ದೂಧಸಾಗರವೆಂಬ ಅದ್ಭುತ ಜಲಪಾತ

ದೂಧಸಾಗರವೆಂಬ ಅದ್ಭುತ ಜಲಪಾತ

ಮೊನ್ನೆಯ ದಸರೆಯ ರಜೆಯಲ್ಲಿ ನಮ್ಮ ಟೀಮ್ ದೂಧಸಾಗರ ಜಲಪಾತವನ್ನು ನೋಡಲು ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲೂಕಿನ ಕ್ಯಾಸಲ್ ರಾಕ್ ಕಡೆಗೆ ಹೊರಟಿತು. ಕ್ಯಾಸಲ್ ರಾಕ್ ಇದು ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಗಡಿಯಲ್ಲಿ ಕರ್ನಾಟಕದ ನಾಗರಿಕ ವಸತಿಯ ಬಹುತೇಕ ಕಡೆಯ ಭಾಗ. ಎಲ್ಲಿಂದ ಹೊರಟರೂ ಮೊದಲು ರಾಮನಗರಕ್ಕೆ ಬಂದು ಕೂಡಲೇಬೇಕು. ಬೆಳಗಾವಿಯಿಂದ ಖಾನಾಪೂರ ಲೋಂಡಾ ಮುಖಾಂತರ ರಾಮನಗರಕ್ಕೆ ಬರಬಹುದು. ಧಾರವಾಡ ಹುಬ್ಬಳ್ಳಿ ಕಡೆಗಳಿಂದ ಹೋಗುವವರು ಧಾರವಾಡ ಅಳ್ನಾವರ ರಾಮನಗರ ನೇರ ರಸ್ತೆ ಈಗ ನಿರ್ಮಾಣವಾಗಿದೆ. ಕೆಲವು ಅಲ್ಲಲ್ಲಿ ಸಣ್ಣ ಸಣ್ಣ ಭಾಗಗಳನ್ನು ಬಿಟ್ಟರೆ ಹೊಸ ರಸ್ತೆ ಪ್ರಯಾಣಕ್ಕೆ ಮಜವಾಗಿದೆ. ದಾಂಡೇಲಿ ಮುಖಾಂತರವೂ ರಾಮನಗರಕ್ಕೆ ಉತ್ತಮ ರಸ್ತೆ ಇದೆ.  ಧಾರವಾಡದಿಂದ ರಾಮನಗರ ಸುಮಾರು 85-90 ಕಿ.ಮೀ, ಹಾಗೂ ಧಾರವಾಡದಿಂದ ಎರಡರಿಂದ ಎರಡೂವರೆ ಗಂಟೆ ಹಾದಿ ಹಾಗೂ ಬೆಳಗಾವಿಯಿಂದ 50-60 ಕಿ.ಮೀ ಇದೆ. ಇಲ್ಲಿಯೇ ಎಲ್ಲ ಪ್ರಯಾಣಿಕರು ಹೊಟ್ಟೆ ತುಂಬ ತಿಂದು ಮುಂದೆಯೂ ಸಹಿತ ಪ್ಯಾಕ್ ಕಟ್ಟಿಸಿಕೊಂಡರೆ ಉತ್ತಮ, ಅಥವಾ ಮನೆಯಿಂದ ತಂದರೂ ಇನ್ನೂ ಒಳ್ಳೆಯದು. ರಾಮನಗರದಿಂದ  ಬೆಳಗಾವಿ ಗೋವಾ ಜೋಡಿಸುವ ರಾಷ್ಟ್ರೀಯ ಹೆದ್ದಾರಿ -4 ಎ ರಸ್ತೆಯಲ್ಲಿ ಅನಮೋಡ ಸಮೀಪದವರೆಗೂ ಸುಮಾರು 20-25 ಕಿ,ಮೀ ಪ್ರಯಾಣಿಸಿದಾಗ  ಎಡಕ್ಕೆ 6 ಕಿ.ಮೀ ಇರುವ ಕ್ಯಾಸಲ್ ರಾಕ್ ಗೆ ರಸ್ತೆ ಇದೆ. ನೇರವಾಗಿ ಕ್ಯಾಸಲ್ ರಾಕ್ ರೈಲು ನಿಲ್ದಾಣದ ವರೆಗೆ ಟಾರು ರಸ್ತೆ ಸುಸ್ಥಿತಿಯಲ್ಲಿದೆ. ಕ್ಯಾಸಲ್ ರಾಕ್ ನಿಂದ ಮುಂಜಾನೆ 10 ರಿಂದ 12.30 ರವರೆಗೆ ಒಂದೆರಡು ಗೂಡ್ಸ್ ರೈಲುಗಳು ಚಲಿಸುತ್ತವೆ. ಬೇರೆ ಪ್ಯಾಸೆಂಜರ್ ಟ್ರೇನ್ ಗಳು ಇರದಿದ್ದುದರಿಂದ ಇವುಗಳಲ್ಲಿ ರೈಲ್ವೆ ಸಿಬ್ಬಂದಿಯವರೊಂದಿಗೆ ವಿನಂತಿಸಿಕೊಂಡು ಅವರು ನೀಡುವ ಜಾಗಗಳಲ್ಲಿ ನಿಂತು ಅಥವಾ ಕುಳಿತು ದೂಧಸಾಗರ ಸ್ಟೇಶನ್ ವರೆಗೆ ಪ್ರಯಾಣಿಸಬೇಕು. ದೂಧಸಾಗರ ಸ್ಟೇಶನ್ ಕ್ಯಾಸಲ್ ರಾಕ್ ನಿಂದ 13  ಕಿ.ಮೀ ಇದೆ. ಕರಂಜೋಳ ಎಂಬ ಸಣ್ಣ ಸ್ಟೇಶನ್ ನಡುವೆ ಬರುವುದನ್ನು ಬಿಟ್ಟರೆ ಉದ್ದಕ್ಕೂ ಕಡಿದಾದ ಕಣಿವೆಯಲ್ಲಿ ರೈಲು ದಾರಿಯನ್ನು ಮಾತ್ರ ಹೊಂದಿರುವ ದಟ್ಟಕಾಡು.  ಜನವಸತಿಯನ್ನು ಹೊಂದಿರದ ಘನ ಘೋರ ದಟ್ಟ ಕಾನನವನ್ನು ನೋಡಬೇಕೆಂದರೆ ಈ ಅರಣ್ಯ ನೋಡಬೇಕು. ಕಣ್ಣುಚಾಚುವ ತನಕ ಹಸಿರು ಕಾನನ, ದಿವ್ಯ ವನಸಿರಿ. ಧನ್ಯತೆಯ ಆನಂದದ ಗಳಿಗೆಗಳನ್ನು ಅನುಭವಿಸುತ್ತದೆ ಮನಸ್ಸು. ಇಂತಹ ತಾಣಗಳು ನಮ್ಮಲ್ಲೇ ಇವೆಯಲ್ಲ ಎಂದೆನಿಸಿ ಹೆಮ್ಮೆ ಎನಿಸುತ್ತದೆ.  ನಮ್ಮ ನಾಡು ಅದೆಷ್ಟು ರಮ್ಯವೆಂದು ಪ್ರತ್ಯಕ್ಷವಾಗಿ ಪ್ರಮಾಣಿಸುವ ತಾಣಗಳಲ್ಲೊಂದು.

  ಕ್ಯಾಸಲ್ ರಾಕ್ ನಿಂದ ಕೇವಲ ಹದಿಮೂರು ಕಿ.ಮೀ ಇದ್ದರೂ ಗೂಡ್ಸ್ ರೈಲುಗಳು 20-23 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಮಾತ್ರ ಚಲಿಸುತ್ತವೆ. ಹೀಗಾಗಿ ನಡು ನಡುವೆ ಹನ್ನೊಂದು ಸುರಂಗ ಮಾರ್ಗಗಳನ್ನು ದಾಟಿ ಸಾವಕಾಶವಾಗಿ ಚಲಿಸುವ ಕಾಡಿನ ವಿಹಂಗಮ ನೋಟದೊಂದಿಗೆ ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ ಈ ರೈಲು ಪ್ರಯಾಣ. ಸುಮಾರು ಮುಕ್ಕಾಲು  ಗಂಟೆ ಪ್ರಯಾಣದ ನಂತರ ದೂಧಸಾಗರದಲ್ಲಿ ಇಳಿದು ಹಳಿಗುಂಟ ಮತ್ತೊಂದು ಸುರಂಗ ಮಾರ್ಗವನ್ನು ದಾಟಿ ನಡೆದರೆ ಒಂದು ಕಿ.ಮೀ ದೂರದಲ್ಲಿ ರುದ್ರರಮಣೀಯ ದೂಧಸಾಗರ ಜಲಪಾತ ಅಗಾಧ ಸಪ್ಪಳದೊಂದಿಗೆ ಬೃಹದಾಕಾರದ ತೋಳುಗಳೊಂದಿಗೆ ನಮ್ಮನ್ನು ಸ್ವಾಗತಿಸುತ್ತದೆ. ಇನ್ನೂ ಒಂದು ಫರ್ಲಾಂಗು ದೂರ ಇರುವಾಗಲೇ ಕಣ್ಣೋಟಕ್ಕೆ ಕಾಣಸಿಗುವ ಅದ್ಭುತ ದೃಶ್ಯ ನಿಬ್ಬೆರಗಾಗಿಸುತ್ತದೆ. ನೂರಾರು ಮೀಟರುಗಳ ಎತ್ತರದಿಂದ ಕವಲು ಕವಲುಗಳಾಗಿ ಬಿಳಿ ಹಿಮದ ಉಣ್ಣೆಯಂತಹ ನುಣುಪು ಜಲರಾಶಿಯ ರೇಶ್ಮೆಸೀರೆಗಳನ್ನು ಬಾವುಟಗಳಂತೆ ಹಾರಾಡಿಸುತ್ತ,  ಹಾಲಿನ ನೊರೆಯಂತೆ ಅಚ್ಚಬಿಳಿಯಾಗಿ  ಧುಮ್ ಧುಮ್ ಎಂದು ಧುಮಿಗಿಡುತ್ತ ಕಲ್ಲುಬಂಡೆಗಳ ಮೇಲೆ ಜಾರುತ್ತ ಜಿಗಿಯುತ್ತ ಆರ್ಭಟಿಸುತ್ತ ಮುಖ್ಯವಾದ ನಾಲ್ಕು ಕವಲುಗಳು ಒಟು 310 ಮೀ ಆಳಕ್ಕೆ ಧುಮಿಕುತ್ತದೆ. ರೈಲು ಹಳಿಗಳಿಗಾಗಿ ನಿರ್ಮಿಸಿದ ಸೇತುವೆ ಪಕ್ಕದಲ್ಲೇ ಸುಂದರ ಕೆರೆಯೊಂದನ್ನು ನಿರ್ಮಿಸಿಕೊಂಡಿದೆ. ಆದರೆ ಅದೇ ನೀರು ಸುಳಿಯಂತೆ ಮೇಲೆದ್ದು ಕೆಳಗೆ ಧುಮುಕುವುದರಿಂದ ಈಜುವುದಕ್ಕೆ ಅಷೊಂದು ಸೇಫ್ ಅಲ್ಲ ಎಂಬುದನ್ನು ತಿಳಿದಿರುವುದು ಒಳ್ಳೆಯದು.ಸಮೀಪದಲ್ಲಿ ಎಲ್ಲಿಯು ವೈದ್ಯಕೀಯ ಸಹಾಯ ಸಭ್ಯವಿಲ್ಲ.  ಆದರೂ ದಂಡೆಯಲ್ಲಿ ಕೊರೆಯುವ ತಣ್ಣಗಿನ ನೀರಲ್ಲಿ ಕೈಕಾಲು ಮುಖಗಳನ್ನು ತೊಳೆದುಕೊಳ್ಳಬಹುದು, ಸ್ನಾನ ಮಾಡಿ ಮೈಮನಗಳನ್ನು ಹಗುರಮಾಡಿಕೊಳ್ಳಲು ಪ್ರಶಸ್ತ ತಾಣ.
   ಇಲ್ಲಿಂದ  ದೂಧಸಾಗರ ಮತ್ತೆ ಸೇತುವೆ ಕೆಳಗಿನಿಂದ  ಪಾತಾಳದಂತೆ ಕಾಣುವ ಭೂಭಾಗಕ್ಕೆ ಧುಮ್ಮಿಕ್ಕುತ್ತ ಅಗಾಧ ಸಪ್ಪಳದೊಂದಿಗೆ ಇನ್ನೂ, ಇನ್ನೂ ಕೆಳಗೆ ಜಿಗಿಯುತ್ತ ಸಾಗುವ ದೃಶ್ಯ ನಯನಮನೋಹರ.
   ದೂರದಲ್ಲಿ ಸೇತುವೆ ಮೇಲಿಂದ ಇದೇ ತೊರೆಯ ಗೆರೆಗಳನ್ನು ನೋಡುತ್ತಿದ್ದವರಿಗೆ ಕೆಳಗೆ ನದಿ ಪಾತ್ರದಲ್ಲಿ ಇರುವೆಗಳಂತೆ ಕಾಣುವ ಜನಸಂದಣಿ ಕಂಡಿತು, ಅರೆ! ಅವರು ಅಲ್ಲಿಗೆ ಹೇಗೆ ಹೋದರು ಎಂಬಿತ್ಯಾದಿ ಸಹಜ ಕುತೂಹಲದಿಂದ ಅಲ್ಲಿಯೇ ಇದ್ದ ಯಾತ್ರಿಕರೊಬ್ಬರಿಗೆ ಕೇಳಲು, ಅಲ್ಲಿಗೆ ಬರಬೇಕಾದರೆ ಗೋವಾ ಕಡೆಯಿಂದ ಬರಬೇಕು ಎಂಬುದು ತಿಳಿಯಿತು. ಅಂದರೆ  ಕೆಳಗೆ  ಬರಲು ಗೋವಾ ರಾಜ್ಯದ ಕೋಲಂದಿಂದ ಹಾವಿನಂತೆ ಹರಿದ ಮಾಂಡೋವಿಯನ್ನು ಎರಡು ಮೂರು ಕಡೆಗಳಲ್ಲಿ ದಾಟಿ  ಫೋರ್ ವೀಲ್ ಡ್ರೈವ್ ಹೊಂದಿರುವ ವಾಹನದಲ್ಲಿ  ಮಾತ್ರ ಬರಬಹುದೆಂದು ತಿಳಿದು, ಮತ್ತಷ್ಟು ವಿಚಾರಿಸಲಾಗಿ ಖಾಸಗಿಯಾಗಿ ಒಬ್ಬರಿಗೆ ಎರಡರಿಂದ ಎರಡೂವರೆ ಸಾವಿರ ತೆಗೆದುಕೊಂಡು ವಾಹನಗಳಲ್ಲಿ ಕರೆತರುತ್ತಾರೆಂದು ತಿಳಿಯಿತು.
     ಅಲ್ಲಿ ಕೆಳಗೆ ನದಿ ತುಸು ವಿಸ್ತಾರ ಹೊಂದಿ ದೊಡ್ಡ ದೊಡ್ಡ ಕೆರೆಗಳಂತೆ ಹರಡಿ ಮತ್ತೆ ಮುಂದೆ ಸಾಗಿದ್ದು ಕಂಡಿತು. ಹಾಗೂ ಅಲ್ಲಿಂದ ಸೇತುವೆ ಸಹಿತ ಪೂರ್ಣ ಪ್ರಮಾಣದ ಜಲಪಾತವನ್ನು ವೀಕ್ಷಿಸುವ ಅವಕಾಶವಿದೆ. ಸೇತುವೆ ಮೇಲೆ ರೈಲು ಚಲಿಸುವಾಗ ಹಿನ್ನೆಲೆಯಲ್ಲಿ ಜಲಪಾತವನ್ನು ಕ್ಲಿಕ್ಕಿಸುವ ಅವಕಾಶ ಅಲ್ಲಿ ಸಿಗುತ್ತದೆ. ಅಲ್ಲಿಗೆ ಬರಲು ನೇರವಾಗಿ ಟ್ರೇನಿನಲ್ಲಿ ಕೋಲಂವರೆಗೆ ಹೋಗಿ ಅಲ್ಲಿಗೆ ಬರಬೇಕು, ಅಥವಾ ಅನಮೋಡ ರಸ್ತೆಗುಂಟ ಮೋಲೆಂ ತಲುಪಿ, ಅಲ್ಲಿ ವಿಚಾರಿಸಿ, ಕೋಲಮ್ ಗೆ ಬಂದು ತಲುಪಬಹುದು. ಹಾಗೂ ಅಲ್ಲಿಂದ ದೂಧಸಾಗರದ ತಳ.
    ಮಳೆಗಾಲದ ದಿನಗಳಲ್ಲೂ ಜಲಪಾತ ವೀಕ್ಷಿಸಬಹುದಾದರೂ ಮಳೆಗಾಲ ಮುಗಿದ ನಂತರ ಅಕ್ಟೋಬರ್ ನಿಂದ ಡಿಸೆಂಬರ್  ಪ್ರಶಸ್ತ. ಮದ್ಯಾಹ್ನ ಒಂದು ಗಂಟೆಯಿಂದ ಸಂಜೆ 4.30 ರವರೆಗೆ ದೂಧಸಾಗರದ ಮಡಿಲಲ್ಲಿ ನಮ್ಮ ತಿನಿಸುಗಳನ್ನು ಮೆಲ್ಲುತ್ತ ಆನಂದಮಯವಾಗಿ ಕಳೆದು ಅಲ್ಲಿಂದ ದೂಧಸಾಗರ ಸ್ಟೇಶನ್ ಗೆ ಮರಳಿದೆವು.
    
 ಇಲ್ಲೊಂದು ಸಲಹೆ. ಕ್ಯಾಸಲ್ ರಾಕ್ ನಿಂದ ಪ್ಯಾಸೆಂಜರ್ ಟ್ರೇನ್ ಗಳಿಲ್ಲವಾದ ( ಯಾವುದಕ್ಕೂ ಇನ್ನಷ್ಟು ಕೇಳಿ ವಿಚಾರಿಸುವುದು ಒಳ್ಳೆಯದು) ಕಾರಣ ಅಲ್ಲಿಂದ ದೂಧಸಾಗರಕ್ಕೆ ಗೂಡ್ಸ್ ಗಳಲ್ಲಿ ಹೋಗಲು ವ್ಯವಸ್ಥೆಯಾದರೂ ಬರುವಾಗ ಪ್ಯಾಸೆಂಜರ್ ಟ್ರೇನ್ ಇರುವದರಿಂದ, ದೂಧಸಾಗರದಲ್ಲಿ ಟಿಕೇಟ್ ಕೊಡುವ ವ್ಯವಸ್ಥೆ ಇಲ್ಲವಾದುದರಿಂದ, ಮರುಪ್ರಯಾಣದ ಟಿಕೇಟನ್ನು ಕ್ಯಾಸಲ್ ರಾಕ್ ನಿಂದಲೇ ಕೋಲಮ್ ದಿಂದ ಮರಳಿ ಕ್ಯಾಸಲ್ ರಾಕ್ ಗೆ ಟಿಕೇಟ್ ಕೊಂಡು ಹೋಗಲು ಮರೆಯಬಾರದು, ( ಇದು ಮುಂದೆ ಬೆಳಗಾವಿ ಮುಖಾಂತರ ದೆಹಲಿ ನಿಜಾಮುದ್ದೀನ್ ಗೆ ಚಲಿಸುತ್ತದೆ ) ಇಲ್ಲವಾದರೆ ಬರುವಾಗ ದಂಡ ವಸೂಲಾತಿ ಆದರೂ ಆದೀತು. ಅದು ನಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಂಡಂತೆ.
 ಕರ್ನಾಟಕದ ಕ್ಯಾಸಲ್ ರಾಕ್ ನಿಂದ ಬರುವ ಪ್ರವಾಸಿಗರು ಸಂಜೆ 5.15 ಕ್ಕೆ ಮುನ್ನ ಮರಳಿ ಒಂದು ಕಿ.ಮೀ ನಡೆದು ದೂಧಸಾಗರ ನಿಲ್ದಾಣಕ್ಕೆ ಬಂದು ನಿಂತರೆ ವಾಸ್ಕೋ ನಿಜಾಮುದ್ದೀನ್ ಎಕ್ಷ್ ಪ್ರೆಸ್ ಗೆ ಕಾದು ನಿಲ್ಲಬೇಕು.  ಅದು ನಿಂತು ಎಲ್ಲರನ್ನು ತುಂಬಿಕೊಂಡು ಹೊರಜಗತ್ತಿಗೆ ಕರೆದುಕೊಂಡು ಬರುವುದು. ಟ್ರೇನ್ ಈಗ ಕೇವಲ ಅರ್ಧಗಂಟೆಯಲ್ಲಿ ಕ್ಯಾಸಲ್ ರಾಕ್ ಗೆ ಬಂದು ತಲುಪಿತು. ಅಲ್ಲಿಂದ ಮರುಪ್ರಯಾಣ.
   ಸ್ವಲ್ಪ ಸಾಹಸವೆನಿಸಿದರೂ ಮಕ್ಕಳೊಂದಿಗೆ ಪರಿವಾರವೆಲ್ಲವೂ  ನೋಡಿ ಆನಂದಿಸಬಹುದಾದುದು ಈ ಅದ್ಭುತ ದೂಧಸಾಗರ ಜಲಪಾತ.
 

Rating
No votes yet

Comments

Submitted by prasca Mon, 10/29/2012 - 12:34

ದಸರೆ ರಜಾ ದಿನಗಳಲ್ಲಿ ನಾನೂ ಕೂಡ ದೂದ್ಸಾಗರಕ್ಕೆ ಭೇಟಿಯಿತ್ತಿದ್ದೆ. ೨೨.೧೦ ೨೦೧೨ ರಂದು ೨ ಗಂಟೆಗಳ ಕಾಯುವಿಕೆಯ ನಂತರ ಅಮರಾತಿ ರೈಲಿನಲ್ಲಿ ಪಯಣಿಸಿ ಸಂಜೆ ೫ ಗಂಟೆಗೆ ಹೊರಡುವ ನಿಜಾಮುದ್ದೀನ್ ರೈಲಿನಲ್ಲಿ ಹಿಂತಿರುಗಿದೆವು. ನಿಮ್ಮ ಮಾತಿಂತೆ ನಿಜಕ್ಕೂ ಸುಂದರ ಜಲಪಾತ. ಆದರೆ ನಮ್ಮ ನಾಗರೀಕ ಸಮಾಜ ಅದನ್ನು ಅದೆಷ್ಠು ಮಲಿನಗೊಳಿಸಿದೆಯೆಂದರೆ ಅಸಹ್ಯ ಹುಟ್ಟಿಸುವಂತಿತ್ತು. ದೂದ್ಸಾರ್ ನಿಲ್ದಾಣ ಕಣಿವೆಯಲ್ಲೇ ಕೆಳಗೊಂದು ಮನೆ ತೋಟ ಸಂಸಾರ ಎಲ್ಲವೂ ಇದೆ. ಇದಕ್ಕಿಂತಲೂ ದಟ್ಟವಾದ ಅರಣ್ಯ ಉತ್ತರಕನ್ನಡ ಜಿಲ್ಲೆಯಲ್ಲಿದೆ.
ಕಣಕುಂಬಿ ಸಮೀವಿರುವ ಸುರ್ಲ ಜಲಪಾತ ಕೂಡ ಸುಂದರಾಗಿದೆ.

Submitted by lpitnal@gmail.com Mon, 10/29/2012 - 12:43

ಪ್ರಿಯ ಗೆಳೆಯ prasca ರವರೇ, ತಮ್ಮ ಕಳಕಳಿಯ ಬಗ್ಗೆ ನಿಜಕ್ಕೂ ಮೆಚ್ಚುಗೆ ಯಾಯ್ತು. ಕೆಲವು ಸಣ್ಣಪುಟ್ಟ ಮಾನವ ವಸತಿಗಳು ಹುಡುಕಿದರೆ ಇನ್ನೂ ಸಿಕ್ಕಿಯಾವು. ಮಾನವನ ದಾಹಕ್ಕೆ ಕೊನೆಯೆಂಬುದಿದೆಯೇ. ತಮ್ಮ ಮೆಚ್ಚುಗೆಗೆ ಧನ್ಯವಾದಗಳು.

Submitted by venkatb83 Mon, 10/29/2012 - 16:15

In reply to by lpitnal@gmail.com

ಇಟ್ನಾಳ್ ಅವ್ರೆ ಈ ಕ್ಚೀರ ಸಾಗರ ಜಲಪಾತದ ಬಗ್ಗೆ ಈ ಸಂಪದದಲ್ಲಿಯೇ ಹಲವು ಬರಹಗಳು ಬಂದಿವೆ. ಮಾತು ಬೇರೆ ಬೇರೆ ಕಡೆ ಹಲವು ಸಾರಿ ಓದಿರುವೆ ನೋಡಿರುವೆ... ಆದರೆ ನಿಮ್ ಬರಹ ಎಲ್ಲಕ್ಕಿಂತ ಆಪ್ತವಾಯಿತು..ಸರಳ ಮಾಹಿತಿಪೂರ್ಣ ನಿರೂಪಣೆ..
ನಾ ಇನ್ನೇನು ಕೆಲ ದಿನಗಳಲಿ ಅಲ್ಲಿಗೆ ಹೋಗುವವ್ರಿದ್ದೇವೆ...ನಮ್ ಬರಹವೂ ಇಲ್ಲಿಗೆ ಸೇರಲಿದೆ...!

ಆ ಪ್ರವಾಸದ ಕೆಲ ಚಿತ್ರಗಳನ್ನು ನೀವ್ ಸೇರಿಸ್ಬಹುದಿತಲ್ಲ...

ಬರಹ ಮುದ ನೀಡಿತು..ನಾವೇ ಅಲ್ಗೆ ಹೋಗ್ ಬಂದಂತೆ ಆಯ್ತು..

ಶುಭವಾಗಲಿ..
ನನ್ನಿ

\|

Submitted by lpitnal@gmail.com Mon, 10/29/2012 - 16:34

ಪ್ರಿಯ ವೆಂಕಟ ಬಿ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಾವು ಪ್ರವಾಸ ಡೈರಿ ಓದಿ, ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು. ನಾನು ಕೆಲವು ಚಿತ್ರಗಳನ್ನು ಅಪ್ಲೋಡ್ ಮಾಡಲು ಪ್ರಯತ್ನಿಸಿದೆ, ಆದರೆ ಸಂಪದದಲ್ಲಿ 2 ಎಂ ಬಿ ಗಿಂತ ಹೆಚ್ಚಿಗೆ ಅಪ್ಲೋಡ್ ಆಗದೇ ಚಿತ್ರವನ್ನು ಲೋಡ ಮಾಡಿಕೊಳ್ಳಲಿಲ್ಲ. ಕ್ಷಮೆ ಇರಲಿ, ತಾವು ಜಲಪಾತ ವೀಕ್ಷಿಸಿ, ಸೂಕ್ತವಾಗಿ ಮಾರ್ಪಡಿಸಿ, ಅದನ್ನು 2 ಎಂ.ಬಿ ಗಿಂತ ಕಡಿಮೆ ಗೊಳಿಸಿ ಹಾಕಿದರೆ ನಾವೆಲ್ಲ ಮತ್ತೊಮ್ಮೆ ಆನಂದಿಸೋಣ. ತಮ್ಮ ಮೆಚ್ಚುಗೆಯ ಮಾತುಗಳಿಗೆ ಮತ್ತೊಮ್ಮೆ ವಂದನೆಗಳು ಗೆಳೆಯರೇ...

Submitted by nkumar Fri, 11/02/2012 - 20:12

ಉತ್ತಮ‌ ಮಾಹಿತಿ. ಧನ್ಯವಾದಗಳು. ಹಲವರು ಚಿತ್ರ‌ ವಿಡಿಯೋಗಳನ್ನು ಪ್ರಕಟಿಸಿದರೂ, ಇಂತಹ ಮಾಹಿತಿ ನೀಡುವವರು ಬಹಳ‌ ಕಡಿಮೆ.

Submitted by lpitnal@gmail.com Sun, 11/04/2012 - 06:51

In reply to by nkumar

ಪ್ರಿಯ ಎನ್ ಕುಮಾರ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಲೇಖನ ದ ಮೆಚ್ಚುಗೆಗೆ, ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು.