ಸಕ್ಕರೆ ಹೋಳಿಗೆ (ಅತ್ತೆಮನೆಯಲ್ಲಿ ಕಲಿತ ಮೊದಲ ಪಾಕ)

ಸಕ್ಕರೆ ಹೋಳಿಗೆ (ಅತ್ತೆಮನೆಯಲ್ಲಿ ಕಲಿತ ಮೊದಲ ಪಾಕ)

ಚಿತ್ರ

ಎಲ್ಲ ಆತ್ಮೀಯ ಸಂಪದದ ಮಿತ್ರರಿಗೆ ಸೀಮಾ ಜೋಶಿ ಮಾಡುವ ನಮಸ್ಕಾರಗಳು ಹಾಗೂ ದಸರಾ ಹಬ್ಬದ ಶುಭಾಶಯಗಳು.

     'ಸಕ್ಕರೆ ಹೋಳಿಗೆ' ನಮ್ಮ ಅತ್ತೆಯಿಂದ ನಾನು ಕಲಿತ ಮೊದಲ ಪಾಕ. ದಸರಾ ಹಬ್ಬ ಶುರುವಾಗುವುದರಿಂದ ಅದನ್ನು ಮಾಡುವ ವಿಧಾನವನ್ನು ನಿಮ್ಮ ಜೊತೆ ಹಂಚಿಕೊಳ್ಳೋಣವೆಂದು ಅನಿಸಿತು. ಸಕ್ಕರೆ ಹೋಳಿಗೆ ಮಾಡಲು ಬೇಕಾಗುವ ಸಾಮಗ್ರಿಗಳು ಯಾವುವೆಂದರೇ,

1) ಮೈದಾ ಹಿಟ್ಟು-2 ಬಟ್ಟಲು,

2) ಚಿರೋಟಿ ರವೆ- 1/2 ಬಟ್ಟಲು,

3) ತುಪ್ಪ-4 ಚಮಚ,

4) ಹಾಲು- ಅಗತ್ಯಕ್ಕನುಗುಣವಾಗಿ,

5) ಪುಡಿ ಸಕ್ಕರೆ- 1 ಬಟ್ಟಲು

6) ಕಳಿತ ಬಾಳೆಹಣ್ಣು-1

7) ಎಲಕ್ಕಿ ಪುಡಿ,

8) ಗಸಗಸೆ- 2 ಚಮಚ (ಹುರಿದಿದ್ದು).

ಮಾಡುವ ವಿಧಾನ: ಮೊದಲನೆಯದಾಗಿ 1 1/2 ಬಟ್ಟಲು ಮೈದಾ ಹಿಟ್ಟು, ಚಿರೋಟಿ ರವೆಯನ್ನು 2 ಚಮಚ ತುಪ್ಪ ಹಾಗೂ ಹಾಲಿನೊಂದಿಗೆ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೆತ್ತಗಿನ  ಹದಕ್ಕೆ ಕಲೆಸಿಕೊಳ್ಳಬೇಕು. ಕಲೆಸಿದ ಹಿಟ್ಟನ್ನು 2-3 ಗಂಟೆಗಳ ಕಾಲ ನೆನೆಯಲು ಬಿಟ್ಟು. ನಂತರ ಶಾವಿಗೆ ಹಿಟ್ಟನ್ನು ಕುಟ್ಟುವ ಹಾಗೆ ಕುಟ್ಟಿ ಹದ ಮಾಡಿಕೊಳ್ಳಬೇಕು. ಉಳಿದ 1/2 ಬಟ್ಟಲು ಮೈದಾ ಹಿಟ್ಟನ್ನು 2 ಚಮಚ ತುಪ್ಪದಲ್ಲಿ ಸ್ವಲ್ಪ ಕೆಂಪಗಾಗುವಂತೆ ಹುರಿದುಕೊಂಡು ಅದು ಆರಿದ ನಂತರ ಪುಡಿ ಸಕ್ಕರೆ, ಹುರಿದ ಮೈದಾ, ಎಲಕ್ಕಿ ಪುಡಿ ಗಸಗಸೆ ಎಲ್ಲವನ್ನು ಕಳಿತ ಬಾಳೆಹಣ್ಣಿನೊಂದಿಗೆ ಕಲಸಿ ಸ್ವಲ್ಪ ಗಟ್ಟಿಯಾದ ಹೂರಣವನ್ನು ಮಾಡಿಕೊಳ್ಳಬೇಕು.

ಹದಗೊಂಡ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ (ಉಳ್ಳಿಗಳನ್ನು) ಮಾಡಿಕೊಂಡು ಎರಡು ಉಂಡೆಗಳನ್ನು ಹಿಟ್ಟಿನಲ್ಲಿ ಮುಳುಗಿಸಿ ಸ್ವಲ್ಪ ಸಣ್ಣ ಸಣ್ಣ ಹಾಳೆಗಳನ್ನು ಲಟ್ಟಿಸಿ ಅವುಗಳ ಮಧ್ಯೆ ಒಂದು ಹಿಟ್ಟಿನ ಉಂಡೆಯ ಪ್ರಮಾಣದಷ್ಟೇ ಗಾತ್ರದ ಹೂರಣವನ್ನು ಇಟ್ಟು ಅಂಚುಗಳನ್ನು ಗಟ್ಟಿಯಾಗಿ ಒತ್ತಿ ಮತ್ತೆ ಮೈದಾ ಹಿಟ್ಟಿನಲ್ಲಿ ಹೊರಳಿಸಿ ಸ್ವಲ್ಪ ದಪ್ಪಗೆ ಲಟ್ಟಿಸಿ ಕಾದ ಹಂಚಿನ ಮೇಲೆ ಹಾಕಿ ಎರಡು ಕಡೆಗೂ ಸ್ವಲ್ಪ ಎಣ್ಣೆ ಹಚ್ಚಿ ಕೆಂಪಗಾಗುವಂತೆ ಬೇಯಿಸಬೇಕು. ಒಂದು ಅಗಲವಾದ ತಟ್ಟೆಯಲ್ಲಿ ಹಾಕಿ ಆರಲು ಬಿಟ್ಟರೆ  ಗರಿಗರಿಯಾದ, ರುಚಿ ರುಚಿಯಾದ ಸಕ್ಕರೆ ಹೋಳಿಗೆಗಳು ತಿನ್ನಲು ಸಿದ್ದ. (ಹೂರಣದ ಹೋಳಿಗೆ ಮಾಡುವಂತೆ ಮಾಡುವುದಾದರೇ ಸಕ್ಕರೆ ಪುಡಿಯ ಅಳತೆ ಹಿಟ್ಟಿನ ಅಳತೆಗೆ ಸರಿಯಾಗಿರಬೇಕು)

ಸೂಚನೆ: ಸಕ್ಕರೆ ಹೋಳಿಗೆ ಮಾಡುವ ವಿಧಾನ ಅತ್ತೆಯ ಕೃಪೆ....!!
 

Rating
No votes yet

Comments

Submitted by ಗಣೇಶ Tue, 10/16/2012 - 23:39

ಹೋಳಿಗೆ ಮಾಡುವ ವಿಧಾನ ಚೆನ್ನಾಗಿದೆ. ನಿಮ್ಮ ಅತ್ತೆಯವರಿಂದ ಇನ್ನಷ್ಟು ತಿನಿಸುಗಳನ್ನು ಕಲಿತು ನಮಗೂ ಉಣಬಡಿಸಿ.
-ಗಣೇಶ.