ಸತ್ಯಂ ಶಿವಂ ಸುಂದರಂ - ಆನಂದಮಯ ಈ ಜಗ ಹೃದಯ
ಸತ್ಯಂ ಶಿವಂ ಸುಂದರಂ - ಆನಂದಮಯ ಈ ಜಗ ಹೃದಯ
ಮಾನವ ಜೀವಸಂಕುಲಗಳಲ್ಲಿಯೇ ಅತ್ಯಂತ ಹಿರಿಯ ಸ್ಥಾನಪಡೆದ ಜೀವಿ. ಅವನ ಅಪ್ರತಿಮ ಬುದ್ಧಿವಿಕಾಸ, ಆ ವಿಕಾಸ ಪಥದಲ್ಲಿ ದೊರೆತ ಅತ್ಯದ್ಭುತ ಜ್ಞಾನಸಂಪತ್ತು, ಈ ಜ್ಞಾನವನ್ನು ವಿನಿಯೋಗಿಸಿ ಪಡೆದುಕೊಂಡ ಚಾಣಾಕ್ಷತನ, ಈ ಹಿರಿಯ ಸ್ಥಾನಕ್ಕೆ ಕಾರಣಭೂತವಾದುದು ಎಂಬುದರಲ್ಲಿ ಸಂದೇಹವಿಲ್ಲ. ವಿಕಸಿತ ಚಿತ್ತನಾದ ಮಾನವ ಸಂಸಾರಿಯಾದ. ಗುಂಪುಗಳನ್ನು ಕಟ್ಟಿದ. ಗುಂಪಿನ ಹಿತರಕ್ಷಣೆಗೆ, ಸಮನ್ವಿತ ಸಂಘಜೀವನಕ್ಕೆ ಬೇಕಾಗುವ ವಿಧಿ, ನಿಮಯಗಳನ್ನು ಹುಟ್ಟುಹಾಕಿದ. ದೈನಂದಿನ ಕೆಲಸಗಳನ್ನು ಮಾಡಲು ಸುಲಭವಾಗುವಂತೆ ಅನೇಕಾನೇಕ ಸಲಕರಣೆ, ಉಪಕರಣಗಳನ್ನು, ಬೇಟೆಯಾಡಲು ಆಯುಧಗಳನ್ನು ಕಂಡುಹಿಡಿದ. ಮುಂದೆ ಈ ಗುಂಪುಗಳೇ ಬೆಳೆದು ಸಮಾಜವಾಯಿತು. ವಿಧಿಗಳು ಸಂಸ್ಕೃತಿಯಾಯಿತು, ಧರ್ಮಗಳಾಯಿತು. ಉಪಕರಣ, ಔಷಧಿ, ಆಯುಧಾನ್ವೇಷಣೆಗಳೆ ವಿಜ್ಞಾನಕ್ಕೆ ನಾಂದಿಯಾಯಿತು. ಇಂದು ಪ್ರಪಂಚದೆಲ್ಲೆಡೆ ಹಬ್ಬಿ ಹರಡಿರುವ ವೈವಿಧ್ಯಮಯ ಸಂಸ್ಕೃತಿ, ಸಮಾಜ, ಧರ್ಮಗಳು, ಅಸದೃಶ ವಿಜ್ಞಾನ ಸಾಧನೆಗಳು, ಅವನ ಅಸಾಧಾರಣ ಚಿಂತನೆಗಳಿಗೆ ಸಾಕ್ಷಿಯಾಗಿವೆ. ಇಂತಹ ಚಿಂತನೆಗಳು ಮೊಳೆತು ಸಧೃಡವಾಗಿ ಬೆಳೆಯುವುದಕ್ಕೆ, ಅವನ ಚಿತ್ತಭೂಮಿಯಲ್ಲಿ ಅನಂತವಾಗಿ ಬೆಳೆಯುತ್ತಿರುವ ಬುದ್ಧಿಸತ್ವ ಹಾಗು ಬಾವಸತ್ವಗಳೇ ಕಾರಣ.
ಮಾನವಕೋಟಿ ಹೃದಯಸಾಗರದಾಳದಲ್ಲಿ ಹಿಂದಿನಿಂದಲೂ ಅಸಂಖ್ಯಕೋಟಿ ಆಸೆಗಳು, ಗುರಿಗಳು ಮೈತಳೆಯುತ್ತಲೇ ಇವೆ. ಅವುಗಳನ್ನು ಸಾಧಿಸಲು, ಅವನು ಅನೇಕಾನೇಕ ಮಾರ್ಗಗಳನ್ನು ಹುಟ್ಟುಹಾಕುವ ಕ್ರಿಯೆಯಲ್ಲಿ ತನ್ನನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾನೆ. ತನ್ನ ಮನಸ್ಸಿನ ಪ್ರೌಡತೆಗೆ ತಕ್ಕಂತೆ ಇವುಗಳಲ್ಲಿ ತನಗೆ ಬೇಕಾದುದನ್ನು ಆರಿಸಿಕೊಂಡ. ಈ ನಿರಂತರ ಕ್ರಿಯೆಯಲ್ಲಿ ತನಗೆದುರಾದ ಜಗತ್ತನ್ನು ಸೂಕ್ಮವಾಗಿ, ಕೂಲಂಕುಶವಾಗಿ ಪರಿಶೀಲಿಸತೊಡಗಿದ. ಹೇಗೆ ಬರಿಗಣ್ಣಿಗೆ ಅಸಾಧ್ಯವಾದ ವಸ್ತುವೈಶಿಷ್ಟ್ಯವು, ಭೂತಗನ್ನಡಿಯ ಸಹಾಯದಿಂದ ಸುಲಭಸಾಧ್ಯವಾಗುವುದೋ, ಹಾಗೆಯೆ ಇವನಿಗೆ, ಈ ಜಗದ್ವ್ಯಾಪಾರದ ಅಂತರಾರ್ಥಗಳನ್ನು ತಿಳಿದು, ಸಾಧನೆಯನ್ನು ಸಿದ್ಧಿಯನ್ನು ಸಾಧಿಸಲು "ಬುದ್ಧಿ" ಹಾಗು "ಬಾವ"ಗಳ ಭೂತಗನ್ನಡಿಗಳ ಅವಶ್ಯಕತೆಯನ್ನು ಕಂಡುಕೊಂಡ. ಮೊದಮೊದಲು ಅನುಭವ ಸಂಸ್ಕಾರದಿಂದ ಸಂಮೃದ್ಧಗೊಂಡ ಜ್ಞಾನಕೋಶ, ಕಾಲಪಥದಲ್ಲಿ ಸಾಗುತ್ತ ಅನುಭಾವ ಸಂಸ್ಕಾರದಿಂದಲೂ ಮತ್ತಷ್ಟೂ ಪಕ್ವಗೊಂಡಿತು. ಬಹಿರಂಗವಾಗಿ ಗ್ರಾಹ್ಯವಾಗುವ ಪ್ರಾಪಂಚಿಕ ಅನುಭವಗಳು, ಪ್ರಯೋಗಗಳು, ತರ್ಕಗಳು "ಬುದ್ಧಿ" ರೂಪ ಪಡೆದು ಮಿದುಳನ್ನು ಅಲಂಕರಿಸಿದರೆ. ಮನಸ್ಸಿನ ಅಂತರಂಗಕ್ಕೆ ಗೋಚರವಾದ ಅತೀಂದ್ರಿಯ ಜ್ಞಾನವು "ಅನುಭಾವ" ರೂಪಪಡೆದು ಮಾನವ ಹೃದಯವನ್ನು ಅಲಂಕರಿಸಿತು. ಈ ಮಾನವ ಭವಸಾಗರದಲ್ಲಿ ತನ್ನ ಜೀವನ ನೌಕೆಯನ್ನು ತಿಳಿಸರೋವರಗಳಲ್ಲದೆ, ರುದ್ರಸಾಗರಗಳಲ್ಲೂ ಸಾಗಿಸಬೇಕಾದುದರಿಂದ, ಈ ಎರೆಡೂ ಜ್ಞಾನರೂಪಗಳನ್ನು ಕಾಲಕ್ಕಣುಗುಣವಾಗಿ ಸಪ್ರಮಾಣದಲ್ಲಿ ಉಪಯೋಗಿಸಿ, ತನ್ನ ಗುರಿಯನ್ನು ಮುಟ್ಟುವ ಸಾಧಕನಾಗುವನು.
ಜೀವನದ ಸಮನ್ವಿತ ಬಾಳುಗೆಗೆ, ಅದರ ಸರ್ವತೋಮುಖ ಏಳಿಗೆಗೆ "ಬುದ್ಧಿ" ಜ್ಞಾನದ ಅವಶ್ಯಕತೆ ಎಷ್ಟಿದೆಯೊ, "ಬಾವ" ಜ್ಞಾನದ ಅವಶ್ಯಕತೆಯೂ ಅಷ್ಟೇ ಇದೆ. ಕ್ಲಿಷ್ಟವಾದ ವಿಚಾರಗಳನ್ನು, ತತ್ವಗಳನ್ನು, ಚಿಂತನೆಗಳನ್ನು ವಿಶ್ಲೇಷಿಸಿ, ಅದರಲ್ಲಿರುವ ತೊಡಕುಗಳನ್ನು ನಿವಾರಿಸಿ, ಅಸ್ಪಷ್ಟತೆಗಳನ್ನು ಸುಸ್ಪಷ್ಟಗೊಳಿಸುವುದೆ ಇವೆರಡರ ಪರಮ ಉದ್ದೇಶವಾಗಿವೆ. ಇದರ ಪರಿಣಾಮವಾಗಿಯೆ ಈವರೆಗೂ ಅನೇಕ ಸಿದ್ದಾಂತಗಳು, ವಿಚಾರ ಗ್ರಂಥಗಳು, ಚರಿತ್ರೆಗಳು, ಮಹಾಕಾವ್ಯಗಳು ಸೃಷ್ಟಿಯಾಗಿರುವುವು. ಇವೇ ಸಂಕಷ್ಟದಲ್ಲಿರುವ ಮನಗಳಿಗೆ ದಾರಿದೀಪಗಳಾಗಿವೆ. ಹಿಂದೆ ಯಾವುದೋ ಕಾಲದಲ್ಲಿ ವಿಚಕ್ಷುವೋರ್ವನ ಚಿತ್ತಗರ್ಭದಲ್ಲಿ ಜನ್ಮತಾಳಿದ ಜ್ಞಾನ ಚಿಲುಮೆಯೊಂದು, ಯುಗ ಯುಗಗಳು ಅವ್ಯವಚಿನ್ನವಾಗಿ ಅನೇಕ ಚೇತನಚಿತ್ತಗಳಲ್ಲಿ ಹರಿಯುತ್ತ ಸಾಗುತ್ತದೆ. ಹೀಗೆ ಹರಿಯುತ್ತಿರುವ ಜ್ಞಾನವಾಹಿನಿಯ ಸೆಳತಕ್ಕೆ ಸಿಕ್ಕ ನೂತನ ಚೇತನದ ಅಂತರಂಗವೊಂದು, ಅದರ ಸಂಪೂರ್ಣ ರಸಸತ್ವವನ್ನು ಹೀರಿ, ತನ್ನ ಕ್ರಿಯಾಶೀಲತೆಯ ಕಡಗೋಲಿನಿಂದ ಮಂಥಿಸಿ, ತಾನು ಕಂಡ ದರ್ಶನವನ್ನು ವಿವಿಧ ವಿಶಿಷ್ಟ ರೀತಿಗಳಲ್ಲಿ ಹೊರಚೆಲ್ಲುತ್ತದೆ. ಹೀಗೆ ಉದ್ಭವಿಸಿದ ಒಂದು ಜ್ಞಾನಚಿಲುಮೆಯೆ "ಸತ್ಯಂ ಶಿವಂ ಸುಂದರಂ" ಎನ್ನುವ ಮಹೋನ್ನತ ತತ್ವದರ್ಶನ. ಇದರ ಸೆಳತಕ್ಕೆ ಸಿಕ್ಕಿ, ಆ ದರ್ಶನವನ್ನು ತಾನು ಪಡೆದು, ಸೃಜಿಸಿದ ಒಂದು ಮನೋಹರ ಗೀತೆಯೆ "ಆನಂದಮಯ ಈ ಜಗ ಹೃದಯ".
"ಸತ್ಯಂ ಶಿವಂ ಸುಂದರಂ" ಒಂದು ಅಧ್ಯಾತ್ಮಿಕ ಸಾಕ್ಷಾತ್ಕಾರದ ರೂಪ. ಅದರಂತೆ ಈ ವಿಶ್ವವೇ ಸತ್ಯಮಯ, ಶಿವಮಯ ಹಾಗು ಸುಂದರವಾಗಿದೆ. ಸರ್ವವೂ ( ವಿಶ್ವ) ಸತ್ಯಮಯವಾಗಿದೆ. ಹಾಗಾದರೆ ಸತ್ಯ ಎಂದರೇನು? ಸತ್ಯವು ನಮ್ಮ ಸಾಮನ್ಯ ನೋಟಕ್ಕೆ, ದಿನನಿತ್ಯದ ಅನುಭವಗಳಿಗೆ ಸಿಗುವ ಪ್ರಾಪಂಚಿಕ ವಸ್ತುನಿಷ್ಟ ಸ್ಥಿತಿಯಲ್ಲ. ಒಂದು ಅಭಿಪ್ರಾಯವಲ್ಲ. ಒಂದು ಪರಿಕಲ್ಪನೆಯಲ್ಲ. ಐತಿಹ್ಯವಾಗಿ ಬಂದ ಜ್ಞಾನದೃಷ್ಟಿಗೆ ಸಿಗುವ ದೃಷ್ಟಿಯಲ್ಲ. ಒಂದು ಪ್ರಯೋಗದಿಂದ ಯಶಸ್ವಿಯಾಗಿ ಹೊರಬಂದ ಫಲಿತಾಂಶವಲ್ಲ. ಸತ್ಯವು - ಯಾವ ತರ್ಕ, ಚಿಂತನೆ, ಕಲ್ಪನೆ, ಪ್ರಯೋಗಗಳ ಪರಿಮಿತಿಗೆ ಒಳಪಡದೆ, ಸ್ವಯಂಭೂವಾಗಿರುವ ಒಂದು ನಿರ್ಲಿಪ್ತ ಅಸ್ಥಿತ್ವ. ಒಂದು ಕೇವಲ ಸ್ಥಿತಿ. ಯಾವುದೇ ನಿಯಮಗಳಿಗೆ, ನಿರ್ಬಂಧಗಳಿಗೆ ಅಧೀನವಾಗಿರದ, ಶುಭ್ರ, ಶುದ್ಧ ಸ್ಥಿತಿಯಲ್ಲಿರುವ ಲೋಕ. ನಾವು ಕಲ್ಪಿಸಿಕೊಂಡು ಜೀವಿಸುತ್ತಿರುವ, ನಮ್ಮ ಇಂದಿನ ಜ್ಞಾನಕೋಶದಲ್ಲಿ ಅರ್ಥನಿರ್ಮಿತವಾಗಿರುವ ಪರ್ಯಾಯಲೋಕವಲ್ಲ. ಇಂತಹ ಪರಿಶುದ್ಧ ಲೋಕದ ಪೂರ್ಣತೆಯನ್ನು ಅನುಭವಿಸಿದ ಕವಿ ಅದನ್ನು "ಆನಂದಮಯ" ಎಂದು ಹೇಳಿದ್ದಾನೆ.
ಆನಂದಮಯ ಈ ಜಗ ಹೃದಯ ಏತಕೆ ಭಯ? ಮಾಣೊ!!
ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ!!
ಎಂದು, ಮಾನುಷ ಸಮಾಜ, ಸಂಸಾರದಲ್ಲಿ, ಲೌಕಿಕ ಜೀವನದೊಳಗೆ ದಿನನಿತ್ಯ ತಲೆದೋರುವ ಭಯ, ಆತಂಕ, ಕಷ್ಟ, ಕೋಟಲೆಗಳ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವ ಸಾಮಾನ್ಯ ಹೃದಯಗಳಿಗೆ, ಜಗದ ಹೃದಯ ಸತ್ಯತೆಯನ್ನು ಕಾಣುವಂತೆ ಧೈರ್ಯವನ್ನು, ಸಮಾಧಾನವನ್ನು ತುಂಬುತ್ತಿದ್ದಾನೆ.
ಈ ವಿಶ್ವವನ್ನು ಸೃಷ್ಟಿಸಿ, ಸಲಹಿ, ಸಮತೋಲನದಲ್ಲಿಟ್ಟಿರುವ ಆ ದಿವ್ಯಶಕ್ತಿಯ ಸತ್ಯರೂಪವನ್ನು, ಮಾನವ ನಿರ್ಮಿತ ಮಾಯಾಲೋಕದ ಪರದೆಯಿಂದಾವೃತವಾದ ಬರಿಗಣ್ಣಿನಿಂದ, ಕಾಣಲು ಸಾಧ್ಯವಿಲ್ಲ. ಶುಭ್ರ್‍ಅ, ಪ್ರಶಾಂತ, ಪಕ್ವ ಮನಸ್ಸಿನ , ಗಂಭೀರ ಅಂತರ್ದೃಷ್ಟಿಗೆ ಅದರ ನಿರ್ಮಲ ಸತ್ಯತೆ ಗೋಚರವಾಗುವುದು. ಬಹಿರ್ಘಟನೆಗಳ ಹಿಂದೆ ಗುಪ್ತಗಾಮಿನಿಯಂತೆ ಹರಿಯುತ್ತಿರುವ ಆ ನಿತ್ಯಸತ್ಯವು ಮನೋಗ್ರಾಹ್ಯವಾಗುವುದು. ಪಕ್ವಗೊಂಡ ಋಜು ಮನಸ್ಸಿಗೆ, ಬುದ್ಧಿಯೆಂಬ ತೈಲದ ಸಹಾಯದಿಂದ ಉರಿಯುತ್ತಿರುವ ಭಾವಜ್ಯೋತಿಯ ಸುಪ್ರಭೆಯ ಬೆಳಕಿನಲ್ಲಿ, ಆ ವಿಶ್ವಸತ್ಯದ ದರ್ಶನ ಲಭ್ಯವಾಗುವುದು. ವಿಶ್ವ ಹೃದಯದಿಂದ ಉಗಮವಾದ ಸತ್ಯ ಸಂಕೇತಗಳು, "ಬಾವ" ಮಾಧ್ಯದ ಮೂಲಕ ಅನುಭಾವಿಯ ಹೃದಯ ಗುಡಿಯನ್ನು ಯಥಾರೂಪ ತಲುಪಿ, ಅಲ್ಲಿ ಸಾಕ್ಷಾತ್ಕಾರದ ಪ್ರತಿಷ್ಠಾಪನೆಯಾಗುವುದು. ಇಂತಹ ಚಿನ್ಮಯ ಸಾಕ್ಶಾತ್ಕಾರವನ್ನು ಅನುಭವಿಸುವ ಕ್ರಿಯೆಯೆ "ಶಿವಂ". ಶಿವಂ ಎಂದರೆ ಮಂಗಳಕರವಾದುದು, ಸೌಶೀಲ್ಯಪೂರ್ಣವಾದುದು, ಶ್ರ್‍ಏಷ್ಠವಾದುದು. "ಸತ್ಯಂ ಶಿವಂ". ಅಂದರೆ ಪರಮಸತ್ಯವು ಮಂಗಳಕರವೂ, ಉತ್ಕೃಷ್ಟವೂ ಆಗಿದೆಯೆಂದರ್ಥ. ಆದುದರಿಂದಲೇ, ಸತ್ಯವನ್ನು ಅನುಭವಿಸುವುದು, ಅದನ್ನೇ ಜೀವಿಸುವುದು ಶಿವಂ ಆಗಿದೆ(ಮಂಗಳಕರವಾಗಿದೆ). ಶಿವಂ ಸತ್ಯದ ಕ್ರಿಯಾರೂಪ. ನಮ್ಮ ಜೀವನದ ಸತ್ಯ, ನಮ್ಮ ನೋಟದಲ್ಲಿರುವ ಸತ್ಯ, ನಮ್ಮ ಹೃದಯದಲ್ಲಿರುವ ಸತ್ಯ. ಸ್ನೇಹ, ಪ್ರೀತಿ, ವಿಶ್ವಾಸ, ವಾತ್ಸಲ್ಯ, ನಡೆ, ನುಡಿಗಳಲ್ಲಿರುವ ಸತ್ಯ. "ಈಶಾವಾಸ್ಯಮಿದಂ ಸರ್ವಂ" ಎಂಬ ಲೋಕೋಕ್ತಿಯ ಅಂತರಾರ್ಥವು ಇದಕ್ಕೆ ಪೂರಕವಾಗಿದೆ. ಇದರ ದರ್ಶನಸಾರವೇ ಕವಿಸೃಷ್ಟಿಯಲ್ಲಿ ಹೀಗೆ ಮೂಡಿಬಂದಿದೆ...
ಸೂರ್ಯನು ಬರಿ ರವಿಯಲ್ಲವೂ. ಆ ಭ್ರಾಂತಿಯ ಮಾಣೋ !
ರವಿವದನವೆ ಶಿವಸದನವೋ, ಬರಿ ಕಣ್ಣದೋ ಮಣ್ಣೋ!
ಅಂದರೆ, ಸೂರ್ಯನು ನಾವು ಕಾಣುತ್ತಿರುವ ಹಾಗೆ ಕೇವಲ ಒಂದು ಬೆಳಕು ಕೊಡುವ ವಸ್ತುವಲ್ಲ. ಆ ರವಿಯ ವದನವೆ ಶಿವನ ಮನೆಯಾಗಿದೆ. ಬೆಳಕು ಕೊಡುವ ಅವನ ಅಸ್ಥಿತ್ವ, ಬೆಳಕು ಕೊಡುವುದುಕ್ಕಿಂತಲೂ ಮಹತ್ತರವ್ವೂ, ದಿವ್ಯ ವಿಶೇಷವೂ ಆಗಿದೆ. ಈ ಮಹತ್ವದ ಹಿಂದಿರುವ ಶಕ್ತಿಯನ್ನು ಕಂಡು ನಾವು ಕೃತಜ್ಞತೆಗಳನ್ನರ್ಪಿಸುವಂತಾಗಬೇಕು. ಜಗಹೃದಯದ ಸತ್ಯವನ್ನು, ಅದರ ಮಂಗಳ ರೂಪವನ್ನು ಅರಿತಾಗ, ನಾವು ನೋಡುವ ನೋಟ, ಕಾಣುವ ದರ್ಶನ, ಅನುಭವಿಸುವ ಪ್ರತಿಕ್ಷಣ, ಕೇಳುವ ಗಾನ, ನುಡಿವ ಮಾತು, ಸೃಷ್ಟಿಸುವ ಕಾವ್ಯ, ಶಿಲ್ಪ, ಚಿತ್ರ, ಕಲೆ, ಕಾರ್ಯಸಾಧನೆಗಳು ಮಂಗಳವನ್ನು(ಶುಭ) ಪ್ರತಿಫಲಿಸುತ್ತದೆ. ನಮ್ಮ ಪ್ರತಿಯೊಂದು ಚಿಂತನೆಯಲ್ಲೂ, ಕ್ರಿಯೆಯಲ್ಲೂ, ಬಾವನೆಗಳಲ್ಲೂ ಸಂಪೂರ್ಣತೆ ಆವಿರ್ಭವಿಸುತ್ತದೆ. ಈ ಸಂಪೂರ್ಣತೆಯೇ "ಸುಂದರತೆ" ಯನ್ನು ತರುತ್ತದೆ. "ಸತ್ಯಂ ಶಿವಂ ಸುಂದರಂ". ಇರುವ ಜಗತ್ತೇ ಸತ್ಯ. ಸತ್ಯವನ್ನು ಅನುಭವಿಸಿ ಜೀವಿಸುವುದೇ ಶಿವಂ. ಈ ಅನುಭವಿತ ಜೀವತದಲ್ಲಿ ಕಾಣುವ ಸಂಪೂರ್ಣತೆಯೇ ಸುಂದರಂ. ಸತ್ಯವನ್ನು ಕಂಡವನು ಸೌಂದರ್ಯವನ್ನೂ ಕಾಣುತ್ತಾನೆ. ಈ ದರ್ಶನಕೆ ಬೇಕಾಗಿರುವುದು ವಿಶಾಲ, ನಿರಂಕುಶ, ಹೃದಯವಂತಿಕೆ. ಸಂಕುಚಿತ, ಕುಟಿಲ, ನಿರರ್ಥಕ ಹೃದಯವಲ್ಲ. ಧೀರ, ಸುಶೀಲಪೂರ್ಣ, ಅಭಿಜ್ಞತೆ. ಮಂಕುಕವಿದ, ಭೀತಿ, ಮತ್ಸರಯುಕ್ತ, ಮೌಡ್ಯ ಗ್ರಸ್ತ ಬುದ್ಧಿಯಲ್ಲ. ಹೃದಯದ ಬಾಗಿಲುಗಳನ್ನು ಸುಜ್ಞಾನದ ಹೊಂಬೆಳಕಿಗೆ ತೆರದು, ಕಾತುರ ತನ್ಮಯದಿಂದ ಕಾದಿರುವ ಮನಸ್ಸು. ಬಾಗಿಲುಗಳನ್ನು ಮುಚ್ಚಿ, ಒಳಗೇ ಜಡಲೋಕಗಳನ್ನು ಕಟ್ಟಿಕೊಂಡು ಸೊರಗುತ್ತಿರುವ ದುರ್ಬಲ ಮನಸ್ಸಲ್ಲ. ಅದಕ್ಕೇ ಕವಿ,
ಶಿವನಿಲ್ಲದೇ ಸೌಂದರ್ಯವೇ, ಶವಮುಖದ ಕಣ್ಣೋ.
ಉದಯದೊಳೇನ್? ಹೃದಯವ ಕಾಣ್, ಅದೆ ಅಮೃತದ ಹಣ್ಣೋ!
ಶಿವಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ!
ಎಂದು ಹೇಳಿರುವುದು. ಹೌದು ಶಿವವಿಲ್ಲದ ಸೌಂದರ್ಯ ನಿಸ್ತೇಜ ಶವಮುಖದಂತೆ. ಶಿವನಿಲ್ಲದ ರೂಪ ವಿರೂಪ. ಶಿವನಿಲ್ಲದ ಅರ್ಥ ನಿರರ್ಥಕ. ಸುಪ್ರಭಾತದ ಸುಘಳಿಗೆಯಲ್ಲಿ, ಜಗದ ಅಂಧಕಾರವನ್ನು ಅಳಿಸಿ, ತನ್ನ ಹೊಂಗಿರಣಗಳ ದಿವ್ಯ ಪ್ರಭೆಯಿಂದ ಜಗವನ್ನೇ ತೋಯಿಸುತ್ತಿರುವ ಸೂರ್ಯೋದಯದಲ್ಲಿ, ವಿಶ್ವಹೃದಯದ ಸೌಂದರ್ಯವನ್ನು ಕಾಣು. ಅದೇ ಅಮೃತ ಸ್ವರೂಪವೆಂಬ "ಸತ್ಯ" ವನ್ನು ತಿಳಿ ಹೇಳಿದ್ದಾನೆ. ಶಿವಕಾಣದ ಕವಿ ಕುರಡನು, ಶಿವನೇ ಅವನ ಕಾವ್ಯದ ಕಣ್ಣಾಗಿರುವದೆಂದು ತನ್ನ ದರ್ಶನ ಸತ್ಯವನ್ನು ಸಾರಿದ್ದಾನೆ. ಶಿವನನ್ನು ಕಾಣದೆ, ಸತ್ಯವನ್ನು, ಸೌಂದರ್ಯವನ್ನು ಕಾಣಲಾಗದು. ಅಂತಹ ಅಂಧತೆಯಲ್ಲಿ ಮೂಡುವ ಕವಿಕೃತಿ ಸತ್ಯಕ್ಕೆ ದೂರವಾದು ಎಂದು ಲೋಕಕ್ಕೆ ತಿಳಿಸಿದ್ದಾನೆ. ಇಲ್ಲಿ ಕವಿಯು ಹೇಳಿರುವ "ಕವಿಕೃತಿ"ಯ ವಿಚಾರ, ಜನಜೀವನದ ದಿನನಿತ್ಯದ ವ್ಯಾಪಾರಗಳ, ಅನುಭವ ವಿಚಾರಗಳ, ಚಿಂತನೆ, ತರ್ಕಗಳ ಸಾದೃಶ್ಯವನ್ನು ಪಡೆಯುತ್ತದೆ. ಅಂದರೆ, ಸರ್ವರೂ ತಮ್ಮ ಚಿಂತನೆಗಳಲ್ಲಿ, ನಿತ್ಯ ಕಾರ್ಯಕ್ರಿಯೆಗಳಲ್ಲಿ "ಸತ್ಯ" ವನ್ನು ಸಾಕ್ಷತ್ಕರಿಸಿಕೊಂಡು, ಅದನ್ನು ಅನುಭವಿಸಿ, ದರ್ಶಿಸಿ "ಶಿವ" ವನ್ನು (ಶುಭವನ್ನು) ಸಾರ್ಥಕಗೊಳಿಸಿಕೊಳ್ಳಬೇಕು. ಆಗ ಅವರ ಹೃನ್ಮನಗಳಲಿ "ಸುಂದರತೆಯು" ಆವಿರ್ಭವಿಸಿ, ಆನಂದದ ಹೊನಲರಿವುದರಲ್ಲಿ ಸಂದೇಹವಿಲ್ಲ.
Comments
ಬಿ ಸಿ ಶೇಖರರೇ, ಸತ್ಯಂ ಶಿವಂ
In reply to ಬಿ ಸಿ ಶೇಖರರೇ, ಸತ್ಯಂ ಶಿವಂ by lpitnal@gmail.com
ಲೆಕನವನ್ನು ಓದಿರುವೆದಕ್ಕೆ, ಹಾಗು