ಬ್ಯಾ-ಸಾಯ - > ಕೆಲವೇ ಗಂಟೆಗಳ ಕಥೆ

ಬ್ಯಾ-ಸಾಯ - > ಕೆಲವೇ ಗಂಟೆಗಳ ಕಥೆ

ಎಲ್ಲಿ ಹಾಳಾಗಿ ಹೋದಾ ಇವ್ನು, ನೆನ್ನೆ ಚೆನ್ನಾಗಿ ಮಳೆ ಬಂದಿದೆ , ಇವತ್ತೊಂದು ಸಾಲು ಹೂಡಿಬಿಟ್ರೆ ಭತ್ತ ಹಾಕೋಕೆ ಸರಿಯಾಗತ್ತೆ. ಕೆಂಪ ಮತ್ತೆ ಬಸವ ಎರಡೂ ಕಾಡು ಹತ್ತದೆ ಹಟ್ಟಿಯಲ್ಲೇ  ಬಿದ್ಕಂಡಿವೆ ಆದ್ರೆ ಇವ್ನೇ ಪತ್ತೆ ಇಲ್ವಲ್ಲ ಅಂಥಾ ಗೌಡ್ರು ಚಾವಡಿಯ ಬಳಿ ಶತಪಥ ಅಂಥಾ ತಿರುಗ್ತಿದ್ರು. ಲೇ ಒಂದ್ಲೋಟ ಕಾಪಿ ತಾರೇ ಅಂಥಾ ಅಲ್ಲಿಂದ್ಲೇ ಕೂಗಿ ಹೇಳಿದ್ರು ಅವರ ಹೆಂಡತಿಗೆ. ಆ ಜಿಟಿಜಿಟಿ ಮಳೆಯಲ್ಲೇ ಕೊಟ್ಟಿಗೆಯಿಂದ ಸೌದೆ ತಂದು ಹೊರಗಡೆ ಇದ್ದ ನೀರಿನ ಒಲೆಗೆ ಬೆಂಕಿ ಹಾಕಲು ಕೊಳಪೆ ಹಿಡಿದುಕೊಂಡು ಒಂದೇ ಸಮನೆ ಉಸಿರುಬಿಡುತ್ತಿದ್ದ ಲಕ್ಷ್ಮಿಗೆ ತನ್ನ ಗಂಡನ ಕೂಗು ಕೇಳಿಸಿ ಅಲ್ಲಿಂದ ಅಡಿಗೆ ಮನೆಗೆ ಹೆಜ್ಜೆ ಹಾಕುವಾಗ ಅಲ್ಲೇ ಒಲೆಯ ಬಳಿ ಬೂದಿಯ ಮೇಲೆ ಮಲಗಿ ಸುಖ ನಿದ್ರೆ ಅನುಭವಿಸುತ್ತಿದ್ದ ಕರಿಯನ ಬಾಲದ ಮೇಲೆ ಅವಳ ಕಾಲು ಅವಳಿಗರಿವಿಲ್ಲದಂತೆ ಸೋಕಿದಾಗ ಕಯ್ಯಯೋ ಅಂದು ಎದ್ದು ಕುಳಿತು ತನ್ನ ಒಡತಿಯಾದ್ದರಿಂದ ಹಾಗೆ ಸುಮ್ಮನೆ ಬಾಲವನ್ನು ಮುದುಡಿಕೊಂಡು ಮತ್ತೆ ಬೂದಿಯ ಮೇಲೆ ಮೈ ಚಾಚಿತು.

ಹಿಂದಿನ ಒಲೆಯಲ್ಲಿ ಇಟ್ಟಿದ್ದ ಕಾಪಿ ಪಾತ್ರೆಯನ್ನ ಮುಂದಿನ ಒಲೆಗಿರಿಸಿ ಕಾದ ಬಳಿಕ ಲೋಟಕ್ಕೆ ಸುರಿದುಕೊಂಡು ಚಾವಡಿಯ ಬಳಿ ಹೋದಳು. ಕಾಪಿಯನ್ನ ಗಂಡನ ಕೈಗಿರಿಸಿ ಹಿಂದಿರುವಾಗ ಗೌಡ್ರು, ಎಲ್ಲಿ ಸತ್ನೇ ಇವ್ನು? ನೆನ್ನೆ ಸರ್ಯಾಗಿ ಹೇಳಿದ್ಯಾ ಇಲ್ವಾ?. ಹೇಳಿದ್ದೆ, ಬರ್ತೀನಿ ಅಂದಿದ್ದ. ಎಂಥ ಬರೋದು, ೯:೩೦ ಆಗ್ತಾ ಬಂತು, ಇಷ್ಟೊತ್ತಿಗೆ ಬೇಸಾಯ ಮಾಡಿ ಎತ್ಗಳ್ನ ಮೇಯಕ್ಕೆ ಬಿಡಬೇಕಾಗಿತ್ತು. ಮನೆಹಾಳು ಮಾಡೋಕೆ ಇರೋದು ಇವು ಅಂಥಾ ಕಾಪಿಯನ್ನ ಕುಡೀತಾ ಕೂತ್ರು. ಬರ್ಲಿ ನನ್ಮಗಾ ಈ ವಾರ ಬಟ್ವಾಡೆ ಕೊಡದೆ ಎಲ್ಲದನ್ನೂ ಮುರ್ಕಂಡ್ರೆ ಬಡ್ಡಿಮಗಂಗೆ ಆಗ ಬುದ್ದಿ ಬರತ್ತೆ, ಕೇಳ್ದಾಗೆಲ್ಲಾ ಸಾಲ ಕೊಟ್ಟು ಕೊಟ್ಟು ಈಗ ಕೊಬ್ಬಿ ಕೂತಿದ್ದಾರೆ, ಸೊಸೈಟಿ ಅಕ್ಕಿ ಬೇರೆ ಚೆನ್ನಾಗಿ ಸಿಕ್ಬಿಟ್ಟಿದೆ, ಈ ಸರ್ಕಾರ್ದವ್ರಿಗೆ ಮೆಟ್ನಲ್ಲಿ ಹೊಡೀಬೇಕು. ಗೌಡನ ಮನೆ ಹಾಳಾದ್ರೆ ಹಾಳಾಗ್ಲಿ ನಂಗೇನು ಅಂಥಾ ಸುಖವಾಗಿ ತಿಂದು ತಿರುಗ್ತಾವ್ರೆ. ಕಾಪಿ ಕುಡಿಯುತ್ತಿದ್ದ ಗೌಡರ ಮನದಲ್ಲಿ ಅಸಂಖ್ಯ ಪ್ರಶ್ನೆಗಳು, ಬೈಗುಳಗಳು ಹಾದುಹೋಗುತ್ತಿದ್ದವು.

ಅಮ್ಮೋರೆ? ಕೊಳಪೆ ಊದುತ್ತಿದ್ದ ಲಕ್ಷ್ಮಿ ಮಂಜನ ಸ್ವರ ಕೇಳಿ ಹಿಂದಕ್ಕೆ ತಿರುಗಿದಳು. ಎಂಥದ ಮಾರಾಯಾ ನೀನು? ಅಲ್ನೋಡಿದ್ರೆ ಗೌಡ್ರು ಕ್ಯಾಕರಿಸಿ ಉಗೀತಿದ್ದಾರೆ ನೀನು ಬಂದಿಲ್ಲ ಅಂಥಾ ಇಲ್ಲಿ ನೋಡಿದ್ರೆ ಹಿಂದ್ಗಡೆ ಬಂದಿದೀಯಾ. ಗೌಡ್ರೆನಾದ್ರೂ ನಿನ್ನನ್ ನೋಡಿದ್ರೆ ಕೊಲೆ ಮಾಡ್ತಾರೆ! ಯಾವ ಭಾವವನ್ನೂ ಪ್ರದರ್ಶಿಸದೆ ಹೇಳಿದಳು ಲಕ್ಷ್ಮಿ. ಹಲ್ಕಿರಿದು ನಿಂತಿದ್ದ ಮಂಜ (ಗೌಡ್ರು ಹಿಂದ್ಗಡೆ ಬರೋದು ಕಡಿಮೆ ಹಾಗಾಗಿ ಸಿಕ್ಕಿಕೊಳ್ಳುವ ಸಂಭವವೂ ಕಡಿಮೆಯೆಂದು ತಿಳಿದಿದ್ದ ಮಂಜ ತನ್ನ ೩೨ ಹಲ್ಲುಗಳನ್ನು ಪ್ರದರ್ಶಿಸಿದ್ದ) ಅಮ್ಮೋರೆ ಗೌಡ್ರು ಬಯ್ತಿದ್ದಿದ್ದು ದೂರ್ದಿಂದಾನೆ ಕೇಳುಸ್ತು ಅದ್ಕೆ ತೋಟದಲ್ಲಿ ನುಗ್ಗಿ ಹಿಂಗ್ಬಂದೆ ಅಂದ. ಒಂದ್ಲೋಟ ಕಾಪಿ ಕೊಡಿ ಕುಡ್ಕೊಂಡು ಬೇಸಾಯಕ್ಕೆ ಹೋಗ್ತೀನಿ ಅಂದು ಅಡಿಗೆ ಮನೆಯ ಕಿಟಕಿಯ ಹಿಂದೆ ಸಿಕ್ಕಿಸಿದ್ದ ತೆಂಗಿನ ಚಿಪ್ಪನ್ನು ತೆಕ್ಕೊಂಡು ಅಲ್ಲೇ ಕೂತ್ಕೊಂಡ. ಆಹಾಹ್ಹ ಯಜ್ಮಾನ ಚಿಪ್ಪು ಹಿಡ್ಕಂಡು ಕೂತ್ಕಂಡ, ನೀನು ಇಲ್ಲಿದೀಯಾ ಅಂಥಾ ಗೊತ್ತಾದ್ರೆ ಇಬ್ರುನ್ನು ನೇಣಿಘಾಕ್ತಾರೆ, ನೀನು ಬಂದಿರೋದನ್ನ ನಾನು ಹೇಳಿಲ್ಲ ಅಂಥಾ. ಬಾ ಇಲ್ಲಿ ಒಲೆಗೆ ಬೆಂಕಿ ಹಾಕು ಅಷ್ಟೊತ್ತಿಗೆ ಕಾಪಿ ಕೊಡ್ತೀನಿ ಅಂದು ಮನೆಯೊಳಕ್ಕೆ ಹೋದ್ಲು.

ಏನೋ ಕರಿಯಾ, ಗಡದ್ದಾಗಿ ನಿದ್ದೆ ಮಾಡ್ತಿದೀಯಾ? ನಿಂದೇ ಪುಣ್ಯ ನೋಡು. ಬೆಚ್ಚಗೆ ನಿದ್ರೆ, ತಿನ್ನಾಕೆ ಮೀನು ಮಾಂಸ ಮೂಳೆ! ಕರಿಯನಿಗೆ ಅರ್ಥವಾಯಿತೋ ಇಲ್ವೋ ಆದ್ರೆ ಮಂಜನನ್ನ ನೆಕ್ತಾ ಕೂರ್ತು. ಹಚಾ ಆಚೆ ಹೋಗು ಅಂಥಾ ಜೋರು ಮಾಡಿ ಕೊಳಪೆಯಿಂದ ಉರುವಲು ಶುರುಮಾಡಿದ.ಲಕ್ಷ್ಮಿ ಕಾಫಿಯನ್ನ ತಂದಳು. ಮಂಜ ಬೆಂಕಿ ಹೊತ್ತಿಸಿ ಮೈ ಕಾಯಿಸುತ್ತಾ ಕುಳಿತಿದ್ದ. ಕಾಫಿ ಕಂಡ ತಕ್ಷಣ ಮೇಲೆ ಇಟ್ಟಿದ್ದ ತೆಂಗಿನ ಚಿಪ್ಪನ್ನು ತೆಗೆದು ಅಮ್ಮೋರ ಮುಂದೆ ತನ್ನ ಕೈಯನ್ನು ಒಡ್ಡಿದ.  ಅಮ್ಮೋರೆ ನಾನು ದನ ಬಿಟ್ಟಾದ್ಮೇಲೆ ಆ ಮೆಟ್ಲ್ಹತ್ರ ಸ್ವಲ್ಪ ನಿಂತ್ಕಳಿ. ಇಲ್ಲಾಂದ್ರೆ ಮಾಮೂಲಂತೆ ಕಾಡಿನ ಕಡೆಗೆ ಓಡ್ತಾವೆ ಅಂದು  ಕಾಪಿಯನ್ನ ಸೊರ ಸೊರ ಅಂಥಾ ಹೀರಿ ಚಿಪ್ಪನ್ನು ತೊಳೆದು ಮೇಲಿಟ್ಟು, ಒಲೆಯಿಂದ ಉರಿಯುತ್ತಿರುವ ಒಂದು ಕಟ್ಟಿಗೆಯನ್ನ ತೆಗೆದುಕೊಂಡು ಬೀಡಿಯನ್ನು ಹತ್ತಿಸಿ ಸೇದುತ್ತಾ  ಹಟ್ಟಿಯ ಕಡೆ ಮೆಲ್ಲನೆ ಹೆಜ್ಜೆ ಹಾಕಿದನು.

ಏಯ್ ಮಂಜ ಎಲ್ಲಿ ಸಾಯೋಕೆ ಹೋಗಿದ್ಯೋ. ಇಲ್ಲೆಲ್ಲಿ ತೋಟದ ಒಳಗಿಂದ ಬರ್ತಿದೀಯಾ? ಹೊಟ್ಟೆಗೆ ಅನ್ನ ತಿನ್ತೀರೋ ...ತಿನ್ತೀರೋ. ಸಾಲ ಬೇಕು ಬೇಕೆಂದಾಗ ಕೊಟ್ಟು ಸಾಯ್ತೀವಿ ಆದ್ರೆ ಕೆಲ್ಸಕ್ಕೆ ಬೇಕೆಂದಾಗ ಊರೂರು ತಿರುಗ್ತೀರಾ, ಗೌಡನ ಮನೆ ಕಡೆ ಕಣ್ಣೆತ್ತಿ ಸಹ ನೋಡಲ್ಲ. ನಿಮ್ಮಂಥರನ್ನ ಕಟ್ಕಂಡು ಸಾಯಕಿಂತ ಗದ್ದೆ ಮಾರೋದೇ ವಾಸಿ. ಅನೀರೀಕ್ಷಿತವಾಗಿ ಗೌಡ್ರು ಎದುರಿಗೆ ಕಂಡ ತಕ್ಷಣ ಮಂಜ ನಡುಗಹತ್ತಿದ ಆದರೂ ಸಾವರಿಸಿಕೊಂಡು ಕೈಲಿದ್ದ ಬೀಡಿಯನ್ನೆಸೆದು 'ಗೌಡ್ರೆ ಮನೆ ಕಡೆನೇ ಬರ್ತಿದ್ದೆ ಆದ್ರೆ ಆ ನಂಜ ಬರೋವಾಗ ಮಧ್ಯೆ ಸಿಕ್ಕಿ ನಿಮ್ಗೌಡ್ರ ಗದ್ದೆಲಿ ಹುಗುಳು ಬಿದ್ದು ನೀರೆಲ್ಲಾ ಖಾಲಿಯಾಗಿದೆ ಅಂದ, ಅದ್ಕೆ ಹೋಗಿ ಹುಗುಳು ಕಟ್ಟಿ ನೀರು ಬಿಟ್ಟು ಬರೋಹೊತ್ತಿಗೆ ಇಷ್ತೊತ್ತಾಯ್ತು' ಅಂಥಾ ಸುಳ್ಳನ್ನ ಬಹಳ ಚೆನ್ನಾಗಿಯೇ ಹೇಳಿದ. ಗೌಡ್ರು 'ಸರಿ ಸರಿ ಬೇಗ ಹೋಗಿ ಬೇಸಾಯ ಕಟ್ಟು ಮತ್ತೆ, ಹಿಂಗೆ ನಿಧಾನ ಮಾಡ್ತಾ ಹೋದ್ರೆ ಎಲ್ರೂ ಗದ್ದೆ ಕುಯ್ಲು ಶುರು ಮಾಡ್ತಾರೆ ನಾವು ನಾಟಿ ಮಾಡ್ತಿರ್ತೀವಿ'. ಮಂಜ ಬಚಾವಾದೆ  ಅಂದ್ಕೊಂಡು ಹಟ್ಟಿಯ ಬಳಿ ಹೋದ.

ಹಟ್ಟಿಯಿಂದ ಮುಂದೆ ಹೋಗಿ ಬಲಕ್ಕೆ ತಿರುಗಿದರೆ ಗೌಡರ ಮನೆಗೆ ಹತ್ತಲು ಮೆಟ್ಟಿಲುಗಳ ಸಾಲು, ಅದೇ ಹಾದಿಯಲ್ಲಿ ಸಾಗಿದರೆ ದಟ್ಟವಾದ ಕಾಡು. ಎಡಕ್ಕೆ ಹೋದರೆ ೭ ರಿಂದ ೮ ಮನೆಗಳು ನಂತರ ಗದ್ದೆಗೆ ಸಾಗುವ ಹಾದಿ. ಕೆಂಪ ಮತ್ತು ಬಸವ ಬಿಳೀ ಹುಲ್ಲನ್ನ ಮೆಲ್ಲುತ್ತಾ ಕೂತಿದ್ದವು. ಮಂಜ ಬಂದೊಡನೆ ಎದ್ದು ನಿಂತವು. ಒಂದೆರಡು ದಿನದಿಂದ ಹೊರಗಡೆ ಬಿಟ್ಟಿರಲಿಲ್ಲವಾದ್ದರಿಂದ ಇಂದು ಆ ಭಾಗ್ಯ ದೊರಕಬಹುದೆಂದು ಮಂಜನನ್ನೇ ನೋಡುತ್ತಿದ್ದವು. ಎರಡರ ಹಗ್ಗವನ್ನ ಬಿಚ್ಚಿದ. ನೇಗಿಲು ತೆಗೆದುಕೊಂಡು ಅವುಗಳ ಹಿಂದೆ ಹೊರಟನು. ಬಸವ ಮುಂದೆ ಹೋಗುತ್ತಾ ಗದ್ದೆಯ ಕಡೆ ತನ್ನ ಹೆಜ್ಜೆಯನ್ನು ಹಾಕಿತ್ತು, ಹಿಂದೆ ಬರುತ್ತಿದ್ದ ಕೆಂಪನೂ ಸಹ ಬಸವನನ್ನೇ ಹಿಂಬಾಲಿಸಿತು. ದನಗಳು ಗದ್ದೆಯ ಕಡೆ ಹೋದದ್ದನ್ನ ನೋಡಿ ಲಕ್ಷ್ಮಿ ಮನೆಗೆ ಹೋದಳು. ಮಂಜನಿಗೆ ಇನ್ನು ಬೇಸಾಯ ಮಾಡಬಹುದೆಂದು ಸಮಾಧಾನವಾಯಿತು.

ಹಾಗೆ ಸಾಗುವಾಗ ಕೆಳಗಿನ ಮನೆಯ ಈರೆಗೌಡ್ರು ಮಂಜನನ್ನ ನೋಡಿ 'ಏನೋ ಮಂಜ, ಇಷ್ಟೊತ್ತಿಗೆ ಬೇಸಾಯಕ್ಕೆ ಹೋಗ್ತಿದೀಯಲ್ಲೋ? ಅಲ್ನೋಡಿದ್ರೆ ನಿಮ್ಗೌಡ್ರು ನಿಂಗೆ ಕ್ಯಾಕರಿಸಿ ಉಗೀತಿದ್ರು, ಎಂಥದ್ಲಾ ನಿನ್ ಕಥೆ?'. ಮಂಜ ಹಲ್ಕಿರಿದು 'ಎದ್ದೇಳೋವಾಗ್ಲೆ ತುಂಬಾ ಹೊತಾಯ್ತು ಗೌಡ್ರೆ ಹಂಗಾಗಿ ಇಷ್ಟೊತ್ತು, ನಮ್ಗೌಡ್ರದ್ದು ಯಾವಾಗ್ಲೂ ಇದ್ದದ್ದೇ, ಅದ್ಸರಿ ನಿಮ್ ಗದ್ದೆ ಬ್ಯಾಸಾಯ ಆಯ್ತೋ?. ಗೌಡ್ರು ಜೋರಾಗಿ ನಗುತ್ತಾ 'ಬ್ಯಾಸಾಯನೂ ಆಯ್ತೂ ನಾಟಿನೂ ಆಯ್ತು, ಹೋಗ್ಹೊಗು ಬ್ಯಾಸ್ಯಾಯ ಮಾಡ್ನಡಿ ಇಲ್ಲಾಂದ್ರೆ ಎತ್ಗಳು ಕಾಡ್ನ ಹತ್ತುತವೆ' ಅಂಥಾ ಅಂದ್ರು. ಆಗ್ಲಿ ಗೌಡ್ರೆ, ಬೀಡಿ ಏನಾರ ಇದ್ರೆ ಒಂದು ಇತ್ಲಾಗೆ ಕೊಡೋಕಾಗತ್ತೆನು ನೋಡಿ' ಮಂಜ ಗೌಡ್ರ ಕಣ್ಗಳನ್ನೇ ನೋಡ್ತಾ ಕೇಳ್ದ. 'ನಿನ್ನನ್ನ ನಿಲ್ಸಿ ಮಾತಾಡ್ಸಿದ್ದಕ್ಕೆ ಒಂದು ಬೀಡಿನೂ  ಹೋಯ್ತು' ಅಂತಂದು ಗೌಡ್ರು ಜೇಬಿಗೆ ಕೈ ಹಾಕಿ ಬೀಡಿಯ ಕಟ್ಟನ್ನು ತೆಗೆದು ಒಂದನ್ನು ಮಂಜನ ಕೈಗಿತ್ತರು. ಮಂಜ ಬೀಡಿಯನ್ನು ತೆಗೆದುಕೊಂಡು ಬರ್ತೀನಿ ಗೌಡ್ರೆ, ಬ್ಯಾಸಾಯ ಆದ್ಮೇಲೆ ನಿಮ್ಗದ್ದೆ ಕಡೆ ಹೋಗಿ ನೀರಿದೆಯಾ ಇಲ್ವಾ ಅಂತ ನೋಡ್ಕಂಬತೀನಿ ಅಂದು ಮುಂದೆ ಸಾಗಿದ.

ಇದ್ದಕಿದ್ದಂತೆ ಕಂತ್ರಿನಾಯಿಗಳ ಕಿರುಚಾಟ ಕೇಳಲಾರಂಭಿಸಿತು. ೬-೭ ನಾಯಿಗಳು ಕಚ್ಹಾಡುತ್ತಿದ್ದವು. ಕೆಂಪ ಮತ್ತು ಬಸವನನ್ನ ನೋಡಿದ ತಕ್ಷಣ ಅವುಗಳನ್ನ ಬೆರೆಸಿಕೊಂಡು ಬಂದವು. ದನಗಳು ಮತ್ತು ನಾಯಿಗಳು ಮುನ್ನುಗ್ಗುವುದನ್ನ ನೋಡಿದ ಮಂಜ ಕೈನಲ್ಲಿದ್ದ ನೇಗಿಲನ್ನು ಎಸೆದು ಬೇಲಿಯನ್ನ ಹಾರಿ ನಿಂತನು. ಎರಡೂ ದನಗಳು ಮೆಟ್ಟಿಲನ್ನು ಹತ್ತಿ ಕಾಡಿನ ಕಡೆ ಓಡಿದವು. ಬೇಲಿ ದಾಟಿ ರಸ್ತೆಗೆ ಬಂದು ಮಂಜ ಅವುಗಳನ್ನ ಹಿಂಬಾಲಿಸಿದ. ಗೌಡ್ರು ಮತ್ತೆ ಲಕ್ಷ್ಮಿ, ನಾಯಿಗಳ ಕಿರುಚಾಟ ಕೇಳಿ ಕಣಕ್ಕೆ ಬರುವಷ್ಟರಲ್ಲಿ ದನಗಳು ಕಾಡಿನ ಮುಖ ನೋಡಿಯಾಗಿತ್ತು. ಕರಿಯ ಕಂತ್ರಿನಾಯಿಗಳನ್ನ ಸೇರಿಕೊಂಡಿತ್ತು. ಮೆಟ್ಟಿಲು ಹತ್ತಿ ಏದುಸುರಿನಿಂದ ಓಡುತ್ತಿದ್ದ ಮಂಜ ಕಣದಲ್ಲಿ ನಿಂತಿದ್ದ ಗೌಡ್ರ ಮುಖ ನೋಡಿ ಮತ್ತಷ್ಟು ಬಿರುಸಿನಿಂದ ಓಡಲಾರಂಭಿಸಿದ.

Comments

Submitted by makara Thu, 10/11/2012 - 17:58

ಚಿಕ್ಕೂ, ನಮ್ಮ ಕಡೆ ಬೇಸಾಯ ಅಂದ್ರೆ ನೀ ಸಾಯ, ನಾಸಾಯ ಮನೆಮಂದಿಯೆಲ್ಲಾ ಸಾಯ ಅಂತಾ ಬೇಜಾರಿನಲ್ಲಿ ಮಾತಾಡ್ಕೊತಾ ಇರ್ತಾರೆ. ಈ ಬರಹವನ್ನು ನೋಡಿದ ಮೇಲೆ ಆ ನಾನ್ನುಡಿ ನೆನಪಿಗೆ ಬಂತು. ಅದೇ ರೀತಿ ಧಾರವಾಡ ಸೀಮೆಯಲ್ಲಿ ವ್ಯವಸಾಯವನ್ನು ಕಮತ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಅವರು ಹೇಳುವುದು ಹೀಗೆ ಎಷ್ಟೇ ಸುರುದ್ರೂ ಬೇಸಾಯಕ್ಕೆ ಇನ್ನೂ (ಕಡಿಮೆ) ಕಮ್...ಬೀಳ್ತಾ ಇರ್ತದ ಅದ್ಕ...ಇದುನ್ನ ಕಮ್..ತಾ ಅನ್ನೂದ್ರೀ ಅಂತಿರ್ತಾರೆ. ಇರಲಿ ಚಿಕ್ಕೂ, ಸಾಫ್ಟವೇರಿನವನಾದರೂ ಬೇಸಾಯದ ಬಗ್ಗೆ ಸಾಫ್ಟ್ ಕಾರ್ನರ್ ಇದೆಯಲ್ಲಾ ಅದಕ್ಕೆ ಸಂತಸವಾಗುತ್ತಿದೆ.
Submitted by Chikku123 Fri, 10/12/2012 - 11:11

In reply to by makara

ಶ್ರೀಧರವ್ರೆ, ಆ ಗಾದೆ ಕೃಷಿ ಇದ್ದ ಕಡೆಯೆಲ್ಲಾ ಇದ್ದದ್ದೇ!! ಚೆನ್ನಾಗಿದೆ ಕಮ್..ತಾ ಕಥೆ. ಸಾಫ್ಟವೇರಿಗೆ ಬರೋಕಿಂತ ಮುಂಚೆ ನಾವು ರೈತರೇ, ಈಗ್ಲೂ ಅಷ್ಟೇ. ೫ ದಿನ ಇದು ೨ ದಿನ ಅದು ಅಷ್ಟೇ ವ್ಯತ್ಯಾಸ. ಧನ್ಯವಾದ
Submitted by kavinagaraj Fri, 10/12/2012 - 10:38

ಗರಿಗರಿ ಚುರುಮುರಿಯ ಚಿಕ್ಕೂ ಇಂತಹ ಹಸಿ ಹಸಿ ಹಳ್ಳಿಯ ನೋಟವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿರುವುದು ನನಗೆ ಖುಷಿ ಕೊಟ್ಟಿತು. :)
Submitted by Chikku123 Fri, 10/12/2012 - 11:17

In reply to by Prakash Narasimhaiya

ಹ್ಹ ಹ್ಹ ಇದು ಸಾಮಾನ್ಯ ಎಲ್ಲಾ ಊರಿನ ಕಥೆ ಪ್ರಕಾಶವ್ರೆ, ನೋಡೋದೇನು ಬಂತು ಅನುಭವಿಸಿದ್ದೆ ಅದು. ದನ ಕಾಯ್ದು ಅಭ್ಯಾಸ ಇತ್ತಲ್ವಾ ನಮಗೆ ಹಾಗಾಗಿ ಚೆಂದ ಅನ್ಸಿರಬಹುದು ನಿಮಗೆ ನಿಮ್ಮ ಮೆಚ್ಚುಗೆಗೆ ಧನ್ಯವಾದ
Submitted by ಗಣೇಶ Sat, 10/13/2012 - 00:34

In reply to by kavinagaraj

>>>ಗರಿಗರಿ ಚುರುಮುರಿಯ ಚಿಕ್ಕೂ ಇಂತಹ ಹಸಿ ಹಸಿ ಹಳ್ಳಿಯ ನೋಟವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿರುವುದು ನನಗೆ ಖುಷಿ ಕೊಟ್ಟಿತು. :) +೧ ನನಗೂ.. ಚಿಕ್ಕೂ ಸೂಪರ್.. -ಗಣೇಶ.