ದಿಟ್ಟ ಪೋರಿಯ ವೀರ ಗಾಥೆ
ಮಲಾಲಾ. ನಾನು, ನೀವು ದಿನವೂ ನೋಡುವ, ಪುಸ್ತಕಗಳ ಹೊರೆಯೊಂದಿಗೆ ಕಣ್ಣುಗಳಲ್ಲಿ ಕನಸನ್ನು ಹೊತ್ತು ಶಾಲೆಯ ಕಡೆ ದೃಢ ಹೆಜ್ಜೆ ಇಡುವ ಬಾಲಕಿಯರ ಹಾಗೆ ೧೫ ವರ್ಷದ ಓರ್ವ ಹೆಣ್ಣು ಮಗಳು.
ಪಾಕಿಸ್ತಾನದ ರಮಣೀಯ ನಿಸರ್ಗ ಪ್ರಾಂತ್ಯ ‘ಸ್ವಾತ್’ ಕಣಿವೆ ಪ್ರದೇಶವನ್ನು ವಶಪಡಿಸಿ ಕೊಂಡಿದ್ದ ತಾಲಿಬಾನ್ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ ನಾಲ್ಕು ನೂರು ಮೈಲು ಗಳ ವರೆಗೆ ತಲುಪಿದ್ದರು. ಭಾರೀ ಹೋರಾಟದ ನಂತರ ಪಾಕಿ ಸೈನ್ಯ ತಾಲಿಬಾನಿಗಳನ್ನು ಹಿಮ್ಮೆಟ್ಟಿ ಕಣಿವೆಯನ್ನು ವಶ ಪಡಿಸಿಕೊಂಡಿದ್ದರು. ಆದರೂ ತಾಲಿಬಾನಿಗಳ ಪ್ರಭಾವ ಕಡಿಮೆಯಾಗಲಿಲ್ಲ. ಕಾದಾಟ ತಾಲಿಬಾನಿಗಳ ಕಸುಬು, ಅಸ್ತ್ರ ಶಾಸ್ತ್ರಗಳು ಇವರ ಆಹಾರ, ಮಾನವ ಸಂಸ್ಕಾರಕ್ಕೆ ವಿರುದ್ಧವಾದ ನಡವಳಿಕೆ ಇವರ ಉಸಿರು. ಇವೆಲ್ಲವೂ ಮಿಳಿತವಾದಾಗ ವಿಶ್ವಕ್ಕೆ ಲಭ್ಯ ಅರಾಜಕತೆ, ಕ್ರೌರ್ಯ, ಅಟ್ಟಹಾಸ. ಇವರನ್ನು ಬಲಿ ಹಾಕಲು ಪಾಕಿಸ್ತಾನದಿಂದ ಹಿಡಿದು ಅಂತಾರಾಷ್ಟ್ರೀಯ ಸಮುದಾಯದರೆಗೆ ಯಾರಿಗೂ ಇಚ್ಛೆಯಿಲ್ಲ. ಇದೂ ಒಂದು ರೀತಿಯ ರಾಜಕಾರಣ. ತಾನೇ ಪೋಷಿಸಿದ ಶಿಶು ರಾಕ್ಷಸನಾಗಿ ವರ್ತಿಸಲು ತೊಡಗಿದಾಗ ಅಮೇರಿಕಾ ಎಚ್ಚೆತ್ತು ಅವರನ್ನು ಹದ್ದು ಬಸ್ತಿಗೆ ತರಲು ಯತ್ನಿಸಿತು.
ಇದರ ನಡುವೆ ತಾಲಿಬಾನಿಗಳೊಂದಿಗೆ ಚರ್ಚೆ ಕೂಡಾ. ಏಕೆಂದರೆ ಇವರನ್ನು ಸಂಪೂರ್ಣ ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕೆಗೆ ಇತಿಹಾಸದ ಪಾಠಗಳು ನೆನಪು ಮಾಡುತ್ತವೆ. ಈ ದ್ವಂದ್ವಗಳ ನಡುವೆ ತಾಲಿಬಾನ್ ತನಗೆ ತೋಚಿದ ರೀತಿಯಲ್ಲಿ ವರ್ತಿಸುತ್ತದೆ. ಇವರಿಗೆ ಹೆಣ್ಣುಮಗಳು ಎಂದರೆ ಮನೆಯ ನಾಲ್ಕು ಗೋಡೆಗಳ ಮಧ್ಯೆ, ಶಿಕ್ಷಣ ಪಡೆಯದೇ ಬದುಕಬೇಕಾದ ಹೆರುವ ಯಂತ್ರಗಳು. ಯಾರಾದರೂ ಧೈರ್ಯ ಮಾಡಿ ಶಾಲೆಗೆ ಹೋಗುತ್ತೇವೆ ಎಂದರೆ ಮೊದಲು ಬೆದರಿಕೆ, ನಂತರ ಬಂದೂಕು. ಮಲಾಲಾ ಎನ್ನುವ ಪೋರಿಗೆ ಸಿಕ್ಕಿದ್ದು ಇವೆರಡು. ಬೆದರಿಕೆಗೆ ಸೊಪ್ಪು ಹಾಕದೆ ಶಾಲೆಯ ಕಡೆ ನಡೆಯುತ್ತಿದ್ದ ಈಕೆ ತಾಲಿಬಾನಿಗಳಿಗೆ ಕಣ್ಣುರಿ ತರುತ್ತಿದ್ದಳು. ಇಷ್ಟೊಂದು ಚಿಕ್ಕ ಹುಡುಗಿ ತಮ್ಮಂಥ ರಾಕ್ಷಸರನ್ನು ಎದುರಿಸುತ್ತಿದ್ದಾಳಲ್ಲ ಎಂದು. ಬೆದರಿಕೆ ಫಲಿಸದಾದಾಗ ಬಂದೂಕು ಚಲಾಯಿಸಿದರು. ತಲೆಯನ್ನ ಹೊಕ್ಕು ಹೊರಬಂದ ಗುಂಡು ಸಹ ಮಲಾಲಾ ಳನ್ನು ಕೊಲ್ಲಲು ನಿರಾಕರಿಸಿತು. ಅದ್ಭುತವಾಗಿ ಸಾವಿನಿಂದ ಪಾರಾದ ಮಲಾಲಾ ಹೆಚ್ಚುವರಿ ಚಿಕಿತ್ಸೆಗಾಗಿ ಲಂಡನ್ ಗೆ ಹೋಗಲು ಅರಬ್ ಸಂಯುಕ್ತ ಸಂಸ್ಥಾನಗಳ ಆಳುವ ಕುಟುಂಬದ ಕಡೆಯಿಂದ 'ಏರ್ ಅಂಬುಲೆನ್ಸ್' ನ ನೆರವು ಸಿಕ್ಕಿತು. ಈಕೆಯ ಚಿಕತ್ಸೆ ಫಲಕಾರಿಯಾಗಲು ಇಡೀ ವಿಶ್ವ ದೇವರನ್ನು ಬೇಡುತ್ತಿದೆ.
ಮಲಾಲಳ ಮೇಲಿನ ಹಲ್ಲೆಯನ್ನು ಖಂಡಿಸುತ್ತಾ ಪಾಕಿಸ್ತಾನದ ರಾಜಕಾರಣಿ ಹೇಳಿದ್ದು, ತಾಲಿಬಾನ್ ಕರಾಳ ಶಕ್ತಿಗಳ ಗುಂಪಾಗಿದ್ದು, ಧರ್ಮ ಸಂಸ್ಕಾರ ವಿಹೀನರು ಎಂದು ಕಟುವಾಗಿ ಟೀಕಿಸಿದರು. ಮಲಾಲಾಳ ಮೇಲಿನ ಹಲ್ಲೆಕೋರರನ್ನು ಹಿಡಿದು ಕೊಟ್ಟವರಿಗೆ ಒಂದು ಕೋಟಿ ರೂಪಾಯಿಯ ಬಹುಮನವನ್ನು ಪಾಕ್ ಘೋಷಿಸಿದೆ.
ಮಹಿಳೆಯರಿಗೆ ಶಿಕ್ಷಣ ಕೂಡದು ಎನ್ನುವ ಐಡಿಯಾ ತಾಲಿಬಾನ್ ಗೆ ಕೊಟ್ಟವರಾರು ಎನ್ನುವುದು ತಿಳಿಯುತ್ತಿಲ್ಲ. ವೇಷದ ಸಹಾಯದಿಂದ ಮುಸ್ಲಿಮರ ಥರ ಕಾಣುತ್ತಾ ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸುವ ದುಷ್ಟ ಶಕ್ತಿಗಳ ಸಂಗಮ 'ತಾಲಿಬಾನ್' ವರ್ತನೆಗೂ ಇಸ್ಲಾಂ ನ ಜನ್ಮ ಸ್ಥಳ ಸೌದಿ ಅರೇಬಿಯಾದ ನೀತಿಗೂ ಇರುವ ವ್ಯತ್ಯಾಸ ನೋಡಿ. ಇಸ್ಲಾಂ ನ ತವರೂರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಗರದ ರಾಜಕುಮಾರಿ 'ನೂರಾ ಬಿಂತ್ ಅಬ್ದುಲ್ ರಹಮಾನ್' ಮಹಿಳಾ ವಿಶ್ವವಿದ್ಯಾಲಯ ವಿಶ್ವದಲ್ಲೇ ಅತಿ ದೊಡ್ಡದು. 30 ಲಕ್ಷ ಚದರ ಮೀಟರುಗಳ ವಿಸ್ತೀರ್ಣದ ಈ ವಿಶ್ವ ವಿದ್ಯಾಲಯದಲ್ಲಿ ೨೬,೦೦೦ ವಿದ್ಯಾರ್ಥಿನಿಯರು ಕಲಿಯಬಹುದು. ವಿಶ್ವದ ಪ್ರತಿಭಾವಂತ ಪ್ರೊಫೆಸರ್ ಗಳನ್ನ ಆಕರ್ಷಿಸಲು ಸೌದಿ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡುತ್ತಿದೆ. ಈಗಿನ ರಾಜ ಅಬ್ದುಲ್ಲಾ ರ ಕನಸಿನ ಪ್ರಾಜೆಕ್ಟ್ ಈ ವಿಶ್ವವಿದ್ಯಾಲಯ.
ಹಲವು ಮುಸ್ಲಿಂ ದೇಶಗಳ ಪ್ರಧಾನಿಗಳಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮುಸ್ಲಿಂ ಮಹಿಳೆಯರಿಗೆ ತಮ್ಮ ದೇಶಗಳಲ್ಲಿ ಧಾರ್ಮಿಕ ಪಂಡಿತರಿಂದ ಯಾವುದೇ ತೊಡಕಾಗಲೀ, ಫತ್ವಾ ಗಳಾಗಲೀ ಎದುರಾಗಲಿಲ್ಲ. ಸುಮಾರು ಎಂಟು ನೂರು ವರ್ಷಗಳ ಹಿಂದೆಯೇ ಈಜಿಪ್ಟ್ ದೇಶದ ಆಡಳಿತಗಾರ್ತಿಯಾಗಿ ರಾಣಿ 'ಶಜರ್ ಅಲ್-ದುರ್' ಯಶಸ್ವಿಯಾಗಿದ್ದಳು. ವಿಧವೆಯಾಗಿದ್ದ ಈಕೆ ಕ್ರೈಸ್ತರ ಏಳನೆ ಧರ್ಮಯುದ್ಧ (ಕ್ರುಸೇಡ್) ದ ಮೇಲೆ ವಿಜಯ ಸಾಧಿಸಿದ್ದಳು.
ಪ್ರವಾದಿ ಮುಹಮ್ಮದರ ಪತ್ನಿ 'ಆಯಿಷಾ' ರಿಂದ ಪ್ರವಾದಿ ಅನುಚರರು ಅತೀ ಹೆಚ್ಚಿನ ಪ್ರವಾದಿ ವಚನಗಳನ್ನು ಸಂಗ್ರಹಿಸಿದ್ದರು. ಧರ್ಮದ ಅಥವಾ ರಾಜಕಾರಣದ ಯಾವುದೇ ವಿಷಯದಲ್ಲೂ ಅನುಮಾನ ಗಳು ತಲೆದೋರಿದಾಗ ಪ್ರವಾದೀ ಅನುವರ್ತಿಗಳು ಆಯಿಷಾ ರ ಗುಡಿಸಿಲಿನ ಕಡೆ ಧಾವಿಸುತ್ತಿದ್ದರು. ತನ್ನ ಮನೆಯ ಅಂಗಳದಲ್ಲಿ ಧರ್ಮ ಬೋಧನೆ ನಡೆಸುತ್ತಿದ್ದ ಆಯಿಷಾ ರಿಗೆ ವಿಶ್ವದ ಮೊಟ್ಟ ಮೊದಲ 'ಮದ್ರಸಾ' ದ ಸ್ಥಾಪಕರು ಎನ್ನುವ ಖ್ಯಾತಿ.
ಪ್ರವಾದಿಗಳ ನಿಧನಾ ನಂತರ 'ಖಲೀಫಾ ಉಸ್ಮಾನ್' ಪವಿತ್ರ ಕುರ್'ಆನ್ ಗ್ರಂಥವನ್ನು ಬರಹದ ರೂಪದಲ್ಲಿ ತರಲು ತೀರ್ಮಾನಿಸಿ ಪ್ರಥಮ ಆವೃತ್ತಿಯನ್ನು ದಿವಂಗತ ಖಲೀಫಾ ಉಮರ್ ರವರ ಪುತ್ರಿಗೆ ಗ್ರಂಥವನ್ನು ಸುರಕ್ಷಿತವಾಗಿ ಇಡುವ ಜವಾಬ್ದಾರೀ ನೀಡಿದ್ದರು. ಮಹಿಳೆಯರಿಗೆ ಈ ಜವಾಬ್ದಾರೀ ನೀಡಬಾರದು ಎನ್ನುವ ಪರಿಕಲ್ಪನೆ ಅವರಲ್ಲಿರಲಿಲ್ಲ. ಮಹಿಳೆಯ ‘ವಧುದಕ್ಷಿಣೆ’ ವಿಷಯದಲ್ಲಿ ಖಲೀಫಾ ಉಮರ್ ತಪ್ಪಾದ ನಿರ್ಣಯ ನೀಡುವುದನ್ನು ಗಮನಿಸಿದ ಮಹಿಳೆಯೊಬ್ಬಾಕೆ ಕುರ್'ಆನ್ ಗ್ರಂಥದ ಆಧಾರದಲ್ಲಿ ಆ ತಪ್ಪನ್ನು ತಿದ್ದಿದಾಗ ಒಪ್ಪಿಕೊಂಡ ಖಲೀಫಾ ಉಮರ್ ಹೇಳಿದ್ದು, ಈ ಮಹಿಳೆ ಖಲೀಫಾನ ಮೇಲೆ ಗೆಲುವು ಸಾಧಿಸಿದಳು ಎಂದು.
ಈ ಮೇಲಿನ ಉದಾಹರಣೆಗಳೊಂದಿಗೆ ಇಸ್ಲಾಂ ಮಹಿಳೆಗೆ ಕೊಡಮಾಡಿದ ಹಕ್ಕುಗಳನ್ನು ನೋಡಿದಾಗ ತಾಲಿಬಾನ್ ಯಾವುದೇ ರೀತಿಯಲ್ಲಿ ಇಸ್ಲಾಂ ನ ಆದರ್ಶಗಳಿಗೆ ಪ್ರತಿ ಸ್ಪಂದಿಸದೆ ಕೇವಲ ಸ್ತ್ರೀ ಧ್ವೇಷಿ ಮತ್ತು ನರಸಂಹಾರಕ ಸ್ಯಾಡಿಸ್ಟ್ ಗಳ ಒಂದು ರಾಕ್ಷಸೀ ಸಂಘಟನೆ ಎಂದು ಹೇಳಬಹುದು. ಆಫ್ಘಾನಿಸ್ಥಾನ ದ ರಷ್ಯನ್ ಸೈನ್ಯವನ್ನು, ಕಮ್ಯುನಿಸ್ಟ್ ಪ್ರಭಾವವನ್ನು ಮಟ್ಟ ಹಾಕಲು, ತಾಲಿಬಾನ್ ನ ಸಹಾಯ ಪಡೆದ ಅಮೇರಿಕಾ ತಾಲಿಬಾನ್ ನ ಶಕ್ತಿಗೆ ಬೆನ್ನೆಲುಬಾಗಿ ನಿಂತಿದ್ದೆ ಒಂದು ಅನಾಹುತಕ್ಕೆ ಎಡೆ ಮಾಡಿಕೊಟ್ಟಿತು. ಕಮ್ಯುನಿಷ್ಟ್ ನ ನಿರ್ನಾಮದೊಂದಿಗೆ 'ಇಸ್ಲಾಮಿಸ್ಟ್' ಎನ್ನುವ ಭಸ್ಮಾಸುರ ನ ಸೃಷ್ಟಿಗೂ ಅಮೇರಿಕಾ ಕಾರಣಕರ್ತವಾಯಿತು. ತಾಲಿಬಾನ್ ಶಕ್ತಿಗಳ ನಿಗ್ರಹ ಮತ್ತು ಸಂಪೂರ್ಣ ನಿರ್ಮೂಲನೆ ನಾಗರೀಕ ಸಮಾಜದ ಆದ್ಯ ಕರ್ತವ್ಯ ವಾಗಬೇಕು. ಮಲಾಲಾ ಳ ಮೇಲೆ ನಡೆದ ವಿವೇಚನಾ ರಹಿತ ಕ್ರೂರ ಹಲ್ಲೆ ವಿಶ್ವದಾದ್ಯಂತ ನಾಗರೀಕ ಸಮಾಜವನ್ನು ಭೀತ ಗೊಳಿಸಿದರೂ ಸ್ವಾತ್ ಕಣಿವೆಯ ಹೆಣ್ಣು ಮಕ್ಕಳು ಮಾತ್ರ ತಾವು ತಾಲಿಬಾನ್ ಸೈತಾನಕ್ಕೆ ಬೆದರುವ ಹೆಣ್ಣುಮಕ್ಕಳಲ್ಲ ಎಂದು ಈ ಹೇಳಿಕೆಯೊಂದಿಗೆ ಸಾರಿದರು - "ಸ್ವಾತ್" ಕಣಿವೆಯ ಪ್ರತಿಯೊಬ್ಬ ಹೆಣ್ಣು ಮಗಳೂ ಓರ್ವ ಮಲಾಲಾ, ನಾವು ವಿದ್ಯೆ ಪಡೆದೇ ಸಿದ್ಧ, ಅವರು ನಮ್ಮನ್ನು ಸೋಲಿಸಲಾರರು" - ದಿಟ್ಟ ಮಾತುಗಳು ಮಲಾಲಾ ಳ ಗೆಳತಿಯರಿಂದ.
"ಮಲಾಲಾ" ಹೆಸರಿನ ಆರ್ಥ ಶೌರ್ಯ, ಧೈರ್ಯ, 'ಪುಷ್ತು' ಭಾಷೆಯಲ್ಲಿ. ರಾಕ್ಷಸರಿಗೆ ಹೆದರದೆ ಹೆಸರಿಗೆ ತಕ್ಕಂತೆ ನಡೆದುಕೊಂಡ ಮಾಲಾಳಿಗೆ ಅವಳ ದಿಟ್ಟ ಹೋರಾಟಕ್ಕೆ ಶುಭ ಹಾರೈಸೋಣ.
ಚಿತ್ರ ಕೃಪೆ: npr.org
Comments
ಚಿತ್ರಕ್ಕೆ ಕ್ರೆಡಿಟ್ಸ್ ಕೊಡಲು
ದಿಟ್ಟ ಪೋರಿಯ ವೀರಗಾಥೆ
ಬೆ0ಕಿ ತಾನಿರುವ ಸ್ಥಳವನ್ನು ಸಹ
"ಮಲಾಲಾ" ಹೆಸರಿನ ಆರ್ಥ ಶೌರ್ಯ,
ಸೋದರ ಅಬ್ದುಲ್, ಹ್ಯಾಟ್ಸಾಫ್!
ಈ ದಿಟ್ಟ ಪೋರಿಯಿಂದ ನಾವುಗಳೂ
In reply to ಈ ದಿಟ್ಟ ಪೋರಿಯಿಂದ ನಾವುಗಳೂ by joshisr
ಮರಕ್ಕಿಂತ ಮರ ದೊಡ್ಡದು ಇದ್ದೆ