ನೀಲಿ ಮಚ್ಚೆ
ಆಫೀಸಿನಲ್ಲಿ ಲ್ಯಾಪ್ ಟಾಪ್ ಮೇಲೆ ತಲೆ ಇಟ್ಟು ನಿದ್ದೆ ಮಾಡುತ್ತಿದ್ದ ಪ್ರೀತಂ ಬೆನ್ನ ಮೇಲೆ ಬೆಟ್ಟವೊಂದು ಬಿದ್ದಂಥಹ ಅನುಭವವಾಗಿ...ಗಾಢ ನಿದ್ರೆಯಲ್ಲಿದ್ದ ಪ್ರೀತಂ ಗಾಭರಿಯಿಂದ...ಹೆದರಿಕೆಯಿಂದ...ಎಚ್ಚೆತ್ತು ಸುತ್ತ ನೋಡಿದಾಗ ಪಕ್ಕದ ಸೀಟಿನ ಸೀನ ಅಲಿಯಾಸ್ ಶ್ರೀನಿವಾಸ ತನ್ನ ಕಪ್ಪು ಮುಖದಲ್ಲಿ ಬೆಳ್ಳಗೆ ಕಾಣುವ ಒಂದೇ ಒಂದು ವಸ್ತುವಾದ ದಂತಪಂಕ್ತಿಯನ್ನು ತೋರಿಸುತ್ತ ಗಹಗಹಿಸಿ ನಗುತ್ತ ನಿದ್ರಾಕಂಟಕನಂತೆ ನಿಂತಿದ್ದ.
ಗಾಢ ನಿದ್ರೆಯಲ್ಲಿದ್ದವನನ್ನು ಎಬ್ಬಿಸಿ ವಿಕೃತವಾಗಿ ನಗುತ್ತ ನಿಂತಿದ್ದವನನ್ನು ಕಂಡು ನಖಶಿಖಾಂತ ಉರಿದು, ಅವನನ್ನು ಕಂಡಾಪಟ್ಟೆ ಉಗಿಯಬೇಕೆನಿಸಲಿಲ್ಲ ಪ್ರೀತಂ ಗೆ..!!. ಬದಲಾಗಿ ದೈನ್ಯತೆಯಿಂದ ಅವನ ಕಡೆ ನೋಡಿ...ಏನೋ...ಯಾಕೋ ಎಬ್ಬಿಸಿದೆ ಎಂದು ಕರುಣಾಜನಕವಾಗಿ ಕೇಳಿದ.
ಏನೇನೋ ನಿರೀಕ್ಷಿಸಿದ್ದ ಸೀನನಿಗೆ ನಿರೀಕ್ಷಿಸಿದ ರೀತಿಯಲ್ಲಿ ಪ್ರತಿಕ್ರಿಯೆ ಬರದಿದ್ದ ಕಾರಣ ಬೇಸರ ಮಾಡಿಕೊಂಡು ಒಮ್ಮೆ ಪ್ರೀತಂ ಕಡೆ ನೋಡಿದ. ಪ್ರೀತಂ ಕಣ್ಣುಗಳು ಸಾಗರದ ಅಂಚಿನಲ್ಲಿ ಮುಳುಗುವ ನೇಸರನ ಬಣ್ಣದಲ್ಲಿದ್ದರೆ ಆ ಕಂಗಳ ಕೆಳಗೆ ಅರ್ಧ ಚಂದ್ರ ಕಪ್ಪಾಗಿದ್ದರೆ ಹೇಗಿರುತ್ತದೋ ಆ ಆಕಾರದಲ್ಲಿ ಎರಡು ಆಕಾರ ಮೂಡಿತ್ತು...ತಲೆ ಕೂದಲು ಕೆದರಿಕೊಂಡು ಭಿಕ್ಷುಕನಿಗೆ ಫಾರ್ಮಲ್ ಬಟ್ಟೆ ತೊಡಿಸಿದಂತಿದ್ದ.ಅವನ ಪರಿಸ್ಥಿತಿ ಕಂಡು ಯಾಕಾದರೂ ಅವನನ್ನು ಎಬ್ಬಿಸಿದೇನೋ ಎನ್ನುವಂತೆ ಮುಖ ಮಾಡಿಕೊಂಡು...ಯಾಕೋ ಪ್ರೀತು ಒಂಥರಾ ಇದ್ದೀಯ? ಮೈಯಲ್ಲಿ ಹುಷಾರಿಲ್ವಾ?
ಇಲ್ಲ ಕಣೋ ಹಾಗೇನೂ ಇಲ್ಲ...ಯಾಕೋ ಮನಸು ಸರಿಯಾಗಿಲ್ಲ ಅಷ್ಟೇ...ಸೀನ ಒಂದು ಹೆಲ್ಪ್ ಮಾಡ್ತೀಯ? ನಾನು ಈಗ ಮನೆಗೆ ಹೊರಡುತ್ತೀನಿ ಮ್ಯಾನೇಜರ್ ಬಂದು ಕೇಳಿದರೆ ಹುಷಾರಿಲ್ಲ ಮನೆಗೆ ಹೋದ ಎಂದು ಹೇಳುತ್ತೀಯ? ಪ್ಲೀಸ್....
ಅದೇನೋ ಸರಿ ಕಣೋ ಹೇಳ್ತೀನಿ....ಆದ್ರೆ ನೀನ್ಯಾಕೆ ಹೀಗಾಗಿದ್ದೀಯ? ನಾನು ಒಂದು ತಿಂಗಳಿಂದ ಗಮನಿಸುತ್ತಿದ್ದೇನೆ...ಇಷ್ಟು ದಿವಸ ಚೆನ್ನಾಗೆ ಇದ್ದೆ...ಈಗ ಒಂದು ತಿಂಗಳಿಂದ ಏನಾಯ್ತು?
ಬಾ ಹೇಳ್ತೀನಿ ಎಂದು ಇಬ್ಬರೂ ಕ್ಯಾಂಟೀನ್ ಗೆ ಬಂದು ಬಿಸಿ ಬಿಸಿ ಕಾಫಿ ತೆಗೆದುಕೊಂಡು ಟೆರೆಸ್ ಗೆ ಬಂದು ನಿಂತರು.
ಸೀನ ಎಂದಿನಂತೆ ತನ್ನ ಜೋಬಿನಿಂದ ಸಿಗರೆಟ್ ಪ್ಯಾಕ್ ತೆಗೆದು ಒಂದನ್ನು ತೆಗೆದು ತನ್ನ ಬಾಯಿಗಿಟ್ಟುಕೊಂಡು ಪ್ಯಾಕನ್ನು ಪ್ರೀತಂ ಮುಂದೆ ಹಿಡಿದ.ಪ್ರೀತಂ ಅದನ್ನು ನಿರಾಕರಿಸಿದ...ಸೀನ ಅಚ್ಚರಿಯಿಂದ....ಯಾಕೋ ಸಿಗರೆಟ್ ಬೇಡ್ವಾ??!!! ಯಾಕೋ ಏನಾಯ್ತೋ ನಿನಗೆ?ಪ್ರೀತಂ ಒಂದು ಸಿಪ್ ಕಾಫಿ ಕುಡಿದು...ದೀರ್ಘವಾಗಿ ಒಂದು ಉಸಿರು ಎಳೆದುಕೊಂಡು ಕಾಫಿ ಕಪ್ ಕೆಳಗಿಟ್ಟು...ಸೀನನ ಕಡೆ ನೋಡಿ..ಸೀನ ನಿನ್ನ ಬಳಿ ಒಂದು ವಿಷಯ ಹೇಳುತ್ತೇನೆ ದಯವಿಟ್ಟು ಯಾರ ಬಳಿಯೂ ಹೇಳಬೇಡ...ಆಯ್ತು ಹೇಳು ಪ್ರೀತು...
ಸೀನ ನಿನಗೆ ಗೊತ್ತಿರುವ ಹಾಗೆ ನನ್ನ ಮದುವೆ ಆಗಿ ಆರು ತಿಂಗಳಾಗಿದೆ....ಐದು ತಿಂಗಳು ಎಲ್ಲವೂ ಚೆನ್ನಾಗಿತ್ತು...ಆದರೆ ಈ ಕಳೆದ ಒಂದು ತಿಂಗಳಿಂದ ನನಗೇನೋ ಆಗುತ್ತಿದೆ ಕಣೋ. ಅವಾಗವಾಗ ನನ್ನ ಮೈ ಮೇಲೆ "ನೀಲಿ ಮಚ್ಚೆಗಳು" ಕಾಣಿಸಿಕೊಳ್ಳುತ್ತಿವೆ. ಅದು ಯಾಕೆ ಏನು ಎಂದು ಒಂದೂ ಗೊತ್ತಾಗದೆ ತಲೆ ಕೆಟ್ಟು ಹೋಗಿದೆ.
ನಾನು ಮುಂಚೆ ಮಾಡಿದ ಚಟಗಳಿಂದ ಈ ರೀತಿ ಏನಾದರೂ ಆಗುತ್ತಿದೆಯ ಒಂದು ಗೊತ್ತಿಲ್ಲ...ಅದಕ್ಕೆ ಎರಡು ವಾರದಿಂದ ಸಿಗರೆಟ್ ಸಹ ಸೇದುತ್ತಿಲ್ಲ...ಆಗೊಮ್ಮೆ ಈಗೊಮ್ಮೆ ಎಣ್ಣೆ ಹಾಕುತ್ತಿದ್ದೆ...ಈ ಒಂದು ತಿಂಗಳಿಂದ ಅದೂ ಸಹ ನಿಲ್ಲಿಸಿದ್ದೇನೆ. ಸೀನ ಮಧ್ಯದಲ್ಲಿ ಬಾಯಿ ಹಾಕಿ ಅಂದರೆ ನಾಯಿಯ ಹಾಗೆ ಯಾವುದಕ್ಕೋ ಎಂದಲ್ಲ...ಅವನ ಮಾತಿನ ಮಧ್ಯದಲ್ಲಿ ಇವನು ತನ್ನ ಬಾಯ್ತೆರೆದು ಹೊಗೆ ಆಚೆ ಬಿಡುತ್ತ...ಹೇ ಪ್ರೀತು ಹುಚ್ಚು ಹುಚ್ಚಾಗಿ ಮಾತಾಡಬೇಡ. ನಾನು ನಿನಗಿಂತ ಮುಂಚಿನಿಂದ ಅದೆಲ್ಲಾ ಮಾಡುತ್ತಿದ್ದೇನೆ ಎಂದು ಮಹಾಸಾಧನೆ ಮಾಡಿದಂತೆ ಭಾವವನ್ನು ವ್ಯಕ್ತಪಡಿಸುತ್ತಾ....ನನಗೇನೂ ಆಗದ್ದು ನಿನಗೆ ಮಾತ್ರ ಹೇಗೆ ಆಗುತ್ತೆ...ಅದರಿಂದೆಲ್ಲ ಹಾಗೆ ಆಗುವುದಿಲ್ಲ...
ಅದು ನನಗೂ ಗೊತ್ತು ಕಣೋ...ನಾನು ಎಲ್ಲ ತಿಳಿದವರಿಂದ,ತಿಳಿಯದವರಿಂದ,ಪುಸ್ತಕಗಳನ್ನು, ಅಂತರ್ಜಾಲ ತಾಣಗಳಲ್ಲಿ ಹುಡುಕಿದೆ ಎಲ್ಲಿಯೂ ಈ ಚಟಗಳಿಂದ ನೀಲಿ ಮಚ್ಚೆ ಬರುವುದು ಎಂಬ ಮಾಹಿತಿ ಇಲ್ಲ.. ಆದರೂ ನನ್ನ ಜಾಗ್ರತೆಯಲ್ಲಿ ನಾನಿರಲೆಂದು ಸದ್ಯಕ್ಕೆ ಅದ್ಯಾವುದನ್ನೂ ಮುಟ್ಟುತ್ತಿಲ್ಲ...
ಅದು ಸರಿ ಕಣೋ...ನಿನ್ನ ದೇಹದ ಯಾವ ಭಾಗದಲ್ಲಿ ಆ ಮಚ್ಚೆಗಳು ಕಾಣುತ್ತಿವೆ?
ಹೊಟ್ಟೆ, ಎದೆ ಮತ್ತು ಬೆನ್ನಿನ ಭಾಗದಲ್ಲಿ ಕಾಣುತ್ತಿದೆ ಕಣೋ...
ಎಲ್ಲಿ ಒಮ್ಮೆ ತೋರಿಸು ಯಾವ ರೀತಿ ಇದೆ ಎಂದು...ಇಲ್ಲ ಕಣೋ ಸೀನ...ಅದು ಪ್ರತಿದಿನ ಇರುವುದಿಲ್ಲ. ವಾರದಲ್ಲಿ ಒಂದು ದಿವಸ ಇಲ್ಲ ಎರಡು ದಿವಸ ಮಾತ್ರ ಕಾಣಿಸಿ ಕೊಳ್ಳುತ್ತಿದೆ...ಅದೇ ನನಗೆ ಭಯ ಆಗಿರುವುದು. ಅದೇ ಯೋಚನೆಯಲ್ಲಿ ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಸಹ ಮಾಡಲೂ ಆಗುತ್ತಿಲ್ಲ.ಇನ್ನೂ ಕೆಲವು ಬಲ್ಲ ಮೂಲಗಳಿಂದ ತಿಳಿದು ಬಂದ ಮಾಹಿತಿ ಎಂದರೆ...ದೇಹದಲ್ಲಿ ವಿಷದ ವಸ್ತು!! ಏನಾದರೂ ಇದ್ದರೆ ದೇಹ ನೀಲಿ ಬಣ್ಣಕ್ಕೆ ತಿರುಗುವುದು ಎಂದು...ಆದರೆ ಆ ರೀತಿ ಏನಾದರೂ ಆಗಿದ್ದರೆ ನಾನು ಒಂದೆರೆಡು ದಿನದಲೇ ಸಾಯಬೇಕಿತ್ತು...ಅದೂ ಆಗುತ್ತಿಲ್ಲ...
ಹೋಗಲಿ ನಿನ್ನ ಹೆಂಡತಿಗೆ ಈ ವಿಷಯ ಗೊತ್ತ?ಇಲ್ಲ ಕಣೋ ಹೇಗೋ ಹೇಳಲಿ....ಆಮೇಲೆ ಮದುವೆಗೆ ಮುಂಚೆ ವಿಷಯ ಮುಚ್ಚಿಟ್ಟರು ಎಂದು ಅವಳ ಮನೆಯವರು ತಪ್ಪಾಗಿ ಭಾವಿಸುತ್ತಾರೆ...ಅವಳು ನನ್ನನ್ನು ಬಿಟ್ಟು ಹೊರಟು ಹೋಗಬಹುದು...ಅಥವಾ ಇನ್ನೇನಾದರೂ ಅನಾಹುತ ನಡೆದು ಹೋದರೆ....ಹೀಗೆ ಯೋಚನೆಗಳು ತುಂಬಿಕೊಂಡು ನನ್ನ ತಲೆ ಕೆಟ್ಟ ಯಂತ್ರದಂತೆ ಆಗಿ ಹೋಗಿದೆ...ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ...ಸದಾಕಾಲ ಅದೇ ಯೋಚನೆ ಬರುತ್ತದೆ...ಏನು ಮಾಡಬೇಕೋ ಗೊತ್ತಾಗುತ್ತಿಲ್ಲ.
ಅಲ್ಲ ಪ್ರೀತು ಯಾವುದಾದರೂ ಡಾಕ್ಟರ ಹತ್ತಿರ ತೋರಿಸಬೇಕಿತ್ತು...
ಇಲ್ಲ ಸೀನ....ನನಗೆ ಡಾಕ್ಟರ ಬಳಿ ಹೋಗಲು ಹಿಂಜರಿಕೆ ಮತ್ತು ಭಯ...ಅವರು ಇನ್ನೇನಾದರೂ ಖಾಯಿಲೆ ಎಂದು ಹೇಳಿದರೆ ನಾನೇನು ಮಾಡುವುದು....ಎಲ್ಲ ಸೇರಿ ನನಗೆ ಹುಚ್ಚೆ ಹಿಡಿದಂತಾಗುತ್ತಿದೆ. ಎಲ್ಲಾದರೂ ಓಡಿ ಹೋಗೋಣ ಎನಿಸಿಬಿಟ್ಟಿದೆ ಕಣೋ...
ಪ್ರೀತು..ಸುಮ್ಮನೆ ಏನೇನೋ ಮಾತಾಡಬೇಡ...ನೀನು ಓಡಿ ಹೋದರೆ ಪಾಪ ನಿನ್ನನ್ನೇ ನಂಬಿ ಬಂದಿರುವ ನಿನ್ನ ಹೆಂಡತಿ ಗತಿ ಏನಾಗಬೇಡ....ಒಂದು ಕೆಲಸ ಮಾಡು....ನನಗೆ ಗೊತ್ತಿರುವ ನನ್ನ ಸ್ನೇಹಿತ ಒಬ್ಬ ಚರ್ಮರೋಗ ತಜ್ಞ ಇದ್ದಾನೆ. ಹೇಗಿದ್ದರೂ ನೀನು ಇವಾಗ ಮನೆಗೆ ಹೊರಟಿದ್ದೀಯ ತಾನೇ. ನಿಮ್ಮ ಮನೆ ದಾರಿಯಲ್ಲೇ ಅವನ ಕ್ಲಿನಿಕ್ ಇದೆ. ನಾನು ಅವನಿಗೆ ಫೋನ್ ಮಾಡಿ ಹೇಳುತ್ತೇನೆ. ಹೋಗುವಾಗ ಅವನನ್ನು ಒಮ್ಮೆ ಭೇಟಿ ಮಾಡಿ ಹೋಗು. ಆಮೇಲೆ ನೋಡೋಣ..ಎಂದು ಅಲ್ಲಿಂದಲೇ ಅವನ ಸ್ನೇಹಿತನಿಗೆ ಕರೆ ಮಾಡಿ ಹೀಗೆ ಹೀಗೆ ಎಂದು ವಿಷಯ ತಿಳಿಸಿದ.
ಪ್ರೀತಂ ಮನೆಗೆ ಹೋಗುವಾಗ...ಮನಸಿಲ್ಲದಿದ್ದರೂ ಸೀನನ ಮಾತಿಗೆ ಬೆಲೆ ಕೊಡಬೇಕೆಂದು ಅವನು ಹೇಳಿದ ಕ್ಲಿನಿಕ್ ಗೆ ಹೋಗಿ ಡಾಕ್ಟರ ಬಳಿ ತನ್ನ ವಿಷಯ ತಿಳಿಸಿದ.ಡಾಕ್ಟರ ಪ್ರೀತಂ ಹೇಳಿದ ಜಾಗದಲ್ಲಿ ಪರೀಕ್ಷಿಸಿದಾಗ ಅಲ್ಲಿ ಯಾವುದೂ ಮಚ್ಚೆ ಇಲ್ಲದಿರುವುದನ್ನು ಗಮನಿಸಿ ಏನೂ ಇಲ್ಲ ಎಂದಾಗ...ಇಲ್ಲ ಡಾಕ್ಟರ ಅದು ವಾರದಲ್ಲಿ ಒಂದು ಅಥವಾ ಎರಡು ದಿನ ಮಾತ್ರ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದ.
ಡಾಕ್ಟರ ಅವನ ಮಾತನ್ನು ಕೇಳಿ ಆಶ್ಚರ್ಯಚಕಿತರಾಗಿ!! ಸರಿ ಪ್ರೀತಂ ಅವರೇ ಒಂದು ಕೆಲಸ ಮಾಡಿ...ಈ ಬಾರಿ ಆ ಮಚ್ಚೆಗಳು ಮತ್ತೆ ಕಾಣಿಸಿಕೊಂಡಾಗ ಬನ್ನಿ ಎಂದು ಹೇಳಿ ಕಳುಹಿಸಿದ.
ಒಂದೆರೆಡು ದಿನದ ನಂತರ ಮತ್ತೆ ಆ ಮಚ್ಚೆಗಳು ಕಾಣಿಸಿಕೊಂಡಾಗ, ಈ ಬಾಗಿ ಡಾಕ್ಟರ ಬಳಿ ಹೋದಾಗ ಜೊತೆಯಲ್ಲಿ ಸೀನನನ್ನೂ ಕರೆದುಕೊಂಡು ಹೋಗಿದ್ದ.ಡಾಕ್ಟರ ಪ್ರೀತಂ ನನ್ನು ಒಳಗೆ ಕರೆದುಕೊಂಡು ಹೋಗಿ ಕೂಲಂಕುಶವಾಗಿ ಪರಿಶೀಲಿಸಿ ಆಚೆ ಬಂದು...ಪ್ರೀತಂ ನೀವು ಸ್ವಲ್ಪ ಹೊತ್ತು ಆಚೆ ಕುಳಿತುಕೊಳ್ಳಿ. ನಾವು ಸೀನನ ಹತ್ತಿರ ಮಾತಾಡಿ ನಿಮ್ಮನ್ನು ಕರೆಯುತ್ತೇನೆ ಎಂದಾಗ ಪ್ರೀತಂ ನ ಎದೆ ಧಸಕ್ಕೆಂದಿತು.
ಭಯದಿಂದಲೇ ಯಾಕೆ ಡಾಕ್ಟರ ನನಗೇನಾಗಿದೆ....ಎಂದು ಹೇಳುತ್ತಲೇ ಅವನ ಗಂಟಲು ಉಬ್ಬಿ ಬಂತು...
ಪ್ರೀತಂ ನೀವೇನು ಗಾಭರಿಯಾಗಬೇಡಿ. ಒಂದೈದು ನಿಮಿಷ ಆಚೆ ಇರಿ...ನಾನು ಮತ್ತೆ ಕರೆಯುತ್ತೇನೆ ಎಂದು ಆಚೆ ಕಳುಹಿಸಿ ಬಾಗಿಲು ಹಾಕಿಕೊಂಡರು..
ಆಚೆ ಬಂದು ಸೋಫಾದಲ್ಲಿ ಕುಸಿದು ಕೂತ ಪ್ರೀತಂ ತಲೆಯ ಮೇಲೆ ಕೈ ಹೊತ್ತು ಕಣ್ಣಲ್ಲಿ ನೀರು ತುಂಬಿಕೊಂಡು ತನ್ನ ಜೀವನ ಮುಗಿದೇ ಹೋಯಿತೆಂದು ಕಂಗಾಲಾಗಿ ಹೋಗಿದ್ದ.
ಅಷ್ಟರಲ್ಲಿ ಒಳಗಿನಿಂದ ಬಂದ ಸೀನ ಅಲಿಯಾಸ್ ಶ್ರೀನಿವಾಸ್ ಬಿದ್ದು ಬಿದ್ದು ನಗುತ್ತಿದ್ದ. ನಕ್ಕೂ ನಕ್ಕೂ ಅವನ ಕಣ್ಣಲ್ಲಿ ನೀರು ತುಂಬಿಕೊಂಡು ಇಡೀ ಕ್ಲಿನಿಕ್ ನಡುಗುವಂತೆ ನಗುತ್ತಿದ್ದ.
ಪ್ರೀತಂ ಗೆ ಒಂದೂ ಅರ್ಥವಾಗಲಿಲ್ಲ. ಹಿಂದಿನಿಂದ ಬಂದ ಡಾಕ್ಟರ ಸಹ ಮುಖದಲ್ಲಿ ಮಂದಹಾಸ ತುಂಬಿಕೊಂಡು ಆಚೆ ಬಂದು ಪ್ರೀತಂ ಪಕ್ಕದಲ್ಲಿ ಕುಳಿತರು.
ಪ್ರೀತಂ ಗೆ ಏನಾಗುತ್ತಿದೆ ಎಂದು ಕುತೂಹಲ ತಾಳಲಾಗದೆ...ಸೀನ ದಯವಿಟ್ಟು ಏನಾಯಿತು ಎಂದು ಹೇಳೋ ಎಂದು ಕಿರುಚಿದ...ಸೀನ...ನಗುತ್ತಲೇ....ಲೋ ಶಂಭು ಲಿಂಗ (ಡಾಕ್ಟರ) ನೀನೆ ಹೇಳೋ ಅವನಿಗೆ....ಏನಾಗಿದೆ ಎಂದು...
ಡಾಕ್ಟರ ಪ್ರೀತಂ ಹೆಗಲ ಮೇಲೆ ಕೈ ಹಾಕುತ್ತ....ಪ್ರೀತಂ...ಎಂದು ಅವರೂ ನಗಲು ಶುರು ಮಾಡಿದರು...ಕಷ್ಟಪಟ್ಟು ತಮ್ಮ ನಗುವನ್ನು ತಡೆದು...ನೋಡಿ ಪ್ರೀತಂ....ನಿಮ್ಮ ಮೈ ಮೇಲೆ ಬರುತ್ತಿರುವ ನೀಲಿ ಮಚ್ಚೆಗೆ ಕಾರಣ....ಮತ್ತೆ ನಗಲು ಶುರು ಮಾಡಿದರು....
ಪ್ರೀತಂ, ದಯನೀಯವಾಗಿ ಸರ್ ದಯವಿಟ್ಟು..ದಯವಿಟ್ಟು...ದಯವಿಟ್ಟು ಮೊದಲು ಕಾರಣ ಹೇಳಿ ಆಮೇಲೆ ನಗಿ ಎಂದ.ಈಗ ಡಾಕ್ಟರ ತಮ್ಮ ನಗುವನ್ನು ಸಂಪೂರ್ಣವಾಗಿ ತಡೆದು...ಪ್ರೀತಂ ನಿಮ್ಮ ಮಚ್ಚೆಗೆ ಕಾರಣ ನಿಮ್ಮ "ಬನಿಯನ್"....ಏನು?? ಬನಿಯನ್ನಾ?ಹೌದು ಪ್ರೀತಂ ನಿಮ್ಮ ಮಚ್ಚೆಗೆ ಕಾರಣ ನೀವು ಧರಿಸುತ್ತಿರುವ ನಿಮ್ಮ ನೀಲಿ ಬನಿಯನ್......ಆ ಬನಿಯನ್ ಬಣ್ಣ ಬಿಡುತ್ತಿದೆ ಅಷ್ಟೇ.....ಎಂದು ಮತ್ತೆ ನಗಲು ಶುರು ಮಾಡಿದರು.
ಪ್ರೀತಂ ಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ....
Comments
ನಾನೊಮ್ಮೆ ಜನರಲ್ ಚೆಕ್-ಅಪ್ ಎ೦ದು
ನಾನೊಮ್ಮೆ ಜನರಲ್ ಚೆಕ್-ಅಪ್ ಎ೦ದು ಡಾಕ್ಟರ್ ಬಳಿ ಹೋದಾಗ ನಿಮ್ಮ ಬೆನ್ನಲ್ಲಿ 'ಗಂಟಿದೆ' ಎ೦ದರು ... ನನಗೆ ಗಾಬರಿಯಾಯ್ತು ... ಎಲ್ಲಿ ಎ೦ದಾಗ ಅವರು ಗ೦ಟನ್ನು ಒತ್ತಿದರು ... ಅದು ಜನಿವಾರದ ಬ್ರಹ್ಮ ಗ೦ಟು :-))))
In reply to ನಾನೊಮ್ಮೆ ಜನರಲ್ ಚೆಕ್-ಅಪ್ ಎ೦ದು by bhalle
@ ಜಯಂತ್ ಅವ್ರೆ-@ ಭಲ್ಲೆ ಜಿ - ಬ್ರಹ್ಮ ಗಂಟು !
@ ಜಯಂತ್ ಅವ್ರೆ-
ಮೊದಲ ಬಾರಿಗೆ ನಿಮ್ಮಿಂದ ಹಾಸ್ಯದ ಶೈಲಿಯ ಬರಹ ಭಲೇ ಇಷ್ಟ ಆಯ್ತು..
ಅಂತ್ಯಕ್ಕೆ ಬಂದಾಗ ಯಾವ್ದೋ ಅದ್ಭುತ ಕ್ಲೈಮ್ಯಾಕ್ಸ್ ಗೆ ಕಾದಂತೆ ಆಗಿತ್ತು- ಕೊನೆಗೂ ನೀಲಿ ಮಚ್ಚೆಗೆ ಕಾರಣ ಗೊತ್ತಾಗಿ ನಿಮ್ಮ ನಾಯಕನ ಜೊತೆ ನಾನೂ ನಿರಾಳ ಆದೆ..
ಅದ್ಕೆ ನೋಡಿ ನಾ ಯಾವಾಗಲೂ ಬಿಳಿ ಬಣ್ಣದ ಬನಿಯನ್ ಹಾಕೋದು...!! ಆದ್ರೆ ಬಿಳಿ ಮಚ್ಚೆ ಅಂತೂ ಇದ್ವರ್ಗೆ ಬಂದಿಲ್ಲ..:೯))))
@ ಭಲ್ಲೆ ಜಿ - ಬ್ರಹ್ಮ ಗಂಟು ಪ್ರತಿಕ್ರಿಯೆ ಸಖತ್...!
ವೈದ್ಯರು ಈ ತರಹದ ಹೇಳಿ ಆದರೆ ಕ್ಷಣ ನಮ್ಮ ಗುಂಡಿಗೆ ನಿಲ್ಲಿಸುವರು..!!
ಯಾವುದ್ಕೂ ಧೈರ್ಯ ವಹಿಸಿಕೊಂಡೆ ವೈದ್ಯರ ಹತಿರ ಹೋಗ್ಬೇಕು...!
ಶುಭವಾಗಲಿ.
\|/
In reply to @ ಜಯಂತ್ ಅವ್ರೆ-@ ಭಲ್ಲೆ ಜಿ - ಬ್ರಹ್ಮ ಗಂಟು ! by venkatb83
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ವೆಂಕಟೇಶ್ ಅವರೇ :)
In reply to ನಾನೊಮ್ಮೆ ಜನರಲ್ ಚೆಕ್-ಅಪ್ ಎ೦ದು by bhalle
ಹಹಹ ಗಂಟಿನ ಗುಟ್ಟು ಚೆನ್ನಾಗಿದೆ :
ಹಹಹ ಗಂಟಿನ ಗುಟ್ಟು ಚೆನ್ನಾಗಿದೆ :)
ಜಯ0ತ್
ಒಳ್ಳೆ ಟೆನ್ ಶನ್ ಕ್ರಿಯೆಟ್ ಮಾಡಿದ್ರಲ್ಲ
ಸಕ್ಕತ್
In reply to ಜಯ0ತ್ by partha1059
:) ಟೆನ್ಶನ್ ಕೊಟ್ಟಿದ್ದಕ್ಕೆ
:) ಟೆನ್ಶನ್ ಕೊಟ್ಟಿದ್ದಕ್ಕೆ ಕ್ಷಮೆ ಇರಲಿ :) ಧನ್ಯವಾದಗಳು
ಹೊಸ ಶೈಲಿಯ ಕಥೆ ಸಖತ್ ಜಯಂತ್ ರವರೇ
ಹೊಸ ಶೈಲಿಯ ಕಥೆ ಸಖತ್ ಜಯಂತ್ ರವರೇ
.....ಸತೀಶ್
In reply to ಹೊಸ ಶೈಲಿಯ ಕಥೆ ಸಖತ್ ಜಯಂತ್ ರವರೇ by sathishnasa
ಮೆಚ್ಚುಗೆಗೆ ಧನ್ಯವಾದಗಳು ಸತೀಶ್
ಮೆಚ್ಚುಗೆಗೆ ಧನ್ಯವಾದಗಳು ಸತೀಶ್ ಅವರೇ :)
ಹ್ಹ ಹ್ಹ ಹ್ಹ ಹ್ಹ ಜಯಂತ್ ಮಸ್ತ್
ಹ್ಹ ಹ್ಹ ಹ್ಹ ಹ್ಹ ಜಯಂತ್ ಮಸ್ತ್ ಟ್ವಿಸ್ಟ್
In reply to ಹ್ಹ ಹ್ಹ ಹ್ಹ ಹ್ಹ ಜಯಂತ್ ಮಸ್ತ್ by Chikku123
:) ಧನ್ಯವಾದಗಳು ಚಿಕ್ಕು.
:) ಧನ್ಯವಾದಗಳು ಚಿಕ್ಕು.
:-)))))))))))))))
:-)))))))))))))))
In reply to :-))))))))))))))) by gopaljsr
ಆತ್ಮೀಯ ಜಯಂತ್ ರವರೆ,
ಆತ್ಮೀಯ ಜಯಂತ್ ರವರೆ,
ಹುಲಿ ಅಂತ ಹೋಗಿ ಹೋಗಿ ಕೊನೆಗೆ ಇಲಿ ಹಿಡಿದ ಹಾಗೆ ಆಯಿತು. ಏನೇ ಆದರು ಒಳ್ಳೆ ಹಿಡಿತ ಸಾಧಿಸಿ ಕಥೆ ಓದೋಹಾಗೆ ಮಾಡಿದ್ದಿರಿ. ಉತ್ತಮ ಪ್ರಸ್ತುತಿ, ಧನ್ಯವಾದಗಳು
In reply to ಆತ್ಮೀಯ ಜಯಂತ್ ರವರೆ, by Prakash Narasimhaiya
:) ಮೆಚ್ಚುಗೆಗೆ ಧನ್ಯವಾದಗಳು
:) ಮೆಚ್ಚುಗೆಗೆ ಧನ್ಯವಾದಗಳು ಪ್ರಕಾಶ್ ಅವರೇ
In reply to :-))))))))))))))) by gopaljsr
:):):) ಧನ್ಯವಾದಗಳು ಗೋಪಾಲ್ ಜಿ
:):):) ಧನ್ಯವಾದಗಳು ಗೋಪಾಲ್ ಜಿ