ಹಳೆಕಥೆಗೊಂದು ಹೊಸಕಥೆ - ೧

Submitted by Chikku123 on Fri, 11/02/2012 - 11:59

ನಿಮಗೆಲ್ಲರಿಗೂ ಹಳೆಯ ಕಥೆ ತಿಳಿದಿರಬಹುದು ಹಾಗಾಗಿ ಅದನ್ನ ಇಲ್ಲಿ ಹೇಳಲು ಹೋಗುವುದಿಲ್ಲ, ಈ ಕಥೆ ಓದಿದ ಬಳಿಕ ಅದು ನೆನಪಿಗೆ ಬರಬಹುದು, ಬಾರದಿದ್ದರೂ ಪರವಾಗಿಲ್ಲ ಇದನ್ನ ಓದಿ.

ಅವನು ವೀಕೆಂಡ್ ಎಂದು ಶುಕ್ರವಾರವೇ ಊರಿಗೆ ಹೋಗೋಣವೆಂದು ನಿರ್ಧರಿಸಿದ್ದನು, ರಾತ್ರಿ ವೋಲ್ವೋ ಬಸ್ಸಿಗೆ ಹೋದರಾಯಿತೆಂದುಕೊಂಡು ರಿಸರ್ವೇಶನ್ ಮಾಡಿಸಲು ಕೌಂಟರಿಗೆ ಹೋದನು. ಅಲ್ಲಿ ಸ್ವಲ್ಪ ರಶ್ ಇತ್ತು, ಹಾಗೆ ಕ್ಯೂನಲ್ಲಿ ನಿಂತವನಿಗೆ ವೋಲ್ವೋ ಬಸ್ಸಿಗೆ ೪೫೦ ರೂ ಕೊಡುವುದರ ಬದಲು ರಾಜಹಂಸಕ್ಕೆ ೩೩೦ ಕೊಟ್ಟು ಹೋದರೆ ಸ್ವಲ್ಪ ದುಡ್ಡು ಉಳಿಸಬಹುದೆಂದುಕೊಂಡನು, ಕ್ಯೂ ಮುಂದೆ ಸಾಗುತ್ತಿತ್ತು. ಕೊನೆಗೆ ಬುಕ್ ಮಾಡಲು ಅವನ ಸರತಿ ಬಂತು, ಮತ್ತೇನೋ ಧಿಡೀರನೆ ಹೊಳೆದು ಟಿಕೆಟ್ ಬುಕ್ ಮಾಡಿಸದೆ ಹೊರಗೆ ಬಂದನು. ನಾಳೆ ಮಧ್ಯಾಹ್ನ ಇಂಟರ್ಸಿಟಿಗೆ ಹೋದರೆ ಕೇವಲ ೧೫೦ ರೂನಲ್ಲಿ ಹೋಗಬಹುದು ಎಂದು ನಿರ್ಧಾರ ಮಾಡಿ ಮನೆಗೆ ಹೋದನು. ಮಾರನೇ ದಿನ ಮಧ್ಯಾಹ್ನ ಬಂತು, ಇಂಟರ್ಸಿಟಿಗೆ ೧೫೦ ಕೊಡುವುದರ ಬದಲು ಭಾನುವಾರ ಬೆಳಗ್ಗೆ ಪ್ಯಾಸೆಂಜರ್ ಗಾಡಿಯಲ್ಲಿ ಹೋದರೆ ಕೇವಲ ೪೫ ರೂಪಾಯಿಗಳಲ್ಲಿ ಊರು ತಲುಪಬಹುದೆಂದುಕೊಂಡನು. ಭಾನುವಾರ ಬೆಳಗ್ಗೆ ಪ್ಯಾಸೆಂಜರ್ ಗಾಡಿಗೆ ಹತ್ತಿದನು, ಊರಿಗೆ ತಲುಪುವಾಗ ಸಂಜೆ ೫ ಆಗಿತ್ತು. ೪೫೦ರೂ ಬದಲು ೪೫ ರೂಗೆ ಊರು ತಲುಪಿದ್ದನು ಆದರೆ ಅಲ್ಲಿಗೆ ವೀಕೆಂಡ್ ಮುಗಿದಿತ್ತು!

Comments

ಆತ್ಮೀಯ ಚಿಕ್ಕು,
ಮೊಬೈಲ್ ಖರೀದಿ ಮಾಡುವಾಗ ನಾಳೆ ಇನ್ನೂ ಚನ್ನಾಗಿರುವುದು ಸಿಗಬಹುದು ಎಂದು ಮುಂದೂಡಿದರೆ ಮೊಬೈಲ್ ಖರೀದಿ ಮಾಡಲು ಆ ನಾಳೆ ಬರುವುದೇ ಇಲ್ಲ. ಏಕೆಂದರೆ ದಿನಕ್ಕೊಂದು ಹೊಸ ಡಿಸೈನ್ ಬರುತ್ತಲೇ ಇರುತ್ತೆ. ಹೀಗೇನೆ ಮದುವೆಯ ವಿಚಾರದಲ್ಲೂ ಹೇಳುತ್ತಾರೆ, ಆದರೆ......... ವೀಕೆಂಡ್ ಮುಗಿದರೇನು ಇನ್ನೊಂದು ಬರುತ್ತೆ ಅಂತ ಮುಂದೂಡಲಿಲ್ಲವಲ್ಲ. ನಿಮ್ಮ ಪ್ರಯಾಣದ ವಿಚಾರದಲ್ಲಿ ನಿಧಾನವಾದರೂ ನೆರವೇರಿತು. ಅಬ್ಬಾ! ಅದೇ ಸಮಾಧಾನ......