ಸುಗ್ಗಿಯ ಹಾಡು- ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
ಸುಗ್ಗಿಯ ಹಾಡು
ರಚನೆ: ದ. ರಾ. ಬಳುರಗಿ
ದರ್ಶನ: ಲಕ್ಷ್ಮೀಕಾಂತ ಇಟ್ನಾಳ
ಸುಗ್ಗಿಯು ಬಂದಿತು ಹಿಗ್ಗನು ತಂದಿತು
ನಮ್ಮಯ ನಾಡಿನ ಜನಕೆಲ್ಲ
ಸಗ್ಗದ ಸುಖವನು ನೀಡುತ ರೈತಗೆ
ದುಡಿಯಲು ಹಚ್ಚುತ ದಿನವೆಲ್ಲ
ಬೆಳೆಸಿಯ ತಿನ್ನುತ ಮಜ್ಜಿಗೆ ಕುಡಿಯುತ
ಇರುವರು ರೈತರು ಹೊಲದಲ್ಲಿ
ಕಣವನು ಕಡಿಯುತ ನೀರನು ಹೊಡೆಯುತ
ಮೇಟಿಯ ಕುಣಿಯನು ಅಗೆಯುವರು
ತೆನೆಯನು ಮುರಿಯುತ ಹೆಸರನು ಹೇಳುತ
ಗುಂಪಿಯ ನೆಳೆಯುತ ಒಗೆಯುವರು
ಹಂತಿಯ ಹೊಡೆಯುತ ಕಂತಿಯ ತೆಗೆಯುತ
ಬೆಳಗಿನವರೆಗೂ ಹಾಡುವರು
ಕಾಳನು ತೂರುತ ಗಾಡಿಯ ಹೇರುತ
ಊರಿನ ಕಡೆಗೆ ಓಡುವರು
ಶ್ರೀ ದ. ರಾ. ಬಳುರಗಿಯವರು ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ಅಂದರೆ 1954 ರಲ್ಲಿ ಆರನೇ ತರಗತಿಯಲ್ಲಿದ್ದಾಗ ಅವರ ಗುರುಗಳು ಹಾಗು ಖ್ಯಾತ ಮಕ್ಕಳ ಸಾಹಿತಿಗಳಾದ ಶಂ. ಗು ಬಿರಾದಾರ ತಮ್ಮ ವಿದ್ಯಾರ್ಥಿಗಳಿಗೆ ಹುರುಪು, ಪ್ರೋತ್ಸಾಹನೀಡಿ ಬರೆಯಲು ಪ್ರೇರೇಪಿಸಿದ್ದರ ಫಲ 11 ರ ಬಾಲಕನಿಂದ ರಚಿತವಾದ ಹಾಡು, ‘ಸುಗ್ಗಿಯ ಹಾಡು’. ಈ ಹಾಡನ್ನು ಇನ್ನೊಬ್ಬ ಶಿಶು ಸಾಹಿತಿ ಶಿಶು ಸಂಗಮೇಶ ಅವರು, ‘ಪುಟ ಚಂಡು’ ಎಂಬ ಕವನ ಸಂಕಲನದಲ್ಲಿ ಇದನ್ನು ಪ್ರಕಟಿಸಿದ್ದು 1955 ರ ಸುಮಾರು. ಸರಕಾರ ಈ ಕವನ ಸಂಕಲನದಿಂದ ಆಯ್ದು ಈ ಪದ್ಯವನ್ನು 1956 ರಲ್ಲಿ ಮೂರನೇ ತರಗತಿಗೆ ಪಠ್ಯವನ್ನಾಗಿಸಿದೆ. ಅಂದಿನಿಂದಲೂ ಪ್ರಾಥಮಿಕ ವಿವಿಧ ತರಗತಿಗಳಲ್ಲಿ ಈ ಹಾಡು ಜನಜನಿತ. ಒಂದು ಶತಮಾನದ ಒಂದು ನೂರು ಅತ್ಯುತ್ತಮ ಮಕ್ಕಳ ಪದ್ಯಗಳಲ್ಲಿ ‘ಸುಗ್ಗಿ’ ಯೂ ಒಂದೆಂದು ಪರಿಗಣಿತವಾಗಿದೆ. ಅಂದು ಈ ಹಾಡಿಗೆ ರಾಯಲ್ಟಿಯಾಗಿ ಸರಕಾರವು 480 ರೂಪಾಯಿಗಳ ಚೆಕ್ ನೀಡಿದ್ದು, ರೈತರಾದ ಇವರ ತಂದೆಯವರೊಂದಿಗೆ ವಿಜಾಪೂರದ ಜಿಲ್ಲಾ ಟ್ರೇಜರಿಗೆ ಅದನ್ನು ನಗದೀಕರಣಕ್ಕಾಗಿ ಹೋದಾಗ ಈ ಹುಡುಗನತ್ತ ಮೆನೇಜರರು ನೋಡಿ, ಶಾಲೆಗೆ ಹೋಗುವ ಹುಡುಗನನ್ನು ಜೊತೆಗೇಕೆ ಕರೆದುಕೊಂಡು ಬಂದಿರಿ, ಎಂಬ ಕಳಕಳಿಯ ಮಾತು ಆಡಿದಾಗ, ಇಲ್ಲ ಸರ್, ಈ ಚೆಕ್ ಇವನಿಗೇ ಬಂದಿದೆ, ನಾವೇ ಅವನ ಸಂಗಡ ಬಂದಿದ್ದೇವೆ, ಎಂದು ವಿವರಿಸಿದಾಗ, ಮೆನೇಜರು ಖುಷಿಪಟ್ಟು ಈ ಬಾಲಕನ ಕವಿ ಪ್ರತಿಭೆಗೆ ಮೆಚ್ಚಿ ‘ಚಹ’ ತರಿಸಿ ಕುಡಿಸಿ ಕಳುಹಿಸಿದ್ದನ್ನು ನೆನೆಯುತ್ತಾರೆ ಬಳುರಗಿಯವರು. ಅವರ ತಂದೆಯವರು ಅಂದೇ ಆ ಹಣದಿಂದ ಅರವತ್ತು ರೂಪಾಯಿಗೆ ತೊಲೆಯಂತೆ ಎಂಟು ತೊಲೆ ಬಂಗಾರವನ್ನು ಕೊಂಡು ಮನೆಗೆ ತೆಗೆದುಕೊಂಡು ಹೋಗಿದ್ದನ್ನು ಇಂದಿಗೂ ನೆನೆಯುತ್ತಾರೆ. 1971 ರ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಇಂದಿರಾ ಗಾಂಧಿಯವರನ್ನು ಸಾರ್ವಜನಿಕರು ಬಂಗಾರದಲ್ಲಿ ತೂಗಿ ಅದನ್ನು ಉಡುಗೊರೆಯಾಗಿ ನೀಡಿದ ನೆಲ ವಿಜಾಪೂರ, ಅಷ್ಟೇ ಏಕೆ, ನೆನ್ನೆ ಮೊನ್ನೆ ಖ್ಯಾತ ನಟ, ನಿರ್ಮಾಪಕ, ಹಾಗೂ ಉದ್ಯಮಿ ಬಸಂತ ಕುಮಾರ ಪಾಟೀಲರು ತಮ್ಮ ತಾಯಿಯನ್ನು ಬಂಗಾರದಲ್ಲಿ ತುಲಾಭಾರ ಮಾಡಿದ್ದು ಈ ನೆಲದಲ್ಲಿ ತಾನೇ, ಆ ಹಣವನ್ನು ಸಾರ್ವಜನಿಕ ಸೇವೆಗೆ ಕೊಡುಗೆ ನೀಡಿದ್ದನ್ನು ನಾವೆಲ್ಲ ಬೆರಗುಗಣ್ಣುಗಳಿಂದ ನೋಡಿದ್ದೇವೆ.
ಇಂತಹ ವಿಜಾಪೂರ ಜಿಲ್ಲೆಯ ನೆಲದ ಒಂದೂರು ಸಾರವಾಡದಲ್ಲಿ ಜುಲೈ 20, 1943 ರಂದು ಜನಿಸಿದ ಡಿ. ಆರ್. ಬಳುರಗಿ ಯವರು ಏಳನೆಯ ತರಗತಿಯವರೆಗೆ ಸಾರವಾಡದಲ್ಲಿ ನಂತರ ವಿಜಾಪೂರದ ಸಿದ್ದೇಶ್ವರ ಹೈಸ್ಕೂಲ್ ಹಾಗೂ ವಿಜಯ ಕಾಲೇಜಿನಲ್ಲಿ ಬಿ.ಎಸ್ಸಿ ಶಿಕ್ಷಣ ಪೂರೈಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಮ್ಎಸ್ಸಿ ಸ್ನಾತಕೋತ್ತರ ಪದವಿ ಪಡೆದು, ಸಂಕೇಶ್ವರದಲ್ಲಿ ಒಂದು ವರ್ಷ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ 1969 ರಲ್ಲಿ ರಾಯಚೂರಿನ ಎಲ್.ವಿ.ಡಿ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾರೆ, ಅಲ್ಲಿಂದಲೇ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಕುಲಸಚಿವರಾಗಿ ನಾಲ್ಕು ವರ್ಷಗಳ ಸೇವೆ, ಐದು ವರ್ಷ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ವಿಜ್ಞಾನ ಕೇಂದ್ರದಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿ ವಿಜ್ಞಾನ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ ಮೊದಲ್ಗೊಂಡು ಹಲವಾರು ಜನಾನುರಾಗಿ ಕೆಲಸ. ಬಹಳಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ವಿಜ್ಞಾನ ಗೊತ್ತಿದೆ, ಆದರೆ ಅರ್ಥವಾಗಿರುವುದಿಲ್ಲ. ಗೊತ್ತ್ತಿದ್ದರೆ ನೆನಪಿಟ್ಟುಕೊಳ್ಳಬೇಕಾಗುತ್ತದೆ, ಆದರೆ ಅರ್ಥವಾದರೆ ನೆನಪಿಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಎಂದು ಸರಳ ಸಿದ್ಧಾಂತವನ್ನು ಅರುಹುತ್ತಾರೆ, ವಿಜ್ಞಾನ ವಿಷಯಗಳ ಮಾಹಿತಿ ಪ್ರಾತ್ಯಕ್ಷಿಕೆಗಳ ಮುಖಾಂತರ ತೋರಿಸಿ ಅವುಗಳ ಹಿಂದಿನ ಸಿದ್ಧಾಂತಗಳನ್ನು ನಮಗೆ ಮನವರಿಕೆ ಮಾಡಿಸುತ್ತಾರೆ, ಡಾ: ಹಾ. ಮಾ. ನಾಯಕರು ಇವರ ಬಗ್ಗೆ ಒಂದೆಡೆ ದಾಖಲಿಸಿದ್ದು ಹೀಗಿದೆ, “ ಅಧ್ಯಾಪಕ, ಅದರಲ್ಲೂ ವಿಜ್ಞಾನ ಬೋಧಿಸುವವರಲ್ಲಿ, ಅವರಿಗಿಂತ ಸಮರ್ಥರು ನಮ್ಮಲ್ಲಿದ್ದಾರೆಂದು ನನಗೆ ಅನ್ನಿಸುವುದಿಲ್ಲ, “ ಮುಂದುವರೆದು ಇವರನ್ನು ‘ವಿಜ್ಞಾನ ಕೇಂದ್ರದ ಕಿಂದರಿಜೋಗಿ’ ಎಂದು ಕರೆದದ್ದು ಸಾಮಾನ್ಯವೇ. ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಈ ಕುರಿತು ಅನೇಕ ಕಾರ್ಯಾಗಾರಗಳಲ್ಲಿ ಅವರು ಭಾಗವಹಿಸಿ ಮಾರ್ಗದರ್ಶನ ಮಾಡಿದ್ದಾರೆ, ಜಮ್ಮು ಕಾಶ್ಮೀರ, ಹರಿಯಾಣ, ಪಂಜಾಬು, ದೆಹಲಿ, ಈಶಾನ್ಯ ರಾಜ್ಯಗಳು, ತಮಿಳುನಾಡು ಹೀಗೆ ಎಲ್ಲೆಂದರಲ್ಲಿ ಸರಕಾರಗಳಿಂದ ಇಲ್ಲವೇ ಸಂಸ್ಥೆಗಳಿಂದ ಕರೆಬಂದಲ್ಲಿ ಹೋಗಿ ವಿಜ್ಞಾನದ ಬಗ್ಗೆ ಸರಳವಾಗಿ ಪ್ರಾತ್ಯಕ್ಷಿಕೆ ಸಹಿತ ಉಪನ್ಯಾಸ ನೀಡುತ್ತಾರೆ, ಪಂಜಾಬದಲ್ಲಿ ವಿದ್ಯಾರ್ಥಿಗಳಿಂದಲೇ ರಾಕೆಟ್ ತಯಾರಿಸಿ ಉಡಾಯಿಸಿದವರು. ಇವರೊಬ್ಬ ಕಾಯಕಯೋಗಿ, ಎಪ್ಪತ್ತರ ಈ ಇಳಿವಯಸ್ಸಿನಲ್ಲಿಯೂ. ನಾವು ಧಾರವಾಡದ ಅವರ ಮನೆಗೆ ಹೋದಾಗ ಅದೇ ತಾನೇ ತಮಿಳುನಾಡಿನ ಚೆನ್ನೈಯಲ್ಲಿ ಉಪನ್ಯಾಸ ನೀಡಿ ಬಂದಿದ್ದರು. ಸಧ್ಯಕ್ಕೆ ಅಮೇರಿಕೆಯಲ್ಲಿ ಮಗಳ ಹತ್ತಿರವಿರುವ ಶ್ರೀಮತಿಯವರ ಸಹಕಾರವನ್ನು ಮನಸಾ ನೆನೆಯುತ್ತಾರೆ ಬಳುರಗಿಯವರು.
ಕನ್ನಡದಲ್ಲಿ ವಿಜ್ಞಾನ ವಿಷಯಗಳಲ್ಲಿ ನಲವತ್ತಕ್ಕೂ ಮೇಲ್ಪಟ್ಟು ಪುಸ್ತಕಗಳನ್ನು ರಚಿಸಿದ್ದಾರೆ, ‘ಮಾನವನ ವಿಕಾಸ’ ಎಂಬ ಸುದೀರ್ಘ ಬಾನುಲಿಸರಣಿಯನ್ನು ನಿರ್ಮಿಸಿ, ಭಾರತದ ಹದಿನಾಲ್ಕು ಭಾಷೆಗಳಲ್ಲಿ ಪ್ರಸಾರ ಮಾಡಿದ್ದಾರೆ, ಪತ್ರಿಕೆ ಹಾಗೂ ನಿಯತಕಾಲಿಕಗಳಲ್ಲಿ ಸಾಕಷ್ಟು ಲೇಖನಗಳು ಪ್ರಕಟವಾಗಿವೆ. ‘ಬಾಲವಿಜ್ಞಾನ’ ಮಾಸಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ, ‘ವಿಜ್ಞಾನದೀಪ’ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಸೇವೆ. ಹಲವಾರು ಪ್ರಶಸ್ತಿಗಳು ಇವರನ್ನು ಅರಸುತ್ತ ಬಂದಿದ್ದು, ಇವುಗಳಲ್ಲಿ ‘ರಾಜೀವಗಾಂಧಿ ಸ್ಮಾರಕ ಅತ್ಯತ್ತಮ ಶಿಕ್ಷಕ ಪ್ರಶಸ್ತಿ’ ಯೂ ಸೇರಿದೆ, ಇವರ ಸಾಧನೆ ಗುರುತಿಸಿ, ಮೆಚ್ಚಿ ರಾಷ್ಟ್ರೀಯ ವಿಜ್ಞಾನ ತಂತ್ರಜ್ಞಾನ ಸಂವಹನ ಮಂಡಳಿಯು (1991) ರಲ್ಲಿ ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದು ತಲಾ ಐವತ್ತು ಸಾವಿರ ರೂಪಾಯಿಗಳೊಂದಿಗೆ ಇಬ್ಬರಲ್ಲಿ ಹಂಚಿಕೆಯಾಗಿದೆ.
ಮೊದಮೊದಲು ಶಿಶು ಸಾಹಿತ್ಯಕ್ಕೆ ಒಲಿದ ಹೃದಯ ಮುಂದೆ ಮಕ್ಕಳ ವಿಜ್ಞಾನ ಸಾಹಿತ್ಯದತ್ತ ದಾಪುಗಾಲು ಹಾಕಿ ದೇಶದ ಉದ್ದಗಲಕ್ಕೂ ತಮ್ಮ ಸೇವೆ ನೀಡಿದ, ನೀಡುತ್ತಿರುವ ‘ಮಿಣುಗುವ ನಕ್ಷತ್ರದಂತೆ’ ಇರುವ ಹಿರಿಯ ಜೀವಕ್ಕೆ ಸಲಾಂ ಹೇಳಲೇ ಬೇಕಲ್ಲವೇ…
Comments
ಲಕ್ಷೀಕಾಂತ ಇಟ್ನಾಳ್ ರವರಿಗೆ
ಲಕ್ಷೀಕಾಂತ ಇಟ್ನಾಳ್ ರವರಿಗೆ ವಂದನೆಗಳು
" ಸುಗ್ಗಿಯ ಹಾಡು " ಓದಿದೆ, ನಿಮ್ಮ ಬರಹ ಈ ಹಾಡನ್ನು ನನ್ನ ತಮ್ಮಂದಿರ ಪಠ್ಯ ಪುಸ್ತಕದಲ್ಲಿ ಓದಿದ ನೆನಪು ತಂದಿತು. ಹಾಡು ಬಹಳ ಚೆನ್ನಾಗಿದೆ, ಕವಿ ದ.ರಾ.ಬಳೂರಗಿ ಯವರ ಕುರಿತು ವಿಸ್ತೃತ ಮಾಹಿತಿ ನೀಡಿದ್ದೀರಿ, ಓದಿ ಸಂತಸವಾಯಿತು. ನಿಮ್ಮ ಬರಹಗಳ ಗಟ್ಟಿತನವೆ ಒಂದು ರೀತಿ ಖುಷಿ ತರುವಂತಹುದು, ಧನ್ಯವಾದಗಳು.
In reply to ಲಕ್ಷೀಕಾಂತ ಇಟ್ನಾಳ್ ರವರಿಗೆ by H A Patil
ಸುಗ್ಗಿಯ ಹಾಡು- ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
ಆತ್ಮೀಯ ಹೆಚ್ ಎ ಪಾಟೀಲ್ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಸುಗ್ಗಿಯ ಹಾಡಿನ ಬ್ಲಾಗ್ ಗೆ , ಹಾಗೂ ಡಿ. ಆರ್. ಬಳೂರಗಿ ರವರ ಕಿರುಲೇಖನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ನನಗೂ ಕೂಡ ಮಾನ್ಯರನ್ನು ಸಂಪದಿಗರಿಗೆ ತನ್ಮೂಲಕ ನಾಡಿಗೆ ಪರಿಚಯಿಸುವ ಕಾತರವಿತ್ತು, ಧಾರವಾಡದಲ್ಲಿ ನೆಲೆಸಿದ್ದರಿಂದ ಅವರೊಂದಿಗೆ ಪರಿಚಯ ಮಾಡಿಕೊಂಡು ಅವರೊಂದಿಗೆ ಕೆಲ ನಿಮಿಷ ಕಳೆಯುವ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಅವಕಾಶ ಒದಗಿ ಬಂದದ್ದಕ್ಕೆ ನನಗೂ ಸಂತಸವಾಯಿತು. ಅವರನ್ನು ಭೇಟಿಯಾಗಿ ಹೊರಬರುವಾಗ ಪ್ರೀತಿಯಿಂದ ಅವರೇ ಬರೆದ ಹಲವಾರು ಪುಸ್ತಕಗಳ ಪೈಕಿ 'ಸೌರಶಕ್ತಿ ' ಎಂಬ ವಿಜ್ಞಾನಮಾಲೆಯ ಪುಸ್ತಕವೊಂದಕ್ಕೆ ಹಸ್ತಾಕ್ಷರ ಹಾಕಿ ಕೊಟ್ಟು ಶುಭ ಹಾರೈಸಿ ಕಳುಹಿಸಿದರು. ತಮ್ಮ ಪ್ರತಿಕ್ರಿಯೆಗೆ ಮತ್ತೊಮ್ಮೆ ಧನ್ಯವಾದಗಳು.