ಬೇಸುರ್ ಆಲಾಪಗಳು - ಲಕ್ಷ್ಮೀಕಾಂತ ಇಟ್ನಾಳ
ಬೇಸುರ್ ಆಲಾಪಗಳು
- ಲಕ್ಷ್ಮೀಕಾಂತ ಇಟ್ನಾಳ
ಉದರಮೊಳೆತದ ಕುಡಿಗೆ ಅಡಿಗಡಿಗು ಕಡೆದ ಬಗೆ
ಕನಸಿನಾಗಸ ತುಂಬ ತೋರಣಗಳ ಕಟ್ಟುತ್ತ ನಡೆದ
ಗೂಡು ಕಟ್ಟುವ ಪಯಣದಲಿ ಹಿಂದೆ ಸರಿದ ಕ್ಷಣ
ಮೂಡಿಸಿದೆ ಮುಖದಲ್ಲಿ ಮನದಲ್ಲೂ ಧನ್ಯತೆಯ ನಿರಿಗೆ
ಭಾವವೊಂದು ಅರಳಿತ್ತು ಬದುಕಿನ ಪರಿಗೆ
ಬೇಡವಾಗಿದೆ ಭಾವ ಬೆವರುಣಿಸಿ ಮೂಡಿಸಿದ ಗೂಡಿಗೆ
ನಿರಾಶೆಯೊಂದು ಮನದ ಮೂಲೆಯಲಿ ಹಾಡಿಹುದು ಮೌನರಾಗ
ಕಟ್ಟಿಗೆಯ ಕೋಲು ಹಿತವಾದ ಜೊತೆಗೀಗ ದಯೆಕಾಣದ ದೀನಗೆ
ನಿರೀಕ್ಷೆಯ ಆಶೆಯೊಂದು ಮುದುರಿದೆ ಜಗುಲಿಯಲಿ ಮೆತ್ತಗೆ
ಅರವತ್ತರ ಅಸುಪಾಸಿನಲಿ ಹಗಲಿಗೂ ಕತ್ತಲೆ
ದನಿಯಿರದ ಮೂಕ ಮೌನದಲಿ ಕಣ್ಣಲ್ಲೇ ಕೇಳುತ್ತ
ಹುಡುಕುತ್ತ ಹಳೆಯ ನೆನಪುಗಳ ಪುಟ ತಿರುವುತ್ತ
ನಡೆದ ದಾರಿಗೆ ಮುಳ್ಳುಹಚ್ಚಲು ಹಾತೊರೆಯುವ ಮನ
ಮರೆತಷ್ಟು ಪುಟಿಪುಟಿದು ಜಿಗಿದು ಮೇಲುದಿಪ ನೆನಪುಗಳು
ಇದಕಾಗಿ ಇಷ್ಟೊಂದು ಪಾಡು ಬೇಕಿತ್ತೇ ಕೇಳುವುದು ಮನ
ಹಣ್ಣಾಗಿ ಹಳತಾಗಿ ಹಳೆ ಕಪಾಟಿನಲ್ಲಿವೆ ಮೌಲ್ಯಗಳು
ಸನಿಹದಲ್ಲಿ ನಿರೀಕ್ಷೆಯೊಂದು ಬಾಗಿಲಿನ
ಕಲ್ಲು ಮೆಟ್ಟಿಲ ಮೇಲೆ ತಲೆ ಕೊಟ್ಟು ಸತ್ತಿದೆ
ತನ್ನ ಗೂಡೊಳಗೆ ಒಳಬರಲೂ ಹೆದರಿ
ಕುತ್ತಿಗೆಯಲಿ ಮೂಡಿವೆ ಔರಂಗಜೇಬನ ಬೆರಳುಗಳು
ತುತ್ತೀಡಿದ ಚುಂಚುಗಳ ಕಳೇವರಗಳು ಗಹಗಹಿಸಿ
ಕಲಿಸಿದಕ್ಷರಗಳ ಅಟ್ಟಹಾಸ ಬೆಚ್ಚಿ ಬೀಳಿಸಿದೆ ಭಾವಕ್ಕೆ
ಕಾಣದ ದೇವರುಗಳಿಗೆ ಉದ್ದಂಡ ಬಿದ್ದಂಡ ಹಾಕಿ ಬೇಡಿದ್ದ ಜೀವ
ಹಣೆಯ ನಿರಿಗೆಗಳು ಕೆಣಕುತ್ತ ಕೇಳಿಹವು ಎಲ್ಲಿಹವು ಆ ನಿನ್ನ ಹರಕೆ ಹಾರೈಕೆಗಳು
ಬಿರಿದ ಚೇಳಿನಂತೆ ಮರಿಗಾಗಿ ಜೀವತೆತ್ತಿಹವೆಲ್ಲ ವರ ಪ್ರಸಾದಗಳು
ಯಾವ ಮಣ್ಣಿಗಾಗಿ ತುಂಬು ಜೀವನ ಹುಂಬ ನಡೆ ನಡೆದಿತ್ತು
ಅದೇ ಮಣ್ಣಲ್ಲಿ ಮಣ್ಣಾಗಿ ಅನಾಥ ಭಾವವೊಂದು ಬಿದ್ದಿತ್ತು
ನಡೆದ ದಾರಿಯೇ ಹಾಡು ಪಾಡು ನಲಿವು ನೌಬತ್ತು
ಕನಸೆಲ್ಲ ಉದುರಿ ನನಸಲ್ಲಿ ಮುರಿದು ಬಿದ್ದ ಬಾಬತ್ತು
ಬಿತ್ತಿದ್ದು ಬೀಜವಾದರೂ ಕಳೆಯೆಂಬ ಕಳೆ ಇನ್ನಿಲ್ಲದಂತೆ ಸಾಗಿತ್ತು
ಇದಕಾಗಿ ಸವೆಯಿತೇ ಜೀವ
ಅಲ್ಲವೆಂದರೂ ಕಾಣುವುದೆಲ್ಲ ಕಣ್ಣಮುಂದಿತ್ತು
ಇದಕಾಗಿ ಸವೆಯಿತೇ ಜೀವ
ಅಲ್ಲವೆಂದರೂ ಕಾಣುವುದೆಲ್ಲ ಕಣ್ಣಮುಂದಿತ್ತು
Comments
ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ
ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ ವಂದನೆಗಳು,
" ಬೇಸುರ್ ಆಲಾಪಗಳು " ಒಂದು ಸಮರ್ಥ ಕವನ. ಬೇಸುರ್ ಆಲಾಪಗಳೆಂದು ಬೇಸರಿಸಬಾರದು. ಆಲಾಪಗಳನ್ನು ಮಾಡುತ್ತಲೆ ಸುರ್ ಗೆ ಹೊಂದಿಕೊಳ್ಳಬೇಕು. <<< ಯಾವ ಮಣ್ಣಿಗಾಗಿ .......ಅಲ್ಲವೆಂದರೂ ಕಾಣುವುದೆಲ್ಲ ಕಣ್ಣ ಮುಂದಿತ್ತು >>> ಅರ್ಥಪೂರ್ಣ ಸಾಲುಗಳು. ಕನ್ನಡ ಹಬ್ಬದ ಈ ಶುಭ ದಿನದಂದು ಶುಭಾಶಯಗಳು.
ಬೇಸುರ್ ಆಲಾಪಗಳು
ಪ್ರಿಯ ಹೆಚ್ ಎ ಪಾಟೀಲ್ ರವರಿಗೆ ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಜೀವನ ಪರ ಪ್ರತಿಕ್ರಿಯೆಗೆ ಅನಂತ ಕೃತಜ್ಞತೆಗಳು.
ಆಲಾಪ ಚೆನ್ನಾಗಿದೆ
ಆಲಾಪ ಚೆನ್ನಾಗಿದೆ ಲಕ್ಷ್ಮೀಕಾಂತವ್ರೆ
In reply to ಆಲಾಪ ಚೆನ್ನಾಗಿದೆ by Chikku123
ಬೇಸುರ್ ಆಲಾಪಗಳು
ಪ್ರಿಯ ಚಿಕ್ಕು ಅವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಕವನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕಾಗಿ ಧನ್ಯವಾದಲಳು.