ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರೊಡನೆ ಮುಕ್ತ ಸಂವಾದ - ಹಾಸನದಲ್ಲೊಂದು ವಿಶಿಷ್ಟ, ಯಶಸ್ವೀ ಕಾರ್ಯಕ್ರಮ

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರೊಡನೆ ಮುಕ್ತ ಸಂವಾದ - ಹಾಸನದಲ್ಲೊಂದು ವಿಶಿಷ್ಟ, ಯಶಸ್ವೀ ಕಾರ್ಯಕ್ರಮ

 

     ದಿನಾಂಕ ೩೦-೦೯-೨೦೧೨ರಂದು ಹಾಸನದಲ್ಲಿ ನಡೆದ ಒಂದು ವಿಶಿಷ್ಟ ಕಾರ್ಯಕ್ರಮದ ಸಂಕ್ಷಿಪ್ತ ವರದಿಯಿದು. ಚಂದನ ದೂರದರ್ಶನದಲ್ಲಿ ಪ್ರತಿ ಭಾನುವಾರ ಬೆ. ೯-೩೦ರಿಂದ ೧೦-೦೦ರವರೆಗೆ ಪ್ರಸಾರವಾಗುತ್ತಿರುವ 'ಹೊಸಬೆಳಕು' ಧಾರಾವಾಹಿಯ ಮೂಲಕ ವೇದದ ಉದಾತ್ತತೆ, ರೂಢಿಯಲ್ಲಿರುವ ಅನೇಕ ಅವೈದಿಕ ಸಂಪ್ರದಾಯಗಳು, ಆಚರಣೆಗಳ ಕುರಿತು ಜಾಗೃತಿ ಮೂಡಿಸುತ್ತಿರುವ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರನ್ನು ಹಾಸನಕ್ಕೆ ಆಹ್ವಾನಿಸಿ ಒಂದು ಮುಕ್ತ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವೇದಭಾರತೀ ಸಂಸ್ಥೆಯ ಸಂಚಾಲಕರುಗಳಾದ ಶ್ರೀಯುತ ಹರಿಹರಪುರ ಶ್ರೀಧರ್, ಕವಿನಾಗರಾಜ್, ಹೆಚ್.ಎಸ್. ಪ್ರಭಾಕರರವರು ಸಮಾನ ಮನಸ್ಕರೊಡನೆ ಸಮಾಲೋಚಿಸಿ ಏರ್ಪಡಿಸಿದ ಈ ಕಾರ್ಯಕ್ರಮಕ್ಕೆ ಶ್ರೀ ರಾಮಕೃಷ್ಣ ವಿದ್ಯಾಲಯ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು ಮತ್ತು ಸ್ಥಳೀಯ ಅಮೋಘ್ ವಾಹಿನಿಯ ವ್ಯವಸ್ಥಾಪಕರಾದ ಶ್ರೀ ಕೆ,ಪಿ.ಎಸ್. ಪ್ರಮೋದ್ ರವರು ಕೈಜೋಡಿಸಿದರು. ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ತಮ್ಮ ಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಎಲ್ಲಾ ಅನುಕೂಲಗಳನ್ನು ಒದಗಿಸುವುದರೊಂದಿಗೆ, ಕಾರ್ಯಕ್ರಮಕ್ಕೆ ಬಂದವರಿಗೆಲ್ಲಾ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದರೆ, ಅಮೋಘ್ ವಾಹಿನಿಯು ಇಡೀ ಕಾರ್ಯಕ್ರಮದ ನೇರ ಪ್ರಸಾರ ಮಾಡಿ ನಗರದ ಜನತೆ ಕಾರ್ಯಕ್ರಮವನ್ನು ಮನೆಯಲ್ಲೇ ಕುಳಿತು ನೋಡುವ ಅನುಕೂಲ ಕಲ್ಪಿಸಿ ಮೆಚ್ಚುಗೆಗೆ ಪಾತ್ರವಾಯಿತು. ಯಾರಿಂದಲೂ ಹಣದ ನಿರೀಕ್ಷೆ ಇಟ್ಟುಕೊಳ್ಳದೆ ಸಂಚಾಲಕರುಗಳೇ ಈ ಕಾರ್ಯಕ್ರಮ ನಡೆಸಲು ಮಾನಸಿಕರಾಗಿ ಸಿದ್ಧರಾಗಿದ್ದರೂ, ಕಾರ್ಯಕ್ರಮ ಆಹ್ವಾನ ಪತ್ರಿಕೆಗಳನ್ನು ಕೊಡುವ ಸಂದರ್ಭದಲ್ಲಿ ಕೇಳದಿದ್ದರೂ ಸಹ ಹಲವು ಗಣ್ಯರು ತಾವಾಗಿ ಮುಂದೆ ಬಂದು ಸಹಾಯ ಹಸ್ತ ಚಾಚಿದ್ದು  ಕಾರ್ಯಕ್ರಮ ಸುಗಮವಾಗಿ, ಸೊಗಸಾಗಿ ನಡೆಯಲು ಕಾರಣವಾಗಿದ್ದಲ್ಲದೆ ಆಯೋಜಕರುಗಳಿಗೆ ಹೆಚ್ಚಿನ ಉತ್ಸಾಹದಿಂದ ಮುಂದಡಿಯಿಡಲು ಪ್ರೇರಿಸಿತು.

     ೧೦.೦೦ಕ್ಕೆ ಸರಿಯಾಗಿ ಹಾಸನದ ಆರ್ಯ ವೈಶ್ಯ ಮಂಡಳಿಯ ಅಧ್ಯಕ್ಷರಾದ ಶ್ರೀ ಗೋವಿಂದರಾಜ ಶ್ರೇಷ್ಠಿಯವರು ವೇದ ಘೋಷದೊಂದಿಗೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಾಧ್ಯಾಯಿ  ಶ್ರೀ ಸುಧಾಕರಶರ್ಮರವರು ಪ್ರಾಸ್ತಾವಿಕವಾಗಿ ಮಾತನಾಡಿ ವೇದ ಸಾರ್ವಕಾಲಿಕವಾಗಿದ್ದು, ಮಾನವರ ಅಭ್ಯುದಯಕ್ಕಾಗಿ ಮಾರ್ಗದರ್ಶಿಯಾಗಿದೆಯೆಂದು ತಿಳಿಸಿದರು. ನಂತರದಲ್ಲಿ 'ನಮ್ಮ ಆಚರಣೆಗಳು ಮತ್ತು ಸಂಪ್ರದಾಯಗಳು ವೇದೋಕ್ತವಾಗಿವೆಯೇ?' ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಭಿಕರಿಂದ ಮುಕ್ತವಾಗಿ ಪ್ರಶ್ನೆಗಳನ್ನು ಆಹ್ವಾನಿಸಿ, ಅವರ ಪ್ರಶ್ನೆಗಳಿಗೆ ಸಮಂಜಸ ಉತ್ತರಗಳನ್ನು ಶರ್ಮರವರು ನೀಡಿದರು. ವಿಷಯ ಗಂಭೀರವಾಗಿದ್ದು ಆಳವಾಗಿ ವೇದಾಧ್ಯಯನ ಮಾಡಿರುವ ಶರ್ಮರಂತಹವರಿಗೆ ಮಾತ್ರ ಪ್ರಶ್ನೆಗಳನ್ನು ಎದುರಿಸಲು ಸಾಧ್ಯ. ಜಾತಿ ಪದ್ಧತಿ, ವರ್ಣಾಶ್ರಮ, ವೇದದ ಕುರಿತು ಬಂದಿರುವ ಆರೋಪಗಳು, ಮೂರ್ತಿಪೂಜೆ, ಜನಿವಾರ, ಸ್ತ್ರೀಯರು ವೇದಮಂತ್ರ ಹೇಳಬಹುದೇ, ಪುನರ್ಜನ್ಮ, ಪರಮಾತ್ಮ, ಜೀವಾತ್ಮ, ಶ್ರಾದ್ಧ, ಸೂತಕ, ಪೂಜಾವಿಧಾನ, ಪುರಾಣಗಳು, ಇತ್ಯಾದಿ, ಇತ್ಯಾದಿ ಹತ್ತು ಹಲವಾರು ಪ್ರಶ್ನೆಗಳು ಒಂದರ ಮೇಲೊಂದರಂತೆ ಸಭಿಕರು ಮುಂದಿಡುತ್ತಿದ್ದರೆ, ಅವೆಲ್ಲವಕ್ಕೂ ಶರ್ಮರವರು ಸಾಧಾರವಾಗಿ ಉತ್ತರಗಳನ್ನು ಹೇಳುತ್ತಿದ್ದರೆ, ಅವರ ಉತ್ತರಗಳನ್ನು ಸರಿಯಲ್ಲವೆಂದು ಯಾರೂ ಹೇಳುವಂತಿರಲಿಲ್ಲ. ಇಡೀ ಸಭಾಂಗಣ ನಿಶ್ಶಬ್ದವಾಗಿ ಈ ಸಂವಾದವನ್ನು ಆಲಿಸುತ್ತಿತ್ತು. ಎಲ್ಲರಲ್ಲೂ ತಮ್ಮ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳುವ ಕಾತುರತೆ ಎದ್ದು ಕಾಣುತ್ತಿತ್ತು. ಮ. ೧.೩೦ರವರೆವಿಗೂ ಈ ಸಂವಾದ ನಡೆಯಿತು. 

     ಮಧ್ಯಾಹ್ನದ ಬೋಜನಾನಂತರದಲ್ಲಿ ಮೂರು ಉಪನ್ಯಾಸಗಳು ಇದ್ದು, ಶ್ರೀ ವಿಶ್ವನಾಥ ಶರ್ಮರವರು 'ವೇದ ಎಲ್ಲರಿಗಾಗಿ' ಎಂಬ ವಿಷಯದ ಕುರಿತು, ಬೆಂಗಳೂರಿನ ಡಾ. ಕವಿತಾರವರು 'ದಂತ ಆರೋಗ್ಯ'ದ ಕುರಿತು ಮತ್ತು ಡಾ. ವಿವೇಕ್ ರವರು 'ಜೀವನ ಶೈಲಿ ಮತ್ತು ಆರೋಗ್ಯ' ಎಂಬ ಕುರಿತು ಮನನೀಯವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ವೇದದ ಕುರಿತು ಪ್ರಚಲಿತ ತಪ್ಪು ತಿಳುವಳಿಕೆಗಳನ್ನು ನಿವಾರಿಸುವ ಇಂತಹ ಕಾರ್ಯಕ್ರಮಗಳು ಆಗಾಗ್ಗೆ ನಡೆಯುತ್ತಿರಬೇಕು, ತಮ್ಮ ಸಹಕಾರ ನಿರಂತರವಾಗಿರುತ್ತದೆ ಎಂದು ಹೇಳಿದರು. ಪ್ರಾರಂಭದಲ್ಲಿ ಪ್ರಭಾಕರ್ ಪ್ರಾರ್ಥನೆ ಮಾಡಿದರು. ಹರಿಹರಪುರ ಶ್ರೀಧರ್ ಸ್ವಾಗತ, ಪರಿಚಯ, ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮದ ನಿರ್ವಹಣೆಯನ್ನು ಸೊಗಸಾಗಿ ಮಾಡಿದರು. ಕವಿನಾಗರಾಜ್ ವಂದಿಸಿದರು.

     ಸಾಮಾನ್ಯವಾಗಿ ಕಾರ್ಯಕ್ರಮಗಳಲ್ಲಿ ಅದ್ಯಕ್ಷ ಭಾಷಣ ಪ್ರಾರಂಭವಾಗುತ್ತಿದ್ದಂತೆ ಬಂದವರು ಜಾಗ ಖಾಲಿ ಮಾಡಲು ಪ್ರಾರಂಭಿಸಿ, ವಂದನಾರ್ಪಣೆ ಕಾಲದಲ್ಲಿ ಸಭೆಯಲ್ಲಿ ಉಳಿಯುವವರು ವೇದಿಕೆಯಲ್ಲಿರುವವರು ಮಾತ್ರ. ಆದರೆ, ಈ ಕಾರ್ಯಕ್ರಮ ಮ. ೪.೩೦ಕ್ಕೆ ಮುಗಿದರೂ ಸಹ ಸಭಾಸದರು ಹೊರಹೋಗಲೊಲ್ಲದೆ ಶ್ರೀ ಶರ್ಮರವರನ್ನು ಸುತ್ತುವರೆದು ಅವರೊಂದಿಗೆ ಸಾ. ೭.೦೦ರವರೆಗೂ ತಮ್ಮ ಸಂದೇಹಗಳನ್ನು ಹೇಳಿಕೊಂಡು ಅವರ ಸಲಹೆ, ಪರಿಹಾರ, ಉತ್ತರಗಳನ್ನು ಕಾತುರದಿಂದ ಕೇಳುತ್ತಿದ್ದುದು ವಿಶೇಷವೇ ಸರಿ. ಇದು ಕಾರ್ಯಕ್ರಮದ ಯಶಸ್ಸನ್ನು ತೋರಿಸಿದ್ದಲ್ಲದೆ, ಕಾರ್ಯಕ್ರಮದ ಆಯೋಜಕರುಗಳಿಗೆ, ಸಹಕರಿಸಿದವರಿಗೆ ಸಂತೃಪ್ತಿಯನ್ನು ಉಂಟು ಮಾಡಿತು ಎಂದರೆ ಉತ್ಪ್ರೇಕ್ಷೆಯಲ್ಲ. 

 

 

 

                                                              ಪ್ರಭಾಕರರಿಂದ ಪ್ರಾರ್ಥನೆ

 

                                                           ಜ್ಯೋತಿ ಬೆಳಗಿ ಉದ್ಘಾಟನೆ

                                                                  ವೇದಘೋಷ

                                                    ಹರಿಹರ ಪುರ ಶ್ರೀಧರರ ನಿರ್ವಹಣೆ

ಉದ್ಘಾಟಕರ ನುಡಿ: ಶ್ರೀ ಗೋವಿಂದರಾಜ ಶ್ರೇಷ್ಠಿ

 

                                                               ಶ್ರೀ ಸುಧಾಕರ ಶರ್ಮ

 

 

                                                                 ಆಸಕ್ತ ಸಭಾಸದರು

                                                             ಶ್ರೀ ವಿಶ್ವನಾಥ ಶರ್ಮ

                                                                     ಡಾ. ಕವಿತಾ

                                                                     ಡಾ. ವಿವೇಕ್

                                                 ಅದ್ಯಕ್ಷರ ಮಾತು:ಶ್ರೀ  ಸಿ.ಎಸ್. ಕೃಷ್ಣಸ್ವಾಮಿ

 

                                                                   ವಂದನೆ: ಕವಿನಾಗರಾಜ್

 

 

 

Comments

Submitted by vidyakumargv Mon, 10/01/2012 - 21:10

ಕವಿ ನಾಗರಾಜ್ ಅವ್ರೆ. ಇಂತಹ ವೇದ ಜ್ಞಾನಿಗಳು ನಿಜಕ್ಕೂ ದುರ್ಲಬ... ನನಗೂ ಕೇಳಬೇಕಾದ ಅನೇಕ ಪ್ರಶ್ನೆಗಳಿವೆ. ಅವಕಾಶ ಸಿಕ್ಕಿಲ್ಲ ನೊಡೋಣಂತೆ. ಒಳ್ಳೆಯ ವಿಷಯ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
Submitted by kavinagaraj Tue, 10/02/2012 - 08:43

In reply to by vidyakumargv

ವಂದನೆಗಳು, ವಿಜಯಕುಮಾರರೇ. ನೀವು ನಿಮ್ಮ ಪ್ರಶ್ನೆಗಳನ್ನು 'ಹೊಸಬೆಳಕು' ಕಾರ್ಯಕ್ರಮದಲ್ಲಿ ತೋರಿಸುವ ವಿಳಾಸಕ್ಕೇ ಕಳಿಸಬಹುದು. ಅಥವ ಹನುಮಂತನಗರದಲ್ಲಿರುವ ಅವರ ಮನೆಗೇ ಹೋಗಿ ಭೇಟಿ ಮಾಡಬಹುದು.
Submitted by partha1059 Mon, 10/01/2012 - 21:59

ನಾಗರಾಜ್ ಸರ್

ಕಾರ್ಯಕ್ರಮದ ನಿರೂಪಣೆ ಚೆನ್ನಾಗಿದೆ

ತಮ್ಮನ್ನು ಚಿತ್ರಗಳಲ್ಲಿ ಅಷ್ಟೆ ಕಾಣುತ್ತಿದ್ದೇವೆ

ಎದುರಿಗೆ ಕಾಣುವ ಅಭಿಲಾಷೆ ಎಂದು ನೆರವೇರುವುದೊ ತಿಳಿದಿಲ್ಲ

Submitted by kavinagaraj Tue, 10/02/2012 - 08:45

In reply to by partha1059

ಧನ್ಯವಾದ, ಪಾರ್ಥರೇ. ಬಿಡುವು ಮಾಡಿಕೊಂಡು ನೀವು ನಿಮ್ಮ ಸ್ನೇಹಿತರುಗಳು ಒಮ್ಮೆ ಹಾಸನಕ್ಕೆ ಬನ್ನಿ. ಎಲ್ಲರೂ ಸೇರಿ ಮಾತನಾಡಿದರೆ ಅದಕ್ಕಿಂತ ಸತ್ಸಂಗ ಬೇಕೇ?
Submitted by ಗಣೇಶ Tue, 10/02/2012 - 00:09

ಕವಿನಾಗರಾಜರೆ, ಯಶಸ್ವೀ ಕಾರ್ಯಕ್ರಮದ ನಿರೂಪಣೆ, ಚಿತ್ರಗಳು ಎಲ್ಲಾ ಚೆನ್ನಾಗಿದೆ.
Submitted by sunilkgb Tue, 10/09/2012 - 19:05

ಮಾನ್ಯರೆ, ಇತ್ತೀಚೆಗೆ ಶ್ರೀ ಸುಧಾಕರ ಶರ್ಮರ ಹೊಸಬೆಳಕು ಪುಸ್ತಕ ಬಿಡುಗಡೆಯಾಗಿರುವ ಬಗ್ಗೆ ಕೇಳಿದ್ದೇನೆ.ಪುಸ್ತಕ ಯಲ್ಲಿ ದೊರೆಯಬಹುದು ?
Submitted by kavinagaraj Wed, 10/10/2012 - 12:03

In reply to by sunilkgb

ಶ್ರೀ ಸುಧಾಕರ ಶರ್ಮರ ಬಳಿಯೇ ಸಿಗುತ್ತದೆ. ನಾನು ಹೊರಗೆ ಇರುವುದರಿಂದ ತಕ್ಷಣಕ್ಕೆ ವಿಳಾಸ ಹೇಳುವುದು ಕಷ್ಟ. ಕ್ಷಮಿಸಿ. ಆದರೂ, ವಿಳಾಸ, ದೂರವಾಣಿ ಇತ್ಯಾದಿಗಳಿಗೆ ಹೊಸಬೆಳಕು ಕಾರ್ಯಕ್ರಮದಲ್ಲೇ ಕಾಣಬಹುದಾಗಿದೆ. ಧನ್ಯವಾದಗಳು, ಸುನಿಲರೇ.