ಪುರೋಹಿತ ಪುಡಾರಿಗಳು ಮತ್ತು ದೇವರು

ಪುರೋಹಿತ ಪುಡಾರಿಗಳು ಮತ್ತು ದೇವರು

(ಈ ಲೇಖನ ಆರಂಭಿಸುವ ಮುನ್ನವೇ ಒಂದಿಷ್ಟು ಸಂಗತಿಗಳನ್ನು ಹೇಳಿಬಿಡುತ್ತೇನೆ. ಈ ಲೇಖನಕ್ಕೆ ಕೊಟ್ಟಿರುವ ಶಿರ್ಷಿಕೆ ಅಥವಾ ತಲೆ ಬರಹ ತೀರಾ ಕೆಟ್ಟದಾಗಿದೆ ಅಂತಾ ನಾನು ಬಲ್ಲೆ. ಹಾಗಂತ ಇದು ಯಾವುದೋ ಒಂದು ವರ್ಗವನ್ನು ಕುರಿತಾಗಿ ಅವಹೇಳನ ಮಾಡುವ ಅಥವಾ ಯಾವುದೋ ಒಂದು ವರ್ಗದ ದ್ವೇಷಿಯಾಗಿ ಏಕಮುಖಿ ಚಿಂತನೆಯೊಂದಿಗೆ ಬರೆಯುತ್ತಿರುವ ಬರಹವಲ್ಲ. ಪ್ರಸ್ತುತದ ಒಂದು ಸಮಸ್ಯೆಯೊಂದನ್ನು ಕೈಗೆತ್ತಿಕೊಂಡು ಅದರ ಎಡ ಬಲಗಳ ಸುತ್ತ ಅವಲೋಕಿಸಲು ಹೊರಟ್ಟಿದ್ದೇನೆ . ಇಲ್ಲಿ ಪರ ವಿರೋದಗಳ ದ್ವಂದ ಮಿಶ್ರಣದ ಎರಡು ಮಜಲುಗಳ ಅವಲೋಕನ ಇದೆ. ಆ ನಿಲುವು ನನ್ನೊಳಗಿನ ಗೊಂದಲ ಅಂತಾನೂ ನೀವು ಭಾವಿಸಬಹುದು. ಇಲ್ಲಿ ಮುಕ್ತ ಚರ್ಚೆಗೆ ಅವಕಾಶವಿದೆ. ಇಲ್ಲಿನ ಬರಹಕ್ಕಿಂತ ಭಿನ್ನವಾದೊಂದು ಆಲೋಚನೆ ನಿಮ್ಮಿಂದ ಹರಿದು ಬಂದರೆ ಖಂಡಿತಾ ಅದನ್ನು ನಾನು ಸ್ವೀಕರಿಸುತ್ತೇನೆ.)

ಅದ್ಯಾಕೋ ಬೆಂಗಳೂರೆಂಬ ಈ ಹಾಳು ಕಾಂಕ್ರೀಟು ಜಂಗಲ್ಲು ಸೇರಿದ ಮೇಲೆ ನನಗಂತೂ ದೇವರಿಗೆ ಕೈ ಮುಗಿಯಬೇಕು, ದೇವಸ್ಥಾನಕ್ಕೆ ಎಂಟ್ರಿಕೊಡಬೇಕು ಅಂತಾನೆ ಅನ್ನಿಸ್ತಾ ಇಲ್ಲ. ಮನೆಯಲ್ಲಿದ್ದರೆ ಕನಿಷ್ಟಪಕ್ಷ ಬೆಳಿಗ್ಗೆ ಎದ್ದವನಾದರೂ ದೇವರಿಗೆ ಕೈಮುಗಿಯುತ್ತಿದ್ದೆ. ಆದರೆ ಬೆಂಗಳೂರೆಂಬ ಮಹಾನಗರಿಯ ಒಂದಿಷ್ಟು ಪುಡಾರಿ ಪುರೋಹಿತರನ್ನು ಕಂಡ ಮೇಲೆ ಆ ಸಂಪ್ರದಾಯವೂ ನನ್ನಿಂದ ದೂರವಾಗಿದೆ. ನಿನ್ನಿಂದ ದೂರವಾಗಿರುವ ಸಂಪ್ರದಾಯವೊಂದಕ್ಕೆ ಬಡಪಾಯಿ ಪುರೋಹಿತನ್ನ ಯಾಕೆ ಬಲಿಪಶು ಮಾಡ್ತಿಯಾ ಅಂತಾ ಗೆಳೆಯನೊಬ್ಬ ಕೇಳಿದ್ದ. ಅಲ್ಲೋ ಆ ದೇವರಿಗೆ ತನ್ನ ಬಳಿಯಿರುವ ಅರ್ಚಕನೇ ದೇವರ ಹೆಸರುಹೇಳಿಕೊಂಡು ಲಫಡಾ ಮಾಡಲು ಹೊರಟಿರುವುದು ಕಣ್ಣೆದುರಿಗೆ ಕಾಣುತ್ತಿದ್ದರು ಅದನ್ನು ತಡೆಗಟ್ಟಲು ಸಾಧ್ಯವಿಲ್ಲ ಅಂತಾದರೆ ಅವನೆಂತಹ ದೇವರೋ! ಅಂತಾ ತಿರುಗಿ ಉತ್ತರ ನೀಡಿದ್ದೆ!

ಹೌದು ಇವತ್ತು ದೇವಸ್ಥಾನವೆಂಬುದು ಹಣಗಳಿಕೆಯ ಕೇಂದ್ರವಾಗಿದೆ! ಬೆಂಗಳುರಿನಲ್ಲಿ ಕೆಲ ಪುರೋಹಿತ ಪುಡಾರಿಗಳು ದೇವರ ಹೆಸರು ಹೇಳಿಕೊಂಡು, ಇಲ್ಲಸಲ್ಲದ ವಿಚಿತ್ರ ಕಥೆಗಳನ್ನೆಲ್ಲಾ ಹೇಳಿಕೊಂಡು ಅದ್ಯಾವ ಪರಿ ಹಣ ಮಾಡ್ತಾ ಇದ್ದಾರೆ ಅಂದ್ರೆ? ಅದನ್ನು ನೆನಸಿಕೊಂಡ್ರೇನೆ ಭಯವಾಗತ್ತೆ. ಇವತ್ತು ಪೂಜೆಗಳಿಗೂ ಕಾಂಟ್ರಾಕ್ಟ್ ಪದ್ದತಿ ತಂದಿದ್ದಾರೆ! ಅಂದರೆ ಯಾವುದೋ ಒಂದು ಕಾರ್ಯಕ್ರಮವನ್ನು ಇಡಿ ಇಡಿಯಾಗಿ ಕಂಟ್ರಾಕ್ಟ್ ತೆಗೆದುಕೋಳ್ಳೋದು! ಬಿಲ್ಡ್‍ರ್ಸ ಎಲ್ಲಾ ಬಿಲ್ಡಿಂಗ್ ಕಾಂಟ್ರಾಕ್ಟ್ ಹಿಡಿತಾರಲ್ಲ ಅಂತಹದ್ದೇ ಅದು! ಇನ್ನೂ ಅವರು ಬರೆದುಕೊಡುವ ಪೂಜಾ ಸಾಮಾಗ್ರಿಗಳ ಪಟ್ಟಿಯೋ! ಪುಜಾರಿ ಮನೆಯಲ್ಲಿ ಖಾಲಿಯಾದ ಬೇಳೆಕಾಳುಗಳೆಲ್ಲಾ ಆ ಪಟ್ಟಿಯಲ್ಲಿ ಇರತ್ತೆ ಅಂದ್ರೆ ತಪ್ಪಾಗಲಾರದೇನೋ! ದೇವರು ಇದ್ದಾನೋ, ಇಲ್ಲವೋ ಅನ್ನೋದು ಸೆಕೆಂಡರಿ ವಿಚಾರ. ಆದ್ರೆ ಆತನ್ನನ್ನು ನಂಬಿಕೊಂಡು ಆತನ ಆರಾಧನೆಗೆ ನಾವು ಅಳವಡಿಸಿಕೊಂಡ ಪೂಜಾವಿಧಾನಗಳಿದೆಯಲ್ಲಾ ಅವುಗಳ ಹಿಂದಿರುವ ಕಲ್ಪನೆ ನಿಜಕ್ಕೂ ಅದ್ಬುತ. ನಾನು ಒಂದ್ಸಾರಿ ಹೀಗೆ ಮೂರ್ತಿರಾಯರ “ದೇವರು” ಅನ್ನೋ ಪುಸ್ತಕ ಓದಿಕೊಂಡು ನಂತರ ಹಿರಿಯ ಸಂಸ್ಕೃತ ವಿದ್ವಾಂಸ ಹತ್ತಿರ ಸಾರ್ ನಂಗೆ ಆ ಪುಸ್ತಕದ ಕುರಿತಾಗಿ ನನ್ನಲೇ ಒಂದಿಷ್ಟು ಅನುಮಾನಗಳಿವೆ ಅಂತಾ ಕೇಳಿದೆ. ಅದ್ಕೆ ಅವರು ಕೊಟ್ಟಿದ್ದು ಒಂದೇ ಸಾಲಿನ ಉತ್ತರ. “ನೀನು ದೇವರ ಕುರಿತಾಗಿ ಎಷ್ಟು ಪುಸ್ತಕ ಓದಿದ್ದೀಯಪ್ಪಾ” ಅಂತಾ. ಅಷ್ಟೊತ್ತಿಗೆ ನಂಗೆ ನನ್ನ ಬಾಲಿಶತನದ ಅರಿವಾಗಿತ್ತು.

ಮೊನ್ನೆ ಕಣ್ಣನ್ ಮಾಮ ನಮ್ಮ ಆಚರಣೆಗಳ ಹಿಂದಿರುವ ಸೂಕ್ಷ್ಮಗಳ ಕುರಿತಾಗಿ, ಸಂಸ್ಕೃತ ಮಂತ್ರಗಳ ಹಿಂದಿದ್ದ ಸಾಮಾಜಿಕ, ಪ್ರಾಕೃತಿಕ ಕಲ್ಪನೆಗಳ ಕುರಿತಾಗಿ ಪುಟ್ಟದಾಗಿ ಹೇಳಿದರು. ನಾವೇಕೆ ಸರ್ವಾಂತರಯಾಮಿ ಅನ್ನೋ ದೇವರನ್ನು ಹಲವು ಬಗೆಯಲ್ಲಿ ಆರಾಧಿಸುತ್ತೇವೆ ಅನ್ನೋದಕ್ಕೆ ಅವರು ರುದ್ರ ಮತ್ತು ಚಮಕದ ನಡುವಿನ ಪ್ರಾತಕ್ಷಿತೆಯೊಂದನ್ನು ನೀಡಿದರು. ಆವಾಗಲೇ ನನಗೆ ನಮ್ಮ ದೇವರ ಆರಾಧನೆಗಳು ಪೂಜೆಗಳು ಒಂದು ಕಡೆ ಮುರ್ಖತನ ಅಂತಾ ಅನ್ನಿಸಿದರು ಅದರ ಅಂತಾರಾಳದಲ್ಲಿ ಬೇರೆಯೇ ಆದ ಅರ್ಥವಿದೆ ಅನ್ನಿಸಿದ್ದು. ಆ ಕುರಿತಾಗಿ ಮಾತಾಡಲು ನನ್ನ ಬಳಿ ಹೆಚ್ಚಿನ ಅಧ್ಯಯನವಿಲ್ಲದೇ ಇರುವುದರಿಂದ ಅದನ್ನು ಇಲ್ಲಿ ಚರ್ಚಿಸುವುದಿಲ್ಲ. ಆ ಕುರಿತಾಗಿ ನನ್ನ ನಿಲುವು ಇಷ್ಟೆ ನಮ್ಮ ಪ್ರತಿಯೊಂದು ಆಚರಣೆ ಹಿಂದೆಯೂ ಒಂದೊಂದು ನಮ್ಮ ಜೀವನಕ್ಕೆ ತೀರಾ ಹತ್ತಿರವಾದ ಪರಿಕಲ್ಪನೆ ಇದೆ. ಅದನ್ನು ಅಧ್ಯಯನಹೀನ ನಮ್ಮಂತಹವರಿಂದ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವು ಅವುಗಳೆಲ್ಲವು ಮೂಢ ಅನ್ನುತ್ತಿದ್ದೇವೆ!(ಎಲ್ಲ ಅಂದರೆ ಎಲ್ಲ ಆಚರಣೆಗಳು ಸರಿ ಅನ್ನುತ್ತಾ ಇಲ್ಲ. ಹೆಚ್ಚಿನವು ಸರಿಯಿವೆ. ಆ ಕುರಿತು ವಿಶೇಷ ಅಧ್ಯಯನ ನಡೆಸಿದ ಹಲವು ಮಂದಿ ನಮ್ಮ ನಡುವೆಯೇ ಇದ್ದಾರೆ)
ಅಂತಹದೊಂದು ಅದ್ಬುತ ಪರಿಕಲ್ಪನೆಯ ದೇವರನ್ನು, ಪೂಜೆಗಳನ್ನು ನಮ್ಮ ಪುರೋಹಿತಶಾಹಿಗಳು ಇಂದು ತೀರಾ ಹದಗೆಡಿಸುತ್ತಿದ್ದಾರೆ. ದೇವರು ಬ್ರಾಹ್ಮಣರ ಸ್ವತ್ತು, ಸಂಸ್ಕೃತ ಬ್ರಾಹ್ಮಣರ ಭಾಷೆ ಎಂಬಂತೆ ಸಮಾಜದ ಬ್ರಾಹ್ಮಣವರ್ಗ ಹಲವು ಶತಮಾನಗಳ ಕಾಲದಿಂದಲೂ ವರ್ತಿಸಿಕೊಂಡು ಬಂದಿದೆ ಎಂಬ ಗಂಭೀರ ಆರೋಪ ಬ್ರಾಹ್ಮಣರ ಮೇಲಿದೆ! ತಲತಲಾಂತರದಿಂದಲೂ ಜಾತಿ ಅನ್ನೋದು ಬಹುದೊಡ್ಡ ಚರ್ಚೆಯ ವಿಷಯವಾಗಿದೆ! ಆ ವಿಚಾರ ನನ್ನ ಈ ವ್ಯಾಪ್ತಿಯೊಳಗೆ ಬಾರದೇ ಇರುವುದರಿಂದ ಅದನ್ನು ನಾನಿಲ್ಲಿ ಚರ್ಚಿಸಲಾರೆ.

ಹಲವರು ಅದೆಂತೆಂತಹದ್ದೋ ಹಾದರ ಮಾಡಿ ದುಡ್ಡು ಮಾಡುತ್ತಾರೆ ಅಂತಹದ್ದರಲ್ಲಿ ಬಡ ಬ್ರಾಹ್ಮಣ ದೇವರ ಹೆಸರು ಹೇಳಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಅನ್ನಿಸತ್ತೆ ಒಂದೊಂದ್ಸಾರಿ. ಆದ್ರೆ ಹಾಗೇ ದುಡ್ಡು ಮಾಡಲು ದೇವರಂತಹ ಪಾವಿತ್ರ್ಯಕಲ್ಪನೆಯನ್ನು ಬಲಿಕೊಡೋದು ಸರಿಯಲ್ಲ ಅಂತಾನೂ ಇನ್ನೊಂದು ಕಡೆ ಅನ್ನಿಸತ್ತೆ ನಂಗೆ.
ಗೆಳೆಯ ಶ್ರೀಕಾಂತ್ ಮೊನ್ನೆ ಸಿಕ್ಕಿದ್ದ. ಅವ ಇಲ್ಲೆ ಬೆಂಗಳೂರಿನಲ್ಲಿ ಪುರೋಹಿತನಂತೆ. ಇವತ್ತು ಅಪ್ಪಾ ಅಮ್ಮನಿಗೆ ಮೂರು ಹೊತ್ತು ಊಟ ಹಾಕ್ತಾ ಇದೀನಿ ಅನ್ನೋದೆ ನನ್ನ ಸಂತೋಷ ಮಾರಾಯ ಅಂತಿದ್ದ. ನಾನು ಹೈಸ್ಕೂಲ್ ಓದ್ತಾ ಇರೋವಾಗ ಇಕ್ಕೇರಿ ಪ್ರೌಡಶಾಲೆಯಲ್ಲಿ ನನ್ನ ಜೊತೆ ಓದಿದವನು ಆತ. ಅವನ ಕಷ್ಟ ನನಗೆ ಚೆನ್ನಾಗಿ ಗೊತ್ತು. ಅವ ಜಾತಿಯಿಂದ ಹವ್ಯಕ. ಅವನ ಅಪ್ಪಾ ಮೇಸ್ತ್ರಿ(ಗಾರೆ) ಕೆಲಸ ಮಾಡುತ್ತಿದ್ದರು. ಆವತ್ತು ಮಲೆನಾಡಿನಲ್ಲಿ ಹಳ್ಳಿಗಳಲ್ಲಿ ಗಾರೆ ಕೆಲಸ ಸಿಗುತ್ತಿದ್ದದ್ದು ಅಷ್ಟರಲ್ಲೇ ಇತ್ತು. ಸಿಕ್ಕರೂ ಕೈಗೆ ಬರುತ್ತಿದ್ದ ಸಂಬಳವೂ ಹಾಗೇ ಇತ್ತು. ಹಾಗಾಗಿ ಒಂದು ಹೊತ್ತು ಊಟಕ್ಕಿದ್ದರೆ ಮೂರು ಹೊತ್ತು ಊಟಕ್ಕಿಲ್ಲದ ಮನೆ ಗೆಳೆಯ ಶ್ರೀಕಾಂತ್‌ನದ್ದು. ಅದೂ ಅಲ್ಲದೇ ಅವರಪ್ಪನಿಗೆ ದುಡಿಯಲು ಆಗುತ್ತಿರಲಿಲ್ಲ. ಆದ್ರೂ ಹೊಟ್ಟೆಪಾಡಿಗಾಗಿ ದುಡಿಮೆ ಅನ್ನೋದು ಅವರಿಗೆ ಅನಿವಾರ್ಯವಾಗಿತ್ತು. ಅವನ್ನ ಕಂಡಗಲೆಲ್ಲಾ ನಂಗೆ ನೋವಾಗುತ್ತಿತ್ತು. ಅವನಿಗೆ ಸಹಾಯ ಮಾಡೋಣ ಅಂದ್ರೆ ನನ್ನಲ್ಲಿನ ಶ್ರ್‍ಈಮಂತಿಕೆಯೂ ಅಷ್ಟರಲ್ಲೇ ಇತ್ತು. ಅವ ಎಸ್ಸೆಸ್ಸೆಲ್ಸಿ ಮುಗಿಸಿ ಮನೆ ಬಿಟ್ಟ ಅದೇಗೋ ಮಂತ್ರ ಕಲಿತ ಬೆಂಗಳೂರಿಗೆ ಬಂದು ಪುರೋಹಿತ್ಯ ಆರಂಭಿಸಿದ. ಅಂತಹ ಗೆಳೆಯ ಅಪ್ಪಾ ಅಮ್ಮನಿಗೆ ಮೂರುಹೊತ್ತಿನ ಊಟ ಹಾಕುವಷ್ಟು ಶ್ರ್‍ಈಮಂತನಾಗಿದ್ದೇನೆ ಅಂದಾಗ ನನಗೆ ನಿಜಕ್ಕೂ ಸಂತಸವಾಯಿತು. ಹೌದು ಬೆಂಗಳೂರಿನ ಪುರೋಹಿತರನ್ನು ಕಂಡಾಗ ಮೈ ಉರಿಯತ್ತೆ ಆದ್ರೆ ಶ್ರೀಕಾಂತ್‌ನಂತಹ ಗೆಳೆಯರನ್ನು ಕಂಡಾಗ ಮಲೆನಾಡಿನ ಎಷ್ಟೋ ಜನರಿಗೆ ಅನ್ನಕೊಟ್ಟ ವೃತ್ತಿ ಅದು ಅಂತಾ ಸಂತಸವಾಗತ್ತೆ.

ಯಲ್ಲಾಪುರ, ಉತ್ತರಕನ್ನಡದ ಬಡತನ ನೋಡಿದರೆ ಸಾಗರದ ನಾವು ಎಷ್ಟೋ ವಾಸಿ ಅನ್ನಿಸತ್ತೆ. ಇವತ್ತಿಗೂ ತುತ್ತು ಕೂಳಿಗೆ ಗತಿಯಿಲ್ಲದ ಮಂದಿ ಆ ಭಾಗದಲ್ಲಿದ್ದಾರ್‍ಎ. ಜಾತಿಯಲ್ಲಿ ಬ್ರಾಹ್ಮಣ ಅನ್ನಿಸಿಕೊಂಡರೆ ಮುಗಿತು. ಅವ ಸಮಾಜದ ಲೆಕ್ಕದಲ್ಲಿ ಶ್ರೀಮಂತನೆ! ಒಂದು ಕಾಲದಲ್ಲಿ ಇತರೆ ವರ್ಗದವರ ಪಾಡು ಹೇಗಾಗಿತ್ತೋ ಅದೇ ಪಾಡು ಇವತ್ತು ಬ್ರಾಹ್ಮಣರದ್ದಾಗಿದೆ. ಬ್ರಾಹ್ಮಣರು ಅಂದ್ರೆ ಅದೆಂತದೋ ಮೂದಲಿಕೆ. ಶತಶತಮಾನಗಳ ಕಾಲ ಬ್ರಾಹ್ಮಣರು ಇತರೆ ಜನಾಂಗವನ್ನೂ ತುಳಿದರೂ ಅದಕ್ಕೆ ಪ್ರತಿಫಲ ಇವತ್ತು ಅನುಭವಿಸುತ್ತಿದ್ದಾರೆ ಅಂತಾ ಹೇಳೋದು ತುಂಬಾ ಸುಲಭ. ಯಾಕಂದರೆ ಹಾಗೇ ಹೇಳುವವರು ದಲಿತರ ನೋವನ್ನು ಕಂಡಿರುವುದಿಲ್ಲ. ಬಡ ಬ್ರಾಹ್ಮಣರ ನೋವನ್ನು ಕಂಡಿರುವುದಿಲ್ಲ! ಆ ಬಡತನದ ನೋವನ್ನು ತೀರಿಸಿಕೊಳ್ಳಲೆಂದೇ ಬ್ರಾಹ್ಮಣರು ತಮ್ಮ ಮೂಲ ಕಸುಬಾದ ಪುರೋಹಿತ್ಯವನ್ನು ಅರೆಸಿಕೊಂಡು ಬೆಂಗಳೂರಿಗೆ ಬರುತ್ತಿರುವುದು. ಹಳ್ಳಿಗಳ್ಳಲ್ಲಿ ಪುರೋಹಿತರಿಗೆ ಬೆಲೆಯಿಲ್ಲ. ಬೆಲೆಯಿದ್ದರೂ ಸಂಪಾದನೆ ತೀರಾ ಕಡಿಮೆ. ಓದಿ ದಡ ಸೇರಲು ಓದಬೇಕಾದ ಕಾಲದಲ್ಲಿ ಹಣವಿಲ್ಲ. ಪುಕ್ಕಟ್ಟೆ ಊಟ ಮಾಡಿಕೊಂಡು ಮಠದಗಳಲ್ಲಿ ಇದ್ದುಕೊಂಡು ಕಲಿಯಬಹುದಾದ ವಿದ್ಯೆಯೆಂದರೆ ಬ್ರಾಹ್ಮಣರ ಪಾಲಿಗೆ ಪೌರೋಹಿತ್ಯ ಹಾಗಾಗಿ ಬಡತನವಿದ್ದವರೆಲ್ಲಾ ಅದರತ್ತ ಲಗ್ಗೆ ಇಟ್ಟರು. ಒಳ್ಳೆ ಸಂಪಾದನೆ ಮಾಡಲೆಂದು ಬೆಂಗಳೂರಿಗೆ ಬಂದು ದುಡಿಮೆ ಶುರು ಹಚ್ಚಿಕೊಂಡರು ಅದರಲ್ಲಿ ತಪ್ಪೆನಿದೆ? ಪುರೋಹಿತ ದುಡ್ಡು ಮಾಡೋದು ವೇದಾಂತಿಗಳ, ಬರಗಾರರ ಕಣ್ಣು ಕುಕ್ಕಿಸತ್ತೆ. ಸಾಹಿತಿಗಳ ಬಾಯಿಗೆ ಆಹಾರವಾಗತ್ತೆ ಆದ್ರೆ ಇತರರು ಎಂತೆಂತಹದೋ ಹಾದರ ಮಾಡಿ ಹಣ ಸಂಪಾದಿಸುತ್ತಿದ್ದಾರಲ್ಲಾ? ಕೆಲ ಸಾಹಿತಿಗಳು ರಾಜಕಾರಣಿಗಳ ಸುತ್ತಾ ಸುತ್ತಾಡುತ್ತಿದ್ದಾರಲ್ಲಾ ಅವೆಲ್ಲಾ ತಪ್ಪಲ್ವಾ ಅಂದರೆ ನಮ್ಮಲ್ಲಿ ಉತ್ತರವಿಲ್ಲ.

ಹೌದು ಮಲೆನಾಡಿನಲ್ಲಿ ದಲಿತರ ಉದ್ದಾರ ಮಾಡಲೆಂದೇ ನಕ್ಸಲಿಸಂ ಹುಟ್ಟಿಕೊಂಡಿದೆ! ಇವತ್ತು ಶೃಂಗೇರಿ ಸುತ್ತಾ ಮುತ್ತಲಿನ ದಲಿತರೆಲ್ಲಾ ಮೂರು ಹೊತ್ತು ನೆಮ್ಮದಿಯ ಊಟ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ನಕ್ಸಲೀಯರೇ ಕಾರಣ(ಊಟ ಮಾಡುತ್ತಿದ್ದರೆ ಮಾತ್ರ!)ಊರಿಗೊಂದು ಬಾವಿಯಾಗಿದೆ, ರಸ್ತೆಯಾಗಿದೆ, ಶಾಲೆಯಾಗಿದೆ ಅಂದರೆ ಅದೆಲ್ಲಾ ನಕ್ಸಲೀಯರ ಶ್ರಮದ ಫಲ! ಇನ್ನೂ ದಲಿತ ಸಂಘರ್ಷ ಸಮಿತಿ, ದಲಿತ್ತೋದ್ದಾರಕ ಸಮಿತಿ.....ಹೀಗೆ ಹತ್ತಾರು ಸಂಸ್ಥೆಗಳು ದಲಿತರ ಒಳಿತಿಗಾಗಿ ದನಿ ಎತ್ತುತ್ತಿವೆ. ಅದೆಲ್ಲಕ್ಕಿಂತಾ ಮುಖ್ಯವಾಗಿ ಅನೇಕ ಸಾಹಿತಿಗಳು ದಲಿತರ ಪರ ಅನುಕಂಪದ ಮಾತಾಡುತ್ತಾ, ಕೃತಿ ರಚಿಸುತ್ತಾ ತಾವು ಗಳಿಸಿದ ಹಣದಲ್ಲಿ ಅವರಿಗೆ ಅರ್ಧ ನೀಡುತ್ತಾ ಇದ್ದಾರೆ! ಆದರೆ ಮಲೆನಾಡಿನ ಬಡ ಬ್ರಾಹ್ಮಣರ ಪರವಾಗಿ ಯಾರಿದ್ದಾರೆ. ದಲಿತರು ಬ್ರಾಹ್ಮಣರನ್ನು ನಿಂದಿಸುವುದಕ್ಕಿಂತಲೂ ಮಿಗಿಲಾಗಿ ಬ್ರಾಹ್ಮಣರೇ ಬ್ರಾಹ್ಮಣರನ್ನು ನಿಂದಿಸುತ್ತಾರೆ ಅದೆಂತದೋ ಒಂತರಹ ಜ್ಞಾನೋದಯವಾಗಿ!(ಬ್ರಾಹ್ಮಣರ ವಿರೋದಿ ಅಲೆ ತಪ್ಪು ಅಂತಾ ನಾನು ಇಲ್ಲಿ ಹೇಳುತ್ತಿಲ್ಲ. ದಲಿತ ಉದ್ದಾರ ಅನ್ನೋದು ಭಾಷಣಕ್ಕೆ ಮಾತ್ರ ಸೀಮಿತ. ಇವತ್ತಿಗೂ ಮಲೆನಾಡು ಭಾಗದಲ್ಲಿ ದಲಿತರು ಕಷ್ಟದ ಜೀವನ ನಡೆಸುತ್ತಿದ್ದಾರೆ. ದಲಿತರ ಹೆಸರು ಹೇಳಿಕೊಂಡು ಅವರ ಮೇಲೆ ಅನುಕಂಪ ತೋರುವ ನಾಟಕ ಮಾಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುವವರು ಗಿಟ್ಟಿಸಿಕೊಳ್ಳುತ್ತಲೇ ಇದ್ದಾರೆ. ಆ ಬೇಸರದ ನುಡಿಗಳು ಮೇಲಿನವು. ಬಡವನಾದವ ಬ್ರಾಹ್ಮಣನಾದರೂ ಅಷ್ಟೇ, ದಲಿತನಾದರೂ ಅಷ್ಟೇ ಅವನ ಪಾಲಿಗೆ ಬೆನ್ನೆಲ್ಲಾ ಹೊಟ್ಟೆಯೇ!)
ಹೀಗೆಲ್ಲಾ ಅವಲೋಕಿಸಿದಾಗ ಪುರೋಹಿತರು ಮಾಡುತ್ತಿರುವುದು ಸರಿ ಅನ್ನಿಸತ್ತಾದರೂ ಯಾರ್ಯಾರೋ ಎಂತೆತಹದ್ದೋ ಹಾದರ ಮಾಡುತ್ತಾರೆ ಅಂತಾ ದೇವರ ಹೆಸರಿನಲ್ಲು ಹಣಸುಲಿಗೆ ಮಾಡುವುದು ಸರಿಯಲ್ಲ. ದೇವರು ಭಾವದ ಒಂದು ಪ್ರತೀಕ ಹೊರತು ಮಾರಾಟದ ಸರಕಲ್ಲ. ಆದರೆ ಹೊಟ್ಟೆಗೆ ಹಿಟ್ಟಿಲ್ಲದ ಮೇಲೆ ಇನ್ನೆನೂ ಮಾಡೋದು ಅದು ಬಡಬ್ರಾಹ್ಮಣನಾಗಿ.....! ಅಂದರೆ ನನ್ನ ಮಟ್ಟಿಗಂತೂ ಉತ್ತರವಿಲ್ಲ. ವೈಚಾರಿಕವಾಗಿ ದೇವರನ್ನು ಮಾರಾಟದ ಸರಕನ್ನಾಗಿಸೋದು ತಪ್ಪು. ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ ಹೊರತು ಶಂಕರ ಭವತಿ ಶಿಲಾ ಆಗಬಾರದು ಅಲ್ವಾ? ಆದ್ರೆ ದೇವರು ಎಂಬುದು ಹಣ ಮಾಡೋ ಸರಕಾದರೆ ಶಂಕರನೂ ಶಿಲೆ ಅನ್ನಿಸಿಬಿಡುತ್ತಾನೆ ಅನ್ನೋದು ನನ್ನ ಅಭಿಪ್ರಾಯ. ಇಂತಹದೊಂದು ಸಮಸ್ಯೆ ತಪ್ಪಿಸಲು ಏನು ಮಾಡಬಹುದು ಅನ್ನೋದನ್ನಾ ನೀವೆ ತಿಳಿಸಿ.

Rating
No votes yet

Comments