ಕಪ್ಪು ಸುಂದರಿಯ ನೆನಪಲ್ಲಿ !

ಕಪ್ಪು ಸುಂದರಿಯ ನೆನಪಲ್ಲಿ !

ನವರಾತ್ರಿ ಹಬ್ಬದ ಸಾಲಾದ ರಜೆಯನ್ನು ದಶಮಿಯವರೆಗೂ ಮುಗಿಸಿ, ಇನ್ನೂ ಎರಡು ದಿನಕ್ಕೂ ವಿಸ್ತರಿಸಿ, ಅಂದು ಏಕಾದಶಿಯ ಉಪಹಾರಕ್ಕಾಗಿ ಕಾಯುತ್ತಿದ್ದೆ ...

 
ನನ್ನಾಕೆ ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು ಕೆದಕುತ್ತಿರುವ ಶುಭ ಸಮಯದಲ್ಲಿ, ಬಂದ ಕರೆಯನ್ನು ಸ್ವೀಕರಿಸಿದ್ದಳು ... ಭುಜಕ್ಕೂ ಕಿವಿಗೂ ಮಧ್ಯೆ ಫೋನನ್ನು ಸಿಕ್ಕಿಸಿಕೊಂಡಿದ್ದಳು ... ಅವಳ ಎಡಗೈ ಇಕ್ಕಳವನ್ನು ಪಿಡಿದಿದ್ದರೆ, ಆ ಇಕ್ಕಳ ಬಾಂಡ್ಲೆಯನ್ನು ಪಿಡಿದಿತ್ತು. ಉಪ್ಪಿಟ್ಟನ್ನು ತನ್ನ ಹಿಡಿತದಲ್ಲಿ ಹೊತ್ತ ಬಾಂಡ್ಳೆ ಉಪ್ಪಿಟ್ಟನ್ನು ತಳ ಹಿಡಿಸಿಯೇ ತೀರುತ್ತೇನೆ ಎಂದು ಹೋರಾಟ ನೆಡೆಸಿದ್ದರೆ, ಬಲಗೈಯಲ್ಲಿ ಪಿಡಿದ ಜಾಲರಿ ಸೌಟು ಬಾಂಡ್ಲೆಯ ಪ್ರಯತ್ನವನ್ನು ನಿಷ್ಕ್ರಿಯಗೊಳಿಸಿತ್ತು .... ಎಡಗೈಯಿಂದ-ಬಲಗೈ ವರೆಗೂ ಇದ್ದ ಸರ್ಕ್ಯೂಟನ್ನು ಪಿಡಿದಿಟ್ಟ ನನ್ನಾಕೆ ಸ್ವಲ್ಪ ಎಡಕ್ಕೆ ವಾಲಿ, ಸ್ವಲ್ಪ ’ಪೀಸಾ ಟವರ್’ನಂತೆ ಕಾಣುತ್ತಿದ್ದಳು ....
 
"ಈ ಸೊಬಗನ್ನು ನೋಡುತ್ತ ನಿಂತ ನಾನು ಯಾವ ರೀತಿಯ ಸಹಾಯವನ್ನೂ ಮಾಡುತ್ತಿರಲಿಲ್ಲ ಎಂದು ಹೇಳಲು ...." ಮಿಕ್ಕಿದ್ದು ನಿಮಗನ್ನಿಸಿದ್ದನ್ನ ತುಂಬಿಕೊಳ್ಳಿ .... ತುಂಬುವ ಮುನ್ನ ಒಂದು ಪ್ರಕರಣ ಓದಿ ...
ಒಮ್ಮೆ ಇದೇ ಭಂಗಿಯಲ್ಲಿದ್ದ ಅವಳ ಬಳಿ ಹಿಂದಿನಿಂದ ಸಾಗಿ ... ಮುಂದಾಗುವುದನ್ನು ಊಹಿಸುವ ಮುನ್ನ ಸ್ವಲ್ಪ ತಡ್ಕಳಿ ... ಸ್ವಲ್ಪ ರೀಪ್ಲೇಯ್ ... ಅವಳ ಬಳಿ ಹಿಂದಿನಿಂದ ಸಾಗಿ, ಮೆಲ್ಲನೆ ಅವಳ ಕಿವಿಯ ಬಳಿ ಉಸುರಿದೆ, ’ನಾ ಇಕ್ಕಳ ಪಿಡಿಯಲೇ?’ ಎಂದು. ಇದ್ದಕ್ಕಿದ್ದ ಹಾಗೆ ತೂರಿ ಬಂದ ಪ್ರಶ್ನೆಗೆ ಸನ್ನದ್ದಳಾಗದ ಆ ಹೃದಯ ಒಮ್ಮೆಲೆ ಬೆಚ್ಚಿದ್ದಕ್ಕೆ, ಇಕ್ಕಳ ಜಾರಿತು .. ಎಳೆ ಹುರುಳಿಕಾಯಿಯಂತಿದ್ದ ಅವಳ ಕಿರು ಬೆರಳಿಗೆ ಬಾಂಡ್ಲೆಯ ಬಿಸಿ ತಾಗಿ, ಉಪ್ಪಿಟ್ಟಿನ ಹುರಿದ ರವೆ ಸೌಟಿನಿಂದ ಚಿಮ್ಮಿ, ಗಗನಕ್ಕೆ ಹಾರಿ, ಬಾಂಡ್ಲೆ ಹೊರಳಿ, ಮೊಬೈಲ್ ಉರಿಯ ಮೇಲೆ ಬಿದ್ದು, ಭಗ ಭಗ ಉರಿದು, ದಾಕ್ಷಾಯಿಣಿಯ ಹಾಗೆ ಆತ್ಮಹತ್ಯೆ ಮಾಡಿಕೊಂಡಿತು !!!
 
ಉರಿಯುತ್ತಿದ್ದ ಮೊಬೈಲಿನಲ್ಲಿ ಕೇಳಿಬರುತ್ತಿದ್ದ ’ಹಲೋ, ಹಲೋ’ ಎಂಬುದೇ ಆ ಕಡೆಯವರ ಕಟ್ಟಕಡೆಯ ಸ್ವರವಾಗಿತ್ತು ...’ನನ್ನಾಕೆಯ ಆ ಮೊಬೈಲಿನಲ್ಲಿ’ ಕಣ್ರೀ !!!
 
ದಾಕ್ಷಾಯಿಣಿಯನ್ನು ಕಳೆದುಕೊಂಡ ಪರಶಿವನಂತೆ, ಕ್ರೋಧಗೊಂಡ ನನ್ನಾಕೆ, ಅಲ್ಲೇ ಇದ್ದ Fork’ಅನ್ನೇ ತ್ರಿಶೂಲದಂತೆ ಪಿಡಿದು, ’ನಿಮ್ಮನ್ನ ಸಹಾಯ ಮಾಡ್ಲಿಲ್ಲ ಅಂತ ನಾನು ಯಾವತ್ತಾದ್ರೂ ದೂರಿದ್ದೇನಾ? ಅನ್ಯಾಯವಾಗಿ ಮೊಬೈಲ್ ಹಾಳಾಯ್ತು. ಆ ಶಾಲಿನಿ ನೆನ್ನೆ ಮಿಸ್ ಆಗಿ ಹೋದ ಸೀರಿಯಲ್ ಕಥೆ ಹೇಳ್ತಿದ್ಲು ... ನನಗೀಗ ಹೊಸಾ ಮೊಬೈಲ್ ಬೇಕು ’ ... ನಾನು ಸೈಲೆಂಟಾಗಿ ಹೊರನೆಡೆದೆ ...
 
ಕ್ರೋಧಗೊಂಡ ಆಕೆ ಮತ್ತೆ ನನ್ನ ಬಳಿ ಶಾಂತಳಾಗಿ ಬರಬೇಕಾದರೆ ಸಹಾಯಕ್ಕೆ ಒದಗಿದ್ದೇ ’ಐ-ಫೋನ್’ ಎಂಬ ಮನ್ಮಥನ ಬಾಣ ... ಸೋಜಿಗ ಎಂದರೆ, ಆ ಬಾಣದ ಬಳಕೆಯಿಂದ ಪ್ರತಿ ತಿಂಗಳೂ ’ಬಿಲ್’ ಹೊರಬರುತ್ತೆ !!!
 
ಬಿಲ್ಲಿನಿಂದ ಬಾಣ ಬರುವುದು ತ್ರೇತ/ದ್ವಾಪರ ಯುಗ, ಬಾಣದಿಂದ ಬಿಲ್ ಬರುವುದು ಕಲಿಯುಗ !
 
ಇರಲಿ, ಇದು ಅಂದು ನೆಡೆದ ಘಟನೆ ...
 
ಅವಳು ಉಪ್ಪಿಟ್ಟು ಕೆದಕುತ್ತಿದ್ದಂತೇ, ಅವಳನ್ನು ನೋಡುತ್ತ ನಾನು ಹಳೆಯ ನೆನಪುಗಳನ್ನು ಕೆದಕ ಹತ್ತಿದ್ದೆ ...
 
ನಾವೇನೂ ಭಯಂಕರ ಸ್ಥಿತಿವಂತರೇನೂ ಅಲ್ಲ ... ಹಾಗಂತ ಮೈ ಮೇಲೊಂದು, ಕೋಲಿನ ಮೇಲೊಂದು ಅನ್ನೋ ದುಸ್ತರವೂ ಇರಲಿಲ್ಲ ... ನಮ್ ಪಕ್ಕದ ಮನೆಯವರ ದೊಡ್ಡ ಮನೆಯ ಪಕ್ಕದಲ್ಲಿ ನಮ್ಮದೊಂದು ಪುಟ್ಟ ಪಕ್ಕದ್ ಮನೆ ... ನಿನ್ನನ್ನು ನೋಡಬೇಕಾದಾಗಲೆಲ್ಲ ನಿನ್ನ ಮನೆಗೆ ಓಡಿ ಬರುತ್ತಿದ್ದ ಕಾಲ ... ಅದೂ, ನಿಮ್ಮಮ್ಮ ಇದ್ದಾಗ ಮಾತ್ರ ... ಪುಣ್ಯಾತ್ಗಿತ್ತಿ ... ಶಾಂತಮ್ಮ ... ತಂಪು ಹೊತ್ತಲ್ಲಿ ನೆನೆಯಬೇಕು .. ನಾನು ಬರುತ್ತಿದ್ದಂತೆ, ಸರ ಸರ ಅಡುಗೆ ಮನೆಗೆ ನೆಡೆದು ಕಾಫಿಯೋ, ಬಿಸಿ ಹಾಲೋ ಏನೋ ಒಂದು ತರುತ್ತಿದ್ದರು ... 
 
ಇನ್ನು ಸಿಡುಕು ಮೂತಿ ನರಸಿಂಹಮೂರ್ತಿ ... ಕೆಟ್ಟ ಬಿಸಿಲಲ್ಲಿ ನೆನಪಾದಾಗ ಆ ಬಿಸಿಲೂ ತಂಪಾಗುತ್ತೆ .. ಅದೇನು ಗಂಡ ಹೆಂಡಿರಪ್ಪ ಇವರುಗಳು? ಶಾಂತಮ್ಮ-ನರಸಿಂಹಮೂರ್ತಿ ... ಇಬ್ಬರೂ ಹೆಸರಿಗೆ ತಕ್ಕಂತೆ ....
 
ಮೂರ್ತಿಗಳು ಮನೆಯಲ್ಲಿದ್ದರೆ, ಮನೆ ಒಳಗೆ ಹೋಗುವುದು ಬಿಡಿ, ಗೇಟೂ ಮುಟ್ಟುತ್ತಿರಲಿಲ್ಲ ... ಊರಿನಲ್ಲಿ ಯಾರ ಮನೆಯಲ್ಲೂ ಇರದ ಸುಂದರಿ ನಮ್ಮ ಮನೆಯಲ್ಲಿರೋದು ಅನ್ನೋ ಧಿಮಾಕು ... ಅದೂ ಸರಿ ಅನ್ನಿ ...
 
ಇನ್ನು ಆ lethargic ಲಕ್ಶ್ಮಣ ... ಅವನ ಮದುವೆ ಗೊತ್ತಾದಾಗ ನಮ್ಮ ಮನೆಯಲ್ಲಿ ಹೇಳಿದ್ದು "ಅವನಿಗೂ ಮದುವೆ ಸೆಟ್ಲಾಯ್ತು" ಅಂತ.. ಹೋಗ್ಲಿ ಬಿಡಿ ...
 
ನಿನ್ನನ್ನು ನಿಮ್ಮ ಮನೆಯಲ್ಲೇ ಕಡೆಯ ಬಾರಿ ಭೇಟಿಯಾದ ಕಹಿ ನೆನಪು ನನ್ನ ಮನದಲ್ಲಿ ಇನ್ನೂ ಮಾಸಿಲ್ಲ ... ಲಕ್ಷ್ಮಣನ ಮದುವೆಯ ತಯಾರಿಯ ನಿಮ್ಮ ಮನೆಯಲ್ಲಿ ವಿಪರೀತ ಗಜಿಬಿಜಿ. ಮದುವೆಗೆ ಮುನ್ನ ಮತ್ತು ನಂತರದ ಐದಾರು ದಿನಗಳು ನಿನ್ನ ಭೇಟಿಯೇ ಆಗಲಿಲ್ಲ. ಎಲ್ಲವೂ ಥಣ್ಣಗಾಯ್ತು ಎಂದೆನ್ನಿಸಿ ಒಂದು ದಿನ ನಿಮ್ಮ ಮನೆ ಕಡೆ ಹೊರಟೆ. ಅಮ್ಮ ತಡೆದರು ... "ಅವರ ಮನೆಗೆ ಸೊಸೆ ಬಂದಿದ್ದಾಳೆ. ನೀನು ಅವರ ಮನೆಗೆ ಇನ್ನು ಮುಂದೆ ಹೋಗುವುದು ತರವಲ್ಲ" ಎಂದರು. ಅಂದೇ ಕೊನೆ ನಿನ್ನನ್ನು ನೋಡಿದ್ದು ...
 
ದಿನವೂ ಏನೋ ಚಡಪಡಿಕೆ ... ನನ್ನ ಕನಸಿನ ಹುಡುಗಿಯ ಜೊತೆ ಮಾತನಾಡಲಾಗದ ಅಸಹಾಯಕತೆ ... ಹಾಗೂ ಒಂದೆರಡು ಬಾರಿ, ನಿಮ್ಮ ಮನೆ ಕಡೆ ದೃಷ್ಟಿ ಹಾಯಿಸಿದೆ ... ನನ್ನ ದುರಾದೃಷ್ಟ ... ಎರಡೂ ಬಾರಿ ಮನೆಗೆ ಬಂದ ಸೊಸೆಯ ಕಂಗಳಿಗೆ ಬಿದ್ದಿದ್ದೆ. ಉರಿನೋಟಕ್ಕೆ ಸಿಲುಕಿದ್ದೆ. ಉರಿನೋಟಕ್ಕೆ ಸಿಲುಕಿ ಒಂದೆರಡು ಕೂದಲೂ ಸುಟ್ಟಿತ್ತು ... ನನ್ನ ಬಗ್ಗೆ ಯಾವ ಅಭಿಪ್ರಾಯ ಮೂಡಿತ್ತೋ, ಬೇರೆಲ್ಲೇ ಸಿಕ್ಕರೂ ಆಕೆ ಹುಬ್ಬುಗಂಟು ಇಟ್ಟುಕೊಳ್ಳುತ್ತಿದ್ದರು. ಅಲ್ಲಿಗೆ ನಮ್ಮಿಬ್ಬರ ಭೇಟಿ ಸಂಪೂರ್ಣ ಬಂದ್ !
 
ಬ್ಯಾಸರವಾಯ್ತೇ? ಮುಂದೆ ಕೇಳಿ ... ಬೇಗ ಹೇಳಿಬಿಡ್ತೀನಿ ...
 
ದಿನಗಳು ಬದಲಾದಂತೆ ನನ್ನ ಪ್ರಿಯತಮೆಯನ್ನು ಕಾಣುವ, ಮಾತನಾಡಿಸುವ ಹೊಸ ದಾರಿಗಳು ಕಂಡವು ... ಒಂದು ಶುಭ ದಿನ ಅವಳು ನನ್ನ ಹೃದಯದ ರಾಣಿಯೂ ಆದಳು ... ಸುಖಾಂತ ಅಲ್ವೇ?
 
ಕಳೆದ ವಾರ ಸುಟ್ಟಿದ್ದು ಹಳೇ ಮಾಡಲ್ ಮೊಬೈಲು .. ಇಂದು ಅವಳ ಕೈಗೆ ಐ-ಫೋನ್ ಬಂದಿದೆ. ಅಡುಗೆ ಮಾಡುವಾಗ ಕರೆ ಬಂದರೆ, ತನ್ನ ಫೋನಿಗೆ ಕೈ ಹಚ್ಚುವುದೇ ಇಲ್ಲ. ನಂಬರ್ ನೋಡಿಕೊಂಡು, ಮನೆ ಫೋನಿಂದ ಕರೆ ಮಾಡುತ್ತಾಳೆ. ಹಾಗೆ ಕರೆ ಮಾಡಿ ಮಾತನಾಡುವ ಭಂಗಿಯೇ, ಈ ಪೀಸಾ ಟವರ್ ಭಂಗಿ. ನನ್ನ ಹೃದಯದ ರಾಣಿಯ ಭಂಗಿ ...
 
ನೀವು ಏನೇ ಹೇಳಿ, ಇಂದು ಇಪ್ಪತ್ತು-ನಾಲ್ಕು ಘಂಟೆಗಳ ಕಾಲ ನಮ್ಮ ಕೈಯಲ್ಲೇ ಇರಬಹುದಾದ ಮೊಬೈಲುಗಳು ಕೈಗೆ ಬಂದಿದ್ದರೂ, ಅಂದು ಪಕ್ಕದ ಮನೆಗೆ ಹೋಗಿ, ಟೇಬಲ್ ಮೇಲಿದ್ದ ಕರಿ ಸುಂದರಿಯನ್ನು ಕೈಯಲ್ಲಿ ಪಿಡಿದು, ನನ್ನೀ ಹೃದಯದ ರಾಣಿಯೊಡನೆ ಮಾತನಾಡುತ್ತಿದ್ದ ದಿನಗಳ ನೆನಪು ಮಾತ್ರ ಅಜರಾಮರ ...
 

 

Comments

Submitted by partha1059 Thu, 10/25/2012 - 20:49

ಮೊಬೈಲ್ ಅನ್ನು ಬೆ0ಕಿಗಾಹುತಿ ಕೊಟ್ಟ0ತೆ ಮತ್ತೆ ಐ ಪೋನ್ ಅನ್ನು ನೀರಲ್ಲಾಪೊಶನೆ ಮಾಡದಿರಿ . ಅಡಿಗೆ ಮನೆಯ ಕಡೆ ಹೋಗದೆ ಸ್ವಲ್ಪ ಹಾಲಿನಲ್ಲಿ (ಹಾಲ್ ಎ0ದರೆ ಕನ್ನಡ‌ ಹಾಲಲ್ಲ ಅ0ಗ್ಲದ‌ ಹಾಲ್ ) ಕುಳಿತರೆ, ಏಕಾದಶಿಯ‌ ಉಪ್ಪಿಟ್ಟು ಅಲ್ಲಿಗೆ ಬ0ದೀತು, ಕಬೆ ಚಟ್ನಿ ಜೊತೆ
Submitted by bhalle Thu, 10/25/2012 - 22:27

In reply to by partha1059

ಹಳೆ ಮೊಬೈಲು ಹೋಗಿದ್ದಕ್ಕೆ ಬೇಸರವಾಗಲಿಲ್ಲ ... ನನಗಲ್ಲ, ನನ್ ಹೆಂಡತಿಗೆ ! ನಾನು ಇನ್ನು ಮು೦ದೆ ಭಯ೦ಕರ ಹುಷಾರು ... ನನ್ನಾಕೆ ಟಚ್ ಫೋನು ಹಿಡಿದುಕೊಂಡಾಗ ನಾನವಳನ್ನು ಟಚ್ ಮಾಡೋಲ್ಲ :-) ಉಪ್ಪಿಟ್ಟಿಗೆ ಚಟ್ನಿ?
Submitted by ಗಣೇಶ Fri, 10/26/2012 - 00:12

ಭಲ್ಲೇಜಿ, >>ಭುಜಕ್ಕೂ ಕಿವಿಗೂ ಮಧ್ಯೆ ಫೋನನ್ನು ಸಿಕ್ಕಿಸಿಕೊಂಡಿದ್ದಳು ... ಅವಳ ಎಡಗೈ ಇಕ್ಕಳವನ್ನು ಪಿಡಿದಿದ್ದರೆ, ಆ ಇಕ್ಕಳ ಬಾಂಡ್ಲೆಯನ್ನು ಪಿಡಿದಿತ್ತು. ಉಪ್ಪಿಟ್ಟನ್ನು ತನ್ನ ಹಿಡಿತದಲ್ಲಿ....:) :) >> ಆ ಬಾಣದ ಬಳಕೆಯಿಂದ ಪ್ರತಿ ತಿಂಗಳೂ ’ಬಿಲ್’ ಹೊರಬರುತ್ತೆ !! ಪೀಸಾ ಟವರ್ ಭಂಗಿ...ವ್ಹಾ ವ್ಹಾ..:) ಸೂಪರ್ ..ಕೊನೆಗೆ ನಿಮ್ಮ ಲವ್ ಸ್ಟೋರೀನೂ ಚೆನ್ನಾಗಿದೆ. :) -ಗಣೇಶ.
Submitted by kavinagaraj Fri, 10/26/2012 - 11:01

ಸಹಜ ಸಂದರ್ಭವನ್ನು ಗಮನಿಸುವ ರೀತಿ ಅದನ್ನು ಅಕ್ಷರದಲ್ಲಿ ಇಳಿಸಿರುವ ರೀತಿ ಸೊಗಸಾಗಿದೆ. ಕಪ್ಪು ಸುಂದರಿ ಶೀರ್ಷಿಕೆ ನೋಡಿದಾಗ ನನಗೆ ಇದ್ದ ಕಲ್ಪನೆಯೆ ಬೇರೆಯಾಗಿತ್ತು! :))
Submitted by Prakash Narasimhaiya Fri, 10/26/2012 - 16:07

ಆತ್ಮೀಯ ಭಲ್ಲೆಜಿ, ಈ ಸುಂದರವಾದ ಲೇಖನವನ್ನು ನಿಮ್ಮ ಪ್ರಿಯತಮೆ ಪರಾಮರ್ಶಿಸಿದ್ದಾರೆಯೇ? ಕೆಲವು ಸುಂದರ ಸಿಹಿ ಆಕ್ಷೇಪಣೆಗಳು ಇರಬಹುದೆಂದು ನಿಮಗನ್ನಿಸಿಲ್ಲವೇ? ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ಮಾತು. ಏನಾದರಾಗಲಿ ಒಮ್ಮೆ ಈ ಲೇಖನ ತೋರಿಸಿ. ನನಗಂತೂ ಖುಷಿಯಾಗಿದೆ ಲೇಖನ ಓದಿ.......
Submitted by bhalle Fri, 10/26/2012 - 17:00

ನಿಮ್ಮ ಕಾಳಜಿಗೆ ಅನಂತ ಧನ್ಯವಾದಗಳು ಪ್ರಕಾಶರೇ ಸಂಪದದಲ್ಲಿ ಬರಹವನ್ನು ಅಪ್ಲೋಡ್ ಮಾಡುತ್ತಿದ್ದಾಗ ಆಕೆಯ ಕಣ್ಣಿಗೆ ಟೈಟಲ್ ಬಿತ್ತು ... ಈ ಬರಹದ ಮೊದಲ ಓದುಗಳಾದ ಪರಿ ಇದು .,, ಆಕೆಗೆ ಖುಷಿಯಾಗಿದ್ದು ನಾವು ಸೇಫು ಅನ್ನಿ :-)
Submitted by venkatb83 Fri, 10/26/2012 - 19:04

ಭಲ್ಲೆ ಅವ್ರೆ- ಒಟ್ನಲ್ಲಿ ಈ ಉಪ್ಪಿಟ್ಟು ಮಾಡೋ ಅವಾಂತರ ಒಂದೆರಡಲ್ಲ..!ನಾ ಅಂತೂ ನನ್ನೊಳ್ ಆಗೋಳಿಗೆ ಮೊದಲೇ ಹೇಳಿರುವೆ- ಯಾವದೇ ಕಾರಣಕ್ಕೂ ಉಪ್ಪಿಟ್ಟು ಇಡಬೇಡ.. ಅದ್ರ ಬಗ್ಗೆಯೇ ಬರಹ ಬರ್ದಿರುವೆ ಅಂತ..!! ಅದನ್ನು ಅವಳು ಓದಿರುವಳು..!! ಇತ್ತೀಚಿನ ಪ್ರತಿಕ್ರಿಯೆಗಳು ಓಪನ್ ಮಾಡಿ ಅಲ್ಲಿ ಪ್ರಕಾಶ್ ನರಸಿಂಹಯ್ಯ ಅವರ ಪ್ರತಿಕ್ರಿಯೆ ನೋಡಿ ಇಲಿಗೆ ಬಂದೆ.. ಏನ್ ಭಲೇ ಬರಹ ಬರ್ದಿದೀರ ಮಾರಾಯ್ರೇ..!! ಅಬ್ಬಬ್ಬ .....!! ಪದ ಪ್ರಯೋಗಗಳು-ವಾಕ್ಯ ರಚನೆ ಸಮಯ ಸಂದರ್ಭಕ್ಕೆ ತಕ್ಕ ಉಪಯೋಗ ಎಲ್ಲವೂ ಸೂಪರ್ ಮಾರಾಯ್ರೇ.. ಈ ಸಂಜೇಲಿ ಈ ಬರಹ ಓದಿ ನವೋಲ್ಲಾಸ ತುಂಬಿತು..ಮೈ ಮನ ಹದಗೊಂಡು ಮುದಗೊಂಡಿತು ... ಆಹ್ಲಾದಕರ ಭಾವ ಮೂಡಿತು.. ನೀವ್ ಬರಹ ಬರೆಯುವುದರಲ್ಲೂ ಪ್ರತಿಕ್ರಿಯಿಸುವುದರಲ್ಲೂ ವಿಶಿಸ್ಟರೆ ಸೈ... ಸಖತ್..... ಸಖತ್ ಸಖತ್ ಬಿಲ್ಲು ಬಾಣ -ಪದ ಬಳಕೆ ಹೀಗೂ ಉಪಯೋಗಿಸಬಹುದು ಎಂದು ತೋರಿಸಿದೆ... ಶುಭವಾಗಲಿ.. ನನ್ನಿ ಶುಭ ದಿನ...!!! \|/
Submitted by bhalle Fri, 10/26/2012 - 20:07

In reply to by venkatb83

ಧನ್ಯವಾದಗಳು ಸಪ್ತಗಿರಿಯವರೇ ನಿಮ್ಮ ಪ್ರತಿಕ್ರಿಯೆಯನ್ನು ಓದಿ ನಮಗೂ ಬಹಳ ಸಂತಸವಾಗಿದೆ ...ನಮಗೂ ಅಂತ ಅಂ.ಭ.ಸ್ವಾಮಿಗಳ ಹಾಗೆ ಹೇಳುತ್ತಿಲ್ಲ ... ನಮಗೂ ಅಂದರೆ ನನಗೆ, ಉಪ್ಪಿಟ್ಟಿಗೆ, ಪೀಸಾ ಟವರ್'ಗೆ ಎಲ್ಲರಿಗು ಸಂತಸವಾಗಿದೆ ಅಂತ :-) ಹೌದು ಬಿಲ್ಲು-ಬಾಣ ಪದ ಪ್ರಯೋಗ ಹೀಗೂ ಮಾಡಬಹುದು :-))) ಹೆಣ್ಣನ್ನು ನೋಡ ಹೋದಾಗಲೇ ನಿಮಗೆ ಉಪ್ಪಿಟ್ಟು ಎದುರಾಗದಿರಲಿ ಎ೦ದು ಆಶಿಸುತ್ತೇನೆ