ಮುನಿಯೂ..ಇಲಿಮರಿ ಮದುವೆಯೂ..

ಮುನಿಯೂ..ಇಲಿಮರಿ ಮದುವೆಯೂ..

ಕವನ

 

ಪಂಪಾ ತಟದ ಅಟವಿಯ ಕುಟೀರದಿ

ಪಿಂಪಲ ಮುನಿಗಳು ಧ್ಯಾನದಳೊರಿಲು

ಕೆಂಪಿಲಿ ಮರಿಯನು ಕಾಗೆಯು ಹೆದರಿಸೆ

ಹಿಂಸೆಯ ಸಹಿಸದೆ ಭಯದಲಿ ಚೀರಲು

ಕರುಣದಿ ಮುನಿಗಳು ಕಾಗೆಯ ಓಡಿಸಿ

ಕನಿಕರ ತೋರುತ ಕರದಲಿ ಪಿಡಿಯುತ

ಮಂತ್ರದ ಜಲವನು ಮಂತ್ರಿಸಿ ಪ್ರೋಕ್ಷಿಸೆ

ಮೂಷಿಕ ಮರಿಯದು ಅಂದದ ಕುವರಿಯ

ಮಾನವ ರೂಪವ ತಳೆದುದು ನಿಮಿಷದಿ    || 1 ||

 

ಮುನಿಗಳ ಮುದ್ದಿನ ತರಳೆಯು ಬೆಳೆದಳು

ಮನದಲಿ ಮಗಳ ಮದುವೆಯ ಯೋಚನೆ

ದಿನಗಳು ಕಳೆಯಲು ಇಳೆಯಲೆ ಸುಂದರಿ

ಕರಗಳ ಪಿಡಿಯುವ ವರನನು ಹುಡುಕುವ

ಮೊದಲಲಿ ಮುನಿಗಳು ಮಗಳನು ಕೇಳಲು

ನಾಚುತ ಉಲಿದಳು ನೆಲವನು ಕೊರೆಯುತ

ಯಾರಿಗು ಸೋಲದ ತ್ರಿಭುವನ ಮಲ್ಲನೆ

ನನ್ನನು ವರಿಸುವ ನಲ್ಲನು ಎನ್ನುತ

ವರಸೆಯ ವರನನು ಹುಡುಕಿರಿ ಎಂದಳು || 2 ||

 

ಪ್ರಭಾತ ಭಾಸ್ಕರ ಭೂಮಿಯ ಬೆಳಗಲು

ಪ್ರಖರ ಕಿರಣವ ಸೂಸುವ ಸೂರ್ಯನ

ಸೋಲಿಸಲಾರರು ಸುಲಭದಿ ಬಲದಲಿ

ಸೂರ್ಯನೆ ಮಗಳಿಗೆ ಮದುವೆಯ ಮಲ್ಲನು

ಮುನಿಗಳು ಕರೆಯಲು ದಿನಕರ ಬಂದನು

ಪುತ್ರಿಗೆ ತೋರಿಸಿ ಮಿತ್ರನ ಎದುರಿಸೊ

ಧೀರರ ಕಾಣೆನು ಧರೆಯೊಳು ಮಗಳೆ

ಮೋಡವು ಕವಿಯಲು ಕಾಣೆನು ನಾನು

ಮೇಘನೆ ಅಧಿಕನು ಮೌನದಿ ನಮಿಸಿದ 

ಮಿತ್ರನ ಹರಸಿ ಕಳುಹಿದ ಮುನಿಗಳು  || 3 ||

 

ಕರೆದರು ಮೋಡವ ಮಗಳಿಗೆ ತೋರಲು

ವಂದಿಸಿ ನಿಂದನು ಮೇಘನು ಮುನಿಗೆ

ಮದುವೆಯ ಮಲ್ಲನು ನೀನೆ ಎನ್ನಲು

ಥರಥರ ನಡುಗುವೆ ಗಾಳಿಯ ಹೊಡೆತಕೆ

ತರಗೆಲೆಯಾಗುವೆ ವಾಯುವಿನೆದುರಲಿ

ನಮಿಸಿದ ಮೋಡನು ಮೌನದಿ ನಡೆದನು || 4 ||

 

ಮರುತನ ಕರೆದನು ಮುನಿವರ ಮದುವೆಗೆ

ವಾಯುವು ವಂದಿಸಿ ಸುಳಿದನು ಮುನಿಬಳಿ  

ಹಿಮವಂತನೆ ಬಲವಂತನು ಮುನಿಗಳೆ

ಗಿರಿಗಳು ನನ್ನಯ ದಾರಿಗೆ ಸಿಕ್ಕರೆ

ಗಿರಗಿರ ಸುತ್ತುತ ಹಿಂದಕೆ ಓಡುವೆ

ಗಿರಿರಾಜನು ನಿಜದಿ ಅಧಿಕನು ಬಲದಿ || 5 ||

 

ಗಿರಿಯನು ಕರೆದನು ಮಗಳನು ವರಿಸಲು

ಮುನಿಗಳ ಮಾತಿಗೆ ಹೆದರಿದ ಗಿರಿಯು

ಮೂಷಿಕ ರಾಜನು ಬುಡವನೆ ಕೊರೆದು

ಬಲದಲಿ ಬಿಲವನು ತೋಡುವ ಇಲಿಯೆ

ಬಲವಂತನು ನಿಜದಿ ಎಂದನು ಗಿರಿಯು  || 6 ||

 

ಮೌನದಿ ಮುನಿಗಳು ಸಮ್ಮತಿ ಸೂಚಿಸಿ

ಮೂಷಿಕ ರಾಜನ ಕರೆದರು ಮುನಿಗಳು

ಇಲಿಯನು ನೋಡಲು ಮಗಳಿಗೆ ಹೇಳಲು

ನೋಡಿದ ಕೂಡಲೆ ಮಿನುಗಿದ ಮುಖದ

ಮಗಳನು  ನೋಡಿದ ಮುನಿಗಳು ನಗೆಯಲಿ

ಮಂತ್ರಿಸಿ ಮರಳಿ ಇಲಿಯನು ಮಾಡುತ

ಮದುವೆಯ ಮಾಡಿ ಇಲಿಗಳ ಹರಸುತ

ಹುಟ್ಟುಗುಣ ಸುಟ್ಟರು ಬಿಡದೆನ್ನುತ

ಮುಗುಳ್ನಗೆಯಲಿ ಬೀಳ್ಕೊಟ್ಟರು ಇಲಿಗಳ || 7 ||

ವಿಷ್ಣುಶರ್ಮರ ಪಂಚತಂತ್ರ ಕಥನದ

ಜಯಪ್ರಕಾಶಿತ ರಂಜಿತ ಕವನ

ಕನ್ಡಡ ಕಣ್ಮಣಿಗಳೆ ನಮನ  || 8 ||

 

Comments

Submitted by venkatb83 Tue, 10/16/2012 - 17:35

ಜಯ ಪ್ರಕಾಶ್ ಅವ್ರೆ-
ಬಹು ದಿನಗಳ ನಂತರ ಒಂದು ಅತ್ಯುತ್ತ್ತಮ ಕಾವ್ಯ-
ಮಕ್ಕಳು ಮರಿ ಎನ್ನದೆ ಹಿರಿಯರೂ ಮತ್ತೊಮ್ಮೆ ತಮ್ಮ ಪ್ರಾಥಮಿಕ ಶಾಲಾ ದಿನಗಳ ರೈಮ್ಸ್ ಹಾಡುಗಳು - ಅವುಗಳ ನೆನ್ಪಿನತ್ತ ಜಾರುವ ಹಾಗೆ ಮಾಡಿದಿರಿ..
ಪದ್ಯ ತುಂಬಾ ಚೆನ್ನಾಗಿದೆ.. ಅಲ್ಲಲ್ಲಿ ವ್ಯಾಕರಣ ದೋಷಗಳು ಇದ್ದರೂ ಅದೇನೂ ಓದಿಗೆ ಅಡ್ಡಿಯಾಗಿಲ್ಲ..
ಪಂಚತಂತ್ರದ ಕಥೆಯೊಂದನ್ನು ಕಾವ್ಯರೂಪಕ್ಕೆ ಸಮರ್ಥವಾಗಿ -ಸಖತ್ತಾಗಿ ಇಳಿಸಿರುವಿರಿ...
ಪದ್ಯವನ್ನು ಕಲ್ಪಿಸಿಕೊಂಡೆ ಓದಿದೆನಾದ್ದರಿಂದ ಭಲೇ ಮಜವಾಗಿತ್ತು..
ಹಂಪೆಯ ತಟ ಕಣ್ಣ ಮುಂದೆ ಬಂತು..
ನಿಮ್ಮಿಂದ ಇನ್ನಸ್ಟು ಬರಹಗಳನ್ನು ಸದಾ ನಿರೀಕ್ಷಿಸುತ್ತ
ಶುಭವಾಗಲಿ..

\|

Submitted by jayaprakash M.G Tue, 10/16/2012 - 19:03

In reply to by venkatb83

ವೆಂಕಟೇಶ ರವರಿಗೆ ವಂದನೆ, ( ಧ್ಯಾನದೊಳಿರಲು) ಆಗಬೇಕು ಬದಲಾವಣೆಯ ಪ್ರಯತ್ನ ಫಲಿಸಲಿಲ್ಲ.ವ್ಯಾಕರಣ ದೋಷಗಳನ್ನು ತಿಳಿಸಿದಲ್ಲಿ
ತಿದ್ದಿಕೊಳ್ಳಲು ಅನುಕೂಲ ದಯವಿಟ್ಟು ತಿಳಿಸಿ. ಮತ್ತೊಮ್ಮೆ ನಿಮ್ಮ ಪ್ರೋತ್ಸಾಹಕ್ಕೆ ವಂದನೆ.
ಜಯಪ್ರಕಾಶ