಪಟ್ಟು ಕೇವಲ ’ಕರಿಯ’ ಉಳಿದುಕೊಂಡಿತ್ತು. ಅತಿ ಕಿರಿ ವಯಸ್ಸಿನಲ್ಲೇ ಈ ಹೆಸರು ಬಂದೊದಗಿದ್ದು, ಕರಿಗಿರಿ’ಗೆ ಕರಿಯ ಎಂಬ ಹೆಸರಿಗೆ ಹೊಂದಿಕೊಳ್ಳದೇ ವಿಧಿಯಿರಲಿಲ್ಲ.
 
ಶಾಲೆಯಲ್ಲಿದ್ದಾಗ ಒಬ್ಬ ಸೇಠು ಹುಡುಗ ಪರಿಚಯವಾದ. ಇವನನ್ನು ಕಂಡು ಅವನಿಗೆ ಯಾಕೋ ಎದ್ವಾತದ್ವ ಮರುಕ ಹುಟ್ಟಿ "ನೀ ಯಾಕೋ ಇಷ್ಟು ಕಪ್ಪು ಇದ್ದೀಯಾ? ದಿನಾ ಚೆನ್ನಾಗಿ ಕಲ್ಲಿನಿಂದ ಮೈತಿಕ್ಕು ಕಣೋ" ಎಂದಿದ್ದ. ಅಬ್ಬಬ್ಬ! ಎಂತಹ ಅತಿರೇಕ? ಇವನೇನು ಮಾಡ್ತಾನೆ ಪಾಪ? ಅವನಿಗೆ ತನ್ನ ಮೈಬಣ್ಣದ ಮೇಲೆ ಹೇಸಿಗೆಯಾಗಿ ಜಿಗುಪ್ಸೆ ಹುಟ್ಟುವಂತೆ ಮಾಡಿದ್ದರು. ಕರಿಗಿರಿಯನಿಗೆ ಅರ್ಥವಾಗದ ವಿಷಯವೊಂದಿದೆ. ಆ ಸೇಠಿ ಇವನನ್ನು ಮುಟ್ಟಿದರೆ ಅವನೂ ಕಪ್ಪಾಗಬಹುದಂತೆ, ಅಂತ ಸೇಠಿಯ ಅಪ್ಪ-ಅಮ್ಮ ಅವನಿಗೆ ಹೇಳಿದ್ದರು. ಹಾಗಿದ್ದರೆ, ತಾನು ಸೇಠಿಯನ್ನು ಮುಟ್ಟಿದರೆ, ತಾನ್ಯಾಕೆ ಬೆಳ್ಳಗೆ ಆಗೋಲ್ಲ ಅಂತ?
 
ಜೀವನದಲ್ಲಿ ಕೆಲವು ಪ್ರಶ್ನೆಗಳು ಪ್ರಶ್ನೆಯಾಗೇ ಉಳಿಯುತ್ತದೆ, ಕೇಳಿದವರೊಂದಿಗೇ ಅಳಿಯುತ್ತದೆ !
 
ಒಮ್ಮೆ ಅವನು ತನ್ನ ಬಂಧುವರ್ಗದವರೊಂದಿಗೆ ಯಾವುದೋ ಮದುವೆಗೆ ಹೋಗಿದ್ದ. ಮದುವೆ ಮುಗಿಸಿ ಬಸ್ ಹತ್ತಿ ಕುಳಿತಿದ್ದರು. ಹಾದಿಗೆ ಬೇಕಾದೀತೂ ಅಂತ ನೀರಿನ ಬಾಟ್ಲಿ ತುಂಬಿಸಿಕೊಂಡು ಬರಲು ಇವನಿಗೆ ಹೇಳಿದರು .. ಕರಿಗಿರಿಯ ಕೆಳಗಿಳಿದು ಹೋಗಿದ್ದ. ಅವನು ವಾಪಸ್ ಬರೋದ್ರೊಳಗೆ ಡ್ರೈವರ್ ಬಂದು ಕುಳಿತು ಗಾಡಿ ಸ್ಟಾರ್ಟ್ ಮಾಡಿಯೇಬಿಟ್ಟ. ಮಗ ಬಂದಿಲ್ಲ ಅಂತ ಅಮ್ಮನಿಗೆ ಆತಂಕ. ಈಕೆಯ ಆತಂಕ ಕಡಿಮೆ ಮಾಡಲು ಮತ್ಯಾರೋ ಡ್ರೈವರ್’ಗೆ ಹೇಳಿದ್ದರು "ನಮ್ಮ ಚಿಕ್ಕ ಹುಡುಗ ಬರಬೇಕು, ಒಂದು ನಿಮಿಷ ತಡೆಯಪ್ಪ" ಅಂತ. ಡ್ರೈವರ್ ಗಾಡಿ ಆಫ್ ಮಾಡಿದ. ಕರಿಗಿರಿಯ ಬಸ್ ಹತ್ತಿದ ಕೂಡಲೆ ಅವರು "ಸರಿಯಪ್ಪ ಈಗ ನಡಿ" ಅಂದರು. ಡ್ರೈವರ್’ಗೆ ಎಷ್ಟು ಸಿಟ್ಟು ಬಂದಿತ್ತೋ ಅಷ್ಟು ಜೋರಾಗಿ ನಕ್ಕಿದ್ದ. ಅದೂ ಅಲ್ಲದೇ "ಈ ಕರಿ ಠೊಣಪ ನಿಮ್ಮ ಚಿಕ್ಕ ಹುಡುಗಾನಾ?" ಅಂತಲೂ ಸೇರಿಸಿ ಬಸ್ಸಿನವರೆಲ್ಲ ನಗುವಂತೆ ಮಾಡಿದ್ದ. ಪಾಪ ಕರಿಗಿರಿಗೆ ಅವಮಾನ, ದುಖ ಎಲ್ಲ. ಅವನಿಗೆ ಸಿಟ್ಟು ಬಂದು ಮುಖವೆಲ್ಲ ಕೆಂಪಾಗಿತ್ತು ಎಂದು ಅವರಮ್ಮ ನುಡಿದರೂ ಯಾರ ಕಣ್ಣಿಗೂ ಅದು ಕಂಡಿರಲಿಲ್ಲ.
 
ಬಣ್ಣದೊಂದಿಗೇ ಬಂದ ಹೆಸರು, ಜನರು ಆಡಿಕೊಳ್ಳುತ್ತಿದ್ದ ರೀತಿ, ಅದರೊಂದಿಗೇ ಈ ರೀತಿ ಉಂಟಾದ ಸಂದರ್ಭಗಳು ಅವನಲ್ಲಿ ಕೀಳರಿಮೆಯನ್ನು ಬೆಳೆಸಿ, ಬಲವಾಗಿಸಿತ್ತು. ಹಿರಿಯರು, ಸುತ್ತಲಿನವರು ತಮಗೇ ಅರಿವಿಲ್ಲದೆ ಮತ್ತೊಬ್ಬರ ಜೀವನದಲ್ಲಿ ಎಬ್ಬಿಸೋ ಗಾಳಿ ಇದು. ದಿನ ದಿನವೂ ಮೌನಕ್ಕೆ ಶರಾಣಗ ಹತ್ತಿದ. ಕರಿಗಿರಿ ಯಾರೊಂದಿಗೂ ಒಮ್ಮೆಲೆ ಮಾತಿಗೆ ಹೋಗುತ್ತಿರಲಿಲ್ಲ. ಮಾತನಾಡಿಸಿದರೆ ಮಾತ್ರ ಮಾತು.
 
ಪೌರೋಹಿತ್ಯದ ವೃತ್ತಿಯ ಮನೆತನವಾದ್ದರಿಂದ ದುರ್ಗದ ದೇವಸ್ಥಾನದಲ್ಲಿ ಇವನ ಸಹಾಯ ಎಂದೆಂದಿಗೂ ಇರುತ್ತಿತ್ತು. ಕೆಳಗಿನ ಗುಡಿಗೆ ಬರುವಷ್ಟು ಮಂದಿ ಮೇಲಿನ ಗುಡಿಗೆ ಹೋಗುತ್ತಿರಲಿಲ್ಲ. ಹಾಗೆ ಹೋಗಬೇಕು ಎನ್ನುವವರನ್ನು ಒಂದು ಗುಂಪು ಮಾಡಿ, ಅರ್ಚಕರು ಕರಿಗಿರಿಯೊಡನೆ ಹೋಗುತ್ತಿದ್ದರು. ಕೋತಿಗಳ ಹಾವಳಿಯನ್ನು ಹತ್ತಿಕ್ಕುವುದು, ಬೆಟ್ಟ ಏರಲು ಜನರಿಗೆ ಸಹಾಯ ಮಾಡುವುದು, ಅರ್ಚಕರಿಗೆ ಸಹಾಯ, ತೀರ್ಥ-ಪ್ರಸಾದ ಕೊಡುವುದು ಎಂದೆಲ್ಲ ಕೈಕೆಲಸಗಳಿಗೆ ಕರಿಗಿರಿ ಸದಾ ಮುಂದು. ಪೂಜೆ ಎಲ್ಲ ಮುಗಿದ ಮೇಲೆ ಎಲ್ಲರೂ ಕೆಳಗಿಳಿದು ಬರುವುದಕ್ಕೆ ಕರಿಗಿರಿಯದೇ ಮುಂದಾಳತ್ವ. ಇಷ್ಟೆಲ್ಲ ಮಾಡಿದಾಗ ಜನರು ಬಾಯಿಬಿಟ್ಟು ಅವನನ್ನು ಹೊಗಳುತ್ತಿದ್ದರು "ನಮ್ಮೊಂದಿಗೆ ನೀನು ಒಳ್ಳೆ ಘಟೋತ್ಕಚ ಇದ್ದ ಹಾಗೆ ಇದ್ಯಪ್ಪ. ಬಹಳ ಸಂತೋಷ" ಅಂತ. ಇವನಿಗೆ ಅದೇ ಅಳಲು "ಭೀಮ ಇದ್ದ ಹಾಗೆ ಇದ್ದಿ" ಎಂದರೆ ಎನಾಗುತ್ತಿತ್ತು ಅಂತ.
 
ಗುಡಿಯ ಕೆಲಸಗಳೆಲ್ಲ ಭಾನುವಾರ ಮತ್ತು ರಜಾ ದಿನಗಳು ಮತ್ತು ವಿಶೇಷ ದಿನಗಳಲ್ಲಿ ಮಾತ್ರ.. ಯಾತ್ರಾಸ್ಥಳಗಳಿಗೆ ಹೆಚ್ಚು ಜನ ಬರುವುದೂ ಅಂತಹ ದಿನಗಳೆ ತಾನೆ.  ಮಿಕ್ಕ ದಿನಗಳು ಓದಿಗೇ ಮೀಸಲು. ಕಾಲೇಜೂ ಮುಗಿದು ಕೆಲಸಕ್ಕೂ ಸೇರಿದ್ದ. ಹಳೆಯ ನೀರು ಕೊಚ್ಚಿ ಹೋಗಿತ್ತು, ಹೊಸ ನೀರು ಬಂದಾಗಿತ್ತು. ಸೌಲಭ್ಯಗಳು ಹೆಚ್ಚಿ, ಬೆಟ್ಟ ಹತ್ತಿ ಹೋಗುವ ಜನರಿಗೆ ಈತನ ಅವಶ್ಯಕತೆ ಇರಲಿಲ್ಲ. ಕಾಲ ಬದಲಾಗಿತ್ತು. ಕೀಳರಿಮೆಯಿಂದಾಗಿ ಸದಾ ಹಿಂದೆಯೇ ಇದ್ದು ಸಹಾಯ ಮಾಡುತ್ತಿದ್ದವ ಹಿಂದೆಯೇ ಉಳಿದಿದ್ದ. ತನಗಿನ್ನು ಅಲ್ಲಿ ಬೆಲೆಯಿಲ್ಲ ಎಂದರಿತು ದೇವಸ್ಥಾನಕ್ಕೆ ಅಪರೂಪವಾದ. ಹಾಗೆಂದು, ಯಾರೂ ಮುಂದೆ ಬಂದು "ಯಾಕೆ?" ಎಂದು ಕೇಳಲಿಲ್ಲ.
 
ಹರೆಯದ ವಯಸ್ಸಿನಲ್ಲಿ ಕಾಲೇಜಿನಲ್ಲಿ ಮತ್ತು ದೇವಸ್ಥಾನದಲ್ಲಿ ಹದಿನಾರರ ಹೆಂಗಳನ್ನು ಕಂಡಾಗ ಮನದಲ್ಲಿ ಏನೇನೋ ಆಸೆಗಳು ಗರಿಗೆದರುತ್ತಿತ್ತು. ಕದ್ದು ನೋಡುವಾಗ ನೋಟಗಳು ಸೇರಿದಾಗ ಸಿಕ್ಕ ಪ್ರತಿಕ್ರಿಯೆ ಮಾತ್ರ ಸಹಿಸಲು ಅಸಹನೀಯವಾಗುತ್ತಿತ್ತು. ಹಲವು ಬಾರಿ ಹಲವರಿಂದ ಇದೇ ರೀತಿಯ ಪ್ರತಿಕ್ರಿಯೆ ದೊರೆತಾಗ ಆ ಆಸೆಯೂ ಸತ್ತಿತು.
 
ಓದೂ ಮುಗಿಯಿತು, ಕೆಲಸವೂ ಆಯಿತು, ಮನೆಗೆ ಸೊಸೆ ತರಬೇಕು ಎಂದು ಅಪ್ಪ-ಅಮ್ಮ ಬಯಸಿದರೂ, ಇವನಿಗೆ ಹೆಣ್ಣು ಕೊಡಲು ಮುಂದೆ ಬರುವವರು ಯಾರೂ ಇರಲಿಲ್ಲ. ಇವನ ಒಳ್ಳೆಯ ಗುಣವನ್ನು ಜನ ಮೆಚ್ಚಿದರೂ ಹೆಣ್ಣು ಕೊಡಲು ಮುಂದೆ ಬರುವಷ್ಟು ಆಸ್ತೆ ಯಾರಿಗೂ ಇರಲಿಲ್ಲ. ಬಿಳುಪಿನ ಹುಡುಗಿಗೆ ಬಿಳಿ ಬಣ್ಣದ ಹುಡುಗ ಬೇಕು. ಕಪ್ಪು ಬಣ್ಣದ ಹುಡುಗಿಗೂ ಬಿಳೀ ಬಣ್ಣದ ಹುಡುಗನೇ ಬೇಕು. ಅದಕ್ಕೆಂದು ವರದಕ್ಷಿಣೆ ಜಾಸ್ತಿ ಕೊಡುವ ಭೂಪರು ಇದ್ದರು. 
 
ಕಾಲ ಯಾರಿಗೆ ಕಾಯುತ್ತೆ? 
 
ಅಪ್ಪ, ಅಮ್ಮ ಒಬ್ಬರ ಹಿಂದೆ ಮತ್ತೊಬ್ಬರು ಹರಿಯ ಪಾದ ಸೇರಿಕೊಂಡರು. ಅವರೇ ಇಲ್ಲವಾದ ಮೇಲೆ ಇವನು ಇನ್ನೂ ಒಂಟಿಯಾದ. ಪಿತ್ರಾರ್ಜಿತ ಆಸ್ತಿಯಾದ ಮನೆ ಬಿಟ್ಟು ಬೇರೆಡೆ ಹೋಗಲು ಮನಸ್ಸೂ ಇರಲಿಲ್ಲ. ತನ್ನ ಓರಗೆಯವರಿಗೆಲ್ಲ ಮದುವೆಯೂ ಆಯಿತು, ಮಕ್ಕಳೂ ಆದವೂ. ಕರಿಗಿರಿರಾಯ ಆ ಮಕ್ಕಳಿಗೆ ’ಚಿಕ್ಕಪ್ಪ’, ’ದೊಡ್ಡಪ್ಪ’, ’ಮಾವ’ ಅಂತೆಲ್ಲ ಅವತಾರ ತಾಳಿದ. ಊಟ ಮಾಡದೆ ರಚ್ಚೆ ಹಿಡಿದ ಮಕ್ಕಳಿಗೆ ಭಯ ಹುಟ್ಟಿಸಲು ’ಕಪ್ಪಣ್ಣ’ನೂ ಆಗಬೇಕಾಯ್ತು. ಅವನು ಯಾವ ಮಕ್ಕಳನ್ನು ಹೆದರಿಸದೇ ಇದ್ದರೂ, ಸಿಡುಕದೇ ಇದ್ದರೂ, ತಮ್ಮ ಕೆಲಸ ಸಲೀಸಾಗಲು ಅವನ ಬಗ್ಗೆ ಸುಖಾಸುಮ್ಮನೆ ಭಯ ಹುಟ್ಟಿಸಿದ್ದರು ಮಕ್ಕಳ ತಾಯಂದಿರು. 
 
ಉಂಡ್ಯಾ, ಉಟ್ಯಾ ಎಂದು ಕೇಳುವವರಿಲ್ಲದೆ, ಒಂಟಿ ಹಕ್ಕಿಯಾಗೇ ದಿನ ನೂಕಿದ. ಮೂರೆಳೆಗೆ ಅತಿ ದೊಡ್ಡವನಾಗಿ, ಆರು-ಎಳೆ ಜನಿವಾರ ಹೊಂದದೆ ಇದ್ದುದರಿಂದ ಹಲವಾರು ಊಟಗಳಿಗೆ ಇವನು ಅರ್ಹನಾಗಿರಲಿಲ್ಲ. ಎಲ್ಲ ಅವರು ಪಡೆದುಕೊಂಡು ಬಂದದ್ದು ಅಲ್ಲವೇ? ಹಾಗಾಗಿ, ಬೇಕಿದ್ದಾಗ ತಿನ್ನುವುದು, ಬೇಡದಿದ್ದಾಗ ಸುಮ್ಮನಿರುವುದು, ಕೆಲಸ ಕಾರ್ಯ ಓಡಾಟ ಎಂದೆಲ್ಲ ಆಗಿ ಕಾಯಿಲೆಯೂ ಅಪ್ಪಿಕೊಂಡಿತ್ತು. ಅಜಾನುಬಾಹು ದೇಹ ಕಾಯಿಲೆಗಳಿಗೆ ಶರಣಾಗ ಹತ್ತಿತ್ತು. ಪಿತ್ರಾರ್ಜಿತ ... ಬೇಡ ಅನ್ನಲು ಸಾಧ್ಯವೇ?
 
ಸಕ್ಕರೆ ಖಾಯಿಲೆಯಿಂದಾಗಿ ಗಿರಿಯ ತೂಕದ ದೇಹ ಕೊಂಚ ಕೊಂಚವೇ ಕರಗತೊಡಗಿತ್ತು ... ವಯಸ್ಸಾದಂತೆ, ತಲೆಗೂದಲು ಬಣ್ಣ ಕಳೆದುಕೊಳ್ಳುತ್ತಿತ್ತು, ಸಣ್ಣಗೆ ಚರ್ಮವೂ ಸುಕ್ಕುಗಟ್ಟಲು ಶುರುವಾಗಿತ್ತು. ಒಮ್ಮೆ ಹೀಗೇ ಯಾರದೋ ಮದುವೆ ಹೋಗಲು ಸಿದ್ದವಾದ ಕರಿಗಿರಿರಾಯರು ಶಲ್ಯವನ್ನು ಹೆಗಲಿಗೆ ಏರಿಸಿ ಒಮ್ಮೆ ಕನ್ನಡಿಯಲ್ಲಿ ಸರಿಯಾಗಿದೆಯೇ ಎಂದು ನೋಡಲು ನಿಂತವರು ಹಾಗೇ ನಿಂತುಬಿಟ್ಟರು. 
 
ವಯಸ್ಸಾದಂತೆ ಮನುಷ್ಯ ಕುಳ್ಳಗಾಗುತ್ತಾನಂತೆ ... ಅಂದರೆ ಬೆನ್ನು ಬಾಗಿ. ಬಿಲ್ಲಾಗಿ, ಕುಳ್ಳಾಗುತ್ತಾನೆ ಎಂದು ... 
 
ಜೊತೆಗೆ, ತಮ್ಮಲ್ಲಿ ಮನೆಮಾಡಿಕೊಂಡಿದ್ದ ಕಾಯಿಲೆ ತನ್ನ ಪ್ರಭಾವ ಬೀರಿತ್ತು. ಮೈಯಲ್ಲಿ ರಕ್ತ ಹೀನತೆಯಿಂದಾಗಿ ಚರ್ಮ ನಿಧಾನವಾಗಿ ಬಿಳಿಚಿಕೊಳ್ಳುತ್ತಿತ್ತು. ತಾವು ಈಗ ’ಕರಿಯ’ರಲ್ಲ ಎಂಬ ಸಮಾಧಾನ ಮುಖದ ಮೇಲೆ ಹಾದು ಹೋಗಿತ್ತು. ಏನು ಪ್ರಯೋಜನ? ಇಷ್ಟು ವಯಸ್ಸು ಕಳೆದು ಈಗ ಬೆಳ್ಳಗಾಗಿ ಸಾಧಿಸೋದೇನಿದೆ? 
 
ಹಾಗೆ ಕುರ್ಚಿ ಎಳೆದುಕೊಂಡು ಕನ್ನಡಿಯನ್ನೇ ನೋಡುತ್ತ ಕುಳಿತರು ... ಅಪ್ಪ-ಅಮ್ಮ ಇದ್ದಾಗಲೂ ತಮ್ಮ ಕೋಣೆಯಲ್ಲಿದ್ದ ಏಕ ಮಾತ್ರ ಸ್ನೇಹಿತ ಈ ಕನ್ನಡಿ ... ವಿಶಿಷ್ಟ ಸ್ನೇಹಿತ ... ಇದ್ದುದನ್ನು ಇದ್ದಂತೇ ಹೇಳುವಾತ ... ದೇಹವನ್ನು ಮುಟ್ಟದೆ ಮನವನ್ನು ಅಪ್ಪಿಕೊಂಡು ಸಂತೈಸುವಾತ ...
 
ಕರಿ ತೊಗಲಿನ ಹಿಂದೆ, ಬಿಳಿಯ ಮೂಳೆ ಹಂದರದ ನಡುವೆ, ಕೆಂಪು ರಕ್ತವನ್ನು ಶೋಧಿಸುವ ಮುಷ್ಟಿಯಷ್ಟೇ ಚಿಕ್ಕದಾದ ವಿಶಾಲ ಹೃದಯಕ್ಕೆ ಯಾರೂ ಬೆಲೆಕೊಟ್ಟಿರಲಿಲ್ಲ. ಆ ಹೃದಯವನ್ನು ನೋಯಿಸಿದವರೇ ಹೆಚ್ಚು. ವನ್ಯ ಮೃಗಗಳನ್ನು ಕೊಲ್ಲಬಾರದೆಂದು ಕಾನೂನು ಇದೆ, ಮರಗಳನ್ನು ಕಡಿಯಬಾರದೆಂದು ಕಾನೂನು ಇದೆ, ಭ್ರೂಣ ಹತ್ಯೆ ಮಾಡಬಾರದು ಎಂದು ಕಾನೂನು ಇದೆ. ಎಲ್ಲ ರೀತ್ಯಾ ಕಾನೂನು ಇದ್ದರೂ ಇಲ್ಲದ ತಪ್ಪಿಗೆ ಮನ ನೋಯಿಸಕೂಡದು ಎಂದೇಕೋ ಕಾನೂನೇ ಇಲ್ಲ ...
 
ಇದರಲ್ಲಿ ನೋಯಿಸಿದವರ ತಪ್ಪು ಎಷ್ಟು? ಗೊತ್ತಿಲ್ಲ. ಏಕೆಂದರೆ, ನೋಯಿಸಿದವರಿಗೆ ತಾವು ನೋಯಿಸಿದ್ದೇವೆ ಎಂಬ ಅರಿವೇ ಇಲ್ಲವೇ? ಇದು ಅರಿವಿಲ್ಲದೆ ನೆಡೆದ ಅಪರಾಧ. ನೊಂದ ಹೃದಯದ ಬೇಗೆಯನ್ನು ಅರ್ಥೈಸಿಕೊಳ್ಳಲು ಪರಕಾಯ ಪ್ರವೇಶ ಮಾಡಿದರೆ ಮಾತ್ರ ಸಾಧ್ಯ. ಅಂತಹ ಪರಕಾಯ ಪ್ರವೇಶ ಕೇವಲ ಒಬ್ಬರಿಂದ ಮಾತ್ರ ಸಾಧ್ಯ ... ಒಂಬತ್ತು ತಿಂಗಳ ಕಾಲ ತನ್ನ ದೇಹದಲ್ಲಿ ಮಗುವನ್ನು ಹೊತ್ತವಳಿಗೆ ಮಾತ್ರ, ತನ್ನ ಕಂದಲ್ಲಿ ಪರಕಾಯ ಪ್ರವೇಶ ಮಾಡಿ ಹೊಕ್ಕು ನೋಡಲು ಸಾಧ್ಯ !!  ಈಗ ಅವಳೂ ಇಲ್ಲವಲ್ಲ !!!
 
ಹೀಗೇ ಒಂದು ದಿನ, ಇರುಳು ಕಳೆದು ಹಗಲು ಮೂಡಿದ ಒಂದು ಹುಣ್ಣಿಮೆಯ ಭಾನುವಾರ, ಕರಿಗಿರಾಯರೂ ಕಣ್ಣು ಮುಚ್ಚಿದರು. ಸಾವಿನ ಮನೆಯಲ್ಲಿ ಎಲ್ಲರ ಕಣ್ಣಿಗೂ ಕರಿಗಿರಿರಾಯರು ಬೆಳ್ಳಗೆ ಶೋಭಿಸುತ್ತಿದ್ದರು. ಅದನ್ನು ತಮ್ಮ ಬಾಯಲ್ಲಿ ಆಡಿಯೂ ತೋರಿದರು ಹಲವರು. 
 
ಇಡೀ ಜೀವನ ಕರಿಯ’ರಾಗೇ ಉಳಿದ ಕರಿಗಿರಿರಾಯರ ಆತ್ಮಕ್ಕೆ ಶಾಂತಿ ದೊರಕಿತ್ತು. ಕರಿಗಿರಿ ಕ್ಷೇತ್ರಕ್ಕೆ ಚಿಕ್ಕದೇವರಾಯರ ಹೆಸರಿನಿಂದ ’ಕರಿ’ ಕಳೆದುಕೊಂಡು ದೇವರಾಯನದುರ್ಗ ಆಯ್ತು ... ಹೆಸರು ಬದಲಾದಾಗ ಬೆಟ್ಟವಿನ್ನೂ ಬದುಕಿತ್ತು, ಬದುಕಿದೆ. ಆದರೆ ನಮ್ಮ ಕರಿಗಿರಿರಾಯರಿಗೆ ಆ ಅದೃಷ್ಟ ಇರಲಿಲ್ಲ. 
 
ಅಮಾವಾಸ್ಯೆ-ಹುಣ್ಣಿಮೆ ನಡುವೆ, ಕರಿ ಕಳೆದುಕೊಂಡು ಬಿಳಿ ತಗಲಿಸಿಕೊಳ್ಳುವ ಹೊತ್ತಿಗೆ ಹರಿ ಕರೆದಿದ್ದಾಗಿತ್ತು.
 

Comments

Submitted by kavinagaraj Mon, 10/08/2012 - 09:45

ಭಲ್ಲೆಯವರೇ, ನಿಮ್ಮ ಮಾಮೂಲು ಹಾಸ್ಯಬರಹಗಳಿಗೆ ಭಿನ್ನವಾದ ಈ ಬರಹ ಕಣ್ಣು ತೇವಗೊಳಿಸುತ್ತದೆ, ಚಿಂತಿಸುವಂತೆ ಮಾಡುತ್ತದೆ.
Submitted by sathishnasa Mon, 10/08/2012 - 12:58

ಹಾಸ್ಯದೊಂದಿಗೆ " ನೋವು " ತುಂಬಿರುವ ಕಥೆ ವಿಬಿನ್ನವಾಗಿದೆ ಹಾಗೆ ಮನಸ್ಸಿಗೆ " ಮುಟ್ಟು " ತ್ತದೆ ಭಲ್ಲೆಯವರೆ .....ಸತೀಶ್
Submitted by partha1059 Mon, 10/08/2012 - 14:42

. ಶ್ರೀನಾಥ‌ ಬಲ್ಲೆಯವರೆ ತುಮಕೂರಿನಲ್ಲಿ ಚಿಕ್ಕಪೇಟೆಯಲ್ಲಿ ಕರಿಗಿರಿಬಟ್ಟರು ಎ0ಬುವರು ಇದ್ದರು ಅನ್ನುವದ0ತು ದಿಟ‌. ಆದರೆ ನಿಮ್ಮದು ಕಲ್ಪನೆಯೊ ಅಥವ‌ ನಿಜ‌ ಘಟನೆಯೊ ಗೊತ್ತಿಲ್ಲ. ಮತ್ತು ನಾನು ಕೇಳಿದ್ದ ಕರಿಗಿರಿಬಟ್ಟರ‌ ವಿವರಗಳು ಸರಿಯಾಗಿ ತಿಳಿದಿಲ್ಲ ಇಲ್ಲಿ ದೇವರಾಯನ‌ ದುರ್ಗದ‌ ಚಿತ್ರ ಸೇರಿಸೋಣ‌ ಎ0ದರೆ ಮೊದಲಿನ0ತೆ ಆಗಲ್ಲ
Submitted by bhalle Mon, 10/08/2012 - 19:18

In reply to by partha1059

ಪಾರ್ಥರಿಗೆ ನಮಸ್ಕಾರಗಳು ಇದು ನನ್ನ‌ ಕಲ್ಪನೆಯ‌ ಕೂಸೇ ಆದರೂ ಸತ್ಯಕ್ಕೆ ಹೆಚ್ಚು ದೂರವಿಲ್ಲ‌. ನಮ್ಮ‌ ಮನೆದೇವರು ದೇವರಾಯನದುರ್ಗದ‌ ನರಸಿ0ಹ‌ ... ಕಳೆದ‌ ಬಾರಿ ಅಲ್ಲಿಗೆ ಹೋಗಿದ್ದಾಗ‌ ಶೂಟಿಸಿದ‌ ಚಿತ್ರಗಳು ಇದ್ದವು ... ಹಾಕಲು ಕಷ್ಟವಾಯಿತು :‍(
Submitted by bhalle Mon, 10/08/2012 - 23:08

ಪ್ರತಿಕ್ರಿಯೆಯಲ್ಲಿ ತೊಡಕಾಗಿರುವುದಕ್ಕೆ ಕ್ಷಮೆ ಇರಲಿ ... ನಾ ಟೈಪಿಸಿದಾಗ ಚೆನ್ನಾಗೇ ಕಂಡ ಅಕ್ಷರಗಳು ಈಗ ನೋಡುವಾಗ ನುಂಗಿ ಹೋಗಿವೆ ... ಮೊದಲಿಗೆ ಪಾರ್ಥರ ಪ್ರತಿಕ್ರಿಯೆ ನೋಡಿದಾಗ ಅನ್ನಿಸಿತ್ತು ಆದರೆ ಈಗ ಅರ್ಥವಾಯ್ತು ... ’ಇದಕ್ಕೆ ಪ್ರತಿಕ್ರಿಯೆ ಸೇರಿಸಿ’ ಎಂಬುದರಡಿ ನೇರವಾಗಿಸಿ ಟೈಪಿಸಿದಾಗ ಹೀಗೆ ಆಗುತ್ತಿದೆ :-(