ಪ್ರಿಯ ಸಂಪದಿಗರ ಗಮನಕ್ಕೆ: ಸಂಪದದಲ್ಲಿನ ಬದಲಾವಣೆಗಳು

ಪ್ರಿಯ ಸಂಪದಿಗರ ಗಮನಕ್ಕೆ: ಸಂಪದದಲ್ಲಿನ ಬದಲಾವಣೆಗಳು

ಪ್ರಿಯ ಸಂಪದಿಗರೆ,

ನಿಮ್ಮೆಲ್ಲರೊಂದಿಗೆ ಮಾತನಾಡಿ ಬಹಳಷ್ಟು ದಿನಗಳಾದುವು. ಸಂಪದದಲ್ಲಿ ಬರೆಯುವುದರಿಂದ ನನಗೆ ಸಿಗುವ ಖುಷಿ ಅಪಾರ, ಆದರೆ ಸಂಪದವನ್ನು ದಿನನಿತ್ಯ ನಿಮ್ಮೆಲ್ಲರ ಬರವಣಿಗೆಯ ವೇದಿಕೆಯಾಗಿ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದೇ ಸಾಕಷ್ಟು ಸಮಯ ತೆಗೆದುಕೊಂಡುಬಿಡುತ್ತಾದ್ದರಿಂದ ನನಗೆ ಇಲ್ಲಿ ಹೆಚ್ಚು ಬರೆಯಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಸಂಪದದ ಹಿಂದಿರುವ ತಂತ್ರಜ್ಞಾನದಲ್ಲಿ ನಿತ್ಯ ಆಗುತ್ತಿರುವ ಬದಲಾವಣೆಗಳು ನಿಮ್ಮ ಗಮನಕ್ಕೆ ಬಂದಿದೆ ಎಂಬುದು ನನ್ನ ಅನಿಸಿಕೆ. ದಿನ ನಿತ್ಯ ನಮಗಾದಷ್ಟು ಮಟ್ಟಿಗೆ ಸಂಪದವನ್ನು ಉತ್ತಮಪಡಿಸುವ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಆದರೆ ಸಂಪದಕ್ಕಾಗಿ ಫುಲ್ ಟೈಮ್ ಕೆಲಸ ಮಾಡಲು ಈ ಸಮಯದಲ್ಲಿ ಯಾರೂ ಇಲ್ಲ. ಹೀಗಾಗಿ ನೀವು ಕಳುಹಿಸುತ್ತಿರುವ ಸಂದೇಶಗಳು, ಪತ್ರಗಳು ಹಾಗು ಇ-ಮೇಯ್ಲುಗಳು ನಮಗೆ ತಲುಪುತ್ತಿದೆಯಾದರೂ, ಅದನ್ನು ಉತ್ತರಿಸುವಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಸಂಪದದ ಹಿಂದಿರುವ ತಂತ್ರಜ್ಞಾನವನ್ನು ನಿಭಾಯಿಸುವಲ್ಲಿ ನನ್ನೊಂದಿಗೆ ಶ್ರಮವಹಿಸುತ್ತಿರುವ ಸಾರಂಗದ ತಂಡ ನೀವು ರಿಪೋರ್ಟ್ ಮಾಡುತ್ತಿರುವ ತೊಂದರೆಗಳನ್ನು ಸರಿಪಡಿಸುವಲ್ಲಿಯೂ ನಿತ್ಯ ಶ್ರಮವಹಿಸುತ್ತಿದೆ. ಆದರೂ ಸಂಪದ ಸಾಕಷ್ಟು ದೊಡ್ಡದಾಗಿರುವ ಕಾರಣ, ನಿತ್ಯ ಓದುಗರ ಸಂಖ್ಯೆ ಅಧಿಕ ಸಂಖ್ಯೆಯಲ್ಲಿರುವ ಕಾರಣ - ಎಲ್ಲದಕ್ಕಿಂತ ಮುಖ್ಯವಾಗಿ ಈ ತಂಡ ನಿತ್ಯ ಕೆಲವೇ ಗಂಟೆಗಳ ಕಾಲ ಮಾತ್ರ ಇದರಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿರುವ ಕಾರಣ ಎಲ್ಲವನ್ನೂ ಸರಿದೂಗಿಸುವಲ್ಲಿ ಸಾಕಷ್ಟು ಸಮಯ ಹಿಡಿಯುತ್ತಿದೆ.

ಜೊತೆಗೆ ಸಂಪದದ ಈ ಹೊಸ ಆವೃತ್ತಿಯಲ್ಲಿ ಹಲವು ಹೊಸತುಗಳಿವೆ. ಮತ್ತಷ್ಟು ಹೊಸತುಗಳು ನಿತ್ಯ ಸೇರ್ಪಡೆಯಾಗುತ್ತಿವೆ. ಈಗ ನಿಮಗೆ ಕಲ್ಪಿಸಿರುವ ಪ್ರಕಟಿಸುವ ನೇರ ಸೌಲಭ್ಯ ಥೇಟ್ ಪತ್ರಿಕೆಯಲ್ಲಿ ಪ್ರಕಟ ಮಾಡಿದಂತೆ. ಒಮ್ಮೆ ಪ್ರಕಟವಾದ ಮೇಲೆ ಬದಲಾವಣೆ ಸಾಧ್ಯವಾಗದು. ಹೀಗಾಗಿ ಬರಹ ಪ್ರಕಟಿಸುತ್ತಿರುವ ಸಂಪದಿಗರು ಪ್ರಕಟಿಸುವ ಸಮಯವೇ ಜಾಗರೂಕತೆಯಿಂದ ಪ್ರಕಟಿಸುವುದು ಉತ್ತಮ.  ಬರಹ ಪ್ರಕಟಿಸುವವರಿಗೆ ಪತ್ರಿಕೆಯಲ್ಲಿ ಪ್ರಕಟಿಸುವಷ್ಟು ಪರಿಷ್ಕರಣೆಯ ಅನುಭವ ಆಗಲಿ ಎಂಬುದು ಸಂಪದ ತಂಡದ ಆಶಯ. ಇತ್ತೀಚೆಗೆ ಹಲವು ಪುಟಗಳು ಯಾವುದೇ ಪರಿಷ್ಕರಣೆಯಿಲ್ಲದೆ ಪ್ರಕಟವಾಗುತ್ತ ಹಲವು ಓದುಗರಿಗೆ ತ್ರಾಸ ನೀಡುತ್ತಿರುವುದು ಕೂಡ ಈ ಹೊಸ ವ್ಯವಸ್ಥೆಯ ಹಿಂದಿರುವ ಕಾರಣ. ಹೀಗಾಗಿ ಯಾವುದೇ ಪುಟ ಸೇರಿಸುವ ಸಮಯ "ಮುನ್ನೋಟ" ಎಂಬ ಆಯ್ಕೆ ಬಳಸುವುದು ಮರೆಯದಿರಿ. ಪುಟದ "ಮುನ್ನೋಟ" ಒಮ್ಮೆ ಗಮನಿಸಿದಲ್ಲಿ ಪುಟ ಪ್ರಕಟಿಸಿದ ನಂತರ ಹೇಗೆ ಕಾಣುವುದು ಎಂಬುದರ ಮುನ್ನೋಟ ಸಿಗುತ್ತದೆ. ಬರುವ ದಿನಗಳಲ್ಲಿ ಲೇಖನವನ್ನು ಪ್ರಕಟಿಸಿದ ಕೆಲವು ಗಂಟೆಗಳ ಕಾಲ ಬದಲಾಯಿಸುವ ವ್ಯವಸ್ಥೆ ಕಲ್ಪಿಸಲಾಗುವುದು.

ಅಲ್ಲದೆ, ಬರುವ ದಿನಗಳಲ್ಲಿ ಸಂಪದಕ್ಕೆ ಹೊಸತಾಗಿ ಸೇರ್ಪಡೆಯಾದ ಸದಸ್ಯರು ಸೇರಿಸಿದ ಪುಟಗಳು ಕೂಡಲೆ ಪ್ರಕಟವಾಗದು. ಜೊತೆಗೆ ಈಗಾಗಲೇ ಪ್ರಕಟಿಸಿರುವ ಲೇಖಕರ ಬರಹಗಳು ಹೆಚ್ಚಿನ ಮೆಚ್ಚುಗೆ ಪಡೆದಿದ್ದಲ್ಲಿ ಅಂತಹ ಲೇಖಕರ ಬರಹಗಳಿಗೆ ಹೆಚ್ಚಿನ ಆದ್ಯತೆ ಸ್ವತಃ ಸಂಪದದ ಹಿಂದಿರುವ ತಂತ್ರಜ್ಞಾನವೇ ಅರಿತು ತಂತಾನೆ ಮುಖಪುಟಕ್ಕೆ ಸೇರಿಸುವ ವ್ಯವಸ್ಥೆ ಕಲ್ಪಿಸಲಾಗುವುದು.

ಏಳು ವರ್ಷಗಳ ಕಾಲ ನಡೆದುಬಂದಿರುವ ಸಂಪದಕ್ಕೆ ಇದೊಂದು ‍ಮಹತ್ವದ ಪರೀಕ್ಷೆ. ಈ ಕಾಲಘಟ್ಟವನ್ನು ಮೀರಿ ನಿಂತಲ್ಲಿ ಮಾತ್ರ ಸಂಪದದ ಉಳಿವು. ಸಂಪದದ ಬ್ಯಾಕೆಂಡ್ ಟೀಮಿಗೆ ನೀವು ಇ-ಮೇಯ್ಲು ಅಥವ ಸಂದೇಶ ಕಳುಹಿಸಿದ್ದು ನಿಮಗೆ ಪ್ರತಿಕ್ರಿಯೆ ತಲುಪಿಲ್ಲದಿದ್ದಲ್ಲಿ ನೀವೆಲ್ಲ ತಾಳ್ಮೆಯಿಂದ ಸಹಕರಿಸುವಿರಿ ಎಂಬ ನಂಬಿಕೆ ನನ್ನದು.

 

 

Comments

Submitted by partha1059 Tue, 10/30/2012 - 13:49

ಆತ್ಮೀಯ‌ ನಾಡಿಗರೆ ಸ0ಪದದ‌ ಬದಲಾವಣೆಯ‌ ಸ್ವರೂಪ‌ ಸ0ತಸವೆ. ಹಿ0ದಿರುವ‌ ನಿಮ್ಮ ಶ್ರಮ ಹಾಗು ತಾಳ್ಮೆ ಯ‌ ಬಗ್ಗೆ ಎಲ್ಲರಿಗು ಅರಿವಿದೆ. ಮೈಲ್ ಕಳಿಸಲು ಸಹ‌ ಕೆಲವು ಯೋಚನೆ ತಡೆಯುತ್ತೆ ಅ0ದರೆ ಒ0ದೆ ವಿಷಯ‌ ಅಥವ‌ ತೊ0ದರೆಯ‌ ಬಗ್ಗೆ ಎಲ್ಲರು ಮೈಲ್ ಕಳಿಸುವ0ತಾಗಬಾರದು ಎ0ದು. ಅದಕ್ಕಾಗಿ ಮೈಲ್ ಬದಲು ಸ0ಪದದಲ್ಲಿಯೆ ಸ್ಠಳವಿದ್ದಲ್ಲಿ , ನಾವು ಏನಾದರು ಬರೆಯುವ‌ ಮು0ಚೆ ಅದನ್ನು ಬೇರೆಯವರು ಆಗಲೆ ಕಳಿಸಿದ್ದರೆ ನೋಡಬಹುದು, ಆಗ‌ ನಿಮಗೆ ಪಿಲ್ಟರ್ ಮಾಡುವ‌ ತೊ0ದರೆ ತಪ್ಪುತ್ತದೆ ಅನ್ನಿಸುತ್ತದೆ. ಸ0ಪದದ‌ ಎಲ್ಲರ‌ ಅಚ್ಚುಮೆಚ್ಚು ಕಾಯಲು ಬೇಸರವೇನು ಇಲ್ಲ. ಮತ್ತಷ್ಟು ಮತ್ತಷ್ಟು ಉತ್ತಮವಾಗುತ್ತ ಹೋಗಲಿ ಎ0ದೆ ಎಲ್ಲರ‌ ನಿರೀಕ್ಷೆ ವ0ದನೆಗಳೊಡನೆ ಪಾರ್ಥಸಾರಥಿ
Submitted by venkatb83 Tue, 10/30/2012 - 18:32

ಹರಿ ಅವ್ರೆ. ವೆಬ್ಸೈಟ್ ನಡೆಸುವುದು ಅದೂ ಯಾವುದೇ ಜಾಹೀರಾತು ಹಂಗಿಲ್ಲದೆ ಪ್ರಾಯೋಜಕರಿಲ್ಲದೆ ಎಷ್ಟು ಕಷ್ಟ ಎಂಬ ಸಾಮಾನ್ಯ ಅರಿವು ನನಗಿದೆ.. ನಿಮ್ಮೆಲ್ಲ ಯೋಚನೆಗಳಿಗೆ ಯೋಜನೆಗಳಿಗೆ ನನ್ನ ಬೆಂಬಲವಿದೆ.. ಓದುಗರಿಗೆ ಸರಳ ಸುಲಭ ಜಾಲತಾಣ ರೂಪಿಸುವ ನಿಮ್ಮ ಯತ್ನ ಶುಭಪ್ರದವಾಗಲಿ.. ಬಹು ದಿನಗಳ ನಂತರವಾದರೂ ನೀವ್ ನಮ್ಮೊಡನೆ ನೇರವಾಗಿ ಮಾತಾಡಿದ್ದು ಖುಷಿ ಕೊಟ್ಟಿತು... ಶುಭವಾಗಲಿ.. ನನ್ನಿ \|
Submitted by nkumar Fri, 11/02/2012 - 20:26

ಪದೇ ಪದೇ UI ಬದಲಾಯಿಸುವುದು ಒಳ್ಳೆಯದಲ್ಲ. ಬದಲಾಯಿಸಿದರೂ ಹಂತ ಹಂತವಾಗಿ ಬದಲಾಯಿಸಿದರೆ ಒಳಿತೆನಿಸುತ್ತದೆ. ಇಲ್ಲವಾದಲ್ಲಿ ಗಿನೋಮ್-೩ ತರಹ ಆಗುತ್ತದೆ. ಎಲ್ಲವು ಅವ್ಯವಸ್ಥೆ. ಹಂತ ಹಂತವಾಗಿ ಬದಲಾಯಿಸಿದರೆ ತಪ್ಪು ಹುಡುಕುವುದು ಕೂಡ ಸುಲಭವಾಗುತ್ತದೆ. ಉದಾಹರಣೆಗೆ: ಪ್ರತಿಕ್ರಿಯೆಗಳಿಗೆ ಈ-ಮೇಲ್ ನೋಟಿಫಿಕೇಶನ್ ಗಳು ಡಿಫಾಲ್ಟ್ ಡಿಸೇಬಲ್ ಆಗಿದ್ದರೆ ಒಳ್ಳೆಯದು. ಇದು ಕೇವಲ ನನ್ನ ಅಭಿಪ್ರಾಯ ಅಷ್ಟೇ.
Submitted by ಗಣೇಶ Tue, 11/06/2012 - 00:12

ಹರಿಪ್ರಸಾದ ನಾಡಿಗರೆ, ತಮ್ಮೆಲ್ಲರ ಪ್ರಯತ್ನಗಳಿಗೆ ಜೈ. ಹಾಗೇ ತಾವು ಒಂದೆರಡು ತಿಂಗಳಿಗೆ ಮೊದಲು ಒಂದು ಕಾಯಿ ಚಿತ್ರ ಹಾಕಿ ಯಾವುದು ಎಂದು ಕೇಳಿದಿರಲ್ಲಾ..ಅದರ ಬಗ್ಗೆ ಯೋಚಿಸಿ ಯೋಚಿಸಿ ನನ್ನ ತಲೆನೂ ಆ ಕಾಯಿ ತರಹ ಆಗಿದೆ. :) ಹೆಸರು ಹೇಳಿಬಿಡಿ ಒಮ್ಮೆ. ಹಿಂದಿನಂತೆ "ನನ್ನ ಪ್ರತಿಕ್ರಿಯೆಗಳು" ನನ್ನ ಪ್ರೊಫೈಲಲ್ಲಿರುತ್ತಿದ್ದರೆ ಸುಲಭದಲ್ಲಿ ಆ ಲೇಖನಕ್ಕೆ ಕೊಂಡಿ ಕೊಡುತ್ತಿದ್ದೆ. ಈಗ ಹುಡುಕುವುದು ಕಷ್ಟ. -ಗಣೇಶ
Submitted by kavinagaraj Tue, 11/13/2012 - 09:20

ಆತ್ಮೀಯರೇ, ನೀವು ವಹಿಸುತ್ತಿರುವ ಶ್ರಮ ನಿಜಕ್ಕೂ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಅನುಪಮ ಕೊಡುಗೆಯೆಂದರೆ ಅದರಲ್ಲಿ ಅತಿಶಯೋಕ್ತಿಯಲ್ಲ. ನಿಮ್ಮ ಕಳಕಳಿ, ಕಾಳಜಿಗಳಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು.