ಕುಂಭಕರ್ಣನಾದಾರೂ ಎದ್ದೇಳುತಿದ್ದನೇನೋ

ಕುಂಭಕರ್ಣನಾದಾರೂ ಎದ್ದೇಳುತಿದ್ದನೇನೋ

ಚಿತ್ರ

ಬಾಯಾರಿಕೆ ಆಗಿತ್ತು, ಟೇಬಲ್ ಕೆಳಗೆ ಇಟ್ಟಿದ್ದ ಬಾಟಲಿಯನ್ನು ತೆಗೆದುಕೊಂಡು ಮುಚ್ಚಳ ತೆಗೆದು ನೀರು ಕುಡಿದೆ. ಯಾರೋ ಏನೋ ಕೇಳಲು ಬಂದರು, ಬಾಟಲಿಯ ಮುಚ್ಚಳ ಮುಚ್ಚದೆ ಹಾಗೆ ಪಕ್ಕದಲ್ಲಿ ಇಟ್ಟೆ. ಅವರು ಹೋದ ನಂತರ, ಬಾಟಲಿಯನ್ನು ಎತ್ತಿಕೊಳ್ಳಲು ಹೋದೆ. ಕೈ ತಪ್ಪಿ ಅದರಲ್ಲಿದ್ದ ನೀರು ನಾನು ಕೆಲಸ ಮಾಡುತ್ತಿದ್ದ ಲ್ಯಾಪ್ಟಾಪಿನ ಕೀ ಬೋರ್ಡಿನ ಮೇಲೆ ಬಿತ್ತು. ಧಿಡೀರನೆ ಬಾಟಲಿಯನ್ನು ದೂರ ಸರಿಸಿದೆ ಆದರೆ ಅಷ್ಟರಲ್ಲಾಗಲೇ ಲ್ಯಾಪ್ಟಾಪ್ ಸ್ವಲ್ಪ ನೀರನ್ನು ಕುಡಿದಾಗಿತ್ತು, ಅದಕ್ಕೂ ಬಾಯಾರಿಕೆ ಆಗಿತ್ತೇನೋ?!.  ನೀರನ್ನು ಕುಡಿದ ಲ್ಯಾಪ್ಟಾಪ್ ನಿದ್ರಾವಸ್ಥೆಗೆ ತಲುಪಿತ್ತು (ಶಟ್ಡೌನ್ ಆಗಿತ್ತು). ಆಫೀಸಲ್ಲಿದ್ದ ಎಲ್ಲರೂ ನನ್ನ ಕಡೆ ತಿರುಗಿದರು. ಏನೇನೋ ಸಲಹೆಗಳು ಬಂದವು. ಎಲ್ಲವನ್ನೂ ಕೇಳಿದೆ. ಕೂಡಲೇ ನೀರನ್ನು ಒರೆಸಿದೆ. ಸಾಯುವ ಮುನ್ನ ಕೊನೆಯ ಗುಟುಕನ್ನು ಕುಡಿಸಿದಂತಾಗಿತ್ತು, ಯಾಕೆಂದರೆ ರಿಸ್ಟಾರ್ಟ್ ಮಾಡಲು ಪ್ರಯತ್ನಪಟ್ಟೆ ಆದರೆ ಉಸಿರಾಡುವ ಯಾವುದೇ ಲಕ್ಷಣಗಳೂ ಕಾಣಲಿಲ್ಲ. ಅನ್ಯ ಮಾರ್ಗವಿಲ್ಲದೆ, ಬ್ಯಾಟರಿಯನ್ನು ಹೊರಕ್ಕೆ ತೆಗೆದೆ. ಲ್ಯಾಪ್ಟಾಪನ್ನು ಹಾಗೆ ಆರಲು ಬಿಟ್ಟೆ. 

ನನ್ನ ಕ್ಯಾಮೆರಾದಿಂದ ತೆಗೆದ ಬಹುತೇಕ ಚಿತ್ರಗಳು ಲ್ಯಾಪ್ಟಾಪಿನಲ್ಲೇ ಇದ್ದವು. ಎಲ್ಲಾ ಡೇಟಾವನ್ನೂ ಎಕ್ಸ್ಟರ್ನಲ್ ಹಾರ್ಡ್ ಡಿಸ್ಕಿಗೆ ಹಾಕಿಕೊಂಡಿದ್ದೆ. ಆದರೆ ಮದುವೆಯ ಸಮಯದಲ್ಲಿ ಅದು ಎಲ್ಲೋ ಕಳೆದುಹೋಗಿತ್ತು. ಬೇರೆಲ್ಲೂ ಸ್ಟೋರ್ ಮಾಡದಿದ್ದುದರಿಂದ ಲ್ಯಾಪ್ಟಾಪ್ ಒಂದರಲ್ಲೇ ಎಲ್ಲವೂ ಇತ್ತು. ಈಗ ಅದು ನೀರು ಕುಡಿದುದರಿಂದ ನಾನು ಎಣ್ಣೆ ಕುಡಿದಂತಾಗಿದ್ದೆ! ಅದೂ ಅಲ್ಲದೆ ಮದುವೆಯಲ್ಲಿ ನನ್ನ ಕ್ಯಾಮೆರಾದಿಂದ ತೆಗೆದ ಎಲ್ಲಾ ಚಿತ್ರಗಳೂ ಇದೊಂದರಲ್ಲೇ ಹಾಕಿದ್ದೆ. ನನ್ನ ಅಕ್ಕನ ಮಕ್ಕಳೂ ಮೊದಲೇ ಅದನ್ನು ಕೇಳಿದ್ದರು ಆದರೆ ಅಲ್ಲಿಗೆ ಹೋಗಲಿಲ್ಲವಾದ್ದರಿಂದ ಅವರಿಗೆ ಕೊಡುವುದಕ್ಕೆ  ಆಗಿರಲಿಲ್ಲ . ನನ್ನಪ್ಪನೂ ಸಹ ನನಗೆ ಹಲವು ಬಾರಿ ಇದರ ಒಂದು ಸೀ.ಡಿ ಮಾಡಿಕೊಡಲು ಹೇಳಿದ್ದರು ನಾನು ಹ್ಞೂ ಅಂದು ಸುಮ್ಮನಿದ್ದೆ, ಹೇಗಿದ್ದರೂ ಇದರಲ್ಲಿ ಇರುತ್ತದೆ ಯಾವಾಗಲಾದರೂ ಮಾಡಿಸಿದರಾಯಿತೆಂದು ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಎಲ್ಲಾ ಎದುರಿಗಿದ್ದೂ ಏನೂ ಮಾಡಲಾಗದೆ ಎಲ್ಲವನ್ನೂ ಕೆಳೆದುಕೊಂಡ ಪರಿಸ್ತಿತಿ ಎದುರಾಗಿತ್ತು.

ಹೆಂಡತಿಗೆ ಹೇಳಿದೆ ಅವಳು ಹೋಗಲಿ ಬಿಡಿ ಅಂದಳು. ಅವಳಿಗೇನು ಗೊತ್ತು ನಾನೆಷ್ಟು ಕಷ್ಟಪಟ್ಟು ತೆಗೆದಿದ್ದನೆಂದು!!. ಹೀಗಾಯಿತೆಂದು ಅಕ್ಕನಿಗೆ, ದೊಡ್ಡಮ್ಮನ ಮಗಳಿಗೆ, ಕಸಿನ್ ಎಲ್ಲರಿಗೂ ಕಾಲ್ ಮಾಡಿ ಹೇಳಿದೆ. ಎಲ್ಲರೂ ಅಯ್ಯೋ ಅನ್ನುತ್ತಿದ್ದರು, ಹೇಳಿದ ತಪ್ಪಿಗೆ ಸ್ವಲ್ಪ ಜಾಸ್ತಿಯೇ ಮಂಗ (ನಾದೆ)ಳಾರತಿಯೂ ಆಯಿತು! ಅಕ್ಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೀನು ಇಲ್ಲಿಯವರೆಗೆ ತೆಗೆದ ಎಲ್ಲಾ ಫೋಟೋಗಳ ತೂಕ ಒಂದಾದರೆ ಮದುವೆ ಸಮಯದಲ್ಲಿ ತೆಗೆದ ಫೋಟೋಗಳ ತೂಕ ಒಂದು ಎಂದಳು, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಹಾಗೆ. ಅಮ್ಮನಿಗೆ ಕರೆ ಮಾಡಿದೆ (ಅಪ್ಪನಿಗೆ ಹೇಳಲು ಧೈರ್ಯವಿರಲಿಲ್ಲ!) ಅಮ್ಮನದೂ ಅದೇ ಸ್ವರ 'ಛೆ!'. ಅಪ್ಪನಿಗೆ ವಿಷಯ ಹೇಳು ಎಂದು ಕಾಲ್ ಕಟ್ ಮಾಡಿದೆ. ಊಟ ಮಾಡಿ ಬಂದು ನನ್ನ ಜಾಗದಲ್ಲಿ ಬಂದು ಹಳೆಯ ಲ್ಯಾಪ್ಟಾಪ್ ಆನ್ ಮಾಡ್ಕೊಂಡು ಕುಳಿತೆ.

ಒಂದೆರಡು ಘಂಟೆಗಳ ನಂತರ (ನೀರೆಲ್ಲಾ ಆರಿರಬೇಕು ಎಂದುಕೊಂಡು) ಬ್ಯಾಟರಿ ಕನೆಕ್ಟ್ ಮಾಡಿ ಮತ್ತೆ ಆನ್ ಮಾಡಿದೆ. ಆಶ್ಚರ್ಯ,ಸ್ಟಾರ್ಟ್ ಆಯ್ತು. ಫೋಟೋಸ್ ಎಲ್ಲವೂ ಇದ್ದವು. ಕೊನೆಗೂ ಸರಿಹೋಗಿತ್ತು.   ಅಬ್ಬ ಅಂತೂ ಸರಿಹೋಯ್ತಲ್ಲ ಎಂದು ಕೆಲಸ ಮಾಡುತ್ತಾ ಕುಳಿತೆ. ಸಂಜೆ ಆಗಿತ್ತು ಮನೆಗೆ ಹೊರಡುವ ಸಮಯ, ಒಮ್ಮೆ ಶಟ್ಡೌನ್ ಮಾಡಿ ಮತ್ತೊಮ್ಮೆ ಸ್ಟಾರ್ಟ್ ಮಾಡಿ ಚೆಕ್ ಮಾಡೋಣವೆಂದು ಕುಳಿತೆ. ಶಟ್ಡೌನ್ ಆಯಿತು ಆದರೆ ಸ್ಟಾರ್ಟ್ ಆಗಲಿಲ್ಲ. ಎಷ್ಟು ಪ್ರಯತ್ನಪಟ್ಟರೂ ಆಗಲಿಲ್ಲ. ಸಿಕ್ಕ ಮೂರು ಘಂಟೆಗಳ ಅವಧಿಯಲ್ಲೇ ಎಲ್ಲಾ ಚಿತ್ರಗಳನ್ನು ಎಲ್ಲಾದರೂ ಕಾಪಿ ಮಾಡಬಹುದಿತ್ತು. ಕೆಟ್ಟ ಮೇಲೆ ಬುದ್ಧಿ ಬಂತು ಅಂತಾರೆ ಆದರೆ ನನಗೆ ಕೆಟ್ಟರೂ ಆ ರೀತಿಯ ಯಾವುದೇ ಒಳ್ಳೆಯ ಬುದ್ಧಿ ಬರಲಿಲ್ಲ!! ನಮ್ಮ ಬಹುತೇಕ ಸಮಸ್ಯೆಗಳಿಗೆ ಪ್ರಮುಖವಾಗಿ ನಾವೇ ಕಾರಣಕರ್ತರಾಗಿರುತ್ತೇವೆ, ಆದರೆ ಕೆಲವೊಮ್ಮೆ ಒಪ್ಪಿಕೊಳ್ಳಲು ಹೋಗುವುದಿಲ್ಲ. ಬೇರೆಯವರ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳೂ ನಡೆಯುತ್ತವೆ. ಸರಿಪಡಿಸಲು ಸಂದರ್ಭ ಸಿಕ್ಕಾಗಲೂ ಸುಮ್ಮನಿರುತ್ತೇವೆ. ಅಕಸ್ಮಾತ್ ಕೆಟ್ಟು ಹೋಗಿದ್ದು ಅಪ್ಪಿತಪ್ಪಿ ಸರಿಯಾಗಿಬಿಟ್ಟರೆ ಮತ್ತೆ ಕೆಡುವವರೆಗೂ ಸುಮ್ಮನಿದ್ದುಬಿಡುತ್ತೇವೆ. ಈ ಘಟನೆಯಲ್ಲಿ ಆಗಿದ್ದೂ ಅದೇ. ಏನೊಂದೂ ದಾರಿ ಕಾಣದೆ ಮನೆಯ ಕಡೆ ಹೆಜ್ಜೆ ಹಾಕಿದೆ.


ಮಾರನೇ ದಿನ ಇಂಟರ್ನೆಟ್ಟಲ್ಲಿ ರಿಕವರಿ ಮಾಡೋದು ಹೇಗೆ ಅಂಥಾ ಗೂಗಲ್ ಸರ್ಚ್ ಮಾಡಿದೆ, ಏನೇನೋ ಲಿಂಕ್ಗಳು ಬಂದವು. ಒಂದು ಲಿಂಕ್ ತುಂಬಾ ಗಮನ ಸೆಳೆಯಿತು, ಕ್ಲಿಕ್ ಮಾಡಿದೆ. ಓಪನ್ ಮಾಡಿ ನೋಡಿದರೆ ಅದರಲ್ಲಿದ್ದ ಸಲಹೆಗೆ ದಂಗಾಗಿದ್ದೆ. ಏನೆಂದರೆ, ಹಾರ್ಡ್ ಡಿಸ್ಕನ್ನು ಚೆನ್ನಾಗಿ  ಪ್ಯಾಕ್ ಮಾಡಿ  ಫ್ರೀಜರಲ್ಲಿ ೨೪ ಘಂಟೆ ಇತ್ತು ಆಮೇಲೆ ಕನೆಕ್ಟ್ ಮಾಡಿದರೆ ವರ್ಕ್ ಆಗೋ ಚಾನ್ಸ್ ಜಾಸ್ತಿ ಅಂಥಾ. ಸರಿ, ಪ್ರಯತ್ನ ಮಾಡಿದ್ರಾಯ್ತು ಅಂತ ಅದನ್ನ ಚೆನ್ನಾಗಿ ಕವರ್ ಮಾಡಿ ಆಫೀಸಿನ ಫ್ರಿಜ್ಜಲ್ಲಿಟ್ಟೆ. ಒಂದು ದಿವಸದ ನಂತರ ತೆಗೆದು ಮತ್ತೆ ಲ್ಯಾಪ್ಟಾಪಿಗೆ ಕನೆಕ್ಟ್ ಮಾಡಿದೆ. ಇಲ್ಲ ಕ್ಯಾರೇ ಅನ್ನಲಿಲ್ಲ!. ಸುಮ್ಮನೆ ಮಕಾಡೆ ಮಲಗಿಕೊಂಡಿತ್ತು. ಮತ್ತೆ ಇದರ ಬಗ್ಗೆ ಗೂಗಲ್ ಸರ್ಚ್ ಮಾಡಿದೆ. ಅದರಲ್ಲಿ ೧ ವಾರ, ೧೦-೧೫ ದಿನಗಳವರೆಗೆ ಇಟ್ಟು ಆಮೇಲೆ ಹಾಕಿದರೆ ಬರೋ ಚಾನ್ಸ್ ಜಾಸ್ತಿ ಅಂತಿತ್ತು, ತುಂಬಾ  ಜನಗಳ ಅನುಭವಗಳೂ ಇದಕ್ಕೆ ಪುಷ್ಟಿ ಕೊಟ್ಟಿತ್ತು. ಸರಿ ಅದೂ ಆಗಿಹೋಗಲಿ ಎಂದು ಮತ್ತೆ ಕವರ್ ಮಾಡಿ ಇಟ್ಟೆ. ೨ ವಾರ ಬಿಟ್ಟು ಆಮೇಲೆ ತೆಗೆದು ಕನೆಕ್ಟ್ ಮಾಡಿದೆ. ಇಲ್ಲ, ಕುಂಭಕರ್ಣನಾದಾರೂ ಎದ್ದೇಳುತಿದ್ದನೇನೋ ಇದು ಎದ್ದೇಳುವ ಯಾವುದೇ ಲಕ್ಷಣಗಳೂ ಕಾಣಲಿಲ್ಲ!. ಅಲ್ಲಿಗೆ ಆ ಪ್ರಯತ್ನ ಬಿಟ್ಟೆ.


ಮಾರನೇ ದಿನ ವೆಂಕಂಗೆ ಕಾಲ್ ಮಾಡಿ ಹೀಗಾಗಿದೆ ರಿಕವರ್ ಮಾಡೋಕೆ ಎಲ್ಲಿ ಹೋಗ್ಬೇಕು ಅಂದಾಗ ಅವ್ನು ಕನ್ನಿಂಗ್ಹ್ಯಾಮ್ ರೋಡ್ ಹತ್ತಿರ ಎಲ್ಲೋ ಒಂದು ಸೆಂಟರ್ ಇದೆ ಅಲ್ಲಿ ಚೆಕ್ ಮಾಡು ಅಂದ. ಸರಿ ಈ ಶನಿವಾರ ಹೋದರಾಯಿತೆಂದುಕೊಂಡೆ. ಶನಿವಾರ ನನ್ನ ಪ್ರಯಾಣ  ಕನ್ನಿಂಗ್ಹ್ಯಾಮ್ ರೋಡ್ ಕಡೆ ಸಾಗಿತು. ಅಡ್ರೆಸ್ ಹಿಡಿದುಕೊಂಡು ಒಂದು ತುದಿಯಿಂದ ಮತ್ತೊಂದು ತುದಿಗೆ ತಲುಪಿದೆ ಉಹುಂ ಎಲ್ಲೂ ಕಾಣಲಿಲ್ಲ, ಮತ್ತೆ ನೋಡೋಣವೆಂದು ಹಿಂತಿರುಗಿ ಹೊರಟೆ ಆಗಲೂ ಸಿಗಲಿಲ್ಲ. ತುಂಬಾ ಜನರನ್ನು ಕೇಳಿದರೂ ಗೊತ್ತಾಗಲಿಲ್ಲ. ತಕ್ಷಣಕ್ಕೆ ಒಬ್ಬ ಪೋಸ್ಟ್ ಮಾಸ್ಟರ್ ಸಿಕ್ಕಿದರು, ಅವರನ್ನು ಕೇಳಿದೆ.  ಕನ್ನಿಂಗ್ಹ್ಯಾಮ್ ರೋಡ್ ಮುಂದೆ ಹೋಗಿ ಅಲ್ಲಿ ಸಿಗುವ ಬಸ್ಟಾಪ್ ಹತ್ತಿರ ಹೋಗಿ ಹಾಗೆ ಸಿಗುವ ರೋಡಿನಲ್ಲಿ ಹೋಗಿ ನೋಡಿ ಅಲ್ಲೇ ಇದೆ ಎಂದರು. ಅಬ್ಬಾ ತುಂಬಾ ಥ್ಯಾಂಕ್ಸ್ ಅಂದು ಆ ಕಡೆಗೆ ಹೆಜ್ಜೆ ಹಾಕಿದೆ. ಅಲ್ಲಿ ಹೋಗಿ ನೋಡಿದರೆ ಅದೇ ಹೆಸರಿತ್ತು ಆದರೆ ಯಾಕೋ ಅನುಮಾನ ಬಂತು, ಹೋಗಿ ಕೇಳಿದರೆ ಅದು ಸಾಫ್ಟ್ವೇರ್ ಕಂಪನಿಯೆಂದೂ ಅದೇ ಹೆಸರಿನ ಸರ್ವಿಸ್ ಸೆಂಟರ್ ಮಿಲ್ಲರ್ಸ್ ರೋಡಲ್ಲಿ ಇದೆ ಎಂದೂ ಹೇಳಿದರು. ಸರಿ ಈಗ ಮಿಲ್ಲರ್ಸ್ ರೋಡಿಗೆ ಹೋಗಬೇಕಾಗಿತ್ತು. ಯಾವಾಗಲೋ ಮಿಲ್ಲರ್ಸ್ ರೋಡಿರುವುದು ಎಂ ಜಿ ರೋಡ್ ಹತ್ತಿರ ಎಂದು ಕೇಳಿದ ಹಾಗಿತ್ತು, ಹಾಗಾಗಿ ಯಾರನ್ನೂ ಕೇಳದೆ ಆ ಕಡೆಗೆ ನನ್ನ ಪ್ರಯಾಣ ಸಾಗಿತು (ಬೆಂಗಳೂರಿನಲ್ಲಿ ಇಷ್ಟು ವರ್ಷ ಇದ್ದರೂ ನಾನು ಹೀಗೆ ಯಾರನ್ನೂ ಕೇಳದೆ ಹೋಗಿರಲಿಲ್ಲ, ಅದೇ ನಾನು ಮಾಡಿದ ತಪ್ಪು). ಎಂ ಜಿ ರೋಡ್ ಬಳಿ ಬರುತ್ತಿದ್ದಂತೆ ಎದುರಿಗೆ ಸಿಕ್ಕವರೊಬ್ಬರನ್ನು ಕೇಳಿದೆ, ಅದಕ್ಕವರು ಮಿಲ್ಲರ್ಸ್ ರೋಡಿರುವುದು  ಕನ್ನಿಂಗ್ಹ್ಯಾಮ್ ರೋಡ್ ಪಕ್ಕ ಇಲ್ಲಿಲ್ಲ ಅಂದರು, ಅಯ್ಯೋ ನಾನು ಅಲ್ಲಿಂದಲೇ ಈಗ ಬಂದೆ ಅಂದಾಗ ಅವರಿಗೂ ಒಂಥರಾ ಅನಿಸಿತು. ನಾನು ಅವರೊಂದಿಗೆ ಹೆಜ್ಜೆ ಹಾಕಿದೆ, ಗ್ರಾಮೀಣ ಪಂಚಾಯತ್ ರಾಜಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದರು,ಮುಳಬಾಗಿಲಿನವರು. ನಾನು ನನ್ನ ಪರಿಚಯ ಹೇಳಿದೆ, ನಿಮ್ಮ ಜಿಲ್ಲೆಯಲ್ಲೂ ಕೆಲಸ ಮಾಡಿದ್ದೆ ಅಂದರು ಒಂದೆರಡು ನಿಮಿಷಗಳ ಮಾತುಕತೆ ಬಳಿಕ ನಾನು ಮತ್ತೆ ಮಿಲ್ಲರ್ಸ್ ರೋಡ್ ಕಡೆ ಹೊರಟೆ.

ಸುತ್ತಿ ಸುತ್ತಿ ಸುಸ್ತಾಗಿದ್ದರಿಂದ ಕನ್ನಿಂಗ್ಹ್ಯಾಮ್ ರೋಡ್ ಬಳಿಯಿರುವ ರಿಲಯನ್ಸ್ ಟೈಮೌಟ್ ಒಳಗೆ ಹೋದೆ. ಸ್ವಲ್ಪ ಹೊತ್ತು ಪುಸ್ತಕಗಳನ್ನ ನೋಡಿಕೊಂಡು ಬರೋಣವೆಂದು. ೨೦ ನಿಮಿಷ ಅಲ್ಲಿದ್ದು ಹೊರಗೆ ಬಂದೆ, ಮಳೆ ಜೋರಾಗಿ ಸುರಿಯುತ್ತಿತ್ತು. ಇನ್ನೇನು ಮಾಡುವುದೆಂದು ಮತ್ತೆ ಒಳಕ್ಕೆ ಹೋದೆ.  ಯೋಗರಾಜ್ ಭಟ್ಟರ ಮುಂಗಾರು ಮಳೆಯ ಪುಸ್ತಕವನ್ನ ಅರ್ಧ ಓದಿ ಮಳೆ ನಿಂತಿದೆಯೇ ಎಂದು ನೋಡಲು ಹೊರಹೋದೆ ಆದರೆ ಇನ್ನೂ ಬರುತ್ತಲೇ ಇತ್ತು, ಮಳೆಯಲ್ಲಿಯೇ ಪೂರ್ತಿ ಓದಿ ಮುಗಿಸಿ ಹೊರಗೆ ಹೊರಟೆ!  ಮಿಲ್ಲರ್ಸ್ ರೋಡಿಗೆ ಹೋದೆ. ಅಲ್ಲಿ ೧೦-೧೫ ನಿಮಿಷ ಅಲೆದಾಡಿದರೂ ಸಿಗಲಿಲ್ಲ. ಕೊನೆಗೆ ಬೇಸತ್ತು ಜಸ್ಟ್ ಡೈಲ್ಗೆ ಕಾಲ್ ಮಾಡಿದೆ, ಅವರು ಸರಿಯಾದ ಅಡ್ರೆಸ್ ಕೊಟ್ಟರು. ಹೋಗಿ ಅಲ್ಲಿ ಕೇಳಿದರೆ ರಿಕವರಿ ಇಲ್ಲಿ ಈಗ ಮಾಡುವುದಿಲ್ಲ ಎಂದರು. ಕನ್ಫಾರ್ಮ್ ಮಾಡಲು ಮತ್ತೆ ಕೇಳಿದೆ, ಮೊದಲು ಇಲ್ಲಿ ಮಾಡ್ತಿದ್ವಿ ಈಗ ಇಲ್ಲ ಅಂತ ಉತ್ತರ ಬಂತು.  ಅಷ್ಟೆಲ್ಲಾ ಒದ್ದಾಡಿದರೂ ಕೊನೆಗೂ ಫಲಿತಾಂಶ ಸಿಗಲಿಲ್ಲ. ಭಾರವಾದ ಹೆಜ್ಜೆಯಿಂದ ಮನೆಯ ಕಡೆ ಹೆಜ್ಜೆ ಹಾಕಿದೆ.

ಮಾರನೇ ದಿನ ಇಂಟರ್ನೆಟ್ಟಲ್ಲಿ ಹುಡುಕುತ್ತಾ ಹೋದೆ. ಜೆ ಪಿ ನಗರದಲ್ಲಿಲ್ಲೋ ಒಂದು ಕಡೆ ಸೆಂಟರ್ ಇದೆ ಎಂದು ತಿಳಿದ ತಕ್ಷಣ ವೆಂಕಂಗೆ ಹೇಳಿದೆ. ನಾಳೆ ಹಾರ್ಡ್ ಡಿಸ್ಕ್ ತಲುಪ್ಸು, ನನ್ನ ಆಫೀಸಿಗೆ ಸ್ವಲ್ಪ ಹತ್ತಿರ ಆಗಬಹುದು ಅಂದ. ಹಾರ್ಡ್ ಡಿಸ್ಕ್ ನನ್ನ ಹೆಂಡತಿಯಿಂದ ಅವನ ಹೆಂಡತಿಯನ್ನು ತಲುಪಿ ಕೊನೆಗೆ ವೆಂಕನ ಕೈಗೆ ಹೋಯ್ತು , ಆದರೆ ಅವನಿಗೆ ಕೆಲಸ ಸ್ವಲ್ಪ ಜಾಸ್ತಿಯಿದ್ದುದರಿಂದ ಆ ಕಡೆ ಹೋಗಲಿಲ್ಲ. ಎರಡು ವಾರದ ಬಳಿಕ ವೆಂಕ ಅಲ್ಲಿಗೆ ಹೋದ, ಆದರೆ ಅವನು ಅಂದುಕೊಂಡಂತೆ ಅದೇನು ಅಷ್ಟು ಸಮೀಪದಲ್ಲಿರಲಿಲ್ಲ. ಅಲ್ಲಿಗೆ ಹೋದಾಗ ಅವರು ಬೇರೆ ಏನೋ ಕೆಲಸದ ಒತ್ತಡದಲ್ಲಿದ್ದುದರಿಂದ ಮುಂದಿನ ದಿನ ಬರಲು ಹೇಳಿದರು. ಮಾರನೇ ದಿನ ಹೋದಾಗ ಸರ್ವಿಸ್ ಚಾರ್ಜ್ ೨೫೦೦ ರೂ ಆಮೇಲೆ ರಿಕವರಿಗೆ ಬೇರೆಯದೇ ಚಾರ್ಜ್ ಅಕಸ್ಮಾತ್ ರಿಕವರಿ ಮಾಡಲಾಗದಿದ್ದರೆ ೨೫೦೦ ಕಂಪನಿಯ ಹುಂಡಿಗೆ ಅಂತ ವೆಂಕನಿಂದ ಕಾಲ್ ಬಂತು. ನಾನು ಹೇಳೋದಾದ್ರೆ ಸುಮ್ನೆ ಯಾಕೆ ಒದ್ದಾಡ್ತೀಯಾ ಬಿಟ್ಟಾಕು ಅಂದ. ಬೇರೆ ಏನಾದರೂ ಆಗಿದ್ದಲ್ಲಿ ಬಿಡಬಹುದಿತ್ತು ಯಾಕೋ ಫೋಟೋಗಳು ಬೇಕೆಬೇಕೆನಿಸುತ್ತಿತ್ತು ಆದರೆ ಅದಕ್ಕೆ ಅಷ್ಟೊಂದು ದುಡ್ಡು ಸುರಿಯಬೇಕೇ? ಎಲ್ಲಾ ಸೇರಿ ೪-೫ ಸಾವಿರವಾದಲ್ಲಿ ಪರವಾಗಿಲ್ಲ ಆದರೆ ಇವರು ರಿಕವರ್ ಮಾಡ್ತೀವಿ ಎಂದು ಜಾಸ್ತಿ ಕೇಳುವ ಸೂಚನೆ ಬೇರೆ, ಏನು ಮಾಡುವುದು? ಮನಸ್ಸಲ್ಲಿ ಹೊಯ್ದಾಟ ಶುರುವಾಗಿತ್ತು. ವೆಂಕ, ಕೊಡ್ಬೇಡ. ನಾಳೆ ನನಗೆ ತಲುಪ್ಸು ಆಮೇಲೆ ಯೋಚಿಸ್ತೀನಿ ಅಂದೆ. ಪಾಪ ತನ್ನದಲ್ಲದ ಕೆಲಸಕ್ಕೆ ಅವನೂ ಸುತ್ತಿ ಸುತ್ತಿ ಸುಸ್ತಾಗಿದ್ದ!

ಇದೇ ಕೊನೆಯ ಪ್ರಯತ್ನವೆಂದು ಮತ್ತೆ ಮಾರನೇ ದಿನ ಇಂಟರ್ನೆಟ್ಟಲ್ಲಿ ಹುಡುಕುತ್ತಾ ಹೋದೆ. ಎಂ ಜಿ ರೋಡಲ್ಲಿ ಒಂದಿತ್ತು. ನಮ್ಮ ಆಫಿಸ್ ಹುಡುಗನನ್ನು ಕಳುಹಿಸಿದೆ. ೫೦೦ ರೂ ಸರ್ವಿಸ್ ಚಾರ್ಜ್ ಮಾರನೇ ದಿನ ಪೂರ್ತಿ ವಿವರ ಕೊಡುವುದಾಗಿ ನನಗೆ ಹೇಳಿದರು. ಅವನು ೫೦೦ ರೂ ಕಟ್ಟಿ ಬಂದ. ಶನಿವಾರ ಅಲ್ಲಿಂದ ಕಾಲ್ ಬಂತು, ನಿಮ್ಮ ಡೇಟಾ ೬೦% ರಿಕವರ್ ಮಾಡೋ ಚಾನ್ಸ್ ಇದೆ, ನೀವು ೧೪೦೦೦+ ೧೨.೩೬% ಸರ್ವಿಸ್ ಟ್ಯಾಕ್ಸ್ ಕಟ್ಬೇಕು ಅಂತ ಅಂದ್ಲು. ಸರಿ ನಾನು ಸೋಮವಾರ ಯಾವುದನ್ನೂ ಹೇಳ್ತೀನಿ ಅಂದು ಕಾಲ್ ಕಟ್ ಮಾಡಿದೆ. ಅಲ್ಲಿಗೆ ನಿರ್ಧಾರ ಮಾಡಿದ್ದೆ, ಸಾಕು ವಾಪಸ್ ತಂದು ಡೆಲ್ ಸರ್ವಿಸ್ ಸೆಂಟರ್ಗೆ ಕಾಲ್ ಮಾಡಿ ಹೊಸ ಹಾರ್ಡ್ ಡಿಸ್ಕ್ ಹಾಕಿ ಲ್ಯಾಪ್ಟಾಪ್ ಸರಿ ಮಾಡಿಸಿದ್ರಾಯ್ತು ಅಂತ. ಸೋಮವಾರ ಆಫಿಸ್ ಹುಡುಗನನ್ನು ಕಳುಹಿಸಿ ಹಾರ್ಡ್ ಡಿಸ್ಕ್ ವಾಪಸ್ ತರಿಸಿದೆ. ಡೆಲ್  ಸರ್ವಿಸ್ ಸೆಂಟರ್ಗೆ ಕೊಡುವ ಮುನ್ನ ಒಮ್ಮೆ ಕನೆಕ್ಟ್ ಮಾಡಿ ನೋಡಿದ್ರಾಯ್ತು ಅಂತ ಒಂದು ಡೆಸ್ಕ್ಟಾಪ್ಗೆ ಹಾರ್ಡ್ ಡಿಸ್ಕ್ ಕನೆಕ್ಟ್ ಮಾಡಿದೆ.

ಆಶ್ಚರ್ಯ!!, ಸ್ಟಾರ್ಟಿಂಗ್ ವಿಂಡೋಸ್ ಅಂಥಾ ಬಂದು ವಿಂಡೋಸ್ ೭ ಬೂಟ್ ಆಯ್ತು. ತಡ ಮಾಡದೆ ಆಫೀಸಲ್ಲಿದ್ದ ಎಕ್ಸ್ಟರ್ನಲ್ ಹಾರ್ಡ್ ಡಿಸ್ಕ್ ಕನೆಕ್ಟ್ ಮಾಡಿ ಎಲ್ಲ ಬ್ಯಾಕಪ್ ತೆಗೆದುಕೊಂಡೆ. ಆಮೇಲೆ ಲ್ಯಾಪ್ಟಾಪಿಗೆ ಕನೆಕ್ಟ್ ಮಾಡಿದೆ, ವರ್ಕ್ ಆಗುವುದರ ಬಗ್ಗೆ ಅನುಮಾನವಿತ್ತು. ಆದರೆ ಸ್ಟಾರ್ಟ್ ಆಯ್ತು!! ಸ್ವಲ್ಪವೂ ತಡಮಾಡದೆ ಅಂಗಡಿಗೆ ಹೋಗಿ ಖಾಲಿ ಡಿವಿಡಿ ತಂದು ಎಲ್ಲವನ್ನೂ ಅದಕ್ಕೆ ಹಾಕಿಕೊಂಡೆ. ಈಗ ನೀರು ಕುಡಿದು (ಮೊದಲು ಉಪಯೋಗಿಸುತ್ತಿದ್ದ ಬಾಟಲಿಯನ್ನು ಮನೆಯಲ್ಲೇ ಇಟ್ಟಿದ್ದೇನೆ) ಕೆಳಗಿಟ್ಟ ಮೇಲೆ ಮುಂದಿನ ಕೆಲಸ!

Rating
No votes yet

Comments

Submitted by RAMAMOHANA Fri, 10/19/2012 - 15:24

>> ಆಶ್ಚರ್ಯ!!, ಸ್ಟಾರ್ಟಿಂಗ್ ವಿಂಡೋಸ್ ಅಂಥಾ ಬಂದು ವಿಂಡೋಸ್ ೭ ಬೂಟ್ ಆಯ್ತು. ತಡ ಮಾಡದೆ ಆಫೀಸಲ್ಲಿದ್ದ ಎಕ್ಸ್ಟರ್ನಲ್ ಹಾರ್ಡ್ ಡಿಸ್ಕ್ ಕನೆಕ್ಟ್ ಮಾಡಿ ಎಲ್ಲ ಬ್ಯಾಕಪ್ ತೆಗೆದುಕೊಂಡೆ. ಆಮೇಲೆ ಲ್ಯಾಪ್ಟಾಪಿಗೆ ಕನೆಕ್ಟ್ ಮಾಡಿದೆ, ವರ್ಕ್ ಆಗುವುದರ ಬಗ್ಗೆ ಅನುಮಾನವಿತ್ತು. ಆದರೆ ಸ್ಟಾರ್ಟ್ ಆಯ್ತು!! ಸ್ವಲ್ಪವೂ ತಡಮಾಡದೆ ಅಂಗಡಿಗೆ ಹೋಗಿ ಖಾಲಿ ಡಿವಿಡಿ ತಂದು ಎಲ್ಲವನ್ನೂ ಅದಕ್ಕೆ ಹಾಕಿಕೊಂಡೆ. ಈಗ ನೀರು ಕುಡಿದು (ಮೊದಲು ಉಪಯೋಗಿಸುತ್ತಿದ್ದ ಬಾಟಲಿಯನ್ನು ಮನೆಯಲ್ಲೇ ಇಟ್ಟಿದ್ದೇನೆ) ಕೆಳಗಿಟ್ಟ ಮೇಲೆ ಮುಂದಿನ ಕೆಲಸ! <<

ಸಾಕಷ್ಟು ನೀರು ಕುಡ್ದಿದ್ರಲ್ಲ ಅದರ‌ ಒಡಲು ಬಗೆಯಲು, ಮತ್ಯಾಕೆ ಅದರಮು0ದೆ ನೀರು ಕುಡಿದ್ರ ಚಿಕ್ಕು ಚೆನ್ನಾಗಿದೆ ನಿಮ್ಮ ಪೇಚಾಟ‌
ರಾಮೋ.

Submitted by RAMAMOHANA Fri, 10/19/2012 - 15:28

>> ಆಶ್ಚರ್ಯ!!, ಸ್ಟಾರ್ಟಿಂಗ್ ವಿಂಡೋಸ್ ಅಂಥಾ ಬಂದು ವಿಂಡೋಸ್ ೭ ಬೂಟ್ ಆಯ್ತು. ತಡ ಮಾಡದೆ ಆಫೀಸಲ್ಲಿದ್ದ ಎಕ್ಸ್ಟರ್ನಲ್ ಹಾರ್ಡ್ ಡಿಸ್ಕ್ ಕನೆಕ್ಟ್ ಮಾಡಿ ಎಲ್ಲ ಬ್ಯಾಕಪ್ ತೆಗೆದುಕೊಂಡೆ. ಆಮೇಲೆ ಲ್ಯಾಪ್ಟಾಪಿಗೆ ಕನೆಕ್ಟ್ ಮಾಡಿದೆ, ವರ್ಕ್ ಆಗುವುದರ ಬಗ್ಗೆ ಅನುಮಾನವಿತ್ತು. ಆದರೆ ಸ್ಟಾರ್ಟ್ ಆಯ್ತು!! ಸ್ವಲ್ಪವೂ ತಡಮಾಡದೆ ಅಂಗಡಿಗೆ ಹೋಗಿ ಖಾಲಿ ಡಿವಿಡಿ ತಂದು ಎಲ್ಲವನ್ನೂ ಅದಕ್ಕೆ ಹಾಕಿಕೊಂಡೆ. ಈಗ ನೀರು ಕುಡಿದು (ಮೊದಲು ಉಪಯೋಗಿಸುತ್ತಿದ್ದ ಬಾಟಲಿಯನ್ನು ಮನೆಯಲ್ಲೇ ಇಟ್ಟಿದ್ದೇನೆ) ಕೆಳಗಿಟ್ಟ ಮೇಲೆ ಮುಂದಿನ ಕೆಲಸ! <<

ಸಾಕಷ್ಟು ನೀರು ಕುಡ್ದಿದ್ರಲ್ಲ ಅದರ‌ ಒಡಲು ಬಗೆಯಲು, ಮತ್ಯಾಕೆ ಅದರಮು0ದೆ ನೀರು ಕುಡಿದ್ರ ಚಿಕ್ಕು ಚೆನ್ನಾಗಿದೆ ನಿಮ್ಮ ಪೇಚಾಟ‌
ರಾಮೋ.

Submitted by Prakash Narasimhaiya Fri, 10/19/2012 - 15:49

In reply to by RAMAMOHANA

ಆತ್ಮೀಯ ಚಿಕ್ಕು ರವರೆ,
ನಿಮ್ಮ ಲಾಪ್ ಟಾಪ್ ಸಮಸ್ಯೆ ಹೆಡ್ ಟಾಪ್ ಆಗಿ ತಲೆತಿಂದು ಮೆದುಳಿಗೆ ಕೈಹಾಕಿ ಇನ್ನೇನು ಗತಿ? ಅನ್ನುವ ಹೊತ್ತಿಗೆ ಪುನಹ ಲ್ಯಾಪ್ ಟಾಪ್ ನಲ್ಲೆ ಬಂದು ಕೂತಿದ್ದು ಸಂತೋಷಕರವಾದ ಸುದ್ದಿ. ಹ್ಯಾಪಿ ಎಂಡಿಂಗ್. ಪ್ರಸ್ತುತಿ ಸ್ವಾರಸ್ಯಕರವಾಗಿದೆ.

Submitted by bhalle Fri, 10/19/2012 - 22:12

ಹಲವಾರು ತಲೆಹರಟೆಯೊಂದಿಗೆ ನನ್ನ ಪ್ರತಿಕ್ರಿಯೆ ....
Work place risk assessment ಬರಹ ಮುದ್ದಾಗಿದೆ :-)))
೧. ಒಂದೋ ಕೆಲಸ ಮಾಡಿ, ಇಲ್ಲಾ ಬಾಟ್ಲಿ ಎತ್ರೀ, ಎರಡೂ ಮಾಡಬೇಡಿ :-)
೨. > ಸುಮ್ನೆ ಮಾತಿಗೆ ಹೇಳ್ತೀನಿ, ಕ್ಯಾಮೆರಾ ನಿಂದೇ ಆದ್ರೂ ಫೊಟೋ ತೆಗೆದವರು ಬೇರೆಯವರು ಅಲ್ವೇ? ;-)
೩. > ಮಳೆಯಲ್ಲಿ ಓಡಾಡಿದರೆ, ಶೋ-ಸಾಕ್ಸ್ ಎಲ್ಲಾ ಒದ್ದೆಯಾಗುತ್ತೆ, ಹಾಗಾಗಿ ಭಾರವಾದ ಹೆಜ್ಜೆ ಎಂದು ಅರ್ಥೈಸಿಕೊಳ್ಳಲೇ? :-)

Submitted by ಗಣೇಶ Fri, 10/19/2012 - 23:46

ಮತ್ತೆ ಕೆಡುವವರೆಗೂ ಸುಮ್ಮನಿದ್ದುಬಿಡುತ್ತೇವೆ. :)
-ಈಗಲಾದರೂ ಫೋಟೋ ಎಲ್ಲರಿಗೂ ಕಳುಹಿಸಿದಿರಾ ಇಲ್ಲವಾ?
ಚಿಕ್ಕು, ಈ ತರಹದ ತೊಂದರೆ ಆದಾಗ ಎರಡು ಏಟು ಕೊಟ್ಟು ನೋಡಬೇಕು. ಕೆಲವೊಮ್ಮೆ ಸರಿಯಾಗುವುದು.:)
ಸದ್ಯ ಸರಿಯಾಯಿತಲ್ಲಾ..
-ಗಣೇಶ.

Submitted by lpitnal@gmail.com Sat, 10/20/2012 - 09:09

ಆತ್ಮೀಯ ಚಿಕ್ಕುರವರೇ. ಕುಂಭಕರ್ಣನಂತಹ ಹಾರ್ಡ ಡಿಸ್ಕ್ ಕಥಾ ಪ್ರಸಂಗ ತುಂಬ ಚನ್ನಾಗಿದೆ. ಅಂತೂ ತಮ್ಮ ಫೋಟೋಸಹಿತ ದಾಖಲೆಗಳು ಸಿಕ್ಕದ್ದು ಸಮಾಧಾನ ತಂತು.

Submitted by venkatb83 Sat, 10/20/2012 - 17:02

In reply to by Jayanth Ramachar

೧೪,೦೦೦ ಪ್ಲಸ್....!
\|||/ ...!!
ಚಿಕ್ಕು
ಚಿಕ್ಕು
ನೀರೆ ಎಲೆಕ್ಟ್ರಾನಿಕ್ ವಸ್ತುಗಳಿಗೆ ಪರಮ ಶತ್ರು..!!
ನಾ ಅಂತೂ ಮನೆಯಲ್ಲಿ ಕೀ ಬೋರ್ಡ್ ಮುಂದೆ ಇಟ್ಟುಕೊಂಡು ಅದರಲೇ ಎಡಗೈಲಿ ಕೆಲಸ ಮಾಡ್ತಾ ಬಲಗೈಲಿ ಊಟ ಮಾಡೋದು ಜಾಸ್ತಿ.. ಆದ್ರೆ ಅಪ್ಪಿ ತಪ್ಪಿಯೂ ಒಮ್ಮೆಯೂ ನೀರ್ ಬಿದ್ದಿಲ್ಲ...!
ಅಂತೂ ನಿಮ್ ಡಾಟಾ ಎಲ್ಲ ವಾಪಸ್ ಸಿಕ್ಕಿದ್ದು ಅಲ್ದೆ ಹಾರ್ಡ್ ಡಿಸ್ಕ್ ಮತ್ತೆ ಶುರು ಆಯ್ತಲ್ಲ..
ಭಲೇ ಉಳಿತಾಯ ಮಾಡಿದಿರಿ...!!
ಅದ್ಕೇ ಪಾರ್ಟಿ ಕೊಡಿ..!!
ಅಂದ್ ಹಾಗೆ ಕಾಫಿ ಕಪ್ಪು ಕೈನಲ್ಲಿ ಹಿಡಿದು ಸದಾ ಹಸಂಮುಖರಗಿರುವ ನೇವು ಕಾಫಿ ಅದ್ರ ಮೇಲೆ ಯಾವತ್ತು ಚೆಲ್ದೆ ಇರೋದು ಅಚ್ಚರಿ..>!

ನೆಟ್ನಲ್ಲಿ ಏನೇನೋ ಕೊಟ್ರು ಅಂತ ಹಾಗೆಲ್ಲ ಟ್ರೈ ಮಾಡ್ಬೇಡಿ...! ಆಮೇಲೆ ಫ್ರಿಜ್ ಹಾಳಾಗಿ ಹೋದೀತು..!!
ಶುಭವಾಗಲಿ..

***********ನಾಡ ಹಬ್ಬ ದಸರಾ ಶುಭಾಶಯಗಳು***********

\|/